ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 101
Wednesday, October 22, 2025
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 101
ಪ್ರೀತಿಯ ಮಕ್ಕಳೇ.. ಕರಾವಳಿಯ ಕೃಷಿಕರಿಗೆ ಯುಗಾದಿ ಮತ್ತು ದೀಪಾವಳಿಗಳು ಕೃಷಿ ಸಂಬಂಧಿ ಹಬ್ಬಗಳು. ನಾನು ಈ ವರ್ಷ ನನ್ನ 62 ದೀಪಾವಳಿ ಹಬ್ಬಗಳನ್ನು ನನ್ನ ಅಮ್ಮನೊಂದಿಗೆ ಆಚರಿಸಿದ್ದೇನೆ. ನನ್ನ ಶಿಕ್ಷಣ, ವೃತ್ತಿ ಜವಾಬ್ದಾರಿ, ಸಂಸಾರ ಜಂಜಡಗಳು ನನ್ನ ಅಮ್ಮನೊಂದಿಗೆ ದೀಪಾವಳಿ ಆಚರಿಸಲು ತೊಂದರೆ ತಂದಿಲ್ಲ. ಮಕ್ಕಳೇ ನೀವೂ ಹಾಗೆ ನಿಮ್ಮ ದೀಪಾವಳಿಯನ್ನು ನಿಮ್ಮ ಅಪ್ಪ ಅಮ್ಮನೊಡನೆ ದೀಪಾವಳಿ ಆಚರಿಸುವ ನಿರ್ಧಾರ ಇಟ್ಟುಕೊಳ್ಳಿ.
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಇವತ್ತು ಬೆಳಿಗ್ಗೆ ಗೋ ಪೂಜೆ ಮುಗಿಸಿ ಲೇಖನ ಬರೆಯಲು ಮೊಬೈಲ್ ಕೈಗೆತ್ತಿಕೊಂಡಾಗ ನಿಮ್ಮ ತಾರಾನಾಥ ಸರ್ ಒಂದು ಸಂದೇಶ ಕಳುಹಿಸಿದ್ದರು. ಅವರ ವಿನಂತಿ ಪಟಾಕಿಯ ಬಗ್ಗೆ ವಿವರಣೆ ನೀಡುವಂತೆ ಇತ್ತು. ದೀಪಾವಳಿ, ಬೆಳಕು ಮತ್ತು ಪಟಾಕಿಗಳು ಜೋಡಿ ಪದಗಳು. ಒಂದನ್ನು ಬಿಟ್ಟು ಒಂದಿಲ್ಲ. ಯಾಕೆ ಇವುಗಳಿಗೆ ಇಂತಹ ಅವಿನಾಭಾವ ಸಂಬಂಧ ಎಂಬ ಪ್ರಶ್ನೆ ಎಂದಾದರೂ ನಿಮ್ಮನ್ನು ಕಾಡಿದೆಯೇ? ಯಾಕೆ ಆಕಾಶ ಬುಟ್ಟಿ, ಗೂಡುದೀಪ ಎಂದು ಕರೆಯಲ್ಪಡುವ ಯಮದೀಪ ಏಕೆ ಮನೆಯ ಮೇಲ್ಗಡೆ ಕಟ್ಟಿ ಆಗಸವನ್ನು ಬೆಳಗುತ್ತೇವೆ? ಎಂದು ನಿಮ್ಮ ಅಜ್ಜನನ್ನು ಕೇಳಿದ್ದೀರಾ? ಯಾಕೆ ಪಟಾಕಿ, ರಾಕೆಟ್ ಗಳನ್ನು ಹೊತ್ತಿಸಿ ನಭವನ್ನು ಚಮಕಿಸಬೇಕು ಎಂದು ನಿಮ್ಮ ಗುರುಗಳನ್ನು ಕೇಳಿದ್ದೀರಾ? ಮಕ್ಕಳೇ ಈ ಪ್ರಶ್ನೆಯನ್ನು ಯಾರೂ ಕೇಳದೇ ಇರುವುದರಿಂದ ಮತ್ತು ಉತ್ತರಿಸದೇ ಇರುವುದರಿಂದ ಪಟಾಕಿ ಹಚ್ಚುವುದು ಮೋಜಿಗಾಗಿ ಎಂದು ಎಲ್ಲರೂ ಭಾವಿಸಿದ್ದಾರೆ. ಈ ರೀತಿ ಅಮೋದಕ್ಕಾಗಿ ವಾತಾವರಣ ಮಾಲಿನ್ಯ ಮಾಡಬಾರದು ಎಂದು ಪಾಪದ ಪಟಾಕಿಯ ಮೇಲೆ ನಿಷೇಧದ ಪ್ರಹಾರ ಮಾಡಲಾಗಿದೆ. ಮಕ್ಕಳೇ ಈ ದೀಪ, ಗೂಡುದೀಪ ಪಟಾಕಿಗಳು ಕೇವಲ ಸಂತಸಕ್ಕಾಗಿ ಅಲ್ಲ ಬದಲಾಗಿ ಅದಕ್ಕೆ ಧಾರ್ಮಿಕ ಮಹತ್ವ ಇದೆ. ಈ ದೀಪಾವಳಿ ಬರುವುದು ಪಿತೃಪಕ್ಷದ ನಂತರ. ಪಿತೃಪಕ್ಷದಲ್ಲಿ ಪಿತೃಗಳು ಭೂಮಿಗೆ ಬರುತ್ತಾರೆ. ದೀಪಾವಳಿಯ ಸಮಯದಲ್ಲಿ ಪಿತೃಲೋಕಕ್ಕೆ ಹಿಂದಿರುಗುತ್ತಾರೆ. ಹೀಗೆ ಹಿಂದಿರುಗುವಾಗ ಅವರಿಗೆ ದೀಪ ಹಚ್ಚಿ, ಆಕಾಶ ಬುಟ್ಟಿಯನ್ನು ಬೆಳಗಿಸಿ ಪಟಾಕಿಗಳನ್ನು ಹೊಡೆದು ಆಗಸ ಬೆಳಗಿಸುವ ಮೂಲಕ ಪಿತೃಲೋಕದ ದಾರಿ ತೋರಿಸುವ ಪ್ರಕ್ರಿಯೆ ಇದು. ಚೀನಾ ದೇಶದಲ್ಲಿ ಕೂಡಾ ಈ ಆಚರಣೆ ಇದೆಯಂತೆ. ಆದ್ದರಿಂದ ಪಟಾಕಿ ಮೋಜಿಗಾಗಿ ಅಲ್ಲ ಅದೊಂದು ನಮ್ಮ ಪಿತೃಗಳಿಗೆ ದಾರಿ ತೋರಿಸುವ ಧಾರ್ಮಿಕ ಆಚರಣೆ.
ನಾವು ಆಕಾಶಬುಟ್ಟಿ ಮಾಡಿ ಅದರ ಕೆಳಭಾಗದಲ್ಲೊಂದು ದೀಪ ಹಚ್ಚುತ್ತೇವೆ ಅದು ನಿಧಾನವಾಗಿ ಮೇಲೇರುತ್ತದೆ. ಇದನ್ನು ವೈಜ್ಞಾನಿಕ ಭಾಷೆಯಲ್ಲಿ ನಾವು ಬಿಸಿ ಗಾಳಿಯ ಬಲೂನು (hot air balloon) ಎನ್ನುತ್ತೇವೆ. ನೀವು ಕೆಳಗಡೆ ದೀಪ ಹಚ್ಚಿದಾಗ ಅದರ ಮೇಲ್ಗಡೆ ಇರುವ ಗಾಳಿ ಬಿಸಿಯಾಗುತ್ತದೆ. ಬಿಸಿಯಾದ ಗಾಳಿ ಹಿಗ್ಗುವುದರಿಂದ ಅದರ ಸಾಂದ್ರತೆ ತಣ್ಣಗಿನ ಗಾಳಿಗಿಂತ ಕಡಿಮೆಯಾಗುತ್ತದೆ. ಅಂದರೆ ನಿಮ್ಮ ಆಕಾಶ ಬುಟ್ಟಿಯ ಒಳಗೆ ಹಗುರವಾದ ಗಾಳಿ ತುಂಬಿರುತ್ತದೆ. ಈಗ ಇದು ಗಾಳಿಗಿಂತ ಹಗುರವಾಗಿರುವುದರಿಂ ನಿಧಾನವಾಗಿ ಮೇಲಿರುತ್ತದೆ. ಹಣತೆಯ ಎಣ್ಣೆ ಮುಗಿಯುವ ವರೆಗೆ ನಿಮ್ಮ ಆಕಾಶ ಬುಟ್ಟಿ ಗಾಳಿಯಲ್ಲಿ ತೇಲತ್ತಿರುತ್ತದೆ. ಇನ್ನೊಂದು ವಿಶೇಷ ಎಂದರೆ ಆಕಾಶಬುಟ್ಟಿ ನೇರವಾಗಿ ಮೇಲೇರುವುದಿಲ್ಲ ನಿಮ್ಮಿಂದ ದೂರಕ್ಕೆ ತೇಲಿಕೊಂಡು ಹೋಗುತ್ತದೆ. ಇದಕ್ಕೆ ಕಾರಣ ಮೇಲ್ಭಾಗದಲ್ಲಿರುವ ಗಾಳಿಯ ಪ್ರವಾಹ. ವಿಜ್ಞಾನಿಗಳು ಈ ಬಲೂನಿನಲ್ಲಿ ಗಾಳಿಯನ್ನು ಅಧ್ಯಯನ ಮಾಡುವ ಉಪಕರಣಗಳನ್ನಿಟ್ಟು ಗಾಳಿಯ ಬಲೂನುಗಳನ್ನು ಹಾರಿಸುವ ಮೂಲಕ ವಾತಾವರಣದ ಅಧ್ಯಯನ ನಡೆಸುತ್ತಾರೆ. ಈ ಬಿಸಿಗಾಳಿಯ ಬಲೂನಿನಲ್ಲಿ ಕುಳಿತು ಬರ್ಟ್ರಾಂಡ್ ಪಿಕಾರ್ಡ್ ಮತ್ತು ಬ್ರಿಯಾನ್ ಜೋನ್ಸ್ 1999 ರಲ್ಲಿ ಅವಿಶ್ರಾಂತವಾಗಿ ಚಲಿಸಿ ಪ್ರಪಂಚ ಪರ್ಯಟನೆ ಮಾಡಿದರು. ಇವರು ಪ್ರಯಾಣಿಸಿದ ಆಕಾಶಬುಟ್ಟಿ 180 ಅಡಿಗಳಷ್ಟು ಎತ್ತರವಿದ್ದು 6 ಪ್ರೋಪೇನ್ ಒಲೆಗಳನ್ನು (burners) ಹೊಂದಿತ್ತು.
ನೀವೂ ಆಕಾಶಬುಟ್ಟಿಯೊಂದಿಗೆ ಪ್ರಯಾಣಿಸಬಹುದು ಅಥವಾ ವಾತಾವರಣದ ಸಂಶೋಧನೆಗಳನ್ನು ನಡೆಸಬಹುದು. ನೀವು ಹೊಸ ಹೊಸ ಬೆಳಕಿನ ಕಿರಣಗಳನ್ನು ಹುಡುಕಿ ಚರಿತ್ರೆಯಲ್ಲಿ ದಾಖಲಾಗುವ ಪ್ರಯತ್ನಮಾಡುವಿರಿ ತಾನೇ?
ಇನ್ನು ಈ ಗೂಡುದೀಪ ಇದೆಯಲ್ಲ ಇದು ಸಮಗ್ರ ಕೀಟ ನಿಯಂತ್ರಣ ಕ್ರಮ. ನಾವು ಸೋಣ ತಿಂಗಳಿನಲ್ಲಿ ಹೊಸ್ತಿಲಿಗೆ ಬರೆಯುವ ಅಥವಾ ರಂಗೋಲಿ ಇಡುವ ಕ್ರಮವನ್ನನುಸರಿಸಿದರೆ ದೀಪಾವಳಿಗೆ ಆಕಾಶಬುಟ್ಟಿ. ಇವುಗಳು ಕೀಟಗಳ ಜೀವನಚಕ್ರಕ್ಕೆ ಅನುಗುಣವಾಗಿದೆ. ಜುಲೈ ಅಗಸ್ಟ್ ತಿಂಗಳಿನಲ್ಲಿ ಕೀಟಗಳ ಹರಿದಾಡುವ ಲಾರ್ವಾಗಳು ಮನೆಯ ಕಡೆಗೆ ದಾಳಿ ಇಡುತ್ತವೆ. ಅದಕ್ಕಾಗಿ ರಂಗೋಲಿ ಬರೆಯುತ್ತಿದ್ದರು. ಹಿಂದೆ ರಂಗೋಲಿ ಬರೆಯುತ್ತಿದ್ದುದು ಈಗಿನ ಹಾಗೆ ಕಲ್ಲಿನ ಪುಡಿಯಿಂದಲ್ಲ ಬದಲಾಗಿ ಅಕ್ಕಿಯ ಹಿಟ್ಟಿನಿಂದ. ಲಾರ್ವಾಗಳು ಈ ಅಕ್ಕಿ ಹಿಟ್ಟನ್ನು ತಿಂದು ಹಿಂದಿರುಗುತ್ತಿದ್ದವು. ಸಪ್ಟಂಬರ ಹೊತ್ತಿಗೆ ಇವು ಕೋಶಾವಸ್ಥೆಯನ್ನು (pupal stage) ತಲುಪಿ ರೂಪಾಂತರ (metamorphosis) ಹೊಂದಿ ಪ್ರೌಢ ಪತಂಗಗಳಾಗುತ್ತವೆ. ಅಂದರೆ ಅಕ್ಟೋಬರ್ ಹೊತ್ತಿಗೆ ಹಾರಾಡುತ್ತಾ ನಿಮ್ಮ ಮನೆಗಳಿಗೆ ದಾಳಿ ಮಾಡುತ್ತವೆ. ಇದನ್ನು ತಪ್ಪಿಸಲು ಮನೆಗಿಂತ ಎತ್ತರದಲ್ಲಿ ಯಮದೀಪವನ್ನು ಕಟ್ಟುತ್ತೀರಿ. ಪತಂಗಗಳು ಗೂಡುದೀಪದ ಬೆಳಕಿನ ಕಡೆಗೆ ಆಕರ್ಷಿತವಾಗುತ್ತವೆ. ಮನೆಯ ಒಳಗೆ ಅವುಗಳ ದಾಳಿ ಇರುವುದಿಲ್ಲ.
ಒಂದು ನೆನಪಿಡಿ ಚಿಟ್ಟೆಗಳು ಹಗಲು ಸಂಚಾರಿಗಳು. ಆದರೆ ಪತಂಗಗಳು ರಾತ್ರಿ ಸಂಚಾರಿಗಳು. ರಾತ್ರಿ ನಿಮ್ಮ ಮನೆಯೊಳಗೆ ಬರುವ ಜೀವಿ ಪತಂಗವೇ ಹೊರತು ಚಿಟ್ಟೆಯಲ್ಲ. ಎಲ್ಲಿಯಾದರೂ ರಾತ್ರಿ ಚಿಟ್ಟೆ ಬಂತೆಂದರೆ ಅದು ಸಾವಿಗೆ ಹತ್ತಿರವಾಗಿದೆಯೆಂದೇ ಅರ್ಥ.
ಓಹ್ ನಿಮ್ಮ ತಾರಾನಾಥ ಸರ್ ಹೇಳಿದ ವಿಷಯ ಆರಂಭಿಸುವುದರೊಳಗೆ ಸಂಚಿಕೆ ಮುಗಿದು ಹೋಯಿತು ಇದರ ಮುಂದುವರಿದ ಭಾಗ ನಾಳೆ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************