ನಿಷ್ಪಾಪಿ ಸಸ್ಯಗಳು : ಸಂಚಿಕೆ - 124
Friday, October 17, 2025
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 124
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಹಬ್ಬಗಳೆಂದರೆ ಹಾಗೇ.. ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿ ಉಳಿದುಕೊಳ್ಳುವುದು ಬಾಲ್ಯದ ಸಂಭ್ರಮ! ಸಂಭ್ರಮವೆಂದಾಕ್ಷಣ ನೆನಪಾಗುವುದು ಸೌಂದರ್ಯ ವರ್ಧಕಗಳು! ಈಗಿನವರಿಗೆ ಪೇಟೆಯಲ್ಲಿ ತರಹಾವರಿ ಹೆಸರುಗಳಲ್ಲಿ ಕಾಣಿಸಿಕೊಳ್ಳುವ ಸೌಂದರ್ಯವರ್ಧಕಗಳಿದ್ದರೆ ನಮ್ಮ ಹಿರಿಯರು ಪರಿಸರವನ್ನೇ ಅವಲಂಬಿಸಿದ್ದರು. ಅವರಿಗೆ ಸೊಪ್ಪು ನಾರು ಬೇರುಗಳೇ ಅಪ್ಯಾಯಮಾನವಾಗಿದ್ದವು. ಇವುಗಳ ಸಾಲಲ್ಲಿ ಕಾಣಿಸಿಕೊಳ್ಳುವ ಒಂದು ವಿಶೇಷ ಸಸ್ಯ ಅಲೋವೆರಾ!
ಬಹುಶಃ ಈ ನಿಷ್ಪಾಪಿ ಸಸ್ಯವನ್ನು ನೋಡದವರು ಯಾರೂ ಇಲ್ಲವೇನೊ. ಗಿಡದ ಬುಡ ಒಣಗಿಹೋಯ್ತೇನೊ ಅಂತಾದಾಗ ಸ್ವಲ್ಪ ನೀರುಹಾಕಿದರೆ ಸಾಕು. ಹೆಚ್ಚು ನೀರಿನ, ಹೆಚ್ಚು ಆರೈಕೆಯ ಅವಶ್ಯಕತೆ ಇರದ ಹಾಗೂ ಇತ್ತೀಚಿನ ದಿನಗಳಲ್ಲಿ ರೈತರಿಗೆ ಆರ್ಥಿಕ ಶಕ್ತಿ ತುಂಬುತ್ತಿರುವ ವಿಶಿಷ್ಟವಾದ ಸಸ್ಯವೆಂದರೆ ಅಲೋವೆರಾ.
17ನೇ ಶತಮಾನದಲ್ಲಿ ಚೀನಾ ಹಾಗೂ ದಕ್ಷಿಣ ಯುರೋಪಿನ ತುಂಬೆಲ್ಲಾ ಹರಡಿದ ಅಲೋವೆರಾ ಕಾಂಡವೇ ಇರದ ಅಥವಾ ತುಂಬಾ ಸಣ್ಣ ಕಾಂಡದ ಸಸ್ಯ. ಸುಮಾರು 90 ಸೆಂ.ಮೀ ಗಳಷ್ಟೆತ್ತರ ಬೆಳೆಯುವ ಅಲೋವೆರಾದ ಹಸಿರು - ಬೂದು ಬಣ್ಣದ ಎಲೆಗಳ ತಿರುಳು ರಸಭರಿತವಾಗಿದ್ದು ದಪ್ಪವಾಗಿರುತ್ತವೆ. ಅಂಚುಗಳು ಗರಗಸದಂತಿದ್ದು ತುದಿ ಚೂಪಾಗಿರುತ್ತದೆ. ಎಲೆಯ ರಸವು ದಪ್ಪ ಲೋಳೆಯಾಗಿದ್ದು ಔಷಧ ಹಾಗೂ ಸೌಂದರ್ಯ ವರ್ಧಕವಾಗಿ ಉಪಯುಕ್ತವಾಗಿದೆ.
ದಿನಕ್ಕೆ ಆರೇಳು ಗಂಟೆ ಹದವಾದ ಬಿಸಿಲು ಬಿದ್ದರೆ ಸಾಕು. ಮರಳು ಮಿಶ್ರಿತ ನೀರು ಬಸಿದು ಹೋಗುವ ಮಣ್ಣಿನಷ್ಟೇ ಬಯಸುವ ಅಲೋವೆರಾ ಸೊಮಾಲಿಯಾ, ಸುಡಾನ್ ಗಳಿಗೆ ಸ್ಥಳೀಯವೆನ್ನುತ್ತಾರೆ. ಗಿಡದ ಬುಡದಲ್ಲಿ ಹುಟ್ಟುವ ಮರಿ ಸಸ್ಯಗಳನ್ನು ಪ್ರತ್ಯೇಕಿಸಿ ಹೊಸ ಸಸ್ಯಗಳನ್ನು ಪಡೆಯಬಹುದು. ಬೆಳೆದ ಗಿಡದಲ್ಲಿ ಬೇಸಗೆಯಲ್ಲಿ ಉದ್ದನೆಯ ದಂಟು ಬಂದು ನೇತಾಡುವ ಹೂಗಳಾಗುತ್ತವೆ. ರಾಯಲ್ ಹಾರ್ಟಿಕಲ್ಚರಲ್ ಸೊಸೈಟಿಯ ಗಾರ್ಡನ್ ಮೆರಿಟ್ ಪ್ರಶಸ್ತಿಯನ್ನು ಪಡೆದಿರುವ ಅಲೋವೆರಾ ದೀರ್ಘಕಾಲಿಕ ಸಸ್ಯ. ಎಲೆಗಳಲ್ಲಿ ಪಾಲಿಸ್ಯಾಕರೈಡ್ ಜೆಲ್ ಅಸೆಮನ್ನಸ್ ಇದ್ದು ವಿಷಕಾರಿ ಸಂಯುಕ್ತವಾದ ಆಲೋಯಿನ್ ಹೊಂದಿದೆ. ಆದ್ದರಿಂದ ಅಲೋವೆರಾವನ್ನು ನೇರವಾಗಿ ಮೌಖಿಕವಾಗಿ ಸ್ವೀಕರಿಸಲು ಶಿಫಾರಸು ಮಾಡುವುದಿಲ್ಲ. ಆದರೆ ಚರ್ಮದ ಪೋಷಣೆಗೆ, ಚರ್ಮದ ಶುಷ್ಕತೆಗೆ, ಸೌಂದರ್ಯ ವರ್ಧಕವಾಗಿ ಬಳಸಲಾಗುತ್ತದೆ. ಕೂದಲುದುರುವಿಕೆ, ಉರಿಯೂತ, ಜೀರ್ಣಕ್ರಿಯೆ, ತೂಕ ನಷ್ಟ, ಸುಟ್ಟಗಾಯ, ಮೊಡವೆ, ಹೊಟ್ಟೆಯುಬ್ಬರ, ಕರುಳಿನ ಶುದ್ಧೀಕರಣ, ಸಂಧಿವಾತ, ದೀರ್ಘಕಾಲದ ಜ್ವರ ಇತ್ಯಾದಿಗಳಿಗೆ ಪರಿಣಾಮಕಾರಿ ಔಷಧವಾಗಿ ಶತಮಾನಗಳಿಂದ ಬಳಕೆಯಲ್ಲಿದೆ.
ಅರೇಬಿಕ್ ಪದ 'ಅಲೋಹ್' ಅಂದರೆ ನಯವಾದ ಹೊಳೆಯುವ ಕಹಿ ವಸ್ತು ಹಾಗೂ ಲ್ಯಾಟಿನ್ ಪದ 'ವೆರಾ' ಅಂದರೆ 'ಸತ್ಯನಿಜ' ಎಂಬರ್ಥ ಹೊತ್ತು ಅಲೆವೆರಾ ಎನಿಸಿಕೊಂಡಿದೆ. ಪ್ರಪಂಚದ ಅನೇಕ ಕಡೆ ಆಕ್ರಮಣಕಾರಿ ಸಸ್ಯವೆಂದೇ ಬಿಂಬಿತವಾದ ಅಲೋವೆರಾ ಅಸ್ಫೋಡೆಲೇಸಿ ಕುಟುಂಬಕ್ಕೆ ಸೇರಿದೆ. 'ಅಲೋ' ಎಂ ಕುಲಕ್ಕೆ ಸೇರಿ ಆಲೇವೆರಾ ಎಂಬ ವೈಜ್ಞಾನಿಕ ಹೆಸರು ಪಡೆದಿದೆ. DNA ಹೋಲಿಕೆಯಲ್ಲಿ ಅಲೊವೆರಾ ಯೆಮನ್ ಗೆ ಸ್ಥಳೀವಾದ ಅಲೋಪೆರ್ರಿ ಪ್ರಭೇದಕ್ಕೆ ನಿಕಟವಾಗಿದೆಯಂತೆ. ಇತ್ತೀಚಿನ ದಿನಗಳಲ್ಲಿ ಅಲೊವೆರಾ ಸೌಂದರ್ಯಕ್ಕಾಗಿ ಕೈತೋಟ, ಉದ್ಯಾನವನಗಳನ್ನೂ ಅಲಂಕರಿಸಿದೆ. ಅಂಗೈಯಗಲದ ಚಟ್ಟಿಯಲ್ಲೂ ಹಾಯಾಗಿ ಬೆಳೆಯುವ ಅಲೋವೆರಾ ಸಸ್ಯಪ್ರೇಮಿಗಳಮನ ಗೆದ್ದು ಮನೆಯೊಳಕ್ಕೆ ನಿಧಾನವಾಗಿ ಕಾಲಿಟ್ಟಿದೆ. ಗಿಡವಿರದೆ ಇದ್ದರೂ ಹಲ್ಲುಜ್ಜುವ ಪೇಸ್ಟ್, ಹಾಗೂ ಹಲವು ತಿನಿಸುಗಳಲ್ಲಿ ಸದ್ದಿರದೆ ಅಡಗಿದೆಯೆಂದರೆ ಇದರ ಮಹತ್ವ ತಿಳಿಯಬಹುದು. ಈ ಸಸ್ಯವು ನಕಾರಾತ್ಮಕ ಶಕ್ತಿಗಳನ್ನು ತಡೆಯುತ್ತದೆ, ಮನೆಯಲ್ಲಿ ಅದೃಷ್ಟ, ಸಂಪತ್ತಿಗೆ ಕಾರಣವಾಗುತ್ತದೆ ಎಂದು ನಂಬಲಾಗುವ ಅಲೊವೆರಾವನ್ನು ವಾಯವ್ಯ ದಿಕ್ಕಿನಲ್ಲಿ ನೆಡಬಾರದೆಂಬ ನಂಬಿಕೆಯಿದೆ. ಬಹುಶ: ಸಸ್ಯಲೋಕದಲ್ಲಿ ಇಂತಹಾ ಕೆಲವು ನಂಬಿಕೆಗಳೇ ಸಸ್ಯಗಳನ್ನು ಉಳಿಸಿವೆ ಎನ್ನಬಹುದು ಅಲ್ಲವೇ?
ನಿಮ್ಮನೆಯಲ್ಲೂ ಈ ಗಿಡ ಇರಬಹುದು. ಗಮನಿಸಿ.
ಸರಿ ಮಕ್ಕಳೇ.. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ... ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************