ಗೌರಿ ಹಬ್ಬದ ಆಚರಣೆ
Sunday, September 14, 2025
Edit
ವಿಶೇಷ ಲೇಖನ : ಗೌರಿ ಹಬ್ಬದ ಆಚರಣೆ
ಬರಹ : ಹೇಮಾ.ಎನ್
ಸಂಶೋಧನ ವಿದ್ಯಾರ್ಥಿನಿ
ಮದ್ರಾಸ್ ವಿಶ್ವವಿದ್ಯಾಲಯ ಚೆನ್ನೈ
ತಮಿಳುನಾಡು
Mob: 9964186768
ಮೊನ್ನೆ ತಾನೆ ಗೌರಿ ಹಬ್ಬವನ್ನು ನಾವೆಲ್ಲ ಸಂಭ್ರಮದಿಂದ ಆಚರಿಸಿದ್ದೇವೆ.. ಬೇರೆ ಬೇರೆ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಣೆಗಳು ನಡೆಯಬಹುದು. ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸಗಳು ಇರಬಹುದು. ನಮ್ಮ ಭಾಗದ ಗೌರಿ ಹಬ್ಬದ ಆಚರಣೆ, ಸಂಪ್ರದಾಯಗಳ ಕುರಿತಾಗಿ ಒಂದು ಬರಹ ಇಲ್ಲಿ....
“ನಂಬಿದೆ ಗೌರಿ ದೇವಿಯಾ ಮನಸಾರೆ ನಂಬಿದೆ ಮಹಾದೇವಿಯಾ” - ಈ ಸಾಲಿನಲ್ಲಿ ತಾಯಿ ಮಹಾಗೌರಿಯನ್ನು ಸ್ಮರಿಸಿ, ಭಕ್ತಿಯು ಅನಾವರಣ ಆಗಿರುವುದನ್ನು ಕಾಣುತ್ತೇವೆ. ಕರ್ನಾಟಕ ಅಂದರೆ ಹಬ್ಬ ಹರಿ-ದಿನಗಳ ತವರುಮನೆ. ಪ್ರತಿಯೊಂದು ಹಬ್ಬವನ್ಜು ಅತ್ಯಂತ ಅದ್ಬುತವಾಗಿ ಆಚರಣೆ ಮಾಡುತ್ತಾರೆ. ಪ್ರತಿ ಹಬ್ಬದಲ್ಲೂ ತಮ್ಮದೇ ಆದ ರೀತಿ - ನೀತಿಗಳ ಸಂಭ್ರಮ ಇರುತ್ತದೆ. ಅದರಲ್ಲಿ ವಿಶೇಷವಾಗಿ ‘ಗೌರಿಹಬ್ಬ‘ ಅಂತೂ ಅತ್ಯಂತ ಶ್ರೇಷ್ಠವಾದದ್ದು. ಇದು ಪ್ರತಿ ಮುತ್ತೈದೆಗೂ ಸಾರ್ಥಕತೆಯನ್ನು ತಂದು ಕೊಡುವ ಹಬ್ಬ ಎನಿಸುತ್ತದೆ.
ಮದುವೆ ಆಗದ ಹೆಣ್ಣು ಮಕ್ಕಳೂ ಸಹ “ನನಗೆ ಒಳ್ಳೆಯ ಸಂಗಾತಿಯನ್ನು ದಯಪಾಲಿಸು” ಎಂದು ಕೇಳಿ ವರ ಪಡೆಯುವ ಹಬ್ಬ. ಈ ಹಬ್ಬವನ್ನು ಮದುವೆಯಾದ ವರ್ಷ, ಮದುವೆಯಾದ ಹೆಣ್ಣುಮಗಳು ತನ್ನ ತವರು ಮನೆಗೆ ಬಂದು, ಮೊದಲ ಗೌರಿ ಹಬ್ಬವನ್ನು ಆಚರಿಸಬೇಕು ಎಂಬ ವಾಡಿಕೆ. ಇದಕ್ಕೆ ತಾಯಿ ಗೌರಿಯು ತನ್ನ ತವರು ಮನೆಗೆ ಬರುತ್ತಾಳೆ ಎಂಬ ಭಕ್ತಿಯ ನಂಬಿಕೆ. ಈ ಹಬ್ಬವನ್ನು ಪ್ರತಿ ಮುತ್ತೈದೆಯು ಆಚರಣೆ ಮಾಡಿದರೆ, ತನ್ನ ಪತಿಯು ಆಯಸ್ಸು- ಆರೋಗ್ಯ ಪಡೆದು, ತನ್ನ ಮುತ್ತೈದೆಯ ಭಾಗ್ಯ ಶಾಶ್ವತ ಆಗಿರುತ್ತದೆ ಎನ್ನುವ ಧೃಢತೆ. ಮದುವೆಯಾದ ವರ್ಷದಲ್ಲಿ ತವರು ಮನೆಯಲ್ಲಿ ಹಬ್ಬ ಆಚರಣೆ ಮಾಡಿದರೆ, ಮುಂದಿನ ವರ್ಷ ತನ್ನ ಗಂಡನ ಮನೆಯಲ್ಲೇ ಹಬ್ಬ ಆಚರಿಸಬಹುದು. ತವರು ಮನೆಯವರು ತಮ್ಮ ಮನೆಮಗಳಿಗೆ ಗೌರಿಹಬ್ಬದ ಬಳೆಗೆಂದು ತಮ್ಮ ಇಚ್ಚಾನುಸಾರ ಹಣ ಕೊಡುತ್ತಾರೆ. ಗೌರಿ ಹಬ್ಬವು ಹೆಣ್ಣಿನ ನಂಟು ತನ್ನ ತವರು ಮನೆಯಲ್ಲಿ ಗಟ್ಟಿ ಮಾಡುವಂತಹ ಹಬ್ಬವೇ ಸರಿ!
ಈ ಹಬ್ಬದ ಮತ್ತೊಂದು ವಿಶೇಷತೆ ಎಂದರೆ ಹೆಚ್ಚು ಖರ್ಚು ಮಾಡಿ ಆಡಂಬರದಿಂದ ಮಾಡಬೇಕು ಅಂಥ ಏನಿಲ್ಲ! ತಾಯಿ ಗೌರಿಗೆ ಅರಿಶಿಣ - ಕುಂಕುಮ, ಹೂ ಇಟ್ಟು ಭಕ್ತಿ ಇಂದ ಪೂಜಿಸಿದರೆ ಸಾಕು, ತಾಯಿ ಆಶೀರ್ವಾದ ಹರಿದು ಬರುತ್ತದೆ. ಇಲ್ಲಿ ಮೇಲು - ಕೀಳು ಬಡವ - ಬಲ್ಲಿದ ಎಂಬ ಯಾವ ವಿಭಜನೆ ಇಲ್ಲ. ಯಾರು ಬೇಕಾದರೂ ತಾಯಿಯನ್ನು ಪೂಜೆ ಮಾಡಿ ವರ ಪಡೆಯಬಹುದು.
ಕರ್ನಾಟಕದಲ್ಲಿ ಭಾದ್ರಪದ ತದಿಗೆಯೆಂದು ಆಚರಿಸುವ ಈ ಹಬ್ಬವನ್ನು, ತಮ್ಮದೇ ಆದ ವಿಧಿವಿಧಾನಗಳ ಮೂಲಕ ಸಂಭ್ರಮಿಸುತ್ತಾರೆ. ನಮ್ಮ ಮನೆಯಲ್ಲಿ ಆಚರಣೆ ಮಾಡುವ ಗೌರಿಹಬ್ಬದ ಆಚರಣೆಯ ಜೊತೆಗೆ ಹಬ್ಬದ ಮತ್ತಷ್ಟು ಸೊಗಡನ್ನು, ತಿಳಿಯುತ್ತಾ ಸಂಭ್ರಮಿಸೋಣ. ಗೌರಿ ಹಬ್ಬದ ಹಿಂದಿನ ದಿನವೇ ಅವಶ್ಯಕ ವಸ್ತುಗಳನ್ನು ಸಂಗ್ರಹಿಸಿ ಕೊಂಡಿರುತ್ತಾರೆ. ಹಬ್ಬದ ದಿನದಂದು ಮುಂಜಾನೆ ಬೇಗ ಎದ್ದು ಮನೆ ಸ್ವಚ್ಚಗೊಳಿಸಿ, ಸಿಹಿ ಅಡುಗೆ ಮಾಡುತ್ತಾರೆ. ಸಿಹಿ ಎಂದ ಕೂಡಲೇ ಹೋಳಿಗೆ ಮಾಡುವುದು ಸಹಜ. ಹಾಗೆಂದ ಮಾತ್ರಕ್ಕೆ ಹೋಳಿಗೆ ಮಾಡಬೇಕು ಅಂತ ಏನಿಲ್ಲ, ಭಕ್ತಿಯಿಂದ ಗೌರಿಗೆ ಬೆಲ್ಲದ ಚೂರನ್ನು ಇಟ್ಟರು ಸ್ವೀಕರಿಸುವಳು. ಮನೆಯ ಬಾಗಿಲನ್ನು ತಳಿರು ತೋರಣಗಳಿಂದ ಸಿಂಗಾರ ಮಾಡುತ್ತಾರೆ, ಸಿಂಗಾರಕ್ಕೆ ಮತ್ತೆ ಕಳೆ ಕೊಡುವ ಮನೆ ಅಂಗಳದ ರಂಗೋಲಿ. ತದನಂತರ ಮಹಾಗೌರಿಯನ್ನು ಇಷ್ಟಾನುಸಾರ ದೇವರ ಕೋಣೆ ಅಥವಾ ಹಜಾರದಲ್ಲಿ ಇಡಲು ಸಿದ್ಧತೆ ಮಾಡಿಕೊಳ್ಳುತ್ತಾರೆ.
ಸಿರಿ ಗೌರಿಯನ್ನು ದೇವರ ಕೋಣೆಯಲ್ಲಿ ಕೂರಿಸುವುದಾದರೆ, ದೇವರ ಮನೆಯಲ್ಲಿಯೇ ಬಾಳೆ ಕಂಬ ಇಟ್ಟು ಅಲಂಕಾರ ಮಾಡಿ, ಸಿಂಗರಿಸಿ ಪೂಜೆ ಮಾಡುತ್ತಾರೆ. ಇನ್ನು ಮನೆಯ ಹಜಾರದಲ್ಲಿ ಇಡುವುದಾದರೆ, ಮೇಜನ್ನು ಹಾಕಿ ಅದರ ಮೇಲೆ ಸ್ವಚ್ಛ ಬಟ್ಟೆಯನ್ನು ಹಾಸುತ್ತಾರೆ. ನಂತರ ಅಕ್ಕಿಯನ್ನು ತುಂಬಿದ ಹರಿವಾಣದಲ್ಲಿ ಅರಿಶಿಣದಿಂದ ತಯಾರಿಸಿದ ಗೌರಿಯನ್ನು ಇಡುತ್ತಾರೆ. ಗೌರಿಯನ್ನು ಇಡುವಲ್ಲಿ ಒಬ್ಬೊಬ್ಬರು ಒಂದೊಂದು ಮಾದರಿಯಲ್ಲಿ ಇಟ್ಟು ಪೂಜೆ ಸಲ್ಲಿಸುವರು. ಕೆಲವರು ಮಣ್ಣಿನ ಪ್ರತಿಮೆಯನ್ನು ಇಡುವರು, ಇನ್ನು ಕೆಲವರು ದೇವಸ್ಥಾನದಲ್ಲಿ ಇಟ್ಟಿರುವ ಗೌರಿಯ ಬಳಿ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ. ಹೀಗೆ ಪ್ರತಿಯೊಬ್ಬರು ವಿವಿಧ ರೀತಿಯಲ್ಲಿ ತಾಯಿ ಗೌರಿಯನ್ನು ನೆನೆಯುವರು. ಇರಲಿ, ಏನೇ ವಿಧಿ ವಿಧಾನ ಇದ್ದರೂ ಆರಾಧಿಸುವುದು ಮಾತ್ರ ತಾಯಿ ಮಹಾಗೌರಿಯೇ ಅಲ್ಲವೇ !
ಮುಂದುವರಿದು, ಶಿವನ ಅರ್ಧಾಂಗಿ ಗೌರಿಯ ಪ್ರತಿಮೆಗೆ ಅರಿಶಿಣ - ಕುಂಕುಮ, ಹೂ - ಅಕ್ಷತೆ, ಹತ್ತಿ ಹಾರದಿಂದ ಜೊತೆಗೆ ಕುಪ್ಪಸದ ತುಂಡನ್ನು ದೇವಿಯ ಸುತ್ತ ಬಳಸಿಯೂ ವೈಭವೀಕರಿಸುತ್ತಾರೆ. ಮುಖ್ಯವಾಗಿ ಅಮ್ಮನಿಗೆ ಸುಗಂಧ ಭರಿತ ದವನವನ್ನು ತಪ್ಪದೇ ಇಡುತ್ತಾರೆ. ಕರುನಾಡಿನ ಹಳ್ಳಿಮಣ್ಣಿನ ಸುಗಂಧದಲ್ಲಿ ದವನವೇ ಹೆಚ್ಚು. ಗೌರಿಯನ್ನು ಶುಭ ಸಮಯದಲ್ಲಿ ಇಟ್ಟನಂತರ, ಮಂಗಳ ದ್ರವ್ಯಗಳನ್ನು ಗೌರಿ ಕೂರಿಸಿದ ಜಾಗದಲ್ಲಿ ಇಡುತ್ತಾರೆ. ಜೊತೆಗೆ ಗೌರಿಯ ಮುಂದೆ ಐದು ಬಗೆಯ ಹಣ್ಣುಗಳನ್ನು ಇಡುತ್ತಾರೆ. ಜೊತೆಗೆ ಪೂಜೆಗೆ ಹಣ್ಣು ಕಾಯಿಯನ್ನು ವೀಳ್ಯದೆಲೆ ಅಡಿಕೆಯೊಂದಿಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ . ಮತ್ತೊಂದು ವಿಶಿಷ್ಟ ಬಾಗಿನ ಕೊಡುವ ಪದ್ಧತಿ. ಈಶ್ವರನ ಮಡದಿ ಗೌರಿಗೂ ಬಾಗಿನ ಕೊಟ್ಟು, ಐದು ಮುತ್ತೈದೆಯರಿಗೂ ಬಾಗಿನ ಕೊಡುತ್ತಾರೆ. ಬಾಗಿನದಲ್ಲಿ ಮಂಗಳ ದ್ರವ್ಯಗಳಾದ ಅರಿಶಿಣ -ಸಿಂಧೂರ, ಕನ್ನಡಿ, ಬಾಚಣಿಗೆ, ಕುಪ್ಪಸ ತುಂಡು, ಬೆಲ್ಲದ ಸಣ್ಣ ಘನ, ಕಪ್ಪು ಮಣಿಗಳು, ಹಸಿರು ಬಳೆಗಳು, ತೊಗರಿಬೇಳೆ ಮತ್ತು ಇತರ ಧಾನ್ಯಗಳಿಂದ ಕೂಡಿರುತ್ತದೆ.
ಮನೆಯ ಮುಖ್ಯ ದ್ವಾರ ಮತ್ತು ದೇವರ ಕೋಣೆಯ ಹೊಸ್ತಿಲಿಗೂ, ಮನೆಯ ಮುಂದಿನ ತುಳಸಿ ಕಟ್ಟೆಗೂ ಅರಿಶಿಣ, ಕುಂಕುಮ, ಹೂ ಇಂದ ಸಿಂಗರಿಸುತ್ತಾರೆ. ನಂತರ ತಾಯಿಯ ಮುಂದೆ ಇಟ್ಟಿರುವ ಜೋಡಿ ದೀಪಗಳಿಗೂ ಸಿಂಗರಿಸಿ, ಎಡಬಲದಲ್ಲಿ ಇಟ್ಟಿರುವ ಬಾಳೆ ಕಂಬಗಳಿಗೂ ಹೂಗಳಿಂದ ಅಲಂಕರಿಸುತ್ತಾರೆ. ಜೊತೆಗೆ ಸಣ್ಣ ಬಲ್ಬುಗಳಿಂದ ಸಹ ಇನ್ನಷ್ಟು ಅಂದ ಹೆಚ್ಚಿಸುತ್ತಾರೆ. ನಂತರ ಮನೆಯ ಹಿರಿ ಮುತ್ತೈದೆ ದೀಪ ಹಚ್ಚಿ, ವರಗೌರಿಗೆ ಮಾಡಿದ ನೈವೇದ್ಯವನ್ನು ಬಾಳೆ ಎಲೆಯಲ್ಲಿ ಇಟ್ಟು ಪೂಜೆ ಸಲ್ಲಿಸುವಳು. ಇವಳ ಜೊತೆಗೆ ಮನೆಯ ಎಲ್ಲ ಹೆಣ್ಣು ಮಕ್ಕಳು ಕೂಡಿ ಗೌರಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಮನೆಮಂದಿಯು ಸೌಭಾಗ್ಯ ಗೌರಿಗೆ ಪೂಜೆ ಸಲ್ಲಿಸುತ್ತಾರೆ. ಪೂಜೆಯ ನಂತರ ಮಹಾಗೌರಿಯ ಬಳಿ ಇರುವ ಸೇವಂತಿಗೆ ಹೂವನ್ನು, ಹದಿನಾರು ಎಳೆಯ ಅರಿಶಿಣ ದಾರದಿಂದ ಮನೆಯ ಹೆಣ್ಣುಮಕ್ಕಳು, ತಮ್ಮ ಬಲಗೈ ಮಣಿಮುಷ್ಠಿಗೆ ಸುತ್ತಿಕೊಳ್ಳುತ್ತಾರೆ. ನಂತರ ಐವರು ಮುತ್ತೈದೆಯರಿಗೂ ಬಾಗಿನ ಕೊಟ್ಟು ಅವರ ಆಶೀರ್ವಾದ ಪಡೆಯುತ್ತಾರೆ. ಬಾಗಿನ ಕೊಡುವ ಸಂದರ್ಭದಲ್ಲಿ “ಮುತ್ತೈದೆ ಮುತ್ತೈದೆ ಬಾಗಿನ ಕೊಡೆ, ಸಾವಿತ್ರಿ ಸಾವಿತ್ರಿ ಬಾಗಿನ ತಗೋ” ಎಂದು ಹೇಳುವ ಸಾಲಂತೂ ಹಬ್ಬಕ್ಕೆ ಮತ್ತಷ್ಟು ಸಂಗೀತದ ಕಳೆ ತಂದು ಕೊಡುತ್ತದೆ. ಪೂಜಾ ಕಾರ್ಯದ ನಂತರ ಮನೆಮಂದಿ ಒಟ್ಟಾಗಿ ಕುಳಿತು ಊಟ ಸವಿಯುತ್ತಾರೆ. ಹಿರಿಗೌರಿಯನ್ನು ದಿನದ ಎರಡು ಬಾರಿಯು ಪೂಜೆ ಸಲ್ಲಿಸಿ, ಮರುದಿನ ಗೌರಿಸುತ ಜೊತೆ ಆರಾಧಿಸಿ, ಸಿದ್ಧಿ ವಿನಾಯಕನ ಜೊತೆ ನೀರಿನಲ್ಲಿ ಬಿಡುತ್ತಾರೆ.
ಇದಿಷ್ಟು ಜಗನ್ಮಾತೆ ಗೌರಿಯನ್ನು ಆಚರಿಸುವ ಬಗೆ. ಮಂತ್ರಗಳಿಂದ, ಸ್ತೋತ್ರದೊಂದಿಗೆ ಅಥವಾ ಭಕ್ತಿಯಿಂದ ಹೇಗೆ ಆಚರಿಸಿದರೂ ತಾಯಿ ಮಹಾಗೌರಿಯು ಕರುನಾಡಿನ ಹೆಂಗಳೆಯರ ಮೇಲೆ ವರದ ಸುರಿಮಳೆ ಸುರಿಸುತ್ತಾಳೆ. ಗೌರಿಹಬ್ಬವನ್ನು ಕರ್ನಾಟಕದ ಜೊತೆಗೆ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಉತ್ತರ ಖಂಡದ ಕೆಲವು ಭಾಗಗಳಲ್ಲಿಯೂ ಸಹ ಆಚರಿಸುತ್ತಾರೆ. ಸುಗೌರಿಯ ಆಶೀರ್ವಾದ ಎಲ್ಲರ ಮೇಲೂ ಸದಾ ಇರಲಿ!
(ಚಿತ್ರ : ಜಾಲತಾಣ ಕೃಪೆ)
ಸಂಶೋಧನ ವಿದ್ಯಾರ್ಥಿನಿ
ಮದ್ರಾಸ್ ವಿಶ್ವವಿದ್ಯಾಲಯ ಚೆನ್ನೈ
ತಮಿಳುನಾಡು
Mob: 9964186768
******************************************