ನಿಷ್ಪಾಪಿ ಸಸ್ಯಗಳು : ಸಂಚಿಕೆ - 123
Thursday, October 9, 2025
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 123
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಗಣತಿ ಕಾರ್ಯದಿಂದಾಗಿ ರಜಾ ಸಮಯ ಮುಂದುವರಿದಿದ್ದು ಈ ದಿನಗಳನ್ನು ನಿಮ್ಮ ಹವ್ಯಾಸಗಳಿಗಾಗಿ ಮೀಸಲಿಡಿ. ಸಸ್ಯಗಳ ಬಗ್ಗೆ ಗಮನ ನೀಡಿ ಅವುಗಳ ಪರಿಚಯ ಮಾಡಿಕೊಳ್ಳುವುದನ್ನೂ ಒಂದು ಹವ್ಯಾಸವಾಗಿ ಬೆಳೆಸಿಕೊಳ್ಳಲು ಪ್ರಯತ್ನಿಸಿ. ಅತ್ತ ಆಗಾಗ ಬರುತ್ತಿರುವ ಮಳೆರಾಯ ಸಸ್ಯ ಜಗತ್ತಿಗೆ ಚೇತನವನ್ನು ಉಣಿಸುತ್ತಿದ್ದಾನೆ.. ಮನೆ ಕೈತೋಟದ ಎಲ್ಲ ತರಕಾರೀ ಗಿಡಗಳೂ ಫಲ ನೀಡಿವೆ ಅಥವಾ ಇನ್ನೂ ನೀಡುತ್ತಿವೆಯಲ್ಲವೇ?
ಕಳೆದ ವಾರ ನಾವು ನಮ್ಮ ಪ್ರೀತಿಯ ಬಸಳೆಯ ಪರಿಚಯ ಮಾಡಿಕೊಂಡೆವು. ಇಂದು ನಾವು ಬಹುವಾಗಿ ಮೆಚ್ಚಿಕೊಳ್ಳುವ ಅಲಸಂಡೆ ಎಂಬ ಉಪಕಾರಿ ತರಕಾರಿಯ ಬಗ್ಗೆ ತಿಳಿದುಕೊಳ್ಳೋಣ.
ನಮ್ಮ ಬಾಲ್ಯಕಾಲದಲ್ಲಿ ತರಕಾರಿಗಾಗಿ ಅಂಗಡಿಗಳ ಅವಲಂಬನೆ ಇರಲಿಲ್ಲ. ಕನಿಷ್ಟ ಎರಡು, ನಾಲ್ಕು ಸಾಲು ಅಲಸಂಡೆ ಬಳ್ಳಿಗಳು ಇರುತ್ತಿದ್ದವು. ಬೆಟ್ಟು ಗದ್ದೆಗಳು, ಬೈಲು ಗದ್ದೆಗಳು ಕೂಡ ಕಟಾವಾದ ಬಳಿಕ ತರಕಾರಿ ತೋಟಗಳಾಗುತ್ತಿದ್ದವು. ಅಲಸಂಡೆಯ ಜೊತೆ ಮುಂಗಾರು, ಹಿಂಗಾರು ಎರಡೂ ಋತುವಿಗೂ ಸಖ್ಯವಿತ್ತು. ಕೆಂಪು ಬಣ್ಣದ ಗೇಣುದ್ದದ ಅಲಸಂಡೆಯನ್ನಂತೂ ಎಲ್ಲರೂ ಇಷ್ಟ ಪಡುತ್ತಿದ್ದರು. ಏಕೆಂದರೆ ದಿನ ಬಿಟ್ಟು ದಿನ ಫಸಲು ದೊರೆತು ಸಾಂಬಾರೇನು ಮಾಡುವುದೆಂಬ ಚಿಂತೆ ದೂರವಾಗುತ್ತಿತ್ತು. ಅದನ್ನು ತುಳುವಿನಲ್ಲಿ 'ಉಮಿ ಲತ್ತನೆ' ಎನ್ನುತ್ತಿದ್ದರು. ಈಗಂತೂ ಆ ತಳಿ ತುಂಬಾ ಅಪರೂಪವಾಗಿದೆ. ತಿನ್ನುವಾಗ ಬಾಯಿಗೆ ಸ್ವಲ್ಪ ಒರಟೊರಟೆನಿಸುತ್ತಿತ್ತು. ಭತ್ತದ ಹೊಟ್ಟು ಅಥವಾ ಸಿಪ್ಪೆಗೆ ತುಳುವಿನಲ್ಲಿ 'ಉಮಿ' ಎನ್ನುವರು. ಅದನ್ನು ಮುಟ್ಟಿದ ಅನುಭವ ಈ ಚೆಂದುಳ್ಳಿ ಅಲಸಂಡೆಯೂ ನೀಡುತ್ತಿದ್ದುದರಿಂದ ಉಮಿಲತ್ತನೆ.
ಲತ್ತನೆ ಅಂದರೆ ಕನ್ನಡದ ಅಲಸಂಡೆ. ಮೂರೆಲೆಯ ಸಂಯುಕ್ತ ಪತ್ರದ ಈ ತಿಳಿ ಹಸಿರು ಬಳ್ಳಿ ಇತ್ತೀಚಿನ ದಿನಗಳಲ್ಲಂತೂ ಬಹಳಷ್ಟು ಬದಲಾವಣೆ ಕಂಡಿದೆ. ಸಂಶೋಧಕರ ಮಡಿಲಲ್ಲಿ ಮೀಟರ್ ನಷ್ಟುದ್ದ ಬೆಳೆದು ಮೀಟರ್ ಅಲಸಂಡೆ ಎಂದೇ ಕರೆಸಿಕೊಂಡಿದೆ. ಸಣ್ಣ ಎರಡಡಿ ಉದ್ದದ ಗಿಡ ಪೊದೆಯಾಗಿ ಬೆಳೆದೂ ಅಲಸಂಡೆ ನೀಡುತ್ತಿದೆ. ಕೆಲವು ಬೀಜಕ್ಕಾಗಿಯೇ ಬೆಳೆಯುವ ತಳಿಗಳೂ ಇವೆ. ಎಲ್ಲ ವಯೋಮಾನದವರೂ ಇಷ್ಟಪಡುವ ತರಕಾರಿಯೆಂದರೆ ಈ ಅಲಸಂಡೆ.
ಸಸ್ಯಗಳು ಮೊಳಕೆಯೊಡೆಯುವ ಅಂದ ನೋಡಬೇಕೆಂದರೆ ಅಲಸಂಡೆ ಬೀಜ ಹಾಕಬೇಕು. ಬೀಜ ಬಿತ್ತಿದ ಎರಡನೇ ದಿನವೇ ಮಣ್ಣಿನೊಳಗಿಂದ ಮೇಲೆದ್ದು ಕಾಣುವ ಮೊಳಕೆ ಭೂದೇವಿಗೆ ನಮಸ್ಕರಿಸುವಂತಿರುತ್ತದೆ! ಮೂರು ನಾಲ್ಕನೇ ದಿನಕ್ಕೆ ಅತ್ತಿತ್ತ ಎರಡೆಲೆಯ ನಡುವೆ ಇಣುಕುವ ಚಿಗರು "ಎಲ್ಲಿ ಹಬ್ಬಲಿ?" ಎಂದು ನಿಮ್ಮನ್ನೆ ಪ್ರಶ್ನಿಸುತ್ತದೆ. ಬೀಜವನ್ನು ಬೆಳಗ್ಗೆ ನೀರಲ್ಲಿ ನೆನೆಸಿಟ್ಟು ಸಂಜೆಗೆ ನೀರಿಳಿಸಿಟ್ಟು ಮರುದಿನ ಮಣ್ಣಲ್ಲಿ ಹಾಕಿದರೆ ಒಂದೇ ದಿನದಲ್ಲಿ ದ್ವಿದಳ ಹೊತ್ತ ದ್ವಿಪತ್ರ ಕಾಣಬಹುದು! ಇದು ಅವಸರವಸರವಾಗಿ ಲೋಕ ವ್ಯವಹಾರ ನಡೆಸಿ ಹೋಗಬೇಕಾದ ಅನಿವಾರ್ಯತೆಯಿಂದ ತನ್ನ ಬದುಕನ್ನು ವೇಗವಾಗಿ ವಿಜೃಂಭಣೆಯಿಂದಲೇ ಆರಂಭಿಸುತ್ತದೆ. ನೆಲದಲ್ಲೇ ಅಲ್ಲದೆ ಚಟ್ಟಿ, ಗೋಣಿ ಚೀಲ, ತೂತಾದ ಬಕೆಟ್ ಗಳಲ್ಲೂ ಇದರ ಕೃಷಿ ನಡೆಸಬಹುದು. ಗಾಳಿ ಬೆಳಕು ಸಾಕಷ್ಟಿದ್ದು ನೀರು ಬಸಿದು ಹೋಗುವ ಮಣ್ಣಾದರೂ ಹಿತವಾಗಿ ನೆಲೆಯೂರುತ್ತದೆ. ಕೆಲವೊಮ್ಮೆ ಬಳ್ಳಿ ಪೂರ್ತಿ ಸೊಪ್ಪೇ ತುಂಬಿ ಹೂವು ಬಾರದಾಗ ಬುದ್ಧಿವಂತ ಮಾನವ ಅದರ ಎಲೆಗಳನ್ನೆಲ್ಲಾ ಕತ್ತರಿಸಿ ಬುಡಕ್ಕೇ ಹಾಕಿ ಗೊಬ್ಬರವಾಗಿಸುತ್ತಾನೆ ಅಥವಾ ಜಾನುವಾರುಗಳಿಗೆ ಮೇವಾಗಿ ಉಣಿಸುತ್ತಾನೆ. ಸೊಪ್ಪು ಹೆಚ್ಚಾದಾಗ ಹೇನು, ಬಂಬುಚ್ಚಿಯ ಕಾಟವೂ ಹೆಚ್ಚು. ಕೆಂಪಿರುವೆಯನ್ನು ಅಲಸಂಡೆ ಬಳ್ಳಿಗೆ, ಅದರ ಚಪ್ಪರಕ್ಕೆ ಬರುವಂತೆ ತಂತ್ರ ಹೂಡಿದರೆ ಎಲ್ಲ ರೋಗಗಳಿಗೂ ಮುಕ್ತಿ! ಕೆಲವು ತಿರುವು ಮುರುವು ಆಗುವುದೂ ಇದೆ!. ಎಲೆಗಳನ್ನು ಬೋಳಿಸಿಕೊಂಡ ಅಲಸಂಡೆ ಬಳ್ಳಿ ಸಮುದ್ರದ ತೆರೆಗಳಂತೆ ಹೊಸ ಉಲ್ಲಾಸದಲ್ಲಿ ಬದುಕಿನ ಹೋರಾಟವನ್ನು ಪುನರಾರಂಭಿಸುತ್ತದೆ. ಈಗ ಮಾತ್ರ ತನ್ನೊಳಗೆ ಸ್ವಲ್ಪ ವ್ಯತ್ಯಾಸ ಮಾಡಿಕೊಂಡು ಎಲೆಗಳನ್ನೇ ಪುನ: ಸೃಷ್ಟಿಸಲಾರದೆ ಅದೇ ಸ್ಥಳದಲ್ಲಿ ಗುಚ್ಛದಂತೆ ಹೂಗಳು ಮೂಡಿ ಅರಳತೊಡಗುತ್ತವೆ. ಬಿಳುಪು, ಗುಲಾಬಿ, ನಸು ಹಳದಿ, ನಸು ನೇರಳೆ ವರ್ಣ ಮಿಶ್ರಣದ ದೊಡ್ಡ ಹಾಗೂ ಸಣ್ಣ ಐದೆಸಳಿನ ಹೂಗಳು ಒಂದೆರಡೇ ದಿನಗಳಲ್ಲಿ ಮಿಡಿಯಾಗಿ ಗೋಚರಿಸಿ ರಸಭರಿತ ತರಕಾರಿಯಾಗಿ ಬೆಳದೇಬಿಡುತ್ತದೆ. ಸಕಾಲದಲ್ಲಿ ಕೊಯ್ಯದೆ ಬಿಟ್ಟರೆ ಮೃದುವಾಗಿದ್ದ ಅಲಸಂಡೆಯಲ್ಲಿ ನಾರು ಬೆಳೆದು ತಿನ್ನುವ ಯೋಗ್ಯತೆ ಕಳೆದುಕೊಳ್ಳುತ್ತದೆ. ಬಳಿಕವೂ ಅದರ ರುಚಿಯಾದ ಬೀಜವು ವಿವಿಧ ಖಾದ್ಯಗಳಲ್ಲಿ ಬಳಕೆಯಾಗುತ್ತದೆ. ಬೆಳೆದ ಅಲಸಂಡೆಯನ್ನು ಕೆಂಡದಲ್ಲಿ ಬೇಯಿಸಿ ತಿಂದರೂ ವಿಶಿಷ್ಟ ರುಚಿ ನೀಡುತ್ತದೆ.
ಅಲಸಂಡೆ ಒಂದು ಏಕ ಋತು ಸಸ್ಯ. ಕೇವಲ ಮೂರು ತಿಂಗಳ ಬಾಳಿನಲ್ಲಿ ಗಿಡ, ಬಳ್ಳಿ, ಹೂ, ಕಾಯಿ, ಬೀಜವಾಗಬೇಕಿದೆ. ಈ ಸೀಮಿತ ಅವಧಿಯಲ್ಲಿ ಅಧಿಕ ಇಳುವರಿ ಬಯಸುವ ರೈತರಿಗೆ ಸಂಶೋಧಕರು ಹಲವಾರು ತಳಿಗಳನ್ನು ನೀಡಿದ್ದಾರೆ. ಮೇ ತಿಂಗಳಿಂದ ಜುಲೈ ಹಾಗೂ ಡಿಸೆಂಬರ್ ನಿಂದ ಜನವರಿಯವರೆಗೆ ಎರಡು ಬಾರಿ ಬೆಳೆಸಬಹುದು. ಪುಸಾ ಫಲ್ಗುಣಿ ತಳಿ ಗಿಡ್ಡ ಗಿಡಗಳ ಪೊದೆಯಾಗಿದ್ದು 60 ದಿನಗಳ ಬಳಿಕ 12 ಸೆಂ.ಮೀ. ಉದ್ದದ ಕಾಯಿ ನೀಡಲಾರಂಭಿಸಿದರೆ ಪುಸಾ ಬರಸಾತಿ ಎಂಬ ತಳಿ 45 ದಿನಗಳಲ್ಲೇ ಕಟಾವಿಗೆ ಸಿದ್ಧವಾಗುತ್ತದೆ. ಹೀಗೆ ಕೆಲವು ತಳಿ ಒಂದು ಹೆಕ್ಟೇರಿಗೆ 18 ಟನ್ ಇಳುವರಿ ನೀಡುವದೂ ಉಂಟು. ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆ ಬೆಂಗಳೂರು ಅಭಿವೃದ್ಧಿ ಪಡಿಸಿದ ಅರ್ತಾಸುಮನ್ ತಳಿ ಪೊದೆಯಾಕಾರವಿದ್ದು ನೇರವಾಗಿ ಬೆಳೆಯುತ್ತದೆ. ಇದು ಎಲ್ಲಾ ಕಾಲದಲ್ಲೂ ಕಾಯಿ ನೀಡುವುದಲ್ಲದೆ ಗಿಡದ ಮೇಲ್ಭಾಗದಲ್ಲಿಯೆ ಕಾಣಿಸುತ್ತದೆ. ಕರಾವಳಿಗೆ ಪುಸಾ ಬರಸಾತಿ, ಪುಸಾದೋ ಫಸ್ಲಿ , S288 ತಳಿಗಳು ಸೂಕ್ತವೆನ್ನಲಾಗಿದೆ.
ವೈಜ್ಞಾನಿಕವಾಗಿ ವಿಗ್ನಾ ಸೈನೆನ್ಸೀಸ್ ಎಂದು ಕರೆಸಿಕೊಳ್ಳುವ ನಿಷ್ಪಾಪಿ ಸಸ್ಯವಾದ ಅಲಸಂಡೆಯು ಫ್ಯಾಬೇಸಿ ಕುಟುಂಬದ ಫ್ಯಾಬಾಯ್ಡೀ ಉಪಕುಟುಂಬಕ್ಕೆ ಸೇರಿದೆ. ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ರಂಜಕ, ವಿಟಮಿನ್ B ಸಮೃದ್ಧವಾಗಿರುವ ಅಲಸಂಡೆ ಯು ಹೃದಯದ ಆರೋಗ್ಯಕ್ಕೆ ಉತ್ತಮ. ಒತ್ತಡ, ಆತಂಕ, ನಿದ್ರಾಹೀನತೆ ನಿವಾರಕ. ಮಲವಿಸರ್ಜನೆಗೆ ನೆರವು ನೀಡುತ್ತದೆ. ನೆಲದ ಫಲವತ್ತತೆ, ಸಾರಜನಕ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಹಿತ್ತಲಲ್ಲಿ ಒಂದೆರಡು ಬಳ್ಳಿ ಇದ್ದರೂ ನಿಮಗದು ಮೋಸ ಮಾಡದು. ಹಿಂದಿನ ತಳಿಗಳು ಒಲೆಯಲ್ಲಿ ಬೇಯುವಾಗಲೇ ಸುವಾಸನೆ ಹರಡುತ್ತಿದ್ದರೆ ಈಗಿನ ತಳಿಗಳು ಅರ್ದ ಬೆಂದಾಗಲೇ ಕರಗಿರುತ್ತವೆ. ರುಚಿಯಲ್ಲೂ ವ್ಯತ್ಯಾಸವಿರುತ್ತದೆ. ಆದರೆ ಹೆಚ್ಚು ಹಣ ಗಳಿಸುವ ಇರಾದೆಯಿಂದ ಎಲ್ಲದರಲ್ಲೂ ರಾಜಿ ಮಾಡಿಕೊಳ್ಳುವುದು ಅನಿವಾರ್ಯ. ನಾವೇ ಬೆಳೆಸಿದರೆ ಇನ್ನೂ ಉತ್ತಮವಲ್ಲವೇ?
ಸರಿ ಮಕ್ಕಳೇ.. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ... ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************