ನಿಷ್ಪಾಪಿ ಸಸ್ಯಗಳು : ಸಂಚಿಕೆ - 122
Thursday, October 2, 2025
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 122
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.. ಹೇಗಿದ್ದೀರಿ.. ದಸರಾ ರಜೆಯಲ್ಲಿ ಸಂತೋಷವಾಗಿರುವಿರಲ್ಲವೇ? ತಮಗೆಲ್ಲರಿಗೂ ಈ ದಿನ ವಿಜಯದಶಮಿ, ರಾಷ್ಡ್ರಪಿತ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ ಜನ್ಮ ದಿನದ ಶುಭಾಶಯಗಳು.
ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಮನೆಗಳಲ್ಲೊಂದು ಪರಿಪಾಠವಿದೆ. ಇಲ್ಲಿನ ಗೃಹಿಣಿಯರಿಗೆ ಸುಲಭವಾಗಿ ಕೈಗೆ ಸಿಗುವ ಒಂದಿಷ್ಟು ಹಸಿ ತರಕಾರಿ ಸೊಪ್ಪುಗಳನ್ನು ಅನವರತ ಬೆಳೆಸುವ ಅಭ್ಯಾಸ ಅಥವಾ ಹವ್ಯಾಸವೆಂದರೂ ಸರಿ. ಅವುಗಳಾವುವೆಂದರೆ ಒಂದು ಬಸಳೆ ಚಪ್ಪರ, ಒಂದೆರಡು ತೊಂಡೆ ಬಳ್ಳಿ. ಏನೂ ಇಲ್ಲವೆಂದಾಗ ಅದರ ಬುಡಕ್ಕೆ ಹೋಗಿ ಒಂದಿಷ್ಟು ಕೈಯಾಡಿಸಿ ಏನೋ ಒಂದೆರಡು ಹೊತ್ತಿನ ತುತ್ತಿಗೆ ಮೇಲೋಗರ ಮಾಡಿಯೇ ಬಿಡುತ್ತಾರೆ. ಇದರಲ್ಲೂ ಬಸಳೆ ನಿತ್ಯ ನೂತನ! ಅದರ ಹೊಳೆಯುವ ಹಸಿರು ಸೊಪ್ಪು , ಅದರ ದಪ್ಪಕುಡಿಗಳು ಅತ್ಯಾಕರ್ಷಕ. ಅಮ್ಮ ಮಾಡುವ ಬಸಳೆ ಸಾರಲ್ಲಿ ಅದರ ಬೆಂದ ತುದಿಗಳನ್ನು ಹುಡುಕಿ ಚೀಪಿ ತಿನ್ನುವ ರುಚಿ ತಿಂದವರಿಗಷ್ಟೇ ಗೊತ್ತು. ಈಗಿನ ಬೇಕರಿ ಲಟ್ಟಾಸು ತಿಂಡಿಗಳನ್ನೇ ಬಲು ರುಚಿಯೆಂದು ಸಂಭ್ರಮಿಸುವ ನಾಲಿಗೆಗೆ ಒಮ್ಮೆ ಬಸಳೆ ಹುರುಳಿ, ಬಸಳೆ ತೊಗರಿಬೇಳೆ, ಬಸಳೆ ಪಪ್ಪಾಯಿ, ಬಸಳೆ ಪುಂಡಿ, ಬಸಳೆ ನರ್ತೆ, ಬಸಳೆ ಮರ್ವಾಯಿ ತಿನಿಸಬೇಕು.
ಬಸಳೆ ಬಜ್ಜಿ, ಬಸಳೆ ಸೂಪ್, ಬಸಳೆ ತಂಬುಳಿ, ಬಸಳೆ ಸಾಂಬಾರ್ ಹೀಗೆ ನಾನಾ ರೀತಿಯಲ್ಲಿ ಬಳಸಲ್ಪಡುವ ಬಸಳೆಯನ್ನು ಬೆಳೆಯುವುದು ಬಹಳ ಸುಲಭ. ತೊಟ್ಟಿಲಿನಂತೆ ಗುಂಡಿಮಾಡಿ ಅದಕ್ಕೆ ಹಟ್ಟಿಯಲ್ಲಿರುವ ಪುಡಿ ಗೊಬ್ಬರ ಹಾಕಿ ಅದರ ಮೇಲೆ ಕೆಂಪು ಮಣ್ಣನ್ನು ಹರಡಿ ಬಸಳೆಯ ಬಳ್ಳಿಯು ಬಲಿತ ಕಾಂಡದ ಕಡೆಯನ್ನು ಹಲ್ಲಿನಲ್ಲಿ ಸ್ವಲ್ಪ ಜಜ್ಜಿದಂತೆ ಜಗಿದು ಮೂರು ಮೂರುರಂತೆ ಒಂಭತ್ತು ಬಳ್ಳಿಗಳನ್ನು ಊರುತ್ತಿದ್ದರು. ಅವುಗಳ ನಡುವೆ ಮೊದಲೇ ನೆಟ್ಟ ಆಧಾರ ವೊಂದಕ್ಕೆ ಈ ಮೂರು ಬಳ್ಳಿಗಳನ್ನು ಕಟ್ಟಿ ಸುತ್ತಲೂ ಅಡಿಕೆ ಸೋಗೆ ಕಟ್ಟಿಬಿಟ್ಟರೆ ವಾರ ಕಳೆದಾಗ ಬಳ್ಳಿಯ ತುದಿ ಕಣ್ಣು ಮಿಟುಕಿಸಿ ಮುಂದಿನ ವಾರ ಮರಿ ಎಲೆಗಳು ಹುಟ್ಟಿಕೊಳ್ಳುತ್ತಿದ್ದವು. ಮತ್ತೆ ಒಂದು ವಾರದಲ್ಲಿ ಗೇಣಷ್ಟು ಬೆಳೆದ ಬಳ್ಳಿಗಳಿಗೆ ಉದ್ದಕ್ಕೆ ಚಾಚಿಕೊಳ್ಳಲು ಚಪ್ಪರ ಹಾಕುವ ಕಾರ್ಯ ತರಾ ತುರಿಯಲ್ಲಿ ಮುಗಿಯುತ್ತಿತ್ತು. ಚಪ್ಪರ ರೆಡಿಯಾಗದಿದ್ದರೆ ತುದಿ ಕೆಳಗೆ ಬಗ್ಗಿ ಬೆಳವಣಿಗೆ ಕುಂಠಿತವಾಗುತ್ತದೆಯೆಂದೂ ಬಳ್ಳಿ ತುಂಬಾ ಎಲೆ ಮತ್ತು ಶಾಖೆಗಳನ್ನು ಬೆಳೆಸಬೇಕೆಂದರೆ ಸ್ವಲ್ಪ ಸ್ವಲ್ಪವೇ ಉದ್ದ ಬಿಟ್ಟು ಕತ್ತರಿಸುತ್ತಿರಬೇಕೆಂದು ಅಮ್ಮನಿಗೆ ಗೊತ್ತಿತ್ತು. ಚಳಿಗಾಲದಲ್ಲಿ ತೆಳ್ಳಗಾಗುವ ಬಳ್ಳಿಯಿಡೀ ಬಿಳಿ ಗೊಂಚಲು ಗೊಂಚಲು ಹೂ. ಆವಾಗ ಬಸಳೆಯನ್ನು ಇಷ್ಟಪಡುವವರು ಕಡಿಮೆ. ಹೂವಿರುವ ಬಳ್ಳಿಯನ್ನು ಕತ್ತರಿಸಿ ಹೊಸ ಚಿಗುರಿಗೆ ಆಸ್ಪದ ಮಾಡಿಕೊಟ್ಟು ಸೆಗಣಿ ನೀರು, ನೆಲಕಡಲೆ ಹಿಂಡಿ, ಮೀನಿಗೆ ಹಾಕಿದ್ದ ಐಸ್ ನೀರನ್ನು ಬುಡಕ್ಕೆ ಸುರಿಯುತ್ತಾರೆ.
ಬಸಳೆ ಬಳ್ಳಿ ಜಾತಿಯ ಬಹುವಾರ್ಷಿಕ ಸಸ್ಯ. ಇದರಲ್ಲಿ ಹಸಿರು ಮತ್ತು ಕೆಂಪು ಎರಡು ಜಾತಿಗಳಿವೆ. ಬ್ಯಾಸೆಲ್ಲ ರೂಬ್ರ ಇದರ ವೈಜ್ಞಾನಿಕ ಹೆಸರಾಗಿದ್ದು ಬ್ಯಾಸಲೇಸೀ ಕುಟುಂಬಕ್ಕೆ ಸೇರಿದೆ. ಭಾರತ, ಆಗ್ನೇಯ ಏಷ್ಯ, ನ್ಯೂಗಿನಿಗೆ ಸ್ಥಳೀಯವಾಗಿರುವ ಬಸಳೆ ಚೀನಾ, ಬ್ರೆಜಿಲ್, ಮಲೇಷ್ಯಾ, ಆಫ್ರಿಕಾ, ಅಮೇರಿಕಾಗಳಲ್ಲೂ ಜನಪ್ರಿಯವಾಗಿದೆ. ಯಥೇಚ್ಛವಾಗಿ ನೀರು, ಹೇರಳವಾದ ಬಿಸಿಲು, ಮರಳು ಮಿಶ್ರಿತ ಫಲವತ್ತಾದ ಮಣ್ಣು ಇದ್ದರೆ ಬೀಜ ಅಥವಾ ಬಲಿತ ಕಾಂಡದಿಂದ ಸಂತಾನ ಬೆಳೆಸುವ ನಿಷ್ಪಾಪಿ ಸಸ್ಯವಾದ ಬಸಳೆಯು ತರಕಾರಿಯಾಗಿ ಮಾತ್ರವಲ್ಲದೆ ಔಷಧಿಯಾಗಿಯೂ ಉಪಕಾರಿಯಾಗಿದೆ. ಇದರಲ್ಲಿ ಹೇರಳವಾಗಿ ವಿಟಮಿನ್ ಎ, ಸಿ ಹಾಗೂ ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ದೊರೆಯುತ್ತದೆ. ಇದು ಹಲ್ಲು ಮತ್ತು ಮೂಳೆಯ ಆರೋಗ್ಯಕ್ಕೆ ಸಹಕಾರಿ. ಇದರಲ್ಲಿರುವ ಪೋಲೇಟ್ ಅಂಶ ಖಿನ್ನತೆ ಆತಂಕ ಕಡಿಮೆಗೊಳಿಸುವ ಗುಣ ಹೊಂದಿದೆ ಹಾಗೂ ರಕ್ತದ ಹಿಮೋಸಿಸ್ಟಿನ್ ಮಟ್ಟ ತಗ್ಗಿಸಿ ಹೃದಯ ಸ್ಥಂಭನ, ಪಾರ್ಶ್ವವಾಯುವಿಗೆ ಕಾರಣವಾದ ಹೃದಯದ ರಕ್ತನಾಳಗಳ ಸಮಸ್ಯೆಗಳಿಗೆ ಮುಕ್ತಿ ನೀಡುತ್ತದೆ. ಮೃದುವಾದ ಎಲೆ ಮತ್ತು ಕಾಂಡ ಹೊಂದಿರುವ ಬಸಳೆ ರಸವತ್ತಾಗಿರುತ್ತದೆ. ಇದನ್ನು ಹಸಿಯಾಗಿ ಜಗಿಯುವುದರಿಂದ ಬಾಯಿ ಹುಣ್ಣು ನಿವಾರಣೆಯಾಗುತ್ತದೆ ಹಾಗೂ ಅಂಗಾಲಿಗೆ ಹೆಚ್ಚುವುದರಿಂದ ಅಂಗಾಲು ಉರಿ ಕಡಿಮೆಯಾಗುವುದು. ಇದರಲ್ಲಿರುವ ನೈಸರ್ಗಿಕ ರಾಸಾಯನಿಕಗಳು ಚರ್ಮದ ಕಾಂತಿ ಹಚ್ಚಿಸುವುದೇ ಅಲ್ಲದೆ ವಯಸ್ಸಿನ ಗುರುತುಗಳನ್ನು ತಡೆಯುತ್ತದೆ. ಆಂಟಿಎಕ್ಸಿಡೆಂಟ್, ಬೀಟಾ ಕ್ಯಾರೆಟಿನ್, ಲುಟೀನ್ ಗಳನ್ನು ಹೊಂದಿದ್ದು ಅಲ್ಜೀಮರ್, ಡೆಮೆನ್ಷಿಯದಂತಹ ಕಾಯಿಲೆಗಳಿಂದ ರಕ್ಷಣೆ ನೀಡಿ ನೆನಪಿನ ಶಕ್ತಿ ವೃದ್ಧಿಸುತ್ತದೆ. ಕರುಳಿನ, ಸ್ತನ, ಶ್ವಾಸಕೋಶದ ಕ್ಯಾನ್ಸರ್, ಬ್ರೈನ್ ಟ್ಯೂಮರ್ ಗಳಿಗೂ ನಿಯಮಿತ ಬಸಳೆ ಸೊಪ್ಪಿನ ಸೇವನೆಯಿಂದ ದೂರ ಸರಿಯುತ್ತದೆ.
ಗರ್ಭಿಣಿ ಸೇವಿಸಿದರೆ ಜನಿಸುವ ಮಗುವಿನ ಬೆಳವಣಿಗೆಗೆ, ಮೂಳೆ ಗಳ ಬೆಳವಣಿಗೆಗೆ ಬಹಳ ಮುಖ್ಯವಾಗುತ್ತದೆ. ತೂಕದ ಹೆಚ್ಚಳಕ್ಕೆ ಕಾರಣವಾಗುವ ಬಸಳೆ ನಾರಿನಿಂದ ಕೂಡಿರುವುದರಿಂದ ಮಲಬದ್ದತೆ ನಿವಾರಿಸುತ್ತದೆ. ಎಲೆಯನ್ನು ಅರೆದು ಮುಖಕ್ಕೆ ಹೆಚ್ಚುವುದರಿಂದ ಸೌಂದರ್ಯ ವೃದ್ಧಿಸುವುದು. ರಕ್ತದೊತ್ತಡ, ಅನಿಮಿಯಾ, ಮಧುಮೇಹ ತಡೆಯಲು ಉತ್ತಮವಾಗಿರುವ ಬಸಳೆ ಕಡಿಮೆ ಕ್ಯಾಲೊರಿ ಹೊಂದಿದ್ದು ಜೀವಕ್ಕೇ ಮಾರಕ ಅಂಶಗಳಿಂದ ರಕ್ಷಣೆ ನೀಡುತ್ತದೆ.
ಮಕ್ಕಳೇ ಇಷ್ಟೆಲ್ಲ ಸಹಕಾರ ನೀಡುವ ಬಸಳೆಯನ್ನು ಕುಂಡದಲ್ಲೂ ಬೆಳೆಸಬಹುದು. ಇದನ್ನು ನೀವು ತಿನ್ನಲು ಅಭ್ಯಾಸ ಮಾಡಲೇ ಬೇಕು. ಯಾವುದೇ ರಾಸಾಯನಿಕ ವಸ್ತುಗಳ ಬಳಕೆ ಬೇಡದೆ ಬೆಳೆಯುವ ಬಸಳೆಯನ್ನು ನಾವು ಪ್ರೀತಿಯಿಂದ ಸೇವಿಸಲೇ ಬೇಕಲ್ಲವೆ? ಸರಿ ಮಕ್ಕಳೇ ಬರುವ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿದು ಕೊಳ್ಳೋಣ, ನಮಸ್ತೆ
ಸರಿ ಮಕ್ಕಳೇ.. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ... ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************