ಪಯಣ : ಸಂಚಿಕೆ - 66 (ಬನ್ನಿ ಪ್ರವಾಸ ಹೋಗೋಣ)
Saturday, October 25, 2025
Edit
ಪಯಣ : ಸಂಚಿಕೆ - 66 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ ಮೈಸೂರಿನ ಮತ್ತೊಂದಿಷ್ಟು ಪ್ರವಾಸಿ ತಾಣದ ಬಗ್ಗೆ ತಿಳಿಯೋಣವೇ... ಮತ್ತೇಕೆ ತಡ - ಬನ್ನಿ.... ನಮ್ಮ ನಾಡಿನ ಸಾಂಸ್ಕೃತಿಕ ಕೇಂದ್ರವಾಗಿರುವ "ಮೈಸೂರು ಜಿಲ್ಲೆಯ ಹಲವು ಪ್ರವಾಸ ತಾಣ" ಕ್ಕೆ ಪಯಣ ಮಾಡೋಣ.
ಜಗನ್ಮೋಹನ ಪ್ಯಾಲೇಸ್ ಎಂದೇ ಸುಪ್ರಸಿದ್ಧವಾದ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯನ್ನು 1861ರಲ್ಲಿ ಮೂರನೇ ಕೃಷ್ಣರಾಜ ಒಡೆಯರ್ ಪರ್ಯಾಯ ಅರಮನೆಯಾಗಿ ಕಟ್ಟಿಸಿದರು.
ದೊರೆ ವಾಸಿಸುತ್ತಿದ್ದ ಮೂಲ ಅರಮನೆಯಾದ ಮೈಸೂರು ಪ್ಯಾಲೇಸ್ ದುರದೃಷ್ಟವಶಾತ್ ಬೆಂಕಿ ಆಕಸ್ಮಿಕದಿಂದ ಸುಟ್ಟುಹೋದ ಕಾರಣ 1897ರಲ್ಲಿ ಹೊಸ ಅರಮನೆ ಕಟ್ಟುವ ಕೆಲಸ ಪ್ರಾರಂಭವಾಯಿತು. 1912ರಲ್ಲಿ ಅರಮನೆ ನಿರ್ಮಾಣ ಸಂಪೂರ್ಣಗೊಂಡಿತು.
ಅಲ್ಲಿಯವರೆಗೆ ಜಗನ್ಮೋಹನ ಪ್ಯಾಲೇಸ್ ಅನ್ನು ದೊರೆ ಕುಟುಂಬದವರು ಉಪಯೋಗಿಸುತ್ತಿದ್ದರು. 1902ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸಿಂಹಾಸನವನ್ನೇರಿದಾಗ ಅದ್ದೂರಿ ಸಮಾರಂಭ ಇದೇ ಅರಮನೆಯಲ್ಲಿ ಏರ್ಪಡಿಸಲಾಗಿತ್ತು.
ಈ ಸಮಾರಂಭದಲ್ಲಿ ಅಂದಿನ ವೈಸರಾಯ್ ಮತ್ತು ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಕರ್ಜನ್ ಸಾಕ್ಷಿಯಾಗಿದ್ದ. ಈ ಅರಮನೆಯಲ್ಲಿ ದೊರೆ ಒಡ್ಡೋಲಗ ನಡೆಸುವುದರ ಜೊತೆಗೆ ದಸರಾ ಸಂದರ್ಭದಲ್ಲಿ ಅದ್ದೂರಿ ದಸರಾ ದರ್ಬಾರ್ ಅನ್ನು ನಡೆಸಲಾಗುತ್ತಿತ್ತು.
1915ರಲ್ಲಿ ಈ ಅರಮನೆಯನ್ನು ಕಲಾಕ್ಷೇತ್ರವಾಗಿ ಪರಿವರ್ತಿಸಲಾಯಿತು. 1955ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಹೆಸರಿನಲ್ಲಿ ಈ ಅರಮನೆಗೆ ಶ್ರೀ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿ ಎಂದು ಮರುನಾಮಕರಣ ಮಾಡಲಾಯಿತು.
ಈ ಆರ್ಟ್ ಗ್ಯಾಲರಿಯಲ್ಲಿ ಚಂದನ, ಅಮೃತಶಿಲೆ, ಪಿಂಗಾಣಿ ಮತ್ತು ಕಲ್ಲಿನಿಂದ ನಿರ್ಮಿಸಿದ ಅನುಪಮ ಕಲಾಸಂಗ್ರಹದ ಜೊತೆಗೆ ಪ್ರಾಚೀನ ಕಲಾಕೃತಿಗಳು, ಪ್ರಾಚೀನ ಸಂಗೀತ ಸಲಕರಣೆಗಳು, ಸುಪ್ರಸಿದ್ಧ ಕಲಾವಿದರಾದ ರಾಜಾ ರವಿವರ್ಮ ಮತ್ತು ರೋರಿಚ್ ರಚಿಸಿದ ಮೂಲ ತೈಲವರ್ಣ ಚಿತ್ರಗಳನ್ನು ಕಾಣಬಹುದಾಗಿದೆ. ಎರಡು ಸಾವಿರಕ್ಕೂ ಅಧಿಕ ತೈಲ ಚಿತ್ರಗಳನ್ನು ಇಲ್ಲಿ ಕಾಣಬಹುದಾಗಿದೆ. ಇದರ ಜೊತೆಗೆ ಯುದ್ಧದಲ್ಲಿ ಬಳಸಿದ ಶಸ್ತ್ರಾಸ್ತ್ರಗಳು, ಹಿತ್ತಾಳೆ ಸಾಮಾನುಗಳು, ಸಂಗೀತ ಸಾಧನಗಳು, ಸುಂದರ ವಿಗ್ರಹಗಳು ಮತ್ತು ಪ್ರಾಚೀನ ನಾಣ್ಯ ಹಾಗೂ ನೋಟುಗಳನ್ನೂ ಕಾಣಬಹುದು.
"ಕಲಾ ಚಿತ್ತಾರದ ಆಗರ, ಐತಿಹಾಸಿಕ ಕುತೂಹಲಕಾರಿ ಕಲಾ ವೈಭವದ ಪ್ರದರ್ಶನ, ಪ್ರಾಚೀನ ಸಲಕರಣೆ, ಅಂದಿನ ಕಾಲದ ಪ್ರಸಿದ್ಧ ಕಲಾಕಾರರ ಕಲಾಕೃತಿಗಳು ನಮ್ಮನ್ನು ದಿಗ್ಭ್ರಮೆ ಗೊಳಿಸುತ್ತದೆ ಈ ಆರ್ಟ್ ಗ್ಯಾಲರಿ" ಬನ್ನಿ ನೋಡಲು....
[ಮುಂದುವರಿಯುವುದು...]
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************