ನಿಷ್ಪಾಪಿ ಸಸ್ಯಗಳು : ಸಂಚಿಕೆ - 128
Thursday, November 13, 2025
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 128
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ? ನಮ್ಮ ಸುತ್ತ ಮತ್ತಲಿನ ಪರಿಸರವೀಗ ಎಷ್ಡು ಆಹ್ಲಾದಕರವಾಗಿದೆ ಗಮನಿಸಿದಿರಾ? ಅವೆಷ್ಟೋ ಜಾತಿಯ ಹುಲ್ಲಿನ ಜಾತಿಯ ಸಸ್ಯಗಳು ತೆನೆ ತುಂಬಿ ಬಾಗಿವೆ. ಮರಗಳಿಗೆ ಪೋಷಾಕು ತೊಡಿಸಿದಂತೆ ಕಾಣಿಸುವ ಬಳುಕುವ ಲತೆಗಳು ಪುಷ್ಪಗಳಿಂದಾವೃತವಾಗಿವೆ. ಇವನ್ನು ನೋಡುವುದೇ ಕಣ್ಣಿಗೆ ಹಬ್ಬ!
ಮೊನ್ನೆ ಜುಲೈ ತಿಂಗಳಲ್ಲಿ ನಾನೊಂದು ನರ್ಸರಿ ಗೆ ಭೇಟಿ ನೀಡಿದ್ದೆ. ಅಲ್ಲಿ ಒಪ್ಪ ಓರಣವಾಗಿ ಜೋಡಿಸಿಟ್ಟ ಸಸ್ಯಗಳಿಂದ ಹೊರತಾಗಿ ತ್ಯಾಜ್ಯ ಎಸೆದಲ್ಲಿ ತೆಳ್ಳಗಿನ ಸಸ್ಯವೊಂದು ಪೊದೆಯಂತೆ ಬೆಳೆದಿತ್ತು. ಗಾಢವಾದ ಪೊದೆಯಾಗಿರದೆ ಗುರುತಿಸಬೇಕೆನುವ ಕಾಂಡವಾಗಲಿ, ಎಲೆಯಾಗಲಿ ಕಾಣಿಸಲಿಲ್ಲ. ಆದರೆ ಅತ್ತ ನೋಡುವಂತೆ, ಅತ್ತ ಹೆಜ್ಜೆ ಹಾಕಲೇ ಬೇಕೆಂಬಂತೆ ಒತ್ತಡ ಹಾಕಿದ ಭಾಗವೆಂದರೆ ಆ ಸಸ್ಯದ ಪುಷ್ಪ! .
ಗಾಢ ಮೆರೂನ್ ಬಣ್ಣದ ಹೂವಿನಿಂದ ಕುಂಕುಮ ಉದುರುವುದೇನೊ ಎಂಬಂತಹ ಕಣ್ಕಟ್ಟು!. ಹೂವು ದಾಸವಾಳವನ್ನೇ ಹೋಲುತ್ತಿತ್ತು. ಅದೇ ನಯವಾದ, ವೈಯ್ಯಾರದ ಐದೆಸಳು, ನಡುವೆ ಕೇಸರ ದಂಡ.
ತರಹಾವರಿ ಗಿಡಗಳ ಸಂಗ ಬಯಸಿ ಹೋಗಿದ್ದ ನಾನು ಅಚಾನಕ್ಕಾಗಿ ಹಸಿಕಸದ ರಾಶಿ ಪಕ್ಕದ ಆ ಕೆಂಪು ಬಣ್ಣದ ಗಿಡದ ಬಗ್ಗೆ ವಿಚಾರಿಸಿದೆ. ಅದು ಒಂದು ಕಾಟು ಗಿಡವೆಂದೂ, ಈಗ ಅದನ್ನು ಎಲ್ಲರೂ ಬಯಸುತ್ತಿರುವುದರಿಂದ ಮುಂದಿನ ವರ್ಷಕ್ಕೆ ಗಿಡಮಾಡಿ ಮಾರಲು ನೆಟ್ಟಿದ್ದೇವೆಂದೂ ತಿಳಿಸಿದರು. ಆದರೆ ನನಗೆ ಈ ವರ್ಷವೇ ಬೇಕಿತ್ತು. ಒಲ್ಲದ ಮನಸಿನಿಂದ ಸಣ್ಣ ತುಂಡೊಂದನ್ನು ಮುರಿದು ಕೊಟ್ಟರು. ಪಪ್ಪಾಯಿ ಎಲೆಯಂತೆ ಆಳವಾಗಿ ಸೀಳಲ್ಪಟ್ಟ ಪುಟ್ಟ ಅಂಗೈಯಗಲದ ಹಸಿರು ಎಲೆಗಳು. ಎಲೆ ಮತ್ತು ಗಿಡದ ಮೇಲೆಲ್ಲ ಚುಚ್ಚುವಂತಹ ರೋಮ. ಅಣಕಿಸುವಂತಹ ಅಥವಾ ಊದುಬತ್ತಿಗಿಂತ ಸ್ವಲ್ಪ ದಪ್ಪಗಿನ ಆ ಕಾಂಡ ಬದುಕುತ್ತದೋ ಇಲ್ಲವೋ ಎಂಬ ಅನುಮಾನದಲ್ಲೇ ತಂದು ನೆಟ್ಟೆ. ಈ ವರ್ಷದ ಮಳೆಗಾಲವಂತೂ ಯಾವುದೇ ಹೊಸ ಗಿಡಕ್ಕೂ ಚಿಗುರಲು ಸ್ಪರ್ಧೆಯನ್ನೇ ನೀಡಿತ್ತು. ಗೆದ್ದವರಿಗೆ ಮುಂದೆ ಪಯಣವಲ್ಲದೆ ಸೋತವರಿಗೆ ನಿಸರ್ಗ ಪಶ್ಚಾತ್ತಾಪ ಪಡುವುದೇ ಇಲ್ಲವಲ್ಲ! ನಾನು ನೆಟ್ಟ ಈ ಗಿಡವೂ ಸೋತು ಸುಣ್ಣವಾಗಿತ್ತು. ತೆಳುವಾದ ಸಿಪ್ಪೆ ಕರಗತೊಡಗಿತ್ತು. ನಾನದನ್ನು ನೋಡದಿರುವಂತೆ ಹುಲ್ಲು ಮತ್ತು ಇತರ ಗಿಡಗಳ ಶಾಖೆಗಳು ಬೆಳೆದು ನಿಂತವು. ಧಾವಂತದ ದಿನಗಳು ಹಾದು ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಇನ್ನೇನು ಅಂಗಳ ಇಳಿಯಬೇಕೆನ್ನುವಾಗ ನನ್ನ ರೂಪಸಿ ಪ್ರತ್ಯಕ್ಷವಾಗಿದ್ದಳು! ಅದೇ ಕಡುಗೆಂಪು ಬಣ್ಣ ಅಂಗಳದ ಮೂಲೆಯಲ್ಲಿ ನಳನಳಿಸುತ್ತಿತ್ತು! ಅದೇ ಕಾಡು ಹೂವು ಸುಂದರವಾದ ಪುಷ್ಪ ಪಾತ್ರೆಯಲ್ಲಿ ಅರಳುತ್ತಾ ಮುದ್ದು ಹುಡುಗಿಯ ತುಟಿಯ ರಂಗಿನಂತೆ ಕಾಣಿಸಿತು! ಒಂದೆರಡಡಿ ಬೆಳೆದಿದ್ದ ಗಿಡದಲ್ಲಿ ವಿರಳವಾದ ಪರ್ಯಾಯ ಎಲೆಗಳು. ಸಸ್ಯದ ತುದಿಯಲ್ಲಿ ಇನ್ನೂ ಮೊಗ್ಗುಗಳಿರುವ ಸೂಚನೆ ಇತ್ತು. ಭವಿಷ್ಯದಲ್ಲೂ ಹೂಗಳನ್ನು ಕಾಣಬಹುದೆಂಬ ಬಗ್ಗೆ ನನಗಂತೂ ಬಹಳ ಆನಂದವಾಗಿತ್ತು.
ಇದು ಮಾಲ್ವೇಸಿ ಕುಟುಂಬದ ಹೂ ಬಿಡುವ ಸಸ್ಯಗಳಲ್ಲಿ ಒಂದಾಗಿತ್ತು. ಇದರ ಸಸ್ಯಶಾಸ್ತ್ರೀಯ ಹೆಸರು ಹೈಬಿಸ್ಕಸ್ ಅಸೆಟೋಸೆಲ್ಲ (Hibiscus acetosella). ಅಸೆಟೋಸೆಲ್ಲಾ ಎಂಬ ವಿಶೇಷಣವು ಲ್ಯಾಟಿನ್ ಮೂಲದ್ದಾಗಿದೆಯಂತೆ. ಆಡುಮಾತಿನಲ್ಲಿ ಫಾಲ್ಸ್ ರೋಸೆಲ್, ಮೆರೂನ್ ಮಗಯಾಲೋ, ಕೆಂಪು ಗುರಾಣಿ ದಾಸವಾಳ ಎಂದೆಲ್ಲ ಕರೆಯುತ್ತಾರೆಂದು ತಿಳಿದುಕೊಂಡೆ. ಇದೊಂದು ವಾರ್ಷಿಕ ಸಸ್ಯ. ಕೆಲವೆಡೆ ದೀರ್ಘಕಾಲಿಕವೂ ಹೌದು. ಸಾಮಾನ್ಯವಾಗಿ 3ರಿಂದ 6 ಅಡಿಗಳೆತ್ತರ ಬೆಳೆಯುವ ಪೊದೆ ಸಸ್ಯವಾಗಿದೆ. ಸಾಗುವಳಿ ಇರದ ಹೊಲ ಗದ್ದೆ, ಜೌಗು.. ಬಂಜರು ಪ್ರದೇಶ, ಅರಣ್ಯ ತೆರವು ತೆರವುಗೊಳಿಸಿದ ಪ್ರದೇಶಗಳಲ್ಲಿ ಮಾತ್ರವಲ್ಲದೆ ಬರಗಾಲದಲ್ಲಿ ಕೂಡ ಹರಡಿಕೊಳ್ಳುವ ಈ ಅಸೆಟೋಸೆಲ್ಲಾವನ್ನು 1896 ರಲ್ಲಿ ಫ್ರೆಂಚ್ ಸಸ್ಯಶಾಸ್ತ್ರಜ್ಞರು ವಿಶಿಷ್ಟ ಸಸ್ಯವೆಂದು ಗುರುತಿಸಿ ಪ್ರಸ್ತುತ ಇರುವ ಈ ಹೆಸರು ನೀಡಿದರಂತೆ.
ಶರತ್ಕಾಲದಲ್ಲಿ ಬೆಳಗ್ಗೆ ಹತ್ತು ಗಂಟೆಯಂದಾಜಿಗೆ ಅರಳುವ ಈ ನಿಷ್ಪಾಪಿ ಸಸ್ಯದ ಒಂಟಿ ಹೂಗಳು ಸಂಜೆ ನಾಲ್ಕು ಗಂಟೆಯಾಗುತ್ತಲೇ ಮುದುಡುತ್ತದೆ. ಇದರಲ್ಲಿ ಬೀಜಗಳ ಮೂಲಕವೂ ಸಸ್ಯಗಳನ್ನು ಬೆಳೆಸಬಹುದು. ಆದರೆ ಕತ್ತರಿಸಿದ ಕಾಂಡದಿಂದ ಗಿಡವು ವೇಗವಾಗಿ ಬೆಳೆಯುತ್ತದೆ. ಬದುಕಿನ ಜಂಜಾಟದಲ್ಲಿ ಸುಲಭವಾಗಿ ಸೋಲೊಪ್ಪುವ ಗುಣವೂ ಈ ಸಸ್ಯಕ್ಕಿಲ್ಲ. ತರಕಾರೀ, ಸಲಾಡ್ ಗಳಲ್ಲಿ ಬಳಸಲಾಗುವ ಇದರ ಎಲೆ ಹಾಗೂ ತೊಗಟೆ ಲೋಳೆಯನ್ನು ಹೊಂದಿದೆ. ಎಲೆಯು ಸ್ವಲ್ಪ ಹುಳಿ ರುಚಿಯಿದೆ. ವಿದೇಶಗಳಲ್ಲೂ ಇದು ಆಕರ್ಷಣೆಗಾಗಿ ಉದ್ಯಾನವನಗಳಲ್ಲಿ ಬೆಳೆಸುವುದೇ ಅಲ್ಲದೆ ಖಾದ್ಯವಾಗಿಯೂ ಬಳಸುತ್ತಾರಂತೆ.
ಮಕ್ಕಳೇ, ನಿಮಗೂ ಈ ಹೂವಿನ ಗಿಡ ಸಿಕ್ಕೀತು. ಏನೂ ಆರೈಕೆ ಬಯಸದೆ ಬೆಳೆದು ಖುಷಿ ಹಂಚುವ ಅಸೆಟೋಸೆಲ್ಲಾವನ್ನು ಬೆಳೆಸಲು ಪ್ರಯತ್ನಿಸಿ.
ಸರಿ ಮಕ್ಕಳೇ. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************