-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 180

ಸ್ಫೂರ್ತಿಯ ಮಾತುಗಳು : ಸಂಚಿಕೆ - 180

ಸ್ಫೂರ್ತಿಯ ಮಾತುಗಳು : ಸಂಚಿಕೆ - 180
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com                     
         
ಭಾಷಾ ವ್ಯಾಕರಣದಲ್ಲಿ ಅವ್ಯಯಗಳ ಬಗ್ಗೆ ವಿವರಣೆಯಿದೆ. ಈ ಲೇಖನ ವ್ಯಾಕರಣದ “ಅವ್ಯಯ” ದ ಕುರಿತಲ್ಲ. ವ್ಯಯ ಎಂಬ ಪದದ ವಿರುದ್ಧಾರ್ಥಕ ಪದವೇ “ಅವ್ಯಯ”. ವ್ಯಯ ಎಂದರೆ ಖರ್ಚು, ಮುಗಿಯುವ, ಇಲ್ಲವಾಗುವ ಎಂದು ವ್ಯಾಖ್ಯಾನಿಸಬಹುದು. ವ್ಯಯ ಪದಕ್ಕೆ ಕ್ಷರ ಎಂದೂ ಅರ್ಥನೀಡಬಹುದು. ಈ ಎರಡೂ ಪದಗಳ ಭಾವ ಒಂದೇ. ಹಾಗಾದರೆ ಅವ್ಯಯ ಎಂದರೆ ಅಕ್ಷರ ಎನ್ನಬಹುದೇ ಎಂಬ ಸಂದೇಹ ಓದುಗರಲ್ಲಿ ಉದಯವಾದರೆ ದೋಷವಿಲ್ಲ. ಅಕ್ಷರ ಎಂದರೆ ನಾಶರಹಿತವಾದುದು, ಮುಗಿಯದುದು ಎಂದೂ ಹೇಳಬಹುದು. ಅದೇ ರೀತಿ ಕ್ಷಯ ಮತ್ತು ಅಕ್ಷಯ ಪದಗಳೂ ವ್ಯಯ ಮತ್ತು ಅವ್ಯಯಗಳಿಗೆ ಪರ್ಯಾಯವಾಗಿಯೇ ಬಳಕೆಯಾಗುತ್ತವೆ ಯೆಂದಾಯಿತು. ವ್ಯಯ, ಕ್ಷರ ಮತ್ತು ಕ್ಷಯ ಈ ಮೂರೂ ಪದಗಳು ನೀಡುವ ಭಾವ, “ನಾಶ ಯಾ ನಶ್ವರ…..” ಎಂದು ತಿಳಿಯೋಣ.

ಜಗತ್ತಿನಲ್ಲಿ ಪ್ರತಿಯೊಂದು ವಸ್ತುವೂ ವ್ಯಯವಾಗುವಂತಹುದು. ಅರಣ್ಯಗಳು, ಜಲಸಂಪತ್ತು, ಆಹಾರ ಸಂಪತ್ತು, ಖನಿಜ ಸಂಪತ್ತು. ಪ್ರಾಣಿ ಸಂಪತ್ತು, ಪಕ್ಷಿಸಂಕುಲ, ಮಾನವ ಸಂಪನ್ಮೂಲ ಹೀಗೆ ಪ್ರತಿಯೊಂದೂ ಅಂತ್ಯವನ್ನು ಕಾಣುತ್ತದೆ ಅಥವಾ ನಾಶವಾಗುತ್ತದೆ. ಎಲ್ಲವೂ ಆಯಷ್ಯವನ್ನು ಹೊಂದಿರುವುದೆಂಬುದು ಖಚಿತ. ಆದರೆ ಆಯುಷ್ಯದ ಅವಧಿಯಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಉದಾಹರಣೆಗೆ ಮಾನವನನ್ನು ಕುರಿತು ಹೇಳುವುದಾದರೆ ಹುಟ್ಟಿದ ಕ್ಷಣವೇ ಸಾವು ಕಾಣುವಂತಹುದು ಇದೆ. ಜಗತ್ತು ನೋಡುವ ಮೊದಲೇ ಗರ್ಭಾವಸ್ಥೆಯಲ್ಲಿ ಮರಣಿಸುವುದೂ ವಿಶೇಷವಲ್ಲ. ದಿನವೊಂದು ಅಥವಾ ಹಲವು ದಿನಗಳು, ಮಾಸಗಳು. ವರ್ಷಗಳು ಬದುಕುವುದು ಸಾಮಾನ್ಯವಾದ ಆಯಷ್ಯ. ಶತಾಧಿಕ ವರ್ಷಾಯುಷ್ಯದವರೂ ಇದ್ದಾರೆ. ಸಕಲ ಚರ ಮತ್ತು ಅಚರಗಳಿಗೆ ಆಯುಷ್ಯವಿದೆ. ಈ ಆಯಷ್ಯ ಸಮಾನವಲ್ಲ ಎಂಬುದೇ ವೈಶಿಷ್ಠ್ಯ.

ದೇವರನ್ನು ಅಕ್ಷರ ಅಥವಾ ಅವ್ಯಯ ಎನ್ನುತ್ತೇವೆ. ಜರಾಮರಣಗಳಿಲ್ಲದವುಗಳನ್ನು ಅವ್ಯಯ ಎನ್ನುತ್ತೇವೆ. ದೇವರ ಹುಟ್ಟು ಗೊತ್ತಿಲ್ಲ. ಸಾವೂ ಗೊತ್ತಿಲ್ಲ. ನಮ್ಮ ಜೀವಿತ ಕಾಲದಲ್ಲಿ ಹೊಸ ದೇವರ ಹುಟ್ಟೂ ಆಗಿಲ್ಲ, ಆಗಿರುತ್ತಿದ್ದರೆ ದೇವರಿಗೂ ಹುಟ್ಟು ಇದೆ ಎಂದು ನಾವು ವ್ಯಾಖ್ಯಾನಿಸ ಬಹುದಾಗಿತ್ತು. ಎಷ್ಟು ಮೊಗೆದರೂ ಖಾಲಿಯಾಗದೇ ಇರುವುದನ್ನೇ ಅಕ್ಷರ ಎನ್ನುತ್ತೇವೆ. ಯುಗಾಂತರ ತನಕ ಉಳಿಯುವವುಗಳನ್ನು ಶಾಶ್ವತ ಎನ್ನಬಹುದು. ಜ್ಞಾನವನ್ನು ಕೂಡಾ ಅವ್ಯಯ ಎನ್ನಬಹುದು. ಜಗತ್ತಿನಲ್ಲಿ ಹಿಂದೆ ಜ್ಞಾನ ಇತ್ತು. ಈಗಲೂ ಇದೆ. ಮುಂದೆಯೂ ಜ್ಞಾನವು ಉಳಿಯುತ್ತದೆ. ಉಳಿಯುವುದು ಮಾತ್ರವಲ್ಲ ಹೆಚ್ಚುತ್ತದೆ. ಅದಕ್ಕಾಗಿಯೇ ಅಕ್ಷರ ಎನ್ನುತ್ತೇವೆ. ಜ್ಞಾನವು ಅಕ್ಷಯವಾಗಿರುವುದರಿಂದಲೇ ಅದು ವಿಸ್ತಾರವಾಗಿ ಪ್ರಸಾರವಾಗುತ್ತದೆ. ಜ್ಞಾನವನ್ನು ಇತರರಿಗೆ ಕೊಡಲು ಯಾರೂ “ಕಂಜ್ಯೂಸ್”‌ ತನ ಮಾಡದಿರಲು ಕಾರಣ ಅದು ಅವ್ಯಯ. ಹಣ ಕೇಳಿದರೆ ನಮಗದು ಬೇಗನೇ ಸಿಗದು, ಏಕೆಂದರೆ ಇತರರಿಗೆ ಕೊಟ್ಟೊಡನೆ ಅದು ನಮ್ಮ ಸಂಚಿಯಿಂದ ಕಡಿಮೆಯಾಗುತ್ತದೆ. ಜ್ಞಾನವು ಹಾಗಲ್ಲ, ಅದು ಕೊಟ್ಟಂತೆ ನಮ್ಮಲ್ಲಿ ದೃಢಗೊಳ್ಳುತ್ತದೆ. ಇತರರಿಂದ ಒಮ್ಮೆ ಪಡೆದುದನ್ನು ಪುನಹ ಪುನಹ ಹಿಂತಿರುಗಿಸುತ್ತಲೇ ಇರಬಹುದು, ಸಹಸ್ರ ಸಹಸ್ರ ಸಂಖ್ಯೆಯಲ್ಲಿರುವ ಇತರರಿಗೂ ವಿತರಣೆ ಮಾಡುತ್ತಲೇ ಇರಬಹುದು. ಜ್ಞಾನವು ಗಳಿಸಬಹುದಾದ ಮತ್ತು ನಾಶರಾಹಿತ್ಯವಾದ ಸಂಪನ್ಮೂಲ. ಅದು ಅವ್ಯಯ. ಜ್ಞಾನವು ಭಗವಂತನಿಗೆ ಸಮಾನವಾದುದು. ಭಗವಂತನೂ ಅವ್ಯಯ ತಾನೇ? ಲೋಕ ಹಿತಕ್ಕಾಗಿ ಬಳಕೆಯಾಗುವ ಜ್ಞಾನವನ್ನಷ್ಟೇ ಭಗವಂತನು ಇಷ್ಟಪಡುತ್ತಾನೆ ಎಂಬ ಅರಿವೂ ನಮಗಿರಬೇಕು.

ಅವ್ಯಯವಾದ ಜ್ಞಾನ ಸಂಪತ್ತಿನ ಗಣಿಗಳಾಗಿ ಲೋಕಕ್ಕೆ ವಿತರಿಸುತ್ತಾ ನಾವು ಅವ್ಯಯನಾದ ಭಗವಂತನ ಪ್ರೇಮ ಸಂಪಾದನೆ ಮಾಡೋಣ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************

Ads on article

Advertise in articles 1

advertising articles 2

Advertise under the article