-->
ನನ್ನ ಪ್ರೀತಿಯ ಟೀಚರ್ - 2025 : ಹಿರಿಯರ ಬರಹಗಳು : ಸಂಚಿಕೆ - 01

ನನ್ನ ಪ್ರೀತಿಯ ಟೀಚರ್ - 2025 : ಹಿರಿಯರ ಬರಹಗಳು : ಸಂಚಿಕೆ - 01

ನನ್ನ ಪ್ರೀತಿಯ ಟೀಚರ್ - 2025
ಹಿರಿಯರ ಬರಹಗಳು : ಸಂಚಿಕೆ -01
ಶಿಕ್ಷಕರ ದಿನಾಚರಣೆ ಸೆಪ್ಟೆಂಬರ್ : 05 - 2025
ಮಕ್ಕಳ ಜಗಲಿಯ ಹಿರಿಯರ ಬರಹಗಳ ಮಾಲೆ

ಶಿಕ್ಷಕರ ದಿನಾಚರಣೆ - 2025 ವಿಶೇಷತೆಯಾಗಿ 'ನನ್ನ ಪ್ರೀತಿಯ ಟೀಚರ್' ವಿಷಯದಲ್ಲಿ ತಮ್ಮ ತಮ್ಮ ನೆಚ್ಚಿನ ಶಿಕ್ಷಕರ ಕುರಿತಾಗಿ.... ಕೇವಲ ಒಂದೇ ದಿನದ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯ ಜಗಲಿಯ ಹಿತೈಷಿಗಳು ಬರಹಗಳನ್ನು ಕಳುಹಿಸಿಕೊಟ್ಟಿದ್ದೀರಿ...  ನಿಮಗೆಲ್ಲ ಪ್ರೀತಿಪೂರ್ವಕ ಧನ್ಯವಾದಗಳು...
      ಎಲ್ಲಾ ಬರಹಗಳನ್ನು ಮಕ್ಕಳ ಜಗಲಿಯಲ್ಲಿ - ಸಂಚಿಕೆಗಳ ರೂಪದಲ್ಲಿ ಪ್ರಕಟಿಸುತ್ತೇವೆ... ಹಿರಿಯರ ವಿಭಾಗದ ಒಂದನೇ ಸಂಚಿಕೆಯ ಬರಹಗಳು ಇಲ್ಲಿವೆ.... ತಾರಾನಾಥ್ ಕೈರಂಗಳ

ಈ ಸಂಚಿಕೆಯ ಬರಹಗಾರರು :
▪️ರಮ್ಯಾ ಆರ್ ಭಟ್, ಸಹ ಶಿಕ್ಷಕಿ. 
▪️ಡಾ. ಮೈತ್ರಿ ಭಟ್, ವಿಟ್ಲ
▪️ಶೋಭಾ ಸುರೇಶ್, ಸಹ ಶಿಕ್ಷಕಿ
▪️ರೇಣುಕಾ ಸಂಗಪ್ಪನವರ, ಪದವಿ ವಿದ್ಯಾರ್ಥಿ 
▪️ಪ್ರೇಮಲತಾ ಡಬ್ಲ್ಯೂ ಎಂ, ಸಹಶಿಕ್ಷಕಿ
▪️ಅನಿತಾ ಸುಧಾಕರ್ ಕುಲಾಲ್ , ಮಳಲಿ
▪️ಶ್ರೀಮತಿ ಮಮತಾ ಸಂತೋಷ್, ಶಿಕ್ಷಕರು



ಮಕ್ಕಳ ಜಗಲಿಯ ಎಲ್ಲಾ ಓದುಗರಿಗೂ ನನ್ನ ನಮಸ್ಕಾರಗಳು... ಮಕ್ಕಳಜಗಲಿಯ ಎಲ್ಲ ಸ್ಫೂರ್ತಿದಾಯಕ ಶಿಕ್ಷಕರಿಗೆಲ್ಲ, ಶಿಕ್ಷಕರ ದಿನಾಚರಣೆಯ ಶುಭಾಶಯಗಳು
              ನನ್ನ ಪ್ರೀತಿಯ ಟೀಚರ್ 
ನನ್ನ ತಾಯಿ ಮನೆ ಕಲ್ಲಿನ ಕೋಟೆ ಚಿತ್ರದುರ್ಗ. ಹೆಸರೇ ಹೇಳುವಂತೆ ಕಲ್ಲಿನ ಕೋಟೆ ಯಾವುದೇ ಒಂದು ಸ್ಥಳಕ್ಕೆ ಹೋಗಬೇಕಾದರೂ ಕಲ್ಲುಗಳೇ ನಮ್ಮನ್ನು ಸ್ವಾಗತಿಸುತ್ತವೆ. ದಿನ ಬೆಳಗ್ಗೆ ಬೇಗ ಎದ್ದು, ಅಮ್ಮನ ಸಹಸ್ರನಾಮದೊಂದಿಗೆ, ಒಂದು ದೊಡ್ಡ ಲೋಟ ಚಹಾದೊಂದಿಗೆ ಒಂದು ಬನ್ ತಿಂದು ಬಾಯಿ ಒರೆಸುತ್ತಲೇ ಓಡಿ ಬಂದು ದಾರಿಯ ಬದಿಯಲ್ಲಿ ನಿಲ್ಲುತ್ತಿದ್ದೆ. ಕಾರಣ 9 ಗಂಟೆ ಸರಿಯಾಗಿ ಕುರಿ ಮಂದೆ ಬರುತಿತ್ತು. ಪೇಟೆಯಲ್ಲಿ ಬೆಳೆದು ಹಳ್ಳಿ ಜೀವನದ ಪರಿಚಯವೇ ಇಲ್ಲದ ನಮಗೆ ಆ ಕುರಿಯ ಮಂದೆ ನೋಡುವುದೇ ಒಂದು ಸಂಭ್ರಮ. ಥರಾವರಿಯ, ಕುರಿಗಳು, ಮೇಕೆಗಳು, ಮಧ್ಯದಲ್ಲಿ ಮುದ್ದುಮುದ್ದಾದ ಕತ್ತೆ ಮರಿಗಳು, ಆಹಾ ಅವುಗಳನ್ನು ನೋಡಿ ಕಣ್ಣುತುಂಬಿಕೊಳ್ಳೋದೆ ಸಂಭ್ರಮ.. ಅವುಗಳ ಸಾಲು ಮುಗಿದ ಮರುಕ್ಷಣದಲ್ಲೇ ಪುಟ್ಟ, ಪುಟ್ಟ ಹೆಜ್ಜೆ ಇಟ್ಟು ಕೊಂಡು, ತೊದಲು ನುಡಿಗಳಿಂದ ತಲೆ ತಿನ್ನುತ್ತಾ ಮಕ್ಕಳ ಹಿಂಡೊಂದು ಶುರು... ನನ್ನ ಸರತಿ ಬಂದಾಕ್ಷಣ ನಾನು, ನನ್ನ ತಮ್ಮನನ್ನು ಕಂಕುಳಲ್ಲಿ ಹೊತ್ತು ಆ ಹಿಂಡನ್ನು ಸೇರುತ್ತಿದ್ದೆ... ಆ ಮಕ್ಕಳ ಮಧ್ಯೆ ಯಾವುದಾದರೂ ನಡೆಯಲಾಗದ ಮಗುವನ್ನು ತನ್ನ ಮಗುವಿನಂತೆ ಹೊತ್ತು ನಮ್ಮನ್ನೆಲ್ಲ ಮಾತನಾಡಿಸಿಕೊಂಡು ಅಂಗನವಾಡಿಯತ್ತ ಸಾಗುತ್ತಿದ್ದ ಆ ಮಹಾದೇವತೆ ನನ್ನ ಪ್ರೀತಿಯ 'ಪದ್ದಮ್ಮ ಟೀಚರ್' . ಟೀಚರ್ ಎನ್ನುವ ಬದಲು ಎರಡನೇ ತಾಯಿ ಎಂದರೆ ಸೂಕ್ತವಾದೀತು. ಮೂರು ಹೊತ್ತು ಮುಖದಲ್ಲಿ ಮಂದಹಾಸ, ಬೆಳಗಿನಿಂದ ಸಂಜೆಯ ವರೆಗೆ ಅದೇ ಉತ್ಸಾಹ. ಅಂಗನವಾಡಿಯಲ್ಲಿರುವ ಎಲ್ಲ ಮಕ್ಕಳನ್ನು ತನ್ನದೇ ಮಕ್ಕಳಂತೆ ಲಾಲಿಸಿ, ಪಾಠ ಹೇಳಿಕೊಡುತ್ತಿದ್ದ ಅವರ ಸಹನೆಗೆ ಸಾಟಿ ಇಲ್ಲ. ಅವರು ಹೇಳಿಕೊಟ್ಟ ಬಾಯಿಪಾಠ ಈಗಲೂ ನಮಗೆ ನಿದ್ದೆಯಲ್ಲೂ ಸಲೀಸಾಗಿ ಹೇಳಬಲ್ಲೆವು. ಶಿಕ್ಷಣ, ಶಾಲೆ, ಶಿಕ್ಷಕರು ಇದೆಲ್ಲದರ ಪರಿಚಯದ ನಂತರ ನಮಗೆ ಕೊಡುವ ಶಿಕ್ಷಣಕ್ಕಿಂತ, ಅದರ ಅರಿವೇ ಇಲ್ಲದ ವಯಸ್ಸಿನಲ್ಲಿ ಶಾಲೆಯ ವಾತಾವರಣವನ್ನು ಪರಿಚಯಿಸಿ ಕೊಡುವ ಅಂಗನವಾಡಿ, ಹಾಗು ನರ್ಸರಿ ಟೀಚರ್ಸ್ ಗೆ ನನ್ನದೊಂದು ನಮನ. ಅವರ ಸ್ಫೂರ್ತಿಯೇ ನಾನು ಇಂದು ನರ್ಸರಿ ಟೀಚರ್ ಆಗಲು ಕಾರಣ ಎಂದು ಹೇಳಿದರೆ ತಪ್ಪಿಲ್ಲ. ಹಾಗೆ ಹೆಮ್ಮೆಯಿಂದ ಹೇಳುತ್ತೇನೆ ನಾನೊಬ್ಬ ನರ್ಸರಿ ಟೀಚರ್ ಎಂದು. ಬರೀ ಬಾಷಣಗಳಲ್ಲಿ ಮಾತ್ರ ಹೊಗಳಿ ಅಟ್ಟಕ್ಕೇರಿಸಿ, ವಾಸ್ತವಿಕತೆಗೆ ಬಂದಾಗ, ಅಯ್ಯೋ ಅವರ? ಅವ್ರು ನರ್ಸರಿ ಟೀಚರ್ ಅಷ್ಟೇ, ಎಂದು ತಾತ್ಸಾರದ ಮಾತುಗಳನ್ನಾಡುವ ನಮ್ಮ ವ್ಯವಸ್ಥೆ, ಪ್ರಶಸ್ತಿ ಪ್ರದಾನ ಎಂದಾಕ್ಷಣ ಕೇವಲ ಪದವಿಗಳ ಹಿಂದೆ ಓಡುವ ನಮ್ಮ ವ್ಯವಸ್ಥೆಗೆ, ಬುನಾದಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ, ನರ್ಸರಿ ಟೀಚರ್ ಗೆ ಮೊದಲ ಆಧ್ಯತೆ ನೀಡುವ ಬೇರೆ ರಾಷ್ಟ್ರಗಳು ಮಾದರಿ ಆಗಬೇಕು ಎನ್ನುವ ಮಹದಾಸೆಯನ್ನು ತಿಳಿಸುತ್ತಾ... ಎಲ್ಲ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
...................................... ರಮ್ಯಾ ಆರ್ ಭಟ್
ಸಹ ಶಿಕ್ಷಕಿ. 
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621
****************************************


        

ಅಂದಿಗೆ ಕುಗ್ರಾಮ ಎಂದೇ ಹೇಳಬಹುದಾಗಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟದಬೈಲು ಇಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಅಧ್ಯಾಪಕರಾಗಿದ್ದ ವೆಂಕಟೇಶ ಚಲವಾದಿ ಮಾಷ್ಟ್ರು ಮತ್ತು ಫ್ಲೇವಿಯಾ ಟೀಚರ್ ಎಂದೆಂದೂ ಮನದಿ ಅಚ್ಚಳಿಯದೇ ಉಳಿದಿದ್ದಾರೆ. ಉತ್ತರ ಕರ್ನಾಟಕದಿಂದ ಬಂದ ಮಾಷ್ಟ್ರು ನಮ್ಮೂರಿಗೆ ಹೊಂದಿಕೊಂಡ ರೀತಿ, ಶಾಲೆಯನ್ನು ಬೆಳೆಸಿದ ಪರಿ ನಿಜಕ್ಕೂ ನೆನಪಿಸಿ ಕೊಳ್ಳಬೇಕಾದುದೇ ಆಗಿದೆ. ಅವರು ಹಾಕಿಕೊಟ್ಟ ಆ ತಳಹದಿ ಇಂದು ಶೈಕ್ಷಣಿಕವಾಗಿ ಉನ್ನತಿಗೆ ಏರಲು ಸಹಕರಿಸಿದೆ. ಅಂದು ಅವರಿಗೆ ಇದ್ದ ನಿಷ್ಠೆ, ಶ್ರದ್ಧೆ ನಿಜಕ್ಕೂ ಮಾದರಿ. 

ಫ್ಲೇವಿಯಾ ಟೀಚರ್ ಪಾಠ ಮಾಡುತ್ತಿದ್ದ ರೀತಿ, ಅದರಲ್ಲೂ ವಿದ್ಯಾರ್ಥಿಗಳನ್ನು ಮಕ್ಕಳಂತೆ ಪ್ರೀತಿಸುತಿದ್ದ ಭಾವ ಇಂದಿನ ದಿನಗಳಲ್ಲಿ ಅಪರೂಪ. ಇಬ್ಬರೂ ಪ್ರತಿದಿನ 4-5 ಕಿ. ಮೀ. ನಡೆದುಕೊಂಡೇ ಶಾಲೆಗೆ ಬರಬೇಕಾದ ಅನಿವಾರ್ಯತೆ ಆ ದಿನಗಳಲ್ಲಿತ್ತು.

ಅವರು ಅಂದು ಅಕ್ಕರದ ಎಳೆ ಎಳೆಯ ಬಿಡಿಸಿ ಮನಸಿಗೆ ಅಡರಿಸಿದ ರೀತಿ, ಸಂತಯಿಸಿದ ಪರಿ, ನಮ್ಮ ತುಂಟಾಟಗಳ ಸಹಿಸಿ ಅರಿವಿನ ಮೊಳಕೆಗೆ ನೀರೆರೆದು ಪೋಷಿಸಿದ ಕಾರಣ ಇಂದು ಬಾಳಿನಲಿ ಅಕ್ಷರ ಅಕ್ಷಯವಾಗಿದೆ ಎಂದರೂ ತಪ್ಪಾಗಲಾರದು. ಹೆತ್ತವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ ಇಂದು ಬದುಕ ನೆರಳಾಗಿ ಕಾಯುತ್ತಿದೆ. ಅವರಿಗಿದೋ ನಮನ.
............................... ಡಾ. ಮೈತ್ರಿ ಭಟ್, ವಿಟ್ಲ
W/o ರವಿಶಂಕರ ಕೆ.
೫-೩೯೨, ಜಯದುರ್ಗಾ, ಬಸವಗುಡಿ, 
ನೆತ್ರಕೆರೆ, ವಿಟ್ಲ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 94497 93584
****************************************



ಗುರುಗಳು ಸಮಾಜಕ್ಕೆ ನೀಡುವ ಕೊಡುಗೆಯನ್ನು ಯಾವ ಪದಗಳಿಂದ ವರ್ಣಿಸಿದರೂ ಸಾಲದು. ವಿದ್ಯಾರ್ಥಿಯ ಬದುಕಿಗೆ ಮಾರ್ಗದರ್ಶನ ನೀಡಿ, ಅಜ್ಞಾನದ ಕತ್ತಲಿನ ಬಾಳಿಗೆ ಜ್ಞಾನದಬೆಳಕು ಹಚ್ಚುವವರು ಗುರುಗಳು. ನನ್ನ ಬದುಕಿಗೆ ಸಾಹಿತ್ಯ ಮತ್ತು ಸಂಗೀತದ ಆಸಕ್ತಿ ಮೂಡಿಸಿ, ಪ್ರೇರಣೆಯ ದಾರಿ ತೋರಿಸಿದವರು ಡಾ. ರಾಮಕೃಷ್ಣ ಶಿರೂರು.
 ಕಾವ್ಯ ಬೋಧಿಸುವಾಗ ಅವರ ಗಾಯನವೇ ಕವಿತೆಯನ್ನು ಜೀವಂತಗೊಳಿಸುತ್ತಿತ್ತು. 
ಡಾ. ರಾಮಕೃಷ್ಣ ಶಿರೂರು ತಮ್ಮ ಪರಿಶ್ರಮ, ಪ್ರತಿಭೆ ಮತ್ತು ಸೇವೆಯಿಂದ ಅನೇಕ ಸಾಧನೆಗಳನ್ನು ಮಾಡಿರುವರು. ಅವರ  ಮಾರ್ಗದರ್ಶನದ ಕಾರಣದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ  ಪ್ರಥಮ ಭಾಷೆ ಕನ್ನಡದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆಯಲು ಸಾಧ್ಯವಾಯಿತು. ಅದೇ ರೀತಿ ನನ್ನ ವಿದ್ಯಾರ್ಥಿಗಳು ಕೂಡಾ ನಾನು ಬೋಧಿಸುವ ವಿಷಯದಲ್ಲಿ ಪ್ರತಿವರ್ಷ ನೂರಕ್ಕೆ ನೂರು ಅಂಕ ಮತ್ತು ಫಲಿತಾಂಶ ಗಳಿಸುವಲ್ಲಿ ಪ್ರೇರಣೆಯಾಯಿತು.
      ಇಂದು ನಾನು ಹೆಮ್ಮೆಪಟ್ಟು ಹೇಳಬಲ್ಲೆ – ನನ್ನ ಸಾಹಿತ್ಯ ಬದುಕಿಗೆ ಬೆಳಕು ತುಂಬಿದವರು, ಸಣ್ಣ ಪುಟ್ಟ ಕವನ,ಲೇಖನ ಬರೆಯಲು, ಸ್ಪೂರ್ತಿ ಪ್ರೇರಣಾದಾಯಕ ಶಕ್ತಿ ಡಾ. ರಾಮಕೃಷ್ಣ ಶಿರೂರು. 
ಇವರು ನನ್ನ ಅಚ್ಚುಮೆಚ್ಚಿನ ಶಿಕ್ಷಕರು. 
..................... ಶೋಭಾ ಸುರೇಶ್, ಸಹ ಶಿಕ್ಷಕಿ ದಿಗಂಬರ ಜೈನ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ
+91 9741583790
****************************************


       
ಶಿಕ್ಷಕರೆಂದರೆ ಕೇವಲ ಶಾಲೆಯಲ್ಲಿ ಪಾಠ ಹೇಳುವವರಲ್ಲ, ಬದುಕಿಗೆ ದಾರಿ ತೋರಿಸುವವರೂ ಹೌದು. ನನಗೆ ಜೀವನದಲ್ಲಿ ಪಾಠ ಕಲಿಸದಿದ್ದರೂ, ಬದುಕನ್ನು ಕಟ್ಟಿಕೊಟ್ಟ, ಶಿಕ್ಷಣಕ್ಕೆ ಹಾದಿ ತೋರಿಸಿದ ಒಬ್ಬ ಮಹಾನ್ ವ್ಯಕ್ತಿ ಇವರು. ಅವರು ನನ್ನ ಜೀವನದ ನಿಜವಾದ ಮಾರ್ಗದರ್ಶಕರು. ಅವರು ನನ್ನ ಶಿಕ್ಷಣಕ್ಕೆ ಬೆಂಬಲವಾಗಿ ನಿಂತರು, ಸಂಕಷ್ಟದಲ್ಲಿ ನನ್ನ ಕೈ ಹಿಡಿದರು, ಜೀವನವನ್ನು ಕಟ್ಟಿಕೊಡುವಲ್ಲಿ ದೇವರಂತೆ ನೆರವಾದರು. ನಮ್ಮ ಕುಟುಂಬಕ್ಕೆ ಅವರು ಕೇವಲ ಒಬ್ಬ ಮಾರ್ಗದರ್ಶಕರಲ್ಲ, ದೇವರ ರೂಪವಾಗಿದ್ದಾರೆ. ಅವರು ನನ್ನ ಬದುಕಿಗೆ ಹೊಸ ದಾರಿಯನ್ನು ತೋರಿದವರು, ನಾನು ಪಡೆದ ದೊಡ್ಡ ಸ್ಫೂರ್ತಿ. ಅವರ ಆಶೀರ್ವಾದ, ಪ್ರೋತ್ಸಾಹ ಮತ್ತು ಪ್ರೀತಿ ನನ್ನ ಹೃದಯದಲ್ಲಿ ಸದಾ ಅಚ್ಚಳಿಯದಂತೆ ಗುರುತಾಗಿ ಉಳಿಯುತ್ತದೆ.
       ಅವರು ನನಗೆ ಕಲಿಸಿದ ಪಾಠ – “ಜೀವನವನ್ನು ನಂಬಿಕೆ, ಶ್ರಮ ಮತ್ತು ಸತ್ಯದಿಂದ ಕಟ್ಟಬೇಕು” – ನನ್ನ ಜೀವನದ ದೀಪಸ್ತಂಭವಾಗಿದೆ. ಈ ಶಿಕ್ಷಕರ ದಿನಾಚರಣೆಯಂದು ನಾನು ನನ್ನ ಶಿಕ್ಷಣಕ್ಕೆ ಬೆಳಕಾದ ಫಾದರ್ ಅವರಿಗೆ ಧನ್ಯವಾದಗಳನ್ನು ಈ ಮೂಲಕ ಹೇಳಲು ಬಯಸುತ್ತೇನೆ.
        ಗುರು ಎಂದರೆ ಕೇವಲ ಪಾಠ ಹೇಳುವವರಲ್ಲ, ಅವರು ನಮ್ಮ ಜೀವನದ ದೀಪ, ನಮ್ಮ ಕನಸುಗಳ ಹಾದಿಯ ಬೆಳಕು. ನನ್ನ ಕನ್ನಡ ವಿಭಾಗದ ಗುರುಗಳು ನನ್ನ ಬದುಕಿಗೆ ಚಿರಸ್ಮರಣೀಯವಾದ ಬೆಳಕು ನೀಡಿದವರು.

ಪ್ರಶಾಂತಿ ಮ್ಯಾಡಂ – ಇವರ ಮಾತುಗಳು ಹೂಗಳ ಪರಿಮಳದಂತೆ, ಕನ್ನಡ ಸಾಹಿತ್ಯವನ್ನು ನಮ್ಮ ಮನದ ತೋಟದಲ್ಲಿ ಅರಳಿಸುವ ಶಕ್ತಿ.

ಕ್ರಿಷ್ಟೋಫರ್ ಸರ್ – ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ, ಸದಾ ಸ್ನೇಹಭಾವದಿಂದ ನಡೆದುಕೊಳ್ಳುವ ಪ್ರೇರಣಾದಾಯಕ ವ್ಯಕ್ತಿ.

ವಿಶ್ವನಾಥ್ ಸರ್ – ನಗುಮುಖದಿಂದ ಪ್ರತಿ ವಿದ್ಯಾರ್ಥಿಯ ಮನದಲಿ ಚೈತನ್ಯ ತುಂಬುವ, ಜೀವನವನ್ನು ಪ್ರೀತಿಯಿಂದ ನೋಡಲು ಕಲಿಸುವ ಸ್ಫೂರ್ತಿ.

ದಿನೇಶ ನಾಯಕ ಸರ್ – ಕೇವಲ ಪುಸ್ತಕದ ಜ್ಞಾನವಲ್ಲ, ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನೂ ತಮ್ಮ ಅನುಭವಗಳಿಂದ ಬೋಧಿಸುತ್ತಾರೆ.

ಮಹಾಲಿಂಗ ಸರ್ - ನಮ್ಮ ತಪ್ಪುಗಳನ್ನು ಪ್ರೀತಿ ತುಂಬಿ ತಿದ್ದುವ, ತಾಳ್ಮೆಯಿಂದ ಪಾಠ ಮಾಡುವ ನಮ್ಮ ಪ್ರೇರಣೆದಾಯಕ ಶಕ್ತಿ.

ಅವರ ಪ್ರೀತಿ, ಆಶೀರ್ವಾದ ಮತ್ತು ಪ್ರೋತ್ಸಾಹವೇ ನನ್ನ ಜೀವನದ ನಿಜವಾದ ಸಂಪತ್ತು. ಗುರುಗಳನ್ನು ದೇವರಿಗಿಂತ ಮೇಲು ಎಂದು ನಮ್ಮ ಸಂಪ್ರದಾಯ ಹೇಳುವುದು ಸತ್ಯ. ಈ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ನಾನು ನನ್ನ ಕನ್ನಡ ವಿಭಾಗ ಶಿಕ್ಷಕರಿಗೆ ಧನ್ಯವಾದಗನ್ನು ಮತ್ತು ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ. 
.............................. ರೇಣುಕಾ ಸಂಗಪ್ಪನವರ 
ಪದವಿ ವಿದ್ಯಾರ್ಥಿನಿ 
ಸಂತ ಅಲೋಶಿಯಸ್ ಪರಿಗಣಿತ 
ವಿಶ್ವವಿದ್ಯಾನಿಲಯ, ಮಂಗಳೂರು.
****************************************



            ನನ್ನ ಮೆಚ್ಚಿನ ಶಿಕ್ಷಕರು

ಮನೆಯೇ ಮೊದಲ ಪಾಠಶಾಲೆಯಾಗಿ ನನಗೆ ಅಪ್ಪ ಅಮ್ಮನೇ ಮೊದಲ ಗುರುಗಳು. ಇಲ್ಲಿಂದಲೇ ಶುರುವಾಗುವುದು ವಿದ್ಯಾಭ್ಯಾಸ. ಪ್ರೀತಿಸುವುದನ್ನು ಗೌರವ ಕೊಡುವುದು ನೆರವಾಗುವುದು ಸುತ್ತಮತ್ತಲಿನ ಪರಿಸರದಲ್ಲಿ ಹೇಗೆ ವರ್ತಿಸಬೇಕೆಂದು ಈ ಎಲ್ಲಾ ಬುದ್ಧಿ ವಂತಿಕೆಯನ್ನು ಹೇಳಿಕೊಡುವುದು ತಾಯಿಯ ಪಾಠವಾದರೆ ಜೀವನದಲ್ಲಿ ಹೊರಗಿನ ಪ್ರಪಂಚದಲ್ಲಿ ಹೇಗೆ ನಿಭಾಯಿಸಬೇಕೆಂದು ಹೇಳಿಕೊಡುವುದು ತಂದೆಯ ಪಾಠ. ತಂದೆ ತಾಯಿ ಮಕ್ಕಳಿಗೆ ಹೇಳಿಕೊಟ್ಟ ಸಂಸ್ಕಾರ ಸಂಸ್ಕೃತಿ ಸಮಾಜದಲ್ಲಿ ಹೇಗೆ ಬಾಳಬೇಕೆಂದು ತಿಳಿಯುವುದು ನಮಗೆ ದಾರಿ ದೀಪ. ನಂತರದಲ್ಲಿ, ನನ್ನ ಪ್ರಾಥಮಿಕ ಶಾಲೆಯಲ್ಲಿ ನನ್ನ ಮೆಚ್ಚಿನ ಗುರುಗಳಾದ ಪ್ರಹ್ಲಾದ್ ಭಟ್ ಸರ್, ಬಸವರಾಜ್ ಸರ್, ಲೀಲಾವತಿ ಟೀಚರ್ ಈ ಮೂವರು ನನ್ನೊಳಗಿನ  ಪ್ರತಿಭೆಯನ್ನು ಗುರುತಿಸಿ ನನ್ನನ್ನು ಬೆಳೆಸಿದ ಶಿಕ್ಷಕರು ಇವರಿಗೆ ನನ್ನ ಗೌರವಪೂರ್ವಕ ನಮನಗಳು.
     ಪ್ರೌಢಶಾಲೆ ಶಾಲೆಯಲ್ಲಿ ನನ್ನ ಮೆಚ್ಚಿನ ಶಿಕ್ಷಕರು ತಿಪ್ಪೇಸ್ವಾಮಿ ಸರ್ , ನಾಗರತ್ನಮ್ಮ ಟೀಚರ್ ವೆಂಕೋಬ ರಾವ್ ಸರ್ ಪಾಠದ ಸಮಸ್ಯೆಗಳನ್ನು ಬಿಡಿಸುವುದರ ಜೊತೆಗೆ ಜೀವನದ ಸಮಸ್ಯೆಗಳನ್ನು ಬಿಡಿಸಿ ನನ್ನನ್ನು ಮೇಲೆ ತಂದವರು. ಇವರಿಗೆ ಗೌರವ ಪೂರ್ವಕ ನಮನಗಳು ಇನ್ನು ನನ್ನ ಪದವಿ ಪೂರ್ವ ಶಿಕ್ಷಣದಲ್ಲಿ ನನ್ನ ಮೆಚ್ಚಿನ ಶಿಕ್ಷಕರು ಮಂಜುನಾಥ್ ಸರ್, ನಂದಿ ವೀರಭದ್ರಪ್ಪ ಸರ್ ಗುಡಿ ರಘುಪತಿ ಸರ್, ಇವರಿಗೂ ಗೌರವ ಪೂರ್ವಕ ನಮನಗಳು. ಇನ್ನು ವೃತ್ತಿ ಶಿಕ್ಷಣ ಮಾಡಲು ನನಗೆ ಪ್ರೇರಪಿಸಿದವರು ನನ್ನ ಪತಿ ಮಲ್ಲಯ್ಯ ಹಿರೇಮಠ್. ಈ ಸಂದರ್ಭದಲ್ಲಿ ಅವರಿಗೂ ನನ್ನ ಹೃದಯ ಪೂರ್ವಕ ನಮನಗಳು.
        ನನ್ನ ಮೆಚ್ಚಿನ ಶಿಕ್ಷಕರು ಬಸವರಾಜ್ ಸರ್, ಬಡಿಗೇರ್ ಸರ್ ಇವರ ಮಾರ್ಗದರ್ಶನದಲ್ಲಿ ವೃತ್ತಿ ಶಿಕ್ಷಣ ಪಡೆದು ಕೊಂಡು ವಿಶಿಷ್ಟ ಶ್ರೇಣಿಯಲ್ಲಿ ಪಾಸಾಗಿ ಸಿಇಟಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಶಿಕ್ಷಕಿಯಾದೆನು. ಈಗ ಶಿಕ್ಷಕಿಯಾಗಿ ಹದಿನೈದು ವರ್ಷಗಳ ಸಂಭ್ರಮ. ಮತ್ತೊಮ್ಮೆ ಎಲ್ಲಾ ನನ್ನ ಮೆಚ್ಚಿನ ಶಿಕ್ಷಕರೆಲ್ಲರಿಗೂ ಗೌರವ ಪೂರ್ವಕ ನಮನಗಳು.
.........................  ಪ್ರೇಮಲತಾ ಡಬ್ಲ್ಯೂ ಎಂ 
ಸಹಶಿಕ್ಷಕಿ (ಪಿ ಸಿ ಎಂ)
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು ದ ಕ ಜಿಲ್ಲೆ.
Phone: 8867214513
****************************************



Manikanta S Kulal Poem Hosanagara Shivamogga: 


         ನನ್ನ ಪ್ರೀತಿಯ ಶಿಕ್ಷಕರು

ನನ್ನ ಪ್ರೀತಿಯ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.. ಇದು 29 ವರ್ಷದ ಹಿಂದಿನ ಕಥೆ. ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಲೀನಾ ಮಿಸ್ ಅಂತ ಇದ್ರು. ನಾನು 5ನೇ ತರಗತಿಗೆ ಬಂದ್ರೂ ಸಹ ಕ,ಕಾ,ಕಿ, ಕೀ ಬರೆಯಲು ಬರುತ್ತಿರಲಿಲ್ಲ. ಓದಲು ಬರುತ್ತಿರಲಿಲ್ಲ. ಅಕ್ಷರದ ಜ್ಞಾನವೇ ಇರಲಿಲ್ಲ. ಹೆಸರಿಗೆ ಐದನೇ ತರಗತಿ ಅಷ್ಟೇ. ಆಗ ನಮ್ಮ ತರಗತಿಯ ಕ್ಲಾಸ್ ಟೀಚರ್ ಲೀನ ಮಿಸ್ .  ಮಿಸ್ಸಿನ ಸೀರೆ ಸೆರಗು ಕೈಯಲ್ಲಿ ಕೊಟ್ಟು ನಾನು ಎಲ್ಲಿಗೆ ಹೋದರು ನೀನು ನನ್ನ ಜೊತೆ ಬರಬೇಕು. ಸ್ಲೇಟಿನಲ್ಲಿ ಅಕ್ಷರ ಬರೀಬೇಕು. ಎಂದು ಹೇಳಿ ಅಕ್ಷರ ತಿದ್ದಿಸಿ ಬರೆಸಿ ಜೊತೆಗೆ ಪೆಟ್ಟುಕೊಟ್ಟು ಅಕ್ಷರ ಕಲಿಸಿದ ದೇವತೆ ಇವರು. ಎಲ್ಲರ ನಡುವೆ ಕೈ ಹಿಡಿದು ಎತ್ತಿ ನಿಲ್ಲಿಸಿದರು.  
        ನಾ ಬರೆದ ಲೇಖನ ಪತ್ರಿಕೆಯಲ್ಲಿ ಪ್ರಕಟವಾದಾಗ ಅದನ್ನು ನೋಡಿ ನನ್ನ ವಿದ್ಯಾರ್ಥಿ ಬರೆದ ಲೇಖನ ಎಂದು ಹೆಮ್ಮೆಯಿಂದ ಹೇಳಿದರು. ಒಬ್ಬ ಶಿಕ್ಷಕರಿಗೆ ತನ್ನ ವಿದ್ಯಾರ್ಥಿಯ ಸಾಧನೆಯ ಮುಂದೆ ಬೇರ್ಯಾವ ಪ್ರಶಸ್ತಿಗಳು ನಗಣ್ಯ.                               
        ಹೈಸ್ಕೂಲಿಗೆ ಬಂದಾಗ ಜಗದೀಶ್ ಸರ್ ಅಂತ ಒಬ್ರು ಏನಾದರೂ ಸಾಧಿಸಬೇಕೆಂದು ಮುಂದೆ ಬರಬೇಕು ಸಿಕ್ಕ ಅವಕಾಶ ಉಪಯೋಗಿಸಿಕೊಳ್ಳಬೇಕು ಹಿಂದೆ ನಿಂತರೆ ಏನು ಸಾಧಿಸಲು ಸಾಧ್ಯವಿಲ್ಲ ಧೈರ್ಯದಿಂದ ಮುಂದೆ ನಡೆದರೆ ಸಾಧಿಸಲು ಸಾಧ್ಯ. ಎಂದು ಬೆನ್ನು ತಟ್ಟಿ ನಮ್ಮೊಳಗಿನ ಆತ್ಮವಿಶ್ವಾಸ ಹೆಚ್ಚಿಸಿದರು. ಯಾವುದೇ ವಿದ್ಯಾರ್ಥಿಯಾದರೂ ಸಾಧನೆ ಮಾಡಬೇಕೆಂದರೆ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಶಿಕ್ಷಕರು ಇರಲೇಬೇಕು. ಅಂತಹ ಶಿಕ್ಷಕರನ್ನು ಪಡೆದ ನಾನೇ ಧನ್ಯ ನನ್ನ ಶಿಕ್ಷಕ ವೃಂದದವರಿಗೆ ಸಾಷ್ಟಾಂಗ ನಮಸ್ಕಾರಗಳು....
......................... ಅನಿತಾ ಸುಧಾಕರ್ ಕುಲಾಲ್ 
ಮಳಲಿ , ಚಕ್ರ ನಗರ 
ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ
****************************************



91 84968 77381

        ನನ್ನ ಪ್ರೀತಿಯ ಶಿಕ್ಷಕರು

ಪ್ರತಿಯೊಬ್ಬರ ಬಾಳಿನಲ್ಲಿ ಅಂಗನವಾಡಿ
ಅಥವಾ ಪ್ರಾಥಮಿಕ ಶಾಲಾ ಶಿಕ್ಷಕರ ಜೊತೆ
ಕಳೆದ ಸಾವಿರ ನೆನಪುಗಳು ಅಚ್ಚಳಿಯದೆ
ಉಳಿಯಬಹುದು. ಆದರೆ ನನಗೆ ಮಾತ್ರ
ನನ್ನ ಡಿ. ಎಡ್ ಶಿಕ್ಷಕರೇ ಹೆಚ್ಚು. ಏಕೆಂದರೆ ಪ್ರಾಥಮಿಕ, ಪ್ರೌಢ, ಪದವಿ, ಪ್ರಥಮ ದರ್ಜೆಯ ಅಭ್ಯಾಸ ಮಾಡುವಾಗ ಸಿಗದ ಅವಕಾಶಗಳು ರೋಸಾ ಮಿಸ್ತಿಕಾ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ಹೊರಟಾಗ ನನ್ನಲ್ಲಿ ಆತ್ಮಸ್ಥೆರ್ಯ ತುಂಬಿ ನಿನ್ನಿಂದ ಸಾಧ್ಯ, ನೀನು ವೇದಿಕೆಯನ್ನು ಉಪಯೋಗಿಸಲೇಬೇಕೆಂದು ಆತ್ಮವಿಶ್ವಾಸ ತುಂಬಿ, ಪ್ರೋತ್ಸಾಹ ನೀಡಿದವರು ರೋಸಾ ಮಿಸ್ತಿಕ ಶಿಕ್ಷಕರ ತರಬೇತಿ ಸಂಸ್ಥೆಯ ಉಪನ್ಯಾಸಕ ವೃಂದಕ್ಕೆ ನಾನೆಂದಿಗೂ ಚಿರಋಣಿ ಹಾಗೂ ಗುರುಗಳಿಗೆಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು....
.....................ಶ್ರೀಮತಿ ಮಮತಾ ಸಂತೋಷ್ ಪುನರೂರು
ಶಿಕ್ಷಕರು 
ಲಿಟ್ಲ್ ಫ್ಲವರ್ ಶಾಲೆ ಕಿನ್ನಿಗೋಳಿ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
****************************************




Ads on article

Advertise in articles 1

advertising articles 2

Advertise under the article