-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 99

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 99

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 99
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

                  
ಪ್ರೀತಿಯ ಮಕ್ಕಳೇ... ಕಳೆದ ವಾರ ನವರಾತ್ರಿಯ ಸಂಭ್ರಮದೊಂದಿಗೆ ಸ್ವಲ್ಪ ಆರೋಗ್ಯ ಸಮಸ್ಯೆ ಇದ್ದುದರಿಂದ ನಿಮ್ಮೊಂದಿಗೆ ಹರಟೆ ಹೊಡೆಯಲಾಗಲಿಲ್ಲ. ಕನ್ನಡದ ಹರಟೆ ತಮಿಳಿನಲ್ಲಿ ಅರಟ್ಟೈ ಆಗುತ್ತದೆ. ಈಗ ವಾಟ್ಸ್ ಆ್ಯಪ್ ಗೆ ಪರ್ಯಾಯವಾಗಿ ಅರಟ್ಟೈ ಆ್ಯಪ್ ಸುದ್ದಿಯಾಗುತ್ತಿದೆ. ನೀವೂ ಇದನ್ನು ಡೌನ್‌ಲೋಡ್ ಮಾಡಿದ್ದೀರಾ? ನಿಮ್ಮ ಸೀಮಿತ ಗುಂಪಿನೊಳಗಾದರೂ ಬಳಸುತ್ತಿದ್ದೀರಾ? 

2025 ಭೌತಶಾಸ್ತ್ರಕ್ಕಾಗಿ ಇರುವ ನೊಬೆಲ್ ಪಾರಿತೋಷಕ ಪ್ರಕಟವಾಗಿದೆ. ಜಾನ್ ಕ್ಲಾರ್ಕ್, ಮೈಕೆಲ್ ಡೆವೊರೆಟ್ ಮತ್ತು ಜಾನ್ ಮಾರ್ಟಿನಿಸ್ ಅವರಿಗೆ ಕ್ವಾಂಟಮ್ ಟನಲಿಂಗ್ ಎಂಬ ವಿಷಯದಲ್ಲಿ ನೊಬೆಲ್ ಪಾರಿತೋಷಕ ಘೋಷಿಸಲಾಗಿದೆ. ವಿಜ್ಞಾನದಲ್ಲಿ ನೊಬೆಲ್ ಪಾರಿತೋಷಕವನ್ನು ಆ ಕಾಲದಲ್ಲಿ ಪರಿಗಣಿಸಲಾದ ಅಂತಿಮ ಸತ್ಯಗಳಿಗೆ ನೀಡಲಾಗುತ್ತದೆ. 

ಕೋಶ ಪೊರೆಯ ವಿವಿಧ ಕೆಲಸಗಳ ಬಗ್ಗೆ ಮಾತನಾಡುತ್ತಿರುವಾಗ ಕೋಶ ಪೊರೆ ಬರೀ ಎರಡು ಕೋಶಗಳ ಗಡಿಯನ್ನು ಗುರುತಿಸುವ ಗಡಿ ರೇಖೆಯಲ್ಲ ಬದಲಾಗಿ ತನ್ನ ಮೂಲಕ ಏನು ಹೇಗೆ ಹಾದುಹೋಗಬೇಕು ಎಂಬುದನ್ನು ನಿಯಂತ್ರಿಸುವ ಒಂದು ಬಾಗಿಲು ಇದ್ದಂತೆ ಎಂಬುದನ್ನು ತಿಳಿದುಕೊಂಡೆವು. ಅನಿಲಗಳ ಸರಳ ವಿಸರಣದ ಮೂಲಕ ಪ್ರಬಲತೆಗೆ ವಿರುದ್ಧವಾಗಿ ಚಲಿಸಿದರೆ ನೀರು ಆಯ್ಕೆಯ ಹೀರುವಿಕೆಯ ಮೂಲಕ ಸಾಗಿಸುತ್ತದೆ. ಜೀವಕೋಶಗಳ ಒಳಗೆ ಅಗತ್ಯವಾದ ಪೋಷಕಾಂಶಗಳನ್ನು ಸಾಗಿಸಬೇಕಾಗುತ್ತದೆ ಮತ್ತು ಕೋಶದ ಒಳಗೆ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಕೋಶದಿಂದ ಹೊರಗೆ ಸಾಗಿಸಬೇಕಾಗುತ್ತದೆ. ಈ ಕೆಲಸವನ್ನು ಈ ಪೊರೆಯಲ್ಲಿರುವ ಕೆಲವೊಂದು ಪ್ರೋಟೀನ್ ಗಳು ಈ ಕೆಲಸವನ್ನು ಮಾಡುತ್ತದೆ. ಇಲ್ಲಿ ಒಳ ಹೋಗುವ ಮತ್ತು ಹೊರ ಬರುವ ವಸ್ತುಗಳನ್ನು ನಿರ್ಧರಿಸುವುದು ಈ ಪ್ರೋಟೀನುಗಳು. ನೋಡಿದಿರಾ ಒಂದು ಯಕಶ್ಚಿತ್ ಪೊರೆ ಕೆಲಸ ಮಾಡಲು ಕೆಲಸಗಾರರನ್ನು ನೇಮಿಸಿಕೊಂಡಿದೆ.

ಕೋಶಪೊರೆಯ ಮೇಲೆ ಇರುವ ಕೆಲವೊಂದು ಗ್ರಾಹಕಗಳು (receptors) ಬರುವ ಸಂದೇಶವಾಹಕ ವಸ್ತುಗಳಿಂದ (signaling molecules) ಬರುವ ಸಂದೇಶವನ್ನು ಸ್ವೀಕರಿಸಿ ಇದು ಪಕ್ಕದ ಜೀವಕೋಶಗಳು ಮತ್ತು ಪರಿಸರದ ಬದಲಾವಣೆಗಳಿಗೆ ಸ್ಪಂದಿಸುವಂತೆ ಮಾಡುತ್ತದೆ. ಇದು ಒಂದು ಸಂಕೀರ್ಣ ರಾಸಾಯನಿಕ ಕ್ರಿಯೆಯಾದರೂ ಇದೊಂದು ಸರಳವಾದ ನರವ್ಯೂಹದ ಹಾಗೆ. ವಾತಾವರಣದ ಉಷ್ಣತೆಯ ವ್ಯತ್ಯಾಸ, ರಾಸಾಯನಿಕಗಳ ಪರಿಣಾಮಕ್ಕೆ ಸ್ಪಂದಿಸುವ ಸಾಮರ್ಥ್ಯವನ್ನು ಈ ಕೋಶಪೊರೆ ಕೋಶಕ್ಕೆ ಒದಗಿಸುತ್ತದೆ.

ಕೋಶಪೊರೆಯ ಮೇಲಿರುವ ಕೆಲವೊಂದು ವಿಶಿಷ್ಟವಾದ ಪ್ರೋಟೀನ್ ಗಳು ಮತ್ತು ಗ್ಲೈಕೋ ಪ್ರೋಟೀನ್ ಗಳು ಗುರುತಿನ ಕಾಯಗಳಾಗಿ (identification markers) ಬೇರೆ ಕೋಶಗಳಿಗೆ ಅಂಟಿಕೊಳ್ಳುವ ಅಥವಾ ಅಂಟಿಕೊಳ್ಳದ ಹಾಗೆ ನೋಡಿಕೊಳ್ಳುತ್ತವೆ (cell adhesion and recognition) ಇದು ರೋಗ ನಿರೋಧಕ ಪ್ರಕ್ರಿಯೆಯಲ್ಲಿ (immunity) ಅತಿ ಮುಖ್ಯ.

ಜೀವಕೋಶಗಳ ಒಳಗಡೆ ಇರುವ ರಾಸಾಯನಿಕ ವಾತಾವರಣದ ಸಮತೋಲನ ಕಾಯ್ದುಕೊಳ್ಳುವ ಕೆಲಸವನ್ನು ಈ ಕೋಶಪೊರೆ ಮಾಡುತ್ತದೆ. ಇದಕ್ಕಾಗಿ ಕೋಶದ ಒಳಗೆ ಅಥವಾ ಹೊರಗೆ ಅಯಾನುಗಳನ್ನು ಪಂಪ್ ಮಾಡಬೇಕಾಗುತ್ತದೆ. ಇದಕ್ಕೆ ಅಪಾರವಾದ ಶಕ್ತಿ ಬೇಕಾಗುತ್ತದೆ ಇದಕ್ಕೆ ಬೇಕಾದ ಶಕ್ತಿಯನ್ನು ಕೋಶಪೊರೆ ATP ಯಿಂದ ಪಡೆಯುತ್ತದೆ. ಆದ್ದರಿಂದ ಇದನ್ನು ATP powered pumps ಎಂದು ಕರೆಯುತ್ತಾರೆ. ಅಂದರೆ ಕೋಶ ಪೊರೆ ಒಂದು ಪಂಪ್ ಹೌಸ್ ನಂತೆ ಕೆಲಸ ಮಾಡುತ್ತದೆ.

ಕೋಶಪೊರೆಗೆ ಇರುವ ಸ್ಥಿತಿಸ್ಥಾಪಕತ್ವ ಅದು ಇನ್ನೊಂದು ಕೋಶವನ್ನು ನುಂಗುವ (endocytocis) ಮತ್ತು ಜೀರ್ಣಿಸಿದ ವಸ್ತುಗಳನ್ನು ಹೊರ ಹಾಕುವ (exocytosis) ಕೆಲಸ ಮಾಡುತ್ತದೆ. ಇದು ರೋಗ ನಿರೋಧಕ ವ್ಯವಸ್ಥೆ ಮತ್ತು ಕೋಶ ಪೋಷಣೆಗೆ ತುಂಬಾ ಅಗತ್ಯವಾದ ಪ್ರಕ್ರಿಯೆ. 

ನೋಡಿದಿರಾ ಕೋಶಪೊರೆ ಎಂಬುದು ನೀವು ಅಂಗಡಿಯಿಂದ ಸಾಮಾನು ತರುವ ಯಕಶ್ಚಿತ್ ಲಕೋಟೆ ಅಲ್ಲ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************


Ads on article

Advertise in articles 1

advertising articles 2

Advertise under the article