-->
ಜೀವನ ಸಂಭ್ರಮ : ಸಂಚಿಕೆ - 210

ಜೀವನ ಸಂಭ್ರಮ : ಸಂಚಿಕೆ - 210

ಜೀವನ ಸಂಭ್ರಮ : ಸಂಚಿಕೆ - 210
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                                      
                 
ಮಕ್ಕಳೇ, ಇಂದು ನಾರದ ಭಕ್ತಿ ಸೂತ್ರದಲ್ಲಿ ಬರುವ ವಿಷಯ ತ್ಯಾಗದ ಬಗ್ಗೆ ತಿಳಿದುಕೊಳ್ಳೋಣ. ಬದುಕು ಸುಂದರ ಹಾಗೂ ಆನಂದದಿಂದ ತುಂಬಬೇಕಾದರೆ ಏನು ಸಾಧನೆ ಮಾಡಬೇಕು? ಅನ್ನುವುದರ ವಿವರಣೆ ಬರುತ್ತದೆ. ಯಾವುದೇ ಸಾಧನೆ ಒಂದು ದಿನದಲ್ಲಿ ಆಗುವುದಿಲ್ಲ. ಒಂದು ಮೂರ್ತಿ ತಯಾರು ಮಾಡಬೇಕಾದರೆ ಒಬ್ಬ ಕಲೆಗಾರಬೇಕು. ಅದನ್ನು ಮಂತ್ರದಿಂದ ಮಾಡಲು ಸಾಧ್ಯವಿಲ್ಲ. ಕುಳಿತು ಕೆತ್ತಿ ಕೆತ್ತಿ ವರುಷ ಪೂರ್ತಿ ಕಷ್ಟಪಟ್ಟು ಮೂರ್ತಿ ತಯಾರು ಮಾಡಬೇಕಾಗುತ್ತದೆ.

ಒಬ್ಬ ಅಧ್ಯಾಪಕ ಒಬ್ಬ ವಿದ್ಯಾರ್ಥಿಯನ್ನು ತಿದ್ದಿ ತಿದ್ದಿ ಒಬ್ಬ ಶ್ರೇಷ್ಠ ಗಣಿತಜ್ಞನನ್ನಾಗಿ ಮಾಡುತ್ತಾನೆ. ಅದಕ್ಕೆ 22 ವರ್ಷ ಬೇಕಾಗುತ್ತದೆ. ಒಂದು ದಿನದಲ್ಲಿ ಸಾಧಿಸಲು ಆಗುವುದಿಲ್ಲ. ನಿರಂತರವಾಗಿ ಮಾಡಬೇಕಾಗುತ್ತದೆ. ಅದಕ್ಕೆ ಪತಂಜಲ ಮಹರ್ಷಿ ಹೇಳಿದ್ದು "ಸತು ದೀರ್ಘಕಾಲ ನೈರಂತರ್ಯ ಆಸತ್ಕಾರ ಆ ಸೇವಿತಹ ದೃಢಭೂಮಿಹಿ". ಯಾವುದನ್ನೇ ಸಾಧಿಸಬೇಕಾದರೂ ಒಂದು ಕ್ಷಣದಲ್ಲಿ ಆಗುವುದಿಲ್ಲ. ಅದಕ್ಕಾಗಿ ನಿಧಾನವಾಗಿ, ನಿಧಾನವಾಗಿ ಕೆಲಸ ಮಾಡುತ್ತಾ ಮಾಡುತ್ತಾ ಹೋಗಬೇಕಾಗುತ್ತದೆ. ಒಂದು ಮಾವಿನ ಸಸಿ ಹಾಕಿ ನಿಮಗೆಷ್ಟು ಬೇಕೋ ಅಷ್ಟು ನೀರು ಕೊಡುತ್ತೇನೆ, ನಿನಗೆ ಎಷ್ಟು ಬೇಕೋ ಅಷ್ಟು ಗೊಬ್ಬರ ಹಾಕುತ್ತೇನೆ, ನಾಳೆ ಫಲ ಕೊಡಬೇಕು, ಅಂತ ಬಡಿಗೆ ತೆಗೆದುಕೊಂಡು ಬೆದರಿಸಿದರೆ, ಆ ಗಿಡ ಹೇಳುತ್ತದೆ, "ನೀನು ಬಡಿಗೆ ತೆಗೆದುಕೊಂಡು ನಿಂತಿದೆಯಲ್ಲ, ಇಷ್ಟು ಎತ್ತರ ಒಂದೇ ದಿವಸಕ್ಕೆ ಅದೇನು" ಅನ್ನುತ್ತದೆ. ವರ್ಷಗಳು ಬೇಕಾಗುತ್ತದೆ. ಅದಕ್ಕೆ ನೀನು ದಾರಿ ಕಾಯಬೇಕು. ನಾನು ನಿಧಾನವಾಗಿ ಬೆಳೆಯೋದು. ಬೆಳೆಯುವವರೆಗೆ ನಿನ್ನಲ್ಲಿ ಅವಧಾನ ಇರಬೇಕು. ಹಾಗೆ ಸಾಧನೆಗಳು ನಿಧಾನವಾಗಿ ಸಾಗಬೇಕು. ಈಗ ಊಟ ಮಾಡುತ್ತೀವಿ ಅಂತ ಇಟ್ಟುಕೊಳ್ಳಿ. ಒಂದು ಕೇಜಿ ತಿನ್ನಬೇಕು ಅಂತ ಇಟ್ಟುಕೊಳ್ಳಿ, ಏಕದಂ, ಒಂದೇ ಸಾರಿ, ಒಂದು ಕೆಜಿ ಹಾಕೋದಕ್ಕೆ ಆಗುತ್ತೇನು?. ತುತ್ತು, ತುತ್ತು ಒಳಗೆ ಹೋಗಬೇಕು. ವರ್ಷದ್ದೆಲ್ಲ ಒಂದೇ ಬಾರಿ ತಿನ್ನಲು ಆಗುವುದಿಲ್ಲ. ಇಂದಿನದು ಇಂದು ಮುಂಜಾನೆಯದು ಮುಂಜಾನೆ. ಮಧ್ಯಾಹ್ನದ್ದು ಮಧ್ಯಾಹ್ನ ಮತ್ತು ರಾತ್ರಿಯದು ರಾತ್ರಿ ತಿನ್ನಬೇಕಾಗುತ್ತದೆ. 

ಎಂಟು ದಿನ ಪ್ರವಾಸ ಹೋಗುತ್ತಿದ್ದೇವೆ ಅಂತ ಇಟ್ಟುಕೊಳ್ಳಿ. ಎಂಟು ದಿನದ ಆಹಾರ ಇಂದೇ ತಿನ್ನಬೇಕು ಅಂದರೆ ಆಗುವುದಿಲ್ಲ. ನಿಧಾನಬೇಕಾಗುತ್ತದೆ. ಹಾಗೆ ಮನಸ್ಸು ತಯಾರು ಮಾಡಿಕೊಳ್ಳಬೇಕು. ಸಾಧನೆಯನ್ನು ದೀರ್ಘಕಾಲ ಬಿಟ್ಟುಬಿಡದೆ, ಉತ್ಸಾಹದಿಂದ, ಪ್ರೇಮಪೂರ್ವಕವಾಗಿ ಮಾಡಿದರೆ ಆಗ ಸಾಧನೆಯಾಗುತ್ತದೆ. ಆಗ ಅದು ಗಟ್ಟಿಗೊಳ್ಳುತ್ತದೆ. ಹಾಗೆ ನಿಧಾನವಾಗಿ ಬೆಳೆಯಬೇಕು. ಒಬ್ಬ ವ್ಯಕ್ತಿ ಪ್ರೇಮ ಪೂರ್ಣರಾಗಲು, ಶಾಂತಿ ಸಮಾಧಾನ ತುಂಬಲು, ಆನಂದವನ್ನು ನಮ್ಮ ಕಾರ್ಯಗಳ ಮಧ್ಯೆ, ನಮ್ಮ ಮಾತುಗಳ ಮಧ್ಯ, ನಮ್ಮ ನೋಟದಲ್ಲಿ, ನಮ್ಮ ಮತಿಯಲ್ಲಿ ಇದು ಸಂತೋಷ ತುಂಬಬೇಕಾದರೆ, ವಿಷಯ ತ್ಯಾಗ ಬಹಳ ಮುಖ್ಯ. ಯಾವುದು ನಮಗೆ ಹುಚ್ಚು ಹಿಡಿಸದೆ ಅದರಿಂದ ದೂರ ಆಗಬೇಕು. ನಮ್ಮ ಮನಸ್ಸು ಯಾವುದನ್ನು ತುಂಬ ತುಂಬಿಕೊಂಡಿದೆ, ಉನ್ಮಾದ ಯಾವುದರಿಂದ ಉಂಟಾಗುತ್ತದೆ, ಅದರಿಂದ ದೂರ ಆಗಬೇಕು. ನಮ್ಮನ್ನು ವಿಷಯಾನುರಾಗ ಆವರಿಸಿರುತ್ತದೆ. ಅಂದರೆ ವಿಷಯ ಮತ್ತು ರಾಗ ಆವರಿಸಿರುತ್ತದೆ. ವಿಷಯ ಅಂದರೆ ವಸ್ತುಗಳು ಅಥವಾ ವ್ಯಕ್ತಿಗಳು. ವಸ್ತು ಮತ್ತು ವ್ಯಕ್ತಿಗಳ ಸಂಬಂಧ ಕಡಿಮೆಯಾಗಬೇಕು. ಯಾವಾಗಲೂ ಅದೇ ಅದೇ ಯೋಚನೆ ಇತ್ತು ಅಂದರೆ, ಮನುಷ್ಯ ಬದಲಾಗುವುದು ಕಷ್ಟ. ಕೆಟ್ಟವರ ಸಂಘ ಮಾಡಿದರೆ ಮನಸ್ಸಿನಲ್ಲಿ ಶಾಂತಿ ಹೇಗೆ ಉಂಟಾಗುತ್ತದೆ...?

ಒಮ್ಮೆ ಗರುಡ ಮರದ ಮೇಲೆ ಮೊಟ್ಟೆ ಇಟ್ಟಿತು. ಅದು ಗಾಳಿಗೆ ತೂರಿ, ಹುಲ್ಲಿನ ಮೇಲೆ ಬಿತ್ತು. ಅಲ್ಲೇ ಕೋಳಿ, ಮೊಟ್ಟೆ ಇಟ್ಟು ಕಾವು ಕೊಡುತ್ತಿತ್ತು. ಆದರೆ ಪಕ್ಕವೆ ಗರುಡನ ಮೊಟ್ಟೆ ಬಿದ್ದಿತ್ತಲ್ಲ, ತನ್ನ ಮೊಟ್ಟೆಯೆಂದು ಭಾವಿಸಿ, ಅದಕ್ಕೆ ಕಾವು ಕೊಟ್ಟಿತು. ಮೊಟ್ಟೆ ಒಡೆದು ಮರಿ ಬಂದವು. ಗರುಡನ ಮರಿ, ಕೋಳಿ ಮರಿಯೊಂದಿಗೆ ಸೇರಿಕೊಂಡು, ತಿಪ್ಪೆಯಲ್ಲಿ ಕಾಳು ಕೆದಕಿ ತಿನ್ನುತ್ತಿತ್ತು. ಒಮ್ಮೆ ಗರುಡ ನೋಡಿ, ಈ ಮರಿ ಇಲ್ಲಿ ಏಕೆ ಇದೆ..? ಎಂದು ತಕ್ಷಣ ಸಮೀಪಕ್ಕೆ ಹಾರಿ ಬಂದಿತ್ತು. ಗರುಡನ ನೋಡಿ ಕೋಳಿ, ಕೋಳಿ ಮರಿಗಳು ದಿಗ್ಭ್ರುಮೆಯಿಂದ ಓಡಹತ್ತಿದವು. ಅದರ ಜೊತೆ ಗರುಡನ ಮರಿ ಓಡುತ್ತಿತ್ತು. ತಕ್ಷಣ ಗರುಡ, ಗರುಡ ಮರಿಯನ್ನು ಹಿಡಿದು ಮರದ ಮೇಲೆ ತೆಗೆದುಕೊಂಡು ಹೋಯಿತು. ಆ ಗರುಡ ಮರಿ ಕೋಳಿ ಕಡೆ ಕೂಗಿ ಕಾಪಾಡಿ ಕಾಪಾಡಿ ಅನ್ನುತ್ತಿತ್ತು. ಆಗ ಗರುಡ ಹೇಳಿತು ನೀನು ಕೋಳಿಯಲ್ಲ, ನನ್ನ ಹಾಗೆ ಗರುಡ ಎಂದಿತು. ಅದಕ್ಕೆ ನಂಬಿಕೆ ಬರಲಿಲ್ಲ. ಆಗ ಗರುಡ ಹೇಳಿತು, ಹೇಳಿದಂತೆ ಕೇಳು, ಇಲ್ಲ ಅಂದರೆ ನಿನ್ನನ್ನು ಮುಗಿಸಿಬಿಡುತ್ತೇನೆ ಅಂದಿತು. ಆಗ ಮರಿ ಗರುಡ ಕೇಳಿತು, ಏನು ಮಾಡಬೇಕು? ಅಂತ. ಏನು ಮಾಡಬೇಡ, ರೆಕ್ಕೆ ಬಿಚ್ಚು ಅಂದಿತು. ಮರಿಗರುಡ ರೆಕ್ಕೆ ಬಿಚ್ಚಿತು ಮೇಲಕ್ಕೆ ಹಾರಿದಂತೆ ಆಯಿತು. ಮೇಲಕ್ಕೆ ಹಾರುತ್ತ ಹೇಳಿತು, ನನಗೆ ಗೊತ್ತೇ ಇರಲಿಲ್ಲ ಅಂತ. ಆಗ ಗರುಡ ಹೇಳಿತು, ನೀನು ತಿಪ್ಪೆಯಲ್ಲಿ ಕೆದುಕುವ ಕೋಳಿ ಸಂಗ ಮಾಡಿದ್ಯಲ್ಲ ಅದಕ್ಕೆ ಅಂದಿತು.

ಪೈಲ್ವಾನ್ ಆಗಬೇಕಾದರೆ ಹಾಲು ಕುಡಿಯುವವರು, ತುಪ್ಪ ತಿನ್ನುವವರು, ದೈಹಿಕ ಕಸರತ್ತು ಮಾಡುವವರ ಸಂಗ ಮಾಡಬೇಕಾಗುತ್ತದೆ. ಕುಡುಕರ ಸಂಗ ಮಾಡಿದರೆ ಪೈಲ್ವಾನ್ ಆಗುವುದಿಲ್ಲ. ವಿಷಯಗಳ ಸಂಗ ಇರಬೇಕು. ಯಾವುದು ಇರಬೇಕೊ ಅದರ ಸಂಗ ಇರಬೇಕು. ವಿಷಯ ಅಂದರೆ ವಸ್ತು ಮತ್ತು ವ್ಯಕ್ತಿ. ನೋಡೋ ವಿಷಯ ರೂಪ. ಕೇಳೋ ವಿಷಯ ಶಬ್ದ, ನಾಲಿಗೆಯ ವಿಷಯ ರಸ, ಮೂಗಿನ ವಿಷಯ ಗಂಧ, ಮುಟ್ಟುವ ವಿಷಯ ಸ್ಪರ್ಶ. ಶಬ್ದ. ಸ್ಪರ್ಶ, ರೂಪ , ರಸ , ಗಂಧ ಇವು ವಿಷಯಗಳು. ಯಾವ ವಿಷಯಗಳು ನಮಗೆ ಬಾಧಕವಾಗುತ್ತದೆಯೋ ಅವುಗಳಿಂದ ದೂರ ಇರಬೇಕು. ಯಾವ ವಿಷಯ ನಮ್ಮನ್ನು, ಮನಸ್ಸನ್ನು ಬಂಧಿಸುತ್ತವೆ, ಕಟ್ಟಿ ಹಾಕುತ್ತವೆ, ಅವುಗಳಿಂದ ದೂರ ಇರಬೇಕು. ವಿಷಯ ನಾಶ ಮಾಡುವುದಲ್ಲ. ವಿಷಯಗಳನ್ನು ದೂರಸರಿಸಬೇಕು. ಬೆಂಕಿ ಸುಡುತ್ತದೆ ಮುಟ್ಟಿದರೆ. ಸ್ವಲ್ಪ ಸ್ವಲ್ಪ ದೂರ ಇಟ್ಟರೆ, ಶಾಖ ಮತ್ತು ಬೆಳಕು ನೀಡುತ್ತದೆ. ಪತಂಗಕ್ಕೆ ಇದು ಗೊತ್ತಿಲ್ಲದೇ ಇರುವುದರಿಂದ, ದೀಪದ ಸುತ್ತ ಸುತ್ತಿ ಒಳಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತದೆ. ಅದು ದೂರ ಇದ್ದಿದ್ದರೆ, ಬೆಳಕು ಮತ್ತು ಶಾಖ ಅನುಭವಿಸಬಹುದಿತ್ತು.

ವಿಷಯಗಳು ದೀಪ ಇದ್ದಂತೆ. ನಾವು ಬೀಳಬಾರದು. ಸಮೀಪ ಇರಬೇಕು. ಇದಕ್ಕೆ ವಿಷಯ ತ್ಯಾಗ ಎನ್ನುವರು. ವಿಷಯ ತ್ಯಾಗ ಎಂದರೆ ವಿಷಯಗಳನ್ನು ದೂರ ಇಡುವುದು. ಯಾವ ವಿಷಯಗಳು ಮನಸ್ಸಿನ ಸೌಂದರ್ಯ ಕೆಡಿಸುತ್ತದೆ?. ಯಾವ ವಿಷಯಗಳು ಸ್ವಾತಂತ್ರ್ಯವನ್ನು ನಾಶ ಮಾಡುತ್ತವೆ?. ಯಾವ ವಿಷಯಗಳು ನಮ್ಮನ್ನು ಬಂಧಿಸುತ್ತವೆ?. ಅಂತವುಗಳಿಂದ ದೇಹ, ಇಂದ್ರಿಯ ಮತ್ತು ಮನಸ್ಸನ್ನು ದೂರ ಇಡುವುದು. ಯಾವುದನ್ನು ಇಟ್ಟುಕೊಳ್ಳಬೇಕು ಅದನ್ನು ಇಟ್ಟುಕೊಂಡು, ಯಾವುದನ್ನು ತ್ಯಾಗ ಮಾಡಬೇಕು, ತ್ಯಾಗ ಮಾಡಬೇಕು.

ಒಂದು ಸಣ್ಣ ಕಥೆ. ಒಂದು ಒಂಟೆ, ಒಂದು ನರಿ ಸಂಘ ಮಾಡಿತ್ತು. ಪಾಪ, ಒಂಟೆಗೆ ಏನು ಗೊತ್ತು ನರಿ ಹೇಗಿದೆ? ಅಂತ. ಈ ನರಿ ಒಂದು ಮುದಿ ಸಿಂಹದ ಕಾರ್ಯದರ್ಶಿಯಾಗಿತ್ತು. ನರಿ ಮತ್ತು ಸಿಂಹ ಒಪ್ಪಂದ ಮಾಡಿಕೊಂಡಿದ್ದವು. ಸಿಂಹ ಹೇಳಿತು, ನಾನು ಮುದುಕ ಆಗಿದ್ದೇನೆ, ಬೇಟೆ ಆಡುವುದಕ್ಕೆ ಆಗುವುದಿಲ್ಲ , ಅದಕ್ಕೆ ನೀನು ಬೇಟೆ ತಂದುಕೊಟ್ಟರೆ, ಅದನ್ನು ನಾನು ಮುಗಿಸುತ್ತೇನೆ, ನಿಮಗೆ ತಿನ್ನುವುದಕ್ಕೆ ಕೊಡುತ್ತೇನೆ ಎಂದಿತು. ನರಿಗೆ ಇಂತಹ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುವುದಕ್ಕೆ ಬರುತ್ತಿರಲಿಲ್ಲ. ಅದಕ್ಕೆ ನರಿ ಹೇಳಿತು, ನಾನು ಬೇಟೆಯನ್ನು ನಿನ್ನ ಹತ್ತಿರ ತೆಗೆದುಕೊಂಡು ಬರುತ್ತೇನೆ. ನನ್ನ ಬುದ್ಧಿ ಬಳಸುತ್ತೇನೆ, ನೀನು ಶಕ್ತಿ ಬಳಸು ಅಂತ ನರಿ ಹೇಳಿತು. ಇದರಿಂದ ಇಬ್ಬರ ಊಟವು ದೊರಕುತ್ತದೆ ಅಂತ ಹೇಳಿ, ನರಿ ಮತ್ತು ಸಿಂಹ ಒಪ್ಪಂದ ಮಾಡಿಕೊಂಡಿದ್ದವು. ಪಾಪ ಒಂಟೆಗೆ ಗೊತ್ತಿರಲಿಲ್ಲ. ಒಂಟೆಗೆ ಬಂದು ನರಿ ಹೇಳಿತು, ಏನು ನಿನ್ನ ರೂಪ?. ಏನು ಅದ್ಭುತ ! ನಮ್ಮ ರಾಜ ಸಿಂಹ ನಿನ್ನ ರೂಪವನ್ನು ಮೊನ್ನೆ ನೋಡಿ, ಎಷ್ಟು ಆನಂದ ಪಟ್ಟಿದ್ದಾನೆ?. ಅಂದರೆ, ಈತನೇ ಈ ಕಾಡಿನ ಪ್ರಧಾನಮಂತ್ರಿಯಾಗಬೇಕು ಅಂತ ಹೇಳಿದ್ದಾನೆ. ಅದಕ್ಕೆ ನೀನು ಬಹಳ ದೊಡ್ಡ ಮನುಷ್ಯ. ಎತ್ತರ, ಬಹಳ ಚೆನ್ನಾಗಿದ್ದೀಯಾ. ನಿನ್ನಷ್ಟು ಎತ್ತರ ಯಾರಿದ್ದಾರೆ ಹೇಳು?. ನಿನ್ನಷ್ಟು ಸುಂದರ ಯಾರಿದ್ದಾರೆ?. ಕಾಡಿನ ರಾಜ, ಸಿಂಹ ಹೇಳಿ ನನ್ನನ್ನು ಕಳಿಸಿಕೊಟ್ಟಿದ್ದಾನೆ. ನೀನು ಕಾಡಿನ ರಾಜ, ಸಿಂಹನ ಹತ್ತಿರ ಬಂದರೆ, ನಾಳೆ ನೀನು ಈ ಅರಣ್ಯದ ಪ್ರಧಾನಮಂತ್ರಿಯಾಗುತ್ತಿ ಎಂದಿತು. ಈ ಮಾತು ಕೇಳಿ ಒಂಟೆಗೆ ಹುಚ್ಚು ಹಿಡಿಯಿತು. ನಾನು ಹೀಗೆ ಇದ್ದೀನಲ್ಲ ಅಂದಿತು. ಸಿಂಹ ಹೇಳುತ್ತದೆ ಅಂದರೆ ನಾನೇನು ಸಾಮಾನ್ಯ ಏನು? ಅಂತ ಹೇಳಿಕೊಂಡು ನರಿ ಜೊತೆ ಹೊರಟಿತು. ಆದರೂ ಒಳಗೆ ಸಂದೇಹ ಇತ್ತು. ಸಿಂಹ ಅಂದರೆ ಇದಕ್ಕೆ ಭಯ. ಏನಾದರೂ ಮೋಸ ಮಾಡಿಯಪ್ಪಾ ನನಗೆ ಅಂದಿತು. ಸತ್ಯ ಏನು ನೀನು ಹೇಳೋದು ಅಂದಿತು. ಆಗ ನರಿ ಹೇಳಿತು, ಆಣೆ ಮಾಡಿ ಹೇಳುತ್ತೇನೆ, ನಿನ್ನ ಮೇಲೆ, ನಿನ್ನ ತಂದೆಯ ಮೇಲೆ, ನಿನ್ನ ತಾಯಿಯ ಮೇಲೆ ಆಣೆ ಮಾಡುತ್ತೇನೆ. ಯಾರ ಆಣೆ ಬೇಕಾದರೂ ಕೇಳಲಿ, ಆಣೆ ಮಾಡುತ್ತೇನೆ ಅಂದಿತು. ಅಷ್ಟು ಚೆಂದಾಗಿ ವರ್ಣನೆ ಮಾಡಿತ್ತು. ಸಿಂಹ ಇದುವರೆಗೂ ಯಾರಿಗೂ ಆ ಸ್ಥಾನ ಕೊಟ್ಟಿಲ್ಲ. ಇದೇ ಮೊಟ್ಟಮೊದಲು ನಿನಗೆ ಪ್ರಧಾನಮಂತ್ರಿ ಸ್ಥಾನ ಕೊಡುತ್ತಾ ಇದ್ದಾನೆ. ನೀನು ಪುಣ್ಯವಂತ ಅಂತ ಅಂದಿತು ನರಿ. ಒಂಟೆಗೆ ಪ್ರಧಾನಮಂತ್ರಿ ಹುಚ್ಚು ಹಿಡಿಯಿತು. ನರಿ, ಸಿಂಹದ ಬಳಿಗೆ ಕರೆದುಕೊಂಡು ಹೋಯಿತು. ಸಿಂಹನನ್ನು ಭೇಟಿ ಮಾಡಿಸಿತು. ಒಂಟೆ ಬಂದು ನಿಲ್ಲುವುದರೊಳಗೆ, ಸಿಂಹ ದಾಳಿ ಮಾಡಿತ್ತು. ನರಿಗೆ ಆನಂದ. ಒಂಟೆ ಸಾಯುವಾಗ ನರಿ ಕಡೆ ನೋಡುತ್ತಾ , ಏನೋ ನನ್ನ ಮುಗ್ಸಿದಿಯಲ್ಲ ಅಂದಿತು.  

ಪ್ರಪಂಚ ನಮ್ಮನ್ನು ಒಮ್ಮೊಮ್ಮೆ ಹಾಗೆ ಮಾಡುತ್ತದೆ. ಶಬ್ದಕ್ಕೆ ಒಲಿದು, ಒಮ್ಮೊಮ್ಮೆ ಸಿಕ್ಕಿಹಾಕಿಕೊಳ್ಳುತ್ತೇವೆ. ಸ್ಪರ್ಶಕ್ಕೆ ಒಲಿದು ಒಮ್ಮೊಮ್ಮೆ ಸಿಕ್ಕಿಹಾಕಿಕೊಳ್ಳುತ್ತೇವೆ. ರೂಪಕ್ಕೆ ಒಲಿದು ಒಮ್ಮೊಮ್ಮೆ ಸಿಕ್ಕಿಹಾಕಿಕೊಳ್ಳುತ್ತೇವೆ. ರಸ ಮತ್ತು ಗಂಧಕ್ಕೆ ಒಲಿದು ಒಮ್ಮೊಮ್ಮೆ ಸಿಕ್ಕಿಹಾಕಿಕೊಳ್ಳುತ್ತೇವೆ. ಹೊಗಳುವಿಕೆಗೂ ಒಮ್ಮೊಮ್ಮೆ ಸಿಕ್ಕಿ ಹಾಕಿಕೊಳ್ಳುತ್ತೇವೆ. ಇದು ಕಥೆ. ನಮ್ಮ ಜೀವನ ಹೀಗೆ ಒಬ್ಬೊಬ್ಬರಿಗೂ ಹಾಗೆ ಇರುತ್ತದೆ. ಅಂತವರಿಂದ ದೂರ ಇರುವುದೇ ವಿಷಯ ತ್ಯಾಗ. ವಿಷಯಗಳು ಸುಂದರವಾಗಿ ಇರುತ್ತದೆ, ಆನಂದ ಕೊಡುತ್ತವೆ. ಗೊತ್ತಿರಲಿ ಹೇಗಿದ್ದವೇ ಅಂತ ಹೇಳಲಿಕ್ಕೆ ಬರುವುದಿಲ್ಲ. ಯೋಚನೆ ಮಾಡಿ, ಸಮೀಪ ಹೋಗು, ಇಲ್ಲವೆ ತ್ಯಾಗ ಮಾಡು. ಅವುಗಳನ್ನು ದೂರ ಸರಿಸು. ಇದೇ ವಿಷಯ ತ್ಯಾಗ. 

ಅತಿ ಆಸೆ ಇರುವವರು ಬಲಿಯಾಗುವರು. ಒಂಟೆ ಪ್ರಧಾನಮಂತ್ರಿ ಆಗುವ ಅತಿ ಆಸೆಯಿಂದ ಬಲಿಯಾಯಿತು. ಬದುಕಲು ಬೇಕಾದದ್ದು ಕಾಡಿನಲ್ಲಿ ಸಿಗುತ್ತಿತ್ತು. ಬದುಕಿಗೆ ಬೆಲೆ ಕೊಡಲಿಲ್ಲ ಹಾಗಾಗಿ ಬಲಿಯಾಯಿತು. ಬದುಕಿಗೆ ಬೆಲೆ ನೀಡಿದ್ದರೆ, ತನ್ನ ಬದುಕಿಗೆ ಬೇಕಾದದ್ದು ಕಾಡಿನಲ್ಲಿ ಸಾಕಷ್ಟಿತ್ತು. ಅದರಲ್ಲೇ ತೃಪ್ತಿ ಪಟ್ಟಿದರೆ ಜೀವ ಹಾನಿಯಾಗುತ್ತಿರಲಿಲ್ಲ. ಅಲ್ಲವೇ ಮಕ್ಕಳೇ..
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
******************************************




Ads on article

Advertise in articles 1

advertising articles 2

Advertise under the article