-->
ಜೀವನ ಸಂಭ್ರಮ : ಸಂಚಿಕೆ - 211

ಜೀವನ ಸಂಭ್ರಮ : ಸಂಚಿಕೆ - 211

ಜೀವನ ಸಂಭ್ರಮ : ಸಂಚಿಕೆ - 211
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                             
ಮಕ್ಕಳೇ... ಇಂದು ಭಾವದ ಮಹತ್ವ ತಿಳಿದುಕೊಳ್ಳೋಣ. 

ಮನಸ್ಸಿನ ಕೆಲಸಗಳಲ್ಲಿ ಭಾವದ ಕೆಲಸ ಬಹಳ ಮುಖ್ಯ. ನಮ್ಮ ಭಾವವೇ ನಮ್ಮನ್ನು ಶ್ರೀಮಂತ ಅಥವಾ ಬಡವ ಮಾಡುತ್ತದೆ. ನಮ್ಮ ಭಾವವೇ ನಮಗೆ ಸಂತೋಷ ಅಥವಾ ದುಃಖ ಉಂಟು ಮಾಡುತ್ತದೆ. ಈಗ ನಾವು ನಮ್ಮ ಮನೆಯನ್ನು ನೋಡಿ ಎಷ್ಟು ಚೆಂದ ಅನ್ನಿ? ಆಗ ಅದೇ ಸ್ವರ್ಗ. ಏನಿದು ಮನೆ, ಎಂತೆಂತಹವರು ಎಂತೆಂತಹ ಮನೆ ಕಟ್ಟಿದ್ದಾರೆ ಅಂತ ಅಂದರೆ, ಸ್ವರ್ಗ ಹೋಯಿತು, ನರಕ ಶುರುವಾಯಿತು. ಮನೆ ಏನು ಹೇಳುತ್ತದೆ ವಿಚಾರ ಮಾಡು. ಮನೆ ಇರುವುದು ವಾಸಿಸುವುದಕ್ಕೆ. ನಾನು ನಿಮಗೆ ಎಷ್ಟು ಅನುಕೂಲ ಮಾಡಿ ಕೊಟ್ಟಿದ್ದೇನೆ? ಇರೋದಕ್ಕೆ. ಅದಕ್ಕೆ ಬೆಲೆ ಕೊಡಬೇಕು. ಮನೆ ಮಹತ್ವದಲ್ಲ, ಮನೆಯ ಬಗ್ಗೆ ಇರುವ ಭಾವ ಮಹತ್ವದ್ದು. ಕೆಲವು ಬಾರಿ ಅಂದುಕೊಳ್ಳುತ್ತೇವೆ, ಈ ಮನೆ ಶುಭ ಅಲ್ಲ ಅಂತ. ಈ ಮನೆಯಲ್ಲಿ ಏನೋ ತಪ್ಪಿದೆ. ಈ ಮನೆಯೊಳಗೆ ಲಕ್ಷಣ ಇಲ್ಲ ಅಂತೀವಿ. ಅದಕ್ಕೆ ಕಾದಾಟ ಶುರುವಾಗಿದೆ ಅನ್ನುತ್ತೇವೆ. ಮನೆ ಹೇಳುತ್ತದೆ ನನ್ನದಲ್ಲ ಕಾದಾಟ, ನಿನ್ನ ಮನಸ್ಸಿನದು ಕಾದಾಟ. ನಿನ್ನ ಮನಸ್ಸಿನ ಬಾಗಿಲು ಸರಿ ಮಾಡಿಕೋ, ನಿನ್ನ ಮನಸ್ಸಿನ ಕಿಟಕಿ ಸರಿ ಮಾಡಿಕೋ, ನಿನ್ನ ಮನಸ್ಸಿನಲ್ಲಿರುವ ಗೋಡೆ ತಿರುಗಿಸಿ ಹೊಸ ಗೋಡೆ ಕಟ್ಟಿಕೋ, ನನ್ನ ನೀನು ಮುಟ್ಟುತ್ತೀಯ. ಚೆನ್ನಾಗಿ ಇರೋದಕ್ಕೆ ಭಾವ ಮುಖ್ಯ. ನಮ್ಮ ಮನೆ ಎನ್ನುವ ಭಾವ ಎಷ್ಟು ಸುಂದರ! ಅದು ಸಂತೋಷ ಕೊಡಬೇಕು. ನಮ್ಮ ಮನೆಯ ಬೆಲೆ ಯಾವ ಮನೆಗೂ ಇಲ್ಲ. ಯಾಕೆಂದರೆ ನಗುನಗುತ್ತ, ಹಾಡುತ್ತಾ, ನಲಿಯುತ್ತಾ ಸಂತೋಷ ಪಡುತ್ತಿದ್ದೇವೆ. ನಮ್ಮ ಮನೆಯಲ್ಲಿ ಇದ್ದೀವಿ ಅಂತ ಅಲ್ಲ ಅದಕ್ಕೆ, ಯಾವ ಮನೆಯಲ್ಲಿ ಸಂತೋಷ, ಸಮಾಧಾನ ಇರುತ್ತದೆ ಅದಕ್ಕೆ ಬಹಳ ಮಹತ್ವ. ಹೀಗೆ ಭಾವಿಸಿದರೆ ಗುಡಿಸಲು ಅರಮನೆಯಾಗುತ್ತದೆ. ಅದನ್ನು ಬಿಟ್ಟು ಇದ್ಯಾವ ಮನೆ ಅಂತ ಭಾವಿಸಿದರೆ, ಅರಮನೆಯು ಗುಡಿಸಲಾಗುತ್ತದೆ. ಭಾವನೆಗೆ ಅಷ್ಟು ಮಹತ್ವ.

ಭಾವನೆಯ ಮೇಲೆ ನಮ್ಮ ಬದುಕು ಕಟ್ಟಿಕೊಳ್ಳಬೇಕಾಗುತ್ತದೆ. ಇಂತಹ ಭಾವ ನಿಸರ್ಗ ನಮಗೆ ಇಟ್ಟಿದೆ. ತಲೆಗಿಂತ, ದೇಹಕ್ಕಿಂತ ಹೆಚ್ಚು ಮಹತ್ವ ಭಾವನೆಗೆ. ಕ್ಷಣದಲ್ಲೇ ಸಂತೋಷ ಉಂಟು ಮಾಡುತ್ತದೆ. ಹಾಗೆಯೇ ಕ್ಷಣದಲ್ಲಿ ದುಃಖ ಉಂಟು ಮಾಡುತ್ತದೆ. ನಮ್ಮ ತಲೆಗೆ ನಾವು ಏನನ್ನಾದರೂ ಹಾಕಿಕೊಂಡರೆ ಅದು ಸಾಯೋತನಕ ಹೋಗುವುದಿಲ್ಲ. ಉದಾಹರಣೆಗೆ ನಾವು ಕೆಳಗಿನವರು, ಬಡವರು ಅಂತ ತಲೆಯಲ್ಲಿ ಹಾಕಿಕೊಂಡಿದ್ದೇವೆ ಅಂದರೆ, ನಾವು ಯಾವುದಕ್ಕೂ ಬರಲಾರದವರು, ಹೀಗೆ ಅಂದುಕೊಂಡರೆ ಹೇಗಾಗುತ್ತದೆ?. ನಡಿಯೋದಕ್ಕೆ ಬರೋದಿಲ್ಲವೇ?. ಹಿಡಿಯೋದಿಕ್ಕೆ ಬರುವುದಿಲ್ಲವೇ?. ನೋಡೋದಕ್ಕೆ ಬರುವುದಿಲ್ಲವೇ?. ಆಲೋಚನೆ ಮಾಡೋಕೆ ಬರುವುದಿಲ್ಲವೇ?. ಜಗತ್ತನ್ನು ಪ್ರೀತಿಸಲು ಬರುವುದಿಲ್ಲವೇ?. ಎಲ್ಲಾ ಬರುತ್ತದೆ. ಆದರೆ ನಾವು ಅಂದುಕೊಂಡಿರುವ ಭಾವನೆ, ನಮ್ಮನ್ನು ಅಸಹಾಯ ಮಾಡುತ್ತದೆ. 

ಒಂದು ಘಟನೆ, ಎರಡು ಹುಡುಗರು ರಸ್ತೆಯಲ್ಲಿ ಆಟ ಆಡುತ್ತಿದ್ದರು. ಒಬ್ಬ ಹುಡುಗ 21 ಅಂತಸ್ತಿನ ಮಹಲಿನಲ್ಲಿದ್ದನು. ಆತ ಕೆಳಗೆ ಬಂದು ಈ ಬಡ ಹುಡುಗನ ಜೊತೆ ಆಟ ಆಡುತ್ತಿದ್ದನು. ಇನ್ನೊಬ್ಬ ಸಣ್ಣ ಕುಟೀರದವನಾಗಿದ್ದನು. ಶ್ರೀಮಂತ ಹುಡುಗ ಹೇಳಿದ, ನಮ್ಮ ಮನೆ ನೋಡು ಎಷ್ಟು ಎತ್ತರ?. ನಮ್ಮ ಮನೆಯ ಮೇಲೆ ನಿಂತರೆ ಅರ್ಧ ಊರು ಕಾಣಿಸುತ್ತದೆ ಅಂದನು. ಆಗ ಬಡ ಹುಡುಗ ಹೇಳಿದನು, ನಮ್ಮ ಮನೆಯ ಮುಂದೆ ನಿಂತರೆ ಆಕಾಶ ಕಾಣಿಸುತ್ತದೆ ಎಂದನು. ನಿನ್ನ ಮನೆ ಮುಂದೆ ನಿಂತರೆ ಅರ್ಧ ಊರು ಅಷ್ಟೇ, ಎಂತಹ ಭಾವ, ಆ ಬಡ ಹುಡುಗನಿಗೆ 21 ಅಂತಸ್ತಿನ ಮನೆಗೆ ಹೋಗಬೇಕು ಅಂತ ಅನಿಸಲಿಲ್ಲ. ನೋಡುವ ದೃಷ್ಟಿಕೋನ, ನೋಡುವ ಭಾವ. ನಾನು ಕ್ಷುಲ್ಲಕ ಅನ್ನುವ ಭಾವ ಇರಲಿಲ್ಲ. ಇಂತಹ ಭಾವ ಬಂದರೆ ಬದುಕು ಅರಳುತ್ತದೆ. ಅದೇ ಅಂದರೆ ಅದೇ. ಇಲ್ಲ ಅಂದರೆ ಇಲ್ಲ.

ನೋಡೋದಕ್ಕೆ ಸುತ್ತ ಮುತ್ತ ಮರಗಳಿವೆ. ಶಾಂತ ವಾತಾವರಣ ಇದೆ. ಚಂದಾಗಿ ಇರಬೇಕಲ್ಲ. ಇವೆಲ್ಲ ನನ್ನ ಹೆಸರಿಗೆ ಆಗಬೇಕು ಅಲ್ಲಿಯವರೆಗೆ ನನಗೆ ಸಮಾಧಾನ ಇಲ್ಲ ಅಂದರೆ ಹೇಗೆ..?, ಇವುಗಳನ್ನೆಲ್ಲ ನೋಡಿ ಆನಂದ ಪಡುವುದಕ್ಕೆ ಹೆಸರಿಗೆ ಏಕೆ ಆಗಬೇಕು?. ನೋಡುವುದಕ್ಕೆ ಯಾರ ತಕರಾರು ಇಲ್ಲ. ಅದನ್ನು ನನ್ನ ಹೆಸರಿಗೆ ಬರೆಸಿಕೊಳ್ಳೋದಕ್ಕೆ ತಕರಾರು ಇರಬಹುದು. ನೋಡುವುದಕ್ಕೆ ಯಾವ ತಕರಾರು ಇಲ್ಲ. ಕಾಗದ ಪತ್ರ ಬರೆಸಿಕೊಳ್ಳುವುದಕ್ಕೆ ತಕರಾರು ಇದೆ. ಕೊರತೆಯ ಭಾವ ಇರಬಾರದು. ತುಂಬಿದ ಭಾವ ಇರಬೇಕು. ನಿಸರ್ಗ ಎಲ್ಲಾ ಕೊಟ್ಟಿದೆ. ವಾಹನ ಇಲ್ಲದಿರಬಹುದು, ನಡೆಯಲು ಕಾಲು ಕೊಟ್ಟಿದೆ. ಆದ್ದರಿಂದ ನನ್ನ ಕಾಲಿಗೆ ಇರುವ ಬೆಲೆ ವಾಹನಕ್ಕೆ ಇಲ್ಲ. ಕಾಲೇ ಇಲ್ಲ ಅಂದ ಬಳಿಕ ವಾಹನಕ್ಕೆ ಎಲ್ಲಿದೆ ಬೆಲೆ?. ಹೀಗೆ ವಿಚಾರ ಮಾಡುವುದು. ಅಂದರೆ ವಾಹನ ತೆಗೆದುಕೊಳ್ಳಬಾರದು ಅಂತ ಅಲ್ಲ. ವಾಹನ ಇಲ್ಲ ಅಂದಾಗ ಹೀಗೆ ವಿಚಾರ ಮಾಡಬೇಕು. ವಾಹನ ಇಲ್ಲ ಅಂತ ಕೊರತೆ ಭಾವ ಬರಬಾರದು. ಈಗ ನಾವು ವಿಮಾನಕ್ಕೆ ಹತ್ತಲಿಲ್ಲ ಅಂದಾಗ, ಅವರು ಮೇಲೆ ಹಾರಾಟ ಮಾಡುತ್ತಾರೆ, ನಾವು ಕೆಳಗೆ ನಡೆಯುತ್ತಾ ಇದ್ದೇವೆ, ಹಾರಾಟ ಮಾಡಿದವರು ಕೆಳಗೆ ಇಳಿದು ನಮ್ಮ ಹತ್ತಿರ ಬರುತ್ತಾರೆ ಅಂತ ವಿಚಾರ ಮಾಡಬೇಕು. ವಿಮಾನ ಹತ್ತಲಿಲ್ಲ ಅನ್ನುವ ಕೊರತೆ ಭಾವ ಬರಬಾರದು. ಅದೇ ವಿಮಾನದಲ್ಲಿ ಹೋಗುವ ಅವಕಾಶ ಸಿಕ್ಕರೆ, ಇಡೀ ಭೂಮಂಡಲ ನೋಡಬಹುದು ಅಂತ ಭಾವಿಸುವುದು. ಸರಿಯಾಗಿ ಭಾವಿಸುವುದನ್ನು ಕಲಿತರೆ ಸ್ವರ್ಗ ತಯಾರು ಮಾಡಿಕೊಳ್ಳುತ್ತೇವೆ. ಆನಂದ ಪಡುವುದು ನಮ್ಮ ಕೈಯೊಳಗೆ ಇದೆ.

ನಿಸರ್ಗ ನಮಗೆ ದೇಹ, ಬುದ್ಧಿ ಮಾತ್ರ ಕೊಡಲಿಲ್ಲ. ಭಾವವನ್ನು ಕೊಟ್ಟಿದೆ. ಭಾವವೇ ಸುಖಕ್ಕೆ ಕಾರಣ. ಈ ಭಾವ ಸರಿಯಾಗಿ ಬಳಸುವುದನ್ನು ಕಲಿತರೆ, ನಮ್ಮ ಜೀವನದ ಸಾಮರ್ಥ್ಯ ಹೆಚ್ಚಿಸುವ ಶಕ್ತಿ ಭಾವಕ್ಕೆ ಇದೆ. ನಮಗೆ ಅತ್ಯಂತ ಹೆಚ್ಚು ಸಂತೋಷ ಕೊಡುವ ಸಾಮರ್ಥ್ಯ ಭಾವಕ್ಕೆ ಇದೆ. ಬುದ್ಧಿಯಿಂದ ಎಲ್ಲಾ ಮಾಡೋದಕ್ಕೆ ಆಗುವುದಿಲ್ಲ. ದೇಹದಿಂದ ಎಲ್ಲಾ ಮಾಡುವುದಕ್ಕೂ ಆಗುವುದಿಲ್ಲ. ಆದರೆ ಭಾವ ಕೊರತೆಯನ್ನು ತುಂಬುತ್ತದೆ. ನಮ್ಮ ಜೀವನ ಶ್ರೀಮಂತ ಮಾಡುವುದು ಭಾವ. ಸಾಕು ಅನ್ನುವ ಭಾವ ಆರಾಮ ಕೊಡುತ್ತದೆ. ಅದರ ಬದಲು ನಾವಿರುವ ಸುತ್ತಮುತ್ತ ಇರುವುದನ್ನು ಖರೀದಿ ಮಾಡಬೇಕು ಅನ್ನುವ ಭಾವ ಬಂತು ಎಂದರೆ ಮುಗಿಯಿತು. ಅದೇ ಕ್ಷಣ ದುಃಖ. ವಸ್ತು ನೋಡಿದಾಗ ಭಾವವಾಗುತ್ತದೆ. ಅದು ಯಾವ ರೀತಿ ಆಗಬೇಕೊ ಹಾಗೆ ಆದರೆ ಸಂತೋಷ, ಇಲ್ಲದಿದ್ದರೆ ದುಃಖ. 

ಈಗ ನಮ್ಮ ಬಳಿ ಪ್ಲಾಸ್ಟಿಕ್ ಚೇರ್ ಇದೆ ಎಂದು ಇಟ್ಟುಕೊಳ್ಳಿ. ಇದೇನು ಪ್ಲಾಸ್ಟಿಕ್? ಅಂದರೆ ಮುಗಿಯಿತು. ಇದು ಚಿನ್ನದಾಗಿದ್ದರೆ ಚೆಂದಾಗಿತ್ತು ಅಂದರೆ ಶುರುವಾಯಿತು ದುಃಖ. ಒಂದು ಕ್ಷಣದಲ್ಲಿ ಸುಖ, ಇನ್ನೊಂದು ಕ್ಷಣದಲ್ಲಿ ದುಃಖ. ಈ ಸಾಮರ್ಥ್ಯ ಇರುವುದು ಭಾವಕ್ಕೆ. ನಾನು ಮುಕ್ತ ಅಂದರೆ ಮುಕ್ತ. ನಾನು ಬಂಧಿತ ಅಂದರೆ ಬಂಧಿತ. ನಾನು ದಡ್ಡ ಅಂದರೆ ದಡ್ಡ. ನಾನು ಜಾಣ ಅಂದರೆ ಜಾಣ. ನಾನು ಸಿರಿವಂತ ಅಂದರೆ ಸಿರಿವಂತ. ನಾನು ಬಡವ ಅಂದರೆ ಬಡವ. ಇದೆಲ್ಲ ಮಾಡಿದ್ದು ಬಾವ. ಇವೆಲ್ಲ ಭಾವದಿಂದ ಆಗಿದ್ದು. ಬಂಧನ ಆಗುವುದು ಭಾವದಲ್ಲಿ. ಭಾವದಿಂದ ಬಂಧಿತರು ಆಗುತ್ತೇವೆ. ಆದ್ದರಿಂದ ಭಾವದಂತೆ ಭಾಸವಾಗುತ್ತದೆ. ಭಾವ ಎಲ್ಲವನ್ನು ಪರಿವರ್ತಿಸುತ್ತದೆ. ಅಷ್ಟು ಸಾಮರ್ಥ್ಯ ಭಾವಕ್ಕೆ. ಇಂತಹ ಭಾವ ಇಲ್ಲದಂತಹ ಒಬ್ಬ ಮನುಷ್ಯನಾದರೂ ಇದ್ದಾನೆಯೇ, ಇಲ್ಲ. ನಿಸರ್ಗ ಎಲ್ಲರಿಗೂ ಭಾವ ಅಳವಡಿಸಿದೆ. ತಲೆಯ ಸಾಮರ್ಥ್ಯ ಮಿತ. ಶರೀರ ಸಾಮರ್ಥ್ಯವು ಮಿತವೇ. ಆದರೆ ಭಾವದ ಸಾಮರ್ಥ್ಯ ಅಮಿತ. ಅದಕ್ಕೆ ಮಿತವಿಲ್ಲ. ನಾನೇ ಬ್ರಹ್ಮ ಅಂತ ಹೇಳಬಹುದು ಅಥವಾ ನಾನೇನು ಕೀಳು ಅಂತ ಹೇಳಬಹುದು. ಕ್ಷಣದಲ್ಲಿ ಇದನ್ನೆಲ್ಲ ಮಾಡುತ್ತದೆ. ನಾನು ವಿದ್ಯಾರ್ಥಿ, ಇದು ಭಾವ. ನಾನು ಶಿಕ್ಷಕ, ಇದು ಭಾವವೇ. ಹಾಗೆ ಗಂಡ, ಹೆಂಡತಿ, ಮಗು, ಮಗಳು, ಮಾಲೀಕ, ಬಡವ, ಶ್ರೀಮಂತ, ಒಳ್ಳೆಯವ ಕೆಟ್ಟವ, ಅಧಿಕಾರಿ, ಸಚಿವ, ಮಂತ್ರಿ, ಅನ್ನೋದೆಲ್ಲವೂ ಭಾವವೇ. ನಮ್ಮ ದೇಹ, ಅಂಗ, ಇಂದ್ರಿಯ ಎಲ್ಲಾ ಹಾಗೆ ಇದೆ. ಆದರೆ ಭಾವ ಬದಲಾಗಿದೆ ಅಷ್ಟೇ. ಭಾವನೆ ನಮ್ಮನ್ನು ಏನು ಬೇಕಾದರೂ ಮಾಡುತ್ತದೆ. ಇಂತಹ ಭಾವ ಪಡೆದಿರುವ ನಾವು ಏನಾಗಬೇಕು ಅನಿಸುತ್ತದೆ ಅದು ನಾವಾಗಬಹುದು. 

ಭಾವ ಎಷ್ಟು ಅದ್ಭುತ. ಸತ್ಯಂ ಶಿವಂ ಸುಂದರಂ ಅನ್ನೋ ಭಾವ ಬಂತು ಅಂದರೆ ಜಗತ್ತೇ ಅದ್ಬುತ. ಇದೇನು ನರಕ ಅಂತ ಅಂದರೆ ನಮ್ಮ ಮಟ್ಟಿಗೆ ಇದು ನರಕವೇ. ಜಗತ್ತಿಗೆ ಏನು ಆಗಿಲ್ಲ. ನಾವು ನಮ್ಮ ಜೀವನವನ್ನು ಸ್ವರ್ಗ ಮಾಡುವುದು ಇದಕ್ಕೆ ಸಾಧನೆ. ಸಾಧನೆ ಎಂದರೆ ಜೀವನ ಸುಂದರಗೊಳಿಸುವುದು. ಭಾವದಿಂದ ಶೃಂಗಾರ ಮಾಡುವುದು. ಭಾವದಿಂದ ಸುಂದರ ಮಾಡುವುದು. ನಾನು ಸೋತವ ಅನ್ನಿ ಸೋತವನೇ, ನಾನು ಗೆಲ್ಲುವವ ಎನ್ನಿ ಗೆಲ್ಲುವವರೇ. ನಾನು ಆನಂದವಾಗಿದ್ದೇನೆ ಅಂತ ಅನ್ನಿ ಆನಂದವೇ. ನಾನು ಅತ್ಯಂತ ದುಃಖಿ ಅಂದರೆ ದುಃಖಿ. 

ಒಂದು ಘಟನೆ, ಒಂದು ಏಡಿ ಕುಟುಂಬ ದಡದಲ್ಲಿ ತಿರುಗಾಡುತ್ತಿತ್ತು. ಎಲ್ಲಾ ಮರಿಗಳು ಎಲ್ಲಾ ಅಡ್ಡ ಅಡ್ಡವಾಗಿ ಹೋಗುತ್ತಿದ್ದವು. ತಾಯಿ ತನ್ನ ಮಕ್ಕಳಿಗೆ ಹೇಳಿತು, ಜಗತ್ತಿನಲ್ಲಿ ಅತಿ ಸುಂದರ ವ್ಯಕ್ತಿಗಳು ಎಂದರೆ ನಾವೇ. ನಮ್ಮ ರಚನೆ, ಕಾಲು, ಹೇಗಿದೆ ನೋಡಿ ಅಂದಿತು. ಅಲ್ಲೇ ನೀರಿನಲ್ಲಿ ಒಂದು ಮೀನು ಹೊಳೆಯುತ್ತಿತ್ತು. ಅದು ಹೇಳಿತು, ನನ್ನ ಕಡೆ ನೋಡಿಲ್ಲವೇನು?. ನನ್ನ ಬಣ್ಣ, ನನ್ನ ರೂಪ, ನೀನು ನೋಡಿಲ್ಲವೇನು?. ಆಗ ಏಡಿ ಹೇಳಿತು, ನಿನಗೆ ನಮ್ಮ ಹಾಗೆ ತಿರುಗಾಡಲು ಬರುತ್ತದೆ ಏನು? ಎಂದಿತು. ಏಡಿ ನಮ್ಮ ಕಾಲು ಹೇಗಿದೆ ನೋಡು. ನಿನಗೆ ಕಾಲು ಇದೆಯೇನು?. ನಾವು ಅಡ್ಡ ನಡೆಯ ಬಲ್ಲೆವೂ, ನೀರಿನಲ್ಲಿ, ಭೂಮಿಯಲ್ಲಿ ಎರಡು ಕಡೆ ನಡೆಯಬಲ್ಲವು. ಮೀನು ಹೇಳಿತು, ನನ್ನ ಕಡೆ ಒಂದಿಷ್ಟು ನೋಡು. ನನ್ನ ಬಣ್ಣ ಯಾವುದು?. ನಿಮ್ಮ ಬಣ್ಣ ಯಾವುದು?. ಸ್ವಲ್ಪ ನೋಡು ಅಂದಿತು. ಆಗ ಏಡಿ ಹೇಳಿತು, ನಮ್ಮ ನಡಿಗೆ ಹೀಗೆ. ನಿಮ್ಮ ನಡಿಗೆ ಹೇಗೆ ನೋಡು ಅಂದಿತು., ನಾನು ನೀರು ಬಿಟ್ಟು ಹೊರಗೆ ಇರಬಲ್ಲೆ. ನೀನು ನೀರು ಬಿಟ್ಟರೆ ಒಂದು ಕ್ಷಣ ಬದುಕುವುದಿಲ್ಲ. ಯಾವುದೋ ನಮ್ಮನ್ನು ಬದುಕಿಸಿದೆ, ಅಂತ ಶಕ್ತಿ ಸಾಮರ್ಥ್ಯ ನಮ್ಮೊಳಗೆ ಇದೆಯಲ್ಲ, ನಮ್ಮಷ್ಟು ಸುಂದರ ನೀನು ಹೇಗೆ ಅಂದಿತು. ಏಡಿಗೆ ಸೌಂದರ್ಯ ಇದೆಯೇನೋ? ಇಲ್ಲ. ಆದರೆ ಅದು ಹಾಗೆ ಭಾವಿಸಿದೆ. ಎಂತಹದೇ ಪ್ರಾಣಿ ಇರಲಿ. ಅದಕ್ಕೆ ಭಾವ ಇರುವುದರಿಂದ ಬದುಕಿವೆ. ಏಡಿ ಹೇಳುತ್ತದೆ ನಮಗೆ ಬದುಕು ಸುಂದರ. ನಮಗೆ ನಡೆಯುವುದಕ್ಕೆ ಬರುತ್ತದೆ, ಈಜುವುದಕ್ಕೆ ಬರುತ್ತದೆ, ಆದ್ದರಿಂದ ನಮ್ಮ ಬದುಕು ನಿನಗಿಂತ ಅಮೂಲ್ಯ ಎಂದಿತು. ಏಡಿ ರಾಡಿಯಲ್ದಿದೆ, ಆದರೆ ಬದುಕನ್ನು ಪ್ರೀತಿಸಿದೆ.

ಅದರಂತೆ ನಾವು ಭಾವದಿಂದ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು. ಕಾರ್ಯಕ್ಕಾಗಿ ದೇಹ, ವಿಚಾರಕ್ಕಾಗಿ ಬುದ್ದಿ ಮತ್ತು ಆನಂದಕ್ಕಾಗಿ ಭಾವ ಇದೆ, ಅಂದಮೇಲೆ ಜೀವನವನ್ನು ಪ್ರೀತಿಸಬೇಕು. ನಮ್ಮಲ್ಲಿ ಇರುವುದು ಅದ್ಭುತ ಅಂತ ಅಂದುಕೊಂಡರೆ ಆಗ ಭಾವ ಬದಲಾವಣೆಯಾಗುತ್ತದೆ. ಅಲ್ಲವೆ ಮಕ್ಕಳೇ....
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
******************************************



Ads on article

Advertise in articles 1

advertising articles 2

Advertise under the article