-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 82

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 82

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 82
ಲೇಖಕರು : ರಮ್ಯಾ ಆರ್ ಭಟ್
ಸಹ ಶಿಕ್ಷಕಿ. 
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ

ಮಕ್ಕಳ ಜಗಲಿಯ ಪ್ರೀತಿಯ ಓದುಗರಿಗೆಲ್ಲ ನನ್ನ ನಮಸ್ಕಾರಗಳು. ಶಾಲೆ ಶುರುವಾಗಿ ಇನ್ನು ನಮ್ಮ ತಯಾರಿಗಳ ಸಂಭ್ರಮದಲ್ಲೇ ಆಗಲೇ ಅರ್ಧ ವರ್ಷ ಮುಗಿದೇ ಹೋಯಿತು.. ದಸರಾ ಸಂಭ್ರಮ, ರಜೆಯ ಮಜಾ ಎಲ್ಲವೂ ಕಳೆಯಿತು. ಇನ್ನು ಮುಂದಿನ ಅರ್ಧ ವರ್ಷದ ತಯಾರಿಗಳೊಂದಿಗೆ ನಮ್ಮ ಪಯಣ ಶುರು...      

ದಸರಾ ರಜೆಗೂ ಮುನ್ನ ನಮಗೆ ಉಡುಪಿಯಲ್ಲಿ ಒಂದು ಕಾರ್ಯಾಗಾರಕ್ಕೆ ಕಳುಹಿಸಲಾಗಿತ್ತು (ECCE) ಬಗ್ಗೆ. ಅಂದಿನ ಆ ಕಾರ್ಯಗಾರವು ನಮಗೆ ತುಂಬಾ ಪ್ರಯೋಜನಕಾರಿ ಹಾಗು ಪ್ರಭಾವಶಾಲಿಯದಾಗಿತ್ತು. ನುರಿತ ಶಿಕ್ಷಕರಿಂದ ಅನೇಕ ಅವಧಿಗಳನ್ನು ನಡೆಸಿ ಅನೇಕ ವಿಚಾರಗಳನ್ನು ಕಲಿಯಲು ನಮಗೆ ಅನುವು ಮಾಡಿಕೊಟ್ಟದ್ದು ತುಂಬಾ ಸಂತೋಷದ ವಿಚಾರ. ನಂತರ ಮಾರನೇ ದಿನ ಬಂದಾಗ ಮಕ್ಕಳೆಲ್ಲ ಕೇಳಲು ಶುರು ಮಾಡಿದರು.. "ಮಾತಾಜಿ ನೀವು ನೆನ್ನೆ ಏಕೆ ಶಾಲೆಗೆ ಬರಲಿಲ್ಲ? ಎಲ್ಲಿ ಹೋಗಿದ್ದಿರಿ? ನಿಮಗೆ ಹುಷಾರಿಲ್ವಾ?" ಹೀಗೆ 100 ಪ್ರಶ್ನೆಗಳ ರಾಶಿಯೊಂದಿಗೆ ಮುತ್ತಿಗೆ ಹಾಕಿದರು ಮಕ್ಕಳು. ಎಲ್ಲರಿಗೂ ಉತ್ತರಿಸುತ್ತ ಒಳಗೊಳಗೇ ಸಂಭ್ರಮಿಸುತ್ತಿದ್ದೆ "ಮಕ್ಕಳು ನನ್ನನ್ನು ಎಷ್ಟು ನೆನಪಿಸಿಕೊತಾರಲ್ಲ" ಅಂತ.. ಮತ್ತೆ ಕೇಳಿದೆ "ನಾನು ನೆನ್ನೆ ಬಾರದ ಕಾರಣ ನಿಮಗೆಲ್ಲ ಬೇಜಾರಾಯಿತೇ ಮಕ್ಕಳೇ?" ಎಂದು ಆಗ "ಹೌದು ಮಾತಾಜಿ ನೆನ್ನೆ ನಿಮ್ಮನ್ನ ತುಂಬಾ ಮಿಸ್ ಮಾಡ್ಕೊಂಡ್ವಿ" ಎಂದು ಒಮ್ಮೆಲೇ ಮಕ್ಕಳ ಕೂಗಾಟ ಕಂಡು ಒಳಗೊಳಗೇ ಹಿಗ್ಗಿದೆ..!!

ಆದರೆ ಅಲ್ಲೇ ಒಂದು ಮೂಲೆಯಲ್ಲಿ ಕದ್ದು ಕದ್ದು ನನ್ನನ್ನು ನೋಡುತ್ತಾ, ಏನೋ ಮಾತನಾಡಿಕೊಂಡು, ಕೊಂಕಿನ ನಗೆಯನ್ನು ಬೀರುತ್ತಾ ಒಂದು ಗುಂಪು ನನ್ನನ್ನು ಅಣಕಿಸುತ್ತಿದ್ದಂತೆ ಭಾಸವಾಯಿತು... ವಿಚಾರ ಏನು ತಿಳಿಯದೆ ಒಮ್ಮೆ ಸುಮ್ಮನಾಗಿ ಮತ್ತೆ ಆ ವಿಚಾರವನ್ನು ತಿಳಿಯಲು ಒಂದು ತಂತ್ರ ಮಾಡಿದೆ. "ಮಕ್ಕಳೇ... ನಾನು ಈಗ ನಿಮಗೊಂದು ಪ್ರಶ್ನೆ ಕೇಳುತ್ತೇನೆ, ನೀವೆಲ್ಲ ಸತ್ಯವನ್ನೇ ಹೇಳಬೇಕು, ಸುಳ್ಳು ಹೇಳುವಂತಿಲ್ಲ, ನಾನು ಯಾರಿಗೂ ಬೈಯುವುದಿಲ್ಲ, ಎಲ್ಲರೂ ನಿಜವನ್ನೇ ಹೇಳಬೇಕೆಂದು" ಹೇಳಿದಾಗ ಮಕ್ಕಳೆಲ್ಲ "ಸರಿ ಮಾತಾಜಿ ಏನು ನಿಮ್ಮ ಪ್ರಶ್ನೆ ಕೇಳಿ" ಎಂದರು. ನಾನು ಕೇಳಿದೆ "ನಾನು ಶಾಲೆಗೆ ಬಾರದೆ ಇದ್ದರೆ ಯಾರಿಗೆಲ್ಲ ಬೇಜಾರು ಆಗ್ತದೆ ಅವರೆಲ್ಲ ಕೈ ಮೇಲೆ ಮಾಡಿ ನೋಡೋಣ" ಎಂದೆ... ನನ್ನ ನಿರೀಕ್ಷೆ ಎಲ್ಲರ ಕೈ ಮೇಲಿರುತ್ತದೆ ಎಂದು... ಹಾಗೆ ಎಲ್ಲರೂ ಕೈ ಎತ್ತಿದರು... ಆದರೆ ನನ್ನ ನಿರೀಕ್ಷೆಯಲ್ಲಿ ನಾನು ಮೋಸ ಹೋಗಿದ್ದೆ, ಕಾರಣ 4 ಮಕ್ಕಳು ಕೈ ಎತ್ತದೆ ಸುಮ್ಮನೆ ಕುಳಿತ್ತಿದ್ದರು. 

ಬಹುಷಃ ಅವರಿಗೆ ನನ್ನ ಪ್ರಶ್ನೆ ಅರ್ಥವಾಗಿಲ್ಲದೆ ಇರಬಹುದೇನೋ ಎಂದು ಮತ್ತೆ ಕೇಳಿದಾಗಲೂ ಅವರ ವರ್ತನೆ ಹಾಗೆ ಇತ್ತು.. ನನ್ನ ಕುತೂಹಲ ಹೆಚ್ಚಿತು... ನಂತರ ನಾನು ಹೇಳಿದೆ, "ಸರಿ ತುಂಬಾ ಥ್ಯಾಂಕ್ಸ್ ಮಕ್ಕಳೇ ನನ್ನನ್ನು ಎಷ್ಟು ಮಿಸ್ ಮಾಡ್ಕೋತೀರಾ ನನ್ನನ್ನ" ಎಂದು ಮತ್ತೆ ಸರಿ ಮಕ್ಕಳೇ ಈಗ ನಾನು ಶಾಲೆಗೆ ಬಾರದೆ ಇದ್ದರೆ ಯಾರಿಗೆಲ್ಲ ಖುಷಿ ಆಗುತ್ತದೆ ಅವರೆಲ್ಲ ಕೈ. ಮೇಲೆ ಮಾಡಿ ನೋಡುವ ಎಂದೆ.... 4 ಕೈಗಳು ಮೇಲೆ ಬಂದವು, ಆ ಒಂದು ಕ್ಷಣ ನನ್ನಲ್ಲಿ ಉಂಟಾದ, ಬೇಜಾರು, ನೋವು, ಪ್ರಶ್ನೆಗಳ ಸುರಿಮಳೆ, ಒಮ್ಮೆಲೇ ಎಲ್ಲವುಗಳ ಘರ್ಷಣೆಯೇ ಉಂಟಾದಂತಿತ್ತು... ನನ್ನನ್ನು ನಾನೇ ಪ್ರಶ್ನೆ ಮಾಡಿಕೊಂಡೆ, "ನಾ ಬಂದರೆ ಇವರಿಗೆ ಇಷ್ಟವಾಗದಷ್ಟು ನಾನೇನು ಮಾಡಿರಬಹುದು?" ಎಂದು. ನನ್ನೆಲ್ಲ ಪ್ರಶ್ನೆಗಳಿಗೊಮ್ಮೆ ಪೂರ್ಣ ವಿರಾಮ ಹಾಕಿ... ಅವರನ್ನು ಒಬ್ಬೊಬ್ಬರನ್ನಾಗಿ ಕೇಳಿದೆ... "ಏಕೆ ಮಕ್ಕಳೇ ನಾನು ಬಾರದಿದ್ದರೆ ನಿಮಗೆ ಖುಷಿಯೇ? ನಾನು ಬಂದರೆ ನಿಮಗೆ ಇಷ್ಟವಿಲ್ಲವೇ? ಏಕೆ" ಎಂದು ಕೇಳಿದಾಗ ಅವರ ಉತ್ತರ, ನನ್ನ ನಿರೀಕ್ಷೆಗೆ ಮೀರಿದ್ದಾಗಿತ್ತು..!! 

ಒಬ್ಬ ಹೇಳಿದ, "ನೀವು ನನ್ನ ಸ್ನೇಹಿತನ ಜೊತೆ ನನ್ನನ್ನು ಕೂರಿಸುವುದಿಲ್ಲ, ದಿನಾ ನಮ್ಮನ್ನು ಬೇರೆ ಬೇರೆ ಜಾಗದಲ್ಲಿ ಕೂರಿಸುತ್ತೀರಾ ಅದಕ್ಕೆ". ನೀವು ಬಾರದಿದ್ದರೆ ನನಗೆ ಖುಷಿ ಎಂದ. ಇನ್ನೊಬ್ಬನ ಉತ್ತರವು ಅದೇ ಆಗಿತ್ತು, ಮತ್ತೊಬ್ಬ ಹೇಳಿದ "ನನಗೆ ಟೇಬಲ್ ಹತ್ತಿ ಹಾರುವುದು ನನಗೆ ಇಷ್ಟ ಆದರೆ ನೀವು ಅದಕ್ಕೆ ಬಿಡುವುದೇ ಇಲ್ಲ" ನೀವು ಬಿಡುವುದೇ ಇಲ್ಲ ಎಂಬ ಕಾರಣ... ಮತ್ತೊಬ್ಬಳು ಹೇಳಿದಳು ನನಗೆ ನಿದ್ರೆ ಮಾಡೋಕೆ ಬಿಡೋದಿಲ್ಲ ಅದ್ಕೆ ನನಗೆ ಬೇಜಾರು" ಇವು ಅವರುಗಳ ಕಾರಣಗಳಾಗಿದ್ದವು. ಬೇರೆ ಮಕ್ಕಳೆಲ್ಲ ಜೋರಾಗಿ ನಗಲಾರಂಭಿಸಿದರು... ಆದರೆ ನನಗೆ ಒಂದು ಕ್ಷಣ ಏನು ಹೇಳಬೇಕೆಂದು ತಿಳಿಯದೆ ಮೌನವಾಗಿಬಿಟ್ಟೆ..! ನಾನೆಲ್ಲೋ ತಪ್ಪು ಮಾಡಿದ್ದೇನೆ ಎನ್ನುವ ಅಪರಾಧಿ ಭಾವನೆ ಕಾಡುತ್ತಿತ್ತು..! ಆ ದಿನವೆಲ್ಲ ಬೇಜಾರಿಂದಲೇ ಕಳೆದೆ..! 

ಮತ್ತೆ ಮಾರನೇ ದಿನ ಎಂದಿನಂತೆ ಮಕ್ಕಳನ್ನೆಲ್ಲ ಬೇರೆ ಬೇರೆ ಸ್ಥಳದಲ್ಲಿ ಕುಳ್ಳಿರಿಸಿ... ಕಾರಣ ಹೇಳಿದ 4 ಮಕ್ಕಳನ್ನು ಮಾತ್ರ ಅವರವರ ಇಷ್ಟದ ಸ್ಥಳದಲ್ಲೇ ಕೂರಿಸಿದೆ... ಆ ಮಕ್ಕಳ ಮುಖದಲ್ಲಿ ಎಲ್ಲಿಲ್ಲದ ಸಂಭ್ರಮ... ಆದರೆ ಮಕ್ಕಳು ಹೇಳಿದ ಕಾರಣಗಳು ಅವರ ನಿಟ್ಟಿನಲ್ಲಿ ಸರಿಯಾಗಿದ್ದರೂ ನನ್ನ ಪ್ರಕಾರ ಶಿಸ್ತು ಕಲಿಸುವುದು ಕೂಡ ನನ್ನ ಧರ್ಮ. ಆದರೆ ಅದನ್ನು ಅವರಿಗೆ ಅರ್ಥಪಡಿಸುವುದು ಅಷ್ಟು ಸುಲಭವಾಗಿರಲಿಲ್ಲ.

ಅದಕ್ಕೆ ನಾನೊಂದು ಉಪಾಯ ಮಾಡಿದೆ... ಅವರ ಇಷ್ಟದಂತೆ ಆ ಮಕ್ಕಳನ್ನು ಅವರ ಇಷ್ಟ ಜಾಗದಲ್ಲಿ ಕೂರಿಸಿದೆ.. ಮತ್ತೊಬ್ಬಳನ್ನು ಅವಳ ಇಷ್ಟದಂತೆ ಮಲಗಲು ಬಿಟ್ಟೆ.... ಎರಡು ದಿನ ಹೀಗೆಯೇ ಮುಂದುವರೆಯಿತು... ಮಾರನೇ ದಿನ ಮಕ್ಕಳ ಜಾಗವನ್ನೆಲ್ಲ ಸರಿ ಮಾಡಿ ಕೂರಿಸುವಾಗ ಆ 4 ಮಕ್ಕಳು ತಮ್ಮ ತಮ್ಮ ಬ್ಯಾಗ್ ಗಳೊಂದಿಗೆ ನನ್ನ ಎದುರು ಬಂದು ನಿಂತು ಹೇಳಿದರು.. "ಮಾತಾಜಿ ನಮಗೂ ಪ್ಲೇಸ್ ಚೇಂಜ್ ಮಾಡಿ" ಎಂದು. ನಾನು ಮಾತ್ರ ಏನೂ ಪ್ರತಿಕ್ರಿಯೆ ತೋರದೆ ಅವರನ್ನು ನೋಡದೆ ನನ್ನ ಕೆಲಸ ಮುಂದುವರಿಸಿದೆ... ಆಗ ಒಂದು ಮಗು ಮುಂದೆ ಬಂದು ನಿಂತು ಹೇಳಿತು "Sorry ಮಾತಾಜಿ" ನಾವು ಮೊನ್ನೆ ನಿಮಗೆ ಹಾಗೆ ಹೇಳಬಾರದಿತ್ತು. ನಮ್ಮನ್ನು ಕ್ಷಮಿಸಿ" ಎಂದು ಕಣ್ಣಲ್ಲಿ ನೀರು ತುಂಬಿತ್ತು... ನಾನು ಹೇಳಿದೆ "ಇಲ್ಲ ಮಕ್ಕಳೇ ನೀವು sorry ಕೇಳುವ ಅಗತ್ಯವಿಲ್ಲ. ನಿಮ್ಮ ಮನಸ್ಸಿನ ಮಾತು ನೀವು ಹೇಳಿದ್ದೀರಿ. ನನಗೆ ನಿಮ್ಮ ಮೇಲೆ ಖುಷಿ ಇದೆ. ಆ ದಿನ ನೀವು ನನಗೆ ಹೆದರದೆ ಸತ್ಯವನ್ನೇ ಹೇಳಿದಿರಿ ಅಷ್ಟೇ ಸಾಕು ಎಂದೆಲ್ಲ ಕೆಲವು ಭಾವನಾತ್ಮಕ ಸಂಭಾಷಣೆ ಆಯಿತು ನಮ್ಮ ನಡುವೆ. 

ಆಗ ಒಬ್ಬ ಬಾಲಕ ಹೇಳಿದ. "ಇಲ್ಲ ಮಾತಾಜಿ ನೀವು ಹೇಳಿದ ಹಾಗೆ ನಾವು ಕೇಳುತ್ತೇವೆ. ಆದರೆ ನೀವು ಮಾತ್ರ ನಮ್ಮ ಜೊತೆ ಮಾತು ಬಿಡಬೇಡಿ ಪ್ಲೀಸ್... ಎಲ್ಲರ ಜೊತೆ ಹೇಗೆ ಖುಷಿಯಿಂದ ಇರುತ್ತೀರೋ ಹಾಗೆ ನಮ್ಮ ಜೊತೆ ಕೂಡ ಮಾತನಾಡಿ ಪ್ಲೀಸ್" ಎಂದು ಅಳಲು ಆರಂಭಿಸಿದರು.. ಆ ನಿದ್ದೆ ಮಾಡಲು ಇಷ್ಟ ಪಡುವ ಮಗು ಬಂದು ಕೇಳಿತು "ಮಾತಾಜಿ ನೀವು ಎಲ್ಲರನ್ನು ಪ್ರಶ್ನೆ ಕೇಳಿ marks ಕೊಡುತ್ತಿದ್ದೀರಿ, ಎಲ್ಲರಿಗೂ ಚಟುವಟಿಕೆ ಮಾಡಿಸುತ್ತಿದ್ದೀರಿ, ನನಗೆ ಮಾತ್ರ ಏಕೆ ಇಲ್ಲ?" ಎಂದು ಕೇಳಿದಳು. ಆಗ ನಾನು ಹೇಳಿದೆ "ನಿನಗೆ ಯಾವಾಗಲೂ ನಿದ್ರೆ ಮಾಡುವುದೇ ಇಷ್ಟವಲ್ಲವೇ? ನೀನು ಹೋಗಿ ನಿದ್ರೆ ಮಾಡು. ನಾನು ನಿನಗೆ ತೊಂದರೆ ಕೊಡುವುದಿಲ್ಲ" ಎಂದು ವ್ಯಂಗ್ಯವಾಗಿ ಹೇಳಿದ ಮಾತು ಅವಳ ಮನಸ್ಸಿಗೆ ನಾಟಿತು.. ನಂತರ ಬಂದು ಹೇಳಿದಳು "sorry ಮಾತಾಜಿ ನಾನು ಮಲಗೋದಿಲ್ಲ ನನಗೂ ಆಕ್ಟಿವಿಟಿ ಮಾಡಿಸಿ ಪ್ಲೀಸ್.." ಎಂದು. ನನ್ನ ಮನಸ್ಸಿಗೆ ಸಹಿಸಲಾಗದ ನೋವಾಯಿತು.. ಇನ್ನು ಸತಾಯಿಸುವುದು ಬೇಡವೆಂದು ಅವರನ್ನು ಹತ್ತಿರ ಕರೆದು ಸಮಾಧಾನ ಪಡಿಸಿ... ದಿನವೂ ನಾನು ಶಾಲೆಯಲ್ಲಿ ಶಿಸ್ತಿನ ವಿಚಾರವಾಗಿ ಮಾಡುತ್ತಿದ್ದ ಕೆಲವು ವಿಚಾರಗಳ ಬಗ್ಗೆ ಬಿಡಿಸಿ ಹೇಳಿದಾಗ ಅವರಿಗೂ ಅದು ಅರಿವಾಯಿತು. ಹಾಗೆ ತಮ್ಮ ತಪ್ಪಿನ ಅರಿವು ಆಯಿತು. 

ನಂತರ ಪ್ರತಿದಿನ ಎಂದಿನಂತೆ ನಮ್ಮ ದಿನಚರಿ ಸಾಗತೊಡಗಿತು. ಕೆಲವೊಮ್ಮೆಸಣ್ಣ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅವರ ಈ ರೀತಿಯ ಪ್ರಶ್ನೆಗಳಿಗೆ ನಾವು ಉತ್ತರಿಸುವ ವಿವಿಧ ಕಲೆಗಳನ್ನು ಕಲಿಯುವ ಅವಶ್ಯಕತೆ ನಮಗೂ ಇದೆ.
...................................... ರಮ್ಯಾ ಆರ್ ಭಟ್
ಸಹ ಶಿಕ್ಷಕಿ. 
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621
*******************************************



Ads on article

Advertise in articles 1

advertising articles 2

Advertise under the article