ಕಲಾನಿಧಿ ಪ್ರಶಸ್ತಿ ಪುರಸ್ಕೃತ ರಾಜೇಶ್ವರಿ ಕುಡುಪು
Saturday, October 18, 2025
Edit
ಕಲಾ ಸಾಧಕರು
ಕಲಾನಿಧಿ ಪ್ರಶಸ್ತಿ ಪುರಸ್ಕೃತ ರಾಜೇಶ್ವರಿ ಕುಡುಪು
ಕಲಾ ಸಾಧಕಿ ಶ್ರೀಮತಿ ರಾಜೇಶ್ವರಿ ಕೆ
ಚಿತ್ರಕಲಾ ಶಿಕ್ಷಣ ಶಿಕ್ಷಕಿ
ಅನುದಾನಿತ ಕೆನರಾ ಹೆಣ್ಮಕ್ಕಳ ಪ್ರೌಢ ಶಾಲೆ
ಡೊಂಗರಕೇರಿ, ಮಂಗಳೂರು
ಮಹಿಳಾ ಕಲಾವಿದೆಯಾಗಿ, ಕಲಾ ಶಿಕ್ಷಕಿಯಾಗಿ ಗುರುತಿಸಿಕೊಂಡಿರುವ ಶ್ರೀಮತಿ ರಾಜೇಶ್ವರಿ ಕೆ ಇವರು ಬಾಲ್ಯದಿಂದಲೇ ಚಿತ್ರಕಲೆಯನ್ನು ಒಡನಾಡಿಯನ್ನಾಗಿ ಮಾಡಿಕೊಂಡವರು. ಬಂಟ್ವಾಳ ತಾಲೂಕಿನ ದೇವಸ್ಯಪಡೂರು ಕೇದಿಗೆಯಲ್ಲಿ ದಿವಂಗತ ಶ್ರೀ ಕೇದಿಗೆ ಭಾಸ್ಕರ್ ರಾವ್ ಹಾಗೂ ತಾಯಿ ಶೀಮತಿ ಲಕ್ಷ್ಮಿ ಭಾಸ್ಕರ್ ರಾವ್ ದಂಪತಿಗಳ ಕುಡಿಯಾಗಿ ಚಿತ್ರಕಲಾಸಕ್ತಿಯ ರಕ್ತದ ಗುಣವನ್ನು ಸಹೋದರರ ಜೊತೆ ಹಂಚಿಕೊಂಡು ಬೆಳೆದವರು.
ವೃತ್ತಿ ಪರವಾಗಿ ಚಿತ್ರಕಲಾಧ್ಯಯನಕ್ಕೆ 1986ರಿಂದ 1987ವರೆಗೆ ಮಂಗಳೂರಿನ ಬಿಜಿಎಂ ಫೈನ್ ಆರ್ಟ್ಸ್ ಸ್ಕೂಲ್‌ನಲ್ಲಿ ಚಿತ್ರಕಲಾಭ್ಯಾಸ, ಹಿರಿಯ ಕಲಾವಿದ ಪುರುಷೋತ್ತಮ್ ಕಾರಂತ್ ಅವರ ಮಾರ್ಗದರ್ಶನದಲ್ಲಿ ಉನ್ನತ ಚಿತ್ರಕಲಾ ವ್ಯಾಸಂಗ ಡಿಎಂಸಿ, ಜಿಡಿ ಆರ್ಟ್, ಆರ್ಟ್ ಮಾಸ್ಟರ್ ಪದವಿಯನ್ನು ಮಂಗಳೂರಿನ ಮಹಾಲಸಾ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಗಳಿಸಿ ಕಲಿಕೆಯ ವಿವಿಧ ಮಜಲುಗಳಲ್ಲಿ ಸ್ವತಂತ್ರವಾಗಿ ಬೆಳೆಯುವ ಅವಕಾಶಗಳಿಗೆ ತೆರೆದುಕೊಂಡರು.
ಮಂಗಳೂರಿನ ಡೊಂಗರಕೇರಿ ಅನುದಾನಿತ ಕೆನರಾ ಹೆಣ್ಮಕ್ಕಳ ಪ್ರೌಢ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ ಸೇವೆಯನ್ನು ಪ್ರಾರಂಭಿಸಿ 1995 ರಿಂದ ಪೂರ್ಣಕಾಲಿಕ ಚಿತ್ರಕಲಾ ಶಿಕ್ಷಕಿಯಾಗಿ ನಿರಂತರ ಮಕ್ಕಳ ಚಿತ್ರಕಲಾ ಶಿಕ್ಷಣದ ಸೇವೆಯನ್ನು ಸಲ್ಲಿಸುತಿದ್ದಾರೆ. ಮಕ್ಕಳ ಅಂತಃ ಶಕ್ತಿಗೆ ಹೊಸ ಚೈತನ್ಯವನ್ನು ನೀಡಿ ಕಲಾ ಕ್ಷೇತ್ರದ ಹೊಸ ದಿಕ್ಕಿಗೆ ಪಥವನ್ನು ತೋರಿಸುವ ಮಾರ್ಗದರ್ಶಕಿಯಾಗಿ ಸಾವಿರಾರು ಮಕ್ಕಳ ಕಲಾಬದುಕಿಗೆ ಬೆಳಕಾಗಿದ್ದಾರೆ.
ಶಾಲಾ ವಿದ್ಯಾರ್ಥಿಗಳಿಗೆ "ಕಲಾಸಂಪದ" ಎಂಬ ಪಠ್ಯಾಧಾರಿತ ಚಿತ್ರಕಲಾ ಮಾರ್ಗದರ್ಶಿ ಪುಸ್ತಕವನ್ನು ರಚಿಸಿರುವುದು ಕಲಾ ಬದುಕಿನ ವಿಶೇಷ ಮೈಲುಗಲ್ಲು. ಚಿತ್ರಕಲೆ ಮತ್ತು ಕರಕುಶಲ ಎರಡು ಕಲೆಗಳನ್ನು ಸಮ್ಮಿಳಿತಗೊಳಿಸಿ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಅವರ ಕೈಯಿಂದ ಅರಳಿಸುವ ತಂತ್ರಗಾರಿಕೆ ಮಾದರಿಯಾಗಿದೆ. ರಾಜ್ಯ, ರಾಷ್ಟ್ರಮಟ್ಟದ ಮಕ್ಕಳ ಕಲಾ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿರುವ ಅನುಭವದ ಜೊತೆಗೆ ಮಕ್ಕಳಿಗಾಗಿ ಕಲಾ ಚಟುವಟಿಕೆಗಳನ್ನು ಆಯೋಜನೆ ಮಾಡಿ ಮಕ್ಕಳ ಚಿತ್ರಕಲಾ ಪ್ರದರ್ಶನ, ಬಹು ವಿಧದ ಅವಕಾಶಗಳನ್ನು ನೀಡುತ್ತಾ ಮಕ್ಕಳನ್ನು ಬೆಳೆಸಿರುವುದಕ್ಕೆ ಅಗಾಧ ಸಂಖ್ಯೆಯ ಮಕ್ಕಳ ಕಲಾಕೃತಿಗಳು ಸಾಕ್ಷಿಗಳಾಗಿದೆ.
ಜಿಲ್ಲೆ, ರಾಜ್ಯಮಟ್ಟದ ಕಲಾವಿದರ ಚಿತ್ರಕಲಾ ಕಾರ್ಯಗಾರಗಳಲ್ಲಿ ಭಾಗವಹಿಸಿ ತನ್ನದೆ ಶೈಲಿಯ ಕಲಾಕೃತಿಗಳನ್ನು ರಚಿಸಿರುವ ಇವರು ತೈಲ ವರ್ಣದಲ್ಲಿ ಭಾವಚಿತ್ರ, ಅಕ್ರ್ಯಾಲಿಕ್, ಜಲವರ್ಣ ಮಾಧ್ಯಮದಲ್ಲಿ ಸಾಕಷ್ಟು ಕಲಾಕೃತಿಗಳನ್ನು ರಚಿಸಿ ಅನುಭವಗಳಿಸಿದ್ದಾರೆ. ಕುಡ್ಲ ಕಲಾ ಮೇಳ, ಕಲಾಪರ್ಬ ಹೀಗೆ ಮಂಗಳೂರು ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿ ತನ್ನ ಕಲಾನೈಪುಣ್ಯತೆಗೆ ಮೆರುಗನ್ನು ಕಲ್ಪಿಸಿಕೊಂಡಿದ್ದಾರೆ. ಚಿತ್ರಕಲಾ ಶಿಕ್ಷಕರ ಕಾರ್ಯಾಗಾರ, ಬಿತ್ತಿ ಚಿತ್ರ ರಚನಾ ಕಾರ್ಯಗಾರಗಳಲ್ಲಿ ಮತ್ತು ಮಕ್ಕಳ ಚಿತ್ರಕಲಾ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ ಅನುಭವಗಳಿವೆ
ಮೈಸೂರು ದಸರಾ ಪ್ರಶಸ್ತಿ, 2022-23ನೇ ಶೈಕ್ಷಣಿಕ ವರ್ಷದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ, ಕನ್ನಡ ಸಿರಿ ಪುರಸ್ಕಾರ, ರಾಜ್ಯ ಕಲಾರತ್ನ ಮಾರ್ಗದರ್ಶಿ ಶಿಕ್ಷಕಿ ಪ್ರಶಸ್ತಿ, ಕಲಾ ಸೇವಾ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳು, ಗೌರವ ಸನ್ಮಾನಗಳು ಇವರ ಕಲಾ ಸೇವೆಯನ್ನು ಅರಸಿ ಬಂದಿವೆ.
ರಮಾನಂದ ರಾವ್ ಕುಡುಪು ಇವರೊಂದಿಗಿನ ಸಹಬಾಳ್ವೆಯಲ್ಲಿ ಮುದ್ದಿನ ರಮ್ಯಶ್ರೀ, ಶ್ರೀನಿಧಿ ಮತ್ತು ರಾಘವೇಂದ್ರ ಮೂವರು ಮಕ್ಕಳೊಂದಿಗೆ ಸಂತಸದ ಜೀವನ ನಡೆಸುತ್ತಿರುವ ಶ್ರೀಮತಿ ರಾಜೇಶ್ವರಿ ಕೆ ಯವರಿಗೆ 2025 ನೇ ಸಾಲಿನ “ಕಲಾನಿಧಿ ಪ್ರಶಸ್ತಿ-” ಇವರ ಕಲಾ ಕ್ಷೇತ್ರದ ಸಾಧನೆಗೆ ಸಾಕ್ಷಿಯಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ.
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
*****************************************
ಕಲಾನಿಧಿ ಪ್ರಶಸ್ತಿಯ ಕುರಿತು....
ಕಲಾನಿಧಿ ಪ್ರಶಸ್ತಿ ಪ್ರದಾನ - ಎನ್ನುವುದು ಸನ್ಮಾನ್ಯ ಹಿರಿಯ ಚಿತ್ರಕಲಾ ಶಿಕ್ಷಕರಾದ ಶ್ರೀ ಕಾ. ವಾ. ಆಚಾರ್ಯರ ನೆನಪಿನಲ್ಲಿ ಆರಂಭವಾದ ಕಾರ್ಯಕ್ರಮವಾಗಿತ್ತು. ಆ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕರಾಗಿ ಪ್ರಖ್ಯಾತರಾಗಿದ್ದ ಐ ಎನ್ ಜೋಶಿ -1992, ಶ್ರೀ ಗಣೇಶ ಸೋಮಯಾಜಿ - 2002, ಶ್ರೀ ಗೋಪಾಡ್ಕರ್ - 2004, ಶ್ರೀ ಉಪಾಧ್ಯಾಯ ಮೂಡುಬೆಳ್ಳೆ - 2005, ಎಂ ಎಸ್ ಪುರುಷೋತ್ತಮ - 2008 ಇವರು ಕಲಾ ನಿಧಿ ಪ್ರಶಸ್ತಿ ಪುರಸ್ಕೃತರಾಗಿದ್ದರು. ಕಾ ವಾ ಆಚಾರ್ಯರ ಮರಣಾನಂತರ ಈ ಕಲಾನಿಧಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಿಂತು ಹೋಯಿತು.
2010ರಲ್ಲಿ ಗೌರವಾನ್ವಿತ ಗಣೇಶ್ ಸೋಮಯಾಜಿಯವರ ಗೌರವಾಧ್ಯಕ್ಷತೆಯಲ್ಲಿ ಶ್ರೀಮತಿ ಶೋಭಾ ಭಾಸ್ಕರನ್, ಗೋಪಾಡ್ಕರ್ ಇನ್ನು ಅನೇಕ ಮಹಾನ್ ಚಿತ್ರಕಲಾ ಶಿಕ್ಷಕರ ಸಾರಥ್ಯದಲ್ಲಿ ಜರುಗಿದ ದಕ್ಷಿಣ ಕನ್ನಡ ಚಿತ್ರಕಲಾ ಶಿಕ್ಷಕರ ...'ವರುಷದ ಹರುಷ'... ಕಾರ್ಯಕ್ರಮ ಅರ್ಥಪೂರ್ಣವಾಗಿ ಮಂಗಳೂರಿನಲ್ಲಿ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಉಳಿಕೆಯಾದ ಮೊತ್ತವನ್ನು ಸದ್ಬಳಕೆಯಾಗಬೇಕೆನ್ನುವ ದೃಷ್ಟಿಯಿಂದ ಸೋಮಾಯಾಜಿ ಯವರ ಆಶಯದಂತೆ ..."ಕಲಾನಿಧಿ ಪ್ರಶಸ್ತಿ".. ಯನ್ನು ದಕ್ಷಿಣ ಕನ್ನಡದ ವಿಶೇಷ ಸಾಧಕ ಶಿಕ್ಷಕರಿಗೆ ನೀಡಲು 2019 ರಿಂದ ದ.ಕ. ಜಿಲ್ಲಾ ಚಿತ್ರಕಲಾ ಶೈಕ್ಷಣಿಕ ಸಮಿತಿಯ ವತಿಯಿಂದ ಮುಂದುವರಿಸುವಂತೆ ನಿರ್ಧಾರ ಮಾಡಲಾಯಿತು.
ಈ ಪುರಸ್ಕಾರವನ್ನು ಪ್ರಖ್ಯಾತ ಚಿತ್ರ ಕಲಾವಿದರಾದ ಚಿತ್ರಕಲಾ ಶಿಕ್ಷಕ ಶ್ರೀ ಪೆರ್ಮುದೆ ಮೋಹನ್ ಕುಮಾರ್ - 2019, ಶ್ರೀಮತಿ ಮನೋರಂಜನಿ ರಾವ್- 2020 ನೀಡಲಾಯಿತು. ಹಾಗೂ ಈ ಬಾರಿ ಶ್ರೀ ವೆಂಕಿ ಪಲಿಮಾರು - 2023, ಶ್ರೀ ವಿ.ಕೆ. ವಿಟ್ಲ- 2024, ಶ್ರೀಮತಿ ರಾಜೇಶ್ವರಿ - 2025 ಪುರಸ್ಕೃತ ಗೊಳ್ಳಲಿದ್ದಾರೆ....
ಒಟ್ಟು ಚಿತ್ರಕಲಾ ಶಿಕ್ಷಕರ ಸಂಖ್ಯೆ ಕಡಿಮೆ ಎನಿಸಿದರೂ ಪ್ರತಿಯೊಬ್ಬರ ಸಾಧನೆ, ಕ್ರಿಯಾಶೀಲತೆ, ಸೃಜನಶೀಲತೆ ಅತ್ಯದ್ಭುತವಾದುದು. ಇನ್ನು ಮುಂದಿನ ದಿನಗಳಲ್ಲಿ ಕಲಾನಿಧಿ ಪ್ರಶಸ್ತಿಯನ್ನು ದಕ್ಷಿಣ ಕನ್ನಡದ ಪ್ರತಿಯೊಬ್ಬ ಚಿತ್ರಕಲಾ ಶಿಕ್ಷಕರು ಪುರಸ್ಕೃತ ಗೊಳ್ಳುವ ನಿಟ್ಟಿನಲ್ಲಿ ಅದ್ಭುತ ಕೆಲಸಗಳಲ್ಲಿ ನಿರತರಾಗಬೇಕೆನ್ನುವುದು ಶೈಕ್ಷಣಿಕ ಸಮಿತಿಯ ಉದ್ದೇಶ.
ಸರಕಾರಿ, ಅನುದಾನಿತ, ಖಾಸಗಿ ಶಾಲೆಗಳಲ್ಲಿ ಇರುವ ಚಿತ್ರಕಲಾ ಶಿಕ್ಷಕರ ಜೊತೆಗೆ ಖಾಸಗಿಯಾಗಿ ಸ್ವಂತ ಚಿತ್ರಕಲಾ ಶಾಲೆಯನ್ನು ಹೊಂದಿ ಅಥವಾ ಮಕ್ಕಳಿಗಾಗಿ ಅರೆಕಾಲಿಕ ಚಿತ್ರಕಲಾ ಶಿಕ್ಷಕರಾಗಿ ಹವ್ಯಾಸಿ ಚಿತ್ರಕಲಾ ಶಿಕ್ಷಕರಾಗಿ ದುಡಿಯುವ ಕ್ರಿಯಾಶೀಲ, ಸೃಜನಶೀಲ ವಿಶೇಷ ಸಾಧಕ ಚಿತ್ರಕಲಾ ಶಿಕ್ಷಕರನ್ನು ಗುರುತಿಸುವ ಇರಾದೆಯನ್ನು ಹೊಂದಿದ್ದೇವೆ..
ಸಂಪರ್ಕಕ್ಕಾಗಿ.....
ಗಣೇಶ ಸೋಮಯಾಜಿ
ಅಧ್ಯಕ್ಷರು,
ದಕ್ಷಿಣ ಕನ್ನಡ ಜಿಲ್ಲಾ
ಚಿತ್ರಕಲಾ ಶೈಕ್ಷಣಿಕ ಸಮಿತಿ
ಮಂಗಳೂರು
Mob : +91 98453 35557
***************************************