-->
ಜೀವನ ಸಂಭ್ರಮ : ಸಂಚಿಕೆ - 206

ಜೀವನ ಸಂಭ್ರಮ : ಸಂಚಿಕೆ - 206

ಜೀವನ ಸಂಭ್ರಮ : ಸಂಚಿಕೆ - 206
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                        
  
ಮಕ್ಕಳೇ, ಇಂದು ಸುಖ ಮತ್ತು ಶಾಂತಿ ಬಗ್ಗೆ ತಿಳಿದುಕೊಳ್ಳೋಣ. ಮೊದಲಿಗೆ ಶಾಂತಿ. ಮನಸ್ಸಿನಲ್ಲಿ ಏನೂ ಇರುವುದಿಲ್ಲ. ಶಾಂತವಾಗಿ ಕುಳಿತಿರುತ್ತೇವೆ. ತಣ್ಣನೆ ವಾತಾವರಣ. ಮನಸ್ಸಿನಲ್ಲಿ ಯಾವ ಆಲೋಚನೆಗಳು ಇಲ್ಲ. ವಿಚಾರಗಳಿಲ್ಲ, ನೆನಹುಗಳಿಲ್ಲ, ಯಾವ ಚಿಂತೆ ಇಲ್ಲ, ಈ ನಿಶ್ಚಿಂತಾವಸ್ಥೆಗೆ ಶಾಂತಿ ಎನ್ನುವರು.

ಶಾಂತಿಗೆ ವಸ್ತು ಬೇಕಾಗಿಲ್ಲ. ಶಾಂತಿ, ಸುಖಕ್ಕಿಂತ ಬಹಳ ದೊಡ್ಡದು. ಯಾಕೆಂದರೆ ಸುಖ ಇನ್ನೊಂದು ವಸ್ತುವನ್ನು ಅವಲಂಬಿಸಿದೆ. ಶಾಂತಿ ಯಾವುದನ್ನು ಅವಲಂಬಿಸಿಲ್ಲ. ಸುಮ್ಮನೆ ಒಂದು ಕ್ಷಣ ಕಣ್ಣು ಮುಚ್ಚಿ, ಎಲ್ಲವನ್ನು ಮರೆತು, ಏನನ್ನು ಜ್ಞಾನಿಸದೆ, ಸುಮ್ಮನೆ ಕುಳಿತರೆ, ಏನು ಮನಸ್ಸಿನಲ್ಲಿ ಅನುಭವಕ್ಕೆ ಬರುತ್ತದೆಯೋ ಅದು ಶಾಂತಿ. ಈಗ ಮನೆಯಲ್ಲಿ ಲಗ್ನ ಆಗುತ್ತದೆ. ಮನೆಗೆ ಎಲ್ಲರೂ ಬಂದಿರುತ್ತಾರೆ. ಬೀಗರು ನಂತರ ಸ್ನೇಹಿತರು ಎಲ್ಲರೂ ಬಂದಿರುತ್ತಾರೆ. ಮನೆ ತುಂಬಿರುತ್ತದೆ. ಅವಾಗ ಒಂದು ತರಹ ಸುಖ ಇರುತ್ತದೆ. ಮಾತನಾಡಿ ಸುಖ, ಉಂಡು ತಿಂದು ಸುಖ, ಎಲ್ಲ ಇರುತ್ತದೆ. ಇದು ಉಂಡು, ತಿಂದು, ಮಾತನಾಡುವ ಸುಖ. ಆ ಬಳಿಕ ಒಂದು ದಿನ ಎಲ್ಲ ಹೋಗಿಬಿಡುತ್ತಾರೆ. ಮನೆಯಲ್ಲಿ ಯಾರು ಇರುವುದಿಲ್ಲ. ಗದ್ದಲ ಮುಗಿದು ಹೋಗುತ್ತದೆ. ಎಲ್ಲರೂ ಹೋದ ಬಳಿಕ ಮನೆಯಲ್ಲಿ ನೀವು ಕುಳಿತಿರುತ್ತೀರಿ. ಮನೆ ಶಾಂತ. ಅವಾಗ ಏನು ತಿನ್ನೋದಿಲ್ಲ, ಮಾತಿಲ್ಲ, ಎಲ್ಲರೂ ಹೋದ ಬಳಿಕ ಶಾಂತವಾಗಿರುತ್ತದೆ. ಅದು ತಿಂದುಂಡ ಶಾಂತಿಯಲ್ಲ. ಸುಮ್ಮನೆ ಸಹಜ ಶಾಂತಿ. ಎಲ್ಲಾ ಖಾಲಿಯಾದ ಬಳಿಕ ಶಾಂತಿ ಸಿಗುತ್ತದೆ. ಹಾಗೆ ಮನಸೆಲ್ಲಾ ಖಾಲಿಯಾದ ಬಳಿಕ ಅನುಭವಕ್ಕೆ ಬರುವುದೇ ಶಾಂತಿ. 

ಶಾಂತಿ ಎಂದರೆ ಮನಸ್ಸನ್ನು ಖಾಲಿ ಮಾಡುವುದು. ಇವೆರಡಕ್ಕೆ ವ್ಯತ್ಯಾಸವಿದೆ. ವಸ್ತುಗಳನ್ನು ಪಡೆದು ಸುಖ ಪಡೆಯುವುದು. ವಸ್ತುಗಳನ್ನು ಗಳಿಸಿ, ಅನುಭವಿಸಿ ಸುಖ ಪಡುವುದು. ಆ ಬಳಿಕ ಮನಸ್ಸನ್ನು ಖಾಲಿ ಮಾಡಿ ಅನುಭವಿಸುವುದು. ಶಾಂತಿ ಬಹಳ ಅದ್ಭುತ. ಅದು ಯಾವಾಗಲೂ ಇರುವಂತಹದ್ದು. ಎಲ್ಲರೂ ಪಡೆಯುವಂತಹದ್ದು. ಅದು ಪರತಂತ್ರವಲ್ಲ. ಅದು ಸ್ವತಂತ್ರ. ವಸ್ತುಗಳಿಂದ ಸುಖ ಪಡೆಯುವುದು ಪರತಂತ್ರ. ವಸ್ತು ಇಲ್ಲ ಅಂದರೆ ಸುಖ ಸಿಗುವುದಿಲ್ಲ. ಆಸೆಗಳು ಪೂರ್ಣಗೊಳ್ಳದೆ ಇದ್ದರೆ ಸುಖ ಸಿಗುವುದಿಲ್ಲ. ಆದರೆ ಶಾಂತಿ ಪಡೆಯುವುದಕ್ಕೆ ಯಾವುದರ ಅವಶ್ಯಕತೆ ಇರುವುದಿಲ್ಲ. ಮನಸ್ಸು ಖಾಲಿ ಮಾಡುವುದು ಅಷ್ಟೇ. ಯಾವಾಗ ಯಾವಾಗ ಮನಸ್ಸಿಗೆ ನೋವಾಗುತ್ತದೆ, ತಾಪ ಆಗುತ್ತದೆ, ಆಗ ಸುಮ್ಮನೆ ಹೀಗೆ ಕುಳಿತುಕೊಂಡು, ಮನಸ್ಸನ್ನು ಖಾಲಿ ಮಾಡುವುದು, ಎಲ್ಲ ತೆಗೆದು ಹಾಕುವುದು, ನಾನಿಲ್ಲ, ನನ್ನದಿಲ್ಲ, ಬೇಕಿಲ್ಲ, ಬೇಡವಿಲ್ಲ, ಯಾವುದು ಇಲ್ಲ, ಎಲ್ಲಾ ಭಾವನೆಗಳನ್ನು ತೆಗೆದು ಹಾಕಿದ ಬಳಿಕ, ನಾನು ಇರುತ್ತೇನೆ, ಮನಸ್ಸು ಇರುತ್ತದೆ, ಶಾಂತಿ ಇರುತ್ತದೆ. 

ಸುಖವು ಇರಬೇಕು, ಅದಕ್ಕಿಂತ ಹೆಚ್ಚು ಶಾಂತಿಯನ್ನು ಅನುಭವಿಸಬೇಕು. ಶಾಂತಿಯನ್ನು ಅನುಭವಿಸಬೇಕಾದರೆ ಮನಸ್ಸನ್ನು ಖಾಲಿ ಮಾಡುವುದು. ಸುಖವನ್ನು ಅನುಭವಿಸ ಬೇಕಾದರೆ ವಸ್ತುಗಳನ್ನು ಅನುಭವಿಸುವುದು, ಎರಡು ಬೇಕು ಮನುಷ್ಯನಿಗೆ. ಉಣ್ಣುವುದಕ್ಕೆ ಬೇಕು. ತಿನ್ನುವುದಕ್ಕೆ ಬೇಕು. ನೋಡುವುದಕ್ಕೆ ಬೇಕು. ಆದರೆ ಬರೀ ಅಷ್ಟರಿಂದ ಜೀವನ ಸಾರ್ಥಕವಾಗುವುದಿಲ್ಲ. ಒಂದಷ್ಟು ಸಮಾಧಾನ ಬೇಕು. ಮನಸ್ಸನ್ನು ಸುಮ್ಮನೆ ಸಹಜ ಇರುವುದು. ಅಂತಹ ಸ್ಥಿತಿಗೆ ಶಾಂತಿ ಅನ್ನುತ್ತೇವೆ. ಅಂತಹ ಶಾಂತಿಯನ್ನು ಪಡೆಯಬೇಕು. ಅದು ಎಲ್ಲೋ ಇದೆ ಅಂತಲ್ಲ. ಅದು ನಮ್ಮೊಳಗೆ ಇದೆ. ಸುತ್ತಮುತ್ತ ಎಲ್ಲ ಕಡೆ ಇರುವುದೇ ಶಾಂತಿ. 

ಶಬ್ದ ಎಲ್ಲಾ ಕಡೆ ಇರುವುದಿಲ್ಲ. ಆದರೆ ಶಾಂತಿ ಎಲ್ಲಾ ಕಡೆ ಇರುತ್ತದೆ. ನಿಶಬ್ದತೆ ಎಲ್ಲಾ ಕಡೆ ಇರುತ್ತದೆ. ಸುಖ ಎಲ್ಲ ಕಡೆ ಇರುವುದಿಲ್ಲ. ಶಾಂತಿ ಎಲ್ಲಾ ಕಡೆ ಇರುತ್ತದೆ. ಸುಖದ ಹಿಂದೆ ದುಃಖದ ಕ್ಷಣ ಇರುತ್ತದೆ. ಶಾಂತಿಗೆ ಸುಖದ ಪ್ರಶ್ನೆ ಇಲ್ಲ. ಎಲ್ಲಾ ಕ್ಷಣ ಹೋದ ಬಳಿಕ ಸುಖದ ಕ್ಷಣವಿಲ್ಲ , ದುಃಖದ ಕ್ಷಣವಿಲ್ಲ. ಖಾಲಿಯಾದ ಬಳಿಕ ಶಾಂತಿಯನ್ನು ಅನುಭವಿಸುತ್ತೇವೆ. ಶಾಂತಿ ನಿರಂತರವಾಗಿ ಇರುತ್ತದೆ. ಮನಸ್ಸು ಸಿದ್ಧವಾಗಿರಬೇಕು. ಇಂತಹ ಪರಮಶಾಂತಿ ಜೀವನದ ಅಂತಿಮ ಗಳಿಕೆ. ಬಹಳ ದೊಡ್ಡಗಳಿಕೆ. ಇದರಂತಹ ವಸ್ತು ಯಾವುದು ಇಲ್ಲ. ಇದರಂತಹ ಅನುಭವ ಯಾವುದೂ ಇಲ್ಲ. ಇದನ್ನು ಪಡೆಯುವುದಕ್ಕಾಗಿ ಎಷ್ಟು ಕಷ್ಟ ಪಟ್ಟರು ಎಲ್ಲರೂ.


ಸಾಕ್ರೆಟಿಸ್ ಗ್ರೀಕ್ ತತ್ವಜ್ಞಾನಿ. ಗ್ರೀಕ್ ದೇಶದಲ್ಲಿದ್ದ ಡಯೋಜನೀಸ್ ಎನ್ನುವ ತತ್ವಜ್ಞಾನಿ ಇನ್ನೊಬ್ಬ. ಅದ್ಭುತ ಮನುಷ್ಯ. ಡಯೋಜನಿಸನ ಮೈಮೇಲೆ ಬಟ್ಟೆಗಳಿಲ್ಲ. ಗ್ರೀಕ್ ತಂಪು ದೇಶ. ಒಂದು ಸೊಂಟಕ್ಕೆ ಪಟ್ಟಿಕಟ್ಟಿಕೊಂಡು ಬಾಳಿದಾತ. ಆದರೆ ಆತನ ಮಾತಿನಲ್ಲಿ ಎಂತಹ ಸಾಮರ್ಥ್ಯವಿತ್ತು!. ಅವನಿಗೆ ಎಲ್ಲರೂ ತಲೆಬಾಗಿಸುತ್ತಿದ್ದರು. ಆದರೆ ಆ ಮನುಷ್ಯ ಬದುಕುತ್ತಿದ್ದಿದ್ದು ಗುಡಿಸಲಿನಲ್ಲಿ ಅಲ್ಲ, ಗಿಡದ ಕೆಳಗೆ. ಒಂದು ಸಲ ಆತನ ಬಳಿಗೆ ಒಬ್ಬ ದೊಡ್ಡ ಮನುಷ್ಯ ಬರುತ್ತಾನೆ, ಡಯೋಜನಿಸ್ ಬಿಸಿಲು ಕಾಯುತ್ತ ಕುಳಿತಿರುತ್ತಾನೆ. ಬೆಳಗಿನ ಬಿಸಿಲು ಬಹಳ ಹಿತವಾಗಿತ್ತು. ಆಗ ದೊಡ್ಡ ಮನುಷ್ಯ ಹೇಳುತ್ತಾನೆ, ಡಯೋಜನಿಸ್ ಮಹಾನುಭಾವರೇ ಹೇಳಿ ನಿಮಗೆ ಏನು ಬೇಕು ಹೇಳಿ? ಎಂದ. ಏನು ಬೇಕಾದರೂ ಕೊಡ್ತೀನಿ ಅಂದನು. ನೀವು ಬಹಳ ದೊಡ್ಡವರು. ನಮ್ಮ ರಾಜ್ಯದಲ್ಲಿರುವುದೇ ನಮಗೆ ಹೆಮ್ಮೆ ಎಂದನು. ಆಗ ಡಯೋಜೆನಿಸ್ ಹೇಳುತ್ತಾನೆ, ಏನು ಮಾಡಬೇಡ ದೂರ ಸರಿ, ಬಿಸಿಲು ಸರಿಯಾಗಿ ಬೀಳುತ್ತಿಲ್ಲ ಎಂದನು. ನಿಮಗೆ ಅಗತ್ಯವಿದ್ದರೆ ಹೇಳಿ ಮನೆ ಕೊಡುತ್ತೇನೆ, ಸೇವಕರನ್ನು ಕೊಡುತ್ತೇನೆ, ಸಂಪತ್ತು ಕೊಡುತ್ತೇನೆ, ಅನುಭವಿಸಿ, ತಾವು ಬಹಳ ದೊಡ್ಡ ಮಹಾತ್ಮರು ಎಂದನು. ಆಗ ಡಯೋಜೆನಿಸ್ ಹೇಳುತ್ತಾನೆ ಎಲ್ಲಾ ಕೊಡ್ತಿಯೋ? ಆದರೆ ಈಗ ನಾನು ಮಜದಲ್ಲಿದ್ದೇನೆ. ಈ ಮಜಾ ಹೇಗೆ ಕೊಡುತ್ತೀಯ?. ಎಂದನು. ನನಗೇನು ಬೇಕಿಲ್ಲ ಮತ್ತು ಬೇಡ ಅಂತೂ ಇಲ್ಲ. ಮನಸ್ಸು ಇಷ್ಟು ಸಮಾಧಾನ ಇದೆ. ಈ ಸಮಾಧಾನ ಪಡೆಯಲು ನೀನೇನು ಕೊಡಲು ಸಾಧ್ಯ. ಈ ಸಮಾಧಾನ ಖಾಲಿ ಮಾಡುವುದರಿಂದ ಸಿಗುತ್ತದೆ, ವಿನಹ ಏನಾದರೂ ಪಡೆಯುವುದರಿಂದ ಇಲ್ಲ. ಇದು ಈ ಕ್ಷಣದ ಅನುಭೂತಿ. ವಸ್ತುಗಳನ್ನು ಪಡೆದು ಸುಖ ಪಡೆಯಬೇಕು ಅಂದರೆ ಎಲ್ಲರಿಗೂ ಎಲ್ಲಿ ಸಾಧ್ಯ? ಹೇಳಿ. ಯಾವಾಗಲೂ ವಸ್ತುಗಳ ಕೊರತೆ ಆಗೋದೇ. ಎಷ್ಟೇ ಚೆಂದಾಗಿ ನೀವು ಹೂ ತಂದಿಟ್ಟು, ಅದನ್ನು ನೋಡಿ ನೋಡಿ ಒಂದು ದಿನ ಬೇಸರವಾಗುತ್ತದೆ. ಆ ಬಳಿಕ ಮತ್ತೆ ಬೇರೆ ಬೇರೆ ಬೇಕೆನಿಸುತ್ತದೆ. ಸುಖ ಕ್ಷಣಿಕ. ಸುಖ ಬರುತ್ತದೆ ಮತ್ತು ಹೋಗುತ್ತದೆ. ಮತ್ತೊಂದು ಕ್ಷಣಕ್ಕೆ ಮತ್ತೊಂದು ಸುಖ ಬಯಸುತ್ತದೆ ಮನಸ್ಸು. ಆದರೆ ಶಾಂತಿ ಆಗಲ್ಲ. ಶಾಂತಿ ಸುಮ್ಮನೆ ಇರುವುದು. 

ಒಮ್ಮೆ ಡಯೋಜನಿಸ್ ಊರಿನೊಳಗೆ ಹೊರಟಿದ್ದಾನೆ. ಅವನ ಬಳಿ ಒಂದು ನಾಯಿ ಇರುತ್ತದೆ. ಆಗ ಒಬ್ಬ ಮನುಷ್ಯ ಕೇಳುತ್ತಾನೆ. ನಿಮಗೆ ಮೈಮೇಲೆ ಬಟ್ಟೆ ಇಲ್ಲ, ಯಾರಾದರೂ ಕೊಟ್ಟರೆ ತಿನ್ನುವವರು, ಆದರೆ ಈ ನಾಯಿ ಕಟ್ಟಿಕೊಂಡು ತಿರುಗಾಡುತ್ತಿರಲ್ಲ ಏಕೆ? ಅಂದನು. ಅವಾಗ ಡಯೋಜನಿಸ್ ಹೇಳುತ್ತಾನೆ ಯಾಕೆ ಅಂದರೆ ಅದಕ್ಕೂ ಸಮಾಧಾನ ಇದೆ, ನನಗೂ ಸಮಾಧಾನವಿದೆ. ನಾವಿಬ್ಬರೇ ಈ ಊರಿನಲ್ಲಿ ಸಮಾಧಾನ ಇರುವವರು. ಏಕೆಂದರೆ ಅದು ಏನು ವಿಚಾರ ಮಾಡುವುದಿಲ್ಲ, ತಲೆ ಖಾಲಿ ಇಟ್ಟುಕೊಂಡಿದೆ, ನಾನು ಕೂಡ ತಲೆ ಖಾಲಿ ಇಟ್ಟುಕೊಂಡಿದ್ದೇನೆ. ಈ ಅಥೆನ್ಸ್ ಪಟ್ಟಣದಲ್ಲಿ ತಲೆ ಖಾಲಿ ಇರುವವರು ನಾವಿಬ್ಬರೇ. ಒಂದು ನಾಯಿ ಮತ್ತೊಂದು ನಾನು. ಸಮಾಧಾನ, ಶಾಂತಿ ಅನ್ನುವುದು ಮನ ಖಾಲಿ ಮಾಡುವುದು. ಮನಸ್ಸನ್ನು ಕದಲಿಸುವಂತಹ ಸಂಗತಿಗಳನ್ನು, ಭಾವನೆಗಳು, ವಿಚಾರಗಳು, ಅವುಗಳನ್ನು ತೆಗೆದು ಹಾಕಿದರೆ ಮನಸ್ಸು ಸಮಾಧಾನಗೊಳ್ಳುತ್ತದೆ. ಅಲ್ಲಿಯೇ ಶಾಂತಿ ಅನುಭೂತಿ. ಇಂತಹ ಸುಂದರ ಸಮಾಧಾನವನ್ನು, ಶಾಂತಿಯನ್ನು ಪಡೆಯಬೇಕು. ಹೇಗೆ ನಮಗೆ ಸುಖ ಪಡೆಯುವುದು ಗೊತ್ತಿದೆ. ಊಟ ಮಾಡಿದರೆ ಸುಖ, ನೋಡಿದರೆ ಸುಖ, ಕೇಳಿದರೆ ಸುಖ, ರುಚಿಸಿದರೆ ಸುಖ, ಇದು ಕೆಟ್ಟದ್ದಲ್ಲ. ಸುಖದ ಕ್ಷಣ ಹೆಚ್ಚಬೇಕು. ಬದುಕಿನಲ್ಲಿ ಇದರೊಂದಿಗೆ ಶಾಂತಿಯ ಅನುಭವ ಇರಬೇಕು.

ಯೋಗಿಯಾಗಿರಬೇಕು, ಸಾತ್ವಿಕ ಭೋಗಿ ಆಗಿರಬೇಕು. ಸಾತ್ವಿಕ ಭೋಗಿ ಅಂದರೆ ನಿಶ್ಚಿತವಾಗಿ ಈ ಜಗತ್ತಿನ ವಸ್ತುಗಳನ್ನು ಸಹಜ ಸುಂದರವಾಗಿ ಅನುಭವಿಸಬೇಕು. ಶಾಂತಿ ಪಡೆಯುವುದು ಎಂದರೆ ಮನಸ್ಸು ಖಾಲಿಟ್ಟುಕೊಂಡು ಸಮಾಧಾನದಿಂದ ಇರುವುದು. ಎಲ್ಲವನ್ನು ಹೋಲಿಸುತ್ತಾ ಹೋಲಿಸುತ್ತಾ ಹೋದೆವೆಂದರೆ, ಕಡಿಮೆ ಏನು ಆಗುತ್ತದೆ. ಹೆಚ್ಚು ಆಗುತ್ತದೆ. ಎಲ್ಲವನ್ನು ಸಮ ಅಂತ ಇಟ್ಟುಕೊಂಡು ಸುಖಪಡುತ್ತೀವಿ ಅಂದರೆ ಸಾಧ್ಯವಿಲ್ಲ. ನಿಮ್ಮಷ್ಟೇ ನನಗಿದ್ದರೆ ಸುಖಪಡುತ್ತೇನೆ ಎಂದರೆ ಹೇಗೆ ಸಾಧ್ಯ?. ಕೆಲವರಿಗೆ ಹೆಚ್ಚು, ಕೆಲವರಿಗೆ ಕಡಿಮೆ, ಈ ಜಗತ್ತು ಇರುವುದು ಹಾಗೆ. ಎಲ್ಲರಿಗೂ ಸಮಾನ ಅನ್ನುವುದು ಈ ಜಗತ್ತಿನಲ್ಲಿ ಇಲ್ಲ. ಮನಸ್ಸು ಸಮಾಧಾನ ಮಾಡಿಬಿಟ್ಟರೆ ಜಗತ್ತಿನಲ್ಲಿ ಸುಖವಾಗಿ ಇರುತ್ತೇವೆ. ಎಲ್ಲವನ್ನು ನಮ್ಮ ಇಚ್ಛೆಗೆ ತಕ್ಕಂತೆ ಮಾಡಲು ಹೋದರೆ ಸಾಧ್ಯವಿಲ್ಲ. ಅದಾದ ಬಳಿಕ ಸಂತೋಷಪಡುತ್ತೇನೆ ಎಂದರೆ ಅದು ಸಾಧ್ಯವಿಲ್ಲ. ಚಂದ ಚಂದ ಇರುವುದನ್ನು ನೋಡುವುದು, ಆನಂದ ಪಡುವುದು. ಇರೋದ್ರಾಗ ಆನಂದ ಪಡುವುದು. ಆನಂದ ಪಡುವುದು ಪಡೆಯುವ ರೀತಿ ಒಳಗೆ ಇದೆ. ಅದನ್ನು ನಾವು ಪಡೆಯುವುದು. ಆದ್ದರಿಂದ ಬಾಹ್ಯದಲ್ಲಿ ಸುಖ, ಅಂತರಂಗದಲ್ಲಿ ಶಾಂತಿ ಎರಡು ಮುಖ್ಯ ಅಲ್ಲವೇ ಮಕ್ಕಳೆ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
******************************************



Ads on article

Advertise in articles 1

advertising articles 2

Advertise under the article