-->
ಪಯಣ : ಸಂಚಿಕೆ - 63 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 63 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 63 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ

ಕಳೆದ ವಾರ ತಿಳಿಸಿದಂತೆ ಇಂದಿನ ಪ್ರವಾಸದಲ್ಲಿ ಮೈಸೂರಿನ ಮತ್ತೊಂದಿಷ್ಟು ಪ್ರವಾಸಿ ತಾಣದ ಬಗ್ಗೆ ತಿಳಿಯೋಣವೇ.... ಮತ್ತೇಕೆ ತಡ ಬನ್ನಿ.... ನಮ್ಮೀ ಕನ್ನಡ ನಾಡಿನ ಸಾಂಸ್ಕೃತಿಕ ಕೇಂದ್ರವಾಗಿರುವ "ಮೈಸೂರು ಜಿಲ್ಲೆಯ ಹಲವು ಪ್ರವಾಸ ತಾಣ" ಗಳಿಗೆ ಪಯಣ ಮಾಡೋಣ ಬನ್ನಿ....
                 
                  (ಮುಂದುವರಿದ ಭಾಗ....) 

ಮೈಸೂರಿನ ಮ್ಯೂಸಿಯಂ ಗಳು....

ನಮ್ಮ ಧರ್ಮ - ಮತ ದೊಡ್ಡದು ಎಂದು ಗುದ್ದಾಡುವವರಿಗೆ 'ಬುದ್ಧಿ ಹೇಳುವ ಸ್ಥಳ. ಪ್ರವಾಸಿಗರು ಮುಖ್ಯವಾಗಿ ಸಂದರ್ಶಿಸಬೇಕಾದ ತಾಣ. ಧರ್ಮಗಳ ವೈಶಿಷ್ಟ್ಯಗಳನ್ನು ಅರಿಯುವ ವಿಶಾಲ ಮನಸ್ಸಿನವರಿಗೆ ಕಲಿಕಾ ಶಾಲೆ. ಶಾಂತ ವಾತಾವರಣದ ವಸ್ತುಸಂಗ್ರಹಾಲಯವೂ ಹೌದು!.

ಮೈಸೂರಿನ ವಿವಿಧ ತಾಣಗಳನ್ನು ನೋಡಬರುವ ಸಂದರ್ಶಕರು ತಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದಾದ ಹೊಸ ಹೆಸರಿದು. ಮುಖ್ಯವಾಗಿ ಮಕ್ಕಳು ನೋಡಲೇಬೇಕಾದ ಜಾಗ.

ಅದು ಮೈಸೂರಿನ ಯಾದವಗಿರಿಯ 'ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯಲ್ಲಿರುವ ಸರ್ವಧರ್ಮ ಸಮನ್ವಯ ಮ್ಯೂಸಿಯಂ', ಇಲ್ಲಿ ನೀವು ಇಡೀ ಜಗತ್ತಿನ ವಿವಿಧ ಧರ್ಮ, ಸಂಪ್ರದಾಯ, ದೇವಾಲಯಗಳ ಮಾಹಿತಿ, ಪೂಜೆ, ಪುನಸ್ಕಾರಗಳ ಮಹತ್ವ, ಮಹಾತ್ಮರ ಜೀವನ ಸಂದೇಶ, ಎಲ್ಲ ಧರ್ಮಗಳ ಸಮನ್ವಯತೆ ಬಗ್ಗೆ ಅರಿಯಬಹುದು.

ಈ ಮ್ಯೂಸಿಯಂ ಪ್ರವೇಶಿಸುತ್ತಿದ್ದಂತೆಯೇ 'ಕ್ರೈಸ್ತ, ಹಿಂದು ಅಥವಾ ಬೌದ್ಧನಾಗಬೇಕಿಲ್ಲ. ಹಿಂದುವಾಗಲೀ, ಬೌದ್ಧನಾಗಲೀ, ಕ್ರೈಸ್ತನಾಗಬೇಕಿಲ್ಲ. ಪ್ರತಿಯೊಬ್ಬರೂ ಇತರರ ಮನೋಭಾವವನ್ನು ಗ್ರಹಿಸಬೇಕು. ಆದರೆ, ತನ್ನ ವೈಯಕ್ತಿಕತೆಯನ್ನು ಉಳಿಸಿಕೊಂಡು ತನ್ನದೇ ಬೆಳವಣಿಗೆಯ ನಿಯಮಗಳಿಗೆ ಅನುಗುಣವಾಗಿ ಬೆಳೆಯಬೇಕು' ಎಂಬ ಸ್ವಾಮಿ ವಿವೇಕಾನಂದರ ಸಂದೇಶ ಸ್ವಾಗತಿಸುತ್ತದೆ. ಇದರ ಅರ್ಥ ಎಲ್ಲ ಧರ್ಮಗಳು ಸಹ ಒಬ್ಬ ಭಗವಂತನನ್ನು ಸೇರುವ ವಿವಿಧ ಮಾರ್ಗಗಳು ಎಂದು.

ಹಿಂದೂ, ಮುಸ್ಲಿಂ, ಬೌದ್ಧ, ಕ್ರೈಸ್ತ, ಜೈನ, ಸಿಖ್ ಎಲ್ಲ ಧರ್ಮಗಳ ಪೂಜಾ ವಿಧಿವಿಧಾನ ಹೇಗಿರುತ್ತದೆ ? ಪೂಜೆ ಮಾಡುವುದು ಏತಕ್ಕೆ? ಪೂಜಾ ಸಾಮಗ್ರಿಗಳಿಗೆ ಇರುವ ಮಹತ್ವವೇನು? ನಮಾಜ್ ಮಾಡುವುದು ಹೇಗೆ? ನಮಾಜ್ ಮಾಡುವಾಗ ಹೇಳುವುದೇನು? ಅದರ ಉದ್ದೇಶವೇನು? ಎಂಬ ವಿವರವಿದೆ.

ಅಲ್ಲಿಂದ ಮುಂದೆ ಕಣ್ಣಾಡಿಸಿದರೆ, ಧರ್ಮಗ್ರಂಥಗಳು, ತಾಳೆಗರಿಗಳು, ನಳಂದ ವಿವಿ ಕುರಿತ ಮಾಹಿತಿ, ಜೈನ ಧರ್ಮದ ಮಾಹಿತಿ ಅನಾವರಣಗೊಳ್ಳುತ್ತದೆ. ಜೈನಧರ್ಮದ 24 ವಿವಿಧ ತೀರ್ಥಂಕರರ ವಿವರ, ಹುಟ್ಟಿದ ದಿನಾಂಕ ಮೊದಲಾದ ಮಾಹಿತಿ ಇದೆ. ಜೈನಧರ್ಮದ ಮೂಲ ತತ್ವಗಳು, ಮಾರ್ಗದರ್ಶಕ ಸೂತ್ರಗಳು, ನೈತಿಕ ಗುಣಗಳು, ಯಾತ್ರಾಸ್ಥಳಗಳು, ದೇವಸ್ಥಾನ ಹಾಗೂ ಅವರು ಕೈಗೊಳ್ಳುವ ಹಬ್ಬಗಳು, ಅವುಗಳಿಗೆ ಇರುವ ಮಹತ್ವ ದೊರಕುತ್ತದೆ. ನಂತರ ಕ್ರೈಸ್ತ ಧರ್ಮದ ಮಾಹಿತಿ ಇದೆ. ಪಕ್ಕದಲ್ಲಿ ಬುದ್ಧ, ಮಹಾವೀರ, ಜೀಸ್, ಕ್ರೈಸ್ಟ್, ಮಹಮದ್‌, ಗುರುನಾನಕ್, ಶ್ರೀರಾಮಕೃಷ್ಣ ಪರಮಹಂಸ, ತ್ಯಾಗರಾಜ, ತುಳಸೀದಾಸ್, ಸ್ವಾಮಿ ವಿವೇಕಾನಂದ, ತುಕರಾಂ, ಶ್ರೀಶಂಕರಾಚಾರ್ಯ, ಶಾರದಾದೇವಿ ಮೊದಲಾದ ಮಹಾತ್ಮರು, ಸಂತರ ಜೀವನ ಸಂದೇಶಗಳಿವೆ.

ಅಜಂತಾ, ಎಲ್ಲೋರ, ಭರತದ ಕೋಟೆ ದೇವಸ್ಥಾನಗಳು, ಸಾಹಿತ್ಯ, ನೃತ್ಯ, ಶಿಲ್ಪಕಲೆ ವಿವಿಧ ರೀತಿಯ ನಾಣ್ಯಗಳು, ಆಭರಣಗಳು, ಸಂಸ್ಕೃತಿ, ವಾಸ್ತುಶಿಲ್ಪ-ಸಂಪ್ರದಾಯದ ಪ್ರತಿಬಿಂಬ ಅದು.

ವಿಜ್ಞಾನ ಕ್ಷೇತ್ರಕ್ಕೆ ಭಾರತದ ಕೊಡುಗೆ, ಶಿವನ ದೇವಸ್ಥಾನ, ಬುದ್ಧ ಸ್ತೂಪ, ಮಾದರಿ ದೇವರಮನೆ, ಯಜ್ಞ ಯಾಗಾದಿಗಳನ್ನು ಕೈಗೊಳ್ಳುತ್ತಿದ್ದುದು ಹೇಗೆ? ಪುರಾತನ ಭಾರತೀಯ ನಾಗರೀಕತೆ ಹೇಗಿತ್ತು? ಭಾರತೀಯ ವರ್ಣಶಿಲ್ಪದ ಮಹತ್ವವೇನು ಎಂಬುದನ್ನು ಮಾದರಿ ಸಮೇತ ಅರಿಯಬಹುದು.

"ನಮ್ಮ ನಾಡಿನ ಸಾಂಸ್ಕೃತಿಕ ನಗರವಾದ ಮೈಸೂರಿನ ಹಲವಾರು ಮ್ಯೂಸಿಯಂ ನ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸಲಾಗಿದೆ. ಸರ್ವ ಧರ್ಮದ ಸಮನ್ವಯದ ಕೇಂದ್ರವಾದ ಮೈಸೂರು ಗತಕಾಲದ ಅನೇಕ ಕುರುಹುಗಳ ತವರೂರು ಎಂದರೆ ತಪ್ಪಾಗಲಾರದು.

ಬನ್ನಿ ಮೈಸೂರಿನ ಅಂದ ಚಂದವ ಸವಿಯೋಣ..
     [ಮುಂದುವರಿಯುವುದು...]

ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************



Ads on article

Advertise in articles 1

advertising articles 2

Advertise under the article