-->
ಪಯಣ : ಸಂಚಿಕೆ - 65 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 65 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 65 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ

ಎಲ್ಲರಿಗೂ ನಮಸ್ಕಾರ.... ಈ ವಾರವೂ ನಮ್ಮೀ ಕನ್ನಡ ನಾಡಿನ ಸಾಂಸ್ಕೃತಿಕ, ಸಾಹಿತ್ಯಿಕ, ಐತಿಹಾಸಿಕ, ಪ್ರಾಕೃತಿಕ, ನಮ್ಮ ನಾಡ ಹಬ್ಬ ದಸರಾದ ಕೇಂದ್ರ ಬಿಂದುವಾಗಿರುವ "ಮೈಸೂರು ಜಿಲ್ಲೆಯ ಹಲವು ಪ್ರವಾಸ ತಾಣ" ಕ್ಕೆ ಪಯಣ ಮಾಡೋಣ ಬನ್ನಿ...

              
ಅರಮನೆ ನಗರಿ ಮೈಸೂರಲ್ಲಿ ಮೃಗಾಲಯ ಆರಂಭವಾಗಿದ್ದು 1892ರ ಆಸುಪಾಸಿನಲ್ಲಿ. ಮೈಸೂರು ಅರಸರು ಈಗಿನ ಮೃಗಾಲಯದ ಪಕ್ಕದಲ್ಲಿಯೇ ಇದ್ದ ಲೋಕರಂಜನ್ ಮಹಲ್‌ಗೆ ಬರುವ ರೂಢಿ ಬೆಳೆಸಿಕೊಂಡಿದ್ದರು. ಅದನ್ನು ಸಮ್ಮರ್ ಪ್ಯಾಲೇಸ್ (ಬೇಸಿಗೆ ಅರಮನೆ) ಎಂದೂ ಕರೆಯಲಾಗುತ್ತಿತ್ತು. ಇಲ್ಲಿಯೇ ಕ್ರೀಡಾ ಚಟುವಟಿಕೆಗಳೂ ನಡೆಯುತ್ತಿದ್ದವು.

ಇದರ ಪಕ್ಕದಲ್ಲಿಯೇ ಇದ್ದ 250 ಎಕರೆ ಜಮೀನಿನಲ್ಲಿ ಚಾಮರಾಜೇಂದ್ರ ಒಡೆಯರ ಕನಸಿನಂತೆ ಮೃಗಾಲಯ ಆರಂಭವಾಯಿತು. ಆದರೆ 1916ರ ತನಕ ಈ ಮೃಗಾಲಯಕ್ಕೆ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ಒಡೆಯರ ವಂಶಸ್ಥರು ಹಾಗೂ ಇತರೆ ದೇಶಗಳಿಂದ ಬರುವ ರಾಜಾಧಿರಾಜರು, ಅವರ ಪರಿವಾರದವರು ಮಾತ್ರ ಪ್ರಾಣಿ ಪಕ್ಷಿ - ವೀಕ್ಷಿಸಿ ಆನಂದಿಸುತ್ತಿದ್ದರು. ನಂತರ ಮಹಾರಾಜರೇ ಮುತುವರ್ಜಿ ವಹಿಸಿ ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿಕೊಟ್ಟರು ಎಂಬುವದು ಇತಿಹಾಸ.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಈ ಮೃಗಾಲಯ ರಾಜ್ಯ ಸರ್ಕಾರದ ಸುಪರ್ದಿಗೆ ಬಂತು. 1979ರ ತನಕವೂ ಸರ್ಕಾರದ ಉಸ್ತುವಾರಿಯಲ್ಲಿಯೇ ನಡೆಯಿತು. ನಂತರ ರಾಜ್ಯದ ಇತರೇ 8 ಮೃಗಾಲಯ ಸೇರಿಸಿ ರಾಜ್ಯ ಮೃಗಾಲಯ ಪ್ರಾಧಿಕಾರ ರಚಿಸಲಾಯಿತು. ಈಗ ಇದರ ಮೇಲ್ವಿಚಾರಣೆಯಲ್ಲಿ ಪ್ರಾಣಿ - ಪಕ್ಷಿಗಳಿಗೆ ಶಾಶ್ವತ ನೆಲೆ ಕಲ್ಪಿಸುವ ಕಾಯಕ ಯಶಸ್ವಿಯಾಗಿ ನಡೆದಿದೆ.

ರಾಜ್ಯದಲ್ಲಿ ಅನೇಕ ಮೃಗಾಲಯಗಳಿದ್ದರೂ ಮೈಸೂರು ಮೃಗಾಲಯ ಎಲ್ಲರ ಮನವನ್ನು ಸೆಳೆಯುತ್ತದೆ. ಇಲ್ಲಿರುವಂತಹ ಮೃಗಾಲಯದ ವಿಸ್ತಾರ, ಅನೇಕ ವೈವಿಧ್ಯಮಯವಾದ ಪ್ರಾಣಿ ಪಕ್ಷಿ ಜಲಚರಗಳ ವಾಸವು ಎಲ್ಲರನ್ನ ಸೆಳೆಯುತ್ತದೆ. ನಮ್ಮ ನಾಡಹಬ್ಬ ದಸರಾ ಸಮಯ ಇರಬಹುದು ಅಥವಾ ರಜಾ ದಿನಗಳಲ್ಲಿ ಹಾಗೂ ವಿಶೇಷವಾಗಿ ಶಾಲಾ ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ಸ್ಥಳವಾಗಿದೆ.

ಈ ಮೈಸೂರಿನ ಮೃಗಾಲಯದಲ್ಲಿ ಸುಮಾರು 171 ಕ್ಕೂ ಹೆಚ್ಚು ಜಾತಿಯ ಪ್ರಾಣಿ, ಪಕ್ಷಿ ಹಾಗೂ ಜಲಚರಗಳಿದ್ದು ಅವುಗಳ ಸಂಖ್ಯೆ ಬರೋಬ್ಬರಿ 1,450. ದೇಶದ ದೊಡ್ಡ ದೊಡ್ಡ ಮೃಗಾಲಯಗಳಿಗಿಂತಲೂ ಹೆಚ್ಚು ಹಾಗೂ ವೈವಿಧ್ಯ ತಳಿಗಳು ಇಲ್ಲಿರುವುದು ವಿಶೇಷ.

ಬಹು ವಿಸ್ತಾರವಾದ ಈ ಮೃಗಾಲಯಕ್ಕೆ ಒಳ ಹೋದರೆ ಒಂದು ನೈಜ ವಿಸ್ತಾರದ ಅರಣ್ಯದೊಡನೆ ನಮ್ಮ ಸಂಚಾರ ಆಗುತ್ತಿದೆಯೋ ಎಂಬ ಭಾವನೆ ಉಂಟಾಗುವುದು. ಸಾಂಸ್ಕೃತಿಕ ನಗರಿ ಎನಿಸಿಕೊಂಡ ಮೈಸೂರು ನಗರದ ಮಧ್ಯದಲ್ಲಿ ಇಂತಹ ವಿಸ್ತಾರವಾದಂತಹ ಮೃಗಾಲಯವಿರುವುದು ಹೆಮ್ಮೆಯ ವಿಷಯವಾಗಿದೆ. ಅನೇಕ ಸಿನಿಮಾಗಳಲ್ಲಿ ಈ ಮೃಗಾಲಯದ ದೃಶ್ಯಾವಳಿಗಳನ್ನು ಕಾಣಬಹುದಾಗಿದೆ. ಇದೊಂದು ಐತಿಹಾಸಿಕ ಮೃಗಾಲಯವಾಗಿದೆ.


"ನಾಡ ಹಬ್ಬದ ಕೇಂದ್ರವಾಗಿ, ಸಾಂಸ್ಕೃತಿಕ ನಗರಿಯಾಗಿ, ಪ್ರಾಣಿ ಪಕ್ಷಿಗಳ ವಾಸಸ್ಥಾನವಾಗಿ, ಪ್ರಾಕೃತಿಕ ಸೌಂದರ್ಯದಿಂದ ಎಲ್ಲರನ್ನೂ ಸೆಳೆಯುತ್ತಿರುವ ಮೈಸೂರಿಗೆ ಈ ಮೃಗಾಲಯ ಒಂದು ಹೆಗ್ಗುರುತಾಗಿದೆ". ಬನ್ನಿ ಒಮ್ಮೆ ಮೈಸೂರು ಪ್ರವಾಸಕ್ಕೆ... 
[ಮುಂದುವರಿಯುವುದು...]

ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************


Ads on article

Advertise in articles 1

advertising articles 2

Advertise under the article