ಸ್ಫೂರ್ತಿಯ ಮಾತುಗಳು : ಸಂಚಿಕೆ - 184
Wednesday, October 1, 2025
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 184
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಕುಂಡವೆಂದರೆ ಮಡಕೆ, ಕುಡಿಕೆ, ಗಡಿಗೆ, ಚೆರಿಗೆ, ಮೊಗೆ, ಕರಂಡ, ಕೊಡ, ಬಿಂದಿಗೆ, ಹರವಿ, ಭರಣಿ, ಅಗ್ಗಿಷ್ಟಗೆ, ಸಣ್ಣ ಹೊಂಡ ಮುಂತಾಗಿ ವಿವರಿಸುತ್ತಾರೆ. ಯಾವುದಾದರೂ ಅಳತೆಯ ಅಥವಾ ತೂಕದ ವಸ್ತುಗಳ ಧಾರಣಾ ಸಾಮರ್ಥ್ಯ ಕುಂಡಗಳಿಗಿರುತ್ತದೆ. ಆದುದರಿಂದಲೇ ಹೋಮಕುಂಡ, ಹೂವಿನ ಕುಂಡ, ಅಗ್ನಿಕುಂಡ ಮುಂತಾದುವುಗಳನ್ನು ನಾವು ಬಳಸುವುದಿದೆ. ಕುಂಡವು ಧಾರಕವಾಗಿ ಕೆಲಸ ಮಾಡುತ್ತದೆ. ನಮ್ಮ ಅಂತರಂಗದಲ್ಲೂ ಕುಂಡ ಇದೆಯೇ? ಅದೂ ಅಗ್ನಿ ಕುಂಡ! ಗಾಬರಿಯಾಗಬೇಡಿ. ಈ ಕುಂಡವು ಹೇಗಿರುತ್ತದೆಂಬುದನ್ನು ಪ್ರತ್ಯಕ್ಷವಾಗಿ ಖಂಡಿತವಾಗಿಯೂ ವೀಕ್ಷಿಸಲಾರೆವು. ಹೃದಯವೇ ಆ ಕುಂಡ ಎಂದು ಭಾವಿಸಿದಿರಾ? ಸರಿಯಾದ ಭಾವನೆ, ನಿಮಗೆ ಶಹಬ್ಭಾಸ್. ಅಂತರಂಗದ ಕುಂಡದಲ್ಲಿ ಅಗ್ನಿಯಿದೆಯೋ ಅಥವಾ ಹೂವುಗಳು ಇವೆಯೋ ಎಂಬುದನ್ನು ವ್ಯಕ್ತಿಯ ವರ್ತನಾ ಆಧಾರದಿಂದ ಊಹಿಸಬಲ್ಲೆವು. ಅಗಿಕುಂಡವಿರುವುದಾದರೆ ಅದು ಚಿಂತಾರ್ಹ.
ಅಂತರಂಗದ ಅಗ್ನಿಕುಂಡದಲ್ಲಿ ಧಗಧಗಿಸುವುದು ಮತ್ಸರ, ದುರಾಸೆ, ಅತೃಪ್ತಿ, ಅಸಹನೆ, ಅವಿಶ್ವಾಸ, ಸ್ವಾರ್ಥ ಮುಂತಾದ ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ಸುಡುವ ಬೆಂಕಿಯ ಜ್ವಾಲೆ. ಇದು ಮನದ ಕಸವೂ ಹೌದು. ಈ ಕಸ ವ್ಯಕ್ತಿಗತವಾಗಿ ದೋಷಕಾರಕವಾಗಿರುವಂತೆಯೇ ಹೊರಜಗತ್ತಿಗೂ ಅಪಾಯಕಾರಿ. ಕಸವು ದಹಿಸಲ್ಪಟ್ಟು ಬೂದಿಯಾದರೆ ಎಲ್ಲರಿಗೂ ಸುಖ, ವೈಯಕ್ತಿಕವಾಗಿ ಆರೋಗ್ಯ, ಸುಖ ಮತ್ತು ಶಾಂತಿ ಲಭ್ಯ. ಅಂತರಂಗದೊಳಗೆ ಅಗ್ನಿಕುಂಡ ಇರುವವರ ಮನೆ ಮತ್ತು ಮನ ಹಾಳಾಗುತ್ತದೆ.
ಮತ್ಸರವೆಂಬುದು ಮಾನವನ ಹುಟ್ಟುಗುಣ. ಅದು ಆಗಾಗ ಜ್ವಲಿಸುತ್ತಲಿರುತ್ತದೆ. ಜ್ವಲಿಸದಂತೆ ಮಾನಸಿಕ ನಿಯಂತ್ರಣವಿದ್ದರೆ ಲೋಕಹಿತವಾಗುತ್ತದೆ. ವಯಸ್ಸು, ಶ್ರೇಯಸ್ಸುಗಳಲ್ಲಿ ನಮಗೆ ಸಮಾನನಾಗಿರುವವನೊಬ್ಬನು ಒಂದು ಸುಂದರವಾದ ಮನೆ ಕಟ್ಟಿದರೆ ಸಹಚರನ ಅಂತರಂಗದಲ್ಲಿ ಕರುಬುವಿಕೆಯಾರಂಭಗೊಳ್ಳುತ್ತದೆ. ಆ ಮನೆ ದೊಡ್ಡದಾಗಿದ್ದರಂತೂ ಆತನಿಗೆ ನಿದ್ದೆಯೇ ಬಾರದ ದಿನಗಳೆದುರಾಗುತ್ತವೆ. ಆತನ ಅಭಿವೃದ್ಧಿಗೆ ಸದಾ ಮರುಗುತ್ತಾ ಹುಚ್ಚನಾಗುವುದೂ ಇದೆ. ಮನೆ ನಿರ್ಮಾಣದ ಘಟನೆ ಮಾತ್ರವಲ್ಲ, ವಾಹನ ಖರೀದಿ, ಸುವರ್ಣವಜ್ರಾದಿ ಒಡವೆ ಖರೀದಿ, ಆಸ್ತಿ ಖರೀದಿಗಳಂತಹ ದೊಡ್ಡ ದೊಡ್ಡ ವಹಿವಾಟುಗಳನ್ನು ಇತರರು ಮಾಡಿರುವುದನ್ನರಿತರೂ ಮತ್ಸರ ಪಡುವವರಿದ್ದಾರೆ. ಪಕ್ಕದ ಮನೆಯ ಮಗುವೊಂದು ಮುದ್ದಾಗಿ ಹಾಡಿದರೂ ಮತ್ಸರಿಸುವುದು ಮನುಜ ಗುಣ. ಹಾಗಾದರೆ ಮತ್ಸರದ ಜ್ವಾಲೆಯ ಶಮನ ಹೇಗೆ? ಅಂತರಂಗದೊಳಗಿನ ಜ್ವಾಲೆಗೆ ತುಪ್ಪವನ್ನೆರೆಯದೆ, ಮುಕ್ತ ಮನಸ್ಸಿನಿಂದ ಅವರನ್ನು ಅಭಿನಂದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಮತ್ಸರಿಸುವ ಹುಟ್ಟುಗುಣವನ್ನು ಕೆಡಹುವ ಮನೋಬಲವನ್ನು ನಾವು ಬೆಳೆಸಿಕೊಳ್ಳಬೇಕು. ಹೃದಯದಲ್ಲಿ ಪ್ರೀತಿಯ ಸಾಗರವಿದ್ದರೆ ಮಾತ್ರ ಅಂತರಂಗದ ಅಗ್ನಿಯಾದ ಮತ್ಸರವು ಓಡುತ್ತದೆ.
ಅಸಹನೆಯು ಮತ್ಸರದ ಇನ್ನೊಂದು ರೂಪ. ಇತರರ ಅಭ್ಯುದಯವನ್ನು ಕಂಡಾಗ ಸಹಿಸಲಾಗದಿರುವುದೇ ಅಸಹನೆ. ಇದೂ ಸುಡುವ ಅಗ್ನಿಯೇ. ಮಿತ್ರನ ಮಗ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದಾಗ ಸಹಿಸಲಾಗದವರು ಮಿತ್ರರೆನಿಸಿಕೊಳ್ಳಲೂ ನಾಲಾಯಕ್ಕು. ಕೆಲವರಿಗೆ ನೆಂಟರು ಬರುತ್ತಾರೆಂದರೆ ಅಸಹನೆ, ತನ್ನನ್ನು ಔತಣಕ್ಕೆ ಕರೆಯಲಿಲ್ಲವಲ್ಲಾ ಎಂಬ ಅಸಹನೆ. ಬಸ್ಸು ಹತ್ತಿದಾಗ ಆಸನಗಳು ದೊರೆಯದೆ ನಿಂತುಕೊಳ್ಳುವ ಪರಿಸ್ಥಿತಿಯುಂಟಾದರೆ ಅಸಹನೆ. ಸರದಿ ಸಾಲು ಉದ್ದವಿದ್ದಾಗ ಸಾಲಿನಲ್ಲಿ ನಿಲ್ಲಲು ಅಸಹನೆ. ಹೀಗೆ ಅಸಹನೆಗಳ ಪಟ್ಟಿ ಹನುಮ ಬಾಲ. ಅಸಹನೆಯನ್ನು ಗೆಲ್ಲಲು ಅಂತರಂಗದಲ್ಲಿ ತಂಪಾದ ಅಮೃತಭರಿತ ಕಲಶವಿರಬೇಕು.
ನಮ್ಮ ಜೀವನಕ್ಕೆ ಅಗತ್ಯವಾದುದೆಲ್ಲವೂ ನಮ್ಮಲ್ಲಿದೆ. ಅನ್ನ, ಉಡುಪು, ಮನೆ. ಮನೆಯೊಳಗಿರುವ ಪರಿಕರ ಎಲ್ಲವೂ ನಮಗೆ ಸಾಕಾಗುವ ಪ್ರಮಾಣದಲ್ಲಿದೆ. ಆದರೂ ಇನ್ನೂ ಬೇಕೆಂಬ ದುರಾಸೆ ನಮಗಿರುತ್ತದೆ. ನಡೆಯಲು ಒಂದು ಜೊತೆ ಚಪ್ಪಲಿ ಸಾಕು. ಆದರೆ ಹತ್ತು ಜೊತೆ ಬೇಕೆಂಬ ಬಯಕೆಯೇ ದುರಾಸೆ. ಇರುವುದರಲ್ಲಿ ತೃಪ್ತರಾಗುವ ಗುಣವಿದ್ದವರಲ್ಲಿ ದುರಾಸೆಯಿರದು. ದುರಾಸೆ ಮತ್ತು ಅತೃಪ್ತಿ ಪರಸ್ಪರ ಆಪ್ತರು. ಇವರಿಬ್ಬರನ್ನೂ ಅಂತರಂಗದಿಂದ ಹೊರತಳ್ಳ ಬಲ್ಲವನೇ ನೈಜ ಸುಖಿ.
ಪ್ರಪಂಚವು ವಿಶ್ವಾಸಾಧಾರಿತ. ಗಾಡಿಯನ್ನೇರುವಾಗ ಸುಖ ಪ್ರಯಾಣದ ವಿಶ್ವಾಸ, ತಿಂಡಿ ತಿನ್ನುವಾಗ ಅದು ದೇಹಕ್ಕೆ ಶಕ್ತಿತುಂಬುತ್ತದೆಂಬ ವಿಶ್ವಾಸ, ಔಷಧ ಸೇವಿಸುವಾಗ ಕಾಯಿಲೆ ಶಮನವಾಗುತ್ತದೆಂಬ ವಿಶ್ವಾಸ, ಶಿಕ್ಷಕರು ಮಕ್ಕಳಿಗೆಒಳ್ಳೆಯ ಪಾಠ ಮಾಡುವರೆಂಬ ವಿಶ್ವಾಸ, ಪೋಲಿಸರು ನ್ಯಾಯದ ಪರವೆಂಬ ವಿಶ್ವಾಸ, ನಮ್ಮ ಮನೆಯ ನಾಯಿ ಕಚ್ಚದೆಂಬ ವಿಶ್ವಾಸ… ಹೀಗೆ ವಿಶ್ವಾಸದ ಬದುಕನ್ನು ನಾವು ಆಶ್ರಯಿಸಿದ್ದೇವೆ. ಪ್ರತಿಯೊಬ್ಬನ ಬಗ್ಗೆಯೂ ಜಗತ್ತು ವಿಶ್ವಾಸವಿರಿಸಿದೆ. ವಿಶ್ವಾಸದ ಭರವಸೆಗೆ ಶಕ್ತಿ ತುಂಬುವುದು ಪ್ರತಿಯೊಬ್ಬನ ಕರ್ತವ್ಯ. ಮನಸ್ಸಿನಲ್ಲಿ ವಿಶ್ವಾಸದ್ರೋಹದ ಪುಟ್ಟ ಕಿಡಿಯಿದ್ದರೂ ಅಸ್ಥಿರತೆ ಶತಃಸಿದ್ಧ.
ಅಂತರಂಗದೊಳಗಿನ ಅಗ್ನಿಕುಂಡ ಹೇಗೆ ವಂಶವನ್ನೇ ಸುಡುತ್ತದೆನ್ನುವುದಕ್ಕೆ ಮಹಾಭಾರತದ ಧೃತರಾಷ್ಟ್ರನೇ ನಿದರ್ಶನ. ಧೃತರಾಷ್ಟ್ರನ ಕಣ್ಣುಗಳಂತೆ ಅವನ ಹೃದಯವೂ ಕುರುಡಾಗಿತ್ತು. ಅಧಿಕಾರದ ಲಗಾಮಿನ ಅಹಂಕಾರದ ಜೊತೆಗೆ ಸ್ವಾರ್ಥ, ಸಂಪತ್ತು, ಹೆಮ್ಮೆ, ಜ್ಞಾನ, ಮೋಹ ಅಥವಾ ಕಾಮದಿಂದ ಆತನು ಕುರುಡನಾಗಿದ್ದನು. ಅದರಿಂದಾಗಿಯೇ ತನ್ನ ಮಕ್ಕಳ ತಪ್ಪು ನಡೆಗಳನ್ನು ಧೃತರಾಷ್ಟ್ರನು ಪೋಷಿಸಿದನು. ತನ್ನ ಮಕ್ಕಳ ಅಂತರಂಗದಲ್ಲೂ ಅಗ್ನಿಕುಂಡಗಳನ್ನೇ ನಿರ್ಮಿಸಿದನು. ಪರಿಣಾಮ ಕುರುಕ್ಷೇತ್ರ ಯುದ್ಧ ಮತ್ತು ಕೌರವರ ನಾಶ. ಅಂತರಂಗದ ತಂಪು, ಇಂಪು, ಪೆಂಪುಗಳು ನಿರ್ಮಾಣಕ್ಕೆ ಕಾರಣವಾದರೆ ಅಂತರಂಗದ ಅಗ್ನಿಕುಂಡ ನಿರ್ನಾಮಕ್ಕೆ ಹೇತುವಾಗುತ್ತದೆ.
ನಮ್ಮ ಅಂತರಂಗದಲ್ಲಿ ಅಗ್ನಿಕುಂಡ ಇದೆಯೋ ಇಲ್ಲವೋ ಎಂಬ ಅರಿವು ನಮಗೆ ಖಂಡಿತಾ ಇರುತ್ತದೆ. ಇದ್ದರೆ ಅಗ್ನಿಕುಂಡವು ನಂದಬೇಕು. ಆಗ ಕುಕ್ಕರ್ ಬಾಂಬ್, ಫ್ರಿಡ್ಜ್ ಒಳಗಡೆ ಮೃತ ದೇಹದ ತುಂಡು, ಬುರುಡೆ ಪ್ರಕರಣಗಳು, ಆತ್ಮಹತ್ಯೆಗಳು, ಕೊಲೆ ಸುಲಿಗೆ, ಮೋಸ ವಂಚನೆ, ದರೋಡೆಗಳಂತಹ ವಿಕಾರ ಹಗರಣಗಳು ಸಮಾಜದಿಂದ ಕಣ್ಮರೆಯಾಗುತ್ತವೆ. ಅಂತರಂಗದ ಅಗ್ನಿಕುಂಡಗಳು ನಂದಲಿ, ಬದುಕು ಅಂದದಲಿ ಬೆಳಗಲಿ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
******************************************