-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 188

ಸ್ಫೂರ್ತಿಯ ಮಾತುಗಳು : ಸಂಚಿಕೆ - 188

ಸ್ಫೂರ್ತಿಯ ಮಾತುಗಳು : ಸಂಚಿಕೆ - 188
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                                 

ಮರಣದಿಂ ಮುಂದೇನು? ಪ್ರೇತವೋ? ಭೂತವೋ? ।
ಪರಲೋಕವೋ? ಪುನರ್ಜನ್ಮವೊ? ಅದೇನೋ! ॥
ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ ।
ಧರೆಯ ಬಾಳ್ಗದರಿನೇಂ? - ಮಂಕುತಿಮ್ಮ ॥ 
ಸಾವಿನ ನಂತರ ಮುಂದೇನು ಎಂಬುದು ಎಲ್ಲರ ಸಹಜ ಪ್ರಶ್ನೆ. ಈ ಪ್ರಶ್ನೆಗೆ ಉತ್ತರಕೊಡಲು ಅನುಭವಗಳಿಸಿದವರು ಯಾರೂ ಈ ಭೂಮಿಯ ಮೇಲೆಯಿಲ್ಲ. ಆದರೆ ಭಾರತೀಯರಾದ ನಮಗೆ ಕರ್ಮಸಿದ್ಧಾಂತ, ಮೋಕ್ಷ, ಸ್ವರ್ಗ, ನರಕ, ಪಾಪ, ಪುಣ್ಯಗಳ ಮೇಲೆ ಅಪಾರ ಶ್ರದ್ಧೆಯೂ ಇದೆ. ಪುಟ್ಟ ಜೀವಿತದ ಅವಧಿಯಲ್ಲಿ ಗಳಿಸಬೇಕೆನ್ನವುದು ಪ್ರತಿಯೊಬ್ಬರ ಆಶೆ. ಇಲ್ಲಿ ಆಶೆಯೆಂದರೆ ಸದುದ್ದೇಶದ ಗುರಿ ಅಥವಾ ಹಿರಿದಾದ ಆಸೆ. 
ಹಣ್ಣು ಹಣ್ಣು ಮುದುಕ, ನಡುಗುವ ದೇಹ, ಊರುಗೋಲಿಲ್ಲದೆ ಒಂದು ಹೆಜ್ಜೆಯನ್ನೂ ಮುಂದಿಡುವ ಸ್ಥಿಯಲ್ಲಿಲ್ಲ, ಚರ್ಮದಲ್ಲಿ ಸುಕ್ಕು ಆವರಿಸಿದೆ, ಕಿವಿ ಸರಿಯಾಗಿ ಕೇಳಿಸುವುದಿಲ್ಲ, ದೃಷ್ಟಿ ಸಂಪೂರ್ಣ ಮಂದವಾಗಿದೆ. ಹಲ್ಲುಗಳುದುರಿ ಮಾತು ಅಸ್ಪಷ್ಟವಾದ ಸ್ಥಿತಿ. ಆದರೆ ಇನ್ನೂ ಏನನ್ನೋ ಗಳಿಸುವ ಆಸೆ ಅವನಿಗೆ. ಈ ಆಸೆಗೆ “ಪೋಕಾಲ” ಎಂದು ಹಳ್ಳಿಯಲ್ಲಿ ಮಾತನಾಡುವುದೂ ಇದೆ. “ಪೋಕಾಲ” ವೆಂದು ಸಾವು ಸಮೀಪಿಸಿರುವುದನ್ನು ಉಲ್ಲೇಖಿಸುವುದಾಗಿದೆ.

ಆಶೆಗಳು ಯುವಕರಲ್ಲಿದ್ದರೆ ಗಳಿಸುವ ಸಾಧ್ಯತೆಯಿದೆ. ಮನದಲ್ಲಿ ಹುಟ್ಟುವ ಆಸೆಗಳಿಗೆ ಕೊನೆಯೇ ಇಲ್ಲವೇಂಬ ಮಾತಿದ್ದರೂ ವೃದ್ಧರಾದ ನಂತರ ನಿಶ್ಚಿತವಾಗಿಯೂ ಆಸೆ ಕೈಗೂಡುವುದು ಕಷ್ಟಸಾಧ್ಯ. ಆದುದರಿಂದ ಒಂದೇ ದಾರಿ. ಪ್ರಾಯವೇರುತ್ತಿದ್ದಂತೆ ನಿಧಾನವಾಗಿ ಮತ್ತು ಹಂತ ಹಂತವಾಗಿ ನಂತರ ಸಂಪೂರ್ಣ ಪ್ರಮಾಣದಲ್ಲಿ ಆಸೆಯನ್ನು ತೊರೆಯಲೇಬೇಕು. ಆಸೆ ಮುಕ್ತರಾದರೆ ಮೋಕ್ಷ ಅಥವಾ ಸದ್ಗತಿ ದೊರೆಯುತ್ತದೆ. ವಯಸ್ಸು ಮುಕ್ತಿಗಾಗಿ ಹಂಬಲಿಸಿ ದೇವರ ಭಕ್ತಿಯಲ್ಲಿ ತೊಡಗಿದರೆ ಮರಣದ ನಂತರ ಪ್ರೇತವೂ, ಪಿಶಾಚಿಯೋ ಆಗದೆ "ಮುಕ್ತಿ"ಯಾಗುತ್ತದೆ. ಭಕ್ತಿ ಯು ಹೆಚ್ಚಾದಂತೆ ಆಸೆಯು ಕಡಿಮೆಯಾಗಿ ಮುಕ್ತಿಯ ಮಾರ್ಗ ಅತ್ಯಂತ ಸುಲಭವಾಗಬಹುದು. 

ನಿಜವಾಗಿಯೂ ಮೋಕ್ಷ ಬೇಕಾಗಿರುವುದು ಸಾವಿಗಿಂತ ಮೊದಲು. ಆಸೆಗಳಿಂದ ಪಡೆಯುವ ಮುಕ್ತಿಯೇ ಆ ಮೋಕ್ಷ. ಆಸೆ ಅಥವಾ ಮೋಹ ಕಳೆದರೆ ಮಾತ್ರ ಪರಮಾತ್ಮನಲ್ಲಿ ಒಂದಾಗಲು ಸಾಧ್ಯ. ಹಣದ ವ್ಯಾಮೋಹ, ಸಂಪತ್ತಿನ ಮೋಹ, ಅಧಿಕಾರದ ಮೋಹ, ಹೊನ್ನು ಒಡವೆಗಳ ಮೋಹ, ಮಣ್ಣಿನ ಮೋಹ, ಹೀಗೆ ನಮ್ಮಲ್ಲಿ ನಾನಾ ಮೋಹಗಳಿದ್ದರೆ ಆತ್ಮಕ್ಕೆ ತೃಪ್ತಿಯಿರದು. ಅತೃಪ್ತ ಆತ್ಮಕ್ಕೆ ಮೋಕ್ಷವೂ ಇರದು. ಆಗ ಭೂತ ಪಿಶಾಚಿಗಳಾಗುತ್ತೇವೆ ಎಂಬುದು ಸನಾತನ ನಂಬುಗೆ. ಎಲ್ಲಾ ಮೋಹ ಕಳೆದು ಆತ್ಮ ಶುದ್ದವಾದರೆ ಮಾತ್ರ ಪರಮಾತ್ಮನೆಂಬ ಶುದ್ಧ ಬೆಳಕಿನಲ್ಲಿ ಒಂದಾಗಲು ಸಾಧ್ಯ. ನದಿಯಿಂದ ಬರುವ ಕೊಳಕು ನೀರನ್ನು ಸಮುದ್ರವು ತಡೆದು ಕಡೆದು ಶುದ್ಧೀಕರಿಸಿ ತನ್ನೋಳಗೆ ಸೇರಿಸಿಕೊಳ್ಳುವಂತೆ, ಪರಮಾತ್ಮನಲ್ಲಿ ಒಂದಾಗಲು ನಾವು ಆಸೆ ಮುಕ್ತರಾಗಿ ಶುಚರ್ಭೂತರಾಗಬೇಕು. ಮನದೊಳಗೆ ಯಾವುದೇ ಮೋಹ ಉಳಿದಿರಬಾರದು. ಮೋಹ ನಾಶವಾದರೆ ಈ ಪ್ರಪಂಚದಲ್ಲಿರುವಾಗಲೆ ಎಲ್ಲಾ ಸಂಕಟಗಳಿಂದ ಮುಕ್ತಿ ಪಡೆದು ಸದಾ ಶ್ರೀದೇವರಲ್ಲಿ ಮನಸ್ಸಿಟ್ಟು ಇಹದಲ್ಲಿಯೇ ಸ್ವರ್ಗ ಸುಖ ಪಡೆಯಬಹುದು.

ಯುವಕರು ತಮ್ಮ ತಮ್ಮ ಸಾಮರ್ಥ್ಯವನ್ನು ತಿಳಿದುಕೊಂಡು ಬೃಹತ್ತಾದ ಆಶೆಯನ್ನು ಎಂದರೆ ಹಂಬಲವನ್ನಿರಿಸಿಕೊಂಡು ಕರ್ಮದಲ್ಲಿ ಮುಂದುವರಿಯಬೇಕು. ಇವರಲ್ಲಿ ಗುರಿ ಸಾಧನೆಯ ಜ್ವಾಲೆ ಕಮರಬಾರದು. ತಮ್ಮಲ್ಲಿರುವ ದೌರ್ಬಲ್ಯ ಹಾಗೂ ನಮ್ಮ ಬಲವನ್ನು ಅರ್ಥೈಸಿಕೊಂಡು ತಮಗಾಗಲೀ ಅನ್ಯರಿಗಾಗಲೀ ಹಿಂಸೆಯಾಗದಂತೆ ಕರ್ತವ್ಯದಲ್ಲಿ ತೊಡಗಿಸಿಕೊಂಡು ದುಡಿಮೆ ಮಾಡುವುದೇ ಭಗವಂತನನ್ನು ಸೇರುವ ಉತ್ತಮ ಕರ್ಮ ಮಾರ್ಗ. ಕರ್ಮ ಎಂದರೆ ಕರ್ತವ್ಯ. ಕೆಲಸ ಎಂದರ್ಥ. ಕಾಯಕವೇ ಕೈಲಾಸ ಎಂಬಲ್ಲಿಯೂ ಕಾಯಕ ಎಂದರೆ ಕೆಲಸವೆಂದೇ ಬಿಂಬಿಸಲಾಗಿದೆ. ಯಾವುದೇ ಕೆಲಸ ಯಶಸ್ವಿಯಾಗಿ ಉದ್ದೇಶಗಳ ಸಫಲತೆಯಾಯಿತೆಂದಾದರೆ ಆತ್ಮ ತೃಪ್ತಿಯೂ ಬರುತ್ತದೆ. ಕೈಗೊಳ್ಳವ ಕೆಲಸ ಯಶಸ್ವಿಯಾಗಲು ಮನುಷ್ಯರಲ್ಲಿ ಮುಖ್ಯವಾಗಿ ನಾಲ್ಕು ಗುಣಗಳಿರಬೇಕೆಂದು ಅನುಭವಿಗಳು ಪ್ರತಿಪಾದಿಸುತ್ತಾರೆ. ರಾಗ, ಯೋಗ, ದಾಕ್ಷ್ಯ ಮತ್ತು ನಯ ಇವುಗಳೇ ಆ ನಾಲ್ಕು ಗುಣಗಳು.

ರಾಗ ಎಂದರೆ ಅಗಾಧವಾದ ಪ್ರೀತಿ. ನಾವು ಆಯ್ದುಕೊಳ್ಳುವ ಕೆಲಸ ಸಣ್ಣದಿರಬಹುದು ಅಥವಾ ದೊಡ್ಡದಿರಬಹುದು. ಆದರೆ ಆ ಕೆಲಸದಲ್ಲಿ ಪ್ರೀತಿಯಿರದೇ ಹೋದರೆ ಎಷ್ಟು ಶ್ರಮವನ್ನು ಸಂಯೋಜಿಸಿದರೂ ಯಶಸ್ಸಾಗದು.

ಕೆಲಸದ ಯಶಸ್ಸಿನ ಇನ್ನೊಂದು ಮೂಲಭೂತ ಅಂಶವೇ ಯೋಗ. “ಯೋಗ” ವೆಂದರೆ ಒಟ್ಟುಗೊಳಿಸು, ಸಂಯೋಜಿಸು ಎಂದರ್ಥ. ಮಾನವ ಸಂಪನ್ಮೂಲ, ಕಚ್ಚಾ ಸಂಪನ್ಮೂಲ, ಹಣಕಾಸು, ಉಪಕರಣಗಳು, ಕಟ್ಟಡಗಳು, ರಸ್ತೆ ವ್ಯವಸ್ಥೆ ಹೀಗೆ ನಮ್ಮ ಆಯ್ಕೆಯ ಕರ್ಮವಾರು ಅನೇಕ ಅಗತ್ಯಗಳಿರುತ್ತವೆ. ಇವುಗಳನ್ನು ಹೊಂದಿಸುವಲ್ಲಿ ವಿಫಲರಾದರೆ ಕೆಲಸದ ಮೇಲೆ ಪ್ರೀತಿಯಿದ್ದರೂ ಗೆಲುವಾಗದು.

ದಾಕ್ಷ್ಯ ಎಂದರೆ ದಕ್ಷತೆ. ಕಾರ್ಯದಕ್ಷತೆಯೇ ಯಶಸ್ವೀ ಕೆಲಸಗಾರನ ಲಕ್ಷಣ. ತಾನು ಸ್ವಯಂ ಪ್ರಾಮಾಣಿಕತೆ ಮತ್ತು ದಕ್ಷತೆಯನ್ನು ಹೊಂದಿದಾಗ ಜೊತೆಗಾರರಾಗಿ ಸಹಕರಿಸುವವರೂ ದಕ್ಷತೆ ಮೆರೆಯುತ್ತಾರೆ. ದಕ್ಷತೆಯು ಸಮಯ ಪಾಲನೆ, ಬೇಡಿಕೆಗಳಿಗೆ ಸಕಾಲಿಕ ಸ್ಪಂದನೆ, ನೌಕರರ ವೇತನ ಪಾವತಿ, ತೆರಿಗೆಗಳ ಪಾವತಿ, ಸಾಲ ಮಾಡಿದ್ದರೆ ಸಕಾಲದಲ್ಲಿ ಸಾಲದ ಮರುಪಾವತಿಗಳು ಹೀಗೆ ಅನೇಕ ವಿಚಾರಗಳಲ್ಲಿ ದಕ್ಷತೆಯು ಅಗತ್ಯವಾಗಿದೆ. 
ನಯ ಎಂದರೆ ಕಾರ್ಯ ಯೋಜನೆ ಅಥವಾ ಕಾರ್ಯನೀತಿ. ಯೋಜನೆಗಳಿಲ್ಲದ ಅಥವಾ ನೀತಿಗಳಿರದ ಕೆಲಸಗಳು ಎಂದಿಗೂ ಸಫಲವೆನಿಸದು. ಯೋಜನೆಯು ಅನುಭವಗಳ ಆಧಾರದಲ್ಲಿ ಸುಧಾರಣೆಯಾಗುತ್ತಾ ಹೋಗುತ್ತಿರಬೇಕು. ಕಾರ್ಯದಲ್ಲಿ ಗೆಲುವು ಸೋಲುಗಳೂ ಅನುಭವಗಳೆಂಬುದನ್ನು ಮರೆಯಬಾರದು. ಜೊತೆಗೆ ಭಗವದನುಗ್ರಹವನ್ನೂ ಬೇಡುತ್ತಿರಬೇಕು. ಇದರಿಂದ ಪುಣ್ಯ ಸಂಚಯನವಾಗುತ್ತಾ ಮುಂದೆ ಸಾವಿನ ನಂತರದ ಮುಕ್ತಿಗೆ ಪೂರಕವಾಗುತ್ತದೆ. ಮರಣದಿಂ ಮುಂದೇನು? ಈ ಪ್ರಶ್ನೆಯೇ ಉದ್ಭವಿಸದು.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************


Ads on article

Advertise in articles 1

advertising articles 2

Advertise under the article