-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 186

ಸ್ಫೂರ್ತಿಯ ಮಾತುಗಳು : ಸಂಚಿಕೆ - 186

ಸ್ಫೂರ್ತಿಯ ಮಾತುಗಳು : ಸಂಚಿಕೆ - 186
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                     
         

ನಾನು ಶಿಕ್ಷಕನಾಗಿ ಸೇವೆಗೆ ಸೇರಿ 1979ರ ಅಕ್ಟೋಬರ್‌ಗೆ ಒಂದು ವರ್ಷ ಸಂದಿತ್ತು.1980ರ ಏಪ್ರಿಲ್‌ ಮೇ ತಿಂಗಳ ಸಂದರ್ಭದಲ್ಲಿ 1981ರ ಸಾರ್ವಜನಿಕ ಜನಗಣತಿಯ ಪೂರ್ವಭಾವಿಯಾಗಿ ಮನೆ ಪಟ್ಟಿ ತಯಾರಿಸುವ ಕರ್ತವ್ಯ ನನ್ನ ಮೇಲೆ ಬಿತ್ತು. ಶಿಕ್ಷಕರಿಗೆ ಗಣತಿಯ ಕಾರ್ಯ ಅನ್ಯ ಕ್ಷೇತ್ರ.

ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮದ ಎಲ್ಲ ಮನೆಗಳ ಪಟ್ಟಿ ತಯಾರಿ. ಗ್ರಾಮ ಪಂಚಾಯತು ಒಂದು ಮನೆ ಪಟ್ಟಿ ನೀಡಿತ್ತು. ಅದು ಪರಿಪೂರ್ಣ ಪಟ್ಟಿಯಾಗಿರಲಿಲ್ಲ. 1971ರ ಜನಗಣತಿ ಆಧಾರಿತವಾಗಿತ್ತು. ಹತ್ತು ವರ್ಷ ಅಂತರದಲ್ಲಿ ಮನೆಗಳ ಚಿತ್ರಣಗಳು ಬಹುತೇಕ ಬದಲಾಗಿರುತ್ತವೆ. ಕುಟುಂಬದ ಯಜಮಾನರು ಬದಲಿರುತ್ತಾರೆ. ಕೆಲವು ಮನೆ ಬಿದ್ದು ಹೋಗಿರುತ್ತವೆ. ಕೆಲವು ಖಾಲಿಯಾಗಿರುತ್ತವೆ. ಕೆಲವದರಲ್ಲಿ ಹೊಸ ವಲಸಿಗರಿರುತ್ತಾರೆ. ಮಧ್ಯೆ ಮಧ್ಯೆ ಹೊಸ ಮನೆಗಳ ಸೇರ್ಪಡೆಯಾಗಿರುತ್ತವೆ. ಪಟ್ಟಿ ತಯಾರಕರು ಮನೆ ಮನೆ ಭೇಟಿ ನೀಡಬೇಕು, ಮನೆಯು ಪಕ್ಕಾವೋ, ಕಚ್ಚಾವೋ, ನಿರ್ಮಾಣ ಹಂತವೂ, ಹಂಚಿನದೋ, ಸೋಗೆಯದೋ, ಮುಳಿ ಹುಲ್ಲಿನದೋ ಎಂದು ಕಟ್ಟಡದ ಮಾಹಿತಿ ತೆಗೆದುಕೊಳ್ಳಬೇಕಿತ್ತು. ಆಗ ತಾರಸಿ ಕಟ್ಟಡಗಳ ಭರಾಟೆಯಿರಲಿಲ್ಲ. 
ಕಟ್ಟಡ ಶಾಲೆಯೋ, ದೇವಾಲಯವೋ, ಮಸೀದಿಯೋ, ಇಗರ್ಜಿಯೋ, ಬಸದಿಯೋ, ಶರಾಬು ಅಂಗಡಿಯೋ, ದಿನಸಿ ಅಂಗಡಿಯೋ, ಸರಕಾರಿ ಕಟ್ಟಡವೋ, ಅರೆ ಸರಕಾರಿಯೋ, ಖಾಸಗಿಯೋ ಹೀಗೆ ಕಟ್ಟಡಗಳ ವಾಸ್ತವಿಕ ಮಾಹಿತಿಯನ್ನೂ ನಿಗದಿತ ನಮೂನೆಯಲ್ಲಿ ಕಾಣಿಸಬೇಕು. ಮನೆಯ ಯಜಮಾನನ ಹೆಸರು, ವಾಸವಿರುವ ಜನರ ಲಿಂಗವಾರು ಸಂಖ್ಯೆ, ವಿದ್ಯಾರ್ಥಿಗಳಿದ್ದರೆ ಶೈಕ್ಷಣಿಕ ವರ್ಗ, ಮನೆಯವರ ದುಡಿಮೆಯ ವಿಧ ಹೀಗೆ ಹತ್ತಾರು ಮಾಹಿತಿ ಕಲೆ ಹಾಕಿ ಪ್ರತೀ ವಾರ ಮೇಲ್ವಿಚಾರಕರಿಗೆ ವರದಿ ಕೊಡಬೇಕಿತ್ತು. ಕೊನೆಗೆ ದಾಖಲೆಗಳ ಸಮರ್ಪಣೆ, ತಪ್ಪುಗಳಾದರೆ ಪುನಹ ಆ ಮನೆಗೆ ಓಟ, ಕಟ್ಟಡಗಳ ಸ್ಥಿತಿಯನ್ನು ತ್ರಿಭುಜ, ಚೌಕ, ವೃತಾಕೃತಿಗಳಲ್ಲಿ ಬರೆದು ಕ್ರಮ ಸಂಖ್ಯೆ ಹಾಕಬೇಕು. ದೇವಾಲಾಯವಾದರೆ “ಟಿʼ ಮಸೀದಿಯಾದರೆ “ಎಂ” ಹೀಗೇ ಸಂಕೇತ ಮತ್ತು ಕ್ರಮಾಂಕ ಆ ನಕಾಶೆಯಲ್ಲಿರಬೇಕು. ಇದು 1982ರ ಜನಗಣತಿದಾರರಿಗೆ ನೆರವಾಗುತ್ತದೆ ಎಂಬುದು ಅಂಬೋಣ. ಅಂತೂ ಬೇಸಗೆ ರಜೆಯ ಉರಿಬಿಸಿಲಿನಲ್ಲಿ ಒಂದು ತಿಂಗಳ ನಡೆದಾಟದ ಕಾರ್ಯಕ್ರಮ.

ಇಂದು ಜಾತಿ ಸಮೀಕ್ಷೆ ನಡೆಯುತ್ತಿದೆ. ಈ ಗಣತಿಯನ್ನು ನನ್ನ ಗಣತಿ ಅನುಭವಕ್ಕೆ ತಳುಕು ಹಾಕಿದೆ. ಅಂದಿಗೆ ಅದು ಕಠಿಣ, ಇಂದಿಗೆ ಇದು ಕಠಿಣ ಎಂದು ಅನಿಸಿತು. ಗಣತಿಯು ಸದಾ ಶಿಕ್ಷಕರಿಗೆ ಮೀಸಲು. ಪಾಠ ನಡೆಯಲಿ ನಡೆಯದಿರಲಿ, ಮಕ್ಕಳು ಕಲಿಯಲಿ ಕಲಿಯದಿರಲಿ ಇದರ ಬಗ್ಗೆ ಕಾಳಜಿ ಯಾರಿಗೂ ಇಲ್ಲ. ಮಕ್ಕಳ ಶೈಕ್ಷಣಿಕ ಮತ್ತು ಸಹ ಪಠ್ಯ ಚಟುವಟಿಕೆಗಳು ಕುಂಠಿತವಾದರೂ ಅಡ್ಡಿಯಿಲ್ಲ. ಗಣತಿ ಮುಖ್ಯ. ಕೆಲವರ ಓಲೈಕೆ ಅಗತ್ಯ. ಮುಂದಿನ ಚುನಾವಣೆಯಲ್ಲಿ ಮತಗಳು ಬೀಳಬೇಕಲ್ಲ! ಖಾಸಗಿ ಶಾಲೆಗಳವರಿಗೆ ರಿಯಾಯಿತಿ. ಅವರ ಮೇಲೆ ಸರಕಾರಕ್ಕೆ ಹಿಡಿತವೇ ಇಲ್ಲ. ಸರಕಾರದ ಅನುದಾನ ಪಡೆಯುವ ಮತ್ತು ಸರಕಾರಿ ಶಾಲೆಗಳೆಂದರೆ ಜನ ದೂರ ದೂರ ಸರಿಯಲು ಶಿಕ್ಷಕರ ಮೇಲಿನ ಒತ್ತಡಗಳೂ ಕಾರಣ ಎಂಬ ಸತ್ಯ ಸರಕಾರಕ್ಕೂ ಇದೆ. ಆದರೆ ಸರಕಾರದ ಬೇಳೆ ಬೇಯದಿದ್ದರೆ ಹೇಗೆ? ಅದಕ್ಕೆ ಶಿಕ್ಷಕರಿಗೆ ತಲೆದಂಡ, ಬಡ ವಿದ್ಯಾರ್ಥಿಗಳಿಗೆ ಅನ್ಯಾಯ. 

ಹಿಂದಿನಂತೆ ಇಂದು ಹೆಚ್ಚು ನಮೂನೆ ಬರೆಯುವ ಕೆಲಸವಿಲ್ಲವಂತೆ. ಒಂದು ನಮೂನೆ ಭರ್ತಿ ಮಾಡಿದರೆ ಆಯಿತು. ಮೊಬೈಲ್‌ ಮೂಲಕ ಗಣತಿ. ಇದಕ್ಕೆ ಒಂದು ಹೊಸ “ಏಪ್” ಬೇರೆ. ಮನೆಯ ಹತ್ತಿರ ಅಂತರ್ಜಾಲ ಸಂಪರ್ಕ ಕಡಿಮೆಯಿದ್ದರೆ ಅವರನ್ನು ಸಂಪರ್ಕ ಇರುವ ಸ್ಥಳಕ್ಕೆ ಕರೆದೊಯ್ಯದೇ ಇದ್ದರೆ ಗಣತಿ ಮುಗಿಯದು. ಸಮಯದ ಮಿತಿಯಿದೆಯಲ್ಲಾ ಎಂಬ ಪೇಚಾಟ ಶಿಕ್ಷಕರಿಗೆ. ನಮ್ಮ ಮನೆಗೂ ಬಂದಿದ್ದರು. ಗಣತಿ ಮಾಡುವ ಶಿಕ್ಷಕರ ಸಂಕಟ ಗಮನಿಸಿದಾಗ ಕರುಳು ಚುರ್ರೇನ್ನಿಸಿತು. ಬೆಳಗ್ಗೆ ಎಂಟು ಘಂಟೆಯಾಗುವಾಗ ಏಪ್‌ ಮೂಲಕ ಗಣತಿ ಕರ್ತವ್ಯಕ್ಕೆ ಲಾಗಿನ್‌ ಆಗಲೇ ಬೇಕು. ಗಣತಿ ಕಾರ್ಯ ಆರಂಭವಾಗಲೇ ಬೇಕು. ಮನೆಯಲ್ಲಿ ಕಾಯಿಲೆಯವರು, ಅಂಗವಿಕಲರು, ವೃದ್ಧರು.. ಹೀಗೆ ಸಮಸ್ಯೆಗಳೇನೇ ಇರಲಿ, ನಿಗದಿತ ಅವಧಿಯಲ್ಲಿ ಗಣತಿ ಮುಗಿಸಲೇ ಬೇಕು. ನೌಕರಿ ಬೇಕಲ್ಲಾ ಅದಕ್ಕೆ ಪಾಡೇನಿದ್ದರೂ ನುಂಗುವುದೇ ಜಾಣ್ಮೆ.

ಜಾತಿ ಗಣತಿ ಮಾಡುವ ಶಿಕ್ಷಕರಿಗೆ location ತೋರಿಸುವ prutha app ನೀಡಿದ್ದಾರೆ. ಕೆಲವರು ಇದನ್ನು ಮೃತ ಏಪ್‌ ಎಂದು ಲೇವಡಿ ಮಾಡುತ್ತಾರೆ. ಕಾರಣವೂ ಇದೆ. ಮೊದಮೊದಲು ಸರ್ವರ್ ಸಮಸ್ಯೆಯಿತ್ತು. ಏರಿಯಾ ನೋಡಿ ಬರಲೆಂದು ಹೋದವರಿಗೆ ಲೊಕೇಷನ್‌ ಮ್ಯಾಪ್‌ ದಾರಿಯನ್ನು ತೋಟ, ತೋಡು, ಸುರಂಗಗಳ ಮೂಲಕ ತೋರಿಸುತ್ತಿತ್ತೆಂದು ಶಿಕ್ಷಕರು ಹೇಳುತ್ತಾರೆ. ಎರಡನೇ ದಿನ ಕೆಲವರಿಗೆ ಸಮೀಕ್ಷೆ ಪ್ರಾರಂಭಿಸಲು ಸಾಧ್ಯವಾದರೂ ಬಹಳ ನಿಧಾನ ಗತಿ. ದಸರಾ ರಜೆ. ಮಕ್ಕಳನ್ನು ಕರೆದುಕೊಂಡು ಮಹಳಷ್ಟು ಮನೆಯವರು ಅಜ್ಜಿ ಮನೆಗೆ ಹೋಗಿದ್ದರು. ಅವರನ್ನು ಫೋನ್‌ ಮಾಡಿ ಕರೆಸಿ ಗಣತಿ ಮಾಡುವುದೇ ಶಿಕ್ಷಕರಿಗೆ ತಲೆನೋವಾಯಿತು. ಗಣತಿ ದಾರರಿಗೆ ಕೆಲವು ಮನೆಗಳಲ್ಲಿ ಸುಳ್ಳುಮಾಹಿತಿಯನ್ನೇ ಕೊಡುತ್ತಿದ್ದರು. ಆ…. ಮನೆಗೆ ಹೋದೆವು, ಅವರು ಉಲ್ಟಾ ಮಾತನಾಡಿದರು ಎಂಬ ಕೊರಗೂ ಗಣತಿದಾರರಿಂದ ಕೇಳಿ ಬರುತ್ತಿತ್ತು.

ಕೆಲವರ ಸಮೀಕ್ಷಾ ಪಯಣವು ಹಳ್ಳಿಯ ಜನರ ಪ್ರೀತಿಯ ಸಹಕಾರದಲ್ಲಿ ಸಾಗುತ್ತಿದ್ದುದೂ ಇರಲಿಲ್ಲವೆಂದಲ್ಲ. ಪ್ರತಿ ಮನೆಗೆ ಹೋದಾಗಲೂ ನಗುಮೊಗದ ಸ್ವಾಗತ. ಸಮೀಕ್ಷೆಗೆ ಮೊಬೈಲ್ ನಂಬರ್ಗೆ ಬಂದ ಓಟಿಪಿ ಕೇಳಿದಾಗ ಕೆಲವು ಅಕ್ಕಂದಿರು ಅಣ್ಣಂದಿರು ಅವರ ಫೋನ್ ಶಿಕ್ಷಕರ ಕೈಗೆ ಕೊಟ್ಟು ಅದೆಲ್ಲಾ ನಮಗೆ ನೋಡಲು ಬರುವುದಿಲ್ಲ, ನೀವೇ ನೋಡಿ ಎಂದು ಹೇಳುವ ಗಣತಿದಾರರ ಅನುಭವಗಳು ರಂಜನೀಯವೂ ಹೌದು. ಕೆಲವರು ಪಕ್ಕದ ಮನೆಗೆ ದಾರಿ ತೋರಿಸಲು ಗಣತಿದಾರರಿಗೆ ಜೊತೆಯಾಗುತ್ತಿದ್ದರು.

ಕೆಲವರಿಗೆ ಗಣತಿದಾರರ ಮೇಲೆ ನಂಬಿಕೆ ಅಭಿಮಾನ, ಪ್ರೀತಿಯ ಅನುಭವಗಳಾದುದೂ ಇದೆ. ಮನೆಗೆ ಹೋದ ಕೂಡಲೇ ತೆಂಗಿನ ಮರ ಹತ್ತುತ್ತಿದ್ದರು, ಬೊಂಡ ತೆಗಿಯಲಿಕ್ಕೆಂದು ಹೇಳುವಾಗ ನನಗೂ ಗಣತಿ ಅನುಭವ ಮರುಕಳಿಸಿ ಬಾಯಲ್ಲಿ ನೀರೂರಿತು. ಜ್ಯೂಸ್‌, ಹಾಲು, ಹಣ್ಣು, ಚಹ ಕಾಫಿ, ಹಾಲು ಹೀಗೆ ಸೇವಿಸುತ್ತಾ ಹಸಿವು ಮರೆತವರು, ಮನೆ ಮನೆಗೆ ಹೋದಾಗ ಮೊದಲಾಗಿ ಶೌಚಾಲಯಕ್ಕೆ ಭೇಟಿ ನೀಡಿದವರೂ ಇದ್ದಾರೆ. ಕೆಲವು ಮನೆಯಲ್ಲಿ ಹಗಲಲ್ಲಿ ಜನರೇ ಇರುವುದಿಲ್ಲ. ಕೆಲಸ ಮುಗಿಸಿ ಬರುವುದೇ ರಾತ್ರಿ ಘಂಟೆ 7.30ರ ನಂತರ. 9.00 ಘಂಟೆಗೆ ಮರಳುವವರೂ ಇದ್ದುದರಿಂದ ಗಣತಿ ಫಜೀತಿಯಾದುದೂ ಇದೆ. ಗಣತಿದಾರರಿಗೆ ನಾಯಿಗಳ ಆಕ್ರಮಣ ವಿಶೇಷವಲ್ಲ. ಹಳ್ಳಿ ಬದುಕಿನಲ್ಲಿ ಬೊಗಳುವ ಕಚ್ಚುವ ನಾಯಿಗಳ ಕಾರುಬಾರು ಧಾರಾಳ. ಹೃದಯಾಘಾತ, ಗಾಡಿ ಅಪಘಾತ, ಜಾರಿ ಬಿದ್ದು ಸಾವು, ಹಾವಿನ ಕಡಿತ ಇವೆಲ್ಲಾ ಊಹನಾತೀತ ದುರಂತಗಳು. ಗಣತಿದಾರರನ್ನು ಬಡಿಗೆ ಹಿಡಿದು ಓಡಿಸುವವರಿರಲಿಲ್ಲ ಎಂಬುದು ಸಮಾಜದಲ್ಲಿ ಸಭ್ಯರಿದ್ದಾರೆನ್ನುವುದರ ಸಂಕೇತ. ಅಂತೂ ಜಾತಿ ಗಣತಿಯೋ, ಆರ್ಥಿಕ ಸಮೀಕ್ಷೆಯೋ ಏನೋ ಒಂದು ಮುಕ್ತಾಯವಾಗಿದೆ. ಸರಕಾರ ಗಣತಿ ಕೇಂದ್ರಗಳನ್ನು ತೆರೆದಿದೆ. ಸ್ವಯಂ ಮಾಹಿತಿ ನೀಡಲು ಏಪ್‌ ನೀಡಲಾಗಿದೆ. ಶೇಕಡಾ ಎಂಭತ್ತಕ್ಕಿಂತ ಹೆಚ್ಚು ಜನರ ಸ್ಥಿತಿ ಗತಿಗಳು ಗಣತಿಗೊಳಪಟ್ಟಿರ ಬಹುದು. ಸತ್ಯ ಮಿಥ್ಯಗಳದೇ ಜಂಜಾಟ ಉಳಿದಿರುವುದು.

ರಾಷ್ಟ್ರೀಯ ಪ್ರಗತಿಯಲ್ಲಿ ಗಣತಿ ಅತ್ಯಂತ ಪ್ರಮುಖ. ಗಣತಿಯಾಗಬೇಕು, ತತಕ್ಷಣ ವರದಿಗಳ ಕ್ರೋಢೀಕರಣವಾಗಬೇಕು, ಅಂಕಿ ಅಂಶಗಳು ಹೊರಗೆ ಬರಬೇಕು. ಇಂತಹ ಹಲವು ಬೇಕುಗಳಿವೆ. ಆ ಬೇಕುಗಳ ಹಿಂದೆ ಜನರ ಪಾರದರ್ಶಕ ಸಹಯೋಗವೂ ಬೇಕು. ಹಾಗಾದಾಗ ಗಣತಿದಾರರಿಗೆ ಕಷ್ಟವೇ ಆಗಿದ್ದರೂ ಆ ನೋವು ಮಾಸುತ್ತದೆ. ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾದೆವೆಂದು ಗರ್ವ ಪಡುತ್ತಾರೆ. ಆದರೆ, 1980-81ರ ಜನಗಣತಿಯಲ್ಲಿ ನಾನು ಕಂಡಂತೆ ಜನರ ಮನೋಗುಣದ ವಿಭಿನ್ನತೆಗಳು, ವೈರುಧ್ಯಗಳು ಗಣತಿಯ ಆಶಯವನ್ನು ಈಡೇರಿಸಿದೆಯೆಂಬುದನ್ನು ಒಪ್ಪಲಾಗದು. ಈ ಬಾರಿಯ ಜಾತಿ ಗಣತಿಯೂ ಅದೇ ಸಾಲಿಗೆ ಸೇರದೇ ಇರಲಿ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************


Ads on article

Advertise in articles 1

advertising articles 2

Advertise under the article