ನಿಷ್ಪಾಪಿ ಸಸ್ಯಗಳು : ಸಂಚಿಕೆ - 120
Wednesday, September 17, 2025
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 120
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಈ ನಡುವೆ ನಮ್ಮ ಶಾಲೆಯ ಸನಿಹವಿದ್ದ ಹೊಸ ಸಸಿಯೊಂದನ್ನು ಗುರುತಿಸಿ ನಿಮಗೆ ಪರಿಚಯಿಸುತ್ತಿದ್ದೇನೆ. ಶಾಲೆಯಲ್ಲಿ ಮಧ್ಯಾಹ್ನ ಊಟ ಮಾಡಿ ಕೈತೊಳೆಯಲೆಂದು ನಳ್ಳಿಯ ಹತ್ತಿರ ಹೋದಾಗ ಕಣ್ಣಲತೆಯಲ್ಲಿದ್ದ ಹಳದಿ ಹೂವೊಂದು ಮನ ಸೆಳೆಯಿತು. ಎಲೆಗಳ ಅಕ್ಷಗಳಲ್ಲಿ ಅರಳಿದ ಒಂಟಿ ಹೂಗಳು ಬೆಂಡೆಕಾಯಿ ಹೂವಿನಂತೆ ಆಲಿಕೆಯಾಕಾರದಲ್ಲಿತ್ತು. 10 ಸೆಂ.ಮೀ ನಷ್ಟು ಅಗಲವಿದ್ದು ಅದೇ ಹಳದಿ ಬಣ್ಣ ಮಾತ್ರವಲ್ಲದೇ ಹೂವಿನ ಮಧ್ಯೆ ಕಡು ನೇರಳೆ ಬಣ್ಣದ ಚುಕ್ಕೆಗಳಿದ್ದುವು ! ಸಂಜೆ ನಾಲ್ಕು ಗಂಟೆಯಾಗುತ್ತಲೇ ಮುದುರಿ ಹೋಗಿದ್ದುವು. ಬೆಂಡೆಕಾಯಿ ಗಿಡದಂತಹದೇ ಪರ್ಯಾಯ ಎಲೆಗಳು. ಆದರೆ ಇದು ಬೆಂಡೆಕಾಯಿ ಗಿಡವಲ್ಲವೆಂದು ಗುರುತಿಸಲು ಸುಲಭವಾದದ್ದು ಎಲೆ ಹಾಗೂ ಕಾಂಡದ ತುಂಬಾ ಬಿರುಸಾದ ಕೂದಲ ರಚನೆ!. ಎಲೆಗಳ ತಳ ಅಂಗೈಯಂತೆ ಇದ್ದು ನಾಲ್ಕೈದು ಆಳ ವಿಭಜನೆಯ ಎಲೆಗಳು. ಪ್ರತೀ ಹೂವಿನಿಂದಲೂ ಬೆಂಡೆಕಾಯಿಯಂತದ್ದೇ ಕಾಯಿಗಳು ಉದಿಸಿದ್ದರೂ ಸಾಮಾನ್ಯ ಬೆಂಡೆಯಂತೆ ಉದ್ದವಾಗಿರದೆ ಎರಡು ಮೂರಿಂಚು ಉದ್ದನೆಯ ಸ್ವಲ್ಪ ದಪ್ಪದ ಕಾಯಿಗಳಿದ್ದುವು.
ಮಕ್ಕಳೇ, ಬೆಂಡೆಕಾಯಿಯಂತೆ ಕಂಡ ಆ ನಿಷ್ಪಾಪಿ ಸಸ್ಯ ಯಾವುದೆಂದು ಬಲ್ಲಿರಾ? ಅದೇ ಕಸ್ತೂರಿ ಬೆಂಡೆ. ರಸ್ತೆಯ ಇಕ್ಕೆಲಗಳಲ್ಲಿ, ಕೆರೆಕಟ್ಟೆ, ಗದ್ದೆ ತೋಟದ ಬದುಗಳಲ್ಲಿ, ಬಯಲು ಸೀಮೆಯಲ್ಲಿ ಹೀಗೇ ಐದಾರು ಅಡಿಗಳೆತ್ತರ ನೇರವಾಗಿ ಬೆಳೆದು ನಿಲ್ಲುವ ಕಸ್ತೂರಿ ಬೆಂಡೆ ಗಿಡಗಳನ್ನು ಒಂಟಿಯಾಗಿ ಅಥವಾ ಗುಂಪಾಗಿ ಕಾಣಬಹುದು. ಕಾಯಿ ಒಣಗಿ ಒಡೆದಾಗ ಬಿರುಸಾಗಿ ಹಾರಿದ ಬೀಜಗಳಿಂದ ಅಥವಾ ಹಕ್ಕಿಗಳ ಮೂಲಕ ಬೀಜ ಪ್ರಸಾರವಾಗಿ ಹೊಸ ಹುಟ್ಟು ಪಡೆಯುತ್ತವೆ. ಬ್ರೆಜಿಲ್ ಜಾವ, ವೆಸ್ಟ್ ಇಂಡೀಸ್, ಭಾರತದ ಉಷ್ಣವಲಯದಲ್ಲಿ ಬೆಳೆಯುವ ಈ ಕಸ್ತೂರಿ ಬೆಂಡೆ ಭಾರತೀಯ ಮೂಲದ ಸಸ್ಯವಾಗಿದೆ. ಕೆಲವೆಡೆ ಇದರ ಎಳೆಯ ಚಿಗುರು ಹಾಗೂ ಕಾಯಿಯನ್ನು ಆಹಾರವಾಗಿ ಬಳಸುತ್ತಾರಾದರೂ ಇದರ ಬೀಜಗಳು ಮಹತ್ವದ್ದಾಗಿವೆ. ಈ ಪ್ರಕೃತಿಯಲ್ಲಿ ಯಾವುದೇ ಮಗು ಹೇಗೆ ದಡ್ಡನಲ್ಲವೋ ಹಾಗೆಯೇ ಯಾವುದೇ ಸಸ್ಯವೂ ನಿಷ್ಪ್ರಯೋಜಕವಲ್ಲ. ಸಹಜ ಕೃಷಿಗಿನ್ನೂ ಬಳಸದ ಈ ಕಾಡು ಬೆಂಡೆಯ ಹೆಸರಿನ ಜೊತೆಗೇಕೆ 'ಕಸ್ತೂರಿ' ಪದ ಸೇರಿಕೊಂಡಿದೆ ಗೊತ್ತಾ? ಅದೇ ಈ ಸಸ್ಯದ ವಿಶೇಷತೆ.
ಕಸ್ತೂರಿ ಬೆಂಡೆಯ ಕಾಯಿಯೊಳಗೆ ಮೂತ್ರಪಿಂಡದಾಕಾರದಲ್ಲಿರುವ ಹಲವಾರು ಸಣ್ಣ ಕಂದು ಬೀಜಗಳಿವೆ. ಅವು ವಿಶೇಷವಾದ ಸುವಾಸನೆಯನ್ನು ಹೊಂದಿರುವ ಕಾರಣ ಕಸ್ತೂರಿ ಬೆಂಡೆ ಎಂಬ ಹೆಸರು ಪಡೆದುಕೊಂಡಿದೆ. ಇದರ ಬೀಜವನ್ನು ಪುಡಿಮಾಡಿ ಆಸವೀಕರಣದ ಮೂಲಕ ತೈಲವನ್ನು ತೆಗೆಯುತ್ತಾರೆ. ಈ ಎಣ್ಣೆಯ ಬಗ್ಗೆ ಹೇಳುವುದಾದರೆ ಪ್ರಾಣಿಜನ್ಯ ಕಸ್ತೂರಿಯಲ್ಲಿ ಕೆಲವೊಮ್ಮೆ ಲದ್ದಿಯ ವಾಸನೆ ಇರಬಹುದಾದರೂ ಈ ಸಸ್ಯದ ಬೀಜದ ಎಣ್ಣೆ ಅತ್ಯುತ್ಕೃಷ್ಟ ವೆಂದು ಪ್ರಸಿದ್ಧಿ ಪಡೆದಿದೆ. ಇದರ ಬೀಜಗಳಿಗೆ ಮಸ್ಕ್ ಸೀಡ್ಸ್ ಎಂದೇ ಹೆಸರಿದೆ. 'ಮಸ್ಕ್ ಸೀಡ್ಸ್' ಇದರ ವಾಣಿಜ್ಯ ನಾಮ! ಇದರಲ್ಲಿ ಅಂಬ್ರೆಟಲೈಡ್ ಎಂಬ ಕೀಟೋನ್ ಇರುವುದರಿಂದ ಎಣ್ಣೆಗೆ ಈ ಸುವಾಸನೆ. ಸಾಮಾನ್ಯ ಉಷ್ಣತೆಯಲ್ಲಿ ಗಟ್ಟಿಯಾದ ದ್ರವರೂಪದ ತೈಲದಲ್ಲಿ ಕೊಬ್ಬಿನಂಶ ಹೆಚ್ಚಿದೆ. ಇದರಲ್ಲಿ ಫಾರ್ನಿಸಾಲ್ ಎಂಬ ಒಂದು ಬಗೆಯ ಆಲ್ಕೋಹಾಲ್ ಗಣನೀಯ ಪ್ರಮಾಣದಲ್ಲಿದೆ. ತೈಲವು ಸುಗಂಧವಸ್ತುಗಳ ತಯಾರಿಯಲ್ಲಿ ವಿಶೇಷವಾಗಿ ಬಳಸಲ್ಪಟ್ಟು ಮೌಲ್ಯ ಪಡೆದುಕೊಂಡಿದೆ. ವಿದೇಶಗಳಲ್ಲಿ ಕಾಫಿಪುಡಿಯೊಂದಿಗೆ ಸುವಾಸನೆಗೋಸ್ಕರ ಮಿಶ್ರಣ ಮಾಡಲಾಗುತ್ತದೆ. ಮಾತ್ರವಲ್ಲದೇ ಏಲಕ್ಕಿಯ ಬದಲಿಗೂ ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ 25 ಬೀಜಗಳು 250 ರೂಪಾಯಿಗಳಿಗೆ ಮಾರಾಟವಾಗುತ್ತದೆ ಎನ್ನುತ್ತಾರೆ.
ಸಟಾ ಕಸ್ತೂರಿ, ರಣ ಬೆಂಡೆ, ಕಾಡು ಬೆಂಡೆ, ಕತ್ತೆ ಕಸ್ತೂರಿ ಬೆಂಡೆ, ಅಂಬ್ರೆಟ್ಟಿ ಬೆಂಡೆ, ಗಲು ಕಸ್ತೂರಿ, ಅಲಂಕಾರಿಕ ಬೆಂಡೆ ಎಂದೆಲ್ಲ ಕನ್ನಡದಲ್ಲಿ ಹೆಸರಿರುವ ಈ ಕಸ್ತೂರಿ ಬೆಂಡೆಯು ಮಾಲ್ವೇಸಿ ಕುಟುಂಬಕ್ಕೆ ಸೇರಿದೆ. ಸಸ್ಯ ಶಾಸ್ತ್ರೀಯವಾಗಿ ಅಬೆಲ್ಮೋಸ್ಕಸ್ ಮೊಸ್ಚಾಟಸ್ (Abelmoschus moschatus) ಎಂದು ಕರೆಸಿಕೊಳ್ಳುತ್ತದೆ.
ಕಸ್ತೂರಿ ಬೆಂಡೆಯು ನಾವು ತಿನ್ನುವ ಸಾಮಾನ್ಯ ಬೆಂಡೆಗೆ ನಿಕಟ ಸಂಬಂಧಿಯಾಗಿದ್ದು ವಾರ್ಷಿಕ ಪೊದೆಸಸ್ಯ ಹಾಗೂ ಮೂಲಿಕೆಯಾಗಿದೆ. ಬೀಜಗಳು ಕೀಟನಾಶಕ, ತಂಪುಕಾರಕ, ಖಿನ್ನತೆ ನಿವಾರಕ, ಅಪಸ್ಮಾರ ಹಾಗೂ ನರ ಮಂಡಲ ದುರ್ಬಲತೆಗೆ ಬಲವರ್ಧಕವಾಗಿವೆ. ಹಾವು ಕಡಿತಕ್ಕೆ ಪ್ರತಿವಿಷವಾಗಿದೆ. ಉಣ್ಣೆ ಬಟ್ಟೆಗಳನ್ನು ಕ್ರಿಮಿಕೀಟಗಳಿಂದ ರಕ್ಷಿಸುತ್ತದೆ. ಕಬ್ಬಿನ ಹಾಲು ಸೋಸಲು, ಬೆಲ್ಲ ತಯಾರಿಗೂ, ದೇಸೀಯ ಪಾನೀಯ ತಯಾರಿಗೂ ಬಳಸಲಾಗುತ್ತದೆ. ಇದರ ಕಾಂಡದಿಂದ ನಾರನ್ನೂ ಪಡೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರೈತರು ಇದರತ್ತ ಆಕರ್ಷಿತರಾಗುತ್ತಿದ್ದಾರೆ.
ಅನಾಮಿಕನಂತೆ ಅಲ್ಲಲ್ಲಿ ಹುಟ್ಟಿ ಬೆಳೆದು ಈ ನಿಸರ್ಗದ ಕೊಡುಗೆಯಾದ ಕಸ್ತೂರಿ ಬೆಂಡೆಯ ಬದುಕು ಎಷ್ಟೊಂದು ಸೊಗಸಾಗಿದೆಯಲ್ಲವೇ! ನೀವೂ ನಿಮ್ಮ ಸುತ್ತಮುತ್ತ ಕಸ್ತೂರಿ ಬೆಂಡೆ ಯನ್ನು ಕಾಣುವ ಪ್ರಯತ್ನ ಮಾಡಲೇ ಬೇಕಲ್ಲವೇ? ಕಾಣ ಸಿಕ್ಕಾಗ ಅದು ಮಾನವನಿಗೆ ಮಾಡುತ್ತಿರುವ ಉಪಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಲು ಮರೆಯದಿರಿ.
ಸರಿ ಮಕ್ಕಳೇ.. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ... ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************