ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 95
Tuesday, September 2, 2025
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 95
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ನಾನು ಸಾಮಾನ್ಯವಾಗಿ ನ್ಯೂಸ್ ಚಾನೆಲ್ ಗಳನ್ನು ನೋಡುವುದಿಲ್ಲ. ಕಾರಣ ಒಂದೇ, ಅವು ವಸ್ತುನಿಷ್ಠವಾಗಿರುವುದಿಲ್ಲ ಎಂಬುದು. ಇತ್ತೀಚೆಗೆ ಚಾನೆಲ್ ಬದಲಾಯಿಸುವಾಗ ಅಲ್ಲಿ ಬಿತ್ತರವಾಗುತ್ತಿರುವ ಮಳೆಯ ಅವಾಂತರಗಳನ್ನು ನೋಡುವಾಗ ಗಾಬರಿಯಾಗುತ್ತದೆ. ಉತ್ತರಾಖಂಡದ ನೆರೆಯಲ್ಲಿ ಸತ್ತ ಮೀನಿನ ತೆಪ್ಪಗಳಂತೆ ತೇಲಿ ಬರುತ್ತಿದ್ದ ಮರದ ದಿಮ್ಮಿಗಳನ್ನು ನೋಡಿದಾಗ ಅಯ್ಯೋ ಎನ್ನಿಸುತ್ತದೆ. ಭೂ ಕುಸಿತ, ರಾಡಿ ನೀರು, ಕಲ್ಲು ಮಣ್ಣುಗಳು ಹರಿದು ಬಂದು ನದಿಯಲ್ಲಿ, ಅಣೆಕಟ್ಟುಗಳಲ್ಲಿ ಹೂಳು ತುಂಬುವುದು ಎಲ್ಲ ಕಣ್ಮುಂದೆ ನಿಲ್ಲುತ್ತದೆ. ಅದರ ಜೊತೆಗೆ ಟಿಂಬರ್ ಮಾಫಿಯಾಗಳ ಲಾಬಿ ಎಂಬ ಟಿಪ್ಪಣಿ ಬೇರೆ ನೋಡಿದಾಗ ಇತಿಹಾಸ ಮರುಕಳಿಸುವ ಭಯವಾಗುತ್ತದೆ.
ಅಲ್ಲ ನಮ್ಮ ಜನ ಇತಿಹಾಸದಿಂದಲೂ ಪಾಠ ಕಲಿಯುತ್ತಿಲ್ಲವಲ್ಲ ಎಂದು ಪಶ್ಚಾತ್ತಾಪವಾಗುತ್ತದೆ. ಇದನ್ನು ನೋಡುವಾಗ ನನ್ನ ಪ್ರಾಣಿಶಾಸ್ತ್ರದ ಗುರುಗಳಾದ ಪ್ರೊಫೆಸರ್ ಡಾ. ಎನ್ ಎ ಮಧ್ಯಸ್ಥರು 40 ವರ್ಷಗಳ ಹಿಂದೆ ಹೇಳಿದ ಕಥೆ ನೆನಪಾಯಿತು. ಸಾರಿ ನೆನಪಾಯಿತು ಅಲ್ಲ ಅದು ನನ್ನ ಮನಸ್ಸಿನಲ್ಲಿ ಯಾವಾಗಲೂ ಅನುರಣಿಸುತ್ತಲೇ ಇರುತ್ತದೆ. ಆ ಕಥೆ ನಿಮ್ಮ ಓದಿಗಾಗಿ. ಆದ್ದರಿಂದ ಈ ಬಾರಿ ವಿಷಯಾಂತರ.
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಕಾಲ. ತಮ್ಮ ಸರಕು, ಸೈನ್ಯ ಸಾಗಾಣಿಕೆಗಾಗಿ ಅವರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ರೈಲ್ವೇ ಲೈನ್ ಹಾಕಿಸಲು ಯೋಚಿಸಿದರು. ಅದಕ್ಕಾಗಿ 1885 ರಲ್ಲಿ ಸಿಂಧೆ ರೈಲ್ವೆ ಕಂಪನಿಯನ್ನು ಆರಂಭಿಸಲಾಯಿತು. ಅದು 1858 ರಲ್ಲಿ ಕರಾಚಿ ಮತ್ತು ಕೋಟ್ರಿಗಳ ನಡುವಿನ 127 ಕಿಲೋಮೀಟರ್ ಟ್ರ್ಯಾಕ್ ಅನ್ನು ಕೈಗೆತ್ತಿಕೊಂಡಿತು. ಅದನ್ನು 1861 ರಲ್ಲಿ ಪೂರ್ತಿಗೊಳಿಸಿತು. ರೈಲ್ವೆ ಟ್ರ್ಯಾಕ್ ಹಾಕಲು ಸ್ಲೀಪರ್ ಗಳ ಕೆಳಗೆ ಜಲ್ಲಿಯ ಕುಷನ್ ಅನ್ನು ಹಾಕಬೇಕು. ದುರಂತ ಎಂದರೆ ಸಿಂಧ್ ಪ್ರಾಂತ್ಯದಲ್ಲಿ ಎಲ್ಲಿಯೂ ಈ ಟ್ರ್ಯಾಕ್ ಗೆ ಬೇಕಾದ ಜಲ್ಲಿಯನ್ನು ಒದಗಿಸಬಹುದಾದ ಬಂಡೆಗಳು ಇಲ್ಲದೇ ಇರುವುದು ನಿರ್ಮಾಣವನ್ನು ಅಸಾಧ್ಯವೆನ್ನುವಂತೆ ಮಾಡಿತ್ತು. ಆದರೆ ಅಲ್ಲಿನ ಕೆಲಸಗಾರರು ದಿಬ್ಬಗಳನ್ನು ಗುರುತಿಸಿದರು. ಈ ದಿಬ್ಬಗಳನ್ನು ಅಗೆಯುವಾಗ ಕಠಿಣವಾದ ಇಟ್ಟಿಗೆಯಂತಹ ರಚನೆಗಳಿದ್ದವು. ಅವುಗಳನ್ನು ಒಡೆದಾಗ ಕಠಿಣವಾದ ಜಲ್ಲಿ ದೊರೆಯಿತು. ಇವುಗಳನ್ನೇ ರೈಲ್ವೆ ಟ್ರ್ಯಾಕ್ ಗಳಿಗೆ ಬಳಸುವುದೆಂದು ತೀರ್ಮಾನಿಸಲಾಯಿತು. ಸರಿ ದಿಬ್ಬಗಳ ಅಗೆತ ಆರಂಭವಾಯಿತು. ಭೂಮಿಯ ಆಳಕ್ಕೆ ಇಳಿದ ಹಾಗೆ ಇಟ್ಟಗೆಗಳು ದೊರೆಯುತ್ತಲೇ ಹೋದುವು. ಎಷ್ಟೆಂದರೆ ನೆಲದ ಮಟ್ಟದ ವರೆಗೆ ಅಲ್ಲ ಸಿಂಧೂ ನದಿ ಪಾತಳಿಯಿಂದ 52 ಅಡಿ ಆಳದ ವರೆಗೂ ದೊರೆತವು. ಹೀಗೆ ದಿಬ್ಬಗಳ ಅರ್ಧಂಬರ್ಧ ಅಗೆತ ಮುಂದುವರೆಯಿತು. ಇವುಗಳನ್ನು ಅಗೆದು ಆ ನಿವೇಶನವನ್ನು ಹಾಗೇ ಬಿಟ್ಟು ತೆರಳಿದರು.
1921 ಮತ್ತು 22 ರಲ್ಲಿ ಭಾರತೀಯ ಪ್ರಾಗೈತಿಹಾಸಿಕ ಅಧಿಕಾರಿಗಳಾದ ದಯಾ ರಾಮ್ ಸಾಹಿ ಹರಪ್ಪ ಮತ್ತು ಆರ್ ಡಿ ಬ್ಯಾನರ್ಜಿಯವರು ಮೊಹೆಂಜೊದಾರೊ ಪ್ರದೇಶಗಳಲ್ಲಿ ಸುತ್ತ ಈ ಅಗೆದು ಬಿಟ್ಟ ಜಾಗದಲ್ಲಿ ಅಲೆದಾಡುತ್ತಿದ್ದರು. ಅವರಿಗೆ ತಾವು ನಗರ ಸಮುಚ್ಛಯಗಳಲ್ಲಿ ಅಲೆದಾಡುತ್ತಿರುವಂತೆ ಅನ್ನಿಸಿತು. ವ್ಯವಸ್ಥಿತವಾಗಿ ಕಟ್ಟಿದ ಇಟ್ಟಿಗೆಯ ಮನೆಗಳು, ಇಟ್ಟಿಗೆ ಹಾಸಿದ ರಸ್ತೆಗಳು, ಬೀದಿಗಳು, ಸ್ನಾನಗೃಹಗಳು, ಒಳ ಚರಂಡಿ ವ್ಯವಸ್ಥೆಗಳು ಹೀಗೆ ಒಂದು ನಗರ ನಾಗರೀಕತೆ ಅವರ ಎದುರು ತೆರದುಕೊಂಡಿತು. ಹೀಗೆ ಹರಪ್ಪ ಮೊಹೆಂಜೊದಾರೋ ಎಂಬ ಅಳಿದು ಹೋದ ನದಿ ಕಣಿವೆಯ ನಗರ ನಾಗರಿಕತೆಯೊಂದು ಜನರಿಗೆ ಪರಿಚಯವಾಯಿತು. ಇಂತಹ ಇಟ್ಟಿಗೆಯಿಂದ ನಿರ್ಮಾಣವಾದ ಒಂದು ಮುಂದುವರಿದ ನಾಗರಿಕತೆ ಹೇಗೆ ಅಳಿದು ಕಣ್ಮರೆಯಾಯಿತು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ದೊರೆಯಲಿಲ್ಲ. ಭೂಕಂಪವಾಗಿಲ್ಲ, ಉಲ್ಕಾಪಾತವಾಗಿಲ್ಲ, ಸುನಾಮಿ ಬಂದಿಲ್ಲ, ಸಾಂಕ್ರಾಮಿಕ ರೋಗಗಳ ದಾಖಲೆಯಿಲ್ಲ. ಮತ್ತೇನಾಯಿತು? ಇಂದಿಗೂ ಉತ್ತರವಿಲ್ಲ.
ಆದರೆ ನನ್ನ ಗುರುಗಳು ಕಥೆ ಮುಂದುವರಿಸುತ್ತಾರೆ. ಇಲ್ಲಿ ಸಿಗುವ ಕ್ಲೂ ಎಂದರೆ ನದಿಯ ಪಾತಳಿಯಿಂದ 52 ಅಡಿ ಆಳದಲ್ಲಿಯೂ ಊರು ದೊರೆತಿರುವುದು, ಮತ್ತು ನಗರಗಳ ಮೇಲೆ ನಗರ ಕಟ್ಟಿರುವುದು. ಅಂದರೆ ನದಿಯಲ್ಲಿ ನೆರೆ ಬಂದಿರಬೇಕು. ಆ ನೆರೆ ತನ್ನೊಂದಿಗೆ ಹೂಳು ತಂದಿರಬೇಕು. ಈ ಹೂಳು ನಗರಗಳನ್ನು ಮುಚ್ಚಿರಬೇಕು. ಜನ ಬದುಕಲು ಈ ಹೂಳಿನ ಮೇಲೆ ಮತ್ತೆ ನಗರ ಕಟ್ಟಿರಬೇಕು. ಹೀಗೆ ನಗರದ ಮೇಲೆ ನಗರ ಕಟ್ಟಿ ನದಿಗಿಂತ ಎತ್ತರದಲ್ಲಿ ನದಿಯ ದಡದಲ್ಲಿ ದಿಬ್ಬಗಳ ನಿರ್ಮಾಣವಾಗಿ ಸತ್ತವರ ದಿಬ್ಬಗಳು (buried city) ಎಂದು ಕರೆಯಲ್ಪಟ್ಟವು. ಹಾಗಾದರೆ ಈ ರೀತಿಯ ನೆರೆಗೆ ಕಾರಣವೇನು? ಆ ಪ್ರಮಾಣದ ಭೂ ಸವಕಳಿಗೆ ಕಾರಣವಾದರೂ ಏನು? ಉತ್ತರ ದೊರೆಯದ ಪ್ರಶ್ನೆಗಳು.
ನಮ್ಮ ಸರ್ ಮುಂದುವರಿಸುತ್ತಾರೆ. ನೋಡಿ ಈ ನಾಗರಿಕತೆಯನ್ನು ನಾಶ ಮಾಡಿದ್ದು ಇದೇ ಸುಟ್ಟ ಇಟ್ಟಿಗೆಗಳು. ಹರಪ್ಪ ಮತ್ತು ಮೊಹೆಂಜೊದಾರೊ ನಾಗರಿಕತೆಯಲ್ಲಿ ದೊರೆತ ನಾಣ್ಯಗಳಲ್ಲಿ, ಮಡಿಕೆಗಳಲ್ಲಿ ಹುಲಿ ಇದೆ ಅದು ದಟ್ಟವಾದ ಕಾಡನ್ನು ಸೂಚಿಸುತ್ತವೆ, ನೀರಾನೆಗಳಿವೆ ಅವು ಜೌಗು ಪ್ರದೇಶವನ್ನು ಸೂಚಿಸುತ್ತವೆ. ಅಂದರೆ ಆರಂಭದಲ್ಲಿ ದಟ್ಟ ಕಾಡುಗಳನ್ನು ಹೊಂದಿದ್ದ ಪ್ರದೇಶ ಜೌಗಿನಿಂದ ತುಂಬಿ ಹೋಯಿತು. ಇದು ಹೇಗೆ?
ಸರ್ ಮುಂದುವರಿಸುತ್ತಾರೆ ನೋಡಿ ಈ ಕಲ್ಲಿನಂತಹ ಇಟ್ಟಿಗೆಗಳು ಸುಟ್ಟ ಇಟ್ಟಿಗೆಗಳು. ಅಪಾರ ಸಂಖ್ಯೆಯಲ್ಲಿ ಸುಟ್ಟ ಇಟ್ಟಿಗೆಗಳನ್ನು ತಯಾರಿಸಲು ವ್ಯಾಪಕವಾಗಿ ಅರಣ್ಯವನ್ನು ಕಡಿಯಲಾಯಿತು. ಇದು ಮೇಲ್ಮಣ್ಣನ್ನು ವಾತಾವರಣಕ್ಕೆ ತೆರೆಯಿತು. ಜೋರಾಗಿ ಸುರಿದ ನೆರೆ ಮೇಲ್ಮಣ್ಣನ್ನು ಕೊಚ್ಚಿಕೊಂಡು ತನ್ನೊಂದಿಗೆ ಒಯ್ಯತೊಡಗಿತು. ಇದನ್ನು ಜನ ನೆರೆ ಎಂದು ಕರೆದರು. ಆ ನದಿಗಳೇನು ದಕ್ಷಿಣ ಭಾರತದ ನದಿಗಳಲ್ಲ. ಹುಟ್ಟುವಾಗ ಎತ್ತರದ ಹಿಮಾಲಯಗಳಲ್ಲಿ ಹುಟ್ಟುತ್ತವೆ. ಆರಂಭದಲ್ಲಿ ರಭಸವಿರುತ್ತದೆ ಮಣ್ಣನ್ನು ಕೊಚ್ಚಿಕೊಂಡು ಬರುತ್ತವೆ. ಮತ್ತೆ ಹರಿಯುವುದು ಪ್ರಸ್ಥಭೂಮಿಯಲ್ಲಿ. ರಭಸವಿರುವುದಿಲ್ಲ. ಭಾರವಾದ ಮಣ್ಣಿನ ಕಣಗಳನ್ನು ಹಿಂದೆ ಬಿಟ್ಟು ಮುಂದಕ್ಕೆ ಹರಿಯುತ್ತವೆ. ನದಿಯ ಪಾತಳಿಯಲ್ಲಿ ಹೂಳು ತುಂಬುತ್ತದೆ. ತುಂಗಭದ್ರಾ ಅಣೆಕಟ್ಟೆಯಲ್ಲಿ ಹೂಳು ತುಂಬಿದ ಹಾಗೆ. ಆಗ ನೀರು ಎತ್ತರದಲ್ಲಿ ಹರಿಯಲು ದಡವನ್ನು ಮುಳುಗಿಸುತ್ತದೆ. ಆಗ ಜನ ಹೊಸ ಪಟ್ಟಣವನ್ನು ಕಟ್ಟಲು ಮತ್ತೆ ಇಟ್ಟಿಗೆ ಸುಟ್ಟರು. ಇಟ್ಟಿಗೆ ಸುಡಲು ಕಾಡು ಕಡಿದರು. ಕಾಡು ಕಡಿದು ಮಣ್ಣನ್ನು ನಗ್ನಗೊಳಿಸಿದರು. ಮಳೆ ಬಂತು. ಮತ್ತೆ ನೆರೆ. ಮತ್ತದೇ ಹೂಳು. ನದಿಯ ಮಟ್ಟದ ಏರಿಕೆ. ಮೇಲೊಂದು ನಗರ. ಅದಕ್ಕಾಗಿ ಮತ್ತೆ ಇಟ್ಟಿಗೆ. ಮತ್ತೆ ಇಟ್ಟಿಗೆ ಗೂಡಿಗೆ ಸೌದೆ. ಕಾಡು ಕಾಣೆಯಾಗತೊಡಗಿದ ಹಾಗೆ ಜೌಗು ಪ್ರದೇಶಗಳು ಕಾಣಿಸಿಕೊಂಡವು. ಹುಲಿಗಳಿದ್ದ ಲಾಂಛನ ನೀರಾನೆಗಳಾಗಿ ಬದಲಾಯಿತು.
ಒಂದು ನೆನಪಿಡಿ ಮಕ್ಕಳೇ ಹರಪ್ಪ ಮೊಹೆಂಜೊದಾರೋ ಅಳಿದ ನಗರವಾದದ್ದು ಯಾವುದೇ ಪ್ರಕೃತಿ ವಿಕೋಪದಿಂದ ಅಲ್ಲ ಖಾಯಿಲೆಯಿಂದ ಅಲ್ಲ, ಬದಲಾಗಿ ಸುಟ್ಟ ಇಟ್ಟಿಗೆಗಳಿಂದ, ಕಡಿದ ಕಾಡಿನಿಂದ. ಉತ್ತರಾಖಂಡದಲ್ಲಿ ಆಗುತ್ತಿರುವುದು ಅದೇ. ತೇಲಿ ಬರುತ್ತಿರುವ ಮರದ ದಿಮ್ಮಿಗಳನ್ನು ನೋಡುವಾಗ ನನಗೆ ಕಡಿದ ಮರಗಳ ಅಗಾಧತೆ ಅರಿವಾಗುತ್ತದೆ. ನಮ್ಮ ಸರ್ ಹೇಳುತ್ತಿದ್ದ ವ್ಯಾಪಕ ಕಾಡಿನ ನಾಶ ಕಣ್ಣಿಗೆ ಕಟ್ಟುತ್ತದೆ. ಹಾಗಾದರೆ ಇತಿಹಾಸ ಮರುಕಳಿಸುತ್ತದೆಯೇ? ನಗರ ನಾಗರೀಕತೆ ನಾಶವಾದ ಹಾಗೆ ಇತಿಹಾಸದ ಪುಟ ಸೇರಿದಂತೆ ನಾವೂ ಇತಿಹಾಸದ ಪುಟ ಸೇರಲಿದ್ದೇವೆಯೇ? ಸರ್ ಹೇಳಿದ ಇತಿಹಾಸ ನಮ್ಮ ಕಣ್ಣೆದುರೇ ವರ್ತಮಾನ ಆಗಲಿದೆಯೇ? ಭಯವಾಗುತ್ತದೆ.
ಮಕ್ಕಳೇ ಇಂತಹ ವ್ಯಾಪಕ ಅರಣ್ಯ ನಾಶದ ವಿರುದ್ಧ ಜನಾಭಿಪ್ರಾಯ ಮೂಡಿಸುತ್ತೀರಿ ತಾನೆ? ಇಂದೇ ಗಟ್ಟಿಯಾಗಿ ಹೇಳಿ ನಾವು ಇತಿಹಾಸದಿಂದಲಾದರೂ ಪಾಠ ಕಲಿಯುತ್ತೇವೆ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************