ನನ್ನ ಪ್ರೀತಿಯ ಟೀಚರ್ - 2025 : ಹಿರಿಯರ ಬರಹಗಳು : ಸಂಚಿಕೆ -02
Friday, September 5, 2025
Edit
ನನ್ನ ಪ್ರೀತಿಯ ಟೀಚರ್ - 2025
ಹಿರಿಯರ ಬರಹಗಳು : ಸಂಚಿಕೆ -02
ಶಿಕ್ಷಕರ ದಿನಾಚರಣೆ ಸೆಪ್ಟೆಂಬರ್ : 05 - 2025
ಮಕ್ಕಳ ಜಗಲಿಯ ಹಿರಿಯರ ಬರಹಗಳ ಮಾಲೆ
ಶಿಕ್ಷಕರ ದಿನಾಚರಣೆ - 2025 ವಿಶೇಷತೆಯಾಗಿ 'ನನ್ನ ಪ್ರೀತಿಯ ಟೀಚರ್' ವಿಷಯದಲ್ಲಿ ತಮ್ಮ ತಮ್ಮ ನೆಚ್ಚಿನ ಶಿಕ್ಷಕರ ಕುರಿತಾಗಿ.... ಕೇವಲ ಒಂದೇ ದಿನದ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯ ಜಗಲಿಯ ಹಿತೈಷಿಗಳು ಬರಹಗಳನ್ನು ಕಳುಹಿಸಿಕೊಟ್ಟಿದ್ದೀರಿ... ನಿಮಗೆಲ್ಲ ಪ್ರೀತಿಪೂರ್ವಕ ಧನ್ಯವಾದಗಳು...
ಎಲ್ಲಾ ಬರಹಗಳನ್ನು ಮಕ್ಕಳ ಜಗಲಿಯಲ್ಲಿ - ಸಂಚಿಕೆಗಳ ರೂಪದಲ್ಲಿ ಪ್ರಕಟಿಸುತ್ತೇವೆ... ಹಿರಿಯರ ವಿಭಾಗದ ಎರಡನೇ ಸಂಚಿಕೆಯ ಬರಹಗಳು ಇಲ್ಲಿವೆ.... ತಾರಾನಾಥ್ ಕೈರಂಗಳ
ಈ ಸಂಚಿಕೆಯ ಬರಹಗಾರರು :
▪️ಪ್ರತಿಮಾ ತುಂಬೆ, ಸಹ ಶಿಕ್ಷಕಿ.
▪️ವಿದ್ಯಾಗಣೇಶ್, ಚಾಮೆತ್ತಮೂಲೆ
▪️ಭವ್ಯಶ್ರೀ ಕೋಕಳ, ಮಂಚಿ
▪️ಮಮತಾ ಡಿ ಕೆ ಅನಿಲಕಟ್ಟೆ, ವಿಟ್ಲ
▪️ಕಾಂತಿ ಪ್ರಭು, ಚಿತ್ರಕಲಾ ಶಿಕ್ಷಕರು
▪️ವೈಶಾಲಿ, ಪದವಿ ವಿದ್ಯಾರ್ಥಿ
▪️ಮಹಮ್ಮದ್ ಹಾತಿಮ್, ಉಪ್ಪಿನಂಗಡಿ
▪️ಅನಿಕೃತಿ, ಅಲಂಕಾರು ಕಡಬ
▪️ಶ್ರೀಮತಿ ಪ್ರಿಯ ಪಿ. ಪಿ, ಸಹ ಶಿಕ್ಷಕಿ
▪️ಸವಿತಾ, ಸಹ ಶಿಕ್ಷಕಿ
▪️ಸಿಂಚನಾ. ಎಸ್. ಶೆಟ್ಟಿ , ಮಾಳ
▪️ಭೂಮಿಕಾ ಕೊಪ್ಪ , ಚಾರ್ವಾಕ
▪️ಜ್ಯೋತಿ ಪಿ ಮಾದರ, ಪದವಿ ವಿದ್ಯಾರ್ಥಿ
ಶಿಕ್ಷಕರು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ತಳಹದಿ ಹಾಕುವವರು. ಚಿಗುರುವ ಎಳೆ ವಯಸ್ಸಿನಿಂದ ಹಿಡಿದು ಬೆಳೆದ ಹದಿಹರೆಯದ ವಯಸ್ಸಿನವರೆಗೂ ಕೈ ಹಿಡಿದು ದಾರಿ ತೋರಿಸುವವರು. ಅನಾರೋಗ್ಯ ಪೀಡಿತ ಸಮಾಜವನ್ನು ಸರಿಯಾದ ಹಳಿಗೆ ತಂದು ನಿಲ್ಲಿಸುವುದು ಶಿಕ್ಷಕರ ಅತಿ ಮುಖ್ಯ ಕರ್ತವ್ಯಗಳಲ್ಲೊಂದು. ಇಂತಹ ಬಹುದೊಡ್ಡ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತಿರುವಂತಹ ಶಿಕ್ಷಕರಿಗೋ ಬಲು ದೊಡ್ಡ ನಮನ.
ಇಂತಹ ಶಿಕ್ಷಕರ ಪಟ್ಟಿಗೆ ಸೇರುವವರು ನನ್ನ ಪ್ರಾಚಾರ್ಯರಾದ ಶ್ರೀ ಗಂಗಾಧರ ಆಳ್ವರು. ಪದವಿಪೂರ್ವ ತರಗತಿಯಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ನಮ್ಮೆಲ್ಲರ ಅಚ್ಚುಮೆಚ್ಚಿನ ಉಪನ್ಯಾಸಕರಾಗಿದ್ದರು. ಈಗ ನಿವೃತ್ತಿ ಜೀವನದಲ್ಲಿದ್ದರೂ ಕೂಡ ಅನೇಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಏಳಿಗೆಗೆ ತಮ್ಮ ಸೇವೆ ಗೈಯುತ್ತಿರುವವರು.
ಅವರು ವಿದ್ಯಾರ್ಥಿಗಳಲ್ಲಿ ತೋರುತ್ತಿದ್ದ ಕಾಳಜಿ, ನೀಡುತ್ತಿದ್ದ ಪ್ರೋತ್ಸಾಹ, ಹೇಳುತ್ತಿದ್ದ ಬುದ್ಧಿ ಮಾತುಗಳು ಮತ್ತು ಅವರ ಸರಳ ಜೀವನ ಶೈಲಿ ಇವು ಎಲ್ಲವೂ ನಮಗೆ ಮಾರ್ಗದರ್ಶನ ವಾಗಿದ್ದವು. ನಾನು ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದಾಗಲೂ ಅವರು ನನಗೆ ಹೇಳಿದ ಕಿವಿ ಮಾತುಗಳು ಈಗಲೂ ನನ್ನ ಕಿವಿಗಳಲ್ಲಿ ಮಾರ್ದನಿಸುತ್ತಿರುವುದು.. "ಉತ್ತಮ ಶಿಕ್ಷಕಿ ಆಗಬೇಕಾದರೆ ಮೊದಲು ನಾವು ಸಮಯ ಪರಿಪಾಲನೆ ಮಾಡಬೇಕು. ನಮ್ಮ ಕರ್ತವ್ಯಕ್ಕೆ ಗೈರು ಹಾಜರಾಗುವುದನ್ನು ಆದಷ್ಟು ಕಡಿಮೆ ಮಾಡಿ ನಮ್ಮ ವೃತ್ತಿಯನ್ನು ಪ್ರೀತಿಸಬೇಕು.. ನಾವು ಶುದ್ಧ ಮನಸ್ಸಿನವರಾಗಿ, ನೀತಿವಂತರಾಗಿ ಇದ್ದಾಗ ಮಾತ್ರ ಸಮಾಜಕ್ಕೆ ನಮ್ಮಿಂದ ಮೌಲ್ಯಯುತವಾದ ಶಿಕ್ಷಣವನ್ನು ಒದಗಿಸಲು ಸಾಧ್ಯ..."ಇದು ನನ್ನ ಶಿಕ್ಷಕರಾದ ಶ್ರೀ ಗಂಗಾಧರ ಆಳ್ವರು ನನಗೆ ನೀಡಿದ ಹಿತನುಡಿಗಳು. ಇಂತಹ ಮಹಾನ್ ಶಿಕ್ಷಕರ ವಿದ್ಯಾರ್ಥಿಯಾಗಿದ್ದ ನಾನು ಭಾಗ್ಯಶಾಲಿ ಎಂದು ಹೆಮ್ಮೆಯಿಂದ ಹೇಳುವೆನು.
ಸಹ ಶಿಕ್ಷಕಿ,
ತುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
"ಗುರುಬ್ರಹ್ಮ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರ... ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ..." ಜೀವನದಲ್ಲಿ ಸಾಧಿಸಲು ಹಲವು ಮಾರ್ಗಗಳಿರಬಹುದು ಆದರೆ, ಸಾಧನೆಗೆ ಗುರಿ ತೋರುವವರು ಗುರುಗಳು ಮಾತ್ರ. ಯಾಕೆಂದರೆ ವೃತ್ತಿಯಲ್ಲಿ ಎಷ್ಟೇ ವಿಧಗಳಿದ್ದರೂ ಒಬ್ಬ ವ್ಯಕ್ತಿ ಒಂದೊಳ್ಳೆಯ ಸ್ಥಾನವನ್ನು ಅಲಂಕರಿಸಬೇಕೆಂದರೆ, ಆತನಿಗೆ ಶಿಕ್ಷಣ ಅತೀ ಅಗತ್ಯ. ಆದ್ದರಿಂದ ಎಲ್ಲಾ ವೃತ್ತಿಗಿಂತಲೂ, ನಮಗೆ ಮಾರ್ಗದರ್ಶನ ನೀಡುತ್ತ, ನಮ್ಮನ್ನು ತಿದ್ದಿ, ತೀಡಿ ಸುಂದರ ಜೀವ ತುಂಬಿದ ಮೂರ್ತಿಗಳಂತೆ ರೂಪುಗೊಳಿಸುವ ಶಿಕ್ಷಕ ವೃತ್ತಿಯೇ ದೊಡ್ಡದು ಎಂಬುವುದು ನನ್ನ ಅಭಿಪ್ರಾಯ. ಬಾಳಿನ ಯಾನಕೆ ಹಿತವ ಬಯಸಿ ವಿದ್ಯೆ ಕಲಿಸಿದವರು ಯಾರೇ ಆಗಿರಲಿ, ಅವರು ಗುರುಗಳಿಗೆ ಸಮಾನ. "ಹರ ಮುನಿದರೆ ಗುರು ಕಾಯ್ವ.. ಗುರು ಮುನಿದರೆ ಕಾಯ್ವರಾರು?" ಎಂಬ ಎರಡೇ ಎರಡು ಸಾಲುಗಳು ಸಾಕು, ಗುರುವಿನ ಶ್ರೇಷ್ಠತೆಯನ್ನುಎತ್ತಿ ಹಿಡಿಯಲು. ನನ್ನ ಜೀವನಶೈಲಿಯಲ್ಲಿಯೂ ಒಂದಷ್ಟು ಮಹತ್ತರವಾದ ಸಕರಾತ್ಮಕ ಬೆಳವಣಿಗೆ ಕಾಣುತ್ತಿದೆಯೆಂದರೆ, ಅದರ ಹಿಂದೆ, ಬೆನ್ನುತಟ್ಟುವ ಕೆಲವು ಕೈಗಳು, ಪ್ರೋತ್ಸಾಹಿಸುವ ಮನಗಳು, ಸಲಹೆ ನೀಡಿ ಧೈರ್ಯ ತುಂಬುವ ಒಡನಾಡಿಗಳ ಮಾರ್ಗದರ್ಶನಗಳೇ ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸಮಯವಿದು. ಶಾಲೆಯಲ್ಲಿ ಕಲಿತರೆ ಮಾತ್ರ ಶಿಕ್ಷಣ ಅಲ್ಲ, ಬದುಕು ರೂಪಿಸಿಕೊಳ್ಳಲು ಮನಸಿದ್ದರೆ, ದಾರಿ ತೋರುವ ಗುರುಮನದ ವ್ಯಕ್ತಿಗಳು ನಮಗೆ ದೊರೆತರೆ, ಜೀವನಪಾಠವನ್ನು ನಾವು ಎಲ್ಲಿ ಬೇಕಾದರೂ, ಯಾರಿಂದ ಬೇಕಾದರೂ ಪಡೆಯಬಹುದು. ಆಯ್ಕೆಗಳು ನಮ್ಮ ಕೈಯಲ್ಲೇ ಇವೆ.
ಬರವಣಿಗೆಯ ಶೈಲಿಯ ಬಗ್ಗೆ ಪ್ರೋತ್ಸಾಹ ನೀಡುತ್ತಾ, ಮತ್ತೆ ಬರವಣಿಗೆಯ ಕಾಯಕಕ್ಕೆ ಮುನ್ನುಡಿ ಬರೆದ "ಮಕ್ಕಳ ಜಗಲಿ" ಬಳಗಕ್ಕೆ ನನ್ನ ಅನಂತ ವಂದನೆಗಳು. ಜೀವನದಲ್ಲಿ ಮುಳುಗಿದವರನ್ನು ಗುರುತಿಸಿ, ಹುರುಪು ನೀಡಿ ಮೇಲಕ್ಕೆತ್ತುವವರೆಲ್ಲರೂ ನಿಜವಾದ ಅರ್ಥದಲ್ಲಿ ಹೇಳುವುದಾದರೆ ಒಬ್ಬ ಅತ್ಯುತ್ತಮ ಗುರುವಿಗೆ ಸಮಾನ.
"ಶಿಕ್ಷಕರ ದಿನಾಚರಣೆ"ಯನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ನಾನು ನನ್ನ ಎಲ್ಲಾ ಗುರುಗಳನ್ನು ಮನಸಾ ಸ್ಮರಿಸುತ್ತಾ, ನನಗೆ ಜೀವನ ಪಾಠವ ಬೋಧಿಸಿ, ಪ್ರಪಂಚದ ಅರಿವನ್ನು ಮೂಡಿಸಿದ ಎಲ್ಲಾ ಹಿತ ಚಿಂತಕರಿಗೂ ಶುಭಾಶಯ ಕೋರುತ್ತಿದ್ದೇನೆ. ಮಕ್ಕಳ ಜಗಲಿಯಲ್ಲಿ ಮೂಡಿ ಬರುತ್ತಿರುವ ಹಲವಾರು ಶಿಕ್ಷಕರ ಲೇಖನ ಮಾಲೆಗಳು ನನ್ನ ಜೀವನದ ಪ್ರಗತಿಗೂ ದಾರಿಮಾಡಿಕೊಟ್ಟಿದೆ. ಆದ್ದರಿಂದ "ನನ್ನ ಪ್ರೀತಿಯ ಟೀಚರ್... " ಎಂಬ ಶೀರ್ಷಿಕೆಗೆ ಈ ಬಾರಿ ನಾನು ಮಕ್ಕಳ ಜಗಲಿಯನ್ನೇ ಆಯ್ದಕೊಂಡಿದ್ದೇನೆ. ಒಂದಷ್ಟು ಮನಗಳನ್ನು ತಲುಪಲು ದಾರಿತೋರಿದ ಮಕ್ಕಳ ಜಗಲಿ ಹಾಗೂ ಜಗಲಿಯ ಎಲ್ಲಾ ಶಿಕ್ಷಕ ವೃಂದದವರಿಗೂ ಶಿಕ್ಷಕ ದಿನಾಚರಣೆಯ ಶುಭಾಶಯಗಳು.
ಅವಕಾಶಕ್ಕಾಗಿ ಧನ್ಯವಾದಗಳೊಂದಿಗೆ...
ಕೊಣಾಲು ಗ್ರಾಮ ಮತ್ತು ಅಂಚೆ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ಮಾನವರಾದ ನಮಗೆ ಮೌಲ್ಯಯುತ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಬಹುಮುಖ್ಯ, ಜೊತೆಗೆ ಶಿಕ್ಷಣ ಕಲಿಸುವ ಗುರುವು ಹಾಗೆ ನಮ್ಮ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರುತ್ತಾರೆ.
ವಿದ್ಯೆ ಎಂಬುದು ಕೇವಲ ಶಾಲೆಯ ಪಠ್ಯಕ್ರಮಕ್ಕೆ ಮಾತ್ರ ಸೀಮಿತವಲ್ಲ, ಜೀವನಪೂರ ನಮ್ಮಲ್ಲಿ ಉಳಿದುಕೊಳ್ಳುವ ಜೀವನ ಮೌಲ್ಯ... ಗುರುವನ್ನು ನೆನಪಿಸಿ ಅವರಿಗೊಂದು ಗೌರವ ನೀಡುವ ಈ ದಿನ ನನ್ನ ನಚ್ಚಿನ ಗುರುಗಳಾದ ತಾರನಾಥ ಕೈರಂಗಳ ಸರ್ ಅವರ ಬಗ್ಗೆ ಕೆಲವು ವಿಚಾರ ಹಂಚಿಕೊಳ್ಳ ಬಯಸುತ್ತೇನೆ.
ಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ನಾನು ಕಂಡ ಒಬ್ಬ ಕಾರ್ಯಶೀಲವೃಕ್ತಿ. ಅವರು ನಮ್ಮ ತರಗತಿಗೆ ಬಂದಾಗಲೆಲ್ಲ ಏನಾದರೂ ಒಂದೊಂದು ಹೊಸ ಯೋಜನೆ, ಹೊಸ ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದುದು ಖುಷಿ ಎನಿಸುತ್ತಿತ್ತು. ಅವರು ಸದಾ ಹೇಳುತ್ತಿದ್ದ ಒಂದು ಮಾತು ಜೀವನದಲ್ಲಿ ಯಾವಾಗಲೂ Busy ಯಾಗಿರಬೇಕು ಎನ್ನುವುದು ನಾನು ಈಗಲೂ ನೆನಪಿಸಿಕೊಳ್ಳುತ್ತಿರುತ್ತೇನೆ... ನಮಗೆ ಸಿಗುವ ಬಿಡುವಿನ ಸಮಯ ಯಾವತ್ತೂ ವ್ಯರ್ಥ್ಯ ಮಾಡದೆ ಏನಾದರೂ ಒಂದು ಚಿಕ್ಕ ಪುಟ್ಟ ಹೊಸ ವಿಷಯ ಕಲೆಹಾಕಿ ಎನ್ನುವುದು ಅವರ ಕಿವಿ ಮಾತು....
ಸದಾ ಮಕ್ಕಳೊಂದಿಗೆ ಒಂದಲ್ಲ ಒಂದು ರೀತಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ, ಯಾರಾದರೂ ಒಬ್ಬ ವಿದ್ಯಾರ್ಥಿಯಲ್ಲಿ ಅವರು ಏನೇ ಹೊಸ ಚಿಕ್ಕ ವಿಚಾರ ವಿಶೇಷ ಕಂಡರೂ ಅದನ್ನು ಪ್ರೋತ್ಸಾಹಿಸುವ ಅವರ ಗುಣ ನನಗೆ ತುಂಬಾ ಅಚ್ಚು ಮೆಚ್ಚು...
ಅವರ ಕ್ರಿಯಾಶೀಲ, ಸೃಜನಶೀಲ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿ ಈ ಮಕ್ಕಳ ಜಗಲಿಯ ಯಶಸ್ಸನ್ನು ನಾವು ಕಾಣಬಹುದು... ಸದಾ ಹಸನ್ಮುಖಿ, ಸೇವಾ ಮನೋಭಾವ ಮತ್ತು ಸ್ನೇಹಜೀವಿ ಇವರು ಯಾವಾಗಲೂ Busy ಯಾಗಿರಿ ಎನ್ನುವ ಅವರ ಮಾತು ನನಗೆ ಇಂದೂ ಮಾರ್ಗದರ್ಶಕ......
ನನ್ನ ಎಲ್ಲಾ ಗುರುಗಳಿಗು ಶಿಕ್ಷಕರ ದಿನಾಚರಣೆಯ ಶುಭಾಶಯಗಳು...
ಮಂಚಿ ಗ್ರಾಮ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ವಿದ್ಯೆ ಕಲಿಸಿದ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ನನ್ನ ಹೃದಯದಲಿ ಅಚ್ಚಳಿಯದೆ ಸದಾ ಕಾಲ ಹಸಿರಾಗಿ ಇರುವ ಶಿಕ್ಷಕಿ ನನ್ನ ಮೆಚ್ಚಿನ ಮಂಜುಳಾ ಟೀಚರ್.
ನಾನು ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವಾಗ ಕನ್ನಡ ಮತ್ತು ಸಮಾಜ ಪಾಠಕ್ಕೆ ಇದ್ದರು. ಅಲ್ಲಿಯ ತನಕ ಶಾಲೆಗೆ ಹೋಗಲು ಹೆದರುತ್ತಿದ್ದ ನಾನು ಅವರು ಬಂದ ಮೇಲೆ ಖುಷಿಯಿಂದ ಹೋಗುತ್ತಿದ್ದೆ. ಶಿಕ್ಷಣ ಎಂದರೇನು, ವಿದ್ಯೆ ಯಾಕೆ ಬೇಕು, ಶಿಕ್ಷಣದ ಮಹತ್ವವನ್ನು ತಿಳಿಸಿದ ಮೊದಲ ಶಿಕ್ಷಕಿ ಅವರೇ. ವಿಪರ್ಯಾಸವೆಂದರೆ ಅವರು ನಮಗೆ ಪಾಠ ಮಾಡಲು ಸಿಕ್ಕಿದ್ದು ಎರಡೇ ವರ್ಷ. ನಂತರ ಮಂಗಳೂರಿಗೆ ವರ್ಗಾವಣೆಯಾದರು.
ಕೆಲವೇ ದಿನಗಳ ಹಿಂದೆ ನಮ್ಮಲ್ಲಿ ಒಂದು ಸಂಜೆಯಲ್ಲಿ ಪ್ರಶ್ನೆ ಕೇಳಿದರು. ಮಕ್ಕಳೇ ನೀವು ಮುಂದೆ ದೊಡ್ಡವರಾದ ಮೇಲೆ ಏನು ಕೆಲಸ ಮಾಡುತ್ತೀರಿ ಎಂದು. ಎಲ್ಲರೂ ಅವರವರ ಅನಿಸಿಕೆಯನ್ನು ವ್ಯಕ್ತಪಡಿಸಿದರು. ನಾನು ಮಾತ್ರ ಏನೂ ಹೇಳದೆ ಸುಮ್ಮನಿದ್ದೆ. ನೀನು ಹೇಳದಿದ್ದರೆ ನಾನು ಪಾಠವೇ ಮಾಡುವುದಿಲ್ಲ ಎಂದು ಹೇಳಿದರು. ಕೊನೆಗೆ ನಾನೇ ನಿಂತು ನನಗೆ ಯಾವ ಕೆಲಸ ಮಾಡಲು ಇಷ್ಟವಿಲ್ಲ ಎಂದು ಉತ್ತರ ಕೊಟ್ಟೆ. ಆಗ ಅವರು ಮಮತಾ ನೀನೂ ನನ್ನ ಹಾಗೆಯೇ ಶಿಕ್ಷಕಿಯಾಗಬೇಕು. ಟೀಚರ್ ಆಗಿ ನಿನ್ನ ನೋಡಬೇಕು ಎಂದು ಎಲ್ಲರ ಮುಂದೆ ಹೇಳಿದರು. ಆಗ ಅದನ್ನು ನಾನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಎರಡು ದಿನಗಳಲ್ಲಿ ಅವರು ವರ್ಗಾವಣೆಯಾಗುವಾಗ ಅವರು ಹೇಳಿದ ಮಾತು ಅರ್ಥವಾಯಿತು. ನನ್ನ ಲೈಫಲ್ಲಿ ಮೊದಲ ಬಾರಿಗೆ ನೀನೂ ನನ್ನ ಸ್ಥಾನಕ್ಕೆ ಬರುವಂತಾಗಬೇಕೆಂದು ಮೊದಲು ಹಾರೈಸಿದ ಮೊದಲ ಶಿಕ್ಷಕಿ.
ಇನ್ನೊಂದು ದಿನ ನಮಗೆ ಹೋಂ ವರ್ಕ್ ಮಾಡಲು ಹೇಳಿದ್ದರು. ಅವರು ಹೇಳಿದ ಸಮಯಕ್ಕೆ ನಾವು ಯಾರೂ ಮಾಡಿರಲಿಲ್ಲ. ಕೊನೆಯಲ್ಲಿ ಮಮತಾ, ನೀನೂ ಹೀಗೆ ಮಾಡ್ತೀಯಾ ಅಂತ ಅಂದು ಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕ್ಷಮಿಸಿ ಟೀಚರ್ ನಿಮ್ಮ ಆಸೆಯನ್ನು ನೆರವೇರಿಸಿ ಕೊಡಲು ಸಾಧ್ಯವಾಗಲಿಲ್ಲ. ಅಂದಿನ ಕಾಲದ ಹಣಕಾಸಿನ ವಿಚಾರವೋ , ಅಥವಾ ನನಗೆ ಯೋಗ್ಯತೆ ಇಲ್ಲವೇನೋ ಗೊತ್ತಿಲ್ಲ. ಕ್ಷಮೆಯಿರಲಿ ಇಂದಿಗೂ ಆ ಕೊರಗು ಕಾಡುತ್ತಿದೆ. ಎಲ್ಲಾ ಶಿಕ್ಷಕರಿಗೂ ಅಮ್ಮನ ಪ್ರೀತಿಯನ್ನು ಕೊಡಲು ಸಾಧ್ಯವಿಲ್ಲ. ಆದರೆ ಇವರು ಅಮ್ಮನ ಪ್ರೀತಿಯನ್ನು ಕೊಟ್ಟಿದ್ದಾರೆ. ನನಗೆ ಮಾತ್ರ ಅಲ್ಲ ನನ್ನ ಮನೆಯವರಿಗೂ ಇವರು ಪ್ರೀತಿಯ ಟೀಚರ್ ಆಗಿದ್ದರು. ಇಂದಿಗೂ ಕೂಡ ಮಮತಾ ಅನ್ನುವ ಬದಲು ಮಗಾ ಅಂಥಾನೇ ಕರೆಯುವುದು. ಟೀಚರ್, ಅಂದಿನ ದಿನಗಳಲ್ಲಿ ನನ್ನಿಂದ ಏನಾದರೂ ಬೇಸರವಾಗಿದ್ದರೆ ಕ್ಷಮೆ ಇರಲಿ. ನಿಮ್ಮ ಆಶೀರ್ವಾದ ಸದಾ ನನಗೆ ಶ್ರೀ ರಕ್ಷೆ. ಇಂತೀ ನಿಮ್ಮ ಮೆಚ್ಚಿನ ಶಿಷ್ಯೆ.
ಅನಿಲಕಟ್ಟೆ, ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ನನಗೆ ನನ್ನ ಜೀವನದಲ್ಲಿ ಶಿಕ್ಷಕರ ಪಾತ್ರ ಬಹು ದೊಡ್ಡದು. ನನಗೆ ಚಿತ್ರಕಲೆ ಅಂದರೆ ತುಂಬಾ ಇಷ್ಟವಿತ್ತು. ಆದರೆ ಅದರಲ್ಲೇ ಮುಂದೆ ಹೋಗಬಹುದೆಂಬ ಅರಿವು ನನಗೂ, ನನ್ನ ಹೆತ್ತವರಿಗೂ ಇರಲಿಲ್ಲ. ನಾನು 10ನೇ ತರಗತಿಯ ನಂತರ ವಿಜ್ಞಾನ ವಿಭಾಗವನ್ನು ಆಯ್ದುಕೊಂಡಿದ್ದೆ. ಕನ್ನಡ ಮೀಡಿಯಂ ಕಲಿತದ್ದರಿಂದ ಇಂಗ್ಲಿಷ್ ತುಂಬಾ ಕಷ್ಟವಾಯಿತು. ಕಲಿಯುವುದರಲ್ಲಿ ಮುಂದಿದ್ದ ನನಗೆ ಓದು ಬೇಡವೆನಿಸಿತು. ನನ್ನ ಚಿತ್ರಕಲಾ ಕೌಶಲ್ಯ ತಿಳಿದಿದ್ದ ನನ್ನ ಭೌತಶಾಸ್ತ್ರ ಶಿಕ್ಷಕರಾಗಿರುವ ಗೋಪಾಲಕೃಷ್ಣ ಗೋರೆ ಸರ್ ಹಾಗೂ ಜೀವಶಾಸ್ತ್ರ ಶಿಕ್ಷಕಿಯಾಗಿರುವ ಸುಚೇತಾ ಮೇಡಂ (ಸರ್ಕಾರಿ ಪದವಿ ಪೂರ್ವ ಕಾಲೇಜು ಬೈಲೂರು) ಇವರು ನನ್ನನ್ನ ಸ್ಟಾಫ್‌ರೂಮ್‌ಗೆ ಕರೆದು ನನಗೆ 12 ನೇ ತರಗತಿ ಪೂರ್ಣಗೊಳಿಸಿ, ನಂತರ ಚಿತ್ರಕಲಾ ಶಿಕ್ಷಕರನ್ನು ಭೇಟಿಯಾಗಿ, ಡ್ರಾಯಿಂಗ್‌ನಲ್ಲಿಯೇ ನಿನ್ನ ಭವಿಷ್ಯವನ್ನು ರೂಪಿಸುವಂತೆ ನನಗೆ ಸಮಜಾಯಿಸಿದರು.
ಅವರು ಆ ದಿನ ಕೊಟ್ಟ ಧೈರ್ಯ ಮತ್ತು ಪ್ರೋತ್ಸಾಹ ನನಗೆ ಈ ದಿನ ಚಿತ್ರಕಲೆಯಲ್ಲಿ ನನ್ನ ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಸಹಾಯ ಆಗಿದೆ. ಈ ಸಮಯದಲ್ಲಿ ನನ್ನೆಲ್ಲಾ ಗುರುಗಳಿಗೆ ಶಿಕ್ಷಕರ ದಿನದ ಶುಭ ಹಾರೈಕೆ ಸಲ್ಲಿಸುತ್ತ, ಚಿತ್ರಕಲಾ ಶಿಕ್ಷಕಿ ಶ್ರೀಮತಿ ಲಲಿತಾ ಮೇಡಂ (ಶ್ರೀದುರ್ಗಾ ಹೈಸ್ಕೂಲ್ ಕಾರ್ಕಳ), ಶ್ರೀ ಜಗದೀಶ್ ಮಾಷ್ಟ್ರು (ಶ್ರೀ ದುರ್ಗಾ ಪ್ರಾಥಮಿಕ ಶಾಲೆ ಜೋಡುರಸ್ತೆ), ಹಾಗೂ ನನ್ನೆಲ್ಲಾ ಪ್ರಾಥಮಿಕ, ಹೈಸ್ಕೂಲ್ ಹಾಗೂ ಕಾಲೇಜು ಶಿಕ್ಷಕರಿಗೆ ವಿಶೇಷ ಧನ್ಯವಾದಗಳು.
ಚಿತ್ರಕಲಾ ಶಿಕ್ಷಕರು
ಅಹಮದಾಬಾದ್, ಗುಜರಾತ್
****************************************
ನಮ್ಮ ಶಾಲೆಯಲ್ಲಿ ನನಗೆ ತುಂಬಾ ಇಷ್ಟವಾದ ಶಿಕ್ಷಕರೆಂದರೆ ನಮ್ಮ ಸಮಾಜ ವಿಜ್ಞಾನದ ಶಿಕ್ಷಕರಾದ ಶ್ರೀಯುತ ಹರಿಪ್ರಸಾದ್ ಕುಲಾಲ್. ಅವರು ನಮ್ಮ ತರಗತಿಯಲ್ಲಿ ಬಹಳ ಉತ್ಸಾಹದಿಂದ ಪಾಠ ಮಾಡುತ್ತಿದ್ದರು. ಇತಿಹಾಸದ ಘಟನೆಗಳನ್ನು ಕಥೆಗಳ ರೂಪದಲ್ಲಿ ವಿವರಿಸುತ್ತಿದ್ದ ರೀತಿ ನನಗೆ ಬಹಳ ಇಷ್ಟ. ಇದರಿಂದ ಪಾಠವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿತ್ತು. ಅವರು ನಮ್ಮ ಜೊತೆ ಸ್ನೇಹಿತರಾಗಿ ಇದ್ದರು. ನಮಗೆ ಜೀವನದಲ್ಲಿ ಹೇಗೆ ಇರಬೇಕು ಹೇಗೆ ನಾವು ಸಮಾಜದಲ್ಲಿ ಬದುಕಬೇಕು ಎನುವ ಪಾಠವನ್ನು ಕೂಡ ಹೇಳಿಕೊಟ್ಟಿದ್ದಾರೆ. ನಾನು ಯಾವುದಾದರೊಂದು ಸಮಸ್ಯೆಯಲ್ಲಿ ಇದ್ದಾಗ ಆ ಸಮಸ್ಯೆಯನ್ನು ಹೇಗೆ ಎದುರಿಸಿ ಮುಂದೆ ಹೋಗಬೇಕು ಎನ್ನುವ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅವರು ನನಗೆ ಪ್ರತಿಯೊಂದು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಮಾಡಿ ಕೊಡುತ್ತಿದ್ದರು. ಪ್ರತಿಯೊಂದು ವಿಷಯಗಳನ್ನು ತಿಳಿದುಕೊಳ್ಳಬೇಕೆಂದು, ಯಾವುದೇ ತರಬೇತಿ ಇದ್ದರು ಆ ತರಬೇತಿಗಳಿಗೆ ಭಾಗವಹಿಸುವಂತೆ ಪ್ರೋತ್ಸಾಹಿಸುತ್ತಿದ್ದರು. ಅವರು ಸಮಾಜ ವಿಜ್ಞಾನದ ಕಠಿಣ ವಿಷಯಗಳನ್ನು ಕೂಡ ಸರಳವಾಗಿ ವಿವರಿಸುತ್ತಾರೆ. ಅವರು ಕೇವಲ ಪಠ್ಯಪುಸ್ತಕ ಕ್ಕೆ ಸೀಮಿತರಾಗದೆ ನಿಜ ಜೀವನದ ಘಟನೆಗಳನ್ನು ಉದಾಹರಣೆಯಾಗಿ ನೀಡುತ್ತಾರೆ. ಇದರಿಂದ ನಮಗೆ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ ಮತ್ತು ಆಸಕ್ತಿಯು ಹೆಚ್ಚುತ್ತದೆ. ಅವರು ನಮ್ಮನ್ನು ಉತ್ತಮ ವಿದ್ಯಾರ್ಥಿಗಳನ್ನಾಗಿ ಮಾತ್ರವಲ್ಲದೆ, ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡಲು ಪ್ರೋತ್ಸಾಹಿಸುತ್ತಿದರು. ನಾವು ಏನೇ ತಪ್ಪು ಮಾಡಿದರು ಅವರು ಗದರಿಸದೇ ಆ ತಪ್ಪುಗಳ ಬಗ್ಗೆ ವಿಮರ್ಶೆ ಮಾಡಿ ಆ ತಪ್ಪುಗಳನ್ನು ಮುಂದೆ ಮಾಡದ ಹಾಗೆ ಸರಿಯಾದ ಮಾರ್ಗದರ್ಶನವನ್ನು ಕೊಡುತ್ತಿದ್ದರು. ನಾವು ಜೀವನದಲ್ಲಿ ಉತ್ತಮ ನಡವಳಿಕೆ ಮತ್ತು ಶಿಸ್ತುಗಳನ್ನು ಅಳವಡಿಸಬೇಕೆಂದು ತೋರಿಸಿಕೊಡುತ್ತಿದರು. ನಾನು ಅವರ ಬಳಿ ನನ್ನ ಜೀವನದ ಗುರಿಯ ಬಗ್ಗೆ ಹೇಳಿದಾಗ ಅವರು ನನಗೆ ತುಂಬಾ ಪ್ರೋತ್ಸಾಹಿಸಿದರು. ಅವರು ನನ್ನ ಗುರಿಗೆ ಬೆಂಬಲವನ್ನು ನೀಡಿದ್ದರು. ನನಗೆ ಪಾಠದ ವಿಷಯದಲ್ಲಿ ಏನೇ ಅನುಮಾನಗಳಿದ್ದರೂ ಅವರು ನನಗೆ ಪರಿಹಾರವನ್ನು ಕೊಡುತ್ತಿದ್ದರು. ಪ್ರತಿಯೊಂದು ವಿಷಯಗಳ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಕೊಡುತ್ತಿದ್ದರು. ನಾನು ನನ್ನ ಪ್ರೌಢಶಾಲೆಯನ್ನು ತೊರೆದ ನಂತರ ನನ್ನ ಗುರಿಗೆ ಸಂಬಂಧಪಟ್ಟಂತೆ ನಾನು ಯಾವ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಮಾಹಿತಿಯನ್ನು ಕೊಟ್ಟಿದ್ದರು. ನನಗೆ ಯಾವುದೇ ವಿಷಯದಲ್ಲಿ ಏನಾದರೂ ಮಾಹಿತಿ ಬೇಕಿದ್ದರು ಅವರು ನನಗೆ ಸ್ಪಷ್ಟವಾದ ಮಾಹಿತಿಯನ್ನು ಕೊಡುತ್ತಿದ್ದರು. ನನಗೆ ವೇದಿಕೆಯ ಮೇಲೆ ನಿಂತು ಧೈರ್ಯದಿಂದ ಎಲ್ಲರ ಮುಂದೆ ಮಾತನಾಡುವ ಹಾಗೆ ಪ್ರೋತ್ಸಾಹ ನೀಡಿದರು. ರಾಜಕೀಯ ವಿಷಯಗಳ ಬಗ್ಗೆ ಅರಿವು ಮೂಡಿಸಿದರು. ಒಬ್ಬ ವಿದ್ಯಾರ್ಥಿಯ ಜೀವನದ ರೂಪದರ್ಶಿಯಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯ. ಶಾಲೆಯಲ್ಲಿ ಮಾತ್ರವಲ್ಲದೆ, ಪ್ರಕೃತಿ ಅನುಭವಗಳು ಮತ್ತು ನಮ್ಮ ಸುತ್ತಲೂ ಇರುವ ಎಲ್ಲಾ ವಿಷಯಗಳು ನಮಗೆ ಕಲಿಯುವ ಪಾಠಗಳೇ, ಆದರೆ ಈ ಎಲ್ಲಾ ಜ್ಞಾನವನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಲು ನಮ್ಮನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಅನನ್ಯವಾದದು. ನಮ್ಮ ಜೀವನದಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಅದಕ್ಕೆ ಕಾರಣ ನಮ್ಮ ಗುರುಗಳು ಎಂಬುದನ್ನು ನಾವು ಎಂದಿಗೂ ಮರೆಯಬಾರದು. ಯಾವುದೇ ಸಮಯದಲ್ಲಿ ಏನೇ ಕಷ್ಟ ಬಂದರು ನನಗೆ ಬೆಂಬಲವಾಗಿ ನಿಂತಿರುವ ನನ್ನ ಶಿಕ್ಷಕರಾದ ಹರಿಪ್ರಸಾದ್ ಸರ್ ಇವರಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು, ಮತ್ತು ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ಸರಕಾರಿ ಪ್ರಥಮ ದರ್ಜೆ ಕಾಲೇಜು
ಪುತ್ತೂರು, ಜಿಡೆಕಲ್ಲು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ನಮ್ಮ ಜೀವನದಲ್ಲಿ ಹಲವಾರು ಜನರನ್ನು ನಾವು ಭೇಟಿಯಾಗುತ್ತೇವೆ. ಆದರೆ ಶಿಕ್ಷಕರ ಸ್ಥಾನ ಮಾತ್ರ ವಿಭಿನ್ನ. ಅವರು ಕೇವಲ ಪಾಠ ಹೇಳುವವರು ಮಾತ್ರವಲ್ಲ, ನಮ್ಮ ಬದುಕಿನ ದಾರಿದೀಪ ವಾಗಿರುತ್ತಾರೆ.
ನಾನು ಕಂಡ ಅತ್ಯಂತ ಪ್ರೀತಿಯ ಸರ್ ಅಂದರೆ ನಮ್ಮ ಪಿಯುಸಿ ನಲ್ಲಿದ್ದ ಕನ್ನಡ ಅಧ್ಯಾಪಕ ಜಗದೀಶ್ ಬಾರಿಕೆ ಸರ್. ಅವರು ಪಾಠ ಹೇಳುವ ರೀತಿ ತುಂಬಾ ಸ್ಪಷ್ಟವಾಗಿರುತ್ತದೆ. ಯಾವಾಗಲು ನಮ್ಮ ಪ್ರಶ್ನೆಗಳಿಗೆ ಸಹನೆಯಿಂದ ಉತ್ತರಿಸುತ್ತಾರೆ. ಕೇವಲ ಪುಸ್ತಕದ ಪಾಠವಲ್ಲ, ಜೀವನದಲ್ಲಿ ಒಳ್ಳೆಯ ವ್ಯಕ್ತಿಯಾಗಬೇಕೆಂಬ ಪಾಠವನ್ನೂ ಕಲಿಸುತ್ತಾರೆ. ಅವರ ಮಾತುಗಳಲ್ಲಿ ಸದಾ ಪ್ರೋತ್ಸಾಹ, ಅವರ ನೋಟದಲ್ಲಿ ಪ್ರೀತಿ, ನಮ್ಮ ತಪ್ಪುಗಳನ್ನು ಸರಿಪಡಿಸುವಲ್ಲಿ ಕಾಳಜಿ ಇರುತ್ತದೆ. ಅಷ್ಟೇ ಅಲ್ಲ, ನಾವು ಸಾಧನೆ ಮಾಡಿದಾಗ ಹೃದಯದಿಂದ ಸಂತೋಷ ಪಡುವರು.
ನಮ್ಮ ಪ್ರೀತಿಯ ಸರ್ ನನ್ನ ಜೀವನದ ಮಾದರಿ ವ್ಯಕ್ತಿ. ಅವರ ತಾಳ್ಮೆ, ಶ್ರಮ, ಪ್ರೀತಿ ಇವೆಲ್ಲ ನನಗೆ ಸದಾ ಪ್ರೇರಣೆ. ಇಂತಹ ಶಿಕ್ಷಕರಿದ್ದರೆ, ವಿದ್ಯಾರ್ಥಿಗಳ ಬದುಕು ಸದಾ ಬೆಳಕಿನಿಂದ ತುಂಬಿರುತ್ತದೆ.
ಉಪ್ಪಿನಂಗಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ಪ್ರತಿಯೊಬ್ಬ ಮನುಷ್ಯನ ಭವಿಷ್ಯ ನಿರ್ಮಾಣದಲ್ಲಿ ಗುರುವಿನ ಪಾತ್ರ ಇದ್ದೇ ಇರುತ್ತದೆ. ಕಲ್ಲು ಅಥವಾ ಮಣ್ಣಿನ ಮುದ್ದೆಯಂತಿರುವ ಮಗುವನ್ನು ಕೆತ್ತಿ, ತಿದ್ದಿ ತೀಡಿ ವಿದ್ಯಾರ್ಥಿಯ ರೂಪವನ್ನು ನೀಡುವಲ್ಲಿ ಗುರುವಿನ ಶ್ರಮ ಅಗಾಧ. ಗುರುವಿಲ್ಲದಿರೆ ಬದುಕಿನ ಗುರಿ ಅಸ್ಪಷ್ಟ. ಗುರುವಿದ್ದರೆ ಬದುಕಿನ ದಾರಿ ನಿರ್ದಿಷ್ಟ.
ಜೀವನದ ಹಾದಿಯಲ್ಲಿ ಮೊದಲ ಗುರು ತಾಯಿ-ತಂದೆಯಾದರೆ ನಂತರದ ಸ್ಥಾನ ವಿದ್ಯೆ ಕಲಿಸುವ ಗುರುವಿನದ್ದಾಗಿರುತ್ತದೆ. ನನ್ನ ಜೀವನದಲ್ಲಿ ಎಲ್ಲರೂ ಆದರ್ಶ ಗುರುಗಳೇ ಆಗಿದ್ದಾರೆ. ಆದರೆ ಪ್ರಾಥಮಿಕ ಶಾಲಾ ಹಂತದಲ್ಲಿ ತನ್ನ ಪ್ರತಿಭೆಗಳಿಂದಲೇ ನನ್ನ ಮನಸ್ಸನ್ನು ಆಕರ್ಷಿಸಿ ಸ್ಫೂರ್ತಿಯ ಸ್ಫಟಿಕವಾದ ಶ್ರೇಷ್ಠ ಗುರುಮಾತೆಯೆಂದರೆ ಶ್ರೀಮತಿ ಸರೋಜಿನಿ ನಾಗಪ್ಪಯ್ಯ, ಈಶ್ವರಮಂಗಲ.
ಸರೋಜಿನಿ ಟೀಚರ್ ನನ್ನ ಪ್ರಾಥಮಿಕ ಶಾಲಾ ಶಿಕ್ಷಕಿ. ದಕ್ಷಿಣ ಕನ್ನಡ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಮೇನಾಲ ಎಂಬ ವಿದ್ಯಾದೇಗುಲದಲ್ಲಿ ಗುರುವಾಗಿ ಸೇವೆ ಸಲ್ಲಿಸಿದ ಅಪ್ಪಟ ಹೃದಯವಂತ ಗುರು ಮಾತೆ. ಮೇನಾಲದ ಮಣ್ಣಿಗೆ ಶಿಕ್ಷಣ, ಕ್ರೀಡಾ ಕ್ಷೇತ್ರದಲ್ಲಿ ಹೆಸರು ತಂದುಕೊಡುವಲ್ಲಿ ಸರೋಜಿನಿ ಟೀಚರ ಶ್ರಮ ಬಹಳಷ್ಟಿದೆ. ಜನ ಮೆಚ್ಚಿದ ಶಿಕ್ಷಕಿ, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ದೆಹಲಿಯ ಬಾಬು ಜಗಜೀವನ್ ರಾಮ್ ಫೌಂಡೇಶನ್ ನೀಡುವ ಸಾವಿತ್ರಿ ಬಾಯಿ ಫುಲೆ ನ್ಯಾಶನಲ್ ಫೆಲೋಶಿಪ್ ಅವಾರ್ಡ್ ಇತ್ಯಾದಿ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದ ಗುರು ಇವರು.
ನನ್ನಂತಹ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಇಷ್ಟದ ಶಿಕ್ಷಕಿಯಾಗಿ ವಿದ್ಯಾರ್ಜನೆಗೈದ ಶಿಕ್ಷಕಿ ಸರೋಜಿನಿಯಮ್ಮ. ನನ್ನ ಜೀವನದಲ್ಲಿ ನನಗೊಂದು ಸಣ್ಣ ಗುರುತಿದೆಯೆಂದರೆ ಅದಕ್ಕೆ ಪ್ರೇರಣೆ ನನ್ನ ಈ ಅಚ್ಚುಮೆಚ್ಚಿನ ಶಿಕ್ಷಕಿ. ಹೌದು.. ಸರೋಜಿನಿ ಟೀಚರ್ ಅತ್ಯುತ್ತಮ ಲೇಖಕಿ, ಕವಯಿತ್ರಿ, ಬರಹಗಾರ್ತಿಯಾಗಿ ಗುರುತಿಸಿಕೊಂಡವರು. ಅವರ ಬರಹಗಳು, ಕವಿತೆಗಳನ್ನು ಓದುತ್ತಿದ್ದರೆ ನನಗೂ ಹೀಗೆ ಬರೆಯಬೇಕು ಎಂಬ ಹಂಬಲ ಮನಸ್ಸಿನಲ್ಲಿ ಮೂಡುತ್ತಿತ್ತು. ಶಾಲಾ ಹಂತದಲ್ಲಿ ಪ್ರಬಂಧ, ಲೇಖನಗಳನ್ನು ಬರೆಯಲು ಆರಂಭಿಸಿದೆ. ಆದರೆ ಕತೆ ಕವನಗಳನ್ನು ಬರೆಯಲು ಪ್ರಯತ್ನಿಸಿದರೂ ನನ್ನಿಂದ ಅವುಗಳಿಗೆ ಪರಿಪೂರ್ಣತೆಯನ್ನು ನೀಡಲಾಗುತ್ತಿರಲಿಲ್ಲ. ಪುಟ್ಟ ಮಗು ಅಂಬೆಗಾಲಿಡಲು ಪ್ರಯತ್ನಿಸಿ ಎಡವಿದಂತೆ ಕವನದ ಒಂದು ವಾಕ್ಯ ಆರಂಭಿಸಿ ಮತ್ತೇನು ಬರೆಯಲಿ ಎಂಬುದೇ ಗೊತ್ತಾಗುತ್ತಿರಲಿಲ್ಲ. ಆದರೆ ನಮ್ಮ ಸರೋಜಿನಿ ಟೀಚರ್ ಒಂದು ದಿನ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ನಮಗಾಗಿ ಚುಟುಕು ಕಾರ್ಯಗಾರ ಹಾಗೂ ಕತಾ ಕಮ್ಮಟಗಳನ್ನು ಏರ್ಪಡಿಸಿದ್ದರು. ಈ ಎರಡು ದಿನಗಳ ಎರಡು ಕಾರ್ಯಗಾರಗಳು ನನಗೆ ಕತೆ, ಚುಟುಕು, ಕವನಗಳನ್ನು ಬರೆಯಲು ಮುನ್ನುಡಿಯಾದವು. ಸರೋಜಿನಿ ಟೀಚರ್ ಏರ್ಪಡಿಸಿದ್ದ ಕಾರ್ಯಗಾರ ನನ್ನ ಬದುಕಿನ ಬರವಣಿಗೆಗಳಿಗೆ ಸ್ಫೂರ್ತಿಯಾದವು. ಇಂದು ನಾನು ಅದೇ ನನ್ನ ಗುರುವಿನ ಬಗ್ಗೆ ಬರೆಯಲು ಅವರೇ ಕಾರಣೀಭೂತರು. ಈ ಬಗ್ಗೆ ನನಗೆ ತುಂಬಾನೇ ಖುಷಿ ಮತ್ತು ಹೆಮ್ಮೆಯಿದೆ.
ಸರೋಜಿನಿ ಟೀಚರ್ ಒಬ್ಬ ಅತ್ಯುತ್ತಮ ವಾಗ್ಮಿ..ಭಾಷಣಗಾರ್ತಿ. ಅವರು ತರಗತಿಗೆ ಬಂದು ಪಾಠ ಮಾಡುವುದನ್ನು ಆಲಿಸಲು ವಿದ್ಯಾರ್ಥಿಗಳೆಲ್ಲ ಕಿವಿಯರಳಿಸಿ ಕಾಯುತ್ತಿದ್ದೆವು. ಅಷ್ಟು ಚೆನ್ನಾಗಿ ಕತೆ ಹೇಳುತ್ತಾ, ಸೊಗಸಾದ ಉದಾಹರಣೆಗಳನ್ನು ನೀಡುತ್ತಾ ಪಾಠ ಮಾಡುತ್ತಿದ್ದರು. ಯಾವುದೇ ಕಾರ್ಯಕ್ರಮಗಳಿದೆಯೆಂದರೆ ನಾನು ಟೀಚರ ಭಾಷಣ ಕೇಳಲು ಉತ್ಸುಕಳಾಗಿರುತ್ತಿದ್ದೆ. ಅವರ ಮಧುರ ಧ್ವನಿ, ಭಾವಪೂರ್ಣ ಮಾತು, ಅಲ್ಲಲ್ಲಿ ಬಳುಸುತ್ತಿದ್ದ ಶ್ಲೋಕ, ನುಡಿಮುತ್ತುಗಳು ಎಂತವರನ್ನೂ ಮನಸೂರೆಗೊಳಿಸುತ್ತಿದ್ದವು. ನನ್ನ ಟೀಚರ್ ಬೆನ್ನು ತಟ್ಟಿ ನನ್ನನ್ನೂ ಭಾಷಣ ಮಾಡುವಂತೆ ಮಾಡಿದವರು. ಶಾಲೆಯಲ್ಲಿ ಏನೇ ಕಾರ್ಯಕ್ರಮಗಳಿದ್ದರೂ ಭಾಷಣ, ನಿರೂಪಣೆ ಮಾಡಲು ನನಗೆ ಸೂಚನೆ ನೀಡುತ್ತಿದ್ದರು. ಅವರ ಪ್ರೋತ್ಸಾಹದಿಂದ ಅಂದಿನಿಂದ ಇಂದಿನವರೆಗೂ ನಾನು ಸಾವಿರಾರು ಜನರ ಮುಂದೆ ಧೈರ್ಯವಾಗಿ ಮಾತನಾಡುವ ಶಕ್ತಿ ಹೊಂದಿದ್ದೇನೆ. ಶಾಲಾ ಸುವರ್ಣ ಮಹೋತ್ಸವಕ್ಕೆ ಡಾನ್ಸ್ ಬಾರದ ನನ್ನನ್ನೂ ಕುಣಿಯುವಂತೆ ಮಾಡಿದ ಟೀಚರಿವರು. ಅಷ್ಟೇ ಯಾಕೆ..? ನನ್ನ ಕೈಯಲ್ಲಿ ಕೆರೆಗೆ ಹಾರ ಎಂಬ ನಾಟಕದಲ್ಲೂ ಕಥಾನಾಯಕಿ ಪಾತ್ರದಲ್ಲಿ ನಟಿಸಲು ಅವಕಾಶವಿತ್ತ ಗುರು ಅವರು.
ಮೇನಾಲ ಶಾಲೆಯಲ್ಲಿ ಸರೋಜಿನಿ ಟೀಚರ್ ಮಾಡಿರುವ ಕೆಲಸ ಒಂದೆರಡಲ್ಲ. ಹತ್ತೂರಿನಲ್ಲೂ ಪ್ರಖ್ಯಾತಿ ಪಡೆದಿರುವ ಇವರು ಶಾಲಾ ದಿನಗಳಲ್ಲೇ ಮಕ್ಕಳಲ್ಲಿ ಕ್ರೀಡೆ, ಸಾಹಿತ್ಯಿಕ ಮನೋಭಾವ, ಪರಿಸರ ಪ್ರಜ್ಞೆ, ಗಿಡ ನೆಡುವುದು, ಸ್ವಚ್ಛತೆಯ ಬಗ್ಗೆ ಕಾಳಜಿ ಮೂಡಿಸಿದವರು.
ಹಲವಾರು ವರ್ಷಗಳ ನಂತರ ಈ ವರ್ಷದ ವರಮಹಾಲಕ್ಷ್ಮಿ ಪೂಜೆಯಂದು ತವರು ಮನೆಯಲ್ಲಿದ್ದ ನಾನೂ ಅಮ್ಮನೊಂದಿಗೆ ಪಂಚಲಿಂಗೇಶ್ವರ ದೇವಸ್ಥಾನ ಈಶ್ವರಮಂಗಲಕ್ಕೆ ಹೋಗಿದ್ದೆ. ಸರೋಜಿನಿ ಟೀಚರ್ ಇವತ್ತು ಸಿಗ್ತಾರೆ ಮಾತಾಡ್ಲೇಬೇಕು ಎಂದುಕೊಂಡು ಹೋಗಿದ್ದೆ. ಅಲ್ಲಿ ಸಭಾ ಕಾರ್ಯಕ್ರಮದಲ್ಲಿ ಅವರ ಭಾಷಣವಿತ್ತು. ಯೌವನದಲ್ಲಿದ್ದ ಅದೇ ಸ್ವರ ಮಾಧುರ್ಯ ಮತ್ತೆ ಆಲಿಸಿದ ಸೌಭಾಗ್ಯ ನನ್ನದು…!! ಕಾರ್ಯಕ್ರಮ ಮುಗಿದ ನಂತರ ನೆರೆದಿದ್ದ ಭಕ್ತರನ್ನು ಮಾತನಾಡಿಸುತ್ತಾ ಇದ್ದರು. ನಾನೂ ಹೋಗಿ ಅವರನ್ನು ಮಾತನಾಡಿಸಿ ಕಾಲು ಹಿಡಿದು ಆಶಿರ್ವಾದ ಪಡೆದುಕೊಂಡೆ. ಹಿರಿ ವಯಸ್ಸಿನಲ್ಲೂ ಮಗುವನ್ನು ಮಾತನಾಡಿಸಿದಂತೆ ನನ್ನನ್ನೂ ಮಾತನಾಡಿಸಿದರು. ನನ್ನಂತೆ ಅಲ್ಲಿ ಸೇರಿದ್ದ ಅವರ ಶಿಷ್ಯವೃಂದದವರೂ ಆಶಿರ್ವಾದ ಪಡೆದುಕೊಳ್ಳುತ್ತಿದ್ದರು.
ನಿವೃತ್ತ ಜೀವನವನ್ನು ಸಾಗಿಸುತ್ತಿರುವ ಸರೋಜಿನಿ ಟೀಚರ್ ಅವರ ಬದುಕು ಆನಂದಮಯ, ಆರೋಗ್ಯದಾಯಕವಾಗಿರಲಿ ಎಂಬುದು ನನ್ನ ಪ್ರಾರ್ಥನೆ. ಗುರುವೆಂದರೆ ನನ್ನ ಸರೋಜಿನಿ ಟೀಚರಂತಿರಬೇಕು. ಸೋಲೋ…ಗೆಲುವೋ… ವಿದ್ಯಾರ್ಥಿಗಳ ಪ್ರತೀ ಹೆಜ್ಜೆಯಲ್ಲೂ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ಕೇವಲ ಸರ್ಟಿಫಿಕೇಟ್ ಕೈಯಲ್ಲಿದ್ದ ಮಾತ್ರಕ್ಕೆ ಯಾರೂ ಗುರುವಾಗಲು ಸಾಧ್ಯವಿಲ್ಲ. ಗುರು ಪ್ರತೀ ವಿಷಯದಲ್ಲೂ ಪಾಂಡಿತ್ಯ ಹೊಂದಿದ್ದು, ಅದನ್ನು ವಿದ್ಯಾರ್ಥಿಗಳಿಗೆ ಸುಲಲಿತವಾಗಿ ಧಾರೆಯೆರೆಯುವ ಚಾಣಾಕ್ಷತೆಯನ್ನು ಹೊಂದಿರಬೇಕು. ನನ್ನ ಬದುಕಿಗೆ ವಿದ್ಯೆ ಬುದ್ಧಿಯನ್ನು ಕಲಿಸಿ ದಾರಿದೀಪವಾದ ನನ್ನೆಲ್ಲಾ ಗುರುಗಳಿಗೆ ಈ ಅಕ್ಷರದರ್ಪಣೆ…
ಅರಿಯದ ವಯಸ್ಸಿನಲ್ಲಿ
ಅರಿವು ಮೂಡಿಸಿ ಒಲವ ಉಣಿಸಿ
ವಿದ್ಯೆ ಬುದ್ಧಿ ಕಲಿಸಿದ ಗುರು…
ತಪ್ಪಿದ ಹೆಜ್ಜೆ ಗೆಜ್ಜೆಯ ಸರಿಪಡಿಸಿ
ಅಕ್ಷರ ಕಲಿಸಿ ಅಕ್ಕರೆಯಿಂದಲಿ ಬೆಳೆಸಿ
ಬದುಕ ಬೆಳಗಿದ ಶಿಕ್ಷಕರೆಮ್ಮ ಉಸಿರು…
.............................................. ಅನಿಕೃತಿ
ಶ್ರೀಮತಿ ಸುಕೃತಿ ಅನಿಲ್ ಪೂಜಾರಿ
ಶರವೂರು, ಆಲಂಕಾರು
ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************
ಶ್ರೀ ಗುರುಭ್ಯೋ ನಮ್ಹ.. ನನ್ನ ಬಾಲ್ಯದ ಶಿಕ್ಷಣ ದಿನದಿಂದ ಪದವಿ ಶಿಕ್ಷಣ ದವರೆಗೂ ದೊರೆತ ನನ್ನ ಗುರುಗಳಿಗೆಲ್ಲರಿಗೂ ನಾನು ಚಿರಋಣಿ ಯಾಗಿದ್ದೇನೆ. ಉತ್ತಮ ಶಿಕ್ಷಕರುಗಳನ್ನು ನನ್ನ ಪಾಲಿಗೆ ಒದಗಿಸಿಕೊಟ್ಟ ಈ ವಿಶ್ವ ಕ್ಕೆ ಅನಂತ ಅನಂತ ಕೃತಜ್ಞತೆ ಗಳನ್ನು ಅರ್ಪಿಸುತ್ತೇನೆ. ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು ದೊರೆತುದ ಫಲವ ಪ್ರಸಾದವೆಂದುಣ್ಣು
ಭರಿಸು ಲೋಕದ ಭರವ ಪರಮರ್ಥವನ್ನು ಬಿಡದೆ
ಹೊರಡು ಕರೆಬರಲ್ ಅಳದೆ ಮಂಕುತಿಮ್ಮ.
ಡಿ. ವಿ. ಜಿ. ಯವರ ಕವಿವಾಣಿ ನೆನಪು ಮಾಡಿಕೊಳ್ಳುತ್ತೇನೆ. ಕಾರಣ ನನ್ನ ಮೊದಲ ಆಯ್ಕೆ ಶಿಕ್ಷಕಿ ಆಗ್ಬೇಕು ಮತ್ತೆ ವೃತ್ತಿ ಬದಲಾವಣೆ ಮಾಡಿಕೊಳ್ಳಬೇಕು ಅಂತಿದ್ದ ನನಗೆ ಹಲವು ಸ್ಪರ್ಧಾತ್ಮಕ ಪರೀಕ್ಷೆ ಬರೆದ ನನಗೆ ವೃತ್ತಿ ಬದಲಾವಣೆ ಅವಕಾಶ ಇನ್ನು ಸಿಗ್ಲಿಲ್ಲ.
ಆದ್ರೂ ಪ್ರಯತ್ನ ಬಿಡ್ತಿಲ್ಲ ಮುಂದೆ ಒಂದು ದಿನ ಸಿಗಬಹುದು ಅನ್ನುವ ನಿರೀಕ್ಷೆ ಯಲ್ಲಿ ಇದ್ದೇನೆ. ಆದ್ರೂ ಈ ವೃತ್ತಿ ಯಲ್ಲಿ ಇರುವುದರಿಂದ ಇದು ಸೂಕ್ತ ಅಂತ ಅನಿಸಿತು. ನಾನು ಓದಿದ್ದು ಹಾಸನ ಜಿಲ್ಲೆ ಆಲೂರು ತಾಲೂಕಿನ ಪಾಳ್ಯ ಗ್ರಾಮದಲ್ಲಿ. ನನ್ನ ನೆಚ್ಚಿನ ಶಿಕ್ಷಕಿಯಾಗಿ ಶ್ರೀಮತಿ ನಾಗವೇಣಿ ಮಿಸ್. ನಾನು ಮೊದಲಿಗೆ ಮಾರುಹೋದದ್ದು ಅವ್ರ ಪಾಠಕಲ್ಲ. ಅವರ ಉಡುಗೆ -ತೊಡುಗೆ, ನಡೆಯುವ ರೀತಿ, ಹಾವ -ಭಾವ, ಮಾತನಾಡುವ ಶೈಲಿಗೆ. ತದನಂತರ ಅವರು ಯಾವುದೇ ವಿಷ್ಯ ಭೋದಿಸಿದರು ನನಗೆ ಅಚ್ಚು ಮೆಚ್ಚು. ಬೇರೆಲ್ಲ ವಿಷ್ಯಗಳಲ್ಲಿ ನನಗೆ ಅಂಕ ಕಡಿಮೆ ಬಂದರು ಅವ್ರು ತೆಗೆದು ಕೊಳ್ಳುತಿದ್ದ ಇಂಗ್ಲಿಷ್ ವಿಷಯ ದಲ್ಲಿ 25ಕ್ಕೆ 25ಅಂಕ ಗಳಿಸಿಯೇ ಗಳಿಸುತ್ತಿದ್ದೆ. ಇದರಿಂದ ಅವ್ರಿಗೆ ನಾನು ಇಷ್ಟ ಆದೇ. ಆಗ ನಾನು ಅವ್ರಿಗೆ ಇಷ್ಟ ಅಂತ ಗೊತ್ತಾದ್ ಮೇಲೆ ಅವ್ರ್ ಕ್ಲಾಸ್ ಲ್ಲಿ ನಾನು ಶೈನ್ ಆಗ್ತಿದ್ದ ಖುಷಿ ಈಗ್ಲೂ ಖುಷಿ ಕೊಡುತ್ತೆ..
ನಮ್ಮ ಕ್ಲಾಸ್ ಆಗೆಲ್ಲ ಹೌಸ್ ಫುಲ್ ಆಗಿರುತಿತ್ತು. 90 ಮಂದಿ ಮಕ್ಳು ಒಂದು ತರಗತಿಯಲ್ಲಿ. ಅಷ್ಟು ಮಕ್ಕಳಲ್ಲಿ ಟಾಪ್ 5 ಪ್ಲೇಸ್ ಗಳಲ್ಲಿ ನಾನು ಒಬ್ಬಳಾಗಿರುತ್ತಿದ್ದುದು ಬಹಳ ಸಂತೋಷ ವಾಗ್ತಾ ಇತ್ತು. ಈಗ್ಲೂ ನಮ್ಮ ತಾಯಿ ಯವ್ರು ನಾಗವೇಣಿ ಮಿಸ್ ಗೆ ಸಿಕ್ಕಿದ್ರೆ ಅವ್ರು ಕೇಳು ಮಾತು ನನ್ನ ಬೆಸ್ಟ್ ಸ್ಟೂಡೆಂಟ್ ಪ್ರಿಯ ಹೇಗಿದ್ದಾಳೆ? ಅಂತಾ...
ವಿದ್ಯಾರ್ಥಿ ಜೀವನ ದಿಂದ ನಾನು ಶಿಕ್ಷಕಿ ಯಾಗಿ 17 ವರ್ಷ ಕಳೆದರು ಬೆಸ್ಟ್ ಸ್ಟೂಡೆಂಟ್ ಸ್ಥಾನ ವನ್ನು ಹಾಗೆ ಉಳಿಸಿಕೊಂಡಿದ್ದೇನೆ. ನನ್ನ ನೆಚ್ಚಿನ ಶಿಕ್ಷಕರ ಕುರಿತು ಅನಿಸಿಕೆಗಳನ್ನು ತಿಳಿಸಲು ಅವಕಾಶ ನೀಡಿದ ತಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಸಹಶಿಕ್ಷಕಿ. ದ. ಕ. ಜಿ. ಪ. ಹಿ.
ಪ್ರಾಥಮಿಕ ಶಾಲೆ, ಇನೋಳಿ.
ಉಳ್ಳಾಲ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ಭವಿಷ್ಯದ ಜೀವನಕ್ಕೆ ಮುನ್ನಡಿಯಿಡಲು ಪ್ರೇರಕರಾದ ನನ್ನ ನೆಚ್ಚಿನ ಶಿಕ್ಷಕಿಯಾದ ಲತಾ ಮೇಡಂ ಇವರಿಗೆ ಪ್ರಣಾಮಗಳನ್ನು ಸಲ್ಲಿಸುವೆ. ಪ್ರೌಢ ಶಿಕ್ಷಣದ ಹಂತದಲ್ಲಿ ಸಮಾಜ ವಿಜ್ಞಾನದ ಬಗ್ಗೆ ಆಸಕ್ತಿ, ಕೌತುಕ ಬರುವಂತೆ ಪ್ರೇರೇಪಿಸಿ ಶಿಕ್ಷಕಿಯಾಗಬೇಕೆಂಬ ಕನಸನ್ನು ನನ್ನಲ್ಲಿ ತುಂಬಿದವರೆ ನನ್ನ ಪ್ರೀತಿಯ ಟೀಚರ್. ಹೈಸ್ಕೂಲಿನ ದಿನಗಳಲ್ಲಿ ಆಸಕ್ತಿ ಬರುವಂತೆ ಮಾಡಿದ ಅವರ ಬೋಧನೆ ನನಗೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಪಾಠದ ಜೊತೆಗೆ ಅವರ ನೀತಿ ಬೋಧನೆಯು ನನ್ನಲ್ಲಿ ಮೌಲ್ಯಾಧಾರಿತ ಮನೋಭಾವವನ್ನು ಬೆಳೆಸಿದೆ. ಹೈಸ್ಕೂಲು ಶಿಕ್ಷಕಿಯಾಗಬೇಕೆಂಬ ಆಸೆ ಚಿಗುರೊಡೆಯಲು ಸ್ಪೂರ್ತಿಯಾದವರು ನನ್ನ ಸಮಾಜವಿಜ್ಞಾನ ಶಿಕ್ಷಕರು. ಅವರು ತೋರಿದ ದಾರಿಯಲ್ಲಿ ನಡೆದ ನಾನು ಸಮಾಜ ವಿಜ್ಞಾನ ಶಿಕ್ಷಕಿಯಾದೆ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಸಹೃದಯಿ, ಮಾತೃ ವಾತ್ಸಲ್ಯದ ನನ್ನ ಶಿಕ್ಷಕಿಗೆ ನಾನು ಚಿರಋಣಿ. ಅಂಕಗಳಿಕೆಯ ಪ್ರತಿಸ್ಪರ್ಧೆ ಇಲ್ಲದ ಅಂದಿನ ತರಗತಿ ಬೋಧನೆಯು ಎಷ್ಟೊಂದು ಮಧುರವಾಗಿತ್ತು. ಉತ್ಸಾಹದ ಚಿಲುಮೆಯಾಗಿದ್ದ ನನ್ನ ಶಿಕ್ಷಕರ ತರಗತಿಯೆ ಒಂದು ಸುಂದರ ಅನುಭೂತಿ. ನಾನು ಇಷ್ಟಪಟ್ಟು ಪಡೆದುಕೊಂಡ ಈ ವೃತ್ತಿ ನನ್ನ ಸರ್ವಸ್ವ.
ಸರಕಾರಿ ಪ್ರೌಢ ಶಾಲೆ ನೀರ್ಕೆರೆ
ಮೂಡುಬಿದಿರೆ, ಮಂಗಳೂರು
****************************************
ಶಿಕ್ಷಕರೆಂದರೆ ಕೇವಲ ಪಾಠ ಪರೀಕ್ಷೆ ಮಾಡಿ ಅಂಕ ನೀಡುವವರಲ್ಲ ಬದಲಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಸ್ಫೂರ್ತಿ ಹಾಗೂ ದಾರಿದೀಪ ನೀಡುವ ದೇವರಾಗಿರುತ್ತಾರೆ. ನನ್ನ ಜೀವನದ ಪ್ರತಿಘಟ್ಟದಲ್ಲೂ ನನ್ನನ್ನು ಹುರಿದುಂಬಿಸಿದವರು ನನ್ನ ನೆಚ್ಚಿನ ಶಾಲಾ ಶಿಕ್ಷಕರಾದಂತಹ ನವೀನ್ ಸರ್. ಕುಗ್ಗಿದಾಗ ಧೈರ್ಯವ ತುಂಬಿ, ಗೆದ್ದಾಗ ಸಂಭ್ರಮಿಸಿದವರು ನನ್ನ ಅಚ್ಚುಮೆಚ್ಚಿನ ನವೀನ್ ಸರ್. ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ನನ್ನ ಮುಂದೂಡಿ ತಾನೂ ಮಕ್ಕಳೊಡನೆ ಬೆರೆತು ಛಲವ ತುಂಬಿದವರು ನನ್ನ ನವೀನ್ ಸರ್. ಅಂದಿಗೂ ಇಂದಿಗೂ ಎಂದಿಗೂ ನಾ ಚಿರಋಣಿ ನಿಮಗೆ.
ಮಾಳ ಮಂಜಲ್ತಾರ್
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
****************************************
ಇವರನ್ನು ನಾನು ಕಂಡ ಮೊದಲ ದಿನ ನನಗೆ ಭಯ ಆಯ್ತು. ಆದರೆ ಅವರ ಆ ನಗು, ಮಾತು, ಗುಣ, ಮನರಂಜನೆ ನನ್ನ ಮನದಲಿ ಉಳಿಯಿತು... ನೋಡಲು ಸಾಮಾನ್ಯ ಆದರೆ ನೀವು ನಮಗೆ ಕಲಿಸಿದ ಜೀವನದ ಗುರಿ, ಸಾಧನೆಯ ಹಠ, ಶಿಸ್ತು ಇದೆಲ್ಲ ನಮ್ಮ ಪಾಲಿನ ಅದೃಷ್ಟ. ನೀವು ಕೇವಲ ಪಾಠ ಅಲ್ಲದೆ ಪ್ರತಿಯೊಂದರಲ್ಲಿ ತೊಡಗಿಸಿಕೊಂಡು ಎಲ್ಲರ ಮುಂದೆ ಸಾಮಾನ್ಯ ವ್ಯಕ್ತಿ ಆಗಿರುತ್ತೀರಿ.. ನೀವೂ ನನಗೆ ಶಿಕ್ಷಕರಾಗಿ ಸಿಕ್ಕಿರುವುದು ನನ್ನ ಪಾಲಿನ ಪುಣ್ಯ.. ನೂರು ಕಾಲ ಸದಾ ಖುಷಿ ನೆಮ್ಮದಿಯಿಂದ ಬಾಳಿ. ಸಾಧನೆಗೆ ಒಂದು ಹೆಸರು ನೀವೂ.. ಶಿಕ್ಷಕ ದಿನಾಚರಣೆ ಶುಭಾಶಯಗಳು ಸರ್..
ಕೊಪ್ಪ , ಚಾರ್ವಾಕ ,ಕುದ್ಮಾರು
ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************
ಪ್ರತಿಯೊಬ್ಬ ವಿದ್ಯಾರ್ಥಿಯ ಕನಸುಗಳನ್ನು ಗುರುತಿಸಿ ಅವುಗಳನ್ನು ವಾಸ್ತವಕ್ಕೆ ತಿರುಗಿಸುವ ಮಾರ್ಗವನ್ನು ತೋರಿಸುವವನು ಶಿಕ್ಷಕ. ಅವರ ಕಠಿಣ ಪರಿಶ್ರಮವೇ ನಮ್ಮ ಯಶಸ್ಸಿಗೆ ಕಾರಣ..
ಕಲ್ಲನ್ನು ಶಿಲೆಯಾಗಿಸುವ ಶಿಲ್ಪಿಯಂತೆ ಮಕ್ಕಳ ಭವಿಷ್ಯಕ್ಕೆ ಸುಂದರ ರೂಪ ನೀಡುತ್ತಿರುವ ಶಿಕ್ಷಕರು ದೇವರ ಸ್ವರೂಪ...
ನನ್ನ ಗುರುಗಳ ಪಾದಗಳಿಗೆ ನಾನು ನಮಸ್ಕರಿಸುತ್ತೇನೆ, ಅವರು ನನಗೆ ಜ್ಞಾನಸಾಗರವನ್ನು ನೀಡಿದ್ದಾರೆ, ಅವರಿಗೆ ಈ ಉಪಕಾರವನ್ನು ನಾನು ಹೇಗೆ ಮರುಪಾವತಿಸಲಿ, ನನಗೆ ನೀವೇ ದೇವರು... ನನ್ನ ಪ್ರೀತಿಯ ಎಲ್ಲಾ ಗುರುವೃಂದಕ್ಕೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು...
ದ್ವಿತೀಯ ವರ್ಷದ ಬಿ ಎ
ಕರ್ನಾಟಕ ಆರ್ಟ್ಸ್ ಕಾಲೇಜು
ಧಾರವಾಡ
****************************************