ಜೀವನ ಸಂಭ್ರಮ : ಸಂಚಿಕೆ - 207
Sunday, September 14, 2025
Edit
ಜೀವನ ಸಂಭ್ರಮ : ಸಂಚಿಕೆ - 207
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ಬಹುತೇಕ ದುಃಖಗಳಿಗೆ ನಾವು ಹೇಗೆ ಕಾರಣರಾಗುತ್ತೇವೆ? ನೋಡೋಣ. ಈ ಕಥೆ ಓದಿ. ದೇವರು, ಈ ಸುಂದರ ಭೂಮಂಡಲವನ್ನು ರಚಿಸಿದನು. ಅದ್ಭುತ ನಿಸರ್ಗವನ್ನು ರೂಪಿಸಿದ. ಬಗೆ ಬಗೆಯ ಪ್ರಾಣಿ, ಪಕ್ಷಿ, ಜಲಚರಗಳು, ಗಿಡ ಮರ, ಬಳ್ಳಿಗಳನ್ನು ರೂಪಿಸಿದ. ಕಡೆಯದಾಗಿ ಬುದ್ಧಿವಂತ ಮಾನವನನ್ನು ರೂಪಿಸಿದ. ಆತ ಎಲ್ಲಾ ಪ್ರಾಣಿ ಪಕ್ಷಿಗಳಿಗಿಂತ ಸುಂದರ ಮನಸ್ಸನ್ನು ಮಾನವನಿಗೆ ಅಳವಡಿಸಿದನು. ಯಾವ ಪ್ರಾಣಿಗಳಿಗೂ ಇಲ್ಲದ ಬುದ್ಧಿಯನ್ನು ರೂಪಿಸಿದನು. ಸುಂದರ ದೇಹವನ್ನು ರೂಪಿಸಿದ. ಆತನಿಗೆ ಒಂದು ಇಚ್ಛೆಯಾಯಿತು. ನಾನು ಈ ಸುಂದರ ಜಗತ್ತನ್ನು ರೂಪಿಸಿದ್ದೇನೆ, ಈ ನನ್ನ ಜಗತ್ತಿನ ಬಗ್ಗೆ ಪ್ರಾಣಿ ಪಕ್ಷಿಗಳು ಮತ್ತು ಮನುಷ್ಯನ ಅಭಿಪ್ರಾಯ ಹೇಗಿದೆ? ಎಂದು ತಿಳಿದುಕೊಳ್ಳಲು, ಬೇರೆ ಬೇರೆ ಪಕ್ಷಿ, ಪ್ರಾಣಿ, ಮನುಷ್ಯರ ಮುಖಂಡರನ್ನು ಆಹ್ವಾನಿಸಿದನು. ಮುಖಂಡ ಪಕ್ಷಿಗಳು, ಮುಖಂಡ ಪ್ರಾಣಿಗಳು ಹಾಗೂ ಮುಖಂಡ ಮನುಷ್ಯ ಎಲ್ಲರೂ ದೇವನ ಸಮೀಪಕ್ಕೆ ಹೋದರು. ಪ್ರಾಣಿ, ಪಕ್ಷಿಗಳು ಬರಿ ಕೈಯಲ್ಲಿ ಹೋಗಿದ್ದವು. ಮನುಷ್ಯ ಮೂಟೆಯೊಂದಿಗೆ ಹೋಗಿದ್ದನು. ದೇವನಿಗೆ ಸಂತೋಷವಾಯಿತು. ಈ ಮನುಷ್ಯ ನನ್ನ ಜಗತ್ತಿನ ವೈಭವವನ್ನು ಹೇಳಲು ಇಷ್ಟೊಂದು ವಿಷಯ ಸಂಗ್ರಹಿಸಿಕೊಂಡು ಬಂದಿದ್ದಾನೆ ಎಂದು. ಮೊದಲಿಗೆ ಪಕ್ಷಿಗಳಿಗೆ ಕೇಳಿದ, ನನ್ನ ಜಗತ್ತು ಹೇಗಿದೆ? ಎಂದು. ಪಕ್ಷಿ ಹೇಳಿತು, ಎಂತಹ ಅದ್ಭುತ ಜಗತ್ತು! ತಿನ್ನಲು ಕೊರತೆ ಇಲ್ಲ, ಕುಡಿಯಲು ಕೊರತೆಯಿಲ್ಲ, ಹಾರಾಡಿ, ಹಾಡಿ ನಿನ್ನ ನಿಸರ್ಗದ ವೈಭವ ನೋಡುತ್ತಿದ್ದರೆ ಸ್ವರ್ಗ ಬೇರಿಲ್ಲ ಎಂದಿತು. ಹಾಗಾಗಿ ನಾನು, ನನ್ನ ಧ್ವನಿಯ ಮೂಲಕ ನಿನ್ನ ನಿಸರ್ಗ ಸಂಗೀತ ಮಾಡಿ ಶ್ರೀಮಂತ ಮಾಡಿದ್ದೇನೆ ಎಂದಿತು.
ಪ್ರಾಣಿಗಳನ್ನು ಕೇಳಿದ, ಹೇಗಿದೆ ನನ್ನ ಜಗತ್ತು? ಎಂದು. ಪ್ರಾಣಿಗಳು ಹೇಳಿದವು, ನಿನ್ನ ಜಗತ್ತು ಅದ್ಬುತ! ನಮಗೆ ಬೇಕಾದ ಆಹಾರ, ನೀರು, ನಾವು ತಿರುಗಾಡುವಲ್ಲೆಲ್ಲ ಇದೆ. ನಮಗೇನು ಕೊರತೆ ಇಲ್ಲ. ಕೊರತೆ ಇಲ್ಲದಂತೆ ನಿರ್ಮಿಸಿದೆಯಲ್ಲ ನಿನಗೆ ನಮ್ಮ ಸವಿನಯ ಪ್ರಣಾಮ ಸಲ್ಲಿಸಲು ಬಂದಿದ್ದೇನೆ ಅಂದಿತು. ಮೀನನ್ನು ಕೇಳಿದ, ಹೇಗಿದೆ ನನ್ನ ಜಗತ್ತು ? ಎಂದು. ಆಗ ಮೀನು ಹೇಳಿತು, ದೇವನೇ ನನಗೇನು ಕೊರತೆ ಇಲ್ಲ, ತೃಪ್ತಿಯಿಂದ ಇದ್ದೇನೆ, ನಿನಗೆ ನನ್ನ ನಮಸ್ಕಾರ ಎಂದಿತು. ಕಡೆಗೆ ಮಾನವನನ್ನು ಪ್ರಶ್ನಿಸಿದ. ಈಗ ನೀನು ಹೇಳು ಹೇಗಿದೆ ನನ್ನ ಜಗತ್ತು? ಎಂದು. ಏಕೆಂದರೆ ನೀನು ಹೊತ್ತು ತಂದಿರುವ ವರದಿ ಹೆಚ್ಚು ಇದೆ. ಇದನ್ನು ಕೇಳಿ ಇಲ್ಲಿ ಬಂದಿರುವ ಎಲ್ಲಾ ಪಕ್ಷಿ, ಪ್ರಾಣಿಗಳು ಸಂತೋಷಪಡಲಿ ಎಂದನು. ಆಗ ಮನುಷ್ಯ ತನ್ನ ಹೊರೆ ಬಿಚ್ಚಿ ಹೇಳಿದ. ಏನಂತ ಹೇಳಲಿ ದೇವನೇ. ನೀನು ನಮಗೆ ಬಹಳ ಅನ್ಯಾಯ ಮಾಡಿದೆ. ಇಲ್ಲಿ ಬರೆದು ತಂದಿರುವುದೆಲ್ಲ ನೀನು ಮಾಡಿರುವ ಅನ್ಯಾಯ ಎಂದನು. ಏನು ಅನ್ಯಾಯ? ಎಂದು ಭಗವಂತ ಕೇಳಿದ. ಎಷ್ಟು ಅಂತ ಹೇಳಲಿ ಭಗವಂತನೇ. ಪಕ್ಷಿಗಳು ಹಾರುತ್ತವೆ, ಅದಕ್ಕೆ ರೆಕ್ಕೆ ಅಳವಡಿಸಿದೆ, ನಮಗೆ ರೆಕ್ಕೆ ಅಳವಡಿಸಲಿಲ್ಲ, ನಮಗೆ ಹಾರದಂತೆ ಮಾಡಿದೆ. ಮೀನುಗಳು ಈಜುತ್ತವೆ. ಅದಕ್ಕೆ ಈಜುರಕ್ಕೆ ಮಾಡಿದೆ. ನಮಗೆ ಈಜು ರಕ್ಕೆಗಳು ಇಲ್ಲ. ಮೀನಿನಂತೆ ನೀರಿನಲ್ಲಿ ಈಜಿ ಅಲ್ಲೇ ಇರಲು ಸಾಧ್ಯವಿಲ್ಲ. ಪ್ರಾಣಿಗಳಿಗೆ ನಾಲ್ಕು ಕಾಲು ನೀಡಿದೆ. ಅವು ವೇಗವಾಗಿ ಓಡುತ್ತವೆ. ನಮಗೆ ಎರಡೇ ಕಾಲು ನೀಡಿದೆ. ಅವು ನಮ್ಮನ್ನು ಬೆನ್ನಟ್ಟಿದರೆ ಓಡಲು ಆಗುವುದಿಲ್ಲ. ನಮಗೆ ಕುಳಿತಲ್ಲೇ ಹಣ್ಣು ಸಿಗದಂತೆ ಮಾಡಿದೆ. ಬೇಕೆಂದಾಗ ನೀರು ಸಿಗದಂತೆ ಮಾಡಿದೆ. ನೀರು ಇರುವಲ್ಲಿ ಹುಡುಕಿಕೊಂಡು ಹೋಗುವಂತೆ ಮಾಡಿದೆ. ಒಂದರಂತೆ ಒಂದಿಲ್ಲ. ಕೆಲವರು ಶ್ರೀಮಂತರು, ಕೆಲವರು ಬಡವರು, ಕೆಲವರು ಸ್ವರೂಪರು ಕೆಲವರು ಕುರೂಪರು, ಕೆಲವರು ಬಲಿಷ್ಠರು ಕೆಲವರು ದುರ್ಬಲರು, ಅಷ್ಟೊಂದು ತಾರತಮ್ಯ ಮಾಡಿದೆ. ಬೇಕೆಂದಾಗ ಮಳೆ ಬೀಳದೆ, ಬೇಕಾದ ಕಡೆ ಮಳೆ ಬೀಳದೆ, ಎಲ್ಲಾ ಕಡೆ ಮಳೆ ಸುರಿಸುವೆ. ಹೀಗೆ ತನ್ನ ಬುದ್ಧಿ ಬಳಸಿ, ಬೇರೆಬೇರೆ ಪಕ್ಷಿ ಮತ್ತು ಪ್ರಾಣಿಗಳೊಂದಿಗೆ ಮತ್ತು ಇತರ ಮನುಷ್ಯರೊಂದಿಗೆ ಹೋಲಿಸಿಕೊಂಡು, ಕೊರತೆಯನ್ನು ಪಟ್ಟಿ ಮಾಡಿಕೊಂಡು, ಹೋಗಿದ್ದನು. ಆಗ ಭಗವಂತ ಹೇಳಿದ ಇನ್ನು ಮನುಷ್ಯನನ್ನು ಕೇಳುವುದೇ ಬೇಡ ಎಂದು ಅಂದೇ ತೀರ್ಮಾನಿಸಿದ.
ಈ ಕಥೆ ವಿಶ್ಲೇಷಿಸಿದರೆ ನಮ್ಮ ದುಃಖದ ಕಾರಣಗಳು ತಿಳಿಯುತ್ತದೆ.
1. ಮನುಷ್ಯ, ಬೇರೆ ಪ್ರಾಣಿಗಳು, ಪಕ್ಷಿಗಳೊಂದಿಗೆ ಹೋಲಿಸಿಕೊಂಡು, ಅವುಗಳಲ್ಲಿ ಇರುವ ವಿಶೇಷತೆ ತನಗೆ ಇಲ್ಲ ಎಂದು ಕೊರಗುತ್ತಾ ದುಃಖ ಪಡುತ್ತಾನೆ.
2. ಮನುಷ್ಯ, ಕೇವಲ ಪ್ರಾಣಿ ಅಷ್ಟೇ ಅಲ್ಲ ಮತ್ತೊಬ್ಬನೊಂದಿಗೆ ಹೋಲಿಸಿಕೊಂಡು, ತನ್ನಲ್ಲಿ ಇಲ್ಲದಿರುವುದನ್ನು ನೆನೆದು ದುಃಖ ಪಡುತ್ತಾನೆ.
3. ಬೇರೆಯವರ ತಪ್ಪನ್ನು ಗುರುತಿಸಿ, ಮತ್ತೆ ಮತ್ತೆ ನೆನೆಸಿಕೊಂಡು, ಬೇರೆಯವರ ಮುಂದೆ ಆ ತಪ್ಪನ್ನು ತೋರಿಸಿ ದುಃಖ ಪಡುತ್ತಾನೆ.
4. ತಾನು ಮಾಡಿದ ತಪ್ಪನ್ನು ಮತ್ತೆ ಮತ್ತೆ ನೆನೆಸಿಕೊಂಡು ದುಃಖ ಪಡುತ್ತಾನೆ.
5. ತನ್ನಲ್ಲಿರುವ ವಸ್ತುಗಳನ್ನು ಬೇರೆಯವರ ವಸ್ತುಗಳೊಂದಿಗೆ ಹೋಲಿಸಿಕೊಂಡು ಕೊರತೆಯಿದ್ದಲ್ಲಿ ದುಃಖ ಪಡುತ್ತಾನೆ.
6. ತನ್ನಲ್ಲಿ ಇರುವ ಕೊರತೆ ನೆನೆದು ದುಃಖಿಸುತ್ತಾನೆ.
7. ತನ್ನ ಮತ್ತು ಬೇರೆಯವರ ದೋಷ ಗುರುತಿಸಿ ದುಃಖ ಪಡುತ್ತಾನೆ .
8. ಮನುಷ್ಯ ಬುದ್ಧಿವಂತ, ಹಾಗಾಗಿ ತನ್ನ ಬುದ್ಧಿವಂತಿಕೆಯನ್ನು ವಸ್ತುಗಳನ್ನು ಹೋಲಿಸಲು, ಎಣಿಸಲು, ಶ್ರೇಷ್ಠತೆ, ಕನಿಷ್ಠತೆ, ಸುಂದರ, ಕುರೂಪ ಗುರ್ತಿಸಲು, ತೂಕ ಮಾಡಲು, ವಿಮರ್ಶೆ ಮಾಡಲು ಅತಿಯಾಗಿ ಬಳಸುತ್ತಾನೆ.
9. ಕಳೆದು ಹೋದ ಸಂಗತಿ ವಸ್ತುಗಳಿಗೆ ದುಃಖಿಸುತ್ತಾನೆ.
10. ಮುಂದೆ ಬರಲಿರುವ ಸಂಗತಿಗಾಗಿ ದುಃಖಿಸುತ್ತಾನೆ.
11. ಇರುವ ವಸ್ತು ಹೋಗುತ್ತಲ್ಲ ಅಂತ ದುಃಖಿ ಸುತ್ತಾನೆ.
12. ಸಂಶಯದಿಂದ ದುಃಖಿತಾಗುತ್ತಾನೆ.
ಹಾಗಾದರೆ ಸಂತೋಷ ಪಡಲು ಏನು ಮಾಡಬೇಕು..?
1. ಮತ್ತೊಬ್ಬರೊಂದಿಗೆ ಹೋಲಿಸಬಾರದು.
2. ಬೇರೆಯವರ ವಸ್ತುಗಳೊಂದಿಗೆ ನಮ್ಮ ವಸ್ತು ಹೋಲಿಸಬಾರದು.
3. ಬೇರೆಯವರ ದೋಷ ಗುರುತಿಸಬಾರದು.
4. ಬೇರೆಯವರ ತಪ್ಪನ್ನು ಗುರುತಿಸಬಾರದು.
5. ತನ್ನ ದೋಷ, ತಪ್ಪನ್ನು ನೆನೆಸಿಕೊಳ್ಳಬಾರದು.
6. ವಸ್ತುಗಳ ಮಹತ್ವ ಅರಿಯಬೇಕು. ಅರಿತು ಅನುಭವಿಸಿ, ಸಂತೋಷಪಡಬೇಕು.
7. ಇರುವುದು ಮಹತ್ವ ವಿನಃ ಇಲ್ಲದ್ದು ಮಹತ್ವದಲ್ಲ.
8. ಕಳೆದು ಹೋದ ವಸ್ತು ಮತ್ತು ಸಂಗತಿಯನ್ನು ನೆನಸಬಾರದು.
9. ಬರುವ ಸಂಗತಿಗಳನ್ನು ಕೂಡ ನೆನೆಸಬಾರದು.
10. ಇರುವ ವಸ್ತುಗಳನ್ನು ಸುಂದರವಾಗಿ ಬಳಸಬೇಕೇ ವಿನಃ ಕಳೆದಿತು ಎನ್ನುವ ಬಗ್ಗೆ ದುಃಖಿಸಬಾರದು.
11. ಎಲ್ಲರಲ್ಲೂ ವಿಶ್ವಾಸದಿಂದಿರಬೇಕು.
ನಿಸರ್ಗ ಎಲ್ಲರಲ್ಲೂ ಒಂದೇ ಸಾಮರ್ಥ್ಯ, ರೂಪ, ಬಣ್ಣ, ದ್ವನಿ, ಶಕ್ತಿ, ಮತ್ತು ಸಾಮರ್ಥ್ಯ ಅಳವಡಿಸಿಲ್ಲ. ಏಕೆಂದರೆ ನಿಸರ್ಗ ಅಷ್ಟು ವೈವಿಧ್ಯಮಯ. ಎಲ್ಲಾ ಒಂದೇ ರೂಪ, ಬಣ್ಣ, ಶಕ್ತಿ, ಸಾಮರ್ಥ್ಯ ಇದ್ದಲ್ಲಿ ಜಗತ್ತು ಆಕರ್ಷಕವಾಗಿ ಇರುತ್ತಿರಲಿಲ್ಲ. ಹಾಗಾಗಿ ತನ್ನಲ್ಲಿ ಇಲ್ಲದಿರುವುದನ್ನು ಬೇರೊಬ್ಬರ ಬಳಿ ಇದ್ದಾಗ ಅದನ್ನು ಅಭಿನಂದಿಸಿ, ಆನಂದಿಸ ಬೇಕೆ ವಿನಹ ಕೊರಗುವುದಲ್ಲ. ಯಾಕೆ ಅಂದರೆ ಆ ಎಲ್ಲಾ ವಸ್ತು, ಶಕ್ತಿ ಮತ್ತು ಸಾಮರ್ಥ್ಯ ನನ್ನ ಬಳಿ ಇಲ್ಲ ಅದಕ್ಕೆ. ಜೀವನ ಎಂದರೇನು?, ಜೀವನ ಎಂದರೆ ನಿಸರ್ಗ ಏನು ಅಳವಡಿಸಿದೆ, ಅದನ್ನು ಬಳಸಿ ಸಂತೋಷ ಪಡುವುದು. ಹಾಗಂದರೇನು?. ನಿಸರ್ಗ ನಮ್ಮಲ್ಲಿ ಕಣ್ಣು ಇಟ್ಟಿದೆ, ಅದನ್ನು ಬಳಸು, ಕಿವಿ ಬಳಸು, ಮೂಗು ಬಳಸು, ನಾಲಿಗೆ ಬಳಸು, ಕೈ ಬಳಸು, ಕಾಲು ಬಳಸು, ಮನಸ್ಸು ಬಳಸು, ಬುದ್ಧಿ ಬಳಸು, ನಿನಗೆ ದೊರೆತ ವಸ್ತು ಬಳಸು ಮತ್ತು ಜನರೊಂದಿಗೆ ವ್ಯವಹರಿಸು. ಇದೇ ಜೀವನ. ಹೇಗೆ ಬಳಸಬೇಕು ಅನ್ನುವುದು ಮಹತ್ವ?. ಅದೇ ನೀತಿ. ಏನು ಒಳ್ಳೆಯದಿದೆ ? ಅದಕ್ಕೆ ಬಳಸಬೇಕು. ಯಾವುದನ್ನು ಹೇಗೆ ಬಳಸಿದರೆ ಸಂತೋಷವಾಗುತ್ತದೆಯೊ ಹಾಗೆ ಬಳಸಬೇಕು.
ದುಃಖ ಆಗುವಂತೆ ಬಳಸಬಾರದು. ನಿಸರ್ಗ ನಮ್ಮಲ್ಲಿ ಅಳವಡಿಸಿರುವುದನ್ನು, ನಮಗೆ ದೊರಕಿರುವುದನ್ನು ಬಳಸಬೇಕೆ ವಿನಹ ದೊರೆಯುದ್ದನ್ನಲ್ಲ. ವಸ್ತುವನ್ನು ಯಥಾವತ್ತಾಗಿ ನೋಡಬೇಕು. ಆದರೆ ನಾವು ಹಾಗೆ ನೋಡುವುದಿಲ್ಲ. ನೋಡುವಾಗ ತನ್ನದ್ದಾಗಿ, ಅನ್ಯರದ್ದಾಗಿ ಅಂತ ನೋಡುತ್ತೇವೆ. ದೊಡ್ಡದು ಅಥವಾ ಸಣ್ಣದು, ಒಳ್ಳೇದು ಅಥವಾ ಕೆಟ್ಟದ್ದು. ಸುಂದರ ಅಥವಾ ಕುರೂಪ. ಹೀಗೆ ಯಾವುದೋ ಒಂದು ದೃಷ್ಟಿಯಲ್ಲಿ ನೋಡುತ್ತೇವೆ. ಹಾಗೆ ನೋಡಿದಾಗ ವಸ್ತುವಿನ ನಿಜವಾದ ಜ್ಞಾನ ನಮಗೆ ದೊರಕುವುದಿಲ್ಲ. ಹೇಗಿದ್ಯೋ ಹಾಗೆ ಸುಮ್ಮನೆ ನೋಡಬೇಕು. ಹಾಗೆ ಸುಮ್ಮನೆ ನೋಡಲು ಆಗದಿದ್ದರೆ, ಒಳ್ಳೆಯದು ಅಂತ ನೋಡಬೇಕು. ಸುಂದರ ಅಂತ ನೋಡಬೇಕು. ದಿವ್ಯ ಅಂತ ನೋಡಬೇಕು. ಪವಿತ್ರ ಅಂತ ನೋಡಬೇಕು. ಆಗ ಸಂತೋಷವಾಗುತ್ತದೆ. ಅದನ್ನು ಬಿಟ್ಟು ಕೆಟ್ಟದ್ದು, ಅಂತ ನೋಡಿದರೆ ಕುರೂಪ ಅಂತ ನೋಡಿದರೆ ಸಣ್ಣದು ಅಂತ ನೋಡಿದರೆ, ನನ್ನದಲ್ಲ ಅಂತ ನೋಡಿದರೆ, ದುಃಖವಾಗುತ್ತದೆ. ನೋಡುವ ದೃಷ್ಟಿಯು ಕೂಡ ಸುಖ-ದುಃಖಕ್ಕೆ ಕಾರಣವಾಗುತ್ತದೆ. ಮೇಲೆ ಹೇಳಿದ್ದರಲ್ಲಿ ಕೊರತೆಯಾದರೆ ಅದು ಸುಂದರ ಜೀವನವಲ್ಲ. ಸುಂದರ ಜೀವನಕ್ಕೆ ಬೇಕಾದವುಗಳನ್ನು ನಿಸರ್ಗ ನಮ್ಮ ದೇಹದಲ್ಲಿ ಅಳವಡಿಸಿದೆ ಮತ್ತು ಜೀವನಕ್ಕೆ ಬೇಕಾದದ್ದೆಲ್ಲ ನಿಸರ್ಗದಲ್ಲಿ ಇಟ್ಟಿದೆ. ನಾವು ಅನುಭವಿಸಲು ಬಂದವರು ಅನ್ನುವುದನ್ನು ಮರೆಯಬಾರದು. ಆದರೆ ಅನುಭವಿಸುವುದನ್ನು ಬಿಟ್ಟು, ಸಂಗ್ರಹಿಸಲು ತೊಡಗಿರುವುದೇ ದುಃಖಕ್ಕೆ ಕಾರಣ. ಅಲ್ಲವೇ ಮಕ್ಕಳೇ....
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
******************************************