-->
ಜೀವನ ಸಂಭ್ರಮ : ಸಂಚಿಕೆ - 213

ಜೀವನ ಸಂಭ್ರಮ : ಸಂಚಿಕೆ - 213

ಜೀವನ ಸಂಭ್ರಮ : ಸಂಚಿಕೆ - 213
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                         

ಮಕ್ಕಳೇ, ಇಂದು ಸಂತೋಷದ ಹಾರ್ಮೋನುಗಳ ಬಗ್ಗೆ ತಿಳಿದುಕೊಳ್ಳೋಣ. ಈ ಜಗತ್ತಿನಲ್ಲಿ ಅನುಭಾವಿಗಳು, ದಾರ್ಶನಿಕರು, ಋಷಿಗಳು ಹೇಳಿದ್ದು ಏನೆಂದರೆ ನಾವು ಈ ಸುಂದರ ಜಗತ್ತಿಗೆ ಬಂದಿದ್ದು ಅನುಭವಿಸಲು ಅಂದರೆ ಅನುಭವ ಮಾಡಿಕೊಳ್ಳಲು. ಎಂತಹ ಅನುಭವ ಆಗಬೇಕೆಂದರೆ ಸಂತೋಷದ ಅನುಭವವಾಗಬೇಕು. ಸಂತೋಷದ ಅನುಭವ ಆಗಬೇಕಾದರೆ ಸಂತೋಷ ಕೊಡುವುದನ್ನು ನೋಡಬೇಕು, ಕೇಳಬೇಕು, ರುಚಿಸಬೇಕು, ಸ್ಪರ್ಶಿಸಬೇಕು ಹಾಗೆ ಸಂತೋಷ ಆಗುವಂತೆ ಕೆಲಸ ಮಾಡಬೇಕು. ವಸ್ತುಗಳನ್ನು, ಅವಯವಗಳನ್ನು ಮತ್ತು ಇಂದ್ರಿಯಗಳನ್ನು ಸಂತೋಷವಾಗುವಂತೆ ಬಳಸಬೇಕು. ಯಾವುದನ್ನೇ ಮಾಡಬೇಕಾದರೂ ಶೇಕಡ ನೂರರಷ್ಟು ಮನಸ್ಸು ಮಗ್ನವಾಗಬೇಕು. , ತನ್ಮಯತೆ ಅಗತ್ಯ. ಪ್ರೀತಿ ಇರುವಲ್ಲಿ ಮನಸ್ಸು ಮಗ್ನವಾಗುತ್ತದೆ. ಮಗ್ನತೆಯಿಂದ ಅನುಭವವಾಗುತ್ತದೆ. ನಮ್ಮಲ್ಲಿರುವುದನ್ನು ಇತರರೊಂದಿಗೆ ಪ್ರೀತಿಯಿಂದ ಹಂಚಿಕೊಂಡು ಸಂತೋಷಪಡಬೇಕು. ಇನ್ನೊಬ್ಬರಲ್ಲಿ ಇರುವ ಒಳ್ಳೆಯದನ್ನು ಪ್ರಶಂಸೆ ಮಾಡುವುದು, ವೈರಿಗಳನ್ನು ಕ್ಷಮಿಸುವುದು ಅಂದರೆ ನಮ್ಮ ತಲೆಯಿಂದ ತೆಗೆದು ಹಾಕುವುದು ಬಹಳ ಮುಖ್ಯ.

ಪ್ರತಿಯೊಂದನ್ನೂ ಅನುಭವಿಸುವಾಗ ಕೃತಜ್ಞತೆ ಸಲ್ಲಿಸಬೇಕು. ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸುವುದು. ನಮ್ಮ ಬದುಕಿಗೆ ಆಧಾರವಾದ ನಿಸರ್ಗ, ಆಹಾರ, ನೀರು, ಸೂರ್ಯ ಮತ್ತು ಗಾಳಿ ಇವುಗಳಿಂದ ನಾವು ಬದುಕಿರುವುದರಿಂದ ಕೃತಜ್ಞತೆ ಸಲ್ಲಿಸಬೇಕು. ಹೀಗೆ ಮಾಡಿದರೆ ಬದುಕು ಸಂತೋಷದಿಂದ ಕೂಡಿರುತ್ತದೆ ಎಂದು ಋಷಿ ಮುನಿಗಳು ಹೇಳಿದರು. ಇದರಿಂದ ನಮ್ಮ ದೇಹದಲ್ಲಿ ಏನೇನು ವೈಜ್ಞಾನಿಕವಾಗಿ ಬದಲಾಗುತ್ತದೆ ಅನ್ನುವುದನ್ನು ಋಷಿಮುನಿಗಳು ಹೇಳಲಿಲ್ಲ. ಹಾಗಾಗಿ ನಾವು ಇವುಗಳ ಬಗ್ಗೆ ತಾತ್ಸಾರ. ಇವುಗಳಿಂದ ವೈಜ್ಞಾನಿಕವಾಗಿ ಏನೇನಾಗುತ್ತದೆ ಎನ್ನುವುದನ್ನು ನೋಡೋಣ. ಒಂದು ಸಂದರ್ಶನದಲ್ಲಿ ಡಾ. ಮಾಲಿನಿ ಸುತ್ತೂರು ಹೇಳಿದ್ದನ್ನು ಹಂಚಿಕೊಳ್ಳಬೇಕೆಂದು ಈ ಲೇಖನ ಬರೆಯಲಾಗಿದೆ. 

ನಮ್ಮ ದೇಹದಲ್ಲಿ ಸಂತೋಷದ ಹಾರ್ಮೋನುಗಳು ಐದು. ಅವುಗಳೆಂದರೆ ಸೆರೋಟೋನಿನ್, ಡೋಫೊಮೆನ್, ಆಕ್ಸಿಟೋಸಿನ್, ಮೆಲಟೋನಿನ್ ಮತ್ತು ಎಂಡಾರ್ಪಿನ್. ಈ 5 ಹಾರ್ಮೋನ್ಗಳೇ ಸಂತೋಷದ ಹಾರ್ಮೋನ್ ಗಳು. ಈ ಮೇಲೆ ಹೇಳಿದಂತೆ ಕೆಲಸ ಮಾಡಿದಾಗ ಈ ಹಾರ್ಮೋನ್ ಗಳು ಬಿಡುಗಡೆಯಾಗುತ್ತವೆ. ಯಾವ ಯಾವ ಸಂದರ್ಭದಲ್ಲಿ, ಯಾವ ಯಾವ ಹಾರ್ಮೋನ್ ಗಳು ಬಿಡುಗಡೆಯಾಗುತ್ತದೆ ಅನ್ನುವುದನ್ನು ನೋಡೋಣ. 

ಒಳ್ಳೆಯದನ್ನು ಕಂಡಾಗ, ಪ್ರಶಂಸೆ ಮಾಡಿದರೆ, ಡೋಫೋಮಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಡೋಪೋಮಿನ್ ಹಾರ್ಮೋನ್ ಹೇಳಿದವರಿಗೂ ಹಾಗೂ ಪ್ರಸಂಶೆಗೆ ಒಳಗಾದವರಿಗೂ ಇಬ್ಬರಿಗೂ ಬಿಡುಗಡೆಯಾಗುತ್ತದೆ. ಇದರಿಂದ ಹೇಳಿದವರಿಗೂ ಮತ್ತು ಪ್ರಸಂಶೆಗೆ ಒಳಗಾದವರೆಗೂ ಸಂತೋಷವಾಗುತ್ತದೆ. 

ಸೆರೆಟೋನಿನ್ ಎನ್ನುವ ಹಾರ್ಮೋನ್ ಅನ್ನು ಮೂಡ್ ಹಾರ್ಮೋನ್ ಎನ್ನುವರು. ಈ ಮೇಲೆ ಹೇಳಿದ ಕೆಲಸ ಮಾಡಿದಾಗ ನಾವು ಇಡೀ ದಿನ ಈ ಸಂತೋಷದಿಂದ ಇರುತ್ತೇವೆ. ಈ ಸೆರಟೋನಿನ್ ಶೇಕಡ 80ರಷ್ಟು ಕರುಳಿನ ಬ್ಯಾಕ್ಟೀರಿಯಾದಿಂದ ಬಿಡುಗಡೆಯಾಗುತ್ತದೆ. ಶೇಕಡ 20ರಷ್ಟು ನಮ್ಮ ಮೆದುಳಿನಿಂದ ಬಿಡುಗಡೆಯಾಗುತ್ತದೆ. ನಮ್ಮ ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಗಳು ಈ ಸೆರಟೋನಿನ್ ಹಾರ್ಮೋನನ್ನು ತಯಾರಿಸುತ್ತವೆ. ಈ ಒಳ್ಳೆಯ ಬ್ಯಾಕ್ಟೀರಿಯಗಳು ಬದುಕಲು ನಾರು ಪದಾರ್ಥ ಬಹಳ ಮುಖ್ಯ. ಸಸ್ಯಹಾರದಿಂದ ನಾರು ಪದಾರ್ಥ ಹೆಚ್ಚು ಪ್ರಮಾಣದಲ್ಲಿ ಸಿಗುತ್ತದೆ. ಆ ರೀತಿ ಮೂಡ್ ಆಗಲು ಸೆರೆಟೋನಿನ್ ಹಾರ್ಮೋನ್ ಕಾರಣ. ನಮ್ಮ ಪ್ರೀತಿ ಪಾತ್ರರು ಕಂಡಾಗ ನಮಗೆ ಆಕ್ಸಿಟೋಸಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಆಕ್ಸಿಟೋಸಿನ್ ಹಾರ್ಮೋನ್ ಗೆ ಪ್ರೀತಿಯ ಹಾರ್ಮೋನ್ ಎನ್ನುವರು. ಈ ಹಾರ್ಮೋನ್ ಬಿಡುಗಡೆಯಾಗುವುದರಿಂದ ಸಂತೋಷ ಉಂಟಾಗುತ್ತದೆ. ನಾವು ಕಣ್ತುಂಬ ನಿದ್ರಿಸಲು ಮೆಲೆಟೋನಿನ್ ಹಾರ್ಮೋನ್ ಬೇಕು. ಇದು ಫೈನಿಲ್ ಗ್ರಂಥಿಯಿಂದ ಬಿಡುಗಡೆಯಾಗುತ್ತದೆ. ಬೆಳಕಿದ್ದು, ಮನಸ್ಸು ಒತ್ತಡದಿಂದ ಬಳಲುತ್ತಿದ್ದರೆ, ನಾವು ಚಿನ್ನದ ಮಂಚದ ಮೇಲೆ ಮಲಗಿದರು ನಿದ್ರೆ ಬರುವುದಿಲ್ಲ. ಮೆಲೆಟೋನಿನ್ ಬಿಡುಗಡೆಯಾಗಲು ಕತ್ತಲ ಪರಿಸರ ಬಹಳ ಮುಖ್ಯ ಹಾಗೂ ಮನಸ್ಸಿನ ಒತ್ತಡ ಇಲ್ಲದಿರುವುದು ಅಗತ್ಯ. ಒತ್ತಡ ಇದ್ದರೆ, ಬೆಳಕು ಇದ್ದರೆ ಈ ಹಾರ್ಮೋನ್ ಬಿಡುಗಡೆಯಾಗುವುದಿಲ್ಲ. 

ನಾವು ಆಟ ಆಡಿದಾಗ ಏನೋ ಒಂದು ತರ ಸಂತೋಷ. ಏಕೆಂದರೆ ದೇಹ ದಣಿದಿದ್ದಾಗ ನೋವು ಉಂಟಾಗುತ್ತದೆ. ಆ ನೋವು ನಿವಾರಿಸಲು ನಮ್ಮ ಮೆದುಳು ಎಂಡಾರ್ಪಿನ್ ಎನ್ನುವ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ. ಇದು ನೈಸರ್ಗಿಕ ನೋವು ನಿವಾರಕ. ಇವುಗಳ ಕೆಲಸ ನೋಡಿದಾಗ ನಮ್ಮ ಹಿರಿಯರು ಹೇಳಿದ್ದು "ನಮ್ಮ ದೇಹ ಸಂಪತ್ತಿನ ಸಂಪತ್ತು". ಎಂತಹ ಅದ್ಭುತ ರಚನೆ ಇದೆ ಅನ್ನುವುದು ಗೊತ್ತಾಗುತ್ತದೆ. ಆದುದರಿಂದ ನಾವು ಮಧುರ ಭಾವ ಬೆಳೆಸಿಕೊಳ್ಳಬೇಕು. ಮಧುರ ಭಾವ ಎಂದರೆ ಪ್ರೇಮ, ಮಮತೆ, ಕರುಣೆ, ಮನದಲ್ಲಿ ತುಂಬಿರುವುದು. 

ಒಂದು ವೇಳೆ ನಮ್ಮ ಭಾವ ಮಧುರವಿಲ್ಲದೆ ದ್ವೇಷ, ಮತ್ಸರ, ಕೋಪ ಮತ್ತು ತಾಪ ಬೆಳೆಸಿಕೊಂಡರೆ ನಮ್ಮ ದೇಹದಲ್ಲಿ ಒತ್ತಡದ ಹಾರ್ಮೋನ್ ಬಿಡುಗಡೆಯಾಗುತ್ತದೆ. ಒತ್ತಡದ ಹಾರ್ಮೋನ್ ಗಳು ಯಾವುವೆಂದರೆ ಅಡ್ರಿನಲೀನ್ ಮತ್ತು ಕಾರ್ಟಿಸೋಲ್ ಹಾರ್ಮೋನ್ ಗಳು. ಅಡ್ರಿನಲೀನ್ ನಮ್ಮ ವೈರಿ. ನಾವು ಕ್ಷಮಿಸದೆ ಇದ್ದಾಗ ಎದುರಿಗೆ ಕಂಡ ತಕ್ಷಣ ನಮ್ಮಲ್ಲಿ ಕೋಪ, ದ್ವೇಷ ಉಂಟಾಗುತ್ತದೆ. ಆಗ ದೇಹದಲ್ಲಿ ಮುಖದಲ್ಲಿ ಕೆಂಪು ಬಣ್ಣ ಗೋಚರಿಸುತ್ತದೆ. ಉಸಿರಾಟ ಹೆಚ್ಚಾಗುವುದನ್ನು ನೋಡುತ್ತೇವೆ. ಆಗ ಅಡ್ರಿನಲಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ದೇಹ ಅಪಾಯದಲ್ಲಿದೆ ಎಂದು ಭಾವಿಸಿ, ಈ ಹಾರ್ಮೋನ್, ಪಿತ್ತ ಜನಕಾಂಗ ಸ್ಪರ್ಶಿಸಿದ ತಕ್ಷಣ, ತಾನು ಶೇಖರಿಸಿ ಇಟ್ಟುಕೊಂಡಿರುವ ಗ್ಲೈಕೋಜಿನ್ (ಕೊಬ್ಬು) ಅನ್ನು ಗ್ಲುಕೋಸ್ ಆಗಿ ಪರಿವರ್ತಿಸಿ ರಕ್ತಕ್ಕೆ ಬಿಡುಗಡೆ ಮಾಡುತ್ತದೆ. ಇದು ಮಧುಮೇಹ ಕಾಯಿಲೆಗೆ ಕಾರಣ. ಗ್ಲೂಕೋಸ್ ರಕ್ತದಲ್ಲಿ ಇದ್ದರೆ ಮಾರಕ. ಹಾಗಾಗಿ ಅದು ಶಕ್ತಿ ಬಿಡುಗಡೆಯಾಗಲು ಜೀವಕೋಶ ಮೈಟೋಕಾಂಡ್ರಿಯಗಳಿಗೆ ತಲುಪಿಸಬೇಕು. ಅದಕ್ಕಾಗಿ ಹೃದಯ ಹೆಚ್ಚು ಪಂಪ್ ಮಾಡುತ್ತದೆ. ಇದರಿಂದ ಬಿಪಿ (ರಕ್ತದೊತ್ತಡ) ಹೆಚ್ಚಾಗುತ್ತದೆ. ಒತ್ತಡ ಹೆಚ್ಚಾದಾಗ ಅನೇಕ ಜೀವಕೋಶಗಳು ಹಾನಿಯಾಗುತ್ತದೆ. ಹೊಸ ಜೀವಕೋಶಗಳ ರಚನೆಗೆ ಕಾರ್ಟಿಸೋಲ್ ಹಾರ್ಮೋನ್ ಅಗತ್ಯ. ಇದು ಸ್ಟೆರಾಯ್ಡ್ ಹಾರ್ಮೋನ್. ಹಾಗಾಗಿ ನಾವು ದ್ವೇಷ, ಕೋಪ, ಮತ್ಸರ ಇವುಗಳನ್ನು ಬೆಳೆಸಿಕೊಂಡರೆ ದೇಹದಲ್ಲಿ ಅನೇಕ ಹಾನಿಯಾಗುತ್ತದೆ. ಅದಕ್ಕೆ ಹಿರಿಯರು ಹೇಳಿದ್ದು "ಚಿತೆ ಹೊರಗೆ ಸುಟ್ಟರೆ, ಚಿಂತೆ ನಮ್ಮನೆ ಸುಡುತ್ತದೆ". ಅದಕ್ಕೆ ಬಸವಣ್ಣ ಹೇಳಿದ್ದು "ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ಮನ ಸಂತೈಸಿಕೊಳ್ಳಿ". ಎಂದರೆ ಇದರ ಅರ್ಥ ನಮ್ಮ ಮನಸ್ಸನ್ನು ಸಮಾಧಾನ ಮಾಡಿಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ಮಕ್ಕಳೇ ನಮ್ಮ ಅನುಭಾವಿಗಳು ಹೇಳಿದ್ದು "ಸಂತೋಷವೇ ಸಂಪತ್ತು". ಹಾಗಾಗಿ ನಮ್ಮ ಎಲ್ಲಾ ಕೆಲಸದಲ್ಲಿ ಸಂತೋಷಕ್ಕೆ ಆದ್ಯತೆ ನೀಡಬೇಕು. ವಿಚಾರ ಮಾಡಿದರು, ಸಂತೋಷ ಆಗುವಂತೆ ವಿಚಾರ ಮಾಡಬೇಕು. ಮಾತನಾಡಿದರೆ ಸಂತೋಷ ಆಗುವಂತೆ ಮಾತನಾಡಬೇಕು. ಇದರಿಂದ ಆಟೋ ಇಮ್ಯೂನ್ ಕಾಯಿಲೆ ಸೇರಿದಂತೆ ಯಾವುದೂ ಇಲ್ಲದೆ, ದೇಹದಲ್ಲಿ ಸಂತೋಷದ ಹಾರ್ಮೋನ್ ಬಿಡುಗಡೆಯಾಗಿ ಜೀವನ ರಸಮಯವಾಗುತ್ತದೆ. ಸೌಂದರ್ಯದಿಂದ ತುಂಬುತ್ತದೆ, ಮಧುರವಾಗುತ್ತದೆ. ಸಂತೋಷದ ಅನುಭವದಿಂದ ಬದುಕು ಶ್ರೀಮಂತವಾಗುತ್ತದೆ. ಈ ಹಾರ್ಮೋನ್ ಗಳನ್ನು ಕೋಟಿ ಕೊಟ್ಟು ಖರೀದಿಸಲು ಸಾಧ್ಯವಿಲ್ಲ. ಇದು ಕೇವಲ ಮಧುರ ಭಾವದಿಂದ ತನ್ನಿಂದ ತಾನೇ ದೇಹದಲ್ಲಿ ಬಿಡುಗಡೆ ಮಾಡುತ್ತದೆ. 

ಮೆದುಳಿಗೆ ಯಾವ ರೀತಿ ಪ್ರಚೋದನೆ ದೊರಕುತ್ತದೆ ಹಾಗೆ. ಪ್ರೇಮದ ಪ್ರಚೋದನೆ ಇದ್ದರೆ ಸಂತೋಷದ ಹಾರ್ಮೋನ್ , ದುಃಖದ ಪ್ರಚೋದನೆ ಇದ್ದರೆ ಒತ್ತಡದ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಆದ್ದರಿಂದ ಯೋಚಿಸಿ, ಪ್ರೀತಿಯ ಜೀವನ ಒಳ್ಳೆಯದು ಅಲ್ಲವೇ ಮಕ್ಕಳೇ...
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
******************************************


Ads on article

Advertise in articles 1

advertising articles 2

Advertise under the article