ಸ್ಫೂರ್ತಿಯ ಮಾತುಗಳು : ಸಂಚಿಕೆ - 182
Tuesday, September 16, 2025
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 182
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಕಾಲೆಡವಿ ಬಿದ್ದಾಗ, ಆಟ ಓಟದಲ್ಲಿ ಜಾರಿ ಬಿದ್ದಾಗ, ಎತ್ತರದಿಂದ ಕೆಳಗೆ ಜಿಗಿದಾಗ, ಮರದ ರೆಂಬೆ ಅಪ್ಪಳಿಸಿದಾಗ, ಯಾವುದಾದರೂ ಉಪಕರಣಗಳು ತಾಗಿದಾಗ... ಹೀಗೆ ಅನೇಕ ಸಂದರ್ಭಗಳಲ್ಲಿ ನೋವು ಸಹಜ. ಇಂತಹ ಸಂದರ್ಭಗಳಲ್ಲಿ ನೋವುಗಳುಂಟಾದರೂ ಅವುಗಳಿಂದಾಗಿ ನಾವು ಜಾಗರೂಕತೆಯ ಪಾಠವನ್ನು ಕಲಿಯುತ್ತೇವೆ. ಅಂಗವೊಂದು ಊನವಾದರೂ ಅದನ್ನು ಇಂದಿನ ವೈದ್ಯಕೀಯ ಶಾಸ್ತ್ರ ಮರುಜೋಡಿಸುವ ಹಲವು ಸಂದರ್ಭಗಳಿವೆ.
ದೊಣ್ಣೆಯ ಪೆಟ್ಟಿನ ಗಾಯ ಮಾಸುತ್ತದೆ, ಆದರೆ ಮನಸ್ಸಿಗಾದ ಮಾತಿನ ಗಾಯದ ನೋವಿಗೆ ಅಳಿವಿಲ್ಲ ಎನ್ನುತ್ತಾರೆ. ಮನಸ್ಸಿಗೆ ನೋವಾಗುವ ಅನೇಕ ಸಂದರ್ಭಗಳಿರುತ್ತವೆ. ದೇಹಕ್ಕುಂಟಾದ ನೋವನ್ನು ಒಂದು ಬಾರಿ ಅನುಭವಿಸಿದರೆ ಮುಗಿಯುತ್ತದೆ. ಅಂತಹ ನೋವುಗಳಾಗದಂತೆ ಎಚ್ಚರಿಕೆಯನ್ನೂ ವಹಿಸಬಹುದು. ಆದರೆ ಮನಸ್ಸಿಗೆ ಆದ ನೋವು ಮುಂದೆ ಎಷ್ಟೇ ಎಚ್ಚರಿಕೆ ವಹಿಸಿದರೂ, ಆ ನೋವು ಶಾಶ್ವತ ವಾಗುಳಿಯುತ್ತದೆ. ಆ ನೋವು ಎಂದಿಗೂ ಅಳಿಯದು.
ನಮ್ಮ ದೇಹದ ನೋವಿಗೆ ನಾವೇ ಹೆಚ್ಚಿನ ಸಂದರ್ಭಗಳಲ್ಲಿ ಕಾರಣರಾಗುತ್ತೇವೆ. ನಮ್ಮ ಅಜಾಗರೂಕತೆಗಳು ನಮಗೆ ನೋವು ತರುತ್ತವೆ. ತರಕಾರಿ ಅಥವಾ ಹಣ್ಣುಗಳನ್ನು ಕೊಯ್ಯುವಾಗ ಕತ್ತಿಯ ಗಾಯವಾಗುತ್ತದೆ. ಎಡವಿ ಬೀಳುತ್ತೇವೆ, ನೋವಾಗುತ್ತದೆ. ಇಂತಹ ಸಂದರ್ಭದ ನೋವುಗಳಿಗೆ ನಾವೇ ಕಾರಣರು. ಕಳ್ಳತನ ಮಾಡಿದುದಕ್ಕೆ ಪೋಲೀಸರು ಹೊಡೆದರೆ ನೋವಾಗುತ್ತದೆ. ಈ ನೋವೂ ನಮ್ಮ ಕಾರಣದಿಂದ ಎಂಬುದನ್ನು ಮರೆಯಬಾರದು. ಹಾಗೆಯೇ ಅನೇಕ ಸಂದರ್ಭಗಳಲ್ಲಿ ನಮ್ಮ ಮನಸ್ಸಿಗಾಗಿರುವ ನೋವಿನ ಹಿಂದೆಯೂ ನಮ್ಮ ಅಕೃತ್ಯಗಳಿರುತ್ತವೆ. ಮನಸ್ಸಿನ ನೋವು ಮತ್ತು ದೇಹದ ನೋವು ಇವೆರಡೂ ಅಜಾಗರೂಕತೆ ಅಥವಾ ಮನೋ ಹಿಡಿತದ ಸಡಿಲವೇ ಕಾರಣ. ಹಲ್ಲು ನೋವು, ಹೊಟ್ಟೆ ನೋವು, ಮಂಡಿ ನೋವು ಮುಂತಾದ ನೋವುಗಳಿಗೂ ನಾವೇ ಕಾರಣರು. ನಮ್ಮ ಆಹಾರ, ವಿಹಾರ, ಸ್ವಚ್ಛತೆಯ ದೋಷಗಳಿಂದಾಗಿ ದೈಹಿಕ ನೋವುಗಳಾಗುವುದೂ ಇದೆಯಂತಾಯಿತಲ್ಲವೇ?
ನಮ್ಮಿಂದ ತಪ್ಪುಗಳು ಘಟಿಸದೇ ಇದ್ದಾಗ ಯಾರಾದರು ಮಾತನಾಡಿದರೆ ಮನನೋಯುವುದಿದೆ. ಇಂತಹ ಸಂದರ್ಭಗಳಲ್ಲಿ ಮಾತನಾಡುವವರು ವಿಷಯದ ಸರಿಯಾದ ಮಾಹಿತಿ ಪಡೆಯದೇ ಮಾತನಾಡುವುದರಿಂದಾಗುವ ರಾದ್ಧಾಂತವಿದು. ತಾನು ಮಾತನಾಡಿರುವುದು ತಪ್ಪೆಂದರಿತಾಗ, ಮಾತನಾಡಿದವರೇ ನೋಯುವುದೂ ಇದೆ. ಇದನ್ನು ಪಶ್ಚಾತ್ತಾಪ ಎನ್ನುವರು. ಇಂತಹ ಸಂದರ್ಭಗಳಲ್ಲಿ ತನ್ನ ಅವಿವೇಕದ ಮಾತುಗಳಿಗೆ ಕ್ಷಮೆ ಕೇಳಿದರೆ ಸಮಸ್ಯೆ ಪರಿಹಾರವಾದರೂ ಆಗಬಹುದು. ಮನಸ್ಸಿಗಾದ ಗಾಯ ಅಳಿಯುವುದು ಕಷ್ಟವಾದರೂ ಪುಟ್ಟ ಸಾಂತ್ವಾನ ಸಿಕ್ಕಿದಂತಾಗುತ್ತದೆ ತಾನೇ?
ತಾನು ವಿಶ್ವಾಸವಿರಿಸಿದವರು ತನಗೇ ತಿರುಮಂತ್ರ ಹೂಡಿದಾಗ ನೋವಾಗುವುದು ಇನ್ನೊಂದು ಬಗೆಯದು. ಇಲ್ಲೂ ವಿಶ್ವಾಸಘಾತಕ್ಕೊಳಗಾದ ನಾವೂ ಆ ನೋವಿಗೆ ಕಾರಣರಾಗುವುದಿದೆ. ಯಾರನ್ನೇ ಆದರೂ ವಿಶ್ವಸಿಸುವ ಮೊದಲು ನಮಗೆ ಆ ವ್ಯಕ್ತಿಯ ಒಳನೋಟ ಅಥವಾ ಸರಿಯಾದ ಪರಿಚಯ ಇರಬೇಕು. ಬಾಹ್ಯವಾಗಿ ಬೆಣ್ಣೆಯಂತಿರುವ, ಬೆನ್ನ ಹಿಂದಿನಿಂದ ಚೂರಿಯಿಡುವ ಮನೋಭಾವದವರನ್ನು ವಿಶ್ವಸಿಸಲೇ ಬಾರದು. ಯಾರನ್ನೇ ಆಗಲಿ ತಕ್ಷಣಕ್ಕೆ ನಮ್ಮ ಜೊತೆಗೊಳಿಸಬಾರದು. ಅವರ ಪೂರ್ವಾಪರ ಅರ್ಥವಾಗುವ ತನಕ ಕಾಯಲೇ ಬೇಕು. ಆಗ ಅವರಿಂದಾಗುವ ನೋವುಗಳಿಂದ ಪಾರಾಗಬಹುದು.
ನಾವು ಕೈಗೆತ್ತಿದ ಯೋಜನೆ, ಹೂಡಿದ ಹಣಕಾಸು ಪರಿಣಾಮಕಾರಿಯಾದ ಫಲವನ್ನು ನೀಡದೇ ಇದ್ದಾಗಲೂ ಮನಸ್ಸಿಗೆ ನೋವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಸದ್ಗುಣೀ ಅನುಭವಿಗಳ ಸಲಹೆಯೊಂದಿಗೆ ಮುಂದುವರಿಯುವುದರೊಂದಿಗೆ ನೋವುಗಳಾಗದಂತೆ ಎಚ್ಚರದಿಂದಿರಬಹುದು. ಪರೀಕ್ಷೆಯಲ್ಲಿ ಅಂಕ ಬರಲಿಲ್ಲ, ಉತ್ತೀರ್ಣನಾಗಲಿಲ್ಲ ಎಂದಾದಾಗ ನೋವು ಸಹಜ. ಆದರೆ ಸಮಯ ವ್ಯರ್ಥಗೊಳಿಸಿ ಕಲಿಕೆಯಲ್ಲಿ ತೊಡಗದಿರುವ ನಮ್ಮ ತಪ್ಪು ಧಕ್ಕೆ ಕಾರಣವೆಂಬ ಸತ್ಯ ನಮಗೆ ಗೊತ್ತೇ ಇರುತ್ತದೆ. ಮನಸ್ಸು ಮಾಡಿದರೆ ಇಂತಹ ನೋವುಗಳೂ ಆಗದಂತೆ ನಮ್ಮ ನಡೆಯಿಡಬಹುದು.
ಎಲ್ಲಾ ಬಗೆಯ ನೋವುಗಳಿಗೂ ಮೂಂಜಾಗರೂಕತೆಯೇ ಪರಿಹಾರ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
******************************************