-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 126

ನಿಷ್ಪಾಪಿ ಸಸ್ಯಗಳು : ಸಂಚಿಕೆ - 126

ನಿಷ್ಪಾಪಿ ಸಸ್ಯಗಳು : ಸಂಚಿಕೆ - 126
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
     

ಪ್ರೀತಿಯ ಮಕ್ಕಳೇ, ಹೇಗಿದ್ದೀರಿ...? 
ದಸರಾ ರಜೆಯಲ್ಲಿ ನಾವು ಜನಗಣತಿಗಾಗಿ ಊರೂರು ತಿರುಗಾಟ ನಡೆಸುತ್ತಿದ್ದೆವು. ಆಗ ಜನಗಣತಿಯ ಕಾರ್ಯ ಒಂದೆಡೆಯಾದರೆ ಯಾವುದಾದರೂ ಹೊಸ ಗಿಡ ಕಾಣಿಸುತ್ತದೆಯೇ ಎಂಬ ಹುಡುಕಾಟವೂ ಇನ್ನೊಂದೆಡೆಯಲ್ಲಿ ನಡೆದಿತ್ತು. ನನ್ನ ಗಣತಿಯ ಪ್ರದೇಶವೂ ನನಗೆ ಹೊಸ ಪರಿಚಯದ್ದಾಗಿತ್ತು. ಹೊಸ ಸ್ಥಳಗಳಲ್ಲಿ ಹೊಸತಾಗಿ ಪರಿಚಯ ಮಾಡಿಕೊಳ್ಳುವ ಗಿಡ, ಮರ, ಬಳ್ಳಿಗಳು ಮುದ ನೀಡುತ್ತವೆ. ಹೀಗೆ ಕಾತರದಿಂದ ದಿನವೂ ವೀಕ್ಷಿಸುತ್ತಿರುವಾಗ ಒಮ್ಮೆ ಮಾರ್ಗದ ಬದಿಯ ಪೊದೆಯ ನಡುವೆ ನೀಲಿ ಹೂಗಳ ಚೆಲುವಿಕೆ ಹೊತ್ತ ಗಿಡಗಳು ಕಾಣಿಸಿದವು. ಮೊದಲ ದಿನ ಕಣ್ಣಿಗೆ ಹಾದಂತಾದರೆ ಎರಡನೇ ಮೂರನೇ ದಿನ ಹೆಚ್ಚು ಗಮನಿಸಿದೆ. ದಿನವೂ ಆ ಜಾಗ ದಾಟಿಯೇ ಹೋಗಬೇಕಾದುದರಿಂದ ಒಂದು ದಿನ ಸಮಯ ಮಾಡಿಕೊಂಡು ನನ್ನ ಸ್ಕೂಟಿ ನಿಲ್ಲಿಸಿ ಗಿಡಗಳ ಬಳಿಗೆ ಮಾತನಾಡಲೆಂದು ಹೋದೆ. ಗಿಡಗಳೂ ನನ್ನನ್ನು ನೋಡಿ ಸಂತಸ ಪಟ್ಟುವು. ಪಕ್ಕದಲ್ಲಿದ್ದ ಅಕೇಶಿಯ, ಕುಂಟಾಲ, ಸರೊಳಿ ಮರಗಳು ನೆರಳು ಉಣಿಸುತ್ತಿರುವಾಗ ಈ ನೀಲಿ ಹೂಗಳ ಚೆಲುವೆ ತನ್ನ ತಲೆ ಮೇಲೆ ಎಂತಹಾ ನೆರಳಿದೆ... ಕಾಲಡಿಯಲ್ಲಿ ಎಷ್ಟು ಉತ್ತಮವಾದ ಮಣ್ಣಿದೆ‌ ನೋಡು‌ ಎಂದು ಹೇಳಿದಂತಾಯ್ತು.

ಇದು ನಮ್ಮಹಿರಿಯರ ಕಾಲದಲ್ಲಿ ಖ್ಯಾತಿ ಗಳಿಸಿದ್ದ ಬಣ್ಣ ಬಣ್ಣದ ಗೋರಂಟೆ ಎಂಬ ಹೂವಿನಂತೆ ಕಾಣಿಸಿದರೂ ಗಿಡದ ಎಲೆಗಳು ಸ್ವಲ್ಪ ದೊಡ್ಡದೇ ಇದ್ದವು. ಇತರ ಪೊದೆ ಸಸ್ಯಗಳ ಜೊತೆ ಇದೂ ಅರೆಪೊದೆ ಸಸ್ಯವಾಗಿ ರಾಶಿ ರಾಶಿ ಬೆಳೆದಿದ್ದು ಒಂದು ಮೀಟರ್ ಗಿಂತಲೂ ಎತ್ತರವಾಗಿ ಬೆಳೆದು ನೇರವಾಗಿದ್ದವು. ಗಾಢ ಹಸಿರಾದ ಎಲೆಗಳು ಸ್ವಲ್ಪ ಉದ್ದವಾದ ತೊಟ್ಟಿನಲ್ಲಿ ಅಂಡಾಕಾರವಾಗಿದ್ದು ತುದಿ ಚೂಪಾಗಿತ್ತು. ಗಿಡಗಳು ಹಲವಾರು ಶಾಖೆಗಳನ್ನು ಹೊಂದಿದ್ದವು.

ಗಿಡಗಳ ತುದಿ, ಎಲೆಯ ಅಕ್ಷದಲ್ಲಿ ಚತುರ್ಭುಜ ಆಕಾರದ ಪುಷ್ಪಪಾತ್ರೆಯಲ್ಲಿ ಮೂಡಿರುವ ಸ್ವಲ್ಪ ಚೂಪೆನಿಸುವ ಮುಳ್ಳುಗಳನ್ನು, ತೆಳುವಾದ ಸಣ್ಣ ಹಸಿರು ಹಾಳೆಗಳನ್ನು ಜೊತೆಯಾಗಿಸಿಕೊಂಡ 2-7 ಸೆ.ಮೀ ಉದ್ದದ ಹೂ ಗೊಂಚಲುಗಳಲ್ಲಿ ಒಂದು ಅಥವಾ ಎರಡು ಹೂಗಳಷ್ಟೇ ಪ್ರತಿನಿತ್ಯ ಅರಳುತ್ತಿದ್ದವು. ಆ ಹಾಳೆಗಳು ಒಣಗುತ್ತಿದ್ದಂತೆ ನಡುವೆ ಲಘುವಾದ ಚಪ್ಪಟೆಯಾಕಾರದ ಬೀಜಗಳಿದ್ದವು. ಅಕ್ಟೋಬರ್, ನವೆಂಬರ್ ತಿಂಗಳು ಹೂ ಬಿಡುವ ಕಾಲವಾಗಿದೆಯೆಂದು ಕೇಳಿ ತಿಳಿದುಕೊಂಡೆ.

ದಾರಿಹೋಕರ ದೃಷ್ಟಿಯನ್ನು ಪಕ್ಕನೆ ಸೆಳೆಯುತ್ತಿದ್ದ ಆಕರ್ಷಕ ನೀಲಿನೇರಳೆ ಬಣ್ಣದ ಹೂವಿದ್ದ ಈ ಸಸ್ಯವೇ ಬಾರ್ಲೇರಿಯಾ ಸ್ಟ್ರಿಗೋಸಾ (Barleria strigosa) . ಇದು ಅಕಾಂತೇಸಿ ಕುಟುಂಬಕ್ಕೆ ಸೇರಿದೆ. ಹಿಮಾಲಯದ ತಪ್ಪಲಿನಲ್ಲಿ ನೈಸರ್ಗಿಕವಾಗಿರುವ ಈ ಸಸ್ಯ ಆಂದ್ರ, ಬಿಹಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಒರಿಸ್ಸಾ, ಉತ್ತರಪ್ರದೇಶಗಳಿಗೂ ಸ್ಥಳೀಯವಾಗಿದೆ. ಸಮಶೀತೋಷ್ಣ ಹವಾಮಾನಕ್ಕಿದು ಹೊಂದಿಕೊಂಡಿದೆ. ಮುಳ್ಳು ಗೋರಣ್ಣ, ಕುರುವಕ, ಸೈರೀಯಕ, ಕಾಡು ಗೋರಂಟಿ ಎಂದು ಕನ್ನಡದಲ್ಲಿ ಕರೆಸಿಕೊಳ್ಳುವ ಈ ನಿಷ್ಪಾಪಿ ಸಸ್ಯ ನೀಲಕರ್ಣಿ ಎಂದು ಮಲಯಾಳ ದಲ್ಲಿ ಕರೆಸಿಕೊಳ್ಳುತ್ತದೆ. ಮುಳ್ಳುಗೋರಂಟಿ ಎಂದು ತುಳು ಭಾಷೆಯಲ್ಲಿ ಕರೆಯುವರು. Bristly blue barleria, Bristly blue bush violet ಎಂದು ಇಂಗ್ಲೀಷ್ ಭಾಷೆಯ ಸಾಮಾನ್ಯ ಹೆಸರುಗಳು.

ವಿಶ್ವಾದ್ಯಂತ ಆಹಾರ ಹಾಗೂ ಅಲಂಕಾರಿಕ ಸಸ್ಯಕುಲವಾದ ಬಾರ್ಲೇರಿಯಾಕ್ಕೆ ಸೇರಿದ ಬಹುಪಾಲು ಸಸ್ಯಗಳ ಹೂ, ಕಾಯಿ, ಬೀಜ, ಎಲೆ, ಕಾಂಡಗಳ ಸಾರಗಳು ಜೈವಿಕ ಸಕ್ರಿಯ ಸಂಯುಕ್ತಗಳಿಂದ ಸಮೃದ್ಧವಾಗಿವೆ. ಅಂತೆಯೇ ಈ ಕಾಡು ಗೋರಂಟಿಯ ಎಲೆ, ಬೇರುಗಳು ನೆಗಡಿ, ಕಜ್ಜಿ, ಹುಣ್ಣುಗಳಿಗೆ ಔಷಧಿಯಾಗಿದೆ. ರಕ್ತಶುದ್ಧೀಕಾರಕವಾಗಿದೆ. ಇದು ನಮ್ಮ ಮನೆಗಳಲ್ಲಿರುವ ಬಣ್ಣಬಣ್ಣದ ಗೋರಂಟೆ ಗಿಡಗಳ ಹತ್ತಿರ ಸಂಬಂಧಿಯಾಗಿದ್ದರೂ ಸಸ್ಯದ ಪೊದೆಯಾಕಾರದ ಬೆಳವಣಿಗೆಯಿಂದಾಗಿ ಹಾಗೂ ವಿರಳವಾಗಿ ಅರಳುವ ಹೂಗಳಿಂದಾಗಿ ಯಾರೂ ಮನೆಗಳಲ್ಲಿ ಬೆಳೆಸುವ ಸಾಹಸ ಮಾಡಿಲ್ಲವೆನಿಸುತ್ತದೆ. ಆದರೂ ನಮ್ಮ ಪರಿಸರದಲ್ಲಿದೆ ಎಂಬುವುದೇ ಸಂತಸವಲ್ಲವೇ? ನೀವೂ ಇಂತಹ ಅಪರೂಪದ ಸಸ್ಯಗಳನ್ನು ಕಂಡರೆ ನಮಗೂ ಹಂಚುವಿರಲ್ಲವೇ?

ಸರಿ ಮಕ್ಕಳೇ. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************





Ads on article

Advertise in articles 1

advertising articles 2

Advertise under the article