ಪಯಣ : ಸಂಚಿಕೆ - 64 (ಬನ್ನಿ ಪ್ರವಾಸ ಹೋಗೋಣ)
Friday, October 10, 2025
Edit
ಪಯಣ : ಸಂಚಿಕೆ - 64 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಇಂದಿನ ಪ್ರವಾಸದಲ್ಲಿ ಮೈಸೂರಿನ ಮತ್ತೊಂದಿಷ್ಟು ಪ್ರವಾಸಿ ತಾಣದ ಬಗ್ಗೆ ತಿಳಿಯೋಣವೇ.... ಮತ್ತೇಕೆ ತಡ ಬನ್ನಿ.... ನಮ್ಮೀ ಕನ್ನಡ ನಾಡಿನ ಸಾಂಸ್ಕೃತಿಕ ಕೇಂದ್ರವಾಗಿರುವ "ಮೈಸೂರು ಜಿಲ್ಲೆಯ ಹಲವು ಪ್ರವಾಸ ತಾಣ" ಗಳಿಗೆ ಪಯಣ ಮಾಡೋಣ ಬನ್ನಿ....
ಮೂರು ದೇವಾಲಯಗಳು, ಮೂರು ನದಿಗಳು! ಸಂಗಮವೆಂದರೆ, ಥಟ್ಟನೆ ನೆನಪಿಗೆ ಬರುವುದು ಕೂಡಲ ಸಂಗಮ ಅಥವಾ ತಿರುಮಕೂಡಲ ಸಂಗಮ. ಆದರೆ, ಮೈಸೂರು ಜಿಲ್ಲೆಯಲ್ಲೇ ಮತ್ತೊಂದು ಸಂಗಮವಿದೆ. ಅದೇ ನಂಜನಗೂಡು ತಾಲೂಕಿನ ಸಂಗಮ. ಒಂದು ಕಾಲದಲ್ಲಿ ದಟ್ಟಡವಿಯ ಮಧ್ಯ ಭೋರ್ಗರೆಯುವ ನದಿ ಸುರಮ್ಯ ಪ್ರಕೃತಿಯ ಸುಂದರ ತಾಣ. ಈಗ ದಟ್ಟಡವಿ ಕಾಣದಿದ್ದರೂ ಸ್ಥಳದ ಪ್ರಶಾಂತತೆಗೆ ಭಂಗ ಬಂದಿಲ್ಲ. ಉತ್ತರಾಭಿಮುಖವಾಗಿ ಹರಿಯುವ ಕಪಿಲಾ, ಭೈಗು, ಗುಪ್ತಗಾಮಿನಿಯಾಗಿ ಉದ್ಭವಿಸಿರುವ ಅಮೃತವಾಹಿನಿಯ 'ಸಂಗಮ'.
ಇದರ ತಟದಲ್ಲೇ 11ನೇ ಶತಮಾನದ ಚೋಳವಂಶದ ಪ್ರಖ್ಯಾತ ದೊರೆ ರಾಜೇಂದ್ರ ಚೋಳನು ಸಂಗಮೇಶ್ವರನ ಲಿಂಗವನ್ನು ಪ್ರತಿಷ್ಠಾಪಿಸಿದ್ದಾನೆ. ಅದೇ ರೀತಿ ಶ್ರೀರಾಮನು ಸ್ವಹಸ್ತದಿಂದ ಸ್ಥಾಪಿಸಿದ ಲಿಂಗವು ರಾಮಲಿಂಗೇಶ್ವರ ಲಿಂಗವೆಂದು ಪ್ರಖ್ಯಾತಿ ಪಡೆದಿದೆ. ಅಲ್ಲದೆ, ಮತ್ತೊಂದು ಉದ್ಭವ ಲಿಂಗವಿದ್ದು ಅದನ್ನು ಮಹದೇಶ್ವರನ ಲಿಂಗವೆಂದು ಕರೆಯುತ್ತಾರೆ.
ಕಲ್ಲಿನಿಂದ ಕೆತ್ತಲಾಗಿರುವ ದೇವಾಲಯದ ಗರ್ಭಗುಡಿಯಲ್ಲಿ ಬಿಲ್ವಪತ್ರೆಯ ಮೂರು ದಳಗಳಂತೆ ಮೂರು ಲಿಂಗಗಳನ್ನು ಹೊಂದಿರುವ ಸಂಗಮಕ್ಷೇತ್ರ ಮೂರು ನದಿಗಳನ್ನು ಹೊಂದಿದ್ದು, ಮೂರು ಪ್ರಸಿದ್ದ ದೇವಾಲಯಗಳನ್ನು ಹೊಂದಿದೆ. ಇದರ ಮೂಲಕ ಭಕ್ತರ ಇಷ್ಟಾಭಿಲಾಷೆಯನ್ನು ಈಡೇರಿಸುವ ಈ ಧಾರ್ಮಿಕ ಕ್ಷೇತ್ರ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.
ಮೂರು ನದಿಯು ಸೇರಿ ಸಂಗಮವಾಗಿರುವ ಇಲ್ಲಿ ಸುತ್ತಮುತ್ತಲ ಮೂವತ್ತೂರು ಹಳ್ಳಿಯ ಜನರು ಸೇರಿ ಜಾತಿ, ಮತ, ಪಂಥ, ಬೇಧ-ಭಾವ, ಮರೆತು ಒಂದೊಂದು ಗ್ರಾಮದವರು ಒಂದೊಂದು ಕೆಲಸದಲ್ಲಿ ತೊಡಗಿಸಿಕೊಂಡು ಭಕ್ತಿಯಿಂದ ರಥ ಎಳೆಯುತ್ತಾ ಭಾವೈಕ್ಯತೆಯನ್ನು ಸಾರುತ್ತಾ ಪ್ರತಿ ವರ್ಷ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಜಾತ್ರೆ ಆಚರಿಸುತ್ತಾರೆ.
ಶತ ಶತಮಾನಗಳಿಂದಲೂ ನಡೆಯುತ್ತಾ ಬಂದಿರುವ ಜಾತ್ರೆಗೆ ಜಲ್‌ಜಲ್ ಶಬ್ದ ಮಾಡುತ್ತಾ ಸಾಲುಗಟ್ಟಿ ಎತ್ತಿನಗಾಡಿಯಲ್ಲಿ ಸಂಭ್ರಮದಿಂದ ಹೊರಡುತ್ತಿದ್ದರು. ಈಗ ಟ್ರಾಕ್ಟರ್, ಬಸ್, ಕಾರುಗಳ ಹಾದಿ ಹಿಡಿದಿದ್ದಾರೆ. ಈಗಲೂ ಕೆಲವರು ಎತ್ತಿನ ಗಾಡಿಯಲ್ಲೂ ಬರುತ್ತಾರೆ. ಇಲ್ಲಿ ದನಗಳ ಜಾತ್ರೆಯೂ ನಡೆಯುತ್ತದೆ.
ಪ್ರಾಚೀನ ರಾಮಲಿಂಗೇಶ್ವರಸ್ವಾಮಿ ದೇವಾಲಯದ ಪಕ್ಕದಲ್ಲಿ ಪವಾಡ ಪುರುಷ ಕಾರ್ಯಸ್ವಾಮಿ ಗದ್ದುಗೆಯಿದೆ. ಮತ್ತೊಬ್ಬ ಪವಾಡ ಪುರುಷ ಬಳ್ಳಾರಿ ಜಿಲ್ಲೆಯ ಅಲ್ಲೀಪುರದಿಂದ ಬಂದಿದ್ದ ಶ್ರೀ ಸದ್ಗುರು ಮಹದೇವ ತಾತನ ಐಕ್ಯ ಸ್ಥಳವನ್ನು ಕಾಣಬಹುದಾಗಿದ್ದು, ಅದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಅಲ್ಲಿ ನಿಸರ್ಗದ ಮಧ್ಯದಲ್ಲೊಂದು ಪ್ರಾರ್ಥನಾ ಮಂದಿರವೊಂದಿದ್ದು, ಸುತ್ತಲೂ ಹಸಿರು ರಾಶಿ. ನದಿಗಳಿಂದ ಗದ್ದುಗೆ ಕಂಗೊಳಿಸುತ್ತದೆ.
ಪ್ರತಿ ವರ್ಷ ಜನ ಮರಳೋ, ಜಾತ್ರೆ ಮರುಳೋ ಎಂಬಂತೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಇದೊಂದು ಧಾರ್ಮಿಕ ಕ್ಷೇತ್ರವಲ್ಲದೆ ನಾಡಿನ ಒಂದು ಪ್ರಮುಖ ಪ್ರವಾಸಿ ತಾಣವಾಗಿದ್ದು, ರಾಜ್ಯದ ಮೂಲೆ-ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರಿಗೆ ತಂಗಲು ಅತಿಥಿ ಗೃಹದ ವ್ಯವಸ್ಥೆ ಇದೆ. ಬೋಟಿಂಗ್ ವ್ಯವಸ್ಥೆಗೂ ಸಾಕಷ್ಟು ಅವಕಾಶವಿದ್ದು, ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಇತ್ತ ಕಡೆ ಗಮನಹರಿಸಿದರೆ ಇದೊಂದು ಉತ್ತಮ ಪ್ರೇಕ್ಷಣೀಯ ತಾಣವಾಗಬಲ್ಲದು.
"ನದಿಗಳ ಸಂಗಮದಲ್ಲಿ ಅನೇಕ ದೇವಸ್ಥಾನಗಳ ಅಮೃತ ಸಂಗಮ, ಜೀವನದಿಗಳ ಹರಿಯುವಿಕೆಯಲ್ಲಿ ಭಕ್ತಿಯ ಸೆಳೆತ - ನಮ್ಮನ್ನೂ ಆರಾಧನೆಯಲ್ಲಿ ಭಾಗವಹಿಸುವಂತೆ ಮಾಡುತ್ತದೆ. ಪ್ರಾಕೃತಿಕ ಮಡಿಲಲ್ಲಿ ದೇವಸ್ಥಾನಗಳ ಸ್ಥಾನದಲ್ಲಿ ಎಲ್ಲರನ್ನೂ ಸೆಳೆಯುವ ಈ ಸ್ಥಳಕ್ಕೆ ಒಮ್ಮೆ ಭೇಟಿ ಕೊಡೋಣ" ಬನ್ನಿ ಒಮ್ಮೆ ಮೈಸೂರು ಪ್ರವಾಸಕ್ಕೆ.....
[ಮುಂದುವರಿಯುವುದು.....]
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
******************************************