-->
ಅಳಿದ ಮೇಲೂ ಉಳಿವ ಕಣ್ಣು

ಅಳಿದ ಮೇಲೂ ಉಳಿವ ಕಣ್ಣು

ಲೇಖನ : ಅಳಿದ ಮೇಲೂ ಉಳಿವ ಕಣ್ಣು
ಬರಹ : ಕವಿತಾ ಶ್ರೀನಿವಾಸ ದೈಪಲ 
'ಚೈತನ್ಯ ' ನೆಲ್ಯಡ್ಕ, ಅಂತರ, 
ನರಿಕೊಂಬು ಅಂಚೆ ಮತ್ತು ಗ್ರಾಮ  
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : +91 94496 64269
     
ಎಂತಹ ಜೀವನೋತ್ಸಾಹ, ಎಷ್ಟೊಂದು ಖುಷಿ ಅವರ ಮುಖದಲ್ಲಿ ಅವರು ಅಷ್ಟೊಂದು ಉಲ್ಲಾಸದಿಂದಿರುವಾಗ ಅವರು ಅಂಧ ದಂಪತಿಗಳು ಎಂದು ತಿಳಿಯಲೇ ಇಲ್ಲ. ಬಸ್ಸಿನಲ್ಲಿ ಮಂಗಳೂರಿಗೆ ಪಯಣಿಸುತ್ತಿದ್ದಾಗ ಪದ್ಮ ಮತ್ತು ಶಂಕರ ಎಂಬ ವಿಶೇಷ ದಂಪತಿಗಳ ಮಧ್ಯೆ ಕುಳಿತುಕೊಳ್ಳುವ ಅವಕಾಶವಾಗಿ ಅವರೊಡನೆ ಸಂಭಾಷಣೆಯಲ್ಲಿ ತೊಡಗಿದೆ. ಎಲ್ಲಿಂದ ಬಂದಿರಿ...? ಚಿತ್ರದುರ್ಗದಿಂದ ಅಕ್ಕ.. ಅವರಲ್ಲಿದ್ದ ಸಂಗೀತ ಪರಿಕರಗಳನ್ನು ನೋಡಿ ನೀವು ಹಾಡುಗಾರರೇ..? ಇದನ್ನೆಲ್ಲ ಹೇಗೆ ಕಲಿತಿರಿ...? ಎನ್ನುವ ನನ್ನ ಪ್ರಶ್ನೆಗೆ ನಮ್ಮ ಶಾಲಾದಿನಗಳಲ್ಲಿ ಆಪ್ ನ ಮೂಲಕ ಕಲಿಸಿಕೊಟ್ಟಿದ್ದಾರೆ. ಈಗ ನಾವು ತಂಡ ಕಟ್ಟಿಕೊಂಡು ಊರಿಂದ ಊರಿಗೆ ಹೋಗಿ ಕಾರ್ಯಕ್ರಮ ನೀಡುತ್ತಿದ್ದೇವೆ. ಛೇ... ಅಂಧರಾಗಿದ್ದಕೊಂಡು ಬೆಳಕನ್ನು ಕಾಣುವ ಸಂತೋಷದಿಂದ ವಂಚಿತರಾಗಿದ್ದರೂ, ಎಷ್ಟು ಖುಷಿಯಿಂದ ಬದುಕುತ್ತಿದ್ದಾರೆ. ಒಂದು ವೇಳೆ ಇವರಿಗೂ ಬೆಳಕನ್ನು ಕಾಣುವ ಅವಕಾಶವಾದರೆ...

ಹೌದು 2023ರ ಅಂಕಿ ಅಂಶ ಪ್ರಕಾರ ಭಾರತದಲ್ಲಿ 1.20 ಕೋಟಿಗಿಂತಲೂ ಹೆಚ್ಚು ಜನ ಅಂಧತ್ವದಿಂದ ಬಳಲುತ್ತಿದ್ದಾರೆ. ಅವರಲ್ಲಿ ಒಂದೂವರೆ ಲಕ್ಷ ಜನರು ಕಾರ್ನಿಯಾ ಅಂಧತ್ವದಿಂದ ಬಳಲುತ್ತಿದ್ದಾರೆ. ಇವರಿಗೆ ಕಾರ್ನಿಯಾ ಬದಲಾವಣೆ ಮಾಡಿದರೆ ಸಾಕು ದೃಷ್ಟಿ ಭಾಗ್ಯ ಸಿಗುತ್ತದೆ. ಆದರೆ ಈ ಅರಿವು ಸಂತ್ರಸ್ತರಲ್ಲೂ ಇಲ್ಲ ಇತರರಲ್ಲೂ ಇಲ್ಲ. ನಮ್ಮ ದೇಶದಲ್ಲಿರುವ ವಾರ್ಷಿಕ ನೇತ್ರದಾನದ ಸಂಖ್ಯೆ ಕೇವಲ 40,000. ನೇತ್ರ ಬ್ಯಾಂಕುಗಳಲ್ಲಿ ಹೆಸರು ನೋಂದಾಯಿಸಿ ಕಾರ್ನಿಯಾಗಳಿಗೆ ಕಾಯುತ್ತಿರುವವರ ಸಂಖ್ಯೆಗೂ ಕಾರ್ನಿಯಾ ದಾನಿಗಳ ಸಂಖ್ಯೆಗೂ ಅಜಗಜಾಂತರವಿದೆ. ಬೆಳಕಿಗಾಗಿ ಕೊನೆವರೆಗೂ ಹಂಬಲಿಸಿ ದೃಷ್ಟಿ ಭಾಗ್ಯ ಸಿಗದೆ ಹಾಗೇ ಕಣ್ಣು ಮುಚ್ಚಿದ ನತದೃಷ್ಟರಿಗೆ ಲೆಕ್ಕವಿಲ್ಲ. ಇದಕ್ಕೆಲ್ಲ ಕಾರಣ ನೇತ್ರದಾನ ಬಗೆಗಿನ ಜಾಗೃತಿಯ ಕೊರತೆ.  

ಹಾಗಾದರೆ ನೇತ್ರದಾನ ಅಂದರೇನು..? 
ನಮ್ಮ ಮರಣಾನಂತರ ಮಣ್ಣು ಪಾಲಾಗುವ ನಮ್ಮ ಕಣ್ಣುಗಳನ್ನು ಇನ್ನೊಬ್ಬರ ಬಾಳಿಗೆ ಬೆಳಕಾಗಲೆಂದು ದಾನವಾಗಿ ಕೊಡುತ್ತೇವೆಂದು ವಾಗ್ದಾನ ಮಾಡುವುದು. ಮೃತಪಟ್ಟ ವ್ಯಕ್ತಿಗಳಿಂದ ಮಾತ್ರ ನೇತ್ರದಾನ ಪಡೆಯಲಾಗುತ್ತದೆ. ನೇತ್ರದಾನ ಎಂದೊಡನೆ ಬೇಡರ ಕಣ್ಣಪ್ಪ ಕಣ್ಣುಗಳನ್ನು ಕಿತ್ತು ಇಟ್ಟಂತೆ ವೈದ್ಯರು ಅವುಗಳನ್ನು ದೇಹದಿಂದ ಬೇರ್ಪಡಿಸುವುದಲ್ಲ ಅಥವಾ ವಿರೂಪಗೊಳಿಸುವುದು ಅಲ್ಲ. ಕಣ್ಣಿನಲ್ಲಿರುವ ಕಾರ್ನಿಯಾಗಳನ್ನು ಮಾತ್ರ ಪಡೆಯುವುದು. ಕಣ್ಣಿನ ಕರಿಗುಡ್ಡೆ ಮೇಲಿರುವ ಪಾರದರ್ಶಕವಾದ ಗ್ಲಾಸಿನ ಬಿರಡೆಯಂತಿರುವ ಪುಟ್ಟ ಅಂಗಾಂಶವೇ ಕಾರ್ನಿಯಾ. ಗಾಯ, ಸೋಂಕು ರಾಸಾಯನಿಕಗಳ ಪರಿಣಾಮದಿಂದ ಕೆಲವೊಮ್ಮೆ ಅನುವಂಶೀಯ ಕಾರಣಗಳಿಂದಲೂ ಕಾರ್ನಿಯಾ ಅಪಾರದರ್ಶಕವಾದಾಗ ಕಣ್ಣು ಕಾಣದಾಗುತ್ತದೆ. ಕಾರ್ನಿಯಾ ಒಂದು ಯಾವುದೇ ರಕ್ತನಾಳ ಗಳಿಲ್ಲದ ಅಪರೂಪದ ಪರಾವಲಂಬಿ ಅಂಗಾಂಶ. ಅದು ತನಗೆ ಬೇಕಾದ ಪೋಷಕಾಂಶಗಳನ್ನು ಕಣ್ಣಿನ ಇತರ ಅವಯವಗಳಿಂದ ಪಡೆಯುತ್ತದೆ. ಈ ವಿಶಿಷ್ಟ ಗುಣದಿಂದಾಗಿ ಯಾರ ಕಣ್ಣಿನಿಂದ ತೆಗೆದು ಬೇರೆ ಯಾರ ಕಣ್ಣಿಗೆ ಜೋಡಿಸಿದರು ಅದು ತನ್ನ ಕರ್ತವ್ಯ ಪ್ರಜ್ಞೆಯನ್ನು ಮೆರೆಯುತ್ತದೆ. ಆದ್ದರಿಂದ ಅಂಗಾಂಶ ಕಸಿಗಳಲ್ಲೇ ಕಾರ್ನಿಯಾ ಕಸಿ ಅತ್ಯಧಿಕ ಪ್ರಮಾಣದಲ್ಲಿ ಯಶಸ್ವಿಯಾಗುತ್ತಿದೆ. ಕಾರ್ನಿಯಾದಲ್ಲಿ ಒಟ್ಟು ಐದು ಪದರಗಳಿರುತ್ತವೆ. ನಮಗೆಲ್ಲ ತಿಳಿದಿರುವಂತೆ ಡಾ. ರಾಜ್‌ಕುಮಾರ್, ಪುನೀತ್ ರಾಜಕುಮಾರ್ ತೀರಿಕೊಂಡಾಗ ಅವರ ಕಣ್ಣುಗಳನ್ನು ದಾನವಾಗಿ ಪಡೆದು ಒಟ್ಟು ಆರು ಜನರಿಗೆ ಬೆಳಕನ್ನು ಕಾಣಲು ಸಾಧ್ಯವಾದದ್ದು... ಹೀಗೆ ನಾವು ಮನಸ್ಸು ಮಾಡಿದಲ್ಲಿ ಮತ್ತೊಬ್ಬರ ಜೀವನದಲ್ಲಿ ಬೆಳಕಾಗುವ ಸೌಭಾಗ್ಯ ನಮ್ಮದಾಗುತ್ತದೆ. 

 ನೇತ್ರದಾನ ಯಾರು ಮಾಡಬಹುದು

▪️ಹುಟ್ಟಿದ ಕೂಸಿನಿಂದ ನೂರು ವರ್ಷ ದಾಟಿದ ವೃದ್ಧರವರೆಗೂ ಕಣ್ಣನ್ನು ದಾನ ಮಾಡಬಹುದು.
▪️ಸಕ್ಕರೆ ಕಾಯಿಲೆ ರಕ್ತದೊತ್ತಡ ಕಾಯಿಲೆ ಇರುವವರು ಕೂಡ ಮಾಡಬಹುದು.
▪️ಕನ್ನಡಕ ಬಳಸುವವರು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾದವರು ಮಾಡಬಹುದು.
▪️ತಮ್ಮ ಹತ್ತಿರದ ನೇತ್ರ ಬ್ಯಾಂಕುಗಳಲ್ಲಿ ಕಣ್ಣಿನ ದಾನಕ್ಕೆ ವಾಗ್ದಾನ ಪತ್ರ ತುಂಬಿಕೊಡಬಹುದು.
▪️ನೇತ್ರದಾನ ಪಡೆಯುವುದು ಮಾತ್ರ ವ್ಯಕ್ತಿಯು ಸಾವನ್ನಪ್ಪಿದ ನಂತರ. ವ್ಯಕ್ತಿಯ ಸಂಬಂಧಿಗಳು ಮತ್ತು ಸ್ನೇಹಿತರ ಸಹಕಾರವು ಇಲ್ಲಿ ಮುಖ್ಯ. 
▪️ಒಂದು ವೇಳೆ ವಾಗ್ದಾನ ಪತ್ರ ನೀಡದ ವ್ಯಕ್ತಿಗಳು ನಿಧನರಾದಾಗ ಅವರ ನೇತ್ರಗಳನ್ನು ದಾನ ಮಾಡಲು ಅವರ ಸಂಬಂಧಿಕರು ನಿರ್ಧರಿಸಿದರೆ ಆಗ ದಾನ ಮಾಡಬಹುದು.
▪️ವಾಗ್ದಾನ ಪತ್ರ ಕೊಡಲೇಬೇಕೆನ್ನುವ ಕಡ್ಡಾಯವೇನು ಇರುವುದಿಲ್ಲ.
▪️ವ್ಯಕ್ತಿ ಆಕಸ್ಮಿಕವಾಗಿ ಮರಣ ಹೊಂದಿ ಕುಟುಂಬ ದುಃಖದಲ್ಲಿದ್ದೂ ನೇತ್ರದಾನಕ್ಕೆ ಮನಸು ಮಾಡಿದರೂ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿದರೆ ಅವರೂ ಈ ಬಗ್ಗೆ ಮಾಹಿತಿ ನೀಡುತ್ತಾರೆ.  
▪️ಕರ್ನಾಟಕ ಸರಕಾರದ ಅಂಗಾಂಗ ದಾನ ಮತ್ತು ಕಸಿ ಕಾರ್ಯಕ್ರಮಗಳನ್ನು ನಿರ್ವಹಿಸುವ ಸಂಸ್ಥೆ 'ಜೀವ ಸಾರ್ಥಕತೆ' ಇದರ ವೆಬ್ಸೈಟ್ ಮೂಲಕ ಡೊನರ್ ಕಾರ್ಡ್ ಪಡೆದು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

 ಯಾರು ನೇತ್ರದಾನ ಮಾಡಲಾಗುವುದಿಲ್ಲ..?

▪️ಯಾವುದೇ ರೀತಿ ಸೋಂಕಿನಿಂದ ಸಾವಿಗೀಡಾದ ವ್ಯಕ್ತಿ, ರೇಬಿಸ್ ರೋಗ, ವೈರಸ್ ಕಾಯಿಲೆಗಳಿಂದ, ಕ್ಯಾನ್ಸರ್ ರೋಗಿಗಳಿಂದ, ಏಡ್ಸ್ ಹೆಪಟೈಟ್ಸ್ ರೋಗದಿಂದ ಬಳಲಿ ಸಾವನಪ್ಪಿದವರು ನೇತ್ರದಾನ ಮಾಡಲಾಗುವುದಿಲ್ಲ. ಒಂದು ವೇಳೆ ಕ್ಯಾನ್ಸರ್ ರೋಗಿಗಳಿಂದ ದಾನವಾಗಿ ಪಡೆದರು ಆ ಕಾರ್ನಿಯವನ್ನು ಶೈಕ್ಷಣಿಕ ಸಂಶೋಧನೆಗಾಗಿ ಬಳಸುತ್ತಾರೆಯೇ ವಿನಃ ಮರುಜೋಡಣೆಗೆ ಬಳಸುವುದಿಲ್ಲ. 

ನೇತ್ರದಾನದ ಪ್ರಕ್ರಿಯೆ ಹೇಗೆ ನಡೆಯುತ್ತದೆ..?

ವ್ಯಕ್ತಿಯು ಮರಣ ಹೊಂದಿದ ಆರು ಗಂಟೆಗಳೊಳಗಾಗಿ ವ್ಯಕ್ತಿಯ ಸಂಬಂಧಿಗಳು ಅಥವಾ ಸ್ನೇಹಿತರು ನೇತ್ರ ತಜ್ಞರಿಗೆ ಕರೆ ಮಾಡಿ ತಿಳಿಸಿದರೆ ಮೃತದೇಹ ಇರುವಲ್ಲಿಗೆ ಬಂದು ಅವರ ಒಪ್ಪಿಗೆ ಪಡೆದು ಕೇವಲ 10 ರಿಂದ 15 ನಿಮಿಷಗಳಲ್ಲಿ ಕಣ್ಣುಗಳಿಂದ ಕಾರ್ನಿಯಾವನ್ನು ತೆಗೆದು ಶೀತಲೀಕರಣ ವ್ಯವಸ್ಥೆಯ ಡಬ್ಬಿಯಲ್ಲಿ ಸಂಗ್ರಹಿಸಿ ಜೊತೆಗೆ ಸ್ವಲ್ಪ ರಕ್ತದ ಮಾದರಿಯೊಂದಿಗೆ ನೇತ್ರ ಬ್ಯಾಂಕಿಗೆ ಒಯ್ಯಲಾಗುತ್ತದೆ. 72 ಗಂಟೆಗಳ ಒಳಗೆ ಅವುಗಳನ್ನು ಬೇರೊಬ್ಬರಿಗೆ ಕಸಿ ಮಾಡಲಾಗುತ್ತದೆ. ದಾನವಾಗಿ ಸಿಕ್ಕ ಕಾರ್ನಿಯಾವನ್ನು ನೇತ್ರ ಬ್ಯಾಂಕಿನಲ್ಲಿ ಕಾಯ್ದಿರಿಸಿದವರ ಪಟ್ಟಿಯಲ್ಲಿನ ಸರದಿಯಂತೆ ಜೋಡಣೆ ಮಾಡಲಾಗುತ್ತದೆ. ಯಾವ ಕಾರಣಕ್ಕೂ ಈ ಸರದಿ ತಪ್ಪುವಂತಿಲ್ಲ, ಮತ್ತು ಯಾರ ಕಾರ್ನಿಯಾವನ್ನು ಯಾರಿಗೆ ಜೋಡಿಸಲಾಗಿದೆ ಎಂಬ ವಿವರಗಳನ್ನು ಎಲ್ಲಿಯೂ ಬಹಿರಂಗ ಮಾಡುವುದಿಲ್ಲ. ಕಾರ್ನಿಯಾಗಳನ್ನು ಯಾರು ದುಡ್ಡಿಗೆ ಮಾರುವಂತಿಲ್ಲ. ಅವುಗಳ ಕಸಿಗೆ ತಗಲುವ ಶಸ್ತ್ರಚಿಕಿತ್ಸಾವೆಚ್ಚವನ್ನು ಮಾತ್ರ ಆಸ್ಪತ್ರೆಗಳಲ್ಲಿ ಪಡೆಯಲಾಗುತ್ತದೆ. ಸ್ವಾರ್ಥ ರಹಿತದಾನ ಹಾಗೂ ವೈದ್ಯಕೀಯ ತಂತ್ರಜ್ಞಾನದ ಅದ್ಭುತ ಚಮತ್ಕಾರದ ಪರಿಣಾಮವೇ ಈ ದೃಷ್ಟಿ ಭಾಗ್ಯ. 

ಇತಿಹಾಸದತ್ತ ಇಣುಕು ನೋಟ

ಜಗತ್ತಿನ ಮೊಟ್ಟಮೊದಲ ಕಾರ್ನಿಯಾ ಕಸಿ ಚಿಕಿತ್ಸೆ 1905 ರಂದು ಸುಟ್ಟ ಗಾಯಗಳಿಂದ ಕಣ್ಣು ಕಳೆದುಕೊಂಡಿದ್ದ ಝೆಕ್ ಗಣರಾಜ್ಯದ ಎಡ್ವರ್ಡ್ ಜಿರ್ಮ್ ಎಂಬ ವೈದ್ಯರ ಮೂಲಕ ನಡೆಸಲಾಯಿತು. 1945ರಲ್ಲಿ ಚೆನ್ನೈನಲ್ಲಿ ಭಾರತದ ಮೊಟ್ಟ ಮೊದಲ ನೇತ್ರ ಬ್ಯಾಂಕ್ ಪ್ರಾರಂಭವಾಯಿತು. ಕರ್ನಾಟಕದಲ್ಲಿ ನೇತ್ರದಾನ ಮಾಡಿದ ಮೊದಲ ವ್ಯಕ್ತಿ ಮಾವಜಿ ಭಾಯ್ ಠಕ್ಕರ್. 1945ರಲ್ಲಿ ಕರ್ನಾಟಕದ ಹೆಸರಾಂತ ನೇತ್ರ ತಜ್ಞ ಎಂ. ಎಂ. ಜೋಶಿ ಮಾವಾಜಿ ಭಾಯ್ ಠಕ್ಕರ್ ಮರಣಾನಂತರ ಅವರ ಕಾರ್ನಿಯಾವನ್ನು ಸಂಗ್ರಹಿಸಿಕೊಂಡು ಇಬ್ಬರು ಅಂಧರಿಗೆ ದೃಷ್ಟಿ ಭಾಗ್ಯ ನೀಡಿದರು. 

ನೇತ್ರದಾನದ ಬಗ್ಗೆ ಇರುವ ತಪ್ಪು ಕಲ್ಪನೆಗಳು ನೇತ್ರದಾನ ಮಾಡಿದರೆ ಮುಖ ವಿಕಾರವಾಗುತ್ತದೆ. ನೇತ್ರದಾನದಿಂದ ಅಂತ್ಯಕ್ರಿಯೆ ವಿಳಂಬವಾಗುತ್ತದೆ. ನೇತ್ರದಾನ ಮಾಡಿದರೆ ಮುಂದಿನ ಜನ್ಮದಲ್ಲಿ ಕುರುಡರಾಗಿ ಜನಿಸಬೇಕಾಗುತ್ತದೆ ಎಂಬುದು ಹುಸಿನಂಬಿಕೆ. ನೇತ್ರದಾನಕ್ಕೆ ಯಾವ ಧರ್ಮವು ಪ್ರತಿಬಂಧಿಸುವುದಿಲ್ಲ. 

ನಮ್ಮ ಮರಣಾ ನಂತರ ನಮ್ಮ ಕಣ್ಣುಗಳು ಪದ್ಮ ಮತ್ತು ಶಂಕರರಂತಹ ಅಂಧರ ಬಾಳಿನಲ್ಲಿ ಬೆಳಕಾಗುವುದಾದರೆ ಕಣ್ಣುಗಳನ್ನು ಸುಡುವುದರ ಬದಲು ದಾನ ಮಾಡಿ ಅವರು ಜಗತ್ತಿನ ಬೆಳಕನ್ನು ನೋಡಲು ಸಹಾಯ ಮಾಡುವುದು. ಬದುಕಿನ ಯಾತ್ರೆಯನ್ನು ಮುಗಿಸಿದ ಮೇಲೂ ನಮ್ಮ ಕಣ್ಣುಗಳು ಜಗತ್ತನ್ನು ನೋಡಬಲ್ಲವು ಎಂಬ ಕಲ್ಪನೆಯೇ ಅದ್ಭುತ. ಅಂತಹ ಕಣ್ಣುಗಳು ಬೇರೆಯವರ ಬಾಳನ್ನು ಬೆಳಗಲಿವೆ ಎಂದಾದರೆ ಸಾವಿನಲ್ಲಾದರೂ ಒಂದು ಒಳ್ಳೆಯ ಕೆಲಸ ಮಾಡಲು ನಾವು ಮನಸ್ಸು ಮಾಡಬಹುದಲ್ಲವೇ...?

ನೇತ್ರದಾನ ಮಾಡಬೇಕೆಂಬ ಮಹಾದಾಶೆಯನ್ನು ಹೊಂದಿದ್ದ ನನ್ನ ಮಗ ಶಿಶಿರನ ಕಣ್ಣುಗಳನ್ನು ಅವನ ಕಾಯಿಲೆ ಕಾರಣದಿಂದ ದಾನ ಮಾಡಲು ಸಾಧ್ಯವಾಗದಿದ್ದಾಗ ನಮ್ಮ ಕುಟುಂಬದ ಒಟ್ಟು 25 ಸದಸ್ಯರು ನಮ್ಮ ಮರಣಾನಂತರ ಕಣ್ಣುಗಳನ್ನು ದಾನ ಮಾಡುತ್ತೇವೆ ಎಂದು ಮಂಗಳೂರಿನ ಪ್ರಸಾದ್ ನೇತ್ರಾಲಯದಲ್ಲಿ ವಾಗ್ದಾನ ಮಾಡಿದ್ದೇವೆ.
......................... ಕವಿತಾ ಶ್ರೀನಿವಾಸ ದೈಪಲ 
'ಚೈತನ್ಯ ' ನೆಲ್ಯಡ್ಕ, ಅಂತರ, 
ನರಿಕೊಂಬು ಅಂಚೆ ಮತ್ತು ಗ್ರಾಮ  
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : +91 94496 64269
****************************************


Ads on article

Advertise in articles 1

advertising articles 2

Advertise under the article