ಸ್ಫೂರ್ತಿಯ ಮಾತುಗಳು : ಸಂಚಿಕೆ - 185
Monday, October 6, 2025
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 185
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಕರ್ಮವು ಪ್ರತಿಯೊಬ್ಬನ ಧರ್ಮ. ಕರ್ಮ ಎಂದರೆ ಕರ್ತವ್ಯ . ಕಾರ್ಯ, ಕೆಲಸ ಅಥವಾ ಕ್ರಿಯೆ.. ಹುಟ್ಟಿನೊಂದಿಗೆಯೇ ಧರ್ಮವು ಹೇಗೆ ಮನುಷ್ಯನಿಗೆ ಅನಿವಾರ್ಯವೋ ಕರ್ಮವೂ ಅನಿವಾರ್ಯ. ಕರ್ಮದಲ್ಲಿ ಧರ್ಮ, ಧರ್ಮದಲ್ಲಿ ಕರ್ಮ ಹೆಣೆಯಲ್ಪಟ್ಟಿದ್ದು ಇವೆರಡನ್ನೂ ಪ್ರತ್ಯೇಕಿಸುವಂತಿಲ್ಲ. ಕರ್ಮಕರ, ಕರ್ಮಚಾರಿ ಈ ಪದಗಳು ಕರ್ಮಮಾಡುವವನನ್ನು ವಿವರಿಸುತ್ತವೆ. ಕರ್ಮಚಾರಿಯಲ್ಲದವನು ಸೋಮಾರಿ ಅಥವಾ ಆಲಸಿ. ಆಲಸಿಯು ಕರ್ಮವಿಮುಖನಾಗಿರುತ್ತಾನೆ. ಕರ್ಮಗಳನ್ನು ಯಥಾವತ್ತಾಗಿ ಮಾಡುವುದು ಧರ್ಮ.
ತೋಟದ ಮಾಲಿಕನು ತನ್ನ ತೋಟದ ಕೆಲಸಗಳಿಗೆ ಕರ್ತವ್ಯದಲ್ಲಿ ನೆರವಾಗಲೆಂದು ಜನರನ್ನು ನೇಮಿಸುತ್ತಾನೆ. ತಾನು ನೇಮಿಸಿದ ಪ್ರತಿಯೊಬ್ಬರೂ ಒಂದೇ ರೀತಿ ಕೆಲಸ ಮಾಡುವುದಿಲ್ಲ. ಅವರು ಮಾಡುವ ಕೆಲಸಗಳು ಅವರ ಮನೋಧರ್ಮ ಮತ್ತು ದೈಹಿಕ ಬಲಗಳನ್ನು ಆಧರಿಸಿರುತ್ತವೆ. ಆದರೆ ಮನೋಧರ್ಮವು ಹೆಚ್ಚು ಪ್ರಧಾನವಾಗಿರುತ್ತದೆ ಎಂಬುದು ನಿಸ್ಸಂಶಯ. ವಿವೇಚನೆ ಕೂಡಾ ಕರ್ಮವೈಖರಿಯನ್ನು ನಿರ್ಣಯಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.
ತೋಟದ ಮಾಲಿಯು ತೋಟದ ಕೆಲಸಕ್ಕೆ ನೇಮಿಸಿದವರಲ್ಲಿ ಕೆಲವರು ಎಲ್ಲ ಕೆಲಸಗಳನ್ನು ಹೇಳದೇ ಮಾಡುವವರು ಇರಬಹುದು. ಅವರು ಉತ್ತಮ ಕೆಲಸ ಮಾಡುವ ಮನೋಧರ್ಮಹೊಂದಿದ್ದಾರೆ ಎಂದು ತಿಳಿಯಬೇಕು. ಅವರಿಗೆ ತೋಟದ ಎಲ್ಲಾ ಕೆಲಸಗಳನ್ನು ಮಾಡುವ ಚಾತುರ್ಯ ಅಥವಾ ಕೌಶಲ್ಯ ಕರಗತವಾಗಿರುತ್ತದೆ. ಜೊತೆಗೆ ಅವರು ತಮ್ಮ ವಿವೇಚನೆ ಅಥವಾ ಬುದ್ಧಿಶಕ್ತಿಯನ್ನು ತಮ್ಮ ಕರ್ಮದೊಂದಿಗೆ ಜೋಡಿಸುತ್ತಾರೆ. ಇವರ ಕರ್ಮವೈಖರಿ ಹಾಗೂ ಕರ್ಮ ಬದ್ಧತೆ ಪ್ರಶಂಸನಾರ್ಹವಾಗುತ್ತದೆ. ಇವರಿಗೆ ಅದನ್ನು ಮಾಡು, ಇದನ್ನು ಮಾಡು, ಹೀಗೆ ಮಾಡು, ಹಾಗೆ ಮಾಡು ಎಂಬ ಸಂದೇಶಗಳ ಅಥವಾ ಸಲಹೆಗಳ ಅಗತ್ಯವಿರುವುದಿಲ್ಲ. ಇವರು ಸಾತ್ವಿಕರು
ನೇಮಿಸಲ್ಪಟ್ಟ ಕರ್ಮಕಾರಿಗಳಲ್ಲಿ ಕೆಲವರು ಸ್ವಲ್ಪ ಕೆಲಸ ಮಾಡಿದೊಡನೆಯೇ ಆಯಾಸ ಹೊಂದಿದವರಂತೆ ಕಾಣಿಸುವುದು, ಶ್ರಾಂತರಾಗಿದ್ದೇವೆಂದು ವಿಶ್ರಾಂತಿಗೆ ಜಾರುವುದು ಇರುತ್ತದೆ. ಇದು ಕೂಡಾ ಅವರ ದೇಹಾರೋಗ್ಯವನ್ನು ಅವಲಂಬಿಸಿರಬಹುದು ಅಥವಾ ಮನೋಗುಣದ ಪ್ರಭಾವವೂ ಇರಬಹುದು. ಸೋಮಾರಿತನದ ಗುಣ ಅಥವಾ ಆಲಸ್ಯ ಭಾವನೆಯವರಿಗೆ ಆಯಾಸ ಬೇಗನೇ ಆಗುವುದು ಸಹಜ. ಇವರನ್ನು ಕೆಲಸ ಮಾಡಿಸುವುದೂ ಕಷ್ಟ. ಇವರು ಹೇಳಿದುದನ್ನು ಬಹಳ ಕಷ್ಟದಿಂದ ಮಾಡುವರು. ಸಿಗಬೇಕಾದ ಸೌಲಭ್ಯಕ್ಕೆ ಹೋರಾಟವಿರುವುದರೊಂದಿಗೆ ಹೆಚ್ಚುವರಿ ಪ್ರತಿಫಲವನ್ನೂ ಬಯಸುತ್ತಾರೆ. ಇದು ಒಂದು ರೀತಿಯಲ್ಲಿ ರಜೋಗುಣದವರ ಲಕ್ಷಣವೂ ಹೌದು.
ಕೆಲವರು ತಾಮಸ ಗುಣದ ಕೆಲಸಗಾರರೂ ಇರುತ್ತಾರೆ. ಇವರು ಮಾಡುವ ಎಲ್ಲ ಕೆಲಸಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪಾಗುತ್ತಲೇ ಇರುತ್ತದೆ. ಇವರು ಯಾರ ಸಲಹೆಯನ್ನೂ ಕೇಳುವುದಿಲ್ಲ ಮತ್ತು ಸಲಹೆ ಬಯಸದ ಧೂರ್ತರೆಂದರೂ ತಪ್ಪಾಗದು. ಗಿಡಕ್ಕೆ ಗೊಬ್ಬರ ಹಾಕಲು ಹೇಳಿದರೆ ಗಿಡದ ಬುಡಕ್ಕೆ ಗೊಬ್ಬರ ಹಾಕಿ ಗಿಡ ಸಾಯಿಸುವ ಕೆಲಸಗಾರರ ಸಾಲಿಗೆ ಸೇರುವ ಇವರನ್ನು ನಿರ್ವಹಿಸುವುದೆಂದರೆ “ಜೀವ” ಹೋಗುತ್ತದೆ. ಮೊಬೈಲಿನ ಇಂದಿ ದಿನದಲ್ಲಿ ಮೊಬೈಲಿನಲ್ಲೇ ಮುಳುಗಿ ಊಟ ಚಹ ತಿಂಡಿ ಖಾಲಿ ಮಾಡಿ ಮಜೂರಿ ಪಡೆಯುವವರನ್ನು ನಿಭಾಯಿಸುವುದಾದರೂ ಹೇಗೆ? ಇವರನ್ನು ತಾಮಸಿಗಳೆಂದು ಕರೆಯಲು ಕಾರಣ ತಿಳಿಯಿತೇ? ಇಂತಹ ಗುಣ ತ್ರಯರು ಕಾರ್ಮಿಕ ವರ್ಗ ಮಾತ್ರವಲ್ಲ, ನೌಕರ ವರ್ಗ, ಅಧಿಕಾರಿ ವರ್ಗ, ಕುಶಲಕರ್ಮಿಗಳ ಸಮೂಹ, ಸೇವಾ ವರ್ಗ ಹೀಗೆ ಎಲ್ಲೆಡೆಯೂ ಇರುತ್ತಾರೆ. ಕಚೇರಿಗೆ ಹೋಗಿ ಸಹಿ ಹಾಕಿ ಸಾಯಂಕಾಲ ಮನೆಗೆ ಹಿಂತಿರುಗುವ, ಏನೂ ಕರ್ತವ್ಯ ನಿರ್ವಹಿಸದ ವರ್ಗದವರು ತಾಮಸಿಗಳಲ್ಲದೆ ಇನ್ನೇನು ಅಲ್ಲವೇ?
ಲಂಚಕ್ಕಾಗಿ ಕೈಚಾಚುವ ನೀಚವರ್ಗವೂ ಇದೆ. ಹಣಮಾಡುವ ಕರ್ಮವೈಖರಿ ನಾಡಿಗೆ ಶಾಪ. ಕರ್ಮಗಳನ್ನು ಮನೋನಿಷ್ಠವಾಗಿ ಮಾಡಬೇಕು. ಕರ್ಮಗಳೊಂದಿಗೆ ಹೃದಯಸಂಪನ್ನತೆ ಬೆಸೆಯಲ್ಪಟ್ಟಿರಬೇಕು. ಕರ್ಮದಲ್ಲಿ ಸಾತ್ವಿಕತೆಯೇ ಮೆರೆಯುತ್ತದೆ. ಸೋಮಾರಿಗಳು ಅಥವಾ ಕೆಲಸಗಳ್ಳರಿಗೆ ಹೇಗೆ ಉತ್ತಮ ಭವಿಷ್ಯವಿರದೋ ಅದೇ ರೀತಿ ಅಸಮರ್ಥ ಕೆಲಸಗಾರಿಗೂ ಉತ್ತಮ ಭವಿಷ್ಯವಿರದು.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
******************************************