-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 103

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 103

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 103
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

           
ಪ್ರೀತಿಯ ಮಕ್ಕಳೇ... ಹಿಂದಿನ ಬಾರಿ ನಾವು ಸಾಬೂನು ಹೇಗೆ ಕೆಲಸ ಮಾಡುತ್ತದೆ ಎಂದು ನೋಡಿದೆ. ಇದರ ಅಣುವಿನ ಎರಡು ತುದಿಗಿರುವ ಪರಸ್ಪರ ವಿರುದ್ಧ ಗುಣಗಳು ಸಾಬೂನು ಒಂದು ಬಹುಪಯೋಗಿ ವಸ್ತುವಾಗುವಂತೆ ಮಾಡಿದೆ ಎಂಬುದು ನಿಮಗೆ ಅರ್ಥವಾಗಿದೆಯಲ್ಲವೇ? ಜೀವನದಲ್ಲಿ ಇದೊಂದು ಅತಿದೊಡ್ಡ ಪಾಠ. ನಿಮ್ಮ ಗುಣಕ್ಕೆ ಒಲ್ಲದ ಗುಣ ಹೊಂದಿರುವ ಇನ್ನೊಬ್ಬ ವ್ಯಕ್ತಿ ನಿಮ್ಮ ಮಿತ್ರನಾದಲ್ಲಿ ನಿಮಗೊಲ್ಲದ ಅವನ ಗುಣವನ್ನು ನೀವು ಮರೆತು ಸ್ನೇಹ ಬೆಳೆಸುವುದು ಸಾಧ್ಯವಾದಲ್ಲಿ ನಿಮ್ಮ ಜೋಡಿ ಜನಪರವಾಗಿ ರೂಪುಗೊಳ್ಳಬಾರದೆಂದೇನೂ ಇಲ್ಲ. ನಿಮಗೆ ನೆನಪಿರಲಿ. 

ಹೀಗೆ ವೈರುಧ್ಯ ಗುಣಗಳ ಈ ಗುಣವನ್ನು ನಾವು ಆ್ಯಂಫಿಫಿಲಿಕ್ (amphiphilic) ಗುಣ ಎನ್ನುತ್ತೇವೆ. ಈ ಗುಣವೇ ಸೋಪನ್ನು ಸೋಪಾಗಿಸಿದೆ. ಅದರ ಧ್ರುವೀಯ ತುದಿ (polar end) ನೀರಿನಂತಹ ಧ್ರುವೀಯ ದ್ರಾವಕದ (polar solvents) ಸುತ್ತ ನೆರೆದರೆ ಧ್ರುವೀಯವಲ್ಲದ ತುದಿ (nonpolar end) ಎಣ್ಣೆ, ಗ್ರೀಸ್‌ನ ಸುತ್ತ ನೆರೆದು ಮೈಸೆಲ್ಲೆಗಳನ್ನು ರಚಿಸಿ ಬಟ್ಟೆಯ ಕೊಳೆಯನ್ನು ತೊಡೆದು ಹಾಕಿದ್ದನ್ನು ನೋಡಿದ್ದೇವೆ. 

ಮಕ್ಕಳೇ ಈ ಸೋಪಿನ ಅಣುವಿನಂತಹುದೇ ವಸ್ತುಗಳಿಂದ ರಚಿಸಲ್ಪಟ್ಟಿದೆ ನಮ್ಮ ಕೋಶಪೊರೆ. ಕೋಶಪೊರೆಯ ರಚನಾತ್ಮಕ ರಾಸಾಯನಿಕಗಳು ಫಾಸ್ಫೋಲಿಪಿಡ್ ಗಳು (phosholipids) ಎಂದು ಕರೆಯಲ್ಪಡುತ್ತವೆ. ಈ ಫಾಸ್ಫೋಲಿಪಿಡ್ ನಲ್ಲಿ ಫಾಸ್ಫೇಟ್ ಗ್ಲಿಸರೇಟ್ ತಲೆ ದ್ರುವೀಯ ತುದಿ ಇದಕ್ಕೆ ನೀರೆಂದರೆ ಇಷ್ಟ. ಇನ್ನೆರಡು ಕೊಬ್ಬಿನಾಮ್ಲದ ಅಣುಗಳು ನೀರು ನಿಷೇಧಕ ತುದಿಗಳು. ಇವುಗಳನ್ನು ನೀರಿನ ಮೇಲೆ ಹಾಕಿದರೆ ಫಾಸ್ಫೇಟ್ ಗ್ಲಿಸರೇಟ್ ತಲೆ ನೀರಿಗೆ ಆಕರ್ಷಿತವಾಗಿ ಕೊಬ್ಬಿನಾಮ್ಲದ ಅಣುಗಳು ನೀರಿನಿಂದ ದೂರಕ್ಕೆ ಅಂದರೆ ಬಾಲ ಎತ್ತಿದ ಕರುವಿನ ಹಾಗೆ ನಿಂತು ಬಿಡುತ್ತದೆ. ಆದರೆ ಹೀಗೆ ಬಾಲ ಎತ್ತಿ ನಿಲ್ಲಲು ಆಚೆ ಬದಿಯಲ್ಲೂ ನೀರಿರುತ್ತದೆಯಲ್ಲ ಆಗ ಈ ಬಾಲದ ಪರಿಸ್ಥಿತಿ ಹೇಗೆ ಎಂದು ಕೇಳಬಹುದು ನೀವು. ಹೌದು ಹೀಗೆ ಬಾಲ ಎತ್ತಿ ನಿಲ್ಲಲು ಸಾಧ್ಯವಾಗುವುದಿಲ್ಲ ಮುಂದೇನು ಎಂದು ಕೇಳಬಹುದು ನೀವು. ಈಗ ಆಚೆ ಕಡೆಯಲ್ಲಿರುವ ನೀರಿನ ಅಣುವಿಗೆ ಇನ್ನೊಂದು ಅಣುವನ್ನು ಸಿಕ್ಕಿಸಿಬಿಡಿ. ಆಗ ಫಾಸ್ಫೇಟ್ ಗ್ಲಿಸರೇಟ್ ತುದಿ ನೀರಿಗೆ ಅಂಟಿಕೊಂಡರೆ ಕೊಬ್ಬಿನಾಮ್ಲದ ತುದಿ ಓಳಮುಖವಾಗಿ ಅಂದರೆ ಈಗಾಗಲೇ ಇರುವ ಕೊಬ್ಬಿನಾಮ್ಲದ ತುದಿಯ ಕಡೆಗೆ ಚಾಚುತ್ತದೆ. ಆದ್ದರಿಂದ ಈಗ ರೂಪುಗೊಳ್ಳುವ ಈ ಪೊರೆ ಕೇವಲ ಒಂದೇ ಪದರ ಇದ್ದರೆ ಸಾಕಾಗುವುದಿಲ್ಲ ಬದಲಾಗಿ ಎರಡು ಪದರವನ್ನು ಹೊಂದಬೇಕಾಗುತ್ತದೆ. ಆದ್ದರಿಂದ ಕೋಶಪೊರೆ ದ್ವಿ ಪದರದ (bilayered) ರಚನೆ ಹೊಂದಬೇಕಾಗುತ್ತದೆ.

ಒಂದೇ ಗುಣದ ಎರಡು ಅಣುಗಳು ಒಂದು ಕಾಲ್ಚೆಂಡಿನ ಆಕಾರದಲ್ಲಿ ಮೈಸೆಲ್ಲೆಗಳನ್ನು ರಚಿಸಿದರೆ ಇನ್ನೊಂದು ದ್ವಿಪದರದ ರಚನೆಗೆ ಕಾರಣವಾಗುತ್ತದೆ. ಇದು ಕಲ್ಲಿನ ಹಾಗೆ ಒಂದು ಮೆಟ್ಟಿಲಾಗುತ್ತದೆ, ಇನ್ನೊಂದು ಕಂಬವಾಗುತ್ತದೆ ಮತ್ತೊಂದು ವಿಗ್ರಹವಾಗುತ್ತದೆ. ಈ ಕಲ್ಲಿನ ಹಣೆಬರೆಹ ನಿಗದಿಯಾಗುವುದು ಅದು ಯಾರ ಕೈಗೆ ಸಿಗುತ್ತದೆ ಎಂಬುದು. ಕಲ್ಲು ಕುಟಿಗನ ಕೈಗೆ ಸಿಕ್ಕಿದ್ದು ಮೆಟ್ಟಿಲಾದರೆ ಸ್ಥಪತಿಯ ಕೈಗೆ ಸಿಕ್ಕರೆ ಕಂಬವಾಗುತ್ತದೆ. ಅದೇ ಶಿಲ್ಪಿಯ ಕೈಗೆ ಸಿಕ್ಕರೆ ವಿಗ್ರಹವಾಗುತ್ತದೆ. 

ಹೀಗೆ ಹಣೆಬರೆಹ ನಿರ್ಧಾರವಾಗುವುದಕ್ಕೆ ನಿರ್ದೇಶಕನ ನಿರ್ದೇಶನ ಬೇಕು. ಹಾಗಾದರೆ ಉಂಡೆಯಾಗಬೇಕಾದದ್ದು ಹಾಳೆಯಾಗುವುದು ಹೇಗೆ ಎಂದು ಮುಂದಿನ ವಾರ ನೋಡೋಣ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************



Ads on article

Advertise in articles 1

advertising articles 2

Advertise under the article