ಕಲಾನಿಧಿ ಪ್ರಶಸ್ತಿ ಪುರಸ್ಕೃತ ಶ್ರೀ ವೆಂಕಿ ಪಲಿಮಾರು
Saturday, October 18, 2025
Edit
ಕಲಾ ಸಾಧಕರು
ಕಲಾನಿಧಿ ಪ್ರಶಸ್ತಿ ಪುರಸ್ಕೃತ ಶ್ರೀ ವೆಂಕಿ ಪಲಿಮಾರು
ಕಲಾ ಸಾಧಕ ಶ್ರೀ ವೆಂಕಿ ಪಲಿಮಾರು
(ಪಿ ವೆಂಕಟರಮಣ ಕಾಮತ್)
ಚಿತ್ರಕಲಾ ಶಿಕ್ಷಣ ಶಿಕ್ಷಕ
ಕೆ.ಪಿ.ಎಸ್. ಕೆ. ಮೆಮೋರಿಯಲ್ ಹೈಸ್ಕೂಲ್
ಪಂಜಿನಡ್ಕ, ಮುಲ್ಕಿ
ಮಂಗಳೂರು
ಮುಲ್ಕಿಯ ಗ್ರಾಮೀಣ ಪರಿಸರದಲ್ಲಿ ಬೆಳೆದ ವೆಂಕಿ ಪಲಿಮಾರು ಗದ್ದೆಯ ಮಣ್ಣಿನಲ್ಲಿ ಆಟವಾಡುತ್ತ ಬೆಳೆದವರು. ತನ್ನ ಹತ್ತನೇ ವಯಸ್ಸಿಗೆ ಆವೆ ಮಣ್ಣಿನ ಗಣಪತಿಯ ಮೂರ್ತಿ ಮಾಡಿ ಆನಂದಿಸಿದಾಗ ಮುಂದೊಂದು ದಿನ ಗದ್ದೆಯ ಹಸನಾದ ಮಣ್ಣು ತನ್ನ ಪಾಲಿನ ಬೆಳಕಾಗುತ್ತದೆ ಎಂಬುದು ಸ್ವತಃ ಊಹಿಸಿರಲು ಅಸಾಧ್ಯ. ಶಾಲೆ ಮತ್ತು ಮನೆಯಲ್ಲಿ ನಿತ್ಯವೂ ಮಣ್ಣಿನದೇ ಆಟ.
ಇನ್ನೂ ಹೈಸ್ಕೂಲ್ ದಿನಗಳು. ತಂದೆ ಉಮೇಶ್ ಕಾಮತ್ ಮತ್ತು ತಾಯಿ ಚಿತ್ರ ಕಾಮತ್ ತಾವು ನಡೆಸುತ್ತಿದ್ದ ಪ್ರಿಂಟಿಂಗ್ ಪ್ರೆಸ್ ನ ಕಾರಣಕ್ಕೆ ಮೂಲ್ಕಿ ಬಿಟ್ಟು ಪಲಿಮಾರು ನಗರಕ್ಕೆ ಆಗಮಿಸಿದಾಗ ಮುಲ್ಕಿಯ ನೈಸರ್ಗಿಕ ಮಣ್ಣಿನಿಂದ ದೂರವಾಗಬೇಕಾಯಿತು. ಮಣ್ಣಿನ ಒಡನಾಟ ಬಿಡಲಾರದಷ್ಟು ಬಾಂಧವ್ಯ. ಪಲಿಮಾರಿನ ಹಂಚಿನ ಕಾರ್ಖಾನೆಯಿಂದ ಮಣ್ಣು ತರುವಂತಹ ರೂಢಿ ಬೆಳೆಯಿತು. ತನ್ನ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿದ ಪಲಿಮಾರು ಹೈಸ್ಕೂಲು ಮುಖ್ಯೋಪಾಧ್ಯಾಯರಾದ ಶ್ರೀ ಕೆ ವಿ ಭಟ್ ಉಡುಪಿಯ ಕಲಾ ಮಂದಿರವನ್ನು ಸೇರುವಂತೆ ಪ್ರೋತ್ಸಾಹಿಸಿದರು. ಕಲಾವಿದರಾದ ಶ್ರೀ ಕೆ ಎಲ್ ಭಟ್ ಮಾರ್ಗದರ್ಶನದಲ್ಲಿ ಬೆಳೆದ ವೆಂಕಿ ಉಡುಪಿಯ ಪರಿಸರದ ರಮೇಶ್ ರಾವ್ ಸಹಿತ ಮಹಾನ್ ಕಲಾವಿದರೆಲ್ಲರೂ ಸ್ಫೂರ್ತಿಯಾದರು. ಶ್ರೀ ಬಲರಾಮ್ ಭಟ್ ಮತ್ತು ಗಂಜೀಫಾ ರಘುಪತಿ ಭಟ್ ಒತ್ತಾಸೆಯಂತೆ ಆವೆ ಮಣ್ಣಿನ ಶಿಲ್ಪ ಕಲಾವಿದರಾಗಿ ಬೆಳಕಿಗೆ ಬಂದರು.
ಕಲಾವಿದ, ಕಲಾಶಿಕ್ಷಕ ಶ್ರೀ ವೆಂಕಿ ಪಲಿಮಾರು ತನ್ನ ವೃತ್ತಿಜೀವನವನ್ನು ಆರಂಭ ಮಾಡಿದ್ದು 1997ರ ಸಮಯ ಮುಲ್ಕಿ ಪಂಜಿನಡ್ಕದ ಕೆ.ಪಿ.ಎಸ್.ಕೆ. ಮೆಮೊರಿಯಲ್ ಹೈಸ್ಕೂಲ್ ನಲ್ಲಿ. ಚಿತ್ರಕಲಾ ಶಿಕ್ಷಕರಾಗಿ ಇಂದಿಗೆ 29ವರ್ಷಗಳ ಸುದೀರ್ಘ ಸೇವೆಯಲ್ಲಿ ಸಾಧಿಸಿರುವ ಸಾಧನೆ ಅಮೋಘ. ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಕಲಾವಿದರನ್ನಾಗಿ ರೂಪುಗೊಳಿಸುವಲ್ಲಿ ಇವರ ಪ್ರಭೆ ಸ್ತುತ್ಯಾರ್ಹ. ಪ್ರತಿಭಾ ಕಾರಂಜಿ, ಕಲೋತ್ಸವ ಮುಂತಾದ ರಾಜ್ಯಮಟ್ಟ, ರಾಷ್ಟ್ರಮಟ್ಟದ ಕಲಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಲು ತರಬೇತುಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಶಾಲಾ 15 ಜನ ವಿದ್ಯಾರ್ಥಿಗಳ ತಂಡವನ್ನು ಕಟ್ಟಿಕೊಂಡು 21 x 15 ಅಡಿ ಎತ್ತರದ ಬೃಹತ್ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಪೇಪರ್ ಕೊಲಾಜ್ ಮೂಲಕ ರಚಿಸಿ ಇಂಡಿಯನ್ ವರ್ಲ್ಡ್ ರೆಕಾರ್ಡ್ ದಾಖಲಾದದ್ದು ಸಾಧನೆಯ ಒಂದು ಭಾಗವಾಗಿದೆ. ಇದೇ ರೀತಿ ವಿವಿಧ ಮಾಧ್ಯಮಗಳಲ್ಲಿ, ಕ್ರಿಕೆಟ್ ಬ್ಯಾಟ್, ಬೃಹತ್ ಶಿಲ್ಪಗಳನ್ನು ನಿರ್ಮಿಸಿ ಮಾಧ್ಯಮ ಲೋಕದಲ್ಲಿ ವಿಜೃಂಭಿಸಿದ್ದಾರೆ.
ಆವೆ ಮಣ್ಣಿನ ಶಿಲ್ಪ, ಉಬ್ಬು ಶಿಲ್ಪಗಳು, ಮರಳು ಶಿಲ್ಪಗಳು, ಅಕ್ರಾಲಿಕ್ ವರ್ಣ ಚಿತ್ರಗಳು, ತೈಲ ವರ್ಣ ಚಿತ್ರಗಳು ಹೀಗೆ ನಾನಾ ಮಾಧ್ಯಮದಲ್ಲಿ ಪರಿಣತಿಯನ್ನು ಪಡೆದಿರುವ ಇವರಿಗೆ ಆವೆ ಮಣ್ಣಿನ ಶಿಲ್ಪಗಳೆಂದರೆ ಬಲು ಇಷ್ಟ. ಕರ್ನಾಟಕದ ರಾಜ್ಯಾದ್ಯಂತ, ಭಾರತದ ವಿವಿಧ ಭಾಗಗಳಲ್ಲಿ ಇವರ ಏಕವ್ಯಕ್ತಿ ಮತ್ತು ಸಮೂಹ ಚಿತ್ರಕಲಾಕೃತಿಗಳ ಹಾಗೂ ಶಿಲ್ಪಕಲಾಕೃತಿಗಳ ಪ್ರದರ್ಶನಗಳು ನಡೆದಿವೆ. ಇವರ ಶಿಲ್ಪಗಳಿಗೆ ಬಹು ಬೇಡಿಕೆಯಿದ್ದು ದೇಶದ ಉದ್ದಗಲಕ್ಕೂ ಇವರ ಕಲಾಕೃತಿಗಳು ಮಾರಾಟವಾಗಿವೆ. ಜಾನಪದೀಯ, ಸಾಮಾಜಿಕ, ಶೈಕ್ಷಣಿಕ ವಿಷಯ ವಸ್ತುಗಳಲ್ಲಿ ಇವರ ಶಿಲ್ಪಗಳು ವಸ್ತು ವಿಷಯವನ್ನು ಪ್ರತಿಬಿಂಬಿಸುವುದು. ಈ ಎಲ್ಲಾ ಕಲಾಕೃತಿಗಳು ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಮುಗ್ಧತೆ ಹಾಗೂ ಭಾವನೆಯಿಂದ ಕೂಡಿದ್ದು ನೋಡುಗರ ಮನವನ್ನು ಗೆಲ್ಲುತ್ತದೆ.
ಮನೆಯಲ್ಲಿಯೇ 'ಚಿತ್ರಾಲಯ' ಆರ್ಟ್ ಗ್ಯಾಲರಿಯನ್ನು ನಿರ್ಮಿಸಿ ಕಲಾರಸಿಕರಿಗೆ ಅಧ್ಯಯನ ಕೇಂದ್ರವಾಗಿಸಿದ್ದಾರೆ. ಚಿತ್ರಾಲಯ ತುಂಬಾ ಕಲಾಕೃತಿಗಳು ತುಂಬಿವೆ. ಇಲ್ಲಿಗೆ ಯುಎಸ್ಎ, ಜರ್ಮನಿ, ಭಾರತದ ಬೇರೆ ಬೇರೆ ಭಾಗದ ಹಾಗೂ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಕಲೆಯ ಸೊಬಗನ್ನು ಕಣ್ತುಂಬಲು ಹಾಗೂ ಅಧ್ಯಯನ ಮಾಡಲು ಇಲ್ಲಿಗೆ ಆಗಮಿಸುತ್ತಾರೆ. ಕಲೆಯನ್ನು ಅರಸಿ ಬರುವ ಪ್ರವಾಸಿಗರಿಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿ ಕಲೆಯ ಪ್ರಚಾರದಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಆದರ್ಶ ಶಿಕ್ಷಕ, ಆಳ್ವಾಸ್ ವಿದ್ಯಾರ್ಥಿ ಸಿರಿ ಪ್ರಶಸ್ತಿ, ಉಪಾಧ್ಯಾಯ ಸನ್ಮಾನ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಹೀಗೆ ನಾನಾ ಬಗೆಯ ಪ್ರಶಸ್ತಿ, ಗೌರವ , ಸನ್ಮಾನಗಳು ಇವರ ಮುಡಿಗೇರಿದೆ.
ಪಲಿಮಾರು ಚಿತ್ರಾಲಯದಲ್ಲಿ ಸಂಗಾತಿ ಶ್ರೀಮತಿ ಪದ್ಮಾವತಿ ವಿ ಕಾಮತ್ ಹಾಗೂ ಮುದ್ದಿನ ಮಗಳಾದ ವರ್ಣಿತಾ ವಿ ಕಾಮತ್ ರೊಂದಿಗೆ ಸಂತಸದ ಜೀವನ ನಡೆಸುತ್ತಿರುವ ವೆಂಕಿಯವರಿಗೆ ಸಮರ್ಪಣೆಯಾಗುತ್ತಿರುವ 2023 ನೇ ಸಾಲಿನ “ಕಲಾನಿಧಿ ಪ್ರಶಸ್ತಿ-” ಇವರ ಕಲಾ ಕ್ಷೇತ್ರದ ಸಾಧನೆಗೆ ಸಾಕ್ಷಿಯಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ.
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
*****************************************
ಕಲಾನಿಧಿ ಪ್ರಶಸ್ತಿಯ ಕುರಿತು....
ಕಲಾನಿಧಿ ಪ್ರಶಸ್ತಿ ಪ್ರದಾನ - ಎನ್ನುವುದು ಸನ್ಮಾನ್ಯ ಹಿರಿಯ ಚಿತ್ರಕಲಾ ಶಿಕ್ಷಕರಾದ ಶ್ರೀ ಕಾ. ವಾ. ಆಚಾರ್ಯರ ನೆನಪಿನಲ್ಲಿ ಆರಂಭವಾದ ಕಾರ್ಯಕ್ರಮವಾಗಿತ್ತು. ಆ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕರಾಗಿ ಪ್ರಖ್ಯಾತರಾಗಿದ್ದ ಐ ಎನ್ ಜೋಶಿ -1992, ಶ್ರೀ ಗಣೇಶ ಸೋಮಯಾಜಿ - 2002, ಶ್ರೀ ಗೋಪಾಡ್ಕರ್ - 2004, ಶ್ರೀ ಉಪಾಧ್ಯಾಯ ಮೂಡುಬೆಳ್ಳೆ - 2005, ಎಂ ಎಸ್ ಪುರುಷೋತ್ತಮ - 2008 ಇವರು ಕಲಾ ನಿಧಿ ಪ್ರಶಸ್ತಿ ಪುರಸ್ಕೃತರಾಗಿದ್ದರು. ಕಾ ವಾ ಆಚಾರ್ಯರ ಮರಣಾನಂತರ ಈ ಕಲಾನಿಧಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಿಂತು ಹೋಯಿತು.
2010ರಲ್ಲಿ ಗೌರವಾನ್ವಿತ ಗಣೇಶ್ ಸೋಮಯಾಜಿಯವರ ಗೌರವಾಧ್ಯಕ್ಷತೆಯಲ್ಲಿ ಶ್ರೀಮತಿ ಶೋಭಾ ಭಾಸ್ಕರನ್, ಗೋಪಾಡ್ಕರ್ ಇನ್ನು ಅನೇಕ ಮಹಾನ್ ಚಿತ್ರಕಲಾ ಶಿಕ್ಷಕರ ಸಾರಥ್ಯದಲ್ಲಿ ಜರುಗಿದ ದಕ್ಷಿಣ ಕನ್ನಡ ಚಿತ್ರಕಲಾ ಶಿಕ್ಷಕರ ...'ವರುಷದ ಹರುಷ'... ಕಾರ್ಯಕ್ರಮ ಅರ್ಥಪೂರ್ಣವಾಗಿ ಮಂಗಳೂರಿನಲ್ಲಿ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಉಳಿಕೆಯಾದ ಮೊತ್ತವನ್ನು ಸದ್ಬಳಕೆಯಾಗಬೇಕೆನ್ನುವ ದೃಷ್ಟಿಯಿಂದ ಸೋಮಾಯಾಜಿ ಯವರ ಆಶಯದಂತೆ ..."ಕಲಾನಿಧಿ ಪ್ರಶಸ್ತಿ".. ಯನ್ನು ದಕ್ಷಿಣ ಕನ್ನಡದ ವಿಶೇಷ ಸಾಧಕ ಶಿಕ್ಷಕರಿಗೆ ನೀಡಲು 2019 ರಿಂದ ದ.ಕ. ಜಿಲ್ಲಾ ಚಿತ್ರಕಲಾ ಶೈಕ್ಷಣಿಕ ಸಮಿತಿಯ ವತಿಯಿಂದ ಮುಂದುವರಿಸುವಂತೆ ನಿರ್ಧಾರ ಮಾಡಲಾಯಿತು.
ಈ ಪುರಸ್ಕಾರವನ್ನು ಪ್ರಖ್ಯಾತ ಚಿತ್ರ ಕಲಾವಿದರಾದ ಚಿತ್ರಕಲಾ ಶಿಕ್ಷಕ ಶ್ರೀ ಪೆರ್ಮುದೆ ಮೋಹನ್ ಕುಮಾರ್ - 2019, ಶ್ರೀಮತಿ ಮನೋರಂಜನಿ ರಾವ್- 2020 ನೀಡಲಾಯಿತು. ಹಾಗೂ ಈ ಬಾರಿ ಶ್ರೀ ವೆಂಕಿ ಪಲಿಮಾರು - 2023, ಶ್ರೀ ವಿ.ಕೆ. ವಿಟ್ಲ- 2024, ಶ್ರೀಮತಿ ರಾಜೇಶ್ವರಿ - 2025 ಪುರಸ್ಕೃತ ಗೊಳ್ಳಲಿದ್ದಾರೆ....
ಒಟ್ಟು ಚಿತ್ರಕಲಾ ಶಿಕ್ಷಕರ ಸಂಖ್ಯೆ ಕಡಿಮೆ ಎನಿಸಿದರೂ ಪ್ರತಿಯೊಬ್ಬರ ಸಾಧನೆ, ಕ್ರಿಯಾಶೀಲತೆ, ಸೃಜನಶೀಲತೆ ಅತ್ಯದ್ಭುತವಾದುದು. ಇನ್ನು ಮುಂದಿನ ದಿನಗಳಲ್ಲಿ ಕಲಾನಿಧಿ ಪ್ರಶಸ್ತಿಯನ್ನು ದಕ್ಷಿಣ ಕನ್ನಡದ ಪ್ರತಿಯೊಬ್ಬ ಚಿತ್ರಕಲಾ ಶಿಕ್ಷಕರು ಪುರಸ್ಕೃತ ಗೊಳ್ಳುವ ನಿಟ್ಟಿನಲ್ಲಿ ಅದ್ಭುತ ಕೆಲಸಗಳಲ್ಲಿ ನಿರತರಾಗಬೇಕೆನ್ನುವುದು ಶೈಕ್ಷಣಿಕ ಸಮಿತಿಯ ಉದ್ದೇಶ.
ಸರಕಾರಿ, ಅನುದಾನಿತ, ಖಾಸಗಿ ಶಾಲೆಗಳಲ್ಲಿ ಇರುವ ಚಿತ್ರಕಲಾ ಶಿಕ್ಷಕರ ಜೊತೆಗೆ ಖಾಸಗಿಯಾಗಿ ಸ್ವಂತ ಚಿತ್ರಕಲಾ ಶಾಲೆಯನ್ನು ಹೊಂದಿ ಅಥವಾ ಮಕ್ಕಳಿಗಾಗಿ ಅರೆಕಾಲಿಕ ಚಿತ್ರಕಲಾ ಶಿಕ್ಷಕರಾಗಿ ಹವ್ಯಾಸಿ ಚಿತ್ರಕಲಾ ಶಿಕ್ಷಕರಾಗಿ ದುಡಿಯುವ ಕ್ರಿಯಾಶೀಲ, ಸೃಜನಶೀಲ ವಿಶೇಷ ಸಾಧಕ ಚಿತ್ರಕಲಾ ಶಿಕ್ಷಕರನ್ನು ಗುರುತಿಸುವ ಇರಾದೆಯನ್ನು ಹೊಂದಿದ್ದೇವೆ..
ಸಂಪರ್ಕಕ್ಕಾಗಿ....
ಗಣೇಶ ಸೋಮಯಾಜಿ
ಅಧ್ಯಕ್ಷರು,
ದಕ್ಷಿಣ ಕನ್ನಡ ಜಿಲ್ಲಾ
ಚಿತ್ರಕಲಾ ಶೈಕ್ಷಣಿಕ ಸಮಿತಿ
ಮಂಗಳೂರು
Mob : +91 98453 35557
***************************************