ಜೀವನ ಸಂಭ್ರಮ : ಸಂಚಿಕೆ - 208
Sunday, September 21, 2025
Edit
ಜೀವನ ಸಂಭ್ರಮ : ಸಂಚಿಕೆ - 208
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ಮುಮುಕ್ಷು ಬಗ್ಗೆ ತಿಳಿದುಕೊಳ್ಳೋಣ. ಇದು ನಾರದ ಭಕ್ತಿ ಸೂತ್ರದಲ್ಲಿ ಬರುತ್ತದೆ. ಈ ಭಕ್ತಿ ಸೂತ್ರ ರಚಿಸಿದವನು ನಾರದ. ನಾರದ ಎನ್ನುವ ಮಹರ್ಷಿ. ಆತನನ್ನು ನಾವು ಸಿನಿಮಾದಲ್ಲಿ , ನಾಟಕದಲ್ಲಿ ನೋಡುತ್ತೇವೆ. ಆತನ ಸಂಕೇತವಾಗಿ ತಂಬೂರಿ ಧರಿಸಿದ ಚಿತ್ರ ಕಂಡುಬರುತ್ತದೆ. ಇದು ನಾರದ ಮಹರ್ಷಿಯ ಸಂಕೇತ ತಂಬೂರಿ. ಅಂದರೆ ಸಂಗೀತ. ಸಂಗೀತ ಎಂದರೆ ಹಾಡು, ಹಾಡು ಪ್ರೇಮದ ಸಂಕೇತ. ಭಕ್ತಿ ಎಂದರೆ ಶ್ರೇಷ್ಠ ಪ್ರೇಮ. ಪ್ರೇಮ, ಸಂತೋಷಕ್ಕೆ ಕಾರಣ. ಶ್ರೇಷ್ಠ ಪ್ರೇಮ ಸಂಪಾದಿಸಲು ಏನು ಬೇಕು? ಎಂಬುದಕ್ಕೆ ಹೇಳುವ ಮಾತು ಮುಮುಕ್ಷು.
ಜೀವನದ ಅಂತಿಮ ಗುರಿ ಪರಮ ಸ್ವಾತಂತ್ರ್ಯ ಮತ್ತು ಸತ್ಯ ಸಾಕ್ಷಾತ್ಕಾರ. ಸ್ವಾತಂತ್ರ್ಯ ಎಂದರೆ ನಾವು ತಿಳಿದುಕೊಂಡಂತೆ ದೇಶ ಸ್ವಾತಂತ್ರ ಪಡೆಯುತ್ತಲ್ಲ ಅದಲ್ಲ. ಮನಸ್ಸು ಅನೇಕ ಬಂಧನಗಳಿಗೆ ಒಳಪಟ್ಟಿದೆ. ಮನಸ್ಸು ಬಂಧನದಿಂದ ಮುಕ್ತವಾಗುವುದೇ ನಿಜವಾದ ಸ್ವಾತಂತ್ರ್ಯ. ಭಕ್ತಿ ಮಾರ್ಗ ಅಂದರೆ ಅತ್ಯಂತ ಸುಂದರ, ಮಧುರ, ಸರಳ. ಆದ್ದರಿಂದ ನಾವು ಭಕ್ತಿ ಮಾರ್ಗ ಆಯ್ಕೆ ಮಾಡಿಕೊಳ್ಳಬೇಕು. ಇದರಲ್ಲಿ ಆತಂಕ ಕಡಿಮೆ. ಯಾವ ಕ್ಷಣದಲ್ಲಿ ಈ ಮಾರ್ಗದಲ್ಲಿ ನಡೆಯುತ್ತೇವೆಯೋ, ಆ ಕ್ಷಣವೇ ಆನಂದ ಉಂಟಾಗುತ್ತದೆ. ಮಾರ್ಗ ಆಯ್ಕೆ ಮಾಡುವಾಗ, ನಮ್ಮ ಶಕ್ತಿ ಮತ್ತು ಸಾಮರ್ಥ್ಯ ನೋಡಿಕೊಳ್ಳಬೇಕು. ನಮಗೆ ಯಾವುದು ಸಾಧ್ಯ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ಎಲ್ಲಿ ಸಾಕ್ಷಾತ್ಕಾರ? ಅಲ್ಲಿ ಪರಮ ಶಾಂತಿ, ಅನುಭವ. ಎಲ್ಲಿ ಪರಮ ಶಾಂತಿ ಪಡೆಯುತ್ತೇವೆ? ಅಲ್ಲಿ ಸತ್ಯ ಸಾಕ್ಷಾತ್ಕಾರ. ಅದು ಜೀವನದ ಗುರಿ ಅಂತ ನಾರದ ಮಹರ್ಷಿ ಹೇಳಿದನು. ಬದುಕಿನಲ್ಲಿ ಹಲವಾರು ಗುರಿಗಳು ಇರಬೇಕು. ಅವು ಅಂತಿಮ ಗುರಿಯಲ್ಲ. ನಮಗೆ ಮನೆ ಬೇಕು, ಅದು ಆಗಿನ, ಆ ಕ್ಷಣದ ಗುರಿ ಅಷ್ಟೇ. ಅದಕ್ಕೊಂದು ಮಿತಿ ಇದೆ. ಮನುಷ್ಯನ ದೇಹ, ಮನಸ್ಸು, ಬುದ್ಧಿ ನೋಡಿದರೆ ಅವುಗಳ ಗುರಿ ಅದ್ಭುತ ಇರಬೇಕು. ನಮ್ಮ ದೇಹ ನೂರು ವರ್ಷ ಬದುಕುತ್ತದೆ. ಅದು ಕೇವಲ ಒಂದು ಮನೆ ಕಟ್ಟಲು ಏನು? ನಮ್ಮ ಸಮರ್ಥ ಬುದ್ಧಿ, ನಾಲ್ಕು ಹಣ ಸಂಪಾದನೆ ಮಾಡಲು ಏನು?. ನಮ್ಮ ಮನಸ್ಸು ಜಗತ್ತಿನಷ್ಟು ವಿಸ್ತಾರ ಆಗಬಲ್ಲದು ಹಾಗೂ ಜಗತ್ತನ್ನೇ ತುಂಬುವ ಸಾಮರ್ಥ್ಯವಿದೆ. ಅಂತಹ ಮನಸ್ಸನ್ನು ಕೇವಲ ಎರಡು ವಸ್ತು ಪ್ರೀತಿಸಲು ಕಳೆಯುವುದೇನು?. ನಮ್ಮ ಕೈಯಲ್ಲಿರುವ ಸಾಮರ್ಥ್ಯ ಅದ್ಬುತ!. ಇವೆಲ್ಲ ನೋಡಿದರೆ ನಾವೇನು ಗುರಿ ಹಾಕಿಕೊಳ್ಳುತ್ತೇವೆ? ಅವು ಪ್ರಾಸಂಗಿಕ ಗುರಿಗಳು. ಒಂದೊಂದು ಪ್ರಸಂಗದಾಗೆ ಒಂದೊಂದು ಗುರಿ ಅಷ್ಟೇ. ಆದರೆ ಅವು ಅಂತಿಮ ಗುರಿ ಅಲ್ಲ. ಅಂತಹ ಗುರಿ ಸಾಧಿಸುವ ಸಾಧನಗಳು ನಮ್ಮಲ್ಲಿದೆ. ಅವರು ಮಾಡಿದ್ದಾನೆ ಅಂತ ಮಾಡುವುದಲ್ಲ. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಾವು ಮಾಡಬೇಕು. ಆ ಮಾರ್ಗ ಸುಲಭವಾಗಿರಬೇಕು ಹಾಗೂ ಜೀವನದ ತುಂಬಾ ಸಂತೋಷ ಕೊಡಬೇಕು. ಭಕ್ತಿ ಮಾರ್ಗ ಹಗುರ. ಅದು ಬಾರ ಅಲ್ಲ .ಅದು ಹಿಡಿಯೋದು ಅಲ್ಲ, ಬಿಡುವುದು ಅಲ್ಲ. ಅದು ಒಂದು ಕಲೆ. ಅದು ಮಧುರ ಭಾವ. ಅದನ್ನು ಸ್ವೀಕಾರ ಮಾಡಿ ಆ ಮಾರ್ಗದಲ್ಲಿ ನಡೆಯಬೇಕು. ಕೇವಲ ಹಾಡುತ್ತ ಇರು ಎಂದರೆ ಎಷ್ಟು ಮಧುರ ಇರುತ್ತೆ. ಹೀಗೆ ಪ್ರೇಮ ಮಾರ್ಗ. ಎಲ್ಲಾ ವಸ್ತುಗಳನ್ನು ಪ್ರೀತಿಸು, ಜಗತ್ತನ್ನು ಪ್ರೀತಿಸು, ಜಗತ್ತಿನ ಆಚೆ ಇರುವ ಸತ್ಯ ಪ್ರೀತಿಸು. ಪ್ರೇಮ ದೊಡ್ಡದಾಗುತ್ತ ಹೋಗಿ ಸ್ವಚ್ಛ ಆಯ್ತು ಅಂದರೆ ಅದೇ ಭಕ್ತಿ ಪ್ರೇಮ.
ಹೊಲಸಾಗಬಾರದು. ಪ್ರೇಮ ಯಾವಾಗ ಹೊಲ ಸಾಗುತ್ತದೆ? ಎಂದರೆ , ಅದರಲ್ಲಿ ಆಸೆ, ದ್ವೇಷ ಹೊಕ್ಕಿದರೆ ಹೊಲಸು ಆಗುತ್ತದೆ. ಅದಕ್ಕೆ ರಾಗ ದ್ವೇಷ ಎನ್ನುತ್ತೇವೆ. ಅವೆರಡು ಬರದಂತೆ ನೋಡಿಕೊಳ್ಳಬೇಕು. ಏಕೆಂದರೆ ಈ ಜಗತ್ತಿನ ವಸ್ತು ನನ್ನದಲ್ಲ, ನಿಮ್ಮದಲ್ಲ, ಜಗತ್ತಿನದು. ಜಗತ್ತಿನದು ಅನ್ನುವುದೇ ಸುಂದರ ಭಾವ. ನನ್ನದು, ನಿನ್ನದು ಅನ್ನುವುದು ವ್ಯವಹಾರಿಕ. ಅದು ಸತ್ಯ ಅಲ್ಲ. ಇವುಗಳನ್ನು ನಾವ್ಯಾರು ಸೃಷ್ಪಿಸಿದ್ದಲ್ಲ. ಅದು ನಿಸರ್ಗದ ಅಭಿವ್ಯಕ್ತ ರೂಪ. ಆದ್ದರಿಂದ ಎಲ್ಲವೂ ಪವಿತ್ರ. ಅನುಭವಿಸಲು ಶ್ರಮ ಪಡಬೇಕಿಲ್ಲ, ಗಳಿಸಲು ಶ್ರಮಪಡಬೇಕು. ಒಂದು ಹೂವು ನೋಡಿ ಸಂತೋಷ ಪಡಲು, ಏನು ಶ್ರಮ ಪಡಬೇಕು?. ನಿಸರ್ಗ ಹೂ ಅರಳಿಸಿದೆ, ನಾವು ಕಣ್ಣು ತೆರೆಯುವುದು, ಆ ಹೂವಿನ ಸೌಂದರ್ಯ ಮನಸ್ಸು ತುಂಬಿಕೊಳ್ಳುವುದು. ಮನಸ್ಸಿಗೆ ತುಂಬಿದಾಗ ಉಂಟಾಗುವುದೇ ಸಂತೋಷ. ಇದಕ್ಕೇನು ಶ್ರಮ ಇದೆ? ಆನಂದ ಪಡಲು ಪರಿಶ್ರಮ ಇಲ್ಲ. ಗಳಿಸಲು, ಕೂಡಿಸಲು ಪರಿಶ್ರಮ ಬೇಕು. ಸೂರ್ಯೋದಯ ನೋಡಿ ಆನಂದಿಸಲು ಶ್ರಮ ಇಲ್ಲ. ಅದನ್ನು ನನ್ನದನ್ನಾಗಿ ಮಾಡಿಕೊಳ್ಳಲು ಪರಿಶ್ರಮ ಬೇಕು. ಯುದ್ಧಗಳು, ಜಗಳ ಆಗಿರುವುದು ಅನುಭವಿಸಲು ಅಲ್ಲ, ಸಂಗ್ರಹಿಸಲು, ನಮ್ಮದು ಮಾಡಿಕೊಳ್ಳಲು. ರಾಮಾಯಣ, ಮಹಾಭಾರತದ ಆದದ್ದೂ ಅದಕ್ಕೆ. ಇರುವುದನ್ನು ಅನುಭವಿಸಲು ಕಷ್ಟ ಇಲ್ಲ. ನನ್ನದು ಮಾಡಿಕೊಳ್ಳಬೇಕೆಂದರೆ ಕಷ್ಟ. ಜಗತ್ತಿನ ಸೌಂದರ್ಯ ಅನುಭವಿಸಲು ನನ್ನದು ಮಾಡಿಕೊಳ್ಳಬೇಕಂತಲ್ಲ. ಮುಟ್ಟಿ , ನೋಡಿ, ಕೇಳಿ, ರುಚಿಸಿ ಹಾಗು ಆಘ್ರಾಣಿಸಿ, ಮನಸ್ಸು ತುಂಬಿಸಿಕೊಂಡು ಅನುಭವಿಸಬೇಕು. ಇದೆಲ್ಲ ಆಗಬೇಕಾದರೆ ಸ್ವಾತಂತ್ರ್ಯ ಬೇಕು. ಬಂಧನಕ್ಕೆ ಒಳಪಟ್ಟಿರಬಾರದು. ಬಂಧನದಿಂದ ಮುಕ್ತಿ ಹೊಂದಿರಬೇಕು. ನಮ್ಮನ್ನು ಯಾರು ಕಟ್ಟಿ ಹಾಕಬಾರದು. ದೈಹಿಕವಾಗಿ ನಮ್ಮನ್ನು ಕಟ್ಟಿ ಹಾಕಿದರೆ ಎಷ್ಟೊಂದು ಯಾತನೆ ದುಃಖ ಆಗುತ್ತದೆ?. ಎಲ್ಲೂ ಹೋಗಬಾರದು, ಮನೆಯಲ್ಲಿ ಇರಿ ಎಂದರೆ ಅದೇ ಬಂಧನ. ನಾವೇ ಕಟ್ಟಿದ ಮನೆ ನಮಗೆ ಬಂಧನವಾಯಿತು ಅಂದರೆ ಸಂತೋಷ ಪಡಲು ಆಗುವುದಿಲ್ಲ. ಎಷ್ಟೋ ಸಲ ನಾವು ಕಟ್ಟಿದ್ದೆ ನಮಗೆ ಬಂಧನವಾಗುತ್ತಿದೆ. ನಾವು ಅಂಗಡಿಯಿಂದ ಮುತ್ತಿನ ಸರ ತಂದಿದ್ದೀವಿ ಅಂದರೆ ಯಾವಾಗಲೂ ಒಮ್ಮೆ ಹಾಕಿ ಬಿಚ್ಚಿ ಇಟ್ಟರೆ ಬಂಧನವಿಲ್ಲ. ಸದಾ ಹಾಕಿಕೊಂಡರೆ ಬಂಧನ. ಅದು ನಮಗೆ ದುಃಖ ಕೊಡುತ್ತದೆ. ಎಲ್ಲಿ ಬಂದನ ಇದೆ? ಅಲ್ಲಿ ದುಃಖವಿದೆ. ಮನಸ್ಸು ಒಂದು ವಸ್ತುವಿನಲ್ಲಿ ಬಂಧಿತವಾಯಿತು ಅಂದರೆ ಅದು ಮುಂದೆ ದುಃಖ ಶುರುವಾಗುತ್ತದೆ. ಅದಕ್ಕೆ ವಿಚಾರ ಮಾಡಬೇಕು. ಬಳಸುವಷ್ಟು ತರೋದು, ಬಳಸಿ ಅದರಿಂದ ಮುಕ್ತರಾಗುವುದು. ಎಷ್ಟಿರಬೇಕೆಂದರೆ ಪ್ರಯೋಜನ ಎಷ್ಟು ಅಷ್ಟೇ ಇರಬೇಕು. ಅದಕ್ಕೆ ಅಷ್ಟಕ್ಕೆ ಅಷ್ಟೇ ಅನ್ನುವುದು. ಆದರೆ ಬಹಳ ಸಲ ಸಿಕ್ಕಿ ಹಾಕಿಕೊಳ್ಳುತ್ತೇವೆ.
ಅಲ್ಲಮಪ್ರಭುದೇವರು ಹೇಳಿದ್ದು, "ಹಗಲು ಕಂಡ ಕಮರಿಗೆ, ಇರಳು ಬೀಳುವರೆ" ಗೊತ್ತಿದ್ದರೂ ಬಂಧನಕ್ಕೆ ಸಿಕ್ಕಿ ಬೀಳುತ್ತೇವೆ. ಉದಾಹರಣೆಗೆ ಒಬ್ಬ ಮೀನು ಹಿಡಿಯಲು ಬಲೆ ಹಾಕಿದ್ದನು. ಒಂದೊಂದು ಮೀನು ಬಂದು ಬಲೆಯಲ್ಲಿ ಬೀಳುತ್ತಿದ್ದವು. ಒಂದು ಎಳೆಯ ಮೀನು ಇತ್ತು. ಅದಕ್ಕೆ ಏನು ಗೊತ್ತಿರಲಿಲ್ಲ. ಎಲ್ಲಾ ಹೋಗಿ ಸಿಕ್ಕಿಹಾಕಿ ಕೊಳ್ಳುವುದನ್ನು ನೋಡಿ, ಅದು ಅಂದುಕೊಂಡಿತು, ಅದರಲ್ಲಿ ಏನೋ ಮಜಾ ಇರಬೇಕು?. ಅಂತ. ಈಗ ನಾವು ಏನೆಂದುಕೊಂಡಿದ್ದೇವೆ ?.ದೊಡ್ಡವರು ಏನು ಮಾಡುತ್ತಾರೆ ಅದು ಸರಿ ಅಂತ ಭಾವಿಸಿ, ದೊಡ್ಡವರು, ದೊಡ್ಡ ದೊಡ್ಡ ಹೋಟೆಲ್ ನಲ್ಲಿ ಕುಡಿತಕ್ಕೆ ಹೋಗುತ್ತಾರೆ. ಕಿರಿಯರು ಅದು ಒಳ್ಳೆಯದು ಎಂದು, ಅವರು ಅದೇ ಮಾರ್ಗ ಅನುಸರಿಸುತ್ತಿದ್ದಾರೆ. ಈ ಮೀನು ಭಾವಿಸಿದ್ದು, ಬಲೆಯಲ್ಲಿ ಸಿಕ್ಕಿಹಾಕಿಕೊಂಡ ಮೀನು ಹೊರಗೆ ಬರಲು ಆಗಲಿಲ್ಲ. ಸಣ್ಣ ನೀನು ಅಲ್ಲಿ ಸುತ್ತಾಡುತ್ತಾ ಇತ್ತು. ಅದಕ್ಕೆ ಬೇರೆ ಕಡೆ ಹೋಗಲು ಮನಸ್ಸಿಲ್ಲ. ಏನೋ ಇರಬೇಕು ಅಂತ. ಅಲ್ಲಿ ಏನೂ ಇಲ್ಲ. ಬದುಕಿಗೆ ಬೇಕಾದದ್ದು ಸಾಕಷ್ಟು ಇದೆ. ಅನುಭವಿಸಲು ಬೇಕಾದಷ್ಟು ಇದೆ. ಆದರೆ ಇದರಲ್ಲಿ ಏನೂ ಇಲ್ಲ. ಬರಿ ಆಕರ್ಷಣೆ ಅಷ್ಟೇ. ಇದಕ್ಕೆ ಮಾಯೆ ಅನ್ನುತ್ತಾರೆ. ಅದು ನಮ್ಮ ಜೀವನ ವಿಕಾಸ ಮಾಡುವುದಿಲ್ಲ, ನಾಶ ಮಾಡುತ್ತದೆ. ಆದರೂ ಆಕರ್ಷಕ ಬಲೆಗೆ ಸಿಕ್ಕ ಮೀನಿನಲ್ಲಿ ಒಂದು ಮೀನು, ಈ ಚಿಕ್ಕ ಮೀನಿಗೆ ಹೇಳಿತು. ಹೊರಗೆ ಏಕೆ ಓಡಾಡುತ್ತಿ?, ಒಳಗೆ ಬಾ ಎಂದಿತು. ಏಕೆಂದರೆ ಅದು ತಾನೊಬ್ಬನೇ ಇತ್ತಲ್ಲ ಅದಕ್ಕೆ ಸಮಾಧಾನ ಇಲ್ಲ. ಎಲ್ಲರನ್ನೂ ಸಿಕ್ಕಿಸಬೇಕಂತ ಅದು. ಹೊರಗೆ ಒಂದು ಅನುಭವ ಮೀನು ಬಂದು, ಮರಿಮೀನಿಗೆ ಹೇಳಿತು. ಅದು ಅನುಭವಿ ಮೀನು. ನಾನು ಇಲ್ಲಿ ಹತ್ತು ವರ್ಷ ಇದ್ದೀನಿ. ಇಂತಹ ಬಲೆ ನೂರಾರು ನೋಡಿದ್ದೀನಿ. ಬರ್ತವೆ ಒಳಗೆ ಮೀನು ಬೀಳುತ್ತವೆ. ಆಮೇಲೆ ಹೋಗುತ್ತವೆ. ನೀನು ಆ ಮೀನಿನ ಮಾತು ಕೇಳಬೇಡ ಅಂತ ಹೇಳಿತು. ಆಗ ಬಲೆಯಲ್ಲಿದ್ದ ಮೀನು ಹೇಳಿತು. ಅವನ ಮಾತು ಕೇಳಬೇಡ. ನಾವು ಎಷ್ಟು ಜನ ಒಳಗಿದ್ದೇವೆ, ಬಾ ಒಳಗೆ ಅಂತ ಕರೆಯಿತು. ಆದರೆ ಆ ಎಳೆ ಮೀನು ತಿರುಗಿತಿರುಗಿ ನೋಡಿ ಹೋಗುತ್ತಿತ್ತು. ಅಂದರೆ ಬಂಧನ ಬಹಳ ಆಕರ್ಷಕವಾಗಿ ಇರುತ್ತದೆ. ಇಲ್ಲಿ ಬಂಧಿಸಿದ್ದು ಯಾವುದೋ ಬಲೆಯಲ್ಲ. ಮನಸ್ಸಿನ ಭಾವ ಬಂಧಿಸುತ್ತದೆ. ಮನಸ್ಸು ಆ ಕಡೆ ಹರಿದು ಹೋಗುತ್ತದೆ. ನಾವು ಹೀಗೆ. ನಾವು ಬುದ್ಧಿವಂತರು ವಿದ್ಯಾವಂತರು ಅಂತ ಹೇಳಿ, ಬಂಧನಕ್ಕೆ ಒಳಗಾಗುತ್ತೇವೆ. ಎಲ್ಲಿ ಸ್ವತಂತ್ರ, ಅಲ್ಲಿ ಸಂತೋಷ. ನಾವು ಸಂತೋಷ ಪಡಬೇಕಾದರೆ ಸ್ವಾತಂತ್ರ್ಯ ಅನುಭವಿಸಬೇಕು. ಹಾಗಾಗಿ ನಾವು ವಸ್ತುವಿನೊಂದಿಗೆ ನಮ್ಮ ಭಾವದಿಂದ ಮುಕ್ತಗೊಳಿಸಬೇಕು. ಈ ಇಚ್ಛೆ ಯಾರಿಗೆ ಇದೆ ಅವರೇ ಮುಮ್ಮಕ್ಷು. ಯಾರು ಸ್ವಾತಂತ್ರ್ಯ ಹೊಂದಬೇಕು?, ಬಂಧನದಿಂದ ಮುಕ್ತರಾಗಬೇಕು, ಅಂತಾರೆ ಅವರೇ ಮುಮುಕ್ಷು.
ಬಂಧನಗಳು ಸೂಕ್ಷ್ಮ ಸೂಕ್ಷ್ಮ ಇರುತ್ತದೆ. ಹೊಗಳುವಿಕೆಯು ಕೂಡ ಬಂಧನವೇ. ಆಗ ನಾವು ಆ ಜಾಗ ಬಿಡಲು ಮನಸ್ಸು ಬರುವುದಿಲ್ಲ . ಒಂದು ಕಾಡಿನ ಕುದುರೆ ಇತ್ತು ಅದು ಸ್ವತಂತ್ರವಾಗಿ ಹುಲ್ಲು ತಿಂದು, ನೀರು ಕುಡಿದು, ಬೇಕಂದಲ್ಲಿ ಓಡಾಡಿಕೊಂಡಿತ್ತು. ಒಂದು ದಿನ ಒಬ್ಬ ಸಾಕಿದ ಕುದುರೆ ತೆಗೆದು ಕೊಂಡು ಹೊರಟಿದ್ದನು. ಆ ಕುದುರೆಗೆ ಎಲ್ಲಾ ಹಾಕಿದ್ದನು. ಮುಖಕ್ಕೆ ಮುಖವಾಡ, ಪಟ್ಟಿಗಳು, ಅದರ ಮೇಲೆ ಜೆಂಡಾ, ಗುಚ್ಚ ಅಂದವಾದ ಬಟ್ಟೆ ಹಾಕಿ, ಅಲಂಕಾರ ಮಾಡಿದ್ದನು. ಅದನ್ನು ಒಂದು ಕಡೆ ನಿಲ್ಲಿಸಿ, ತಿಂಡಿ ತಿನ್ನಲು ಹೋದನು. ಆಗ ಕಾಡಿನ ಕುದುರೆ, ಈ ಸಾಕಿದ ಕುದುರೆ ನೋಡಿ ಎಷ್ಟು ಚೆನ್ನಾಗಿದೆ ಅಂದಿತು. ಬಂದು ಕಾಡಿನ ಕುದುರೆ, ಸಾಕಿದ ಕುದುರೆ ಕೇಳಿತು. ನೀನು ಎಷ್ಟು ಚಂದ ಇದೆಯಲ್ಲ. ಆಗ ಸಾಕುಕುದುರೆ ಹೇಳಿತು, ನಾನು ಭಾರಿ ಇದ್ದೀನಿ ನನ್ನ ಮಾಲೀಕ ಹೀಗೆ ನೋಡಿಕೊಂಡಿದ್ದಾನೆ ಅಂದಿತು. ಆಗ ಕಾಡಿನ ಕುದುರೆ ಕೇಳಿತು ನನಗೂ ಹೀಗೆ ಮಾಡೋದಕ್ಕೆ ಆಗುತ್ತಾ ಅಂದಿತು. ಅದಕ್ಕೆ ಸಾಕು ಕುದುರೆ ಹೇಳಿತು, ಅದಕ್ಕೆ ಯಾಕೆ ಚಿಂತೆ?. ನಿನಗೂ ಮಾಡಿಸ್ತೀನಿ. ನಾನು ಒಬ್ಬಂಟಿ. ಬಾ ಜೊತೆಗೆ ಎಂದಿತು. ನಿನಗೆ ನನಗಿಂತ ಚೆನ್ನಾಗಿ ಎಲ್ಲಾ ಹಾಕುತ್ತಾರೆ ಬಾ ಎಂದಿತು. ನೋಡು ನಾನು ಹೇಗಿದ್ದೇನೆ?. ಇವುಗಳನ್ನು ಹಾಕಿದರೆ ಎಷ್ಟು ಚಂದ ಇರುತ್ತದೆ ?.ಕಾಡಿನ ಕುದುರೆ ಭಾವಿಸಿತು, ಇದೆಲ್ಲಾ ಹಾಕಿದರೆ ನನಗೆ ಸುಖ ಸಿಗುತ್ತೆ ಅಂತ ಭಾವಿಸಿತು. ಅದರ ಮೇಲೆ ಕುಳಿತುಕೊಳ್ಳುವವರು ಇದ್ದಾರೆ ಅಂತ ಗೊತ್ತಿರಲಿಲ್ಲ. ಸರಳ, ನಿರಾಭರಣ, ಶಾಂತವಾಗಿ ಇತ್ತು. ತಿಂದು ಉಂಡು ಆರಾಮಾಗಿ ಇತ್ತು. ಅದೇ ಸಮಯಕ್ಕೆ ಮಾಲಿಕ ತಿಂಡಿ ತಿಂದು ಬಂದನು. ಆಗ ಸಾಕು ಕುದುರೆ ಹೇಳಿತು. ಈತ ನನ್ನ ಗೆಳೆಯ, ನನಗೆ ಹಾಕಿರುವಂತೆ ಈತನಿಗೂ ಹಾಕಿದರೆ, ಆತನು ನನ್ನ ಕೂಡ ಬರುತ್ತಾನೆ ಅಂತ. ಆಗ ಮಾಲೀಕ ಹೇಳಿದ, ಆಯ್ತು, ಈಗಲೇ ಹಾಕುತ್ತೀನಿ ಅಂತ ಅದರ ಮೇಲಿದ್ದ ಅಲಂಕಾರ ತೆಗೆದು ಇದರ ಮೇಲೆ ಹಾಕಿದ. ಏಕೆಂದರೆ ಸಾಕಿದ ಕುದುರೆ ಎಲ್ಲೂ ಹೋಗಲ್ಲ ಅಂತ ಗೊತ್ತಿತ್ತು. ಈ ಕಾಡು ಕುದುರೆಗೆ ಆನಂದವೋ ಆನಂದ. ಎಲ್ಲಾ ಹಾಕಿದ ಮೇಲೆ ಕುದುರೆ ಮೇಲೆ ಕುಳಿತು, ಲಗಾಮು ನಿಯಂತ್ರಿಸಿ ನಡೆಸಿದ. ಆಗ ಗೊತ್ತಾಯ್ತು. ಆಗ ಹೀಗೇಕೆ ಮಾಡುತ್ತಾನೆ ಅಂತ ಕಾಡು ಕುದುರೆ ಕೇಳಿತು. ಆಗ ಸಾಕಿದ ಕುದುರೆಯು ಅವನು ಹಾಕಿದ್ದೇ ಅದಕ್ಕೆ. ನಿನ್ನ ಸುಖಕಲ್ಲ. ಆಗ ಆ ಕಾಡು ಕುದುರೆ ಹೇಳಿತು, ಮೊದಲೇ ಏಕೆ ನನಗೆ ಹೇಳಲಿಲ್ಲ? ಅಂದಿತು. ಆಗ ಸಾಕಿದ ಕುದುರೆ ಹೇಳಿತು, ನೀನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ ಅದಕ್ಕೆ ಅಂದಿತು. ನಾವೆಲ್ಲ ಹೀಗೆ ಲಗಾಮು ಹಾಕಿಕೊಂಡು ಬಂಧನಕ್ಕೆ ಒಳಗಾಗುತ್ತೇವೆ. ಯಾವಾಗ ಹಾಕೊಂಡಿವಿ?. ಯಾವಾಗ ಸಿಕ್ಕಿಹಾಕಿ ಕೊಡ್ತೀವಿ ? ಅಂತ ಹೋಗುವುದೇ ಬಂಧನ. ಯಾರು ಈ ರೀತಿ ಬಂಧನಕ್ಕೆ ಒಳಗಾಗದೆ ಮುಕ್ತರಾಗಿ ಸ್ವಾತಂತ್ರ್ಯ ಹೊಂದಬೇಕೆನ್ನುವ ಇಚ್ಚೆ ಇರುವವರೇ ಮುಮುಕ್ಷು. ಅಲ್ಲವೇ ಮಕ್ಕಳೇ?.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
******************************************