ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 102
Thursday, October 23, 2025
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 102
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ನಿಮ್ಮ ಪ್ರೀತಿಯ ತಾರಾನಾಥ ಸರ್ ಗೆ ಪಟಾಕಿಗಳ ಬಗ್ಗೆ ತಿಳಿಯುವ ಆಸೆ, ಅಲ್ಲಲ್ಲ ನನ್ನ ಮೂಲಕ ನಿಮಗೆಲ್ಲಾ ತಿಳಿಸುವ ಆಸೆ. ನಾವೆಲ್ಲ ಪಟಾಕಿಗೆ ಬಣ್ಣ ಹಚ್ಚುತ್ತೇವೆ ಅವು ಬೆಳಕು ಮತ್ತು ಶಬ್ಧ ಕೊಡುತ್ತವೆ. ರಾಕೆಟ್ ಸುಂಯ್ಯನೆ ಮುಗಿಲಿಗೇರುತ್ತವೆ, ಅಲ್ಲಿ ಬಣ್ಣ ಬಣ್ಣಗಳಾಗಿ ಸ್ಪೋಟಗೊಳ್ಳುತ್ತವೆ, ಸುರಸುರ ಬತ್ತಿಗಳ ಆ ಬಿಳಿಯ ಬೆಳಕು ಮರೆಯಲಾಗದ್ದು, ದೇವಸ್ಥಾನಗಳ ಉತ್ಸವಗಳಲ್ಲಿ ಹೊತ್ತಿಸುವ ಕದೋನಿ 2 - 3 ಕಿಲೋಮೀಟರ್ ಕೇಳಿಸುವುದು ಹೇಗೆ ಇವುಗಳನ್ನೆಲ್ಲಾ ಅಚ್ಚರಿಯ ವಿಷಯಗಳು ನಿಮ್ಮ ಸರ್ ಗೆ. ಆದ್ದರಿಂದ ನಾನೀಗ ಉತ್ತರದಾಯಿಗಿದ್ದೇನೆ.
ಪಟಾಕಿಗೆ ಬೆಂಕಿ ಹಚ್ಚುತ್ತೀರಿ. ಅದು ಆದ್ದರಿಂದ ಹೊತ್ತಿ ಉರಿದು ಹೊಗೆ, ಶಬ್ಧ ಮತ್ತು ಬೆಳಕನ್ನು ಕೊಡುತ್ತದೆ. ಮನೆಯ ಒಲೆಯಲ್ಲಿ ಸೌದೆ, ಕಾಗದ, ಸ್ಟೌವ್ ನಲ್ಲಿನ ಗ್ಯಾಸ್ ಎಲ್ಲವೂ ಹೊತ್ತಿ ಉರಿಯುತ್ತವೆ. ಹೀಗೆ ಹೊತ್ತಿ ಉರಿಯುವ ವಸ್ತುಗಳನ್ನು ದಹ್ಯ ವಸ್ತುಗಳೆನ್ನುತ್ತೇವೆ (combustible material). ಒಂದು ವಸ್ತು ಉರಿಯಲು ಆಮ್ಲಜನಕ ಬೇಕು ಇಲ್ಲಿ ಆಮ್ಲಜನಕ ಉರಿಯುವುದಿಲ್ಲ ಬದಲಾಗಿ ಉರಿಯಲು ಸಹಕರಿಸುತ್ತದೆ. ಆದ್ದರಿಂದ ಆಮ್ಲಜನಕ ದಹನಾನುಕೂಲಿ (supporter of combustion) ಆದರೆ ದಹ್ಯ ವಸ್ತು ಅಲ್ಲ. ದಹ್ಯ ವಸ್ತು ಆಮ್ಲಜನಕದೊಂದಿಗೆ ಉರಿದು ಅದರ ಆಕ್ಸೈಡ್ ಉತ್ಪತ್ತಿ ಮಾಡುವ ಕ್ರಿಯೆ ದಹನ (combustion). ದಹನ ಕ್ರಿಯೆಯಲ್ಲಿ ಶಾಖ ಬಿಡುಗಡೆಯಾಗುತ್ತದೆ ಮತ್ತು ಆಕ್ಸೈಡ್ ಅಂದರೆ ಕೆಲವೊಮ್ಮೆ ಅನಿಲಗಳು ಬಿಡುಗಡೆಯಾಗುತ್ತವೆ. ನೀವು ಕಾಗದ, ಗ್ಯಾಸ್ ಸೌದೆಗಳನ್ನು ಉರಿಸುವಾಗ ದಹನ ಕ್ರಿಯೆ (burning/deflagration) ನಿಧಾನವಾಗಿರುವುದರಿಂದ ಶಾಖ ಬಿಡುಗಡೆ ಮಾತ್ರ ಪ್ರಧಾನ. ಇದು ಶಬ್ಧದ ವೇಗದ ಕೆಳಗಿರುವ ಕ್ರಿಯೆ (subsonic) ಆದರೆ ಪಟಾಕಿಯದ್ದು ಸ್ಪೋಟ (Explosion/detonation). ಇದು ಶಬ್ಧದ ವೇಗಕ್ಕೆ ಅತೀತವಾದುದರಿಂದ (supersonic) ಇದರಲ್ಲಿ ಘಾತ ಅಲೆಗಳಿಗೆ (shock waves) ಪ್ರಾಧಾನ್ಯ. ಪಟಾಕಿ ಅಥವಾ ಸುಡುಮದ್ದುಗಳಲ್ಲಿ ರಾಸಾಯನಿಕ ಕ್ರಿಯೆ ಅತಿ ಕ್ಷಿಪ್ರವಾಗಿ ನಡೆದು ಅಪಾರ ಪ್ರಮಾಣದ ಬೆಳಕು, ಶಾಖ ಮತ್ತು ಬಿಸಿ ಅನಿಲ ಬಿಡುಗಡೆಯಾಗುತ್ತದೆ. ಈಗ ಉಂಟಾಗುವ ದೊಡ್ಡ ಪ್ರಮಾಣದ ಒತ್ತಡ ಸ್ಫೋಟಕ್ಕೆ ಕಾರಣವಾಗುತ್ತವೆ. ಈ ಸ್ಪೋಟದ ಸಮಯ ಹೊರ ನುಗ್ಗುವ ಅನಿಲಗಳು ಇದು ಘಾತ ಅಲೆಗಳ (shock waves) ರೂಪದಲ್ಲಿ ಮುನ್ನುಗ್ಗುವಾಗ ಶಬ್ದದ ರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತವೆ. ಈ ಘಾತ ಅಲೆಗಳು ಸಾನಿಕ್ ಭೂಮ್ (sonic boom) ರೀತ ಹಲವು ಕಿಲೋಮೀಟರ್ ದೂರ ಚಲಿಸಬಹುದು. ಅದೇ ದೇವಸ್ಥಾನದ ಕದೋನಿಯ ಕಂಪನಗಳು ಭೂಮಿಯ ಮೂಲಕ ಹೆಚ್ಚು ವೇಗವಾಗಿ ಮತ್ತು ಬಲಯುತವಾಗಿ 4 -5 ಕಿಲೋಮೀಟರ್ ದೂರ ಕೇಳಿಸಿದರೂ ಅಚ್ಚರಿಪಡಬೇಕಾಗಿಲ್ಲ.
ಈ ಸುಡುಮದ್ದುಗಳ ಮೂಲ ಘಟಕಗಳನ್ನು "ಸ್ಟಾರ್ಸ್" ("stars") ಎನ್ನುತ್ತೇವೆ. ಪ್ರತೀ ಸ್ಟಾರ್ಸ್ ಅದು ಉತ್ಪತ್ತಿ ಮಾಡಬೇಕಾದ ಶಬ್ಧ ಮತ್ತು ದೃಶ್ಯ ಪರಿಣಾಮವನ್ನವಲಂಬಿಸಿರುತ್ತದೆ (visual effect). ಪ್ರತಿ ಸ್ಟಾರ್ಸ್ ನಾಲ್ಕು ಘಟಕಗಳನ್ನು ಹೊಂದಿರುತ್ತದೆ.
1. ಉತ್ಕರ್ಷಕ (oxidisers): ಅದರ ಸಹಸ್ರ ಉರಿಯಲು ಅಗತ್ಯವಾದ ಆಮ್ಲಜನಕವನ್ನು ಒದಗಿಸುವ ಕೆಲಸವನ್ನು potassium nitrate ಅಥವಾ ಪೊಟಾಸಿಯಂ ಪರ್ಕೋಲೇಟ್ ಕೆಲಸಮಾಡುತ್ತವೆ.
2. ಇಂಧನಗಳು(fuels): ಸಾಮಾನ್ಯವಾಗಿ ಕಲ್ಲಿದ್ದಲ ಪುಡಿ (charcoal powder) ಮತ್ತು ಗಂಧಕವನ್ನು (sulphur) ಬಳಸುತ್ತಾರೆ.
3. ವರ್ಣಕಗಳು (colourants): ಸುಡುಮದ್ದಿನ ಬಳಕಿಗೆ ಬಣ್ಣ ಕೊಡಲು ಲೋಹಗಳ ಲವಣಗಳನ್ನು (metallic salts) ಬಳಸುತ್ತಾರೆ. ಸ್ಟ್ರಾನ್ಸಿಯಂ ಲವಣ ಕೆಂಪು, ಕ್ಯಾಲ್ಸಿಯಂಯ ಲವಣ ಕಿತ್ತಳೆ, ಸೋಡಿಯಂ ಲವಣಗಳು ಹಳದಿ, ಬೇರಿಯಂ ಲವಣ ಹಸಿರು, ತಾಮ್ರದ ಲವಣಗಳು ನೀಲಿ, ಅಲ್ಯೂಮಿನಿಯಂ ಮತ್ತು ಮೆಗ್ನೀಸಿಯಂ ಹೊಳೆಯುವ ಬಿಳಿ, ತಾಮ್ರ ಮತ್ತು ಸ್ಟ್ರಾನ್ಸಿಯಂ ಲವಣಗಳ ಮಿಶ್ರಣ ಪರ್ಪಲ್ ಹೀಗೆ ಬಣ್ಣದೋಕುಳಿಯನ್ನು ಹರಡುತ್ತವೆ.
4. ಬಂಧಕಗಳು (binders): ಡೆಕ್ಸ್ಟ್ರಿನ್ (dextrin) ನಂತಹ ವಸ್ತುಗಳನ್ನು ಬಳಸಿ ಈ ಎಲ್ಲಾ ವಸ್ತುಗಳನ್ನು ಉಂಡೆ ಕಟ್ಟಲಾಗುತ್ತದೆ. ಇನ್ನು ಇವುಗಳಲ್ಲಿರುವ ಒಡೆಕಗಳು (busters) ಗಾಳಿಯಲ್ಲಿ ಮೇಲಕ್ಕೇರಿದ ಮೇಲೆ ಒಡೆದು ಲೋಹಗಳ ಲವಣಗಳನ್ನು ಹೊರ ಹಾಕುತ್ತವೆ. ಇವು ಉರಿದು ಸ್ಪೋಟಿಸಿ ರಂಗಿನ ಲೋಕವನ್ನು ಸೃಷ್ಟಿಸುತ್ತವೆ..
ಪಟಾಕಿಯ ರಚನಾತ್ಮಕ ಘಟಕಗಳು ಯಾವುವು ಎಂದು ನೀವು ಕೇಳಬಹುದು. ಕಾಗದದಿಂದ ಮಾಡಲಾದ ಹೊರ ಕವಚ (casing) ಪಟಾಕಿ ಮೇಲಕ್ಕೇರುವ ವರೆಗೆ ಒತ್ತಡವನ್ನು ತಡೆದುಕೊಳ್ಳುವಂತೆ ನೋಡಿಕೊಳ್ಳುತ್ತವೆ. ಇನ್ನು ಪಟಾಕಿಯ ಬತ್ತಿ (main fuse) ನಿಮಗೆ ಪಟಾಕಿಯನ್ನು ಹೊತ್ತಿಸಲು ಬೇಕಾದ ಸಮಯವನ್ನು ಒದಗಿಸುತ್ತದೆ. ಇನ್ನು ರಾಕೆಟ್ ಎಂಬುದು ನ್ಯೂಟನ್ನನ ಶಿಷ್ಯವರ್ಗ ಎಂಬುದು ನಿಮಗೆ ಗೊತ್ತು.
ಇದು ನಿಮ್ಮ ಪಟಾಕಿಯ ಸಂಕ್ಷಿಪ್ತ ಕಥೆ. ನಿಮಗೆ ಇಷ್ಟವಾಯಿತೇ..?
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************