ನಿಷ್ಪಾಪಿ ಸಸ್ಯಗಳು : ಸಂಚಿಕೆ - 119
Wednesday, September 10, 2025
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 119
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ದೂರದಲ್ಲಿದ್ದ ಪರೀಕ್ಷೆಗಳು ಹತ್ತಿರ ಹತ್ತಿರ ಬಂದು ಇದೀಗ ಇಂದು ನಾಳೆ ಆರಂಭಗೊಳ್ಳುತ್ತಿವೆಯಲ್ಲವೇ? ಎಲ್ಲರಿಗೂ ಪರೀಕ್ಷಾ ಹಬ್ಬಕ್ಕೆ ಶುಭಾಶಯಗಳು.
ಈ ನಡುವೆ ಸ್ವಲ್ಪ ವಿರಾಮ ತೆಗೆದುಕೊಂಡು
ಇಂದು ನಾವು ವೆಂಕಜ್ಜಿಯ ಮನೆಗೆ ಹೋಗೋಣ ಬನ್ನಿ. ವೆಂಕಜ್ಜಿ ಕತೆಗಳ, ಜನಪದ ಹಾಡುಗಳ ಕಣಜವೆಂದೇ ಹೆಸರು ಪಡೆದಿದ್ದಾರೆ.
ರಾಜು: ಓ...ಹೋಗೋಣ ಮೇಡಮ್... ನಾನು ರೆಡಿ.
ಶಿಕ್ಷಕಿ: ಬನ್ನಿ ಹೋಗೋಣ. ಹೋಗ್ತಾ ಇದ್ದಂತೆ ನಿಮಗೆ ನಾನೊಂದು ಒಗಟು ಕೇಳ್ತೇನೆ. ಯಾರು ಉತ್ತರಿಸುವಿರಾ ಅವರಿಗೊಂದು ಬಹುಮಾನವಿದೆ.
ರಮ್ಯ: ಕೇಳಿ ಮೇಡಮ್... ಕತೆ ಕೇಳುತ್ತಿದ್ದರೆ ನಡೆದುದು ಗೊತ್ತೇ ಆಗುವುದಿಲ್ಲ. ಸುಸ್ತಾಗುವುದೇ ತಿಳಿಯುವುದಿಲ್ಲ.
ಶಿಕ್ಷಕಿ: ಸರಿ ಮಕ್ಕಳೇ, ತುಂಬಾ ಸುಲಭದ ಕತೆ. ನನಗೊಂದು ಅಜ್ಜಿಯಿದ್ದಾಳೆ. ಆಕೆಯ ಮೈತುಂಬಾ ನಕ್ಷತ್ರದ ಸೀರೆ. ಏನದು ಹೇಳಿ.
ರಾಜು: ಒಹ್! ಅದೇನದು.. ಅಷ್ಟು ಚಂದದ ವಸ್ತು?
ರೋಶನ್ : ಅದು ಸೌತೇ ಕಾಯಿಯಾ ಮೇಡಮ್?
ಶಿಕ್ಷಕಿ: ಅಲ್ಲ...ಸೌತೇಕಾಯಲ್ಲ.
ರಮ್ಯಾ : ಗೊತ್ತಾಗ್ತಿಲ್ಲ ಮೇಡಮ್.. ನಾವು ಸೋತೆವು.
ಶಿಕ್ಷಕಿ : ಹ್ಹಾಂ ರಮ್ಯಾ. ನಾನು ಹೇಳಿದ ಒಗಟಿಗೆ ಉತ್ತರ 'ಅನಾನಸು."
ರಾಜು : ಓ..ಹೌದಲ್ಲ..!
ರೋಶನ್ : ಮೇಡಮ್,ಇನ್ನೊಂದು ಒಗಟು ಹೇಳಿ.. ನಾವು ಖಂಡಿತ ಬಿಡಿಸ್ತೇವೆ.
ಶಿಕ್ಷಕಿ : ಸರಿ ಮಕ್ಕಳೇ, ನನಗೊಂದು ಅಜ್ಜಿ ಇದ್ದಾಳೆ.. ದಿನವೂ ಬೂದಿ ಹಚ್ಕೊಳ್ತಾಳೆ..
ರಾಜು: ಹೋ.. ಇನ್ನೊಂದು ಅಜ್ಜಿ ಬಂದ್ರು.. ಅದೇನಪ್ಪಾ!
ರಮ್ಯಾ: ದಿನಾ ಬೂದಿ ಹಚ್ಚೋ ವಿಚಾರ ಏನದು...!
ರೋಶನ್ : ನನಗೊತ್ತಾಯ್ತು ಗೊತ್ತಾಯ್ತು...
ರಾಜು : ಹೌದಾ..! ಹೇಳು ಹೇಳು
ರೋಶನ್ : ಅದು ಬೂದುಗುಂಬಳ ಕಾಯಿ
ಶಿಕ್ಷಕಿ : ಸರಿಯಾದ ಉತ್ತರ. ರೋಶನ್.. ನಿನಗೊಂದು ಬಹುಮಾನ ಗ್ಯಾರಂಟಿಯಾಯ್ತು.
ರಮ್ಯಾ : ಮೇಡಮ್.. ಇನ್ನೊಂದು ಒಗಟು ಹೇಳಿ ಪ್ಲೀಸ್..
ರಾಜು: ಮುಂದಿನ ಒಗಟಿಗೆ ನಾನೇ ಉತ್ತರ ಹೇಳುವೆ. ನೋಡ್ತಾ ಇರಿ.
ಶಿಕ್ಷಕಿ : ಹ್ಹಾಂ ಮಕ್ಕಳೇ, ಹೇಳ್ತೇನೆ... ನನಗೊಂದು ಅಜ್ಜಿ ಇದ್ದಾಳೆ.. ಮೈ ತುಂಬಾ ಕಜ್ಜಿ.
ರೋಶನ್ : ಮೇಡಮ್ ಗೆ ತುಂಬಾ ಜನ ಅಜ್ಜಿಯರಿದ್ದಾರೆ..!
ರಮ್ಯಾ : ಎಲ್ಲಿದ್ದೀಯ ರಾಜು... ಈ ಮೈತುಂಬಾ ಕಜ್ಜಿಯ ಅಜ್ಜಿ ಗೊತ್ತಾ?
ರಾಜು: ಅದೇ ಯೋಚಿಸ್ತಿದ್ದೇನೆ.. ಯಾವಜ್ಜಿಯದು? ಅದೂ ಕಜ್ಜಿ ಹೊತ್ತ ಅಜ್ಜಿ ..!ನನಿಗೊತ್ತಿಲ್ಲ ಮೇಡಮ್.. ನಾನು ಸೋತೆ.
ಶಿಕ್ಷಕಿ: ಸೋತರೆ ಪರವಾಗಿಲ್ಲ ರಾಜು. ನಾನಂತೂ ಉತ್ತರ ಹೇಳೋದಿಲ್ಲ. ಈ ಬಾರಿ ನೀವೇ ಪ್ರಯತ್ನಿಸಬೇಕು. ನಾವು ಮಾತಾಡ್ತ ವೆಂಕಜ್ಜಿ ಮನೆ ಮುಟ್ಟಿದೆವು ನೋಡಿ...
ಎಲ್ಲರೂ : ವೆಂಕಜ್ಜಿ ನಮಸ್ತೆ
ವೆಂಕಜ್ಜಿ : ಎಲ್ಲರಿಗೂ ಒಳ್ಳೆಯದಾಗಲಿ ಮಗ.
ಶಿಕ್ಷಕಿ: ಹೇಗಿದ್ದೀರಜ್ಜಿ. ನಾವು ನಿಮ್ಮಿಂದ ಕತೆ, ಹಾಡು ಕೇಳಲೆಂದೇ ಬಂದೆವು.
ವೆಂಕಜ್ಜಿ: ಅದಕೇನಂತೆ. ಮೊದಲು ಸ್ವಲ್ಪ ಬಾಯಾರಿಕೆ ತಗೊಳ್ಳಿ.
ರೋಶನ್ : ಅಜ್ಜೀ.. ನಮಗೆ ಮೇಡಮ್ ಒಂದು ಒಗಟು ಹೇಳಿದ್ದಾರೆ. ಉತ್ತರ ಗೊತ್ತಿಲ್ಲಜ್ಜಿ.. ಒಗಟೇನು ಗೊತ್ತಾ ಅಜ್ಜಿ. 'ನನಗೊಂದು ಅಜ್ಜಿ ಇದ್ದಾಳೆ. ಮೈ ತುಂಬಾ ಕಜ್ಜಿ'
ರಮ್ಯಾ: ಹಾಗಲ ಕಾಯಾ! ಹಾಗಂದರೇನಜ್ಜಿ.
ವೆಂಕಜ್ಜಿ: ಹಾಗಲಕಾಯಿ ಅಂದರೆ ಒಂದು ಜನಪ್ರಿಯ ತರಕಾರಿ ಮಕ್ಕಳೇ. ಇಲ್ಲಿ ಬನ್ನಿ ನನ್ನ ಜೊತೆ. ಅಲ್ಲಿ ಅಂಗಳದ ಮೂಲೆಯಲ್ಲಿರುವ ಒಂದು ದಾಸವಾಳದ ಗಿಡದಲ್ಲೇ ಹಾಗಲ ಹಬ್ಬಿರುವುದನ್ನು ನೋಡಿ.
ರಾಜು : ತುಂಬಾ ಸುಂದರವಾಗಿದೆ ಬಳ್ಳಿ! ನಾಜೂಕಾಗಿದೆ ಅಲ್ವಾ?
ರಮ್ಯಾ: ಮುದ್ದಾಗಿದೆ! ಅದು ಸರಿ.. ಆದ್ರೆ ಅಜ್ಜಿ.. ನಮ್ಮ ಒಗಟಿಗೆ ಉತ್ತರ?
ವೆಂಕಜ್ಜಿ: ಮಕ್ಕಳೇ, ಬಳ್ಳಿಯ ನಡುವೆ ಹಸಿರು ಹಸಿರಾದ ಕಾಯಿಗಳನ್ನು ಗಮನಿಸಿದಿರಾ? ಅದರ ಮೇಲ್ಮೈ ನುಣುಪಾದ ಗಂಟುಗಳಂತಹ , ಏರಿಳಿತಗಳ ಸಣ್ಣ ದೊಡ್ಡ ಸಾಲುಗಳೇ ರೂಪುಗೊಂಡಿವೆ ನೋಡಿದಿರಾ? ಉಳಿದ ಯಾವುದೇ ತರಕಾರಿಗಳ ಮೇಲ್ಮೈ ಹೀಗಿಲ್ಲ. ಅದಕೇ ಮೈ ತುಂಬಾ ಕಜ್ಜಿ ಅಂತ ಅನ್ನೋದು.
ಶಿಕ್ಷಕಿ : ಈಗ ತಿಳೀತಾ ಮಕ್ಕಳೇ, ಇದರ ಸರಿಯಾದ ಪರಿಚಯ ಆಗಬೇಕಾದರೆ ಎಲ್ಲರೂ ಒಂದೊಂದು ತುಂಡು ಎಲೆ ಜಗಿಯಿರಿ.
ರಮ್ಯಾ : ಅಬ್ಬಾ!! ಕಹಿ!!
ರೋಶನ್: ಕಹಿ.. ಕಹೀ...
ವೆಂಕಜ್ಜಿ: ಮಕ್ಕಳೇ, ಎಷ್ಟೇ ಕಹಿಯಾದರೂ ಇದೊಂದು ತರಕಾರಿ ಹಾಗೆಯೇ ಔಷಧಿ ಸಸ್ಯವೂ ಆಗಿದೆ. ಇಲ್ಲಿ ನೋಡಿ ಒಂಟಿಯಾಗಿರುವ ಹಳದಿ ಹೂಗಳು. ಇದು ಗಂಡು ಹೂ. ಹೆಣ್ಣು ಹೂವಿನಲ್ಲಿ ಹಾಗಲದ ಮಿಡಿ ಗಮನಿಸಿ.
ರಮ್ಯಾ: ಎಲೆಯ ರಚನೆಯೂ ವಿಶಿಷ್ಟ ವಾಗಿದೆ. ನಮ್ಮ ಅಂಗೈ ಮತ್ತು ಬೆರಳುಗಳಿದ್ದಂತೆ ಎಲೆಯ ನಡುವೆ ಮೂರ್ನಾಲ್ಕು ಸೀಳುಗಳಿವೆ.
ವೆಂಕಜ್ಜಿ: ಬಳ್ಳಿಯ ತುದಿಗಳನ್ನು ಗಮನಿಸಿ. ತೆಳುವಾದ ಕೊಂಡಿಯಾಗಿ ಉದ್ದಕ್ಕೆ ಬೆಳೆದು ಆಧಾರವನ್ನು ಹಿಡಿಯಲು ಹವಣಿಸಿ ಮೇಲೇರುತ್ತದೆ.
ಶಿಕ್ಷಕಿ: ಇದೊಂದು ವಾರ್ಷಿಕ ಸಸ್ಯ. ತೋಟ ಕೈತೋಟದ ತರಕಾರಿ. ಇತರೆಲ್ಲ ಹಣ್ಣುಗಳಿಗಿಂತ ಅತ್ಯಧಿಕ ಕಹಿ. 4 ರಿಂದ12 ಸೆಂ.ಮೀ ಉದ್ದದ ಎಲೆಗಳು ಪರ್ಯಾಯವಾಗಿರುತ್ತವೆ.
ವೆಂಕಜ್ಜಿ: ಹಾಗಲವನ್ನು ಕೃಷಿ ಮಾಡಲು ತುಂಬಾ ಸುಲಭ ಮಕ್ಕಳೇ, ನೀವೂ ಪ್ರಯತ್ನಿಸಬಹುದು. ಕಾಡಿನಲ್ಲಿ ಕಾಡು ಹಾಗಲ ಅಂತಲೂ ಒಂದು ಜಾತಿ ಇದೆ. ತುಂಬಾ ಕಹಿ ಕಾಯಿ. ಅದು ನೋಡಲು ದೊಡ್ಡ ರುದ್ರಾಕ್ಷಿ ಯಂತಿದೆ. ಆದ್ದರಿಂದ ರುದ್ರಾಕ್ಷಿ ಹಾಗಲ ಅಂತಾನೇ ಕರೆಯುವರು. ಇಲ್ಲಿರುವುದು ನಮ್ಮ ಹಿರಿಯರು ಮನೆಗಳಲ್ಲಿ ಸಾಕುತ್ತಾ ಬೆಳೆದು ಬಂದ ತಳಿ. ಆದರೂ ಹಾಗಲದಲ್ಲಿ 60 ಜಾತಿಗಳಿವೆಯಂತೆ!
ರಾಜು: ಮೇಡಮ್, ಅಲ್ಲೊಂದು ಹಾಗಲ ಕೆಂಪು ಕೆಂಪಾಗಿದೆ. ಬಹುಶಃ ಹಣ್ಣಾಗಿದೆ. ನೋಡಿದರೆ ತಿನ್ನಬೇಕನಿಸ್ತಾ ಇದೆ.
ರಮ್ಯಾ: ರಾಜೂ... ಹಾಗಲ ಕಹಿ ಎಂದು ಮರ್ತೇ ಬಿಟ್ಟೆಯಾ!
ವೆಂಕಜ್ಜಿ: ಇಲ್ಲ ಇಲ್ಲ. ಕಾಯಿ ಮಾತ್ರ ಕಹಿ. ಕಾಯಿ ಬಲಿತು ಹಣ್ಣಾದರೆ ಒಳಭಾಗದಲ್ಲಿರುವ ಚಪ್ಪಟೆ ಬೀಜಗಳಿಗೆ ಆವರಿಸಲ್ಪಟ್ಟ ತಿರುಳು ಸಿಹಿಯಾಗಿಯೇ ಇರುತ್ತದೆ. ತಿನ್ನಬಹುದು. ಆದರೆ ಬೀಜ ತಿನ್ನಬಾರದು.
ರೋಶನ್: ಅಷ್ಟು ಕಷ್ಟ ಪಟ್ಟು ನಾನೊಂದು ಹಣ್ಣು ಹಾಗಲವನ್ನು ಕೊಯ್ದೆ. ಆದರೆ ಅದರ ತುದಿ ಒಡೆದು ಮೇಲ್ಭಾಗಕ್ಕೆ ಸುರುಳಿ ಸುತ್ತಿದೆ. ಒಳಭಾಗದಲ್ಲಿ ಹುಳುಗಳಾಗಿವೆ!
ಶಿಕ್ಷಕಿ: ರೋಶನ್.. ಕಹಿಯಲ್ಲೂ ಹುಳುಗಳಾಗುತ್ತವೆ... ಗಾಂಧಾರಿ ಮೆಣಸಿನಂತಹ ಖಾರದಲ್ಲೂ ಹುಳುಗಳಾಗುತ್ತವೆ. ಪ್ರಕೃತಿಯಲ್ಲಿ ಒಂದಕ್ಕೊಂದು ಪೂರಕವಾಗಿ ಬದುಕು ಇರುತ್ತದೆ.
ವೆಂಕಜ್ಜಿ: ನನ್ನ ಮಗ ತೋಟದಲ್ಲಿ ಹಾಗಲ ಕಾಯಿಯ ಚಪ್ಪರವನ್ನೇ ಮಾಡಿದ್ದಾನೆ ಟೀಚರ್.... ಬಣ್ಣ, ಆಕಾರ, ಗಾತ್ರ ಬಹಳ ಚೆನ್ನಾಗಿದೆ. ಅನುಷ್ಕಾ F1 ತಳಿಯಂತೆ! ಒಂದೊಂದು ಬಳ್ಳಿಯಲ್ಲಿ ಕಡಿಮೆ ಎಂದರೂ 3 _ 4 ಕೆ.ಜಿ ಕಾಯಿಗಳಾಗ್ತವೆ. ಸಸಿ ಹಾಕಿ ಒಂದು ತಿಂಗಳು 10 ದಿನಕ್ಕೇ ಕೊಯ್ಲಿಗೆ ಸಿಗ್ತದೆ. 8 _ 10 ಕೆ.ಜಿ ಕಾಯಿಗೆ 500 ರ ಮೇಲೆಯೇ ಕ್ರಯವಿರುತ್ತದಂತೆ. ರೋಗ ಬರುವುದು ಬಹಳ ಕಡಿಮೆ.
ಶಿಕ್ಷಕಿ: ಹೌದಾ! ಹಾಗಲಕಾಯಿ ವಿಶ್ವದ ಪ್ರಮುಖ ತರಕಾರಿಯಾಗಿದೆ ಮಾತ್ರವಲ್ಲದೇ ಔಷಧಿಗಾಗಿಯೂ ಪೂರ್ವ ಆಫ್ರಿಕಾ, ಏಷ್ಯಾ, ಕೆರಿಬಿಯನ್, ದಕ್ಷಿಣ ಅಮೇರಿಕಾ ಗಳಲ್ಲಿ ಬಳಸುವರಂತೆ.
ವೆಂಕಜ್ಜಿ : ನಮ್ಮಲ್ಲೂ ನಾವು ಬಹಳಷ್ಟು ರೋಗಗಳಿಗೆ ಹಾಗಲಕಾಯಿಯಿಂದ ಪರಿಹಾರ ಕಾಣುತ್ತೇವೆ. ಸಸ್ಯದ ಎಲೆಯನ್ನೂ ಕಾಯಿಯಂತೆ ಔಷಧಿಯಾಗಿ ಬಳಸುತ್ತಾರೆ.
ಶಿಕ್ಷಕಿ :ಟೈಪ್ 2 ಮಧುಮೇಹ, ಚರ್ಮದ ಹುಣ್ಣು, ಇರುಳು ಕುರುಡು, ಚಳಿಜ್ವರ, ರಕ್ತಸ್ರಾವ, ಜಂತು ಹುಳು, ಕಾಲರಾ, ಅಂಗಾಲು ಉರಿ, ತುರಿಗಜ್ಜಿ, ಗಾಯ ಗುಣಪಡಿಸಲು, ಗೌಟ್, ಮೂಲವ್ಯಾಧಿ, ಉಸಿರಾಟದ ತೊಂದರೆ ಇತ್ಯಾದಿಗಳಿಗೂ ಬಳಸುತ್ತಾರೆ. ಪಾದರಸದ ವಿಷ ಇಳಿತ, ಮಾತ್ರವಲ್ಲದೆ HIV ಹರಡುವಿಕೆ ನಿಧಾನಗೊಳಿಸುತ್ತದೆ. ಕ್ಯಾನ್ಸರ್ ಪ್ರತಿರೋಧಕ ಗುಣವಿದೆ. ಪಶುಗಳಿಗೂ ಗಾಯಗಳಾದಾಗ, ವಿಷಕೀಟಗಳು ಕಡಿದಾಗ ಹಾಗಲ ಬಳಕೆಯಲ್ಲಿದೆ.
ಶಿಕ್ಷಕಿ: ಆಲ್ಕಲಾಯ್ಡ್ ಮೊಮೊರ್ಡಿಸಿನ್ ಎಂಬ ಅಂಶವು ಈ ನಿಷ್ಪಾಪಿ ಸಸ್ಯವನ್ನು ಕಹಿಯಾಗಿಸಿದೆ. ಆದರೆ ಕಹಿ ಸುವಾಸನೆಯೆ ಅದರ ಆಕರ್ಷಣೆಯಾಗಿದೆ. ಬೆಲ್ಲ, ಅಂಬಟೆಕಾಯಿ ಹಾಕಿ ಮಾಡಿದ ರಸ ಎಣಿಸಿದರೇ ನಾಲಿಗೆಯಲ್ಲಿ ನೀರೂರುತ್ತದೆ.
ವೆಂಕಜ್ಜಿ: ಹಾಗಲದ ಉಪ್ಪಿನಕಾಯಿ ಚೆನ್ನಾಗಿರ್ತದೆ. ಸಣ್ಣ ತುಂಡುಗಳಾಗಿ ಕತ್ತರಿಸಿ ಒಣಗಿಸಿಟ್ಟುಕೊಂಡರೆ ಬೇಕಾದಾಗ ಬಳಸಬಹುದು.
ಶಿಕ್ಷಕಿ: ಇಂಡೋನೇಷ್ಯಾ ದಲ್ಲಿ ತೆಂಗಿನ ಕಾಯಿ ಹಾಲಿನ ಜೊತೆ ವಿಯೆಟ್ನಾಂ ನಲ್ಲಿ ಸಿಗಡಿಯ ಜೊತೆ ಹಾಗಲದ ಸೂಪ್ ಜನಪ್ರಿಯವಾಗಿದೆ. ಚೈನೀಸ್ ಅಡುಗೆಯಲ್ಲಿ ಕಹಿಸ್ವಾದಕ್ಕಾಗಿ ಬಳಕೆ ಮಾತ್ರವಲ್ಲದೆ ಸೂಪ್ ಟೀ ಯಂತೆಯೂ ಬಳಸುವರು. ಉತ್ತರ ಭಾರತದಲ್ಲಿ ಅಲೂಗಡ್ಡೆ ಜೊತೆ ಬಳಸಿ ಮೊಸರಿನ ಜೊತೆ ಬಡಿಸುವರು. ಪಂಜಾಬಿ ಪದ್ದತಿಯಲ್ಲಿ ಮಸಾಲೆ ತುಂಬಿ ಎಣ್ಣೆಯಲ್ಲಿ ಕರಿಯುವರು. ನಾವು ನಮ್ಮ ಹಿರಿಯರ ಕಷ್ಟದ ನೆನಪಿಗಾಗಿ ಅಲ್ಲಲ್ಲಿ ಆಟಿಕೂಟಗಳನ್ನು ಮಾಡಿದಂತೆ ವಿಯೆಟ್ನಾಂ ನಲ್ಲಿ ಹಿಂದೆ ಅನುಭವಿಸಿದ ಬಡತನದ ಪರಿಸ್ಥಿತಿಗಳ ನೆನಪಿಗಾಗಿ ಹಾಗಲವನ್ನು ಬಳಸುವ ಮೂಲಕ ಕಹಿಯಲ್ಲಿ ಬಡತನವನ್ನು ಸಮೀಕರಿಸುತ್ತಾರೆ.
ರಮ್ಯಾ: ಮೇಡಮ್.. ಇದರಲ್ಲಿ ಯಾವೆಲ್ಲ ಪೋಷಕಾಂಶಗಳಿವೆ?
ಶಿಕ್ಷಕಿ: ರಮ್ಯಾ.. ಹಾಗಲಕಾಯಿ ಉಷ್ಣ ವಲಯದ ವೈನ್ ಎಂದೇ ಜನಪ್ರಿಯವಾಗಿದೆ. ವಿಟಮಿನ್ B6, B12, C, E, K ಅಲ್ಲದೆ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಂ, ರಂಜಕ,ಪೊಟಾಸಿಯಂ, ಸೋಡಿಯಂ, ಸತು ಇತ್ಯಾದಿ ಅಂಶಗಳು ಯಥೇಚ್ಛವಾಗಿವೆ.
ರಾಜು: ಇದರ ವೈಜ್ಞಾನಿಕ ಹೆಸರೇನು ಮೇಡಮ್? ಯಾವ ಕುಟುಂಬದ ಸದಸ್ಯ ಹಾಗಲ?
ಶಿಕ್ಷಕಿ: ಉತ್ತಮ ಪ್ರಶ್ನೆ ಕೇಳಿದೆ ರಾಜು. ಹಾಗಲ ಕುಕುರ್ಬಟೇಸಿ (Cucurbitaceae)ಕುಟುಂಬಕ್ಕೆ ಸೇರಿದೆ. Momordica ಕುಲ. ಮೊರ್ಮೊರ್ಡಿಕಾ ಚರಾಂತಿಯಾ (Momordica Charantia) ಇದರ ಸಸ್ಯ ಶಾಸ್ತ್ರೀಯ ಹೆಸರು. ಆಂಗ್ಲಭಾಷೆಯಲ್ಲಿ ಬಿಟರ್ ಮೆಲನ್, ಬಿಟರ್ ಗೌರ್ಡ್, ಕನ್ನಡದಲ್ಲಿ ಹಾಗಲ, ಕಹಲಕ್ಕಾಯ, ಮಿಡಿಕಾಯಿ ಎಂದು ತುಳು ಭಾಷೆಯಲ್ಲಿ ಕಂಚಲ್, ಮಲಯಾಳಂ ನಲ್ಲಿ ಪಾವಕ್ಕ, ಸಂಸ್ಕೃತ ದಲ್ಲಿ ಸುಶಾವಿ, ಹಿಂದಿಯಲ್ಲಿ ಕರೇಲ ಎಂದೆಲ್ಲ ಹೆಸರಿದೆ.
ವೆಂಕಜ್ಜಿ: ಹಾಗಲವನ್ನು ಕೆಲವರು ತಿನ್ನಲು ನಿರಾಕರಿಸುತ್ತಾರೆ. ರೋಗನಿರೋಧಕ ಶಕ್ತಿ ಹೆಚ್ಚಳ ಹಾಗೂ ಪಚನಕ್ರಿಯೆ ಉತ್ತಮಗೊಳಿಸಲು ಹಾಗಲವನ್ನು ಎಲ್ಲರೂ ಸೇವಿಸಬೇಕು. ಹಾಗಲವು ನಮ್ಮ ಜೀವನಕ್ಕೆ ಆದರ್ಶಪ್ರಾಯವಾಗಿದೆ. ಹೇಗೆಂದರೆ ಸುಖ ಕಷ್ಟ, ಸಿಹಿ ಕಹಿಗಳನ್ನು ನಾವು ಸಮಾನವಾಗಿ ಕಾಣಬೇಕಲ್ಲವೇ?
ರಾಜು : ಸರಿಯಜ್ಜಿ. ನಾವೆಲ್ಲರೂ ಹಾಗಲದ ಜೊತೆ ಸ್ನೇಹ ಮಾಡಿಕೊಳ್ಳುತ್ತೇವೆ. ತಮಗೆ ಇಷ್ಟೆಲ್ಲ ವಿಚಾರ ತಿಳಿಸಿದ ತಮಗೆ ಧನ್ಯವಾದಗಳು.
ಸರಿ ಮಕ್ಕಳೇ.. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ... ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************