-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 100

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 100

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 100
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

           
 
ಪ್ರೀತಿಯ ಮಕ್ಕಳೇ... ಕಳೆದ ವಾರ ನಿಮ್ಮ ತಾರಾನಾಥ ಸರ್ ಮುಂದಿನವಾರ ಶತಕ ಪೊರೈಸಲಿದ್ದೇನೆ ಎಂದು ನೆನಪು ಮಾಡಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಒಂದು ವಿಜ್ಞಾನ ಅಂಕಣವನ್ನು ಬರೆಯಲು ನನ್ನನ್ನು ಆಯ್ಕೆ ಮಾಡಿದ್ದು ಮಾತ್ರವಲ್ಲ ನಿರಂತರವಾಗಿ ಬರೆಯುವಂತೆ ನೋಡಿಕೊಂಡವರು ಕೂಡಾ ನಿಮ್ಮ ತಾರಾನಾಥ ಸರ್. ಈ ಶತ ಲೇಖನಗಳಿಗೆ ನಾನು ಋಣಿಯಾಗಿರಬೇಕಾದದ್ದು ತಾರಾನಾಥ ಸರ್ ಅವರಿಗೆ. 

ನನ್ನ ಲೇಖನಗಳು ನಿಮ್ಮನ್ನು ತಲುಪಿವೆ ಮತ್ತು ಪ್ರತಿ ಲೇಖನದಲ್ಲಿ ಹೇಳಬೇಕಾದ ವಿಷಯಗಳು ಸರಳವಾಗಿದ್ದವು ಎಂದು ನಾನು ಭಾವಿಸುತ್ತೇನೆ. ಎಲ್ಲಿಯಾದರೂ ಕ್ಲಿಷ್ಟವಾಗಿ ಕಂಡರೆ ನನ್ನ ನಂಬರ್ ಗೆ ಒಂದು ಸಂದೇಶ ಕಳುಹಿಸಿದರೆ ನನಗೆ ತುಂಬಾ ಸಹಾಯವಾಗುತ್ತದೆ. ಅದನ್ನು ನಾನು ಮುಂದಿನ ಲೇಖನದ ವಸ್ತುವಾಗಿಸಿಕೊಳ್ಳಬಹುದು. 

1997 ರ ನಂತರ 2024 ರಲ್ಲಿ ನಾನು ಬೋಧನೆ ಮಾಡಿದೆ. ಸಿ ಬಿ ಎಸ್ ಸಿ ಯ ಗ್ರೇಡ್ 10 ನನ್ನ ಒಬ್ಬಳು ವಿದ್ಯಾರ್ಥಿನಿ ನನ್ನ ವಿಷಯದಲ್ಲಿ 100 ಕ್ಕೆ 100 ಪಡೆದರೆ 50% ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಸಾಧಿಸಿದರು. ಆದ್ದರಿಂದ ನನ ತಲುಪುವಿಕೆಯ ಬಗ್ಗೆ ನನಗೆ ವಿಶೇಷ ನಂಬಿಕೆ ಅಷ್ಟೇ. ಏನೇ ಇರಲಿ ವಿಷಯದೊಂದಿಗೆ ಮುಂದುವರಿಸೋಣ.

ನಮಗೆ ಸ್ವಚ್ಛತೆಯ ಬಗ್ಗೆ ಎರಡು ಜಾಹೀರಾತುಗಳು ತೀರಾ ಪರಿಚಿತ. ಒಂದು ಸೋಪಿನಿಂದ ಕೈ ತೊಳೆಯುವುದು ಇನ್ನೊಂದು ನಿಮ್ಮ ಟಾಯ್ಲೆಟ್ ಅನ್ನು ಸ್ವಚ್ಛವಾಗಿಡುವುದು. ಇಲ್ಲಿ ಎರಡೂ ಕ್ರಿಯೆಗಳ ಉದ್ದೇಶ ಒಂದೇ ಆಗಿದ್ದರೂ ಕೂಡಾ ಎರಡೂ ಒಂದೇ ಪ್ರಕ್ರಿಯೆಗಳಲ್ಲ. ಟಾಯ್ಲೆಟ್ ನಲ್ಲಿರುವ ಸೂಕ್ಷ್ಮಾಣು ಜೀವಿಗಳನ್ನು ನಾಶ ಮಾಡುವ ಕ್ರಿಯೆ ಪೂತಿನಾಶಕ ಕ್ರಿಯೆ (disinfection). ಅದಕ್ಕೆ ಬಳಸುವ ವಸ್ತುಗಳು ಪೂತಿನಾಶಕಗಳು (disinfectant). ಇವು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ. ಸಾಬೂನು ಕೂಡಾ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ ಅಂದರೆ ಕೊಲ್ಲುತ್ತದೆ. ಆದರೆ ಸಾಬೂನು ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದಿಲ್ಲ ಬದಲಾಗಿ ನಾಶಪಡಿಸುತ್ತವೆ. ಆದರೆ ಇದು ಪೂತಿನಾಶ ಅಲ್ಲ ಬದಲಾಗಿ ಸ್ವಚ್ಛಗೊಳಿಸುವಿಕೆ (cleansing). ಎರಡರ ಪರಿಣಾಮ (product) ಒಂದೇ ಆದರೆ ಪ್ರಕ್ರಿಯೆ (process) ಒಂದೇ ಅಲ್ಲ. ನಮ್ಮ ಚರ್ಚೆಯ ವಿಷಯಕ್ಕೆ ಸಾಬೂನು ನಮಗೆ ಹತ್ತಿರವಾಗಿರುವುದರಿಂದ ಇವತ್ತು ನಮ್ಮ ಚರ್ಚೆಯ ವಸ್ತು ಸಾಬೂನು.

ಸಾಬೂನು ಎಂದರೇನು ಎಂಬ ಪ್ರಶ್ನೆಗೆ ಸರಳವಾಗಿ ಉತ್ತರಿಸಬೇಕೆಂದರೆ ಸಾಬೂನು ಕೊಬ್ಬಿನಾಮ್ಲಗಳ ಲವಣ (salts if fatty acids). ಲವಣಗಳೆಂದರೆ ಗೊತ್ತಲ್ಲ ಆಮ್ಲವೊಂದು ಪ್ರತ್ಯಾಮ್ಲದೊಂದಿಗೆ ವರ್ತಿಸಿದಾಗ ಸಿಗುವ ಉತ್ಪನ್ನವೇ ಲವಣ. ಸಸ್ಯ ಅಥವಾ ಪ್ರಾಣಿಜನ್ಯ ಎಣ್ಣೆಗಳು ಸೋಡಿಯಂ ಅಥವಾ ಪೊಟಾಸಿಯಂ ಹೈಡ್ರಾಕ್ಸೈಡಿನೊಂದಿಗೆ ವರ್ತಿಸಿದಾಗ ಸಾಬೂನು ಉತ್ಪತ್ತಿಯಾಗುತ್ತವೆ. ಸೋಡಿಯಂ ಸೋಪ್ ಗಳು ಘನ ಅಥವಾ ಗಟ್ಟಿ ಸೋಪ್ ಗಳಾದರೆ (hard soaps) ಪೊಟಾಸಿಯಂ ಸೋಪ್ ಗಳು ಮೃದು ಸಾಬೂನುಗಳು (soft or liquid soaps). ಶಾಂಪೂಗಳು ಪೊಟಾಷಿಯಂ ಸೋಪ್ ಗಳಾದರೆ ಮೈ ತೊಳೆಯುವ ಸಾಬೂನು ಸೋಡಿಯಂ ಸೋಪ್. ಸೋಡಿಯಂ ಮತ್ತು ಪೊಟಾಸಿಯಂ ಹೈಡ್ರಾಕ್ಸೈಡ್ ಗಳು ಪ್ರಬಲ ಪ್ರತ್ಯಾಮ್ಲಗಳು ಮತ್ತು ಕೊಬ್ಬಿನಾಮ್ಲಗಳು ದುರ್ಬಲ ಆಮ್ಲಗಳು. ಆದ್ದರಿಂದ ಅವುಗಳಿಂದಾಗುವ ಸಾಬೂನುಗಳು ಪ್ರತ್ಯಾಮ್ಲೀಯ ಗುಣವನ್ನು ಹೊಂದಿರುತ್ತವೆ. 

ಈ ಸೋಪಿನ ಕಣಗಳ ವಿಚಿತ್ರ ಲಕ್ಷಣವೇ ಅವುಗಳ ಬಳಕೆಯನ್ನು ವ್ಯಾಪಕಗೊಳಿಸಿವೆ. ಸೋಪಿನ ಅಣುಗಳ ಎರಡು ತುದಿಗಳು ವಿಪರೀತ ಅಂದರೆ ವ್ಯತಿರಿಕ್ತ ಗುಣವನ್ನು ಹೊಂದಿವೆ. ಸೋಡಿಯಂ ಅಯಾನ್ ಇರುವ ಭಾಗಕ್ಕೆ ನೀರೆಂದರೆ ಇಷ್ಟ (hydrophilous). ನಿಮ್ಮ ಮನೆಯ ಎಮ್ಮೆಯ ಹಾಗೆ ನೀರಿನಲ್ಲಿ ಮಲಗಿದರೆ ಮೇಲೆದ್ದು ಬರುವ ಪ್ರಶ್ನೆಯೇ ಇಲ್ಲ. ಕೊಬ್ಬಿನಾಮ್ಲದ ತುದಿಗೆ ಹುಚ್ಚು ನಾಯಿ ಕಡಿತದ ಹಾಗೆ ನೀರೆಂದರಾಗದು (hydrophobic). ಒಂದು ಹನಿ ಸೋಪನ್ನು ನೀರಿನ ಮೇಲೆ ಹಾಕಿದರೆ ಸೋಡಿಯಂನ ತುದಿ ನೀರಿಗೆ ಅಂಟಿಕೊಂಡರೆ ಕೊಬ್ಬಿನಾಮ್ಲದ ತುದಿ ಬಾಲ ಎತ್ತಿ ಓಡುವ ದನದ ಹಾಗೆ ನೀರಿನ ಮೇಲ್ಮೈಯಿಂದ ಮೇಲಕ್ಕೆ ಎತ್ತಿಕೊಂಡಿರುತ್ತದೆ. ಅದೇ ನೀರಿನೊಳಗೆ ಹಾಕಿ ಕಲಕುತ್ತೀರಿ ಎಂದಿಟ್ಟುಕೊಳ್ಳೋಣ. ಆಗ ಕೊಬ್ಬಿನಾಮ್ಲದ ಕಣಗಳು ನೀರಿನಿಂದ ದೂರಕ್ಕೆ ಅಂದರೆ ಕೇಂದ್ರದ ಕಡೆಗೆ ಅಥವಾ ಮತ್ತು ಸೋಡಿಯಂ ನ ತುದಿ ನೀರಿಗೆ ಅಂಟಿಕೊಂಡಂತೆ ಕೋಟೆಯ ಗೋಡೆಯಂತೆ ನಿಂತು ಫುಟ್ಬಾಲಿನಂತ ಗೋಳ ಉಂಟಾಗುತ್ತದೆ. ಇದನ್ನು ಮೈಸೆಲ್ಲೆ (micelle) ಎನ್ನುತ್ತೇವೆ. ಈ ಕೊಬ್ಬಿನ ಕಣಗಳಿವೆಯಲ್ಲ ಇವುಗಳಿಗೆ ನೀರೆಂದರಾಗದು ಆದರೆ ಕೊಬ್ಬು, ಜಿಡ್ಡು ಗ್ರೀಸ್ ನಂತಹ ವಸ್ತುಗಳೆಂದರೆ ಬಹಳ ಇಷ್ಟ. ಬಟ್ಟೆಯಲ್ಲಿರುವ ಧೂಳು ಮಣ್ಣಿಗೂ ಅಷ್ಟೇ ಈ ಎಣ್ಣೆಯ ಜಿಡ್ಡು ಎಂದರೆ ಇಷ್ಟ. ಅದಕ್ಕೆ ಅಂಟಿಕೊಳ್ಳುತ್ತವೆ. ಈಗ ಈ ಸೋಪಿನಲ್ಲಿರುವ ಎಣ್ಣೆಯ ಬಾಲ ಈ ಜಿಡ್ಡಿಗೆ ಅಂಟಿಕೊಂಡು ಮೈಸಿಲ್ಲೆಗಳನ್ನು ರೂಪಿಸುತ್ತವೆ. ಈಗ ನೀವು ಬಟ್ಟೆಯನ್ನು ಜೋರಾಗಿ ಉಜ್ಜಿದಿರಿ ಎಂದಿಟ್ಟುಕೊಳ್ಳೋಣ ಈ ಮೈಸಿಲ್ಲೆಗಳು ಜಾರಿ ಬಿಡುತ್ತವೆ. ಆಗ ಅವುಗಳು ಧೂಳು ಎಣ್ಣೆಯ ಕಣಗಳನ್ನು ಬಟ್ಟೆಯಿಂದ ಎತ್ತಿಕೊಂಡು ಹೋಗಿಬಿಡುವುದರಿಂದ ಬಟ್ಟೆ ಸ್ವಚ್ಛವಾಗಿಬಿಡುತ್ತದೆ. ಈಗ ನೀರಿನಿಂದ ತೊಳೆದರೆ ಸೋಪಿನ ಮೈಸಿಲ್ಲೆಗಳು ಬಟ್ಟೆಯಿಂದ ದೂರವಾಗುತ್ತವೆ. 

ಹೀಗೆ ಒಂದು ತುದಿಗೆ ನೀರೆಂದರೆ ಇಷ್ಟ ಇನ್ನೊಂದಕ್ಕೆ ಎಣ್ಣೆ. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಂಬ ಕನ್ನಡದ ಗಾದೆಯ ಹಾಗೆ. ಹೊಂದಾಣಿಕೆ ಆಗದ ಮಿತ್ರತ್ವ ಎನ್ನುತ್ತೇವಲ್ಲ. ಆದರೆ ಇಲ್ಲಿ ಎತ್ತು ಏರಿಗೆ ಎಳೆದು ಕೋಣ ನೀರಿಗೆ ಎಳೆಯುವುದರಿಂದದ ಬಟ್ಟೆ ಸ್ವಚ್ಛವಾಗುತ್ತದೆ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************




Ads on article

Advertise in articles 1

advertising articles 2

Advertise under the article