ಜಗಲಿ ಕಟ್ಟೆ : ಸಂಚಿಕೆ - 76
Sunday, October 26, 2025
Edit
ಜಗಲಿ ಕಟ್ಟೆ : ಸಂಚಿಕೆ - 76
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
ಮಕ್ಕಳ ಜಗಲಿ
www.makkalajagali.com
ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ
ಎಲ್ಲರಿಗೂ ನಮಸ್ಕಾರ... ನಾವು ಸುಮಾರು ಆರು ವಾರಗಳ ನಂತರ ಜಗಲಿಕಟ್ಟೆಯಲ್ಲಿ ಸೇರಿಕೊಳ್ಳುತ್ತಾ ಇದ್ದೇವೆ. ಮಕ್ಕಳಿಗೆಲ್ಲ ಮಧ್ಯಾವಧಿ ರಜೆಯ ನಂತರದ ಶಾಲೆಯ ಚಟುವಟಿಕೆಗಳು ಆರಂಭವಾಗಿದೆ. ಈ ನಡುವೆ ಶಿಕ್ಷಕರ ದಿನಾಚರಣೆ, ದಸರಾ ರಜೆ, ದೀಪಾವಳಿ ಸಂಭ್ರಮ ಎಲ್ಲವೂ ಸಡಗರದಿಂದಲೇ ಕಳೆದು ಹೋಯಿತು. ಇನ್ನಷ್ಟು ಹಲವಾರು ಚಟುವಟಿಕೆಗಳು ಶಾಲೆಗಳಲ್ಲಿ ನಡೆಯಲಿಕ್ಕಿದೆ. ಪ್ರತಿಭಾ ಕಾರಂಜಿ, ಕ್ರೀಡಾಕೂಟಗಳು, ಶಾಲಾ ಪ್ರವಾಸ, ವಾರ್ಷಿಕೋತ್ಸವ, ಹೀಗೆ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಸುಂದರ ಅವಕಾಶಗಳನ್ನು ಮಕ್ಕಳಾದ ತಾವೆಲ್ಲರೂ ಬಳಸಿಕೊಳ್ಳಬೇಕು.
ಈಗಾಗಲೇ ಮಕ್ಕಳ ಜಗಲಿಯಲ್ಲಿ ಹಿರಿಯ ಬರಹಗಾರರಾದ ದಿವಾಕರ ಶೆಟ್ಟಿ ಯವರ ಅಂಕಣ - 'ಮಕ್ಕಳಿಗಾಗಿ ವಿಜ್ಞಾನ' 100ನೇ ಸಂಚಿಕೆಯನ್ನು ಪೂರೈಸಿದೆ. ವಿಜ್ಞಾನದ ಬಗೆಗಿನ ವಿಚಾರಗಳನ್ನು ಅತ್ಯಂತ ಸರಳವಾಗಿ ತಿಳಿಸುವ ಮತ್ತು ಅಭಿರುಚಿಯನ್ನು ಇನ್ನಷ್ಟು ಹೆಚ್ಚಿಸುವ ಸಂಚಿಕೆ ಇದಾಗಿದ್ದು ಮಕ್ಕಳಿಗೆ, ಶಿಕ್ಷಕರಿಗೆ, ಪೋಷಕರಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ.
ಮಕ್ಕಳ ಜಗಲಿಯಲ್ಲಿ ಪ್ರಕಟವಾಗುವ ಪ್ರತಿಯೊಂದು ಸಂಚಿಕೆಗಳನ್ನು ವಿಮರ್ಶಿಸಿ ಪ್ರತಿಕ್ರಿಯೆ ನೀಡುವ ಹಿರಿಯ ವಿಜ್ಞಾನ ಶಿಕ್ಷಕರಾದ ಶ್ರೀರಾಮಮೂರ್ತಿಯವರ ಬರಹಗಳು ಪ್ರತಿ ಜಗಲಿಕಟ್ಟೆಯಲ್ಲಿ ಪಕ್ಷಿ ನೋಟವನ್ನು ಬೀರುತ್ತಿದೆ. ಪ್ರತಿಯೊಂದು ಸಂಚಿಕೆಗಳ ನೆನಪುಗಳನ್ನು ಮರುಕಳಿಸುವ ಬರಹವಾಗಿ ಮತ್ತು ಬರಹಗಾರರಿಗೆ ಸ್ಪೂರ್ತಿಯಾಗಿ ಇದು ಬೆಂಬಲವಾಗಿ ನಿಂತಿದೆ.
ಮಕ್ಕಳ ಜಗಲಿಯಲ್ಲಿ ಬರೆಯುವ ಮತ್ತು ಚಿತ್ರ ಮಾಡುವ ಮಕ್ಕಳ ಸಂಖ್ಯೆ ವಿಸ್ತಾರವಾಗುತ್ತಿರುವುದು ಅಭಿನಂದನೀಯ. ಇನ್ನು ಹೆಚ್ಚಿನ ಸಮಯಾವಕಾಶ ನೀಡಿ ಮಕ್ಕಳನ್ನು ಪ್ರೋತ್ಸಾಹಿಸುವ ಇಚ್ಛೆ ನಮ್ಮಲ್ಲಿದೆ. ನವೆಂಬರ್ -14 ಮಕ್ಕಳ ಜಗಲಿಯ 5ನೇ ವರ್ಷದ ಹುಟ್ಟುಹಬ್ಬ. ಈ ನಡುವೆ ಪ್ರಶಸ್ತಿ ವಿಜೇತರ ಬಹುಮಾನಗಳನ್ನು ಹಸ್ತಾಂತರಿಸುವ ಕರ್ತವ್ಯ ಕೂಡ ನಿರ್ವಹಿಸಬೇಕಾಗಿದೆ. ಎಲ್ಲವನ್ನು ಸರಿದೂಗಿಸಿ ಮುನ್ನಡೆಸುವ ಕಾಯಕದೊಳಗೆ ಜಗಲಿಯ ಹಿತೈಷಿಗಳಾದ ತಮ್ಮೆಲ್ಲರ ಸಹಕಾರ ಅತಿ ಮುಖ್ಯ.
ರಮೇಶ್ ಬಾಯಾರು ಅವರ ಒಂದು ಸಂಚಿಕೆಯಲ್ಲಿ ಶೂನ್ಯತೆ ಎನ್ನುವುದು ಪೂಜ್ಯನೀಯ ಎಂಬುದಾಗಿ ತಿಳಿಸಿದ್ದು ನೆನಪು. ನಿಷ್ಕಲ್ಮಶಭಾವದ ಪ್ರಸ್ತುತಿಯದು. ಅದು ಮಕ್ಕಳ ಮನಸ್ಸು. ಹಾಗಾಗಿ ಮಕ್ಕಳು ದೇವರಿಗೆ ಸಮಾನ. ಇದು ಅಕ್ಷರಶಃ ಸತ್ಯ. ಈ ಬಗ್ಗೆ ಒಂದು ಘಟನೆ ಹೇಳಲೇಬೇಕು. ಮಕ್ಕಳ ಅದೆಷ್ಟೋ ನಡವಳಿಕೆಗಳು ನಮಗೆ ಹೆಚ್ಚು ಸಂತಸ ಕೊಡುತ್ತದೆ ನಿಜ. ಆದರೆ ಮಕ್ಕಳು ಮಾಡುವ ಕೆಲವೊಂದು ಕೆಲಸಗಳು ಅವರ ಬಗ್ಗೆ ತುಂಬಾ ಅಭಿಮಾನವನ್ನೇ ಮೂಡಿಸುತ್ತದೆ. ಸಾಧಾರಣವಾಗಿ ಶಿಕ್ಷಕರ ದಿನಾಚರಣೆಗೆ ಮಕ್ಕಳು ಅಭಿನಂದಿಸುವುದು ವಿಶೇಷವೇನೂ ಅಲ್ಲ. ಆದರೆ ಇಲ್ಲಿ ಇಬ್ಬರು ಮಕ್ಕಳು ತನಗೆ ಕಲಿಸಿದ ಎಲ್ಲಾ ಶಿಕ್ಷಕರ ಮನೆಗೆ ತೆರಳಿ ಅಭಿನಂದಿಸಿರುವ ವಿಶೇಷ ಕಾರ್ಯ ಮಾತ್ರ ಗಮನಾರ್ಹ. ಆ ಮಕ್ಕಳೇನೂ ಐಶ್ವರ್ಯವಂತರಲ್ಲ. ನೆಸ್ಲಿನ್ ಮತ್ತು ನೆಶ್ವಿತಾ ಸುಂದರ ಭಾವನೆ- ಮನಸ್ಸು ಹೊಂದಿರುವ ಶ್ರೀಮಂತರು. ತನಗೆ ಕಲಿಸಿದ ಗುರುಗಳನ್ನು ಫೋನು ಮೂಲಕ ಸಂಪರ್ಕಿಸಿ ಮಾತನಾಡುವ ಬದಲಾಗಿ ಎಷ್ಟೇ ದೂರದಲ್ಲಿದ್ದರೂ ಅವರ ಮನೆಗೆ ತೆರಳಿ ತನ್ನ ಕೈಲಾದ ಪ್ರೀತಿಯ ಉಡುಗೊರೆ ನೀಡಿ ಒಂದಷ್ಟು ತಾಸು ಅವರ ಜೊತೆ ಮಾತನಾಡಿ ಉಂಟುಮಾಡುವ ಬಾಂಧವ್ಯ ಅದು ಪದಗಳಿಗೆ ನಿಲುಕದ್ದು. ಇದಕ್ಕೆ ಯಾವ ಪ್ರಶಸ್ತಿ ನೀಡಿದರು ಕಡಿಮೆಯೇ... ಹಿರಿಯರನ್ನು ಸೇರಿಸಿ ಎಲ್ಲರಿಗೂ ಇದೊಂದು ಮಾದರಿ ನಡೆ. ಬಡವರ್ಗದ ಇಬ್ಬರು ಮಕ್ಕಳು ತನಗೆ ಕಲಿಸಿದ ಗುರುಗಳನ್ನು ಮರೆಯದೆ ಇರುವ ಸಂಸ್ಕಾರವನ್ನು ಬೆಳೆಸಿದ ತಂದೆ ತಾಯಿ ಮಾತ್ರ ಶ್ರೇಷ್ಠರು.
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************
ಕಳೆದ ಸಂಚಿಕೆಯ ಜಗಲಿಕಟ್ಟೆ - 75 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ಕೆಲವು ವಾರಗಳಿಂದ ಪ್ರಕಟವಾದ ಜಗಲಿಯ ಬರಹಗಳ ಕುರಿತಾದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....
ನಮಸ್ತೇ ,
ಸುಖ ಬೇಕು. ಆದರೆ ಅದಕ್ಕಿಂತ ಹೆಚ್ಚಾಗಿ ಶಾಂತಿ ಬೇಕು. ಮನಸ್ಸು ಶಾಂತಿ ಪಡೆಯುವ ಬಗೆ ಹೇಗೆ? ಸುಂದರ ಲೇಖನ ಶಿಕ್ಷಣಾಧಿಕಾರಿ ಜ್ಞಾನೇಶ್ ರವರಿಂದ.
ಪ್ರತಿಯೊಬ್ಬರಲ್ಲೂ ಉಪಕಾರ ಸ್ಮರಣೆ ಇರಬೇಕು. ಉಪಕಾರ ಮಾಡಿದವರಿಗೆ ಧನ್ಯವಾದ ಸಲ್ಲಿಸುವುದರ ಮೂಲಕ ಅವರನ್ನು ನೆನಪಿಸುವುದು ಒಳಿತಲ್ಲವೆ? ಧನ್ಯವಾದ ಅರ್ಪಿಸುವ ಹವ್ಯಾಸ ನಮ್ಮಲ್ಲಿ ಬೆಳೆಯಬೇಕೆನ್ನುವ ಕಳಕಳಿಯ ಉತ್ತಮ ಲೇಖನ ರಮೇಶ್ ಬಾಯಾರ್ ಸರ್ ರವರಿಂದ.
ಜೀವಿಗಳ ದೇಹದಲ್ಲಿ ಪರಕೀಯ ವಸ್ತುಗಳು ಸೇರಿಕೊಂಡಾಗ ಏನಾಗುತ್ತದೆ ಹಾಗೆಯೇ ಪರಕೀಯ ವಸ್ತುಗಳು ದೇಹದ ಭಾಗವಾಗಿ ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ದಿವಾಕರ ಸರ್ ರವರು ವಿವರವಾಗಿ ತಮ್ಮ ಮಕ್ಕಳಿಗಾಗಿ ವಿಜ್ಞಾನ ಸಂಚಿಕೆಯಲ್ಲಿ ತಿಳಿಸಿದ್ದಾರೆ.
ಸಂಭಾಷಣೆ ಶೈಲಿಯಲ್ಲಿ ಮೂಡಿ ಬಂದ ಹಾಗಲ ಕಾಯಿಯ ಪರಿಚಯ ತುಂಬಾ ಸೊಗಸಾಗಿತ್ತು ವಿಜಯಾ ಮೇಡಂ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಜೈನರ ಕ್ಷೇತ್ರ ಕಂಬದಹಳ್ಳಿಯ ಪ್ರಮುಖ ಪ್ರವಾಸಿ ಕ್ಷೇತ್ರದ ಕುರಿತಾದ ಪರಿಚಯ ರಮೇಶ್ ಸರ್ ರವರ ಪಯಣ ಸಂಚಿಕೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ.
ಮುಂಡಪ್ಪ ಎನ್ನುವ ಸಿಹಿ ಮಾವಿನ ಕುರಿತಾದ ಪುಸ್ತಕದ ಪರಿಚಯ ಚೆನ್ನಾಗಿತ್ತು ವಾಣಿಯಕ್ಕ.
ಓದುವ ಹವ್ಯಾಸ ಬೆಳೆಸುವ ಅಶ್ವಿನ್ ಸರ್ ರವರ ರಜೆಯ ಓದು ಸಂಚಿಕೆಯಲ್ಲಿ The Little blue truck makes a friend ಎನ್ನುವ ಪುಸ್ತಕದ ವಿಶ್ಲೇಷಣೆ ಜೊತೆಗೆ ಮತ್ತೆರಡು ಆಂಗ್ಲ ಪುಸ್ತಕಗಳನ್ನು ಸೊಗಸಾಗಿ ಪರಿಚಯಿಸಿದ್ದಾರೆ.
ಪದದಂಗಳ ಸಂಚಿಕೆಗಾಗಿ ರಮೇಶ್ ಸರ್ ರವರಿಗೆ ಧನ್ಯವಾದಗಳು.
ಜಗಲಿಯ ಎಲ್ಲರಿಗೂ ಪ್ರೀತಿಯ ವಂದನೆಗಳು.
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ನಮಸ್ತೇ,
ಗೌರಿ ಹಬ್ಬವನ್ನು ಆಚರಿಸುವ ಹಲವು ಬಗೆಗಳನ್ನು ಸುಂದರವಾಗಿ ಹಾಗೂ ವಿಸ್ತಾರವಾಗಿ ಹೇಮಾ ಮೇಡಂರವರು ತಿಳಿಸಿದ್ದಾರೆ.
ಸುಂದರವಾದ ಕಥೆಯ ಮೂಲಕ ನಾವು ಸಂತೋಷ ಪಡಲು ಏನು ಮಾಡಬೇಕು ಎನ್ನುವುದನ್ನು ವಿವರವಾಗಿ ಸುಂದರವಾಗಿ ನಿರೂಪಿಸಿದ್ದಾರೆ. ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ರವರು.
ದೇಹಕ್ಕಾದ ನೋವು ಶಮನ ಗೊಳಿಸುವಂತದ್ದಾದ ಕಾರಣ ತಾತ್ಕಾಲಿಕ. ಆದರೆ ಮನಸ್ಸಿಗಾದ ನೋವು ಸುಲಭವಾಗಿ ಮರೆಯಾಗದು. 'ನೋವು' ರಮೇಶ್ ಬಾಯಾರ್ ಸರ್ ರವರಿಂದ ಉತ್ತಮ ಲೇಖನ.
ಕೋಶ ಪೊರೆ ಹಾಗೂ ಸಸ್ಯಗಳಲ್ಲಿರುವ ಕೋಶಭಿತ್ತಿಯ ರಚನೆಯ ಕುರಿತಾಗಿ
ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದಾರೆ ದಿವಾಕರ ಸರ್ ರವರು ಈ ವಾರದ ವೈಜ್ಞಾನಿಕ ಸಂಚಿಕೆಯಲ್ಲಿ.
ಈ ಗಿಡವನ್ನು ನೋಡಿದ್ದರೂ ಪರಿಚಯವಾದದ್ದು ತಮ್ಮ ಸಂಚಿಕೆಯಿಂದ ಮೇಡಂ. ಹಲವಾರು ಪ್ರಯೋಜನವಿರುವ ಈ ಗಿಡದ ಜೊತೆಗೆ ನೋಡಿದರೂ ಪರಿಚಯವಿರದ ಹಲವು ಗಿಡಗಳನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು ಮೇಡಂ.
ಚಿಕ್ಕಮಗಳೂರಿನ ಕಲ್ಲತ್ತಗಿರಿ ಫಾಲ್ಸ್ ನ ವಿವರವಾದ ಮಾಹಿತಿ ಈ ವಾರದ ಪಯಣ ಸಂಚಿಕೆಯಲ್ಲಿ ಸೊಗಸಾಗಿ ಮೂಡಿಬಂದಿದೆ.
ದಿಟ್ಟ ಮಹಿಳೆ ನಂದಿನಿಯ ಕುರಿತಾದ ನಂದಿನಿ ಎಂಬ ಜಾಣೆ ಎಂಬ ಪುಸ್ತಕದ ಪರಿಚಯ ಚೆನ್ನಾಗಿತ್ತು ವಾಣಿಯಕ್ಕ.
ತನ್ವಿಕ್ ಹಾಗೂ ಇಂಪನರವರ ಚಿತ್ರಗಳು ಸೊಗಸಾಗಿವೆ. ಅಭಿನಂದನೆಗಳು ತನ್ವಿಕ್ ಹಾಗೂ ಇಂಪನಾರಿಗೆ.
ರಜೆಯ ಓದು ಸಂಚಿಕೆಯಲ್ಲಿ ಪಿನಾಕಿಯೋರವರ ಸಾಹಸಗಳು ಎನ್ನುವ ಆಂಗ್ಲ ಪುಸ್ತಕದ ವಿಶ್ಲೆಷಣೆಯೊಂದಿಗೆ Run away Banny, Little owls night ಮತ್ತು The invisible boy ಎಂಬ ಇತರ ಪುಸ್ತಕಗಳನ್ನು ಪರಿಚಯಿಸುವುದರ ಜೊತೆಗೆ ಮಕ್ಕಳು ಪುಸ್ತಕ ಓದಿಕೊಳ್ಳುವ ಹವ್ಯಾಸ ಬೆಳೆಸಬೇಕೆನ್ನುವ ಕಿವಿಮಾತನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು ಅಶ್ವಿನ್ ಸರ್.
ಈ ವಾರದ ಪದದಂಗಳ ತುಸು ಸುಲಭವಾಗಿ ಕಂಡಿತು. ಪದ ಜೋಡಿಸುವ ಆಟ ಹೀಗೆ ಮುಂದುವರಿಯಲಿ.
ಜಗಲಿಯ ಎಲ್ಲರಿಗೂ ಮನದಾಳದ ವಂದನೆಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ನಮಸ್ತೆ,
ನಾವು ಬಂಧನದಿಂದ ಮುಕ್ತವಾಗುವುದೇ ಮುಮುಕ್ಷು. ನಾರದನ ಭಕ್ತಿ ಸೂತ್ರ ಮುಮುಕ್ಷುವಿನ ಕುರಿತಾದ ಸುಂದರ ಲೇಖನ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಸರ್ ರವರಿಂದ.
ಮಕ್ಕಳನ್ನು ಹೇಗೆ ಬೆಳಸಿದಾಗ ಅವರು ಪಾಲಕರ ಮಾತನ್ನು ಕೇಳುತ್ತಾರೆ ಎನ್ನುವ ವಿಚಾರದ ಕುರಿತು ಬಹಳ ಸುಂದರವಾಗಿ ತಮ್ಮ ಲೇಖನದಲ್ಲಿ ತಿಳಿಸಿದ್ದೀರಿ. ಸಕಾಲಿಕ ಲೇಖನ. ಧನ್ಯವಾದಳು ರಮೇಶ್ ಸರ್...
ಕೋಶ ಪೊರೆಯ ಒಳಗೆ ಹಾಗೂ ಹೊರಗೆ ವಸ್ತುಗಳ ಅಣುಗಳ ಚಲನೆ ಮತ್ತು ನೀರಿನ ಚಲನೆ - ವಿಸರಣೆ ಹಾಗೂ ಅಭಿಸರಣೆಯ ಮೂಲಕ ಹೇಗೆ ನಡೆಯುತ್ತದೆ ಎನ್ನುವುದನ್ನು ಸರಳ ಉದಾಹರಣೆಯ ಮೂಲಕ ಚೆನ್ನಾಗಿ ವಿವರಿಸಿದ್ದಾರೆ ದಿವಾಕರ ಸರ್ ರವರು...
ಎಲ್ಲರಿಗೂ ಪರಿಚಿತವಾದ ಅದ್ಭುತ ಹಾಗೂ ಸುಂದರ ಸಸ್ಯ ದಾಸವಾಳದ ಕುರಿತಾದ ಸಮಗ್ರ ಮಾಹಿತಿ ತುಂಬಾ ಇಷ್ಟವಾಯಿತು ಮೇಡಂ. ಧನ್ಯವಾದಗಳು.
ದಸರಾ ಸಂಭ್ರಮದಲ್ಲಿರುವಾಗಲೇ ಮೈಸೂರಿನ ಕುರಿತಾದ ವಿಸ್ತಾರವಾದ ಮಾಹಿತಿ ರಮೇಶ್ ರವರ ಪಯಣ ಸಂಚಿಕೆಯಲ್ಲಿ .
ವಾಣಿಯಕ್ಕನವರ ಪುಸ್ತಕ ಪರಿಚಯದಲ್ಲಿ ಕುವೆಂಪುರವರ ಸುಂದರ ನಾಟಕ ನನ್ನ ಗೋಪಾಲ ಪುಸ್ತಕದ ಪರಿಚಯ ಸೋಗಸಾಗಿ ಮೂಡಿ ಬಂದಿದೆ.
ಶಿಕ್ಷಕಿಯ ಹುಟ್ಟುಹಬ್ಬದ ಪ್ರಯುಕ್ತ ಮಕ್ಕಳ ಉಡುಗೊರೆ ಕುರಿತಾದ ಮನ ತಟ್ಟುವ ಲೇಖನ ಸುಪ್ರಿಯಾ ಮೇಡಂ ರವರಿಂದ.
ಪ್ರಾಮುಖ್ಯ ಪಿ ರೈಯವರ ಚಿತ್ರಗಳು ಹಾಗೂ ಯಶಶ್ವಿನಿಯವರ ಕವನಗಳು ಸೊಗಸಾಗಿ ಮೂಡಿಬಂದಿವೆ. ಅಭಿನಂದನೆಗಳು ಪ್ರಾಮುಖ್ಯ ಹಾಗೂ ಯಶಶ್ವಿನಿಯವರಿಗೆ.
ರಮೇಶ್ ರವರ ಪದಗಳ ಜೋಡಿಸುವ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬಂದಿದೆ.
ಜಗಲಿಯ ಎಲ್ಲರಿಗೂ ಮನದಾಳದ ಕೃತಜ್ಞತೆಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ಎಲ್ಲರಿಗೂ ನಮಸ್ಕಾರಗಳು,
ಆಚಾರ್ಯರೆಂದರೆ ಯಾರು? ಅವರ ಗುಣಗಳೇನು ಎನ್ನುವುದರ ಕುರಿತಾಗಿ ವಿವರವಾದ ಮಾಹಿತಿಯನ್ನು ಒಳಗೊಂಡ ಉತ್ತಮ ಲೇಖನ ಶಿಕ್ಷಣಧಿಕಾರಿಯವರಾದ ಶ್ರೀ ಜ್ಞಾನೇಶ ಸರ್ ರವರಿಂದ.
ಅಂತರಂಗದ ಅಗ್ನಿ ಕುಂಡದ ಜ್ವಾಲೆ ಹರಡದಿರಲಿ ಎನ್ನುವ ಸುಂದರ ಆಶಯದ ಲೇಖನಕ್ಕಾಗಿ ಧನ್ಯವಾದಗಳು ಸರ್.
ನಮಗೆಲ್ಲರಿಗೂ ಚಿರಪರಿಚಿತವಾಗಿರುವ ಸುಂದರವಾದ ಸಸ್ಯ ಬಸಳೆ ಗಿಡದ ಕುರಿತಾದ ಸವಿಸ್ತಾರವಾದ ಮಾಹಿತಿಯನ್ನು ಒಳಗೊಂಡ ಸೊಗಸಾದ ಲೇಖನಕ್ಕಾಗಿ ವಂದನೆಗಳು ಮೇಡಂ.
ಪಯಣ ಸಂಚಿಕೆಯಲ್ಲಿ ರಮೇಶ್ ಸರ್ ರವರು ಮೈಸೂರಿನ ಇನ್ನೊಂದು ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ರಾಮಕೃಷ್ಣ ಮಿಶನ್ ರವರ ಆಧ್ಯಾತ್ಮಿಕ ಮ್ಯೂಸಿಯಂ ಕುರಿತಾದ ಮಾಹಿತಿಯನ್ನು ನೀಡಿದ್ದಾರೆ. ಧನ್ಯವಾದಗಳು ಸರ್.
ಸಾಣೆ ಹಿಡಿಯುವ ಸಲೀಮ ಪುಸ್ತಕದ ಪರಿಚಯ ಚೆನ್ನಾಗಿ ಮೂಡಿ ಬಂದಿದೆ ವಾಣಿಯಕ್ಕ.
ಅಶ್ವಿನ್ ರಾವ್ ರವರು ತಮ್ಮ ಸಂಚಿಕೆಯಲ್ಲಿ ಫಿಲಿಪ್ ಪುಲ್ಮನ್ ಬರೆದಿರುವ ನಾರ್ತನ್ ಲೈಟ್ ಪುಸ್ತಕದ ಪರಿಚಯ ಪುಸ್ತಕವನ್ನು ಓದುವಂತೆ ಪ್ರೇರೇಪಿಸುತ್ತದೆ. ಧನ್ಯವಾದಗಳು ಸರ್.
ಜಗಲಿಯ ಎಲ್ಲರಿಗೂ ವಂದನೆಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ಎಲ್ಲರಿಗೂ ನಮಸ್ಕಾರಗಳು,
ಒಳ್ಳೆಯ ವಿಚಾರಗಳನ್ನು ಮಾತ್ರ ಸ್ವೀಕರಿಸಿ ಕೆಟ್ಟದ್ದನ್ನು ಹತ್ತಿರ ಸರಿಸದೆ ಇರಬೇಕೆನ್ನುವುದನ್ನು ಸುಂದರ ಕಥೆಯ ಮೂಲಕ ಸೊಗಸಾಗಿ ವಿವರವಾಗಿ ನಿರೂಪಿಸಿದ್ದಾರೆ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಸರ್ ರವರು. ಧನ್ಯವಾದಗಳು ಸರ್.
ಕರ್ಮಗಳನ್ನು ಹೃದಯ ವೈಶಾಲ್ಯತೆಯಿಂದ ತ್ರಿಕರಣಪೂರ್ವಕವಾಗಿ ಮಾಡಿದಾಗ ಅದು ಶ್ರೇಷ್ಟವೆನಿಸುತ್ತದೆ. 'ಕರ್ಮ ವೈಖರಿ' ರಮೇಶ್ ಬಾಯಾರ್ ರವರಿಂದ ಅರ್ಥಪೂರ್ಣ ಲೇಖನ.
ಕೋಶಪೊರೆ ಕೋಶದ ಒಳಗೆ ಮತ್ತು ಹೊರಗೆ ಸಾಗಿಸಲು ಕಾರಣವಾದ ಅಂಶಗಳ ಕುರಿತಾಗಿ ವಿವರವಾದ ಮಾಹಿತಿ ಈ ವಾರದ ವೈಜ್ಞಾನಿಕ ಸಂಚಿಕೆಯಲ್ಲಿ ದಿವಾಕರ ಸರ್ ರವರಿಂದ.
ಅಬ್ಬಾ ! ಎಷ್ಟೊಂದು ಮಾಹಿತಿ ಅಲಸಂಡೆ ಗಿಡದ ಕುರಿತು. ನಿಜವಾಗ್ಲೂ ಅಲಸಂಡೆ ಪಲ್ಯ ನನಗೆ ತುಂಬಾ ಇಷ್ಟ ಅದರಂತೆಯೇ ಈ ಸಂಚಿಕೆ ಕೂಡಾ ತುಂಬಾ ಇಷ್ಟವಾಯಿತು ಮೇಡಂ.
ಮೂರು ನದಿಗಳ ಪಕ್ಕ ಮೂರು ದೇವಾಲಯಗಳ ಜೊತೆಗೆ ಕೂಡಲಸಂಗಮದಂತಿರುವ ಅಮೃತವಾಹಿನಿ ಸಂಗಮದ ವಿಹಂಗಮ ನೋಟದ ಜೊತೆಗೆ ಈ ಪ್ರದೇಶವ ಮಾಹಿತಿಗಾಗಿ ಧನ್ಯವಾದಳು ರಮೇಶ್ ಸರ್.
ತಂದೆ ಇದ್ದರೂ ತಂದೆಯ ಪ್ರೀತಿ ಸಿಗದೆ ಕೊರಗುವ ಮಗುವಿನ ಕುರಿತಾದ ಅನುಭವದ ಬುತ್ತಿ ತುಂಬಾ ಸೊಗಸಾಗಿತ್ತು ಸುರೇಖಾ ಮೇಡಂ.
ಮಂಗಣ್ಣನ ಟೋಪಿಯ ಕುರಿತಾದ ಟೋಪಿ ತೆಗೊಳ್ಳಿ ಟೋಪಿ ಪುಸ್ತಕದ ಪರಿಚಯ ಚೆನ್ನಾಗಿತ್ತು. ಧನ್ಯನಾದಗಳು ವಾಣಿಯಕ್ಕ.
ಪದದಂಗಳ ಸಂಚಿಕೆ ಸೊಗಸಾಗಿ ಮುಂದುವರಿಯುತ್ತಿದೆ.
ಕೊನೆಯದಾಗಿ ಜಗಲಿಯ ಎಲ್ಲರಿಗೂ ಮನದಾಳದ ನಮನಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ನಮಸ್ತೇ,
ಈ ವಾರದ ಮೊದಲ ಸಂಚಿಕೆ ಅಶ್ವಿನ್ ರಾವ್ ರವರ ರಜೆಯ ಓದುವಿನಲ್ಲಿ ಎರಡು ಆಂಗ್ಲ ಪುಸ್ತಕಗಳಾದ ಗ್ರೀನ್ ಎಗ್ಸ್ ಎಂಡ್ ಹ್ಯಾಮ್ ಮತ್ತು ದಿ ಪ್ಯಾಂಟಮ್ ಟೋಲ್ಸ್ ಎನ್ನುವ ಎರಡು ಪುಸ್ತಕಗಳ ಪರಿಚಯ ಸೊಗಸಾಗಿತ್ತು.
ಮನಸ್ಸಿನ ಭಾವನೆಗಳಿಂದ ಜೀವನವನ್ನು ಹೇಗೆ ಸುಂದರಗೊಳಿಸಬಹುದು ಎನ್ನುವುದನ್ನು ಸುಂದರವಾಗಿ ವಿಶ್ಲೇಷಿಸಿದ್ದಾರೆ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ರವರು. ಧನ್ಯವಾದಗಳು ಸರ್.
ಸರಕಾರಗಳು ಗಣತಿ, ಮತದಾನ ಮುಂತಾದ ಅನ್ಯ ಕೆಲಸಗಳಿಗೆ ಶಿಕ್ಷಕರನ್ನು ಬಳಸುವುದು ಹೆಚ್ಚು. ಗಣತಿ ವಿಚಾರದಲ್ಲಿ ಆದ ಅನುಭವಗಳನ್ನು ರಮೇಶ್ ಬಾಯಾರ್ ಸರ್ ರವರು ಬಹಳ ಸೊಗಸಾಗಿ ಹಂಚಿಕೊಂಡಿದ್ದಾರೆ.
ದಿವಾಕರ ಸರ್ ರವರ ವೈಜ್ಞಾನಿಕ ಸಂಚಿಕೆಗೆ ನೂರರ ಸಂಭ್ರಮ. ಪ್ರತಿ ಸಂಚಿಕೆಯಲ್ಲೂ ವೈಶಿಷ್ಟ್ಯಪೂರ್ಣವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ವಿಜ್ಞಾನವನ್ನು ಮುನ್ನಡೆಸಿದ ರೀತಿ ಸ್ವತಃ ವಿಜ್ಞಾನ ಶಿಕ್ಷಕನಾಗಿದ್ದ ನನಗೆ ಸ್ಪೂರ್ತಿ ತುಂಬಿದೆ. ಕನ್ನಡದ ಪ್ರಸಿದ್ಧ ಗಾದೆಯೊಂದಿಗೆ ಸಾಬೂನು ಸ್ವಚ್ಚಗೊಳಿಸುವ ಪ್ರಕ್ರಿಯೆಯನ್ನು ಜೋಡಿಸಿ ಸರಳವಾಗಿ ವಿವರಿಸಿದ ರೀತಿಯ ನಿಮ್ಮ ನೂರನೇ ಸಂಚಿಕೆ ಮತ್ತಷ್ಟು ಇಷ್ಟವಾಗಲು ಕಾರಣವಾಯಿತು. ಇದೇ ರೀತಿಯಲ್ಲಿ ಸಂಚಿಕೆ ಮುಂದುವರಿದು ಜಗಲಿಯ ಮಕ್ಕಳ ಜೊತೆಗೆ ಎಲ್ಲರಿಗೂ ವಿಜ್ಞಾನದ ಅರಿವು ತಮ್ಮ ಸಂಚಿಕೆಗಳ ಮೂಲಕ ಲಭಿಸಲಿ ಎಂಬ ಸದಾಶಯವನ್ನು ಹೊಂದುತ್ತಾ ಅಭಿನಂದನೆಗಳೊಂದಿಗೆ ನಮನಗಳು ಸರ್ ತಮಗೆ.
ವಿಜಯ ಮೇಡಂ ರವರ ನಿಪ್ಪಾಪಿ ಸಸ್ಯಗಳು ಸಂಚಿಕೆಯಲ್ಲಿ ಅತ್ಯುಪಯುಕ್ತ ಔಷಧೀಯ ಗಿಡ ಅಲೋವೆರಾದ ಪರಿಚಯ ಸೊಗಸಾಗಿ ಮೂಡಿ ಬಂದಿದೆ.
ಮೈಸೂರಿನ ಪ್ರಸಿದ್ಧ ಯಾತ್ರಾಸ್ಥಳ ಮೈಸೂರು ಮೃಗಾಲಯದ ಕುರಿತಾಗಿ ವಿವರವಾದ ಮಾಹಿತಿ ರಮೇಶ್ ರವರಿಂದ ಪಯಣ ಸಂಚಿಕೆಯಲ್ಲಿ.
ಪ್ರಸ್ತುತ ವರ್ಷದ ಕಲಾನಿಧಿ ಪ್ರಶಸ್ತಿ ಪಡೆದ ವೆಂಕಿ ಫಲಿಮಾರು, ವಿಕೆ ವಿಟ್ಲ ರಾಜೇಶ್ವರಿ ಅವರ ಕುರಿತಾದ ಬರಹದ ಜೊತೆಗೆ ಅವರ ಆರ್ಟ್ ಗ್ಯಾಲರಿಯ ಪರಿಚಯ ಸೊಗಸಾಗಿತ್ತು ಸರ್.
ಮೆನ್ಸ್ ಸ್ಟ್ರುಪೀಡಿಯಾ ಕಾಮಿಕ್ - ಹೆಣ್ಣು ಮಕ್ಕಳ ಆರೋಗ್ಯದ ಕುರಿತಾದ ಪುಸ್ತಕದ ಪರಿಚಯ ಚೆನ್ನಾಗಿತ್ತು ವಾಣಿಯಕ್ಕ.
ಪದಗಳ ಹುಡುಕಾಟದೊಂದಿಗೆ ಹೊಸಪದಗಳ ಜೋಡಣೆಯ ಜಾಣ್ಮೆಗೆ ಕಾರಣವಾದ ಪದದಂಗಳ ಸಂಚಿಕೆಗೆ ಧನ್ಯವಾದಗಳು ರಮೇಶ್ ಸರ್.
ಕೊನೆಯದಾಗಿ ಎಲ್ಲರಿಗೂ ಮನದಾಳದ ವಂದನೆಗಳು.
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.. ಇವರಿಗೆ ಧನ್ಯವಾದಗಳು.
ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
*****************************************