-->
ನನ್ನ ಪ್ರೀತಿಯ ಟೀಚರ್ - 2025 : ವಿದ್ಯಾರ್ಥಿಗಳ ಬರಹಗಳು : ಸಂಚಿಕೆ -01

ನನ್ನ ಪ್ರೀತಿಯ ಟೀಚರ್ - 2025 : ವಿದ್ಯಾರ್ಥಿಗಳ ಬರಹಗಳು : ಸಂಚಿಕೆ -01

ನನ್ನ ಪ್ರೀತಿಯ ಟೀಚರ್ - 2025 
ವಿದ್ಯಾರ್ಥಿಗಳ ಬರಹಗಳು : ಸಂಚಿಕೆ -01
ಶಿಕ್ಷಕರ ದಿನಾಚರಣೆ ಸೆಪ್ಟೆಂಬರ್ : 05 - 2025
ಮಕ್ಕಳ ಜಗಲಿಯ ವಿದ್ಯಾರ್ಥಿಗಳ ಬರಹಗಳ ಮಾಲೆ



ಶಿಕ್ಷಕರ ದಿನಾಚರಣೆ - 2025 ವಿಶೇಷತೆಯಾಗಿ 'ನನ್ನ ಪ್ರೀತಿಯ ಟೀಚರ್' ವಿಷಯದಲ್ಲಿ ತಮ್ಮ ತಮ್ಮ ನೆಚ್ಚಿನ ಶಿಕ್ಷಕರ ಕುರಿತಾಗಿ.... ಕೇವಲ ಒಂದೇ ದಿನದ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯ ಜಗಲಿಯ ಮಕ್ಕಳು ಬರಹಗಳನ್ನು ಕಳುಹಿಸಿಕೊಟ್ಟಿದ್ದೀರಿ... ನಿಮಗೆಲ್ಲ ಪ್ರೀತಿಪೂರ್ವಕ ಧನ್ಯವಾದಗಳು...
      ಎಲ್ಲಾ ಬರಹಗಳನ್ನು ಮಕ್ಕಳ ಜಗಲಿಯಲ್ಲಿ - ಸಂಚಿಕೆಗಳ ರೂಪದಲ್ಲಿ ಪ್ರಕಟಿಸುತ್ತೇವೆ... ಮಕ್ಕಳ ವಿಭಾಗದ ಒಂದನೇ ಸಂಚಿಕೆಯ ಬರಹಗಳು ಇಲ್ಲಿವೆ.... ತಾರಾನಾಥ್ ಕೈರಂಗಳ


ಈ ಸಂಚಿಕೆಯ ಬರಹಗಾರರು :
▪️ಸಾತ್ವಿಕ್ ಗಣೇಶ್ , ಪ್ರಥಮ ಪಿಯುಸಿ
▪️ಭಾಗ್ಯಲಕ್ಷ್ಮಿ, ಪ್ರಥಮ ಪಿಯುಸಿ
▪️ಪೂರ್ತಿ, ದ್ವಿತೀಯ ಪಿಯುಸಿ
▪️ಸಿಂಚನಾ, 8ನೇ ತರಗತಿ 
▪️ಸಮನ್ವಿ, 10ನೇ ತರಗತಿ
▪️ಶ್ರೀನಿಧಿ, 8ನೇ ತರಗತಿ
▪️ಜನ್ಯಶ್ರೀ ಕೆ, 8ನೇ ತರಗತಿ
▪️ಪುಷ್ಕರಣಿ ಕಯ್ಯ, 6ನೇ ತರಗತಿ
▪️ಜಯಶ್ರೀ, 9ನೇ ತರಗತಿ
▪️ಪ್ರಿನ್ಸನ್ ಲೋಯ್ ಡಿಸೋಜಾ, 9ನೇ ತರಗತಿ

 
ನಮಸ್ತೇ... ನನ್ನ ನೆಚ್ಚಿನ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ಎಲ್ಲಾ ಶಿಕ್ಷಕರಿಂದ ಬೇಡುವ ಆಶೀರ್ವಾದಗಳು.
      ನಿಮ್ಮ ಜ್ಞಾನದ ದೀಪ ಮತ್ತು ನಿಮ್ಮ ಮಾರ್ಗದರ್ಶನವು ನನಗೆ ಉತ್ತಮ ಬದುಕು ರೂಪಿಸಲು ದಾರಿ ದೀಪವಾಗಿದೆ. ನನಗೆ ಕಲಿಸಿದ ಶಿಕ್ಷಕರಲ್ಲಿ ಮಾರ್ಗದರ್ಶನ, ಸ್ನೇಹ, ಶಿಸ್ತು ಮತ್ತು ಪ್ರೀತಿ ಎಲ್ಲವನ್ನೂ ಕಂಡುಕೊಂಡೆ. ಅವರ ಪ್ರೋತ್ಸಾಹ, ಬೆಂಬಲ ಮತ್ತು ಅವರು ತುಂಬಿದ ಶಕ್ತಿಯಿಂದ ಇಂದು ನಾನು ಸಾಧನೆಯ 
ಪಥದಲ್ಲಿರುವೆನು. ನಿಮ್ಮ ಪ್ರೋತ್ಸಾಹ ಮತ್ತು ಪ್ರೀತಿಯು ನನಗೆ ಶಕ್ತಿಯಾಗಿದೆ. ಅತ್ಯುತ್ತಮ ಶಿಕ್ಷಕರು ಪುಸ್ತಕದಿಂದಲ್ಲ, ಹೃದಯ ದಿಂದ ಕಲಿಸುತ್ತಾರೆ ಎನ್ನುತ್ತಾರೆ. ಹಾಗೆಯೇ ನಾನು ಇದುವರೆಗೂ ಅಂತಹ ಶಿಕ್ಷಕರನ್ನೇ ಪಡೆದಿರುವೆನು. ಅದ್ಭುತ ಶಿಕ್ಷಕರನ್ನು ಪಡೆದ ನಾನೇ ಧನ್ಯ. ಮಕ್ಕಳ ಜಗಲಿ ಎಂಬ ಆನ್ ಲೈನ್ ಪತ್ರಿಕೆಯನ್ನು ತೆರೆದು ಎಷ್ಟೋ ಮಕ್ಕಳನ್ನು ಕಣ್ಣೆದುರು ಕಾಣದಿದ್ದರೂ ಮಕ್ಕಳ ಪ್ರತಿಭೆಯನ್ನು ಹೊರಜಗತ್ತಿಗೆ ಕಾಣುವಂತೆ ಮಾಡಿ ಅವರಲ್ಲಿರುವ ಪ್ರತಿಭೆಯನ್ನು ಬೆಳೆಯುವಂತೆ ಪ್ರೋತ್ಸಾಹಿಸಿ, ಅವರಿಗೆ ಅವಕಾಶವನ್ನು ಒದಗಿಸಿ ಕೊಡುವ ನನ್ನ ನೆಚ್ಚಿನ ತಾರಾನಾಥ್ ಸರ್ ರವರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಸರ್.
      ಒಂದು ಕಟ್ಟಡ ಅಥವಾ ಮನೆಯು ಭದ್ರವಾಗಿ ಉಳಿಯಲು ಅದರ ಅಡಿಪಾಯ ಹೇಗೆ ಗಟ್ಟಿಯಾಗಿ ಇರಬೇಕೋ ಹಾಗೆಯೇ ಪ್ರತಿಯೊಂದು ಮಕ್ಕಳು ಉತ್ತಮ ಪ್ರಜಾವಂತರಾಗಲು ಒಳ್ಳೆಯ ಶಿಕ್ಷಣ ಅಗತ್ಯ. ಹಾಗೆ ಇಷ್ಟು ಒಳ್ಳೆಯ ಶಿಕ್ಷಕರಿಂದ ಶಿಕ್ಷಣ ದೊರೆಯಲು ಕಾರಣ ನನ್ನ ಅಪ್ಪ ಮತ್ತು ಅಮ್ಮನವರು. ಒಳ್ಳೆಯ ಶಾಲೆಯನ್ನು ಆಯ್ಕೆ ಮಾಡಿ ನನಗೆ ಒಳ್ಳೆಯ ಶಿಕ್ಷಕರು ದೊರೆಯುವಂತೆ ಮಾಡಿರುವವರು. ನನ್ನ ಸಾಧನೆಯ ಹಿಂದಿನ ಸ್ಪೂರ್ತಿ ನನ್ನ ಅಪ್ಪ ಅಮ್ಮ ಮತ್ತು ಶಿಕ್ಷಕರು. ನನಗೆ ವಿದ್ಯಾ ಬುದ್ಧಿ ಕಲಿಸಿದ ನನ್ನ ಪ್ರೀತಿಯ ಶಿಕ್ಷಕರಿಗೆ ಮತ್ತೊಮ್ಮೆ ಶುಭಾಶಯಗಳು... 
 ....................................... ಸಾತ್ವಿಕ್ ಗಣೇಶ್ 
ಪ್ರಥಮ ಪಿಯುಸಿ 
ಎಕ್ಸೆಲ್ ಪದವಿ ಪೂರ್ವ ಕಾಲೇಜು 
ಗುರುವಾಯನಕೆರೆ 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************


   
               

ಶಿಕ್ಷಕರೆಂದರೆ ನೆನಪಾಗುವುದು ಅನಿರೀಕ್ಷಿತ ಭಾವನೆಯಿಂದ, ವಿದ್ಯಾರ್ಥಿಗಳನ್ನು ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುವ ಮುಗ್ಧ ಜೀವ. ಅರಳಿದ ಪುಷ್ಪ ಇಡೀ ನಿಸರ್ಗವನ್ನು ರಂಗೇರಿಸುತ್ತದೆ. ಅರಳಿದ ಪುಷ್ಪ ಅಂದರೆ ವಿದ್ಯಾರ್ಥಿಗಳನ್ನು ಗುರುಗಳು ಧೈರ್ಯ ತುಂಬುವ ಮೂಲಕ ಪ್ರೋತ್ಸಹಿಸುತ್ತಾರೆ. ಗುರುಗಳು ಎಂದರೆ ಪ್ರಾಚೀನ ಕಾಲದಿಂದಲೂ ಅಪಾರ ನಂಬಿಕೆ ಇದೆ. ನಮ್ಮ ಕನ್ನಡನಾಡಿನ ಸಂಸ್ಕೃತಿಯಂತೆ ಗುರುಗಳಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಶಿಕ್ಷಕರು ನಮ್ಮ ಜೀವನವನ್ನು ರೂಪಿಸಲು ಮಹತ್ವದ ಪಾತ್ರವಹಿಸುತ್ತಾರೆ. ನನ್ನ ನೆಚ್ಚಿನ ಶಿಕ್ಷಕಿ ಅರ್ಚನಾ, ಇವರು ನಮಗೆ ಕನ್ನಡವನ್ನು ಬೋಧಿಸುತ್ತಿದ್ದರು. ಎಂದೂ ಅವರು ವಿದ್ಯಾರ್ಥಿಗಳು ಮಾಡಿದ ತಪ್ಪಿಗೆ ಬಯ್ಯುವುದಿಲ್ಲ ಅಥವಾ ಶಿಕ್ಷಿಸುವುದಿಲ್ಲ. ಆದರೆ ಅವರು ಮಾಡಿದ ತಪ್ಪಿನ ಅರಿವನ್ನು ಮೂಡಿಸುತ್ತಾರೆ. ಮುಗ್ಧ ನಗುವನ್ನು ಸದಾ ಮೊಗದಲ್ಲಿ ಬೀರುವ ಶಿಕ್ಷಕಿ ನೀವು. ಸರಿ - ತಪ್ಪುಗಳನ್ನು ತಿದ್ದಿ, ಸರಿದಾರಿಗೆ ನಡೆಸುವ ಸಹನಾಮೂರ್ತಿಯಾಗಿ, ಕೇಳದೆ ಸಹಾಯವನ್ನು ನೀಡುವ ಗುಣ ನಿಮ್ಮದಾಗಿದೆ. ಮೊದಲನೇ ಬಾರಿಗೆ ಸ್ವತಃ ಕಥೆ, ಕವನಗಳನ್ನು ಬರೆಯಬೇಕಾದರೆ ತಿದ್ದಿ ತೀಡಿ ಬರೆಸಿದ ಆ ಸುಂದರ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ. "ವರ್ಣಮಾತ್ರಂ ಕಲಿಸಿದಾತಂ ಗುರು" ಎಂಬ ನುಡಿಮುತ್ತಿನಂತೆ, ನೀವು ಬೋಧಿಸಿದ ಎಲ್ಲಾ ಅಂಶಗಳು ನಮ್ಮ ಮನಸ್ಸಿನಲ್ಲಿ ಉಳಿದಿದೆ. ಪ್ರೀತಿಯಿಂದ ಪಾಠ ಮಾಡುವ ನೀವು, ಎಲ್ಲರಿಗೂ ಅಚ್ಚುಮೆಚ್ಚಿನ ಶಿಕ್ಷಕಿ. ನೀವು ನೀಡಿದ ಮಾರ್ಗದರ್ಶನ ಮತ್ತು ಬೆಂಬಲ ಎಂದೆಂದಿಗೂ ಸ್ಮರಣಿಯ. ನೀವು ಯಾವಾಗಲು ನನ್ನ ನೆಚ್ಚಿನ ಶಿಕ್ಷಕಿಯಾಗಿರುತ್ತೀರಿ. ನಿಮ್ಮ ಶಿಕ್ಷಣದ ಸೇವೆಯೂ ಇನ್ನಷ್ಟು ಮುಂದುವರಿಯಲಿ.
....................................... ಭಾಗ್ಯಲಕ್ಷ್ಮಿ
ಪ್ರಥಮ ಪಿ. ಯು. ಸಿ.
 ಸರಕಾರಿ ಪದವಿಪೂರ್ವ ಕಾಲೇಜು ಕೊಕ್ರಾಡಿ. 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************





ಮಕ್ಕಳ ಜಗಲಿಯ ನನ್ನೆಲ್ಲಾ ನಲ್ಮೆಯ ಮನಗಳಿಗೆ ಆತ್ಮೀಯ ಶುಭನಮನಗಳನ್ನು ತಿಳಿಸುತ್ತಾ... ನಾನು ಪೂರ್ತಿ, ದ್ವಿತೀಯ ಪಿಯುಸಿ.
      ನನ್ನೆಲ್ಲಾ ಗುರುವರ್ಯರಿಗೂ ಶಿಕ್ಷಕರ ದಿನಾಚರಣೆಯಶುಭಹಾರೈಕೆಗಳು....
     "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂಬ ಪುರಂದರದಾಸರ ಕೀರ್ತನೆಯ ಸಾಲಿನಂತೆ ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಕರ ಪಾತ್ರ ಅಮೂಲ್ಯವಾದದ್ದು. ಮನೆಯೇ ಮೊದಲ ಪಾಠ ಶಾಲೆ, ಜನನಿಯೇ ಮೊದಲ ಗುರು ಎಂಬ ನಾಣ್ಣುಡಿಯಂತೆ ನನ್ನ ಮೊದಲ ಗುರು ನನ್ನ ತಾಯಿ. ನನ್ನೆಲ್ಲಾ ಚಟುವಟಿಕೆಯ ಪ್ರೋತ್ಸಾಹದಾಯಕ ಗಣಿಯೆಂದರೆ ತಪ್ಪಾಗಲಾರದು. ಬಾಲ್ಯದಿಂದ ಇಲ್ಲಿಯವರೆಗೂ, ಕಲಿಸಿದ ಗುರುಗಳನ್ನು ನಾನು ಸ್ಮರಿಸುವೆನು. ನನ್ನ ಬಾಲ್ಯದ ದಿನಗಳಲ್ಲಿನ ನನ್ನ ಹವ್ಯಾಸಕ್ಕೆ ಚಿಗುರುಕೊಟ್ಟ ಅಂಗನವಾಡಿ ಟೀಚರ್, ಆ ಚಿಗುರನ್ನು ಪ್ರತಿಹಂತದಲ್ಲೂ ಪೋಷಿಸಿದ್ದ ಪ್ರಾಥಮಿಕ ಶಿಕ್ಷಕರು, ಹಾಗೂ ಪ್ರೌಢಶಾಲಾ ಶಿಕ್ಷಕರು, ಹಾಗೂ ಅವಕಾಶಗಳನ್ನು ಒದಗಿಸುವ ಉಪನ್ಯಾಸಕರು ಇವರೆಲ್ಲರಿಗೂ ಧನ್ಯವಾದ ಅರ್ಪಿಸುವೆ. ಕೊರೋನ ಸಂದರ್ಭದಲ್ಲಿ ಮಕ್ಕಳ ಕೌಶಲ್ಯದ ಪ್ರದರ್ಶನಕ್ಕೆ ವೇದಿಕೆಯಾದ , ಮಕ್ಕಳ ಜಗಲಿಯ ರೂವಾರಿಗಳು, ಮಕ್ಕಳೆಲ್ಲರ ಮೆಚ್ಚುಗೆಯ ಶಿಕ್ಷಕರೆನಿಸಿಕೊಂಡು ,ಜಗಲಿಯ ಮಕ್ಕಳಿಗೆ ಹೊಸ ಸುವಿಚಾರಗಳನ್ನು ತಿಳಿಯ ಪಡಿಸುವ ಜಗಲಿಯ ಎಲ್ಲ ನಲ್ಮೆಯ ಶಿಕ್ಷಕರಿಗೂ , ಶಿಕ್ಷಕರ ದಿನಾಚಣೆಯ ಮನದಾಳದ ಶುಭಾಶಯಗಳು. ಹಿಂದೆ ಗುರು ಇರಬೇಕು , ಮುಂದೆ ಗುರಿ ಇರಬೇಕು ಎಂಬಂತೆ ನನ್ನ ಜೊತೆ ಸದಾ ಜೊತೆಯಾಗಿರುವ ಗುರುಗಳಿಗೆ ಅನಂತಾನಂತ ವಂದನೆಗಳು.
........................................ ಪೂರ್ತಿ
ದ್ವಿತೀಯ ಪಿಯುಸಿ 
ಸರಕಾರಿ ಪದವಿ ಪೂರ್ವ ಕಾಲೇಜು ಅಳದಂಗಡಿ.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************


         

ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ನನ್ನ ಇಷ್ಟದ ಟೀಚರ್ ಪೂರ್ಣಿಮಾ ಟೀಚರ್. ನಮಗೆ ಇಂಗ್ಲಿಷ್ ಮತ್ತು ಕನ್ನಡ ಪಾಠವನ್ನು ಹೇಳಿಕೊಂಡು ಹಾಗೂ ನಮ್ಮನ್ನು ಆಟಕ್ಕೆ, ಪ್ರವಾಸಕ್ಕೆ, ಸ್ಪರ್ಧೆಗಳಿಗೆ ಹೀಗೆ ಅನೇಕ ಅವಕಾಶ ನೀಡಿದ್ದೀರಿ. ಅದಕ್ಕೆ ಎಷ್ಟು ಧನ್ಯವಾದಗಳು ಹೇಳಿದರು ಕಮ್ಮಿಯೇ. ನಿಮ್ಮಂತ ಟೀಚರ್ ನ್ನು ಪಡೆಯೋಕೆ ಎಷ್ಟು ಪುಣ್ಯ ಮಾಡಿರಬೇಕು ನಾವು. ನಾವು ಚಿಕ್ಕವರಿದ್ದಾಗ ಏನಾದರೂ ತಪ್ಪು ಮಾಡಿದರೆ ಅದನ್ನು ಕ್ಷಮಿಸಿ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದೀರಿ ಅದಕ್ಕೆ ಧನ್ಯವಾದಗಳು. ನಾವು ಏನಾದರೂ ತಪ್ಪು ಮಾಡಿದ್ದರೆ ನಮ್ಮನ್ನು ಕ್ಷಮಿಸಿ. ನಿಮ್ಮ ಪ್ರೀತಿಯ ವಿದ್ಯಾರ್ಥಿಗಳು ಈಗ ಪ್ರೌಢಶಾಲೆಯಲ್ಲಿ ಒಳ್ಳೆಯ ಹೆಸರು, ಅಂಕಗಳನ್ನು ತೆಗೆದುಕೊಂಡಿದ್ದೇವೆ.
............................................ ಸಿಂಚನಾ 
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************




 ಗೌರವದ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.. 
     ಶಿಕ್ಷಕ ನಮ್ಮ ವ್ಯಕ್ತಿತ್ವವನ್ನು ರೂಪಿಸುವ ನೈಜ ನಿರ್ದೇಶಕ       
     ನಮ್ಮ ಶಾಲೆಯಲ್ಲಿ ಶಿಕ್ಷಕರು ನಿಷ್ಪಕ್ಷಪಾತವಾಗಿ ಎಲ್ಲ ವಿದ್ಯಾರ್ಥಿಗಳನ್ನು ಸಮನಾಗಿ ಕಾಣುತ್ತಾರೆ. ಕಲಿಕೆಯಲ್ಲಿ ಎಲ್ಲಾ ವಿದ್ಯಾರ್ಥಿಗಳ ಮನಸ್ಥಿತಿ ಕಲಿಕೆಯ ವೇಗ ಒಂದೇ ರೀತಿ ಇರುವುದಿಲ್ಲ. ಹಾಗಾಗಿ ಶಿಕ್ಷಕರು ತಾಳ್ಮೆಯಿಂದ ಕಲಿಸುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಬೋಧನೆ ಮಾಡುವ ವಿಷಯವನ್ನು ಆಳವಾಗಿ ತಿಳಿದು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾರೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಶಿಕ್ಷಕರು ಹೊಂದಿದ್ದಾರೆ. ಪಠ್ಯಪುಸ್ತಕದ ಹೊರಗಿನ ಜ್ಞಾನವನ್ನು ನೀಡಲು ಪ್ರತಿದಿನ ಸುದ್ದಿ ಸಮಾಚಾರಗಳನ್ನು ತಿಳಿಸುತ್ತಾರೆ. ಶಿಕ್ಷಕರು ಪಾಠಗಳನ್ನು ನೈಜ ಜೀವನಕ್ಕೆ ಹೊಂದಿಸುವ ರೀತಿ ಪರಿಣಾಮಕಾರಿ ಬೋಧನೆಯನ್ನು ಮಾಡುತ್ತಾರೆ. ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಅವರು ಪ್ರೋತ್ಸಾಹಿಸುತ್ತಾರೆ. ಅತ್ಯುತ್ತಮ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಅವರು ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಾರೆ. ಶಿಕ್ಷಕರು ನಾಯಕ ಗುಣಗಳನ್ನು ಹೊಂದಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುತ್ತಾರೆ. ಅವರು ವಿದ್ಯಾರ್ಥಿಗಳ ಅನಿಸಿಕೆಗಳನ್ನು ಗಮನಿಸುತ್ತಾರೆ .ಹಾಗಾಗಿ ಬೋಧನೆಯು ಏಕಮುಖವಾಗಿರದೆ, ಕ್ರಿಯೆಗೆ ಪ್ರತಿಕ್ರಿಯೆಗಳಿಂದ ಕೂಡಿರುತ್ತದೆ.
      ಶಿಕ್ಷಕರು ಪಾಠ ಮಾಡುವಾಗ ನಮ್ಮ ತಪ್ಪನ್ನು ತಿಳಿಹೇಳಿ ಮುನ್ನಡೆಸುತ್ತಾರೆ .ಸಮಾಜದಲ್ಲಿ ನಮ್ಮ ವ್ಯಕ್ತಿತ್ವ ಹೇಗಿರಬೇಕು ಎಂಬುದನ್ನು ತಿಳಿಸುತ್ತಾರೆ. ನೈತಿಕ ಶಿಕ್ಷಣದ ಜೊತೆಗೆ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳ ಸಂಪೂರ್ಣ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡಿರುತ್ತಾರೆ. ಎಲ್ಲ ವಿದ್ಯಾರ್ಥಿಗಳನ್ನು ಸಮಾನವಾಗಿ ನೋಡುತ್ತಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರು ಸದಾ ಕ್ರಿಯಾಶೀಲರಾಗಿರುತ್ತಾರೆ.
        ಈ ಎಲ್ಲಾ ಕಾರ್ಯಗಳಿಂದ ವಿದ್ಯಾರ್ಥಿಗಳಲ್ಲಿ ಎಲ್ಲರನ್ನು ಪ್ರೀತಿಸುವ, ಸಮಾನವಾಗಿ ನೋಡುವ, ತಾಳ್ಮೆಯಿಂದ ಇರುವ ಮನಸ್ಥಿತಿ, ಹೃದಯದ ಭಾವನೆ ಉತ್ತಮ ಗುಣಮಟ್ಟದಾಗಿರಬೇಕೆ ಹೊರತು ಕಳಪೆ ಅಲ್ಲ, ಇನ್ನೊಬ್ಬರ ಸಮಸ್ಯೆಗಳಿಗೆ ಸ್ಪಂದಿಸುವ ಕೌಶಲ್ಯ, ಸಾಮಾನ್ಯ ಜ್ಞಾನ, ನೈಜ ಜೀವನದ ಪರಿಕಲ್ಪನೆ,ಇನ್ನೊಬ್ಬರ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು, ಹಿರಿಯರ ಮಾತಿಗೆ ಬೆಲೆ ನೀಡುವುದು, ಎಲ್ಲರ ಭಾವನೆಗೆ ಸ್ಪಂದಿಸುವ ಗುಣಗಳನ್ನು ಒಳಗೊಂಡಂತೆ ಅನೇಕ ವಿಚಾರಗಳು ನಮ್ಮ ವ್ಯಕ್ತಿತ್ವದ ಮೇಲೆ ಶಿಕ್ಷಕರಿಂದ ನೇರ ಪರಿಣಾಮ ಬೀರುತ್ತದೆ.
      ನಿಜವಾಗಿಯೂ ಶಿಕ್ಷಕರೇ ನಮ್ಮ ವ್ಯಕ್ತಿತ್ವವನ್ನು ರೂಪಿಸುವ ನಿಜವಾದ ನೈಜ ನಿರ್ದೇಶಕರು ಎಂದು ನಾನು ಭಾವಿಸುತ್ತೇನೆ . ನನ್ನಲ್ಲಿ ಆಗಿರುವ ಒಳ್ಳೆಯ ಬದಲಾವಣೆಗಳಿಗೆ ನಮ್ಮ ಶಿಕ್ಷಕರು ಹಾಗೂ ನನ್ನ ತಂದೆ ತಾಯಿಯೇ ಕಾರಣ. ಮತ್ತೊಮ್ಮೆ ನಲ್ಮೆಯ ಎಲ್ಲಾ ಗೌರವದ ಶಿಕ್ಷಕರಿಗೆ ; ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. 
.................................................... ಸಮನ್ವಿ
10ನೇ ತರಗತಿ
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢ ಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ 
****************************************



         
 'ಗುರುಭ್ಯೋ ನಮಃ' ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ನನ್ನ ಮೆಚ್ಚಿನ ಟೀಚರ್ ಪೂರ್ಣಿಮಾ ಟೀಚರ್. ನಾನು ನೂಜಿಬೈಲು ಹಿರಿಯ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದೆ. ನಾನು ನೂಜಿಬೈಲು ಶಾಲೆಗೆ ೬ನೇ ತರಗತಿಗೆ ಸೇರಿದೆ. ನಮಗೆ ಪೂರ್ಣಿಮಾ ಟೀಚರ್ ಇಂಗ್ಲೀಷ್ ಪಾಠವನ್ನು ಮಾಡುತ್ತಿದ್ದರು. ತುಂಬಾ ಚೆನ್ನಾಗಿ ಪಾಠವನ್ನು ಹೇಳಿಕೊಡುತ್ತಿದ್ದರು. ನಮಗೆ ಕ್ರೀಡೆ ಇದ್ದರೆ ನಮಗೆ ಸಪೋರ್ಟ್ ಮಾಡುತ್ತಿದ್ದರು. ನಮ್ಮ ಜೊತೆ ಬರುತ್ತಿದ್ದರು. ನಮಗೆ ಚಟುವಟಿಕೆಗಳನ್ನು ಕಲಿಸುತ್ತಿದ್ದರು. ನಮಗೆ ಒಳ್ಳೆ ಬುದ್ಧಿಯನ್ನು ಹೇಳಿಕೊಡುತ್ತಿದ್ದರು. ನಾನು ನೂಜಿಬೈಲು ಶಾಲೆಯಲ್ಲಿ ತುಂಬಾ ಖುಷಿಯಾಗಿ ಇದ್ದೆ. ವಿದ್ಯಾರ್ಥಿಗಳ ಜ್ಞಾನ ಮತ್ತು ಕೌಶಲ್ಯ ಮಟ್ಟವನ್ನು ಮತ್ತು ಆತ್ಮವಿಶ್ವಾಸವನ್ನು ಸುಧಾರಿಸಲು ಸಹಾಯ ಮಾಡುತ್ತಾರೆ. ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ನೀಡುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಾರೆ. ಧನ್ಯವಾದಗಳು.
................................................. ಶ್ರೀನಿಧಿ 
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************



              
   ವಿದ್ಯಾರ್ಥಿಗಳ ಭವಿಷ್ಯದ ರೂವಾರಿಗಳು ಶಿಕ್ಷಕರು. ನಮ್ಮ ತಪ್ಪುಗಳನ್ನು ತಿದ್ದಿ ತೀಡಿ ತಿಳಿ ಹೇಳುವವರು ಶಿಕ್ಷಕರು. ಶಿಕ್ಷಕರು ಎಂದರೆ ಶಿಸ್ತು , ಕ್ಷಮೆ , ಕರುಣೆಯನ್ನು ಹೊಂದಿರುವವರು. ಅಂತಹ ಒಬ್ಬ ಅತ್ಯುತ್ತಮ ಶಿಕ್ಷಕರು
ಸಿಕ್ಕಾಗಲೇ ನಮ್ಮ ಬಾಳು ಹಸನಾಗುವುದು .
            ನನ್ನ ಪ್ರೀತಿಯ ಟೀಚರ್ ಸುಪ್ರಿಯಾ ಟೀಚರ್ ನಿಮ್ಮ ಹೆಸರಿನಂತೆ ನೀವು ನನಗೆ ಪ್ರಿಯವಾದ ಟೀಚರ್. ನಾವು ಏನಾದರೂ ತಪ್ಪು ಮಾಡಿದರೆ ಅದನ್ನು ತಿದ್ದಿ ಹೀಗೆ ಮಾಡಬಾರದು,ನಾವು ತಪ್ಪು ಮಾಡಿದರೆ ಅದು ನಮಗೇ ತೊಂದರೆ ಎಂದು ನಮಗೆ
ಮನಮುಟ್ಟುವಂತೆ ಹೇಳುತ್ತೀರಿ. ನಾವು ಏನಾದರೂ ಕೆಲಸ ಮಾಡುವಾಗ ಅಥವಾ ಮಾಡಲು ಹೊರಟಾಗ ಅದಕ್ಕೆ ಉಪಯುಕ್ತವಾದ ಸಲಹೆ ಸೂಚನೆಗಳನ್ನು ನೀಡಿ ನಮ್ಮ ಕೆಲಸವು ಉತ್ತಮವಾಗುವಂತೆ ಮಾಡುತ್ತೀರಿ ಅದಕ್ಕಾಗಿ ನೀವೆಂದರೆ ನನಗೆ ತುಂಬಾ ಇಷ್ಟ ನಿಮಗೆ ಅಧ್ಯಾಪಕರ ದಿನದ ಶುಭಾಶಯಗಳನ್ನು ಈ ಮೂಲಕ ನಾನು ಕೋರುತ್ತೇನೆ.
................................................. ಜನ್ಯಶ್ರೀ ಕೆ
8ನೇ ತರಗತಿ
ಕೆ. ವಿ. ಎಸ್. ಎಮ್. ಹೆಚ್. ಎಸ್ ಕುರುಡಪದವು
ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ
****************************************
                           


     

ಶ್ರೀ ಗುರುಭ್ಯೋ ನಮಃ ನನ್ನ ಗುರುಗಳಾದ ಶ್ರೀಯುತ ಗಣೇಶ್ ಪಾಲೇಚ್ಚರ್ ಅವರ ಬಗ್ಗೆ ಅವರ ಶಿಷ್ಯೆಯಾದ ಪುಷ್ಕರಣಿಯ ಮನದಾಳದ ಮಾತು.... 
       ಇವರು ನನ್ನ ಯಕ್ಷಗಾನದ ನಾಟ್ಯ ಗುರುಗಳು. ಸದಾ ಹಸನ್ಮುಖಿಯಾಗಿ ಮಕ್ಕಳಿಗೆ ಶಿಸ್ತು ಬದ್ದ ನಾಟ್ಯ ಹೇಳಿಕೊಡುವ ಗುರುಗಳು. ನನಗೆ ಬಲು ಅಚ್ಚು ಮೆಚ್ಚು. ಗುರುಗಳು ನನ್ನ ಜೀವನದಲ್ಲಿ ಸರಿ ತಪ್ಪುಗಳನ್ನು ತಿಳಿಸಿ ಕೊಟ್ಟವರು. ನಾಟ್ಯ ಜ್ಞಾನವನ್ನು ನೀಡಿದವರು ಹಾಗೂ ಉತ್ತಮ ಮಾರ್ಗದರ್ಶಕರು. ಇವರು ನಾಟ್ಯದ ಜೊತೆಗೆ ಜೀವನದ ಮೌಲ್ಯಗಳನ್ನು ತಿಳಿಸಿದವರು. ಮಕ್ಕಳ ಜೊತೆ ಮಕ್ಕಳಾಗಿ ಜ್ಞಾನದ ದೀಪ ಬೆಳಗಿಸಿದವರು. ನನ್ನ ತಪ್ಪುಗಳನ್ನು ತಿದ್ದಿ ತೀಡಿ ಉತ್ತಮ ದಾರಿ ತೋರಿಸಿದವರು. ಇವರು ಎಂದರೆ ನನಗೆ ಬಹಳ ಗೌರವ ಭಕ್ತಿ ಹಾಗೂ ಪ್ರೀತಿ. ಇಂತಹ ಗುರುಗಳನ್ನು ಪಡೆದ ನಾನೇ ಧನ್ಯಳು.
ವಂದನೆಗಳೊಂದಿಗೆ....
........................................ ಪುಷ್ಕರಣಿ ಕಯ್ಯ 
6ನೇ ತರಗತಿ 
ದೇವಮಾತ ಆಂಗ್ಲ ಮಾಧ್ಯಮ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************



                 
ಜೀವನದಲ್ಲಿ ಏನೂ ಆಗುವುದಿಲ್ಲ 
ನನ್ನಿಂದ ಸಾಧ್ಯವಿಲ್ಲ 
ಎಂದಾಗ ಕೈಹಿಡಿದವರು ನೀವು 
ನೀವಾಡಿದ ಮಾತು ನೀವು ತೋರಿದ ದಾರಿ ಎಂದೆಂದಿಗೂ ಮರೆಯಲಾಗದ 
ಬದುಕಿಗೆ ನಿಜ ದಾರಿ 
ನಿಮ್ಮ ಪ್ರೀತಿ ಮೋಹ ಭರವಸೆಯ ನುಡಿಗಳು 
ನಮ್ಮ ಕತ್ತಲೆಯ ಬದುಕಿಗೆ ದಾರಿದೀಪಗಳು 
ನಮ್ಮ ಒಡಲಿನಲ್ಲಿ ನಮ್ಮ ನಿಮ್ಮ ಸಂಬಂಧ ಶತಕಾಲದವರೆಗೂ ಮೀರದ ಅನುಬಂಧ 
ಬದುಕಿಗೆ ಹೊಸ ತಿರುವನ್ನು ನೀಡಬಲ್ಲವರು 
ಶಾಲೆಯ ಎಲ್ಲಾ ಶಿಕ್ಷಕರು 
ಒಂದು ಪದಕ್ಕೆ ಎಷ್ಟು ಅರ್ಥ ಇದೆಯೋ
ನಮ್ಮ ಜೀವನಕ್ಕೆ ಸಾಕಷ್ಟು ಅರ್ಥ ಇದೆ 
ಅರ್ಥವನ್ನು ತಿಳಿಸುವವರು ನೀವು 
ನಿಮ್ಮ ಪ್ರೀತಿಯ ಮಕ್ಕಳು ನಾವು 
ಭೇದ ಭಾವ ಮಾಡದೆ ನೋಡಿದಿರಿ ನೀವು ನಿಮಗೆಂದೆಂದೂ ಚಿರಋಣಿ ನಾವು 
ಎಲ್ಲಾ ಚಿಕ್ಕ ಮಕ್ಕಳಿಗೂ ತಿಂಡಿ ತಿನಿಸು 
ಎಂದರೆ ಅಚ್ಚು ಮೆಚ್ಚು 
ನನಗೆ ನನ್ನ ಕನ್ನಡ ಶಿಕ್ಷಕಿಯೇ ಅಚುಮೆಚ್ಚು ಧನ್ಯವಾದಗಳು ಹೇಳಿದರೆ ಸಾಲದು ನಿಮಗೆ ಅರ್ಪಿಸಿಕೊಳ್ಳಿ ನನ್ನ ಪುಟ್ಟ 
ಈ ಮಾತಿನ ಬರವಣಿಗೆ 
ನನ್ನ ಈ ಮಾತುಗಳಿಗೆ 
ನಳಿನಿ ಮೇಡಂ ರವರೇ ಪ್ರೇರಣೆ
ನನ್ನ ಮನದಲ್ಲಿ ಎಂದೆಂದಿಗೂ 
ನಿಲ್ಲದು ನಿಮ್ಮ ಆರಾಧನೆ.
.................................................. ಜಯಶ್ರೀ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಸರ್ವೆ 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************



              

ನನ್ನ ಪ್ರೀತಿಯ ಶಿಕ್ಷಕರ ಹೆಸರು ಸುಮನಾ ಬಿ. ಇವರು ನಮಗೆ ಸಮಾಜ ವಿಜ್ಞಾನ ಪಾಠ ವನ್ನು ಮಾಡುತ್ತಾರೆ. ಅವರು ನಮಗೆ ಒಂದು ಆದರ್ಶ ಶಿಕ್ಷಕರಾಗಿದ್ದಾರೆ. ಅವರು ನಮಗೆ ಚೆನ್ನಾಗಿ ಪಾಠವನ್ನು ಕಲಿಸುತ್ತಾರೆ. ಅವರು ಯಾವ ವಿಷಯವನ್ನಾದರೂ ಅತ್ಯುತ್ತಮ ಉದಾಹರಣೆ ಗಳೊಂದಿಗೆ ವಿವರಿಸುತ್ತಾರೆ. ಅವರು ಶಿಸ್ತುಬದ್ದ ಮತ್ತು ಸಮಯಪಾಲಕರು. ಅವರ ಬೋಧನಾ ವಿಧಾನವು ಸರಳ ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗಿದೆ. ಅವರು ನಮಗೆ ಒಳ್ಳೆಯ ಅಭ್ಯಾಸಗಳನ್ನು ಮತ್ತು ನೈತಿಕ ಮೌಲ್ಯಗಳನ್ನು ಕಲಿಸುತ್ತಾರೆ. ಅವರು ಯಾವಾಗಲೂ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಗಮನ ನೀಡುತ್ತಾರೆ. ನನ್ನ ಶಿಕ್ಷಕರ ಬಗ್ಗೆ ನನಗೆ ತುಂಬಾ ಗೌರವ ಮತ್ತು ಹೆಮ್ಮೆ ಇದೆ.
....................... ಪ್ರಿನ್ಸನ್ ಲೋಯ್ ಡಿಸೋಜಾ
9ನೇ ತರಗತಿ
ಪ್ರತಿಭಾ ಪ್ರೌಢಶಾಲೆ ಪಟ್ಟೆ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************



Ads on article

Advertise in articles 1

advertising articles 2

Advertise under the article