ಜೀವನ ಸಂಭ್ರಮ : ಸಂಚಿಕೆ - 209
Monday, September 29, 2025
Edit
ಜೀವನ ಸಂಭ್ರಮ : ಸಂಚಿಕೆ - 209
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ.. ಇಂದು ಆಚಾರ್ಯ ಎಂದರೆ ಯಾರು..? ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಆಚಾರ್ಯ ಎಂದರೆ ಅರಿತವರು ಮತ್ತು ಅನುಭವಿಸಿದವರು. ಯಾರ ಮಾತುಗಳಲ್ಲಿ ಜ್ಞಾನದ ಬೆಳಕು ಇರುತ್ತದೆಯೋ..? ಯಾರ ಹೃದಯದಲ್ಲಿ ಮಧುರತೆ ತುಂಬಿರುತ್ತದೆಯೋ..? ಅಂತವರು ಆಚಾರ್ಯರು. ಎಂತಹ ಸುಂದರ ಶಬ್ದ, ಆಚಾರ್ಯ. ಅವರ ಜೀವನ ಬೆಳಕಿನದು ಮತ್ತು ಮಧುರತೆಯಿಂದ ಕೂಡಿರುವುದು. ಆ ಮಾಧುರ್ಯ, ಜಗತ್ತನ್ನು ಮಧುರಗೊಳಿಸುತ್ತದೆ. ಅವರ ಮಾತುಗಳಲ್ಲಿರುವ ಬೆಳಕು, ನಮ್ಮ ಮನಸ್ಸಿನ ಕತ್ತಲೆಯನ್ನು ಕಳೆಯುತ್ತದೆ. ಇಂತಹ ಮಹಾನುಭಾವರಿಗೆ ಆಚಾರ್ಯರು ಅನ್ನುವರು. ಇನ್ನೊಂದು ಹೆಸರು ಗುರು. ಗುರು ಎಂದರೆ ದೊಡ್ಡವ. ನಮ್ಮ ಸೌರಮಂಡಲದಲ್ಲಿ ಅತ್ಯಂತ ದೊಡ್ಡ ಗ್ರಹ ಗುರು. ದೊಡ್ಡವ ಎಂದರೆ ಗಾತ್ರದಿಂದಲ್ಲ, ಮನಸ್ಸು ದೊಡ್ಡದಾಗಿರುವವನು ಎಂದರ್ಥ. ಮನಸ್ಸು ದೊಡ್ಡದು ಅಂದರೆ ಬಂಧನಗಳಿಂದ ಮುಕ್ತನಾದವನೆಂದು ಅರ್ಥ. ನಮ್ಮ ಮನಸ್ಸು ಅನೇಕ ಬಂಧನಗಳಿಂದ ಬಂಧಿತವಾಗಿರುತ್ತದೆ. ಜಾತಿ ಬಂಧನ, ಮತ ಬಂಧನ, ಧರ್ಮ ಬಂಧನ, ಭಾಷೆ ಬಂಧನ, ಲಿಂಗ ಬಂಧನ, ಶ್ರೇಷ್ಠ ಬಂಧನ, ಕನಿಷ್ಠ ಬಂಧನ, ಶ್ರೀಮಂತ ಅನ್ನುವ ಬಂಧನ, ವಿದ್ಯಾವಂತ ಅನ್ನುವ ಬಂಧನ, ಹೀಗೆ ಅನೇಕ ಬಂಧನಗಳಿಂದ ಬಂಧಿಸಲ್ಪಟ್ಟಿರುತ್ತದೆ. ಯಾರ ಮನಗಳು ಆ ಎಲ್ಲಾ ಬಂಧನಗಳಿಂದ ಮುಕ್ತನಾದವನೇ ಗುರು.
ಸಾವಿರಾರು ವರ್ಷಗಳಿಂದ ಈ ಭೂಮಿಯ ಮೇಲೆ ಅನೇಕ ಜನ ಗುರುಗಳು ಬಂದು ಹೋಗಿದ್ದಾರೆ. ಅಂತ ಶ್ರೇಷ್ಠ ಗುರುಗಳು ಬರುತ್ತಾರೆ. ತಮ್ಮ ಸುತ್ತ ಪರಿಸರವನ್ನು ಸ್ವಚ್ಛ ಮಾಡುತ್ತಾರೆ. ಅವರನ್ನು ನಾವು ಬೇರೆ ಬೇರೆ ಹೆಸರಿನಿಂದ ಕರೆಯುತ್ತೇವೆ. ಶರಣರು, ದಾಸರು, ಶ್ರೇಷ್ಠ ಸಂತರು, ಅನುಭವಿಗಳು, ದಾರ್ಶನಿಕರು ಅಂತ ಕರೆಯುತ್ತೇವೆ. ಅವರೆಲ್ಲರೂ ಆಚಾರ್ಯರೇ. ಆಚಾರ್ಯ ಎಂದರೆ ಮಾತು, ಬೆಳಕಿನ ಮಾತುಗಳು. ಮಾತನ್ನು ಬಳಸದೇ ಇದ್ದರೆ ಜ್ಞಾನ ಪ್ರವಹಿಸುವುದಿಲ್ಲ. ಜಗತ್ತಿನ ಜನರ ಅಂತರಂಗವನ್ನು ಜ್ಞಾನ ತಲುಪಬೇಕಾದರೆ, ಅದಕ್ಕೆ ಮಾಧ್ಯಮ ಭಾಷೆ. ಜಗತ್ತಿನ ಮನಸ್ಸಿಗೆ ರೂಪ ಕೊಡಬೇಕಾದರೆ ಅದಕ್ಕೆ ಮಾಧ್ಯಮ ಭಾಷೆ. ಆ ಸುಂದರ ಭಾಷೆಯನ್ನು ಬಳಸಿ, ಶಿಷ್ಯನ ಮನಸ್ಸಿನಲ್ಲಿ ಬೆಳಕು ಮತ್ತು ಮಾಧುರ್ಯ ತುಂಬುವ ಮಹಾಕಾರ್ಯ ಯಾರು ಮಾಡುತ್ತಾರೆಯೋ ಅಂತಹವರು ಆಚಾರ್ಯರು. ಅವರಲ್ಲಿ ನಿಸ್ಸಂಧಿಗ್ಧವಾಗಿ ಜ್ಞಾನ ಇರುತ್ತದೆ. ದ್ವೇಷರಹಿತ ಮನೋಭಾವವಿರುತ್ತದೆ. ಇವೆರಡು ಪ್ರಧಾನ ಗುಣಗಳು ಅವರಲ್ಲಿ ಇರುತ್ತದೆ. ಸಂದೇಹ ಇರುವುದಿಲ್ಲ. ಸಂದೇಹ ಯಾವಾಗ ಬರುತ್ತದೆ ಅಂದರೆ, ಯಾವಾಗ ಅನುಭವ ಇರುವುದಿಲ್ಲ ಅವಾಗ ಸಂದೇಹ ಬರುತ್ತದೆ. ಯಾವಾಗ ಅನುಭವ ಉಂಟಾಯಿತೋ ಸಂದೇಹ ಇರೋದಿಲ್ಲ. ಉದಾಹರಣೆ ಇಲ್ಲಿ ಹೂವಿದೆ. ಅದನ್ನು ಸ್ಪಷ್ಟವಾಗಿ ನೋಡಿ, ಅದರ ಆಕಾರ, ಗಾತ್ರ, ಬಣ್ಣ, ವಾಸನೆ ರುಚಿ ಮನಸ್ಸು ತುಂಬಿದ್ದರೆ, ಆ ಹೂವಿನ ಬಗ್ಗೆ ಸಂದೇಹ ಎಲ್ಲಿರುತ್ತದೆ..? ಯಾರು ಅದನ್ನು ಕಂಡಿಲ್ಲ?. ಅವರಿಗೆ ಸಂದೇಹ ಬರುತ್ತದೆ. ಆಚಾರ್ಯರು ಸಂದೇಹ ಇಲ್ಲದವರು. ಯಾಕೆಂದರೆ ಅವರು ಸತ್ಯವನ್ನು ಮತ್ತು ಜ್ಞಾನವನ್ನು ಕಂಡವರು. ಜೀವನದ ಸತ್ಯವನ್ನು, ಜಗತ್ತಿನ ಸತ್ಯವನ್ನು, ಪರಮ ಸತ್ಯವನ್ನು ಕಂಡವರು. ಇವೇ ಮೂರು ಸತ್ಯಗಳು. ಜೀವನದ ಸತ್ಯ, ಜಗತ್ತಿನ ಸತ್ಯ ಮತ್ತು ಪರಮ ಸತ್ಯ. ಯಾರು ಈ ಮೂರು ಸತ್ಯ ಕಾಣುತ್ತಾರೆ, ಅನುಭವಿಸುತ್ತಾರೆ ಅಂತಹವರು ಆಚಾರ್ಯರು. ಸಂದೇಹ ಇಲ್ಲದವರು. ಮಾತಿನಲ್ಲಿ ಸಂದೇಹ ಇರುವುದಿಲ್ಲ. ಮಾತಿನಲ್ಲಿ ಸಂದೇಹ ಇಲ್ಲದಂತೆ ಮಾತನಾಡುವುದು, ಮಾತಿನಲ್ಲಿ ಮಾಧುರ್ಯ ತುಂಬಿರುವುದು, ಮಾತಿನಲ್ಲಿ ಜ್ಞಾನದ ಬೆಳಕು ಇರುವುದು ಇವು ಆಚಾರ್ಯರ ಲಕ್ಷಣ. ಅವರು ಏನೇ ಹೇಳಿದರು ಸುಮ್ಮನೆ ಹೇಳುವುದಿಲ್ಲ. ಅವು ಅವರ ಹೃದಯದಿಂದ ಹರಿದು ಬರುತ್ತದೆ. ಮಾತನಾಡಬೇಕು ಅಂತ ಮಾತನಾಡುವುದು ಬೇರೆ, ಸಹಜವಾಗಿ ಹರಿದು ಬರುವುದು ಬೇರೆ. ಅದಕ್ಕೆ ಗಾಯಂತಿ ಎನ್ನುವ ಶಬ್ದ ಬಳಸುತ್ತಾರೆ. ಗಾಯಂತಿ ಎಂದರೆ ಅತ್ಯಂತ ಸಂತೋಷದಿಂದ, ಅಷ್ಟೇ ಹೃದಯ ತುಂಬಿ ಮಾತನಾಡುವುದು. ಅವು ಗಾನ ಇದ್ದಂತೆ. ಅವು ಹೃದಯದ ಹಾಡು ಇದ್ದ ಹಾಗೆ. ಈಗ ಪಕ್ಷಿಗಳು ಹಾಡುತ್ತವೆ ಅನ್ನುತ್ತೇವೆ. ಅವು ಹಾಡುವುದಿಲ್ಲ. ಅವುಗಳ ಧ್ವನಿ ಹಾಡಿನಂತೆ ಇರುತ್ತದೆ. ಅವು ಸುಮ್ಮನೆ ಧ್ವನಿ ಮಾಡುತ್ತವೆ. ಅದರಲ್ಲಿ ಹಾಡು ಇರುತ್ತದೆ. ಅದರಲ್ಲಿ ಮಧುರತೆ, ಸವಿ ಇರುತ್ತದೆ. ಹಾಗೆ ಹೃದಯ ತುಂಬಿ ಮಾತನಾಡಿದಾಗ, ಆ ಮಾತು ಗಾಯನ ಆಗುತ್ತದೆ, ಗೀತೆಯಾಗುತ್ತದೆ. ಹಾಗೆ ಮಾತನಾಡುವವರೇ ಆಚಾರ್ಯರು. ಹೃದಯ ಹಾಡಿದಂತೆ. ಒಂದು ವೀಣೆ ಇದೆ ಎಂದಿಟ್ಟುಕೊಳ್ಳಿ. ಅದನ್ನು ಸ್ಪರ್ಶ ಮಾಡಿದರೆ, ಅದರಿಂದ ಹೊರಡುವ ಶಬ್ದ ಹಾಡಾಗುತ್ತದೆ ಮತ್ತು ಮಧುರವಾಗುತ್ತದೆ. ಹಾಗೆ ಯಾರ ಮನಸ್ಸು ಅಷ್ಟು ಸ್ವಚ್ಛ ಇದೆ, ವೀಣೆಯಂತಿದೆ, ಹೃದಯ ಸ್ಪರ್ಶಿಸಿದರೆ ಗಾಯನ ಶುರುವಾಗುತ್ತದೆ, ಅಂತಹ ಒಳ್ಳೆಯ ಮಾತುಗಳು ಮಧುರ ಇರುತ್ತವೆ, ಮನಸ್ಸನ್ನು ಅರಳಿಸುತ್ತದೆ. ಮನಸ್ಸನ್ನು ವಿಕಾರಗೊಳಿಸುವುದಿಲ್ಲ.
ಹಿಂದೆ ಭತ್ತ, ರಾಗಿ ನಾಟಿ ಮಾಡುವಾಗ, ಹಾಡುಗಳನ್ನು ಹೇಳಿಕೊಂಡು ನಾಟಿ ಮಾಡುತ್ತಿದ್ದರು. ಆ ಹಾಡು ಅವರ ದಣಿವನ್ನು ನಿವಾರಿಸಿ, ಉತ್ಸಾಹ ತುಂಬುತ್ತಿತ್ತು. ಹಾಡು ಅಂದರೆ ಮನಸ್ಸನ್ನು ಅರಳಿಸಬೇಕು, ಮನಸ್ಸನ್ನು ಶಾಂತ ಮಾಡಬೇಕು, ಮಲಗಿಸಬೇಕು. ಅಂತಹುದಕ್ಕೆ ಹಾಡು ಎನ್ನುವರು. ಆಚಾರ್ಯರ ಮಾತು ಜನತೆಯ ಮನಸ್ಸನ್ನು ತಂಬಳಿಸುತ್ತದೆ. ಜನತೆಯ ಮನಸ್ಸನ್ನು ಪ್ರಶಾಂತ ಗೊಳಿಸುತ್ತದೆ. ಜಗತ್ತು ನಮಗೆ ತಾಪ ಕೊಡುತ್ತದೆ. ಆ ತಾಪ ಕಡಿಮೆ ಮಾಡುವಂತೆ ಮಾಡುತ್ತದೆ. ಒಬ್ಬ ಸಂಗೀತಗಾರ ಹಾಡುತ್ತಿದ್ದರೆ, ಎದುರಿಗೆ ಕುಳಿತವರು ತಲೆದೂಗಿ ಮಗ್ನರಾಗಿ ಆನಂದಿಸುತ್ತಿದ್ದರು ಅಂದರೆ ಆ ಜನರನ್ನು ಆನಂದದ ರೂಪದಲ್ಲಿ ಮಗ್ನರಾಗಿಸಿದ್ದು ಹಾಡು. ಹಾಡಿನ ಶಬ್ದ ಹಾಗೆ. ಆಚಾರ್ಯರ ಮಾತು ಮಾತಿನಲ್ಲಿ ಇರುವ ದಿವ್ಯ ಸತ್ಯಾಂಶ ಜನರನ್ನು ಮುದಗೊಳಿಸುತ್ತದೆ. ಅಂತಹವರಿಗೆ ಆಚಾರ್ಯರು, ಗುರುಗಳು ಎನ್ನುವರು.
ಉದಾಹರಣೆಗೆ, ಹೂವು ಬಾಡುತ್ತದೆ ಎನ್ನುವುದು ಜಗತ್ತಿನ ಸತ್ಯ. ಇದನ್ನು ಭಾರತೀಯರು ಹೇಳಿದರು ಅಷ್ಟೇ. ಜಪಾನ್ ಬೌದ್ಧ ಸಂತ ಹೇಳಿದರೂ ಅಷ್ಟೇ. ರಷ್ಯಾದವರು ಹೇಳಿದರು ಅಷ್ಟೇ.. ಏಕೆ?. ಇದು ಜಗತ್ತಿನ ಸತ್ಯ. ಈ ಸತ್ಯವನ್ನು ಇಂತಹವರೇ ಹೇಳಬೇಕೆಂದಿಲ್ಲ. ಹೇಳುವ ಮಾತಿನಲ್ಲಿ ಸತ್ಯ ಇತ್ತು ಅಂದರೆ, ಅದರಲ್ಲಿ ಮಾಧುರ್ಯ, ಸೌಂದರ್ಯ ಇದ್ದರೆ ಅದನ್ನು ಸ್ವೀಕರಿಸಬೇಕು. ಆದರೆ ನಾವು ನಮ್ಮ ಸಣ್ಣ ಬುದ್ಧಿಯಿಂದ, ತಾರತಮ್ಯ ಮಾಡಿಕೊಂಡು, ಬದುಕಿನ ಸೌಂದರ್ಯ ಕಳೆದುಕೊಳ್ಳುತ್ತೇವೆ. ಸತ್ಯ ಅವರೇ ಹೇಳಬೇಕು, ಇವರೇ ಹೇಳಬೇಕು ಅಂತ ಎಲ್ಲಿದೆ?. ಯಾರು ಅನುಭವಿಗಳೊ ಅವರು ಹೇಳುತ್ತಾರೆ. ಉದಾಹರಣೆಗೆ, ದೀಪ ಬೆಳಕು ಕೊಡುತ್ತದೆ. ಚಿತ್ರದ ದೀಪ ನೋಡಲು ಆಕರ್ಷಕ. ಆ ಚಿತ್ರಕ್ಕೆ ಹೆಚ್ಚು ಬೆಲೆ ಕೊಟ್ಟು ತಂದಿರಬಹುದು. ಬಣ್ಣ ಬಣ್ಣಗಳಿಂದ ಅಲಂಕರಿಸಿದ ಹಾಗೆ ಇರಬಹುದು. ಆದರೆ ಅದರಲ್ಲಿ ಬೆಳಕು ಇರುವುದಿಲ್ಲ. ಅದು ಯಾವುದಕ್ಕೂ ಉಪಯೋಗವಿಲ್ಲ. ನಿಜ ದೀಪ ಆಕರ್ಷಕವಾಗಿ ಇಲ್ಲದಿದ್ದರೂ, ಬೆಳಕು ನೀಡುತ್ತದೆ. ಹಾಗೆ ಆಚಾರ್ಯರು ನೈಜ ದೀಪ ಇದ್ದಂತೆ. ಅವರು ಆಕರ್ಷಕವಾಗಿ ಇಲ್ಲದಿರಬಹುದು. ಆದರೆ ಅವರ ಮಾತು ನೈಜಬೆಳಕು. ಕೆಲವರು ಆಕರ್ಷಕ ಪದ ಬಳಿಸಿ ಮಾತನಾಡುತ್ತಾರೆ. ಆದರೆ ಅವರ ಮಾತಿನಲ್ಲಿ ನೈಜ ಬೆಳಕು ಇರುವುದಿಲ್ಲ. ಅಂತಹವರು ಮುಖವಾಡ ಧರಿಸಿದ ಆಚಾರ್ಯರು. ಆದ್ದರಿಂದ ಆಚಾರ್ಯರ ರೂಪ, ಬಣ್ಣ, ವೇಷ ಭೂಷಣ, ಜಾತಿ, ಧರ್ಮ ಮುಖ್ಯವಲ್ಲ. ಅವರ ಮಾತು ಬಹಳ ಮುಖ್ಯ. ಅವರ ಮಾತಿನಲ್ಲಿ ಬೆಳಕಿದೆ. ಕೆಲವರು ಸುಂದರ ರೂಪ, ವೇಷಭೂಷಣ, ಸುಂದರವಾಗಿದ್ದು ಜಾತಿ ಧರ್ಮದ ಮುಖವಾಡ ಧರಿಸಿ, ಜನರ ಮನಸ್ಸನ್ನು ಶಾಂತ ಮಾಡುವ ಬದಲು ಉದ್ವೇಗಗೊಳಿಸಿ, ಅಶಾಂತ ಗೊಳಿಸಿ, ವಿನಾಶಕರಾಗುತ್ತಾರೆ. ಅಂತಹವರು ಆಚಾರ್ಯರಲ್ಲ. ಎಚ್ಚರ ಇರಬೇಕು ಅಲ್ಲವೇ ಮಕ್ಕಳೇ... ಏಕೆಂದರೆ ನಮ್ಮ ಬದುಕು ಅತ್ಯಮೂಲ್ಯ ಸಂಪತ್ತು. ಅದು ಕೆಡಬಾರದು. ಬದುಕು ಶಾಂತಿ, ಸಮಾಧಾನ, ಸಂತೋಷದಿಂದ ಇರುವುದು ಮುಖ್ಯ. ಅದಕ್ಕೆ ಆಚಾರ್ಯರ ಮಾತಿನ ಬೆಳಕು ಸಹಾಯ ಮಾಡುತ್ತದೆ. ಅವರು ಮಾರ್ಗದರ್ಶಕರು ಅಲ್ಲವೇ ಮಕ್ಕಳೇ...
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
******************************************