-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 81

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 81

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 81
ಬರಹ : ಸುರೇಖಾ ಯಾಳವಾರ 
ವಿಶೇಷ ಸಂಪನ್ಮೂಲ ವ್ಯಕ್ತಿ 
ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 94480 40225


ಮೂರನೇ ತರಗತಿಯ ನಲಿಕಲಿ ಮಕ್ಕಳಲ್ಲಿ ನನಗೆ ವಿಶೇಷ ಪ್ರೀತಿ ಯಾಕೆಂದರೆ ತರಗತಿಯ ಎಲ್ಲಾ ಮಕ್ಕಳು ಪಾದರಸದಂತೆ ಚುರುಕಾಗಿದ್ದರು. ಎಂದಿನಂತೆ ಪರಿಸರ ಅಧ್ಯಯನ ಪಾಠ ಪ್ರಾರಂಭದ ಮೊದಲು ಎಲ್ಲಾ ಮಕ್ಕಳನ್ನೊಮ್ಮೆ ಅವಲೋಕಿಸಿ ಪಾಠ ಮಾಡುವುದು ನನ್ನ ರೂಢಿ.

ಈ ಮಕ್ಕಳಲ್ಲಿ ಸ್ವಲ್ಪ ಹೆಚ್ಚು ಅನ್ನಿಸುವಷ್ಟು ಮೌನವಾಗಿರುತ್ತಿದ್ದ ರಮ್ಯಾ ಕೈಯಲ್ಲಿ ಕಾಗದದಿಂದ ಸುತ್ತಿದ ವಸ್ತುವನ್ನು ಗಟ್ಟಿಯಾಗಿ ಹಿಡಿದುಕೊಂಡು ನನ್ನನ್ನೊಮ್ಮೆ ಮತ್ತು ಮಕ್ಕಳನ್ನೊಮ್ಮೆ ಕಣ್ಣು ಪಿಳಿಪಿಳಿ ಮಾಡಿ ನೋಡುತ್ತಿದ್ದಳು. ಏನು ರಮ್ಯಾ ಎಂದು ಕೇಳಿದಾಗ ಕಿರುನಗೆ ಬೀರಿದ್ದು ಬಿಟ್ಟರೆ ಬೇರೇನು ಮಾಹಿತಿ ತಿಳಿಯಲಿಲ್ಲ. ಅವಳ ಆಪ್ತ ಗೆಳತಿ ಪ್ರಿಯಾ ಟೀಚರ್ ಅವಳ ಕೈಯಲ್ಲಿ ಚಾಕಲೇಟ್ ಇದೆ ಎಲ್ಲರಿಗೂ ಪಟ್ಟಲಿಕ್ಕೆ ತಂದಿದ್ದಾಳೆ ಅಂದಳು. ಅದಕ್ಕೆ ಇನ್ನೊಬ್ಬಳು ಪಟ್ಟಲಿಕ್ಕೆ ಅಲ್ಲ ಅದು ಹಂಚಲಿಕ್ಕೆ ಅಂತ ಅಂದಳು. ನಾನು ಯಾವಾಗಲೂ ಮಕ್ಕಳಿಗೆ ಹೇಳುತ್ತಿದ್ದೆ. ಏನಾದರೂ ತಿನ್ನುವ ವಸ್ತು ತಂದರೆ ಎಲ್ಲರಿಗೂ ಹಂಚಿ ತಿನ್ನಬೇಕು, ಇಲ್ಲದಿದ್ದರೆ ಶಾಲೆಗೆ ತರಬಾರದು ಎಂದು. ಆ ದಿನ ರಮ್ಯಾ ತಂದಿದ್ದ ಏಳೆಂಟು ಚಾಕ್ಲೇಟುಗಳನ್ನು ಪುಡಿಮಾಡಿ ತರಗತಿಯ 31 ಮಕ್ಕಳಿಗೆ ಪುಡಿಯನ್ನು ಕೈಗೆ ಅಂಟಿಸಿ ಎಲ್ಲರೂ ಖುಷಿಯಿಂದ ನೆಕ್ಕಿದ್ದಾಯಿತು. ಹೆಚ್ಚಾಗಿ ಎಲ್ಲಾ ಮಕ್ಕಳು ಮನೆಯಲ್ಲಿನ ಪ್ರಸಾದ ತಿಂಡಿ ಏನಾದರೂ ತಂದು ಎಲ್ಲರಿಗೂ ಕೊಡುವುದು ರೂಢಿಯಾಗಿತ್ತು. ಹಾಗೆ ಎಲ್ಲರೂ ಅದನ್ನು ಪ್ರೀತಿಯಿಂದಲೇ ತಿನ್ನುತ್ತಿದ್ದರೂ ಕೂಡ. 

ಒಂದನೇ ತರಗತಿಯಿಂದ ಸುಮಾರು ಐದನೇ ತರಗತಿಯ ವರೆಗೆ ಅಪ್ಪ-ಅಮ್ಮ ಅಜ್ಜ ಅಜ್ಜಿ ನಂತರ ಸೋದರ ಮಾವನ ಪೌರುಷ ಹೇಳಿಕೊಳ್ಳುವುದು ಮಕ್ಕಳಲ್ಲಿ ಸಾಮಾನ್ಯ ರೂಡಿ. ಹಾಗೆಯೇ ಪಾಠದ ಮೊದಲು ಮಕ್ಕಳ ಮನೆಯ ಕಥೆ ಕೇಳಿ ನಂತರವೇ ಪಾಠ ಪ್ರಾರಂಭಿಸಬೇಕಿತ್ತು. ಅವರ ಉತ್ಸಾಹದೊಂದಿಗೆ ನಾನು ಸಮಳಾಗಿ ಭಾಗಿಯಾಗುತ್ತಿದ್ದೆ. ದಿನ ಕಳೆದಂತೆ ಎಲ್ಲಾ ಮಕ್ಕಳಲ್ಲೂ ಕೊಂಚ ಭಿನ್ನಳಾಗಿ ಕಾಣಿಸಿಕೊಳ್ಳುತ್ತಿದ್ದ ರಮ್ಯಾ, ಯಾವುದೇ ವಸ್ತು ಆಗಲಿ ತಿಂಡಿ ಆಗಲಿ ನನ್ನ ಅಪ್ಪ ತಂದದ್ದು ಎಂದೆ ಮಾತಿನ ಆರಂಭ. ಅವಳ ಮನೆಯ ಪಕ್ಕದ ಮಕ್ಕಳು ಮನೆಯಲ್ಲಿ ಮಾತಾಡಿದ ಮಾತಿನಿಂದ ರಮ್ಯನಿಗೆ ಅಪ್ಪ ಇಲ್ಲ ಟೀಚರ್ ಎಂದರು. ಒಂದೆರಡು ಸಲ ಸುಮ್ಮನಿದ್ದೆ ಆದರೂ ಅವಳು ತಿಂಡಿಗಳನ್ನು ತರುವುದು, ಅಪ್ಪ ತಂದದ್ದು ಎಂದು ಹೇಳುವುದು, ಮಕ್ಕಳು ಅವಳಿಗೆ ಅಪ್ಪ ಇಲ್ಲ ಎನ್ನುವುದು, ಅವಳು ಸಪ್ಪೆ ಮೋರೆ ಹಾಕಿ ನನ್ನ ಅಪ್ಪನೇ ತಂದದ್ದು ಎಂದು ಹೇಳುವುದು ಮಾಮೂಲಾಗಿತ್ತು. ಮೂರು ದಿನ ಶಾಲೆಗೆ ಬಾರದ ರಮ್ಯನನ್ನು ಶಾಲೆಗೆ ಬಿಡಲು ರಮ್ಯಾ ತಾಯಿ ಬಂದರು. ಮಾಮೂಲಾಗಿ ಅವರೊಂದಿಗೆ ಕುಶಲೋಪರಿಯಾಗಿ ಮಾತನಾಡಿ ರಮ್ಯಾ ಶಾಲೆಗೆ ಬಾರದೆ ಇರಲು ಕಾರಣ ಕೇಳಿದೆ. ಅಷ್ಟೇನೂ ಚುರುಕಲ್ಲದ ಮುಗ್ಧ ಮನಸ್ಸಿನ ರಮ್ಯಾಳ ತಾಯಿ ನಮಗೆ ಪೊಲೀಸ್ ಸ್ಟೇಷನ್ ಗೆ ಹೋಗಲಿಕ್ಕೆ ಇತ್ತು ನನ್ನ ಗಂಡ ಬೇರೆ ಮದುವೆಯಾಗಿ ಬೇರೆ ಇದ್ದಾರೆ. ಬೀಡಿ ಕಟ್ಟಿ ಜೀವನ ನಿರ್ವಹಿಸಲು ಕಷ್ಟ ಆಗಿದೆ. ಮಗಳ ಖರ್ಚಿಗೆ ಹಣ ಕೊಡಲು ಪೊಲೀಸರ ಮೂಲಕ ಹೇಳಿಸಿದ್ದೇನೆ ಟೀಚರ್, ಅದಕ್ಕೆ ಬರಲು ಆಗಲಿಲ್ಲ ಎಂದರು. 

ಆ ದಿನ ಅವರ ದುಃಖ ಕಡಿಮೆ ಆಗಲಿ ಎಂದು ಅವರು ಹೇಳಿದ ಎಲ್ಲಾ ಮಾತುಗಳನ್ನು ಕೇಳಿ ಸಮಾಧಾನ ಮಾಡಿ ಕಳಿಸಿದೆ. ಅಪ್ಪ ಅನ್ನುವ ಶಬ್ದ ರಮ್ಯನ ಬಾಯಿಯಿಂದ ಬರುವ ಮೊದಲೇ ಅಪ್ಪ ಬೇರೆ ಆಗಿದ್ದರು. ಬೇರೆ ಮಕ್ಕಳ ಅಪ್ಪನ ಪ್ರೀತಿಯನ್ನು ಕಲ್ಪಿಸಿಕೊಂಡು ಯಾರು ಏನೇ ತಂದುಕೊಟ್ಟರು ಅಪ್ಪ ತಂದುಕೊಟ್ಟದ್ದು ಎಂದು ಹೇಳಿಕೊಳ್ಳುತ್ತಾ ಕೃತಕವಾಗಿ ಖುಷಿಪಡುತ್ತಿದ್ದಳು ರಮ್ಯಾ. ತಂದೆ ಅಥವಾ ತಾಯಿ ತಮ್ಮ ಮಕ್ಕಳ ಜವಾಬ್ದಾರಿಯನ್ನು ಅರಿಯದೆ ಮಗುವಿಗೆ ಆಗುವ ಆಘಾತವನ್ನು ಯಾರು ಯೋಚಿಸುವುದಿಲ್ಲ. ಮಕ್ಕಳ ಮನಸ್ಸಿನ ಗಾಯಕ್ಕೆ ಔಷಧಿ ಕೊಡುವವರು ಯಾರು? ಸಮಾಜದಲ್ಲಿ ಹೆಣ್ಣು ಮಗುವನ್ನು ಸ್ವಸ್ಥವಾಗಿ ಬೆಳೆಸಲು ಸಹಕರಿಸುವವರು ಯಾರು? ಚುಚ್ಚು ಮಾತುಗಳ ನಡುವೆ ಬದುಕುವ ಛಲ ತುಂಬಿಸುವವರು ಯಾರು? 

ಈ "ಯಾರು" ಗಳೆಲ್ಲ ಯಾರು? "ನಾವೇ" ಅಲ್ಲವೇ ರಮ್ಯಳಲ್ಲಿನ ತುಮುಲಗಳನ್ನು ಸಮಾಧಾನಗೊಳಿಸಿ ಭರವಸೆ ಮೂಡಿಸಬೇಕು. ನಕಾರಾತ್ಮಕತೆಯನ್ನು ದೂರೀಕರಿಸಬೇಕು. ಸೋಲನ್ನು ಹೃದಯಕ್ಕೆ ಇಳಿಯಲು ಬಿಡದೆ, ಸುಂದರ ಬದುಕಿನ ದಾರಿ ತೋರಿಸಬೇಕು. ಆದರೆ..... ಅಂತಹ ಪುಣ್ಯಾತ್ಮರು ಯಾರು?
.............................. ಸುರೇಖಾ ಯಾಳವಾರ 
ವಿಶೇಷ ಸಂಪನ್ಮೂಲ ವ್ಯಕ್ತಿ 
ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 94480 40225
*****************************************


Ads on article

Advertise in articles 1

advertising articles 2

Advertise under the article