ನಿಷ್ಪಾಪಿ ಸಸ್ಯಗಳು : ಸಂಚಿಕೆ - 125
Thursday, October 23, 2025
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 125
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ದಸರಾ ರಜೆ ಕಳೆದು ಕಾಲಿಟ್ಟಿದ್ದೇ ದೀಪಾವಳಿಗೆ! ಇಂದು ದೀಪಗಳ ಹಬ್ಬವನ್ನು ಕಳೆದು ಎರಡನೇ ಸೆಮಿಸ್ಟರ್ ಗೆ ಕಾಲಿಟ್ಟಿದ್ದೀರಲ್ವೆ?
ಮತ್ತೆ ಶಾಲಾರಂಭ ಸೊಗಸು ನೀಡಿದೆ. ಜೊತೆಗೆ ಮಳೆರಾಯನೂ ಜೊತೆಯಾಗಿದ್ದಾನೆ! ನಾವೂ ನಿಮ್ಮಂತಿರುವಾಗ ಶಾಲೆಗೆ ಹೋಗುತ್ತಾ ದಾರಿಯಲ್ಲಿ ಹಲವಾರು ಗಿಡಮರಗಳನ್ನು ಗಮನಿಸುತ್ತಿದ್ದೆವು. ಸದಾಕಾಲ ಯಾವ ಗಿಡದಲ್ಲಿ ಹೂವಿದೆ? ಯಾವ ಹಣ್ಣಿದೆ ಎಂದು ಅರಸುತ್ತಿದ್ದೆವು. ಅವುಗಳಲ್ಲಿ ಒಂದು ವಿಸ್ಮಯದ ಸಸ್ಯವಿತ್ತು. ದಸರಾ ರಜೆ ಕಳೆದು ಶಾಲೆಗೆ ಹೋಗುವಾಗ ಆ ಗಿಡವು ಎರಡು ಎರಡೂವರೆ ಅಡಿಗಳೆತ್ತರ ಬೆಳೆದು ತಲೆಮೇಲೆ ರಥದಂತೆ ಹೂಗೊಂಚಲನ್ನು ಹೊತ್ತು ನಿಂತಿರುತ್ತಿದ್ದವು. ಅವುಗಳ ಬಲಿತ ಎಲೆಗಳನ್ನು ಕೊಯ್ದು ನಮ್ಮ ಪುಸ್ತಕಗಳ ನಡುವೆ ಇಟ್ಟುಕೊಂಡು ಎಲೆಗಳು ಮರಿ ಇಡುವ ಪುಣ್ಯಕಾಲವನ್ನು ಕಾಯುತ್ತಿದ್ದೆವು. ಪುಸ್ತಕದ ಕಾಗದಗಳು ಹಾಳಾಗುತ್ತಿದ್ದರೂ ಎಲೆಯ ಅಂಚಿನ ಗುಳಿಗಳಲ್ಲಿ ಮೂಡಿ ಬರುತ್ತಿದ್ದ ಬೇರುಗಳು ಅಚ್ಚರಿ ಮೂಡಿಸುತ್ತಿದ್ದವು. ಅವುಗಳನ್ನು ಪುಸ್ತಕದಿಂದ ಹೊರತೆಗೆದಿಟ್ಟ ಕೆಲವೇ ದಿನಗಳಲ್ಲಿ ಎಲೆಗಳ ಪ್ರತಿ ಸಂದಿನಲ್ಲಿ ಮೂಡಿದ್ದ ಬೇರುಗಳ ಗುಳಿಯಿಂದ ಸಣ್ಣ ಮರಿ ಗಿಡಗಳು ಬೆಳೆಯುತ್ತಿದ್ದವು. ನಮಗದು ಅರ್ಥವಾಗದ ಅಚ್ಚರಿಯಾಗಿತ್ತು!. ಒಂದೇ ಒಂದು ಎಲೆಯಿಂದ ಹತ್ತಾರು ಹೊಸ ಗಿಡಗಳು ಹುಟ್ಟುತ್ತಿದ್ದವು. ಬೆಳೆಯುತ್ತಿದ್ದವು!!.
ದಾರಿ ಬದಿಗಳಲ್ಲಿ, ಸೊಪ್ಪು ಸೌದೆಗಾಗಿ ಹೋದಾಗ ಕಾಡಿನ ಅಂಚಿನಲ್ಲಿ ಈ ಗಿಡಗಳ ಅಡಿಯಲ್ಲಿ ಹೀಗೇ ಉದುರಿದ ಎಲೆಗಳಿಂದಲೇ ಹೊಸ ಗಿಡಗಳಾಗುತ್ತಿದ್ದವು! ತಲೆ ಕೆಳಗಾಗಿ ಕೊಳವೆಯಂತಿರುವ ಪುಷ್ಪಪಾತ್ರೆಯೊಳಗಿನಿಂದ ಇಣುಕುವ ಅತಿವಿಶಿಷ್ಟವಾದ ಹೂವಿನಲ್ಲಿ ಎಂಟು ಕೇಸರಗಳಿದ್ದು ಅಂಡಾಶಯ, ಪುಷ್ಪ ಶಲಾಕಗಳಿರುತ್ತವೆ. ಅರಳುವ ಮೊದಲು ಮುಚ್ಚಿರುವ ಮೊಗ್ಗನ್ನು ಒತ್ತಿದಾಗ 'ಪಟ್' ಎಂಬ ಶಬ್ದ ಬರುವುದರಿಂದ ಇದರ ಕೆಂಪು, ಕಿತ್ತಳೆ ಹೂಗೊಂಚಲಲ್ಲಿ ಆಟವಾಡಲು ಮುಗಿಬೀಳುತ್ತಿದ್ದೆವು.
ಶಾಲೆಯಲ್ಲಿ ಮುಂದಿನ ತರಗತಿಗಳು ಈ ಸಸ್ಯದ ಬಗ್ಗೆ ಮಾಹಿತಿಯನ್ನು ಒದಗಿಸಿದಾಗ ಆ ನಿಷ್ಪಾಪಿ ಸಸ್ಯದ ಬಗ್ಗೆ ಹೆಚ್ಚು ತಿಳಿದುಕೊಂಡೆವು. ಬ್ಯಯೋಫಿಲಮ್ ಪಿನ್ನಾಟಮ್ (Brayophllum pinnatum) ಎಂಬ ಸ್ವಂತ ಹೆಸರು ಹೊಂದಿರುವ ಈ ಕಾಡುಬಸಳೆ ಎಂದು ನಮ್ಮಿಂದ ಕರೆಸಿಕೊಳ್ಳುವ ಸಸ್ಯವು ಕ್ರಾಸ್ಸುಲೇಸಿಯೆ ಕುಟುಂಬಕ್ಕೆ ಸೇರಿದೆ. ಕ್ಯಾಥೆಡ್ರಲ್ ಬೆಲ್ಸ್, ಏರ್ ಪ್ಲಾಂಟ್, ಲೈಫ್ ಫ್ಲಾಂಟ್, ಮಿರಾಕಲ್ ಲೀಫ್, ಲವ್ ಬುಷ್, ಕಲಾಂಚೊ ಪಿನ್ನಾಟಾ ಎಂಬವು ಸಾಮಾನ್ಯ ಹೆಸರುಗಳಾಗಿವೆ. ಕಾಡುಬಸಳೆ, ಪಟ್ ಪಟ್ ಸೊಪ್ಪು, ರಣಪಾಲ ಸೊಪ್ಪು ಎಂದು ಕನ್ನಡದ ಹೆಸರುಗಳಾದರೆ ಬ್ರಯೋಫಿಲಮ್ ಆಂಗ್ಲ ಭಾಷಾ ಹೆಸರಾಗಿದೆ.
ಇದು ಮಡಗಾಸ್ಕರ್ ಮೂಲದ ಒಂದು ರಸಭರಿತ ಸಸ್ಯವಾಗಿದ್ದು 150 ಕ್ಕೂ ಹೆಚ್ಚು ಜಾತಿಯ ಸಸ್ಯ ಸಮೂಹ ಇದರ ಜೊತೆಗಿದೆ ಎಂದು ಅರಿತೆವು. ಎಲ್ಲಕ್ಕಿಂತ ಮಿಗಿಲಾಗಿ ಇದರ ಹೂವಿಗೆ ಪರಾಗಸ್ಪರ್ಶದ ಅಗತ್ಯವಿಲ್ಲ. ಇದು Asexual reproduction ಸಸ್ಯವಾಗಿದೆ. ಅತೀ ಹೆಚ್ಚು ಪೋಷಕಾಂಶ ಹಾಗೂ ಇತರ ಅಂಶಗಳನ್ನು ಹೊಂದಿರುವ ಇದರ ಎಲೆಗಳು ಆರೋಗ್ಯವಂತ ಸಂತಾನ ಪಡೆಯುವಲ್ಲಿ ಯಶಸ್ವಿಯಾಗುತ್ತವೆ. ಮರಣವಿಲ್ಲದ ಸಸ್ಯವಾಗಿ ಮುಂದುವರಿಯುತ್ತದೆ!. ಸಂಶೋಧನೆಗಾಗಿ ಬಾಹ್ಯಾಕಾಶಕ್ಕೆ ಕಳಿಸಲ್ಪಟ್ಟ ಮೊದಲ ಸಸ್ಯಗಳಲ್ಲಿ ಇದೂ ಒಂದೆಂದು ತಿಳಿದು ಹೆಮ್ಮೆಯೆನಿಸಿತು!.
ಉಷ್ಣವಲಯ, ಉಪೋಷ್ಣವಲಯದ ಸಸ್ಯವಾದ ಈ ಸಸ್ಯ ನೀರು ಬಸಿದು ಹೋಗುವ ಮಣ್ಣಲ್ಲಿ ಸೊಂಪಾಗಿ ಬೆಳೆಯುತ್ತದೆ. ಬಂಡೆಗಳ ಸಂದಿಗಳಲ್ಲಿ, ಪತನ ಶೀಲ ಕಾಡಿನಲ್ಲಿ ಬೆಳೆಯುವುದೇ ಅಲ್ಲದೆ ಹವಾಯಿಯಂತಹ ಅನೇಕ ಕಡೆ ಆಕ್ರಮಣಕಾರಿ ಸಸ್ಯವೆಂದೂ ಪರಿಗಣಿಸಲ್ಪಟ್ಟಿದೆ. ಜೊತೆ ಜೊತೆಗೆ ಕೆಲವೆಡೆ ಉದ್ಯಾನ ಸಸ್ಯವಾಗಿಯೂ ಜನಪ್ರಿಯತೆ ಗಳಿಸಿದೆ. ಆದರೆ 10• ಗಿಂತ ಕಡಿಮೆ ತಾಪಮಾನದಲ್ಲಿ ಅಭಿವೃದ್ಧಿಯಾಗದು.
ಏಷ್ಯಾಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಗಳಲ್ಲಿ ಹಬ್ಬಿರುವ ಕಾಡು ಬಸಳೆಯು 1857 ರ ಆಸುಪಾಸಲ್ಲಿ ಕಾಡು ಬಸಳೆಯು ಜರ್ಮನ್ ಭಾಷೆಯಲ್ಲಿ ಸುಧೀರ್ಘ ವಾಗಿ ವಿವರಣೆಯ ಮೂಲಕ ಖ್ಯಾತಿ ಗಳಿಸಿದ್ದೇ ಅಲ್ಲದೆ ಉಡುಗೊರೆಯಾಗಿಯೂ ನೀಡಲ್ಪಡುತ್ತಿತ್ತು ಗೊತ್ತಾ!. ರೆಡ್ ಪಿಯರೆಂಟ್ ಚಿಟ್ಟೆಯು ಮೊಟ್ಟೆ ಇಡಲು ಹಾಗೂ ಮರಿಹುಳಗಳು ಬೆಳೆಯಲು ಕಾಡುಬಸಳೆ ಸಹಕಾರಿಯಾಗಿದೆ.
ಈ ಕಾಡುಬಸಳೆಯು ನಮಗೆ ಕೇವಲ ಕಳೆ ಸಸ್ಯವಾಗಿ ಕಂಡರೂ ಪಾರಂಪರಿಕವಾಗಿ ವಿಶೇಷವಾದ ಔಷಧೀಯ ಸಸ್ಯವಾಗಿದೆ. ನೂರಾರು ರೋಗಗಳಿಗೆ ಇದು ಪರಿಣಾಮಕಾರಿ ಚಿಕಿತ್ಸೆಯಲ್ಲಿ ಒಳಗೊಂಡಿದೆ ಎನ್ನಲಾಗುತ್ತದೆ. ಮಧುಮೇಹ ಹಾಗೂ ಮೂತ್ರಪಿಂಡದ ಕಲ್ಲುಗಳಿಗೆ ಜನಪ್ರಿಯ ಔಷಧಿಯಾಗಿದೆ. ಅಮೆಜಾನ್ ಜನರು ಉರಿಯೂತ, ಜ್ವರ ಹಾಗೂ ಕ್ಯಾನ್ಸರ್ ವಿರುದ್ಧ ಬಳಸುವರಂತೆ. ಈ ಸೊಪ್ಪಿನಲ್ಲಿ ವಿಷದ ಅಂಶವೂ ಇರುವುದರಿಂದ ಹುಲ್ಲು ಮೇಯುವ ಪ್ರಾಣಿಗಳಿಗೆ ಅಪಾಯಕಾರಿಯಾಗಲೂ ಬಹುದೆನ್ನುತ್ತಾರೆ.
ಅಧಿಕ ರಕ್ತದೊತ್ತಡ, ಕೆಮ್ಮು,ಸಂಧಿವಾತ, ತಲೆನೋವು, ಮೂತ್ರಪಿಂಡದ ಸಮಸ್ಯೆಗಳ ಬಳಕೆಯ ಬಗ್ಗೆ ಸಂಶೋಧನೆಗಳಾಗುತ್ತಿದ್ದು ಇದರ ಬಳಕೆ ಮಾಡುವಾಗ ಹಾಲು ಮತ್ತು ಹಾಲಿನ ಉತ್ಪನ್ನ ಬಳಸಬಾರದೆನ್ನುತ್ತಾರಲ್ಲದೆ ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ ಜಾಗ್ರತೆ ವಹಿಸಬೇಕೆಂಬ ಮಾತೂ ಇದೆ. ಒಟ್ಟಿನಲ್ಲಿ ಎಲೆ ಬೇರು, ಕಾಂಡ, ಹೂವು, ಹಣ್ಣೆಂದು ಸಸ್ಯಗಳನ್ನು ಔಷಧಿಯಾಗಿ ಬಳಸುವಾಗ ಅತ್ಯಂತ ಎಚ್ಚರವಹಿಸುವುದು ಮುಖ್ಯವಾಗುತ್ತದೆ. ಇದಕ್ಕೆ ಕಾಡುಬಸಳೆಯೂ ಹೊರತಲ್ಲ.
ಮಕ್ಕಳೇ, ಇಂದು ನಡೆಯುತ್ತಿರುವ ಅರಣ್ಯನಾಶದಿಂದ ಕಾಡುಬಸಳೆಯೂ ಕಾಣೆಯಾಗಿದೆ ಎಂದೆನ್ನಲು ವಿಷಾದವಾಗುತ್ತಿದೆ. ಉದ್ಯಾನವನದಲ್ಲಿ ಅಂದಕ್ಕಾಗಿ ನೆಟ್ಟು ಬೆಳೆಸಿದ ಸಸಿಗಳನ್ನಷ್ಟೇ ಕಾಣಬೇಕಿದೆ. ಪುಸ್ತಕದೆಡೆಯಲ್ಲಿ ಎಲೆಗಳನಿಟ್ಟು ಅವುಗಳಲ್ಲಿ ಮರಿಗಳನ್ನು ಕಂಡು ಹಿಗ್ಗಿದ ಕಾಲಕ್ಕೆ ಮೌಲ್ಯ ಕಟ್ಟಲು ಸಾಧ್ಯವೇ? ಇಂದಿನ ಮಕ್ಕಳಿಗಿದರ ಕಲ್ಪನೆಯನ್ನು ಉಣಿಸುವುದಾದರೂ ಹೇಗೆ? ಅದಕ್ಕಿರುವುದು ಒಂದೇ ದಾರಿ. ಎಲ್ಲಿಂದಾದರೂ ಕಾಡುಬಸಳೆಯ ಒಂದು ಎಲೆಯನ್ನು ತಂದು ಗಿಡಗಳನ್ನು ಬೆಳೆಸುವುದು. ತಾವು ಈ ಕೆಲಸ ಮಾಡಬಲ್ಲಿರಲ್ಲವೇ?
ಸರಿ ಮಕ್ಕಳೇ. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************