-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 96

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 96

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 96
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

             

ಪ್ರೀತಿಯ ಮಕ್ಕಳೇ.. ಗಣಪತಿಯ ದೇಹ ಆನೆಯ ತಲೆಯನ್ನು ತಿರಸ್ಕರಿಸಬೇಕಾಗಿತ್ತು. ಆದರೆ ಹೇಗೆ ಸ್ವೀಕರಿಸಿದ ಎಂಬ ಪ್ರಶ್ನೆಯನ್ನು ಇಟ್ಟಿದ್ದೆ. ನಿಜ... ಒಂದು ಪರಕೀಯ ಜೀವಕೋಶ ನಮ್ಮ ದೇಹವನ್ನು ಪ್ರವೇಶಿತು ಎಂದಿಟ್ಟುಕೊಳ್ಳೋಣ. ತಕ್ಷಣ ನಮ್ಮ ರಕ್ಷಣಾ ಪಡೆಗೆ ಸುದ್ದಿ ಹೋಗುತ್ತದೆ. ತಕ್ಷಣ ಆ ಸ್ಥಳಕ್ಕೆ ಸೈನಿಕರನ್ನು ಕಳುಹಿಸಲಾಗುತ್ತದೆ. ಈ ಸೈನಿಕರು ಯಾರು ಎಂದು ನಾನು ಹೇಳಬೇಕಾಗಿಲ್ಲ. ಅವು ಬಿಳಿ ರಕ್ತಕಣಗಳೆಂದು ನಿಮಗೆ ಗೊತ್ತು. ಈ ಬಿಳಿ ರಕ್ತಕಣಗಳು ಆ ಕೋಶವನ್ನು ತನ್ನ ಸುಳ್ಳುಪಾದಗಳಿಂದ ಸುತ್ತುವರಿಯುತ್ತದೆ ಮತ್ತು ಅದನ್ನು ತನ್ನ ಕೋಶದೊಳಗೆ ಸೇರಿಸಿಕೊಂಡು ಬಿಡುತ್ತವೆ. ಹೀಗೆ ಒಂದು ಕೋಶ ಇನ್ನೊಂದು ಕೋಶವನ್ನು ನುಂಗಿ ಬಿಡುತ್ತದೆ. ಒಂದು ತರಹ ಕಾಳಿಂಗ ಸರ್ಪ ಇನ್ನೊಂದು ಹಾವನ್ನು ನುಂಗಿದ ಹಾಗೆ. ಹೀಗೆ ಕೋಶ ಕೋಶವನ್ನು ನುಂಗುವ ಕ್ರಿಯೆಯೇ phagocytosis. ಈ phagocytosis ಹುಟ್ಟಿದ್ದು ಗ್ರೀಕ್ ಶಬ್ದಗಳಾದ phagogein (ತಿನ್ನುವುದು) kytos ಗಳಿಂದ (ಕೋಶ). ಈ ನುಂಗಲ್ಪಟ್ಟ ಕೋಶ ಕೋಶ ದ್ರವ ದೊಳಗೆ ತೇಲುತ್ತಿರುವುದಿಲ್ಲ. ಬದಲಾಗಿ ಈ ಕೋಶ ಒಳಗೆ ಬರುತ್ತಿದ್ದಂತೆ ಅದರ ಸುತ್ತಲೂ ಒಂದು ಪೊರೆ ರಚನೆಯಾಗುತ್ತದೆ. ಈ ಪೊರೆಯಿಂದ ಆವೃತವಾದ ಈ ರಚನೆಯೇ phagosome. ಇದು ಜೀವಿಗೆ ಹೊಟ್ಟೆ ಇರುತ್ತದಲ್ಲ ಹಾಗೆ ಕೋಶದ ಹೊಟ್ಟೆ. ಇದೇ ಸಮಯಕ್ಕೆ ಲೈಸೋಸೋಮ್ ಎಂಬ ಕಿಣ್ವಗಳ ಲಕೋಟೆ ತನ್ನಲ್ಲಿರುವ ಕಿಣ್ವಗಳನ್ನು (enzymes) ತಂದು ಈ ಹೊಟ್ಟೆಯ ಒಳಗೆ ಸುರಿಯುತ್ತದೆ. ಆಗ ಆ ಕಿಣ್ವಗಳು ಈ ಕೋಶದ ಮೇಲೆ ವರ್ತಿಸಿ ಅದನ್ನು ಜೀರ್ಣಿಸುತ್ತವೆ. ಹೊಟ್ಟೆಯ ಒಳಗೆ ಹೋದ ಮೇಲೆ ಆಹಾರ ಒಂದು ರಾಸಾಯನಿಕ. ಮತ್ತು ಜೀರ್ಣಕ್ರಿಯೆ ಒಂದು ರಾಸಾಯನಿಕ ಕ್ರಿಯೆ. ಇದು ಒಂದು ತರಹ ಅಗಸ್ತ್ಯರು ವಾತಾಪಿಯನ್ನು ತಿಂದು ಹೊಟ್ಟೆಯ ಮೇಲೆ ಕೈಯಾಡಿಸಿ ವಾತಾಪಿ ಜೀರ್ಣೋಭವ ಎಂದ ಹಾಗೆ.

ಹೀಗೆ ಒಂದು ಯೂಕ್ಯಾರಿಯೋಟಿಕ್ ಕೋಶ ಅನೇಕ ಪ್ರೋಕ್ಯಾರಿಯೋಟಿಕ್ ಕೋಶಗಳನ್ನು ತಿಂದು ಅನೇಕ organelles ಹೊಂದಿತು ಎನ್ನುವುದಾದರೆ ಅವುಗಳೆಲ್ಲಾ ಜೀರ್ಣಿವಾಗಿರಬೇಕಲ್ಲಾ ಎಂದರೆ ಅದು ಹಾಗಲ್ಲ. ಏಕೆಂದರೆ ಇದು ವಿಕಾಸದ ಹಾದಿಯಲ್ಲಿ ನಡೆದು ಬಂದ ಒಂದು ಪ್ರಕ್ರಿಯೆ. ಇದಕ್ಕೆ ಉದಾಹರಣೆಗಳು ನಮಗೆ ಈಗಲೂ ಸಿಗುತ್ತಲೇ ಹೋಗುತ್ತವೆ. ಉದಾಹರಣೆಗೆ ನಿಮಗೆ ಶಿಕ್ಷಕರು ಹೇಳುತ್ತಾರೆ ಅನಾಫಿಲಿಸ್ ಸೊಳ್ಳೆಗಳು ಮಲೇರಿಯಾ ಹರಡುತ್ತವೆ, ಏಡಿಸ್ ಸೊಳ್ಳೆ ಡೆಂಗ್ಯೂವನ್ನು ಹರಡಿದರೆ ಕ್ಯೂಲೆಕ್ಸ್ ಆನೆಕಾಲು ರೋಗವನ್ನು (filariasis) ಹರಡುತ್ತವೆ. ರೋಗ ಹರಡುವುದಾದರೆ ಒಂದೇ ಸೊಳ್ಳೆ ಎಲ್ಲಾ ರೋಗಗಳನ್ನೂ ಹರಡಬಹುದಲ್ಲ? ಆದರೆ ಹಾಗಾಗುತ್ತಿಲ್ಲ. ಪ್ರತಿಯೊಂದಕ್ಕೂ ಒಂದೊಂದು ವಾಹಕ. ಯಾಕೆ ಹೀಗೆ? ಈ ಸೊಳ್ಳೆಗಳು ರಕ್ತವನ್ನು ಹೀರುತ್ತವೆ. ರಕ್ತದಲ್ಲಿ ಆ ರೋಗಾಣುಗಳಿರುತ್ತವೆ ಅದು ಮಲೇರಿಯಾ ಉಂಟುಮಾಡುವ ಪ್ಲಾಸ್ಮೋಡಿಯಂ ಇರಬಹುದು, ಡೆಂಗ್ಯೂಗೆ ಕಾರಣವಾಗುವ DENV ವೈರಸ್ ಇರಬಹುದು ಅಥವಾ ಆನೆಕಾಲು ರೋಗವುಂಟು ಮಾಡುವ ಫೈಕೇರಿಯಾದ ಮೊಟ್ಟೆಗಳಿರಬಹುದು. ಈ ರಕ್ತವನ್ನು ಸೊಳ್ಳೆ ಜೀರ್ಣಿಸಿಕೊಳ್ಳುತ್ತವೆ. ಆದರೆ ಅನಾಫಿಲಿಸ್ ಸೊಳ್ಳೆ ಪ್ಲಾಸ್ಮೋಡಿಯಂ ಕೋಶಗಳನ್ನು ಜೀರ್ಣಿಸಿಕೊಳ್ಳಲಾರದು. ಅವು ಅನಾಫಿಲಿಸ್ ನ ರಕ್ತವನ್ನು ಸೇರುತ್ತವೆ. ಅಲ್ಲಿಂದ ಸೊಳ್ಳೆಯ ಎಂಜಲಿಗೆ (saliva). ಅಲ್ಲಿಂದ ಮನುಷ್ಯನ ರಕ್ತಕ್ಕೆ. ಹಾಗೆಯೇ ಫೈಲೇರಿಯಾ ಲಾರ್ವಾ ಮತ್ತು DENV ವೈರಸ್‌ಗಳು. ನೋಡಿ ವಿಕಾಸದ ಹಾದಿಯಲ್ಲಿ ಎಷ್ಟೇ ಬದಲಾವಣೆಗಾಗಿರಲಿ ಪ್ರಕೃತಿ ತನ್ನ ಕರುಹನ್ನು ಬಿಟ್ಟು ಹೋಗಿರುತ್ತದೆ. ಮನುಷ್ಯನ ದೊಡ್ಡ ಕರುಳಿನ‌ ಆರಂಭದಲ್ಲಿರುವ ಅಪೆಂಡಿಕ್ಸ್ ಮಾನವನ ಸಸ್ಯಾಹಾರಿ ಮೂಲದ ಬಗ್ಗೆ ಚಿಂತಿಸುವಂತೆ ಮಾಡುತ್ತದೆ.

ಆರಂಭದಲ್ಲಿ ಪರಕೀಯವಾಗಿದ್ದ ಸಯನೋಬ್ಯಾಕ್ಟರ್ ಅಥವಾ ಮಿಥೇನ್ ಬ್ಯಾಕ್ಟೀರಿಯಾಗಳು ಕೋಶಗಳಿಂದ ಜೀರ್ಣವಾಗದೇ ಇರುವಂತಹ ಉಪಾಯವನ್ನು ಈ ಪ್ರಕೃತಿ ರೂಪಿಸಿತು. ಇದು ಹೀಗೆಯೇ ಮುಂದುವರಿಯುತ್ತಾ ಈ ಎಲ್ಲಾ ಆರ್ಗನೆಲ್ಲುಗಳು ಕೋಶದ ಭಾಗಗಳಾಗಿ ಬಿಟ್ಟವು. ಮೊನ್ನೆ ಮೊನ್ನೆ ಹೊರಗಿನವನಾಗಿದ್ದ ವ್ಯಕ್ತಿ ನಿಮ್ಮ ಅಕ್ಕನನ್ನು ಮದುವೆಯಾಗುತ್ತಿದ್ದಂತೆ ನಿಮ್ಮ ಭಾವನಾಗಿ ನಿಮ್ಮ ಮನೆಯ ಸದಸ್ಯನಾದಂತೆ. ಇಲ್ಲಿ ಕೋಶವು ಆ ಬ್ಯಾಕ್ಟೀರಿಯಾ ತನಗೆ ಉಪಯೋಗಕ್ಕೆ ಬರುತ್ತದೆ ಎಂದು ತಿಳಿಯುತ್ತಿದ್ದಂತೆ ತನ್ನ ಭಾಗ ಎಂದು ಒಪ್ಪಿಕೊಂಡುಬಿಟ್ಟಿತು ನೋಡಿ. ಆಪತ್ತಿಗಾದವನೆ ನೆಂಟ ಎಂಬ ಗಾದೆ ಇದೆ ತಾನೆ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************




Ads on article

Advertise in articles 1

advertising articles 2

Advertise under the article