-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 98

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 98

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 98
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
          
ಪ್ರೀತಿಯ ಮಕ್ಕಳೇ.. ಮೊನ್ನೆ ಕೋಶಭಿತ್ತಿಯ ಬಗ್ಗೆ ಮಾತನಾಡುವಾಗ ಅದೊಂದು ಸತ್ತ ಗೋಡೆ ಎಂದಿದ್ದೆವು. ಹಾಗಾದರೆ ಕೋಶಪೊರೆಗೆ ಜೀವ ಇದೆಯೇ? ಜೀವ ಇದ್ದರೆ ಬುದ್ದಿವಂತಿಕೆ ಇದೆಯೇ? ಮೆದುಳಿಲ್ಲದ ಈ ಒಂದು ಪೊರೆಗೆ ಬುದ್ದಿಯಾದರೂ ಎಲ್ಲಿಂದ? ಇತ್ಯಾದಿ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬೇಕು ಅಲ್ಲವೇ? ಆದರೆ ಈ ಪೊರೆ ಹಾಗೆ ವರ್ತಿಸುವುದಂತೂ ನಿಜ.

ಸಣ್ಣ ಸಣ್ಣ ಅಣುಗಳು ಈ ಪೊರೆಯ ಮೂಲಕ ಹಾದು ಹೋಗುತ್ತವೆ. ಅಂದರೆ ಸಣ್ಣ ಅಣುಗಳಿಗೆ ಇದು ಪಾರದರ್ಶಕ. ಸಣ್ಣ ಸಣ್ಣ ಅಣುಗಳು ಅಂದರೆ ಆಮ್ಲಜನಕ, ಇಂಗಾಲದ ಡೈಆಕ್ಸೈಡ್, ಅಮೋನಿಯಾ ಇಂತವು. ಇವು ಹೆಚ್ಚಿನ ಸಾಂದ್ರತೆಯ ಭಾಗದಿಂದ ಕಡಿಮೆ ಸಾಂದ್ರತೆಯ ಭಾಗಕ್ಕೆ ಚಲಿಸುತ್ತವೆ. ಇಲ್ಲಿ ಆಯ್ಕೆ ಪೊರೆಯದ್ದಲ್ಲ ಬದಲಾಗಿ ಅಣುವಿನದ್ದು. ಆದ್ದರಿಂದ ಈ ವಿಷಯದಲ್ಲಿ ಕೋಶಪೊರೆ ಒಂದು ನಿರ್ಜೀವ ಪೊರೆ. ಆಮ್ಲಜನಕ ನಿರಂತರವಾಗಿ ಉಸಿರಾಟದ ಸಮಯ ಬಳಕೆಯಾಗುವುದರಿಂದ ಕೋಶದ ಒಳಗಡೆ ಆಮ್ಲಜನಕದ ಪ್ರಬಲತೆ ಕಡಿಮೆ ಇದ್ದು ಹೊರಗಡೆ ಹೆಚ್ಚಿರುತ್ತದೆ. ಆದ್ದರಿಂದ ಆಮ್ಲಜನಕ ಹೊರಗಿನಿಂದ ಒಳಗೆ ಚಲಿಸುತ್ತದೆ. ಅದೇ ಕೋಶದ ಒಳಗಡೆ ಇಂಗಾಲದ ಡೈಆಕ್ಸೈಡ್ ಮತ್ತು ಅಮೋನಿಯಾಗಳ ಪ್ರಬಲತೆ ಜಾಸ್ತಿ ಹೊರಗಡೆ ಕಡಿಮೆ. ಆದ್ದರಿಂದ ಇವು ಕೋಶದ ಹೊರಗೆ ಚಲಸುತ್ತವೆ. ಈ ರೀತಿಯ ಚಲನೆ ವಿಸರಣ (diffusion). ಇದೊಂದು ನಿರ್ಜೀವ ಕ್ರಿಯೆ. 

ಅಮ್ಮ ಉಪ್ಪಿನ ಕಾಯಿ ಮಾಡಲು ಮಾವಿನ ಮಿಡಿಗಳನ್ನು ಹೇಗೆ ಸಿದ್ಧ ಮಾಡುತ್ತಾರೆ ನೋಡಿದ್ದೀರಲ್ಲವೇ. ಮಾವಿನ ಮಿಡಿ ಗಳಿಗೆ ಉಪ್ಪು ಹಾಕುತ್ತಾರೆ. ಉಪ್ಪು ಮಾವಿನಮಿಡಿಗಳನ್ನು ಕೆಡದಂತೆ ಕಾಪಾಡುತ್ತದೆ. ಆದ್ದರಿಂದ ಉಪ್ಪು ಒಂದು ಆಹಾರ ಸಂರಕ್ಷಕ (preservative). ಉಪ್ಪು ಹಾಕಿದಾಗ ಮಾವಿನಮಿಡಿಗಳು ಮುದುಡುತ್ತವೆ. ಇದಕ್ಕೆ ಕಾರಣ ಮಿಡಿಯ ಒಳಗಿನ ನೀರು ಮಿಡಿಯಿಂದ ಹೊರ ಹರಿಯುತ್ತವೆ. ಅಮ್ಮ ಪಾಯಸ ಮಾಡಲು ಒಣ ದ್ರಾಕ್ಷಿಗಳನ್ನು ತಂದಿರುತ್ತಾರೆ. ಒಣ ದ್ರಾಕ್ಷಿ, ಗೋಡಂಬಿಗಳು ಪಾಯಸದ ಸ್ವಾದವನ್ನು ಹೆಚ್ಚಿಸುತ್ತವೆ. ಈ ಒಣದ್ರಾಕ್ಷಿಗಳನ್ನು ಒಂದಷ್ಟು ಹೊತ್ತು ಶುದ್ದವಾದ ನೀರಿನಲ್ಲಿ ಹಾಕಿ ಇಡಿ ಒಂದು ಗಂಟೆಯ ನಂತರ ನೋಡಿದರೆ ದ್ರಾಕ್ಷಿಗಳು ಉಬ್ಬಿಕೊಂಡಿರುತ್ತವೆ. ಅಂದರೆ ನೀರು ದ್ರಾಕ್ಷಿಯ ಒಳಗೆ ಚಲಿಸಿದೆ ಎಂದಾಯಿತು. ನೀರು ಎಷ್ಟೆಂದರೂ ಶುದ್ಧವಲ್ಲ. ಅದು ತನ್ನಲ್ಲಿ ಅನೇಕ ಲವಣಗಳನ್ನು ತನ್ನಲ್ಲಿ ಕರಗಿಸಿಕೊಂಡಿರುತ್ತದೆ. ಅಂದರೆ ಅದು ಒಂದು ದ್ರಾವಣ. ಇಲ್ಲಿ ಕೋಶಪೊರೆಯ ಮೂಲಕ ಚಲಿಸುವುದು ಶುದ್ಧವಾದ ನೀರೇ ಹೊರತು ಅದು ಕರಗಿಸಿಕೊಂಡಿರುವ ವಸ್ತುಗಳಲ್ಲ. ನೀರಿನ ಚಲನೆಯ ನೇರ ಎರಡೂ ಸಂದರ್ಭಗಳಲ್ಲಿ ಬೇರೆಬೇರೆ. ಮಾವಿನ ಮಿಡಿಯಲ್ಲಿ ಒಳಗಿನಿಂದ ಹೊರಗೆ ಮತ್ತು ದ್ರಾಕ್ಷಿಯಲ್ಲಿ ಹೊರಗಿನಿಂದ ಒಳಗೆ. ಅಂದರೆ ಅಧಿಕ ಪ್ರಬಲತೆಯಿಂದ ಕಡಿಮೆ ಪ್ರಬಲತೆಯೆಡೆಗೆ. ಅಂದರೆ ವಿಸರಣ ಅಲ್ಲವೇ? ಅಲ್ಲ. ಇಲ್ಲಿ ನೀರಿಗೆ ಮಾತ್ರ ಚಲನೆಗೆ ಅವಕಾಶ. ಅದರ ಜೊತೆಗಾರರಿಗೆ ಇಲ್ಲ. ಅಂದರೆ ಇಲ್ಲಿ ನಿರ್ಬಂಧಿತ ಪ್ರವೇಶ. ಅಂದರೆ ಒಳ ಬರುವುದೋ ಹೊರ ಹೋಗುವುದೋ ಎಂದು ನಿರ್ಧರಿಸುವುದು ಮಾತ್ರವಲ್ಲ ಯಾರು ಹೋಗಬೇಕು ಎಂಬುದನ್ನು ಕೂಡಾ ನಿರ್ಧರಿಸಲಾಗುತ್ತದೆ. ಆದ್ದರಿಂದ ಇದು ನಿರ್ಬಂಧಿತ ಪಾರದರ್ಶಕತೆ (selectively permeability). ಇಲ್ಲಿ ಚಲನೆ ಪ್ರಬಲತೆಯನ್ನು ಅವಲಂಭಿಸಿರುವುದರಿಂದ ಇದೊಂದು ನಿರ್ಜೀವ ಪ್ರಕ್ರಿಯೆ‌ ಆದರೆ ಯಾರನ್ನು ಮಾತ್ರ ತಮ್ಮ ಮೂಲಕ ಹಾದು ಹೋಗಲು ಬಿಡಬೇಕು ಎಂದು ನಿರ್ಧರಿಸಲು ಬುದ್ದಿಮತ್ತೆ ಬೇಡವೇ? ಹಾಗಾದರೆ ಯಕಶ್ಚಿತ್ತಾದ ಕೋಶಪೊರೆಗೂ ಬುದ್ಧಿಮತ್ತೆಯೇ?

ಕೋಶಪೊರೆಯ ರಚನೆ ಇನ್ನೂ ಸಂಕೀರ್ಣವೇ ಎಂಬುದನ್ನು ಮುಂದಿನ ವಾರ ನೋಡೋಣವೇ?
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************


Ads on article

Advertise in articles 1

advertising articles 2

Advertise under the article