-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 181

ಸ್ಫೂರ್ತಿಯ ಮಾತುಗಳು : ಸಂಚಿಕೆ - 181

ಸ್ಫೂರ್ತಿಯ ಮಾತುಗಳು : ಸಂಚಿಕೆ - 181
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                     

       
ನನಗೆ ಬಿಳಿ ಗುಲಾಬಿಯ ಗಿಡ ಬೇಕೆಂದು ಆಸೆಯಾಯಿತು. ನನ್ನ ಆಸೆಯನ್ನು ನಾನು ಯಾರಿಗೂ ಹೇಳಿರಲಿಲ್ಲ. ಅದೇ ದಿನ ಸಂಜೆ ಬಂಧುವೊಬ್ಬರು ಒಂದು ಬಿಳಿ ಗುಲಾಬಿ ಗಿಡವನ್ನು ತಂದು ನನಗೆ ಕೊಟ್ಟರು. ನನಗೆ ಬಹಳ ಖುಷಿಯಾಯಿತು. ನಾನು ತಕ್ಷಣಕ್ಕೆ ಅತ್ಯಾನಂದದಿಂದ “ಧನ್ಯವಾದಗಳು” ಎಂದೆ. ಆ ಗಿಡವನ್ನು ನಾನು ಹಾಗೆಯೇ ಎತ್ತಿ ಒಳಗಿಡುತ್ತಿದ್ದರೆ ಅವರು ಏನು ಊಹಿಸುತ್ತಿದ್ದರೋ ಏನೋ! ಆದರೆ ಧನ್ಯವಾದ ಹೇಳುವುದು ನನ್ನ ಆದ್ಯತಾ ಕೆಲಸ. ಇದರಿಂದ ಅವರಿಗೆ ಸಂತಸವಾಗಿಯೇ ಆಗುತ್ತದೆಂಬುದು ನಿಸ್ಸಂಶಯ.

ನಾವು ಜಗತ್ತಿನಲ್ಲಿ ಬದುಕಿ ಬಾಳಲು ನಮಗೆ ಎಲ್ಲರ ಕೊಡುಗೆಗಳು ಬೇಕು. ದೇಶೀಯರು ಮಾತ್ರವಲ್ಲ, ವಿದೇಶಿಯರ ನೆರವೂ ನಮಗೆ ಬೇಕಾಗುತ್ತದೆ. ಇಂಧನಗಳು, ಔಷಧಿಗಳು, ನಾನಾ ಯುದ್ಧೋಪಕರಣಗಳು ವಿದೇಶದಿಂದಲೇ ನಮಗೊದಗುವುದು. ನಮ್ಮ ಅನೇಕ ಉತ್ಮನ್ನಗಳನ್ನು ವಿದೇಶಿಯರೂ ಖರೀದಿಸಿ ಸಹಕರಿಸುವರು. ಸಹಕರಿಸಿದವರಿಗೆ ಕೃತಜ್ಞತೆಗಳನ್ನು “ಧನ್ಯವಾದ” ಎಂಬ ಪದದಲ್ಲಿ ವ್ಯಕ್ತಪಡಿಸಲೇ ಬೇಕಾದುದು ನಮ್ಮ ಧರ್ಮ.

ನಾವು ನಿತ್ಯವೂ ಧನ್ಯವಾದ ಹೇಳಬೇಕಾದವರು ಅನೇಕರಿದ್ದಾರೆ. ದೇವರು, ಭೂಮಿ, ತಂದೆ ತಾಯಿ, ಹಿರಿಯರು, ಗುರುಗಳು, ಸಂಬಂಧಿಗಳು, ಸ್ನೇಹಿತರು, ನೆರೆಕರೆಯವರು, ವ್ಯಾಪಾರಿಗಳು, ರೈತರು, ಯೋಧರು, ಅಧಿಕಾರಿಗಳು, ವೈದ್ಯರು, ಚಾಲಕರು, ಕಾರ್ಮಿಕರು ಇವರೆಲ್ಲರ ಕಾರಣದಿಂದಾಗಿಯೇ ನಾವು ಬದುಕಿದ್ದೇವೆ. ಮಲಗುವ ಮುನ್ನ ಆ ದಿನ ನೆರವಾದ ಹತ್ತು ಮಂದಿಯನ್ನಾದರೂ ನೆನಪಿಸಿ ಧನ್ಯವಾದಗಳನ್ನು ಸಲ್ಲಿಸಿದರೆ ಅದು ಭಗವಂತನಿಗೂ ಪ್ರಿಯವಾಗುತ್ತದೆ. ನಿತ್ಯ ನೆನಪಿಸಲು ತಂದೆ, ತಾಯಿ ಇದ್ದೇ ಇರುತ್ತಾರೆ. ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ, ತಾಯಿ ಮಕ್ಕಳಿಗೆ ದಿನಾ ಕೃತಜ್ಞತೆ ಸ್ಮರಣೆ ಮಾಡುವುದು ಔಚಿತ್ಯಪೂರ್ಣವಾಗಿದೆ. 
ನಾವು ಕೃತಜ್ಞರಾಗಿರಬೇಕಾದವರ ಪಟ್ಟಿಯಲ್ಲಿ ಕೆಲಸದವರು ಕೂಡಾ ಸೇರಿರುತ್ತಾರೆ. ಭಿಕ್ಷುಕನೊಬ್ಬ ಮನೆಗೆ ಬಂದಾಗ ಅವನಿಗೆ ಧನ್ಯವಾದ ಹೇಳಬೇಕೇ? ಹೌದು ಅವನಿಗೂ ಧನ್ಯವಾದ ಹೇಳಬೇಕು. ಅವನಿಗೂ ಆತ್ಮವಿದೆ. ಆ ಆತ್ಮ ನಮ್ಮ ಆತ್ಮಕ್ಕೆ ತುಲ್ಯವಾಗಿದೆ. ಆತ್ಮವೆಂದರೆ ಪರಮಾತ್ಮ. ಭಿಕ್ಷುಕನಿಗೆ ನಾವು ನೀಡುವ ಭಿಕ್ಷೆಯಿಂದ ಅವನ ಆತ್ಮ ತೃಪ್ತವಾಗದಿದ್ದರೂ ಧನ್ಯವಾದ ಹೇಳಿದಾಗ ಅವನ ಮನದಲ್ಲಿ ನಮ್ಮ ಬಗ್ಗೆ ಗೌರವ ಮೂಡುತ್ತದೆ. ಇತರರ ಗೌರವ ಪ್ರೀತಿಗಳಿಸುವುದೇ ನಿಜವಾದ ಬದುಕು.

ದಿನಾ ಧನ್ಯವಾದ ಹೇಳಲು ಹತ್ತು ಜನರನ್ನು ಎಲ್ಲಿಂದ ಹುಡುಕಲಿ ಎಂದು ನನ್ನನ್ನು ಪ್ರಶ್ನಿಸಿದವರೂ ಇದ್ದಾರೆ ಅವರಿಗೆ ನಾನು ಕೊಟ್ಟ ಸಲಹೆಯು ನಿಮಗೂ ಪ್ರಯೋಜನ ಕರವಾಗಬಹುದೇನೋ! ಬೆಳಗ್ಗೆ ಎದ್ದೊಡನೆ ಹಲ್ಲುಜ್ಜುತ್ತೇವೆ. ಪೇಸ್ಟ್‌ ತಯಾರಕರು, ಮಾರಾಟಗಾರರು, ಮನೆಗೆ ಖರೀದಿಸಿ ತಂದವರು, ಬ್ರಶ್‌ ತಯಾರಕರು, ವಿತರಕರು, ಖರೀದಿಸಿತಂದವರು. ಮುಖತೊಳೆದು ಒರೆಸಲು ಬಳಸಿದ ಬಟ್ಟೆಗೆ ಬೇಕಾದ ಹತ್ತಿಯನ್ನು ನೆಟ್ಟು, ನೀರು - ಗೊಬ್ಬರಗಳನ್ನು ಹಾಕಿ ಬೆಳೆಸಿದ ರೈತರು, ಗಿಡದ ಬೆಳವಣಿಗೆಗ ಕಾರಣನಾದ ಸೂರ್ಯ, ರೋಗ ಕೀಟಗಳು ಬಾರದಂತೆ ನೆರವಾದವರು, ಅದನ್ನು ಕೊಯಿದು ತಂದ ಕಾರ್ಮಿಕ, ಹತ್ತಿಯಿಂದ ನೂಲು ತೆಗೆದ ಬಣ್ಣ ಹಚ್ಚಿ ವಸ್ತ್ರವನ್ನಾಗಿ ನೇಯ್ದ ನೇಕಾರ, ಮಾರಾಟ ವ್ಯವಸ್ಥೆ ಹೀಗೆ ಲೆಕ್ಕ ಹಾಕಿದರೆ ದಂತ ಮಾರ್ಜನವೊಂದರಲ್ಲೇ ನಮಗೆ ನೆರವಾಗುವವರು ನೂರಾರು ಮಂದಿ. ಇದೆಲ್ಲದರಲ್ಲೂ ನಮ್ಮ ಕೊಡುಗೆ ಶೂನ್ಯ ತಾನೇ? ಆದುದರಿಂದ ನಮ್ಮ ದೈನಂದಿನ ಬದುಕಿನಲ್ಲಿ ಹಾದು ಹೋಗುವ ಸಾವಿರಾರು ಜನರಿದ್ದಾರೆ. ಆದರೆ ಅವರು ಯಾರೂ ನಮ್ಮ ಗಮನಕ್ಕೆ ಬರದೆ ಹೋಗುವುದು ತಪ್ಪಲ್ಲವೇ..? 

ನಮ್ಮ ದೇಹದ ಸೊಗಸಿಗೆ, ಆರೋಗ್ಯಕ್ಕೆ, ರಕ್ಷಣೆಗೆ ಕಾರಣರು ನಾವೇ ಅಲ್ಲ. ಅವರೆಲ್ಲರೂ ಇನ್ಯಾರೋ ಎಂದು ತಿಳಿದಿರೊಣ. ಅವರನ್ನೂ ನಮ್ಮವರೆಂದು ತಿಳಿದು ಧನ್ಯವಾದ ಹೇಳೋಣ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************


Ads on article

Advertise in articles 1

advertising articles 2

Advertise under the article