-->
ಪಯಣ : ಸಂಚಿಕೆ - 59 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 59 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 59 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713

ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ


ಇಂದಿನ ಪ್ರವಾಸದಲ್ಲಿ "ಕಲಿಯುಗದ ಕಾಮಧೇನು, ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳ ದಿವ್ಯ ಸನ್ನಿಧಿ ಮಂತ್ರಾಲಯ" ಕ್ಕೆ ಪಯಣ ಮಾಡೋಣ ಬನ್ನಿ....
               
ಭಾರತದ ದಕ್ಷಿಣದಲ್ಲಿರುವ ರಾಜ್ಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಒಂದು ಸಣ್ಣ ಪಟ್ಟಣ ಮಂತ್ರಾಲಯ. ತುಂಗಭದ್ರಾ ನದಿಯ ದಂಡೆಯ ಮೇಲೆ ಸ್ಥಾಪಿತವಾಗಿರುವ ಈ ಪಟ್ಟಣ ಕರ್ನಾಟಕದ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಇದನ್ನು ಜನಪ್ರಿಯವಾಗಿ ಮಂಚಾಲೆ ಎಂತಲೂ ಕರೆಯುವುದುಂಟು, ಗುರು ರಾಘವೇಂದ್ರ ಸ್ವಾಮಿಯಿಂದ ರೂಪಿಸಲ್ಪಟ್ಟ ವೃಂದಾವನವಿರುವುದರಿಂದ ಈ ಪಟ್ಟಣವು ತೆಲುಗರಲ್ಲಿ ಅತ್ಯಂತ ಜನಪ್ರಿಯವಾಗಿದೆ.

ಪರಮ ಪೂಜ್ಯ ಗುರುಗಳು, ಶ್ರೀ ಮಧ್ವಾಚಾರ್ಯರ ಅನುಯಾಯಿಗಳಾಗಿದ್ದು ಮಧ್ವ ಪಂಥ ಪಾಲಕರಾಗಿದ್ದರು. ಗುರು ರಾಘವೇಂದ್ರ ಕಳೆದ 339 ವರ್ಷಗಳ ಕಾಲ ದಕ್ಷಿಣದ ಈ ವೃಂದಾವನದಲ್ಲಿ ವಾಸಿಸುತ್ತಿದ್ದು ಸ್ವಾಮಿ ಮುಂದಿನ 361 ವರ್ಷಗಳ ಕಾಲ ಈ ಸ್ಥಳದಲ್ಲೇ ಇರುವರೆಂಬ ನಂಬಿಕೆ ಇಲ್ಲಿನ ಸ್ಥಳೀಯರಿಗಿದೆ. ಗುರುಗಳು ವೃಂದಾವನ ಪ್ರವೇಶಿಸಿದ ಸಂದರ್ಭದಲ್ಲಿ ತಾವು ಇನ್ನು 700 ವರ್ಷಗಳ ಕಾಲ ಈ ಸ್ಥಳದಲ್ಲೇ ವಾಸಿಸುವುದಾಗಿ ಪ್ರಕಟಿಸಿದ್ದರು ಎಂತಲೂ ನಂಬಲಾಗುತ್ತದೆ. ಈ ಕಾರಣಕ್ಕಾಗಿ, ಮಂತ್ರಾಲಯವು ದೇಶದ ಹಿಂದೂಗಳ ಪವಿತ್ರ ಪಟ್ಟಣವೆಂದು ಪರಿಗಣಿಸಲಾಗಿದೆ. 

ಮಂತ್ರಾಲಯದಲ್ಲಿ ಆಸಕ್ತಿ ಹುಟ್ಟಿಸುವಂತಹ  
ಸ್ಥಳಗಳೆಂದರೆ, ಶ್ರೀ ಗುರು ರಾಘವೇಂದ್ರ  
ಸ್ವಾಮಿ ದೇವಸ್ಥಾನ, ಭಿಕ್ಷಾಲಯ ಮತ್ತು  
ಪಂಚಮುಖಿ ಆಂಜನೇಯ ದೇವಸ್ಥಾನ.  
ಮಂತ್ರಾಲಯದಲ್ಲಿ ವಿಮಾನ ನಿಲ್ದಾಣವಿಲ್ಲ. ಆದರೆ ರಸ್ತೆ ಮತ್ತು ರೈಲುಗಳ ಮೂಲಕ ಸುಲಭವಾಗಿ ಇಲ್ಲಿಗೆ ಬರಬಹುದು. ರೈಲ್ವೆ ನಿಲ್ದಾಣವು ನಗರದ ಕೇಂದ್ರದಿಂದ ಸುಮಾರು 16 ಕಿ.ಮಿ. ದೂರದಲ್ಲಿದೆ. ಮಂತ್ರಾಲಯ ತಲುಪಲು ಅನೇಕ ಸರ್ಕಾರಿ ಬಸ್ಸುಗಳು ಹಾಗೂ ಖಾಸಗಿ ಬಸ್ಸುಗಳ ವ್ಯವಸ್ಥೆಯೂ ಇದೆ. 

ಪಟ್ಟಣವು ತನ್ನ ಭೌಗೋಳಿಕ ಸ್ಥಾನದಿಂದಾಗಿ ಉಷ್ಣವಲಯದ ಹವಾಗುಣವನ್ನು ಹೊಂದಿದ್ದು ಬಹಳ ಬಿಸಿ ಮತ್ತು ಶುಷ್ಕ ಬೇಸಿಗೆಯನ್ನೂ ಮತ್ತು ಅಷ್ಟೇನೂ ಚಳಿ ಇಲ್ಲದ ಚಳಿಗಾಲವನ್ನು ಅನುಭವಿಸುತ್ತದೆ. ಮಂಚಾಲೆ ಎಂತಲೂ ಕರೆಯಲ್ಪಡುವ ಮಂತ್ರಾಲಯವು ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿ ತುಂಗಾ ನದಿ ತಟದ  
ಮೇಲೆ ನೆಲೆಸಿದೆ. ಗುರು ರಾಘವೇಂದ್ರರ  
ಬೃಂದಾವನವಿರುವ ಈ ಕ್ಷೇತ್ರವು ಪ್ರತಿ  
ವರ್ಷವೂ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ. 

ಶ್ರೀ ಗುರು ರಾಘವೇಂದ್ರರು ದ್ವೈತ ಪಂತದ ಸಂಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ಅನುಯಾಯಿಯಾಗಿದ್ದು, ಅದರ ಪರಿಪಾಲಕರಾಗಿದ್ದರು. ಪುಣ್ಯ ತುಂಗಭದ್ರಾ ನದಿ ದಂಡೆಯಲ್ಲಿ ಬೃಂದಾವನಸ್ಥರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲಬೃಂದಾವನ ಸ್ಥಳ. ಇದು ಭಕ್ತರಿಗೆ ಕೇಳಿದ್ದನ್ನು ಕೊಡುವ ಬೃಂದಾವನ ಸ್ಥಳ. ಅತಿ ಪವಿತ್ರ ತಾಣ. ಇಲ್ಲಿ ಮಾಡುವ ಬೃಂದಾವನ ಪ್ರದಕ್ಷಿಣೆ ನಮನ, ಸ್ತುತಿ, ಮೃತ್ತಿಕಾ ತೀರ್ಥ ಸೇವನೆಗಳಿಂದ ಭೂತಪ್ರೇತ ಪಿಶಾಚಾದಿ ಪೀಡೆಗಳು ದೂರವಾಗುತ್ತವೆ. ಅನೇಕರಿಗೆ ಭವಿಷ್ಯದ ಸೂಚನೆಯೂ ಸಿಕ್ಕಿದೆ.

ಇಲ್ಲಿನ ಮಂಚಾಲಮ್ಮನ ಗುಡಿ, ಮೂಲರಾಮನ ದರ್ಶನ ಸರ್ವ ಪಾಪಹರ, ಇಲ್ಲಿ ರಾಘವೇಂದ್ರ ಸ್ವಾಮಿಗಳ ಮಠ ಹಾಗೂ ಬೃಂದಾವನವಿದೆ. ರಾಘವೇಂದ್ರ ಗುರುಸಾರ್ವಭೌಮರು ಮಧ್ವಮತ ಸಂಪ್ರದಾಯವನ್ನು ಅವಲಂಬಿಸಿ ಸಶರೀರರಾಗಿ ಇಲ್ಲಿ ಬೃಂದಾವನಸ್ಥರಾದರು (ಕ್ರಿ.ಶ. 1671 ಶ್ರಾವಣ ಬಹುಳ ಬಿದಿಗೆ ಗುರುವಾರ) ಎನ್ನಲಾಗಿದೆ. ಇವರನ್ನು ಗುರುಸಾರ್ವಭೌಮರು, ರಾಯರು, ಮಂತ್ರಾಲಯ ಪ್ರಭುಗಳು ಎಂದೂ ಕರೆಯುತ್ತಾರೆ. ರಾಯರ ಬೃಂದಾವನದ ಎಡಗಡೆ ವಾದೀಂದ್ರರ ಬೃಂದಾವನವಿದೆ. ಮಠದ ಆವರಣದಲ್ಲಿ ಸುಧರ್ಮೇಂದ್ರ ತೀರ್ಥಸ್ವಾಮಿಗಳ ಮತ್ತು ಸುವೃತೀಂದ್ರ ತೀರ್ಥಸ್ವಾಮಿಗಳವರ ಬೃಂದಾವನಗಳೂ ಇವೆ. ರಾಘವೇಂದ್ರಸ್ವಾಮಿಗಳ ಬೃಂದಾವನದ ಎದುರಿಗೆ ವಾಯುದೇವರ ವಿಗ್ರಹವಿದೆ. ಮಠದ ಹೊರಗಡೆ ಎಡಭಾಗದಲ್ಲಿ ಮಂಚಾಲಾಂಬಿಕೆಯ ದೇವಸ್ಥಾನವಿದೆ. ಈ ಗ್ರಾಮ ರಾಯರ ನೆಲಸುವಿಕೆಯಿಂದ ಪುಣ್ಯಕ್ಷೇತ್ರ ಎನಿಸಿದೆ.

ಇಲ್ಲಿಗೆ ಸಹಸ್ರಾರು ಯಾತ್ರಿಕರು ಬರುತ್ತಾರೆ. ಭಕ್ತಾದಿಗಳು ತುಂಗಭದ್ರಾ ನದಿಯಲ್ಲಿ ಮಿಂದು ರಾಯರ ಸೇವೆಗೈದು ತಮ್ಮ ಇಷ್ಟಾರ್ಥಗಳನ್ನು ಪಡೆಯುತ್ತಾರೆ.

"ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ । ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ" ಬನ್ನಿ.. ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಲು, ಮಂತ್ರಾಲಯಕ್ಕೆ....

ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************

Ads on article

Advertise in articles 1

advertising articles 2

Advertise under the article