-->
ಕಲಾನಿಧಿ ಪ್ರಶಸ್ತಿ ಪುರಸ್ಕೃತ ಶ್ರೀ ವಿ ಕೆ ವಿಟ್ಲ

ಕಲಾನಿಧಿ ಪ್ರಶಸ್ತಿ ಪುರಸ್ಕೃತ ಶ್ರೀ ವಿ ಕೆ ವಿಟ್ಲ

ಕಲಾ ಸಾಧಕರು - 
ಕಲಾನಿಧಿ ಪ್ರಶಸ್ತಿ ಪುರಸ್ಕೃತ ಶ್ರೀ ವಿ ಕೆ ವಿಟ್ಲ  

ಕಲಾ ಸಾಧಕ ಶ್ರೀ ವಿ ಕೆ ವಿಟ್ಲ 
(ವಿಶ್ವನಾಥ ಗೌಡ ಕೆ)
ಚಿತ್ರಕಲಾ ಶಿಕ್ಷಣ ಶಿಕ್ಷಕ 
ಸರಕಾರಿ ಪ್ರೌಢಶಾಲೆ ಗುರುವಾಯನಕೆರೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


ಕಲಾವಿದ, ಕಲಾಶಿಕ್ಷಕ ಶ್ರೀ ವಿ ಕೆ ವಿಟ್ಲ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ತನ್ನ ಹುಟ್ಟೂರಾದ ವಿಟ್ಲದಲ್ಲಿ ಪೂರ್ಣಗೊಳಿಸಿದರು. ಅಂದು ಚಿತ್ರಕಲೆಯಲ್ಲಿರುವ ಇವರ ವಿಶೇಷ ಆಸಕ್ತಿಯನ್ನು ಕಂಡು ಪ್ರೋತ್ಸಾಹಿಸಿದವರು ವಿಠಲ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಚಿತ್ರಕಲಾ ಶಿಕ್ಷಕರಾದ ಶ್ರೀ ಸುರೇಶ್ ಹಂದಾಡಿ. ಇವರ ಸಲಹೆಯಂತೆ ಚಿತ್ರಕಲಾ ವಿದ್ಯಾರ್ಥಿಯಾಗಿ ಮಂಗಳೂರಿನ ಮಹಾಲಸಾ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲಾ ಪದವಿಯನ್ನು ಗಳಿಸಿದರು. ಬಿಳಿನೆಲೆ ಸುಬ್ರಮಣ್ಯ ಪ್ರೌಢಶಾಲೆ, ಎಸ್ ಡಿ ಎಮ್ ಉಜಿರೆ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿಯ ಅನುಭವದೊಂದಿಗೆ 2002ರಲ್ಲಿ ಸರಕಾರಿ ಪ್ರೌಢಶಾಲೆ ಗುರುವಾಯನಕೆರೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ನಿಯೋಜನೆಗೊಂಡರು. ಚಿತ್ರಕಲಾ ಶಿಕ್ಷಕರಾಗಿ ನಿಂತ ನೀರಾಗದೆ ತನ್ನಲ್ಲಿರುವ ಸೃಜನಶೀಲ ವ್ಯಕ್ತಿತ್ವದಿಂದ ಈ ಶಾಲೆಗೊಂದು ಶಕ್ತಿಯಾಗಿ ಬೆಳೆದರು. ಪ್ರತಿ ಗೋಡೆಗಳನ್ನು ಕಲಾಮಯಗೊಳಿಸಿದರು. ಶಾಲೆಯ ಒಟ್ಟು ಭೌತಿಕ ಸ್ವರೂಪವನ್ನು ಕಲಾರಸಿಕರಿಗೆ ಆಸ್ಟಾದಿಸುವ ತೆರೆದಿ ಅನಾವರಣಗೊಳಿಸಿದರು. ಗೋಡೆಗಳಲ್ಲಿ ಬಿಡಿಸಿರುವ ನೈಜ ಚಿತ್ರಗಳು, ವ್ಯಕ್ತಿ ಚಿತ್ರಗಳು, ಕಲಾತ್ಮಕ ಚಿತ್ರಣಗಳು ಎಲ್ಲರ ಮನ ಸೂರೆಗೊಳ್ಳುವಂತಿವೆ. ಆವರಣದಲ್ಲಿ ಇವರ ಹಸ್ತದಲ್ಲಿ ಅರಳಿದ ಮೂರ್ತಿ ಶಿಲ್ಪಗಳು ಕೂಡ ರಾಜ್ಯವ್ಯಾಪಿ ಸುದ್ದಿ ಆಗಿದೆ. ಕಥಕಳಿ, ಆನೆಯ ಮುಖ, ಚಿಟ್ಟೆ, ತೆಂಕುತಿಟ್ಟಿನ ಯಕ್ಷಗಾನ ಕಿರೀಟ, 25 ಅಡಿ ಎತ್ತರದ ಬೃಹತ್ ಬುದ್ಧನ ಮೂರ್ತಿ ಇವುಗಳೆಲ್ಲಾ ವಿ ಕೆ ವಿಟ್ಲ ರವರ ಕೈಚಳಕಕ್ಕೆ ಸಾಕ್ಷಿಗಳಾಗಿದೆ. ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಈ ಶಾಲೆಯು 2016ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿ ಜೊತೆಗೆ 15 ಲಕ್ಷ ರೂಪಾಯಿಗಳ ಗೌರವ ಪಡೆಯಲು ಇವರ ಸಾಧನೆ ಅನನ್ಯ.

ಸುಮಾರು ನಲವತ್ತು ವರ್ಷಗಳಿಂದ ಶ್ರೀಗಣೇಶನ, ಶಾರದಾದೇವಿಯ ಮೂರ್ತಿಗಳನ್ನು ರಚಿಸುತ್ತಿದ್ದು ಬಹಳಷ್ಟು ಅನುಭವಗಳಿರುವ ಸಿದ್ಧಹಸ್ತರಾಗಿದ್ದಾರೆ. ಪುಸ್ತಕ, ಪತ್ರಿಕೆಗಳಲ್ಲಿ, ಪಠ್ಯ ಪುಸ್ತಕ ರಚನಾ ಸಮಿತಿಯಲ್ಲಿ ಚಿತ್ರರಚನಕಾರರಾಗಿ, ಮುಖಪುಟ ವಿನ್ಯಾಸ ಹಾಗೂ ವೇದಿಕೆ ವಿನ್ಯಾಸ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಸಾಂಸ್ಕೃತಿಕ ವೇದಿಕೆಗಳ ಗಾಯನ ಕಾರ್ಯಕ್ರಮದಲ್ಲಿ ಕುಂಚ ಕಲಾವಿದರಾಗಿ ಸಾಕಷ್ಟು ಪ್ರದರ್ಶನಗಳನ್ನು ನೀಡಿದ್ದಾರೆ.

ಬೇಸಿಗೆ ಶಿಬಿರಗಳನ್ನು ಆಯೋಜನೆಗೊಳಿಸಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳ ಪ್ರತಿಭಾವಿಕಸನಕ್ಕೆ ನೆರವಾಗುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳ ಕಲಾ ಚಟುವಟಿಕೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳನ್ನು ಬೆಳೆಸುತ್ತಿದ್ದಾರೆ. ಸಾಕಷ್ಟು ವಿದ್ಯಾರ್ಥಿಗಳು ಇವರ ಗರಡಿಯಲ್ಲಿ ಪಳಗಿದ್ದು ಬಹುಮುಖ ಪ್ರತಿಭೆಯ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ. 

ರಾಜ್ಯಮಟ್ಟದ ಕಲಾವಿದರ ಅನೇಕ ಕಲಾ ಶಿಬಿರಗಳಲ್ಲಿ ಕಲಾವಿದರಾಗಿ ಭಾಗವಹಿಸುವುದರ ಜೊತೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.

ಶಾಲಾ ಶೈಕ್ಷಣಿಕ ಸಾಧನೆಗಾಗಿ 2017ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, 2024 ರಲ್ಲಿ ಕರ್ನಾಟಕ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳ ಜೊತೆ ಹಲವಾರು ಗೌರವ, ಪ್ರಶಸ್ತಿ, ಸನ್ಮಾನಗಳು ಇವರಿಗೆ ಒಲಿದು ಬಂದಿದೆ.

ಪ್ರಸ್ತುತ ಉಜಿರೆಯ 'ಮಲ್ಲಿಗೆ' ಮನೆಯಲ್ಲಿ ಸಂಗಾತಿ ಶ್ರೀಮತಿ ಆಶಾಕಿರಣ ಹಾಗೂ ಮುದ್ದಿನ ಮಗಳಾದ ಜಿತಾ ರೊಂದಿಗೆ ಸಂತಸದ ಜೀವನ ನಡೆಸುತ್ತಿರುವ ವಿ ಕೆ ವಿಟ್ಲ ಇವರಿಗೆ 2024 ನೇ ಸಾಲಿನ “ಕಲಾನಿಧಿ ಪ್ರಶಸ್ತಿ” ಇವರ ಕಲಾ ಕ್ಷೇತ್ರದ ಸಾಧನೆಗೆ ಸಾಕ್ಷಿಯಾಗಲಿ ಎಂದು ಹೃದಯಪೂರ್ವಕವಾಗಿ ಶುಭ ಹಾರೈಸುತ್ತಿದ್ದೇವೆ.   
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
*****************************************


 ಕಲಾನಿಧಿ ಪ್ರಶಸ್ತಿಯ ಕುರಿತು....

ಕಲಾನಿಧಿ ಪ್ರಶಸ್ತಿ ಪ್ರದಾನ - ಎನ್ನುವುದು ಸನ್ಮಾನ್ಯ ಹಿರಿಯ ಚಿತ್ರಕಲಾ ಶಿಕ್ಷಕರಾದ ಶ್ರೀ ಕಾ. ವಾ. ಆಚಾರ್ಯರ ನೆನಪಿನಲ್ಲಿ ಆರಂಭವಾದ ಕಾರ್ಯಕ್ರಮವಾಗಿತ್ತು. ಆ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕರಾಗಿ ಪ್ರಖ್ಯಾತರಾಗಿದ್ದ ಐ ಎನ್ ಜೋಶಿ -1992, ಶ್ರೀ ಗಣೇಶ ಸೋಮಯಾಜಿ - 2002, ಶ್ರೀ ಗೋಪಾಡ್ಕರ್ - 2004, ಶ್ರೀ ಉಪಾಧ್ಯಾಯ ಮೂಡುಬೆಳ್ಳೆ - 2005, ಎಂ ಎಸ್ ಪುರುಷೋತ್ತಮ - 2008 ಇವರು ಕಲಾ ನಿಧಿ ಪ್ರಶಸ್ತಿ ಪುರಸ್ಕೃತರಾಗಿದ್ದರು. ಕಾ ವಾ ಆಚಾರ್ಯರ ಮರಣಾನಂತರ ಈ ಕಲಾನಿಧಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಿಂತು ಹೋಯಿತು.
      2010ರಲ್ಲಿ ಗೌರವಾನ್ವಿತ ಗಣೇಶ್ ಸೋಮಯಾಜಿಯವರ ಗೌರವಾಧ್ಯಕ್ಷತೆಯಲ್ಲಿ ಶ್ರೀಮತಿ ಶೋಭಾ ಭಾಸ್ಕರನ್, ಗೋಪಾಡ್ಕರ್ ಇನ್ನು ಅನೇಕ ಮಹಾನ್ ಚಿತ್ರಕಲಾ ಶಿಕ್ಷಕರ ಸಾರಥ್ಯದಲ್ಲಿ ಜರುಗಿದ ದಕ್ಷಿಣ ಕನ್ನಡ ಚಿತ್ರಕಲಾ ಶಿಕ್ಷಕರ ...'ವರುಷದ ಹರುಷ'... ಕಾರ್ಯಕ್ರಮ ಅರ್ಥಪೂರ್ಣವಾಗಿ ಮಂಗಳೂರಿನಲ್ಲಿ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಉಳಿಕೆಯಾದ ಮೊತ್ತವನ್ನು ಸದ್ಬಳಕೆಯಾಗಬೇಕೆನ್ನುವ ದೃಷ್ಟಿಯಿಂದ ಸೋಮಾಯಾಜಿ ಯವರ ಆಶಯದಂತೆ ..."ಕಲಾನಿಧಿ ಪ್ರಶಸ್ತಿ".. ಯನ್ನು ದಕ್ಷಿಣ ಕನ್ನಡದ ವಿಶೇಷ ಸಾಧಕ ಶಿಕ್ಷಕರಿಗೆ ನೀಡಲು 2019 ರಿಂದ ದ.ಕ. ಜಿಲ್ಲಾ ಚಿತ್ರಕಲಾ ಶೈಕ್ಷಣಿಕ ಸಮಿತಿಯ ವತಿಯಿಂದ ಮುಂದುವರಿಸುವಂತೆ ನಿರ್ಧಾರ ಮಾಡಲಾಯಿತು.
      ಈ ಪುರಸ್ಕಾರವನ್ನು ಪ್ರಖ್ಯಾತ ಚಿತ್ರ ಕಲಾವಿದರಾದ ಚಿತ್ರಕಲಾ ಶಿಕ್ಷಕ ಶ್ರೀ ಪೆರ್ಮುದೆ ಮೋಹನ್ ಕುಮಾರ್ - 2019, ಶ್ರೀಮತಿ ಮನೋರಂಜನಿ ರಾವ್- 2020 ನೀಡಲಾಯಿತು. ಹಾಗೂ ಈ ಬಾರಿ ಶ್ರೀ ವೆಂಕಿ ಪಲಿಮಾರು - 2023, ಶ್ರೀ ವಿ.ಕೆ. ವಿಟ್ಲ- 2024, ಶ್ರೀಮತಿ ರಾಜೇಶ್ವರಿ - 2025 ಪುರಸ್ಕೃತ ಗೊಳ್ಳಲಿದ್ದಾರೆ....
        ಒಟ್ಟು ಚಿತ್ರಕಲಾ ಶಿಕ್ಷಕರ ಸಂಖ್ಯೆ ಕಡಿಮೆ ಎನಿಸಿದರೂ ಪ್ರತಿಯೊಬ್ಬರ ಸಾಧನೆ, ಕ್ರಿಯಾಶೀಲತೆ, ಸೃಜನಶೀಲತೆ ಅತ್ಯದ್ಭುತವಾದುದು. ಇನ್ನು ಮುಂದಿನ ದಿನಗಳಲ್ಲಿ ಕಲಾನಿಧಿ ಪ್ರಶಸ್ತಿಯನ್ನು ದಕ್ಷಿಣ ಕನ್ನಡದ ಪ್ರತಿಯೊಬ್ಬ ಚಿತ್ರಕಲಾ ಶಿಕ್ಷಕರು ಪುರಸ್ಕೃತ ಗೊಳ್ಳುವ ನಿಟ್ಟಿನಲ್ಲಿ ಅದ್ಭುತ ಕೆಲಸಗಳಲ್ಲಿ ನಿರತರಾಗಬೇಕೆನ್ನುವುದು ಶೈಕ್ಷಣಿಕ ಸಮಿತಿಯ ಉದ್ದೇಶ.
     ಸರಕಾರಿ, ಅನುದಾನಿತ, ಖಾಸಗಿ ಶಾಲೆಗಳಲ್ಲಿ ಇರುವ ಚಿತ್ರಕಲಾ ಶಿಕ್ಷಕರ ಜೊತೆಗೆ ಖಾಸಗಿಯಾಗಿ ಸ್ವಂತ ಚಿತ್ರಕಲಾ ಶಾಲೆಯನ್ನು ಹೊಂದಿ ಅಥವಾ ಮಕ್ಕಳಿಗಾಗಿ ಅರೆಕಾಲಿಕ ಚಿತ್ರಕಲಾ ಶಿಕ್ಷಕರಾಗಿ ಹವ್ಯಾಸಿ ಚಿತ್ರಕಲಾ ಶಿಕ್ಷಕರಾಗಿ ದುಡಿಯುವ ಕ್ರಿಯಾಶೀಲ, ಸೃಜನಶೀಲ ವಿಶೇಷ ಸಾಧಕ ಚಿತ್ರಕಲಾ ಶಿಕ್ಷಕರನ್ನು ಗುರುತಿಸುವ ಇರಾದೆಯನ್ನು ಹೊಂದಿದ್ದೇವೆ.. 

ಗಣೇಶ ಸೋಮಯಾಜಿ
ಅಧ್ಯಕ್ಷರು, 
ದಕ್ಷಿಣ ಕನ್ನಡ ಜಿಲ್ಲಾ 
ಚಿತ್ರಕಲಾ ಶೈಕ್ಷಣಿಕ ಸಮಿತಿ 
ಮಂಗಳೂರು
Mob : +91 98453 35557
***************************************



Ads on article

Advertise in articles 1

advertising articles 2

Advertise under the article