ಸ್ಫೂರ್ತಿಯ ಮಾತುಗಳು : ಸಂಚಿಕೆ - 183
Monday, September 22, 2025
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 183
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಇಂದು ಶಾಲೆಗಳಲ್ಲಿ ಪಾಲಕರ ಸಭೆಗಳು ಹೇರಳವಾಗಿ ನಡೆಯುತ್ತಿರುತ್ತವೆ. ಶಿಕ್ಷಣವಾಹಿನಿಯೊಳಗೆ ಪಾಲಕರ ಒಳಗೊಳಿಸುವಿಕೆ ಕಲಿಕಾ ಗುಣ ಮಟ್ಟದ ವರ್ಧನೆಗೆ ಸಣ್ಣ ಮಟ್ಟದಲ್ಲಿ ಪೂರಕವೂ ಆಗುತ್ತಿದೆ. ಸ್ವಯಂ ಪ್ರೇರಣೆಯಿಂದ ಮಕ್ಕಳಿಗೆ ಶೈಕ್ಷಣಿಕವಾಗಿ ಪ್ರೇರಣೆ ನೀಡುವ ಪಾಲಕರಿಗೆ ಪಾಲಕರ ಸಭೆಯ ಅಗತ್ಯವಿಲ್ಲವಾದರೂ ಅವರು ಹೆಚ್ಚು ಆಸಕ್ತಿಯಿಂದ ಪಾಲಕರ ಸಭೆಗೆ ಹಾಜರಾಗುತ್ತಿದ್ದಾರೆನ್ನುವುದು ಉತ್ತಮ ಬೆಳವಣಿಗೆ. ಪಾಲಕರ ಸಭೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅನುಭವಗಳ ವಿನಿಮಯ ಮಾಡಲು ನನಗೆ ಅವಕಾಶಗಳು ಸಿಗುತ್ತಿವೆ. ಬಹಳಷ್ಟು ಹೆತ್ತವರು ಸಂವಹನ ಸಂದರ್ಭಧಲ್ಲಿ ನನ್ನ ಮುಂದೆ ಇರಿಸುವ ಪ್ರಶ್ನೆ, “ಮಕ್ಕಳು ಹೆತ್ತವರ ಮಾತನ್ನು ಕೇಳುವುದಿಲ್ಲ. ಈ ಸಮಸ್ಯೆಗೆ ಪರಿಹಾರವೇನು?” ಎಂಬುದು.
ಹೆತ್ತವರ ಪ್ರಶ್ನೆಗೆ ಉಡಾಫೆಯ ಉತ್ತರ ನೀಡುವುದಾದರೆ ತಕ್ಷಣ ನನಗೆ ಹೊಳೆಯುವ ಉತ್ತರ, “ ನೀ ನನಗಿದ್ದರೆ ನಾ ನಿನಗೆ” ಎಂಬ ಕವನದ ಸಾಲು. ಪಾಲಕರು ಮಕ್ಕಳ ಮಾತನ್ನು ಕೇಳುವುದಿಲ್ಲ; ಯಾಕೆಂದರೆ ಪಾಲಕರು ಮಕ್ಕಳ ಮಾತನ್ನು ಕೇಳದಿರುವುದು. ಪಾಲಕರ ಸ್ವಭಾವವೇ ಮಕ್ಕಳಲ್ಲಿ ಪ್ರತಿಧ್ವನಿಸಿದರೆ ತಪ್ಪೇನು? ಕೆಲವರು ಹೌದಲ್ಲ ಎಂದು ಗೋಣು ತಿರುಗಿಸುವವರೂ ಇದ್ದಾರೆ. ಮನೋವಿಜ್ಞಾನ ಪ್ರಕಾರ ಇದೂ ಸರಿಯಾದ ಸಮಜಾಯಿಷಿಕೆ ಹೌದೆನಿಸಿದರೂ ನಾನು ನೀಡುವ ಇನ್ನೊಂದು ಸಮಜಾಯಿಷಿಕೆ ನನ್ನನ್ನು ಹೆತ್ತವರ ಕೆಂಗಣ್ಣಿಗೆ ಗುರಿಪಡಿಸುವುದೂ ಇದೆ.
ನಮ್ಮ ಮಕ್ಕಳಿಗೆ ನಿಮ್ಮ “ಹೀರೋ ಯಾರು?” ಎಂದರೆ. ಅಬ್ದುಲ್ ಕಲಾಂ, ವಿವೇಕಾನಂದ, ಶ್ರೀರಾಮಚಂದ್ರ, ಶ್ರೀಕೃಷ್ಣ, ಮದರ್ ತೆರೆಸಾ ಎಂದು ಕೆಲವರು ಅಲ್ಲಲ್ಲಿ ಕೆಲವು ಹೆಸರುಗಳನ್ನು ಕೊಡುವವರಿದ್ದಾರೆ. ಆದರೆ ಬಹತೇಕರು ಶಾರೂಖಾನ್, ಡಾ. ರಾಜಕುಮಾರ್, ಜಬ್ಬಾರ್ ಖಾನ್, ನಟಿ ತಾರಾ, ಸಚಿನ್ ತೆಂಡೂಲ್ಕರ್ ರವರಂತಹ ಹೆಸರುಗಳನ್ನೇ ಹೇಳುತ್ತಾರೆ. ಲೋಕೋ ಭಿನ್ನರುಚಿಃ ಅಲ್ಲವೇ? “ತಂದೆ”. “ತಾಯಿ” ನನ್ನ ಹೀರೋ ಎಂದು ಯಾವ ಮಗುವೂ ಬಾಯ್ತಪ್ಪಿಯೂ ಹೇಳುವುದಿಲ್ಲ. ಮಕ್ಕಳು ಹೆತ್ತವರ ಮಾತನ್ನು ಕೇಳದಿರಲು ಮುಖ್ಯವಾದ ಕಾರಣ ಇದೇ ಆಗಿದೆ. ತಮ್ಮ ಮಕ್ಕಳಿಗೆ ತಾವೇ ಹೀರೋ ಅಥವಾ ಮಾದರಿಯಾಗಿ ಕಾಣಿಸದೇ ಇರುವುದರಿಂದ ಅವರು ತಂದೆ ತಾಯಿಗಳ ಮಾತನ್ನು ಕೇಳುವುದಿಲ್ಲ ಎಂದರೆ ತಂದೆ ತಾಯಿಗಳಿಗೆ ಸಹಿಸಲಾದೀತೇ? ಸಹಿಸಲಸಾಧ್ಯವಾದರೂ ಒಪ್ಪಲೇ ಬೇಕಾದ ಸ್ಥಿತಿಯಿದೆ ಎಂಬುದನ್ನು ಮೊತ್ತಮೊದಲಿಗೆ ಹೆತ್ತವರು ತಿಳಿದಿರಬೇಕು.
ಆರರ ಹರೆಯದ ಬಾಲಕನಾದ ಭಕ್ತ ಭಾಗವತ್ ದಾಸ್ ಬ್ರಹ್ಮಚಾರಿಯನ್ನು ಮಾಧ್ಯಮಗಳು, “ನಿನಗೆ ಆದರ್ಶರು ಯಾರು ಎಂದು ಕೇಳಿದಾಗ ತಕ್ಷಣ ಉತ್ತರಿಸುತ್ತಾನೆ, “ನನ್ನ ಅಪ್ಪ ಮತ್ತು ಅಮ್ಮ” ಎಂದು. ತಂದೆ ತಾಯಿಗಳ ಸಗುಣಾದರ್ಶಗಳು ಮಕ್ಕಳಿಗೆ ಪ್ರವಹಿಸಿ ಬರುವಂತಾಗಬೇಕು. ಹೆತ್ತವರ ಮಾತನ್ನು ಮಕ್ಕಳು ಕೇಳುವುದೇ ಇಲ್ಲ ಎಂಬ ಮಕ್ಕಳ ಮೇಲಿನ ಹೆತ್ತವರ ಆರೋಪಗಳು ಇದರಿಂದಾಗಿ ಖಂಡಿತಾ ಕಡಿಮೆಯಾಗುತ್ತದೆ. ಹೆತ್ತವರು ಹೇಳಿದಂತೆ ಮಕ್ಕಳು ಮಾಡುವುದೇ ಇಲ್ಲ, ಆದರೆ ಹೆತ್ತವರು ಮಾಡುವುದನ್ನೇ ಅನುಕರಿಸುತ್ತಾರೆ. ಅವರ ಮಕ್ಕಳ ಮಾತಿಗೆ ಹೆತ್ತವರು ಬೆಲೆ ಕೊಡುವ ಗುಣದವರಾಗಿದ್ದರೆ, ಅಂತಹ ತಂದೆ ತಾಯಿಗಳ ಮಾತುಗಳನ್ನು ಮಕ್ಕಳು ಕೇಳದೇ ಇರುವುದಿಲ್ಲ.
ಇಂದು ಹೆತ್ತವರನ್ನು ಕಾಡುವ ಮಹಾ ಸಂದಿಗ್ಧತೆಯೆಂದರೆ ಮಕ್ಕಳಿಗೆ ಮೊಬೈಲ್ ಗೀಳು, ಟಿ.ವಿ.ಯ ಹುಚ್ಚು ವಿಪರೀತವಿದೆ. ಆದರೆ ಈ ಸಂದಿಗ್ಧತೆ ಅವರಿಗೆ ಎದುರಾಗುವುದು ಮಗವಿಗೆ ಹತ್ತು ವರ್ಷ ಯಾ ಅದಕ್ಕಿಂತ ಹೆಚ್ಚು ಪ್ರಾಯ ತುಂಬಿದಾಗ ಎನ್ನುವುದು ವಿಶೇಷ. ಸಣ್ಣ ಮಗು ಮೊಬೈಲ್ ಓಪರೇಟ್ ಮಾಡಿದಾಗ, ಟಿ.ವಿ ಚ್ಯಾನೆಲ್‌ಗಳನ್ನು ರಿಮೋಟ್ (ದೂರ ನಿಯಂತ್ರಕ) ಮೂಲಕ ಬದಲಾಯಿಸಿ ನೋಡುತ್ತಿದ್ದಾಗ ಆನಂದಿಸುವ ತಂದೆ ತಾಯಿಗಳು ಅಗಣಿತ. ನನ್ನೊಡನೆ ಮಾತನಾಡುವಾಗ, “ ನಮ್ಮ ಮಗು ಬಹಳ ಜಾಣ, ನನಗಿಂತ ಚೆನ್ನಾಗಿ ಮೊಬೈಲ್ ಓಪರೇಟ್ ಮಾಡುತ್ತಾನೆ. ದೂರದರ್ಶನ ಚ್ಯಾನೆಲ್ ಗಳನ್ನು ಕ್ಷಣಾರ್ಧದೊಳಗೆ ಹುಡುಕುತ್ತಾನೆ ಮತ್ತು ಬದಲಿಸುತ್ತಾನೆ!” ಎಂದು ಹೇಳುತ್ತಾ ಸಂಭ್ರಮಿಸಿದ ಸಂದರ್ಭಗಳು ಧಾರಾಳ ಇವೆ. ಅಂದು ಸಂಭ್ರಮಿಸಿದುದರ ಫಲವೇ ಇಂದಿನ ದಾರುಣತೆಗೆ ಕಾರಣ. ಕಥೆ ಹೇಳಿ, ಹಾಡು ಹೇಳಿ, ಚಂದಮಾಮನನ್ನು ತೋರಿಸಿ, ಪಕ್ಷಿಗಳನ್ನು ತೋರಿಸುತ್ತಾ ಉಣಿಸುತ್ತಿದ್ದರು ನಮ್ಮ ಹಿಂದಿನ ತಲೆಮಾರಿನವರು. ಆದರೆ ಇಂದು ಉಣಿಸಲು ಮೊಬೈಲ್ ಆಟ, ಮೊಬೈಲ್ ಸ್ಕ್ರೀನ್‌ನ ಚೆಲ್ಲಾಟ, ಟಿ.ವಿ.ಯ ಪರದೆಯ ಮೇಲಿನ ದೃಶ್ಯಗಳೇ ಮೀಸಲು. ಹಾಗಾದುದರಿಂದ, “ನಾನು ಹೇಳಿದರೆ ಮಗ ಅಥವಾ ಮಗಳು ಮೊಬೈಲ್ ಬಳಸುವುದನ್ನು ಕಡಿಮೆ ಮಾಡುವುದಿಲ್ಲ” ಎಂದು ಹೆತ್ತವರು ದೂರಿದರೆ ಸಮಂಜಸವಾದೀತೇ? ಅಭ್ಯಾಸ ಮಾಡಿಸಿದವರು ಯಾರು ಎಂಬ ಪ್ರಶ್ನೆ ಏಳುವುದು ಸಹಜ ತಾನೇ?
ಪ್ರೌಢ ಪ್ರಾಯಕ್ಕೆ ಬಂದ ಮಕ್ಕಳ ಬೇಡಿಕೆ ಗಾಡಿ, ನಂತರಲ್ಲಿ ನೋಡಿ, ಮುಂದೆ ಜೋಡಿ ಕೊನೆಗೆ ಓಡಿ ಎಂಬ ಅಣಕದ ಮಾತಿದೆ. ವಯಸ್ಸು ಹದಿನೆಂಟು ದಾಟದೆ ಗಾಡಿ ಬಿಡಬಾರದು. ಗಾಡಿ ಚಾಲನೆಯ ಪರವಾನಿಗೆ ಇಲ್ಲದೆ ಗಾಡಿ ಬಿಡಲು ಅವಕಾಶ ನೀಡಬಾರದು. ಹಾಗೊಂದು ವೇಳೆ ಹದಿ ಹರೆಯದವರು ಗಾಡಿ ಓಡಿಸಿ ಸಿಲುಕು ಹಾಕಿಕೊಂಡರೆ ಆ ಗಾಡಿಯನ್ನು ಸಾರಿಗೆ ಪ್ರಾಧಿಕಾರ ತನ್ನ ವಶ ಪಡೆಯುತ್ತದೆ. ಹೆತ್ತವರಿಗೆ ರೂ ಇಪ್ಪತ್ತೈದು ಸಾವಿರ ದಂಡ. ಎರಡು ವರ್ಷ ಸೆರೆಮನೆವಾಸದ ಶಿಕ್ಷೆಯಿದೆ. ಹೀಗಿದ್ದರೂ ತಮ್ಮ ಮಕ್ಕಳಿಗೆ ಹೆತ್ತವರು ಗಾಡಿ ಓಡಿಸಲು ಅನುಮತಿಸುವರಲ್ಲ.!
ಅಪಾಯವಾಗುತ್ತದೆಂಬ ಪೂರ್ವನಿರೀಕ್ಷೆಯಿಲ್ಲದ ಹೆತ್ತವರೆ ಇಲ್ಲ. ಗಾಡಿಗಳುಂಟು ಮಾಡುವ ಅಸಂಗತಗಳನ್ನು ದುರಂತಗಳನ್ನು ಮಕ್ಕಳ ಮುಂದೆ ಚಿತ್ರೀಕರಿಸುವ, ದೃಶ್ಯೀಕರಿಸುವ ಕಾಯಕದಲ್ಲಿ ತೊಡಗದೆ ಅಪಾಯವಾದಾಗ “ಮಕ್ಕಳು ಹೇಳಿದಂತೆ ಕೇಳುವುದಿಲ್ಲ” ಎಂಬ ಆರೋಪ ಅರ್ಥಶೂನ್ಯವಾದುದು.
ಮಕ್ಕಳು ಕನ್ನಡಿಯಂತೆ. ಕನ್ನಡಿಯ ಗುಣ ತನ್ನ ಮುಂದಿರುವುದನ್ನು ಯಥಾವತ್ತಾಗಿ ಪ್ರತಿಬಿಂಬಿಸುವುದು. ಹೆತ್ತವರಲ್ಲೇನಿದೆಯೋ ಅದನ್ನು ಮಕ್ಕಳು ಪ್ರತಿಬಿಂಬಿಸಿದರೆ ಲೋಪ ಯಾರದು ಸ್ವಾಮಿ? ಕನ್ನಡಿಯಲ್ಲಿ ನಮ್ಮ ಕೆದರಿದ ಕೂದಲು, ಬಾಡಿದ ಮುಖ. ಹರಿದ ಉಡುಪು ಕಾಣದಿರ ಬೇಕೆಂದಾದರೆ ನಮ್ಮ ಕೂದಲನ್ನು ನಾವು ಓರಣಗೊಳಿಸಬೇಕು, ಮುಖತೊಳೆದು ಹೊಳೆಯುವಂತೆ ಮಾಡಬೇಕು. ಅಂದದ ಉಡುಪು ಬದಲಿಸ ಬೇಕು. ನಾವು ಬದಲಾಗದೆ ನಮ್ಮ ಪ್ರತಿಬಂಬ ಬದಲಾಗದು. ಮಕ್ಕಳು ಕನ್ನಡಿಯಂತೆ… ನೆನಪಿರಲಿ
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
******************************************