ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 97
Tuesday, September 16, 2025
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 97
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಕೋಶ ಪೊರೆಯ ಬಗ್ಗೆ ಮಾತನಾಡುತ್ತಾ ಆ ವಿಷಯವನ್ನು ಮರೆತು ಬಿಟ್ಟು ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾನಲ್ಲಾ ಎಂದು ಅನೇಕ ಬಾರಿ ಅಂದುಕೊಂಡಿರಬೇಕು ನೀವು. ಅದು ಹಾಗಲ್ಲ. ಒಂದು ವಿಷಯದ ಬಗ್ಗೆ ಅಮೂಲಾಗ್ರವಾಗಿ ತಿಳಿಯಬೇಕಲ್ಲವೇ? ಈಗ ಈ ಪೊರೆ ಎಲ್ಲಿ ಇದೆ ಎಂಬುದನ್ನು ತಿಳಿದೆವು. ಇದು ಕೋಶದ ಹೊರ ಭಾಗದಲ್ಲಿದ್ದು ಎರಡು ಕೋಶಗಳನ್ನು ಬೇರ್ಪಡಿಸುವ ಕೆಲಸ ಮಾಡುತ್ತವೆ. ಕೋಶದ ಒಳಗಡೆ ಪ್ರತಿ ಅಂಗಕಣಗಳ ಸುತ್ತಲೂ ಇದ್ದು ಅವುಗಳನ್ನು ಕೋಶ ರಸದಿಂದ ಬೇರ್ಪಡಿಸುತ್ತವೆ ಮತ್ತು ಹೊಸದಾಗಿ ರೂಪುಗೊಳ್ಳುವ ಲೈಸೋಸೋಮ್ ಮತ್ತು ಫ್ಯಾಗೋಸೋಮುಗಳು ಪ್ರತ್ಯೇಕವಾಗಿರುವಂತೆ ನೋಡಿಕೊಳ್ಳುತ್ತವೆ. ಅಂದರೆ ಕೋಶದೊಳಗೆ ಉಂಟಾಗುವ ಪ್ರತಿಯೊಂದು ಹೊಸಹುಟ್ಟೂ ನಗ್ನವಾಗಿರುವುದಿಲ್ಲ. ಬದಲಾಗಿ ಆವೃತ್ತವಾಗಿರುತ್ತದೆ.
ಇದು ಪ್ರಕೃತಿಯ ನಿಯಮ. ಯಾಕೆ ಎಂದು ನೀವು ಕೇಳಬಹುದು. ಗಾಲ್ಗಿ ಸಂಕೀರ್ಣಗಳು ಒಂದು ಕಿಣ್ವವನ್ನು ಉತ್ಪತ್ತಿ ಮಾಡುತ್ತದೆ ಎಂದಿಟ್ಟುಕೊಳ್ಳೋಣ. ಅದನ್ನು ಅದರೊಳಗೆ ಇರಿಸಿಕೊಳ್ಳಲಾಗದು. ಅದು ಯಾವ ಸ್ಥಳದಲ್ಲಿ ಕೆಲಸ ಮಾಡಬೇಕಾಗಿದೆಯೋ ಅಲ್ಲಿಗೆ ಸಾಗಿಸಬೇಕು. ಸಾಗಿಸಬೇಕಾದರೆ ಅದನ್ನು ಪ್ಯಾಕಿಂಗ್ ಮಾಡಬೇಕು ತಾನೇ. ಪ್ಯಾಕಿಂಗ್ ಮಾಡದೇ ನೇರವಾಗಿ ಕೋಶರಸಕ್ಕೆ ಸೇರಿಸಿ ಬಿಟ್ಟರೆ ಅದು ಅಲ್ಲಿಯೇ ತನ್ನ ಕೆಲಸವನ್ನು ಆರಂಭಿಸಿ ಬಿಟ್ಟರೆ ಇಡೀ ಕೋಶವೇ ಜೇರ್ಣಿಸಲ್ಪಡುತ್ತದೆ. ಕಪ್ಪೆಯ ಮರಿ ತನ್ನ ಬಾಲವನ್ನು ಕಳೆದುಕೊಳ್ಳುವುದು ಇದೇ ರೀತಿಯಾಗಿ. ಆದ್ದರಿಂದ ಕೋಶ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಅದು ಆವರಿಸಲ್ಪಡಲೇಬೇಕು.
ಈ ಪೊರೆ ಜೀವಂತವೇ, ಮೃತವೇ, ಅಪಾರದರ್ಶಕವೇ, ಪಾರದರ್ಶಕವೇ ಅಥವಾ ಇನ್ನೇನು ನೋಡೋಣ. ಸಸ್ಯಗಳಲ್ಲಿ ಕೋಶಪೊರೆಯ ಹೊರಭಾಗದಲ್ಲಿ ಇನ್ನೊಂದು ಪೊರೆ ಇದೆ. ಇದು ಜೀವ ರಹಿತವಾದ್ದರಿಂದ ಇದನ್ನು ಭಿತ್ತಿ (ಗೋಡೆ) ಎಂದು ಪರಿಗಣಿಸಲಾಗುತ್ತದೆ. ಇದು ಕೋಶಭಿತ್ತಿ (cell wall). ಕೋಶ ಭಿತ್ತಿ ಸಾಮಾನ್ಯವಾಗಿ ಸೆಲ್ಯುಲೋಸ್, ಪೆಕ್ಟಿನ್ ಅಥವಾ ಲಿಗ್ನಿನ್ ನಿಂದ ಮಾಡಲ್ಪಟ್ಟಿರುತ್ತದೆ. ಈ ಸೆಲ್ಯುಲೋಸ್ ನೈಸರ್ಗಿಕವಾಗಿ ಕಂಡುಬರುವ ಸಮೃದ್ದ ಪಾಲಿಮರ್. ಇದು ಸಸ್ಯಗಳ ಕೋಶಗಳಿಗೆ ಆಧಾರ ಮತ್ತು ದೃಢತೆಯನ್ನು ಒದಗಿಸಬಲ್ಲುದು. ಈ ಸೆಲ್ಯಲೋಸ್ ನಿಂದಲೇ ಬಟ್ಟೆ, ಕಾಗದ ಮತ್ತು ಸಾವಯವ ಇಂಧನಗನ್ನು ಪಡೆಯುತ್ತೇವೆ. ಇದೊಂದು ಬಹು ಅಣುಗಳನ್ನು ಹೊಂದಿರುವ ಉದ್ದ ಸರಪಣಿಯ ಶರ್ಕರ ಪಿಷ್ಟ. ಇದನ್ನು ಸಸ್ತನಿಗಳು ಜೀರ್ಣಿಸಲಾರವು. ಆದ್ದರಿಂದ ಸೆಲ್ಯುಲೋಸ್ ಅನ್ನು ಆಹಾರದ ನಾರು (dietary fiber) ಎಂದು ಪರಿಗಣಿಸಲಾಗುತ್ತದೆ. ಹಾಗಾದರೆ ದನ, ಮೊಲದಂತಹ ಹುಲ್ಲು ತಿನ್ನುವ ಪ್ರಾಣಿಗಳ ಆಹಾರ ಹಾಗೆಯೇ ಹೊರ ಹಾಕುತ್ತವೆಯೇ ಎಂದರೆ ಇಲ್ಲ. ಈ ಪ್ರಾಣಿಗಳಿಗೆ ಉದ್ದವಾದ ಕರುಳು ಇರುತ್ತದೆ. ಈ ಕರುಳಿನಲ್ಲಿ ಆಶ್ರಯ ಪಡೆಯುವ cellulytic bacteria ಗಳು ಈ ಸೆಲ್ಯುಲೋಸ್ ಅನ್ನು ಜೀರ್ಣಿಸುತ್ತವೆ. ಇದೇ ಬ್ಯಾಕ್ಟೀರಿಯಾಗಳು ಗೆದ್ದಲುಗಳ ಕರುಳಿನಲ್ಲಿಯೂ ಇರುವುದರಿಂದ ಗೆದ್ದಲುಗಳು ಕಾಗದ ಕಟ್ಟಿಗೆಯನ್ನು ತಿಂದು ಮುಗಿಸುತ್ತವೆ. ಕೋಶ ಭಿತ್ತಿಯ ಇನ್ನೊಂದು ವಸ್ತುವಾದ ಲಿಗ್ನಿನ್ ಕೂಡಾ ಒಂದು ಶರ್ಕರ ಪಿಷ್ಟ ಕ್ಕಿಂತ ಭಿನ್ನವಾದ ಒಂದು ಪಾಲಿಮರ್. ಇದು ತೊಗಟೆ ರಾಳ ಮತ್ತು ಕಟ್ಟಿಗೆಯಲ್ಲಿ ಕೂಡಾ ಕಂಡುಬರುತ್ತದೆ. ಇದನ್ನು ಜೀರ್ಣಿಸುವ ಸಾಮರ್ಥ್ಯ ಮಿತವಾದದ್ದು. ಕೆಲ ಸೂಕ್ಷಾಣು ಅಣಬೆಗಳು ಮತ್ತು ಬ್ಯಾಕ್ಟೀರಿಯಾಗಳು ಮಾತ್ರ ಲಿಗ್ನಿನ್ ಅನ್ನು ಜೀರ್ಣಿಸಬಲ್ಲವು. ಆದ್ದರಿಂದ ಲಿಗ್ನಿನ್ ಸಮೃದ್ದವಾಗಿರುವ ಮರಗಳಾದ ತೆಂಗು, ತಾಳೆ, ಬೈನೆ ಮರದ ಮೋಪನ್ನು ಗೆದ್ದಲು ತಿನ್ನಲಾರದು. ಪೆಕ್ಟಿನ್ ಇದು ನೀರಿನಲ್ಲಿ ಕರಗುವ ಒಂದು ಪಾಲಿಮರ್. ಇದು ತರಕಾರಿ, ಕಿತ್ತಳೆ, ಸೇಬುವಿನಂತಹ ಹಣ್ಣುಗಳಲ್ಲಿ ಕಂಡುಬರುತ್ತವೆ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************