-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 93

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 93

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 93
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

    
ಪ್ರೀತಿಯ ಮಕ್ಕಳೇ... ಕಳೆದ ವಾರ ಎರಡು ರೀತಿಯ ಕೋಶಗಳನ್ನು ನೋಡಿದೆವು. ಒಂದು ಪ್ರೋಕ್ಯಾರಿಯೋಟಿಕ್ ಮತ್ತು ಇನ್ನೊಂದು ಯೂಕ್ಯಾರಿಯೋಟಿಕ್. ಪ್ರೋಕ್ಯಾರಿಯೋಟಿಕ್ ಕೋಶದಲ್ಲಿರುವುದು ಒಂದಷ್ಟು ಕೋಶದ್ರವ (cytoplasm/protoplasm) ಒಂದು ತುಂಡು ನ್ಯೂಕ್ಲಿಯಿಕ್ ಆಮ್ಲ, ಒಂದಷ್ಟು ಪ್ರೋಟೀನ್, ಕಾರ್ಬೋಹೈಡ್ರೇಟ್, ಲಿಪಿಡ್, ಕರಗಿದ ಲವಣಗಳು, ಕ್ಲೋರೊಫಿಲ್ ನಂತಹ ಇನ್ನಿತರ ಸಾವಯವ ವಸ್ತುಗಳು. ಈಗ ಒಂದು ಸಯನೋಬ್ಯಾಕ್ಟೀರಿಯಾ ಇದೆ ಎಂದಿಟ್ಟುಕೊಳ್ಳಿ ಅದರಲ್ಲಿ ಕ್ಲೋರೊಫಿಲ್ ಇರುತ್ತದೆ. ಈ ಕ್ಲೋರೊಫಿಲ್ ಅದರ ಕೋಶಪೊರೆಗೆ ಅಂಟಿಕೊಂಡು ಆಹಾರ ತಯಾರಿ ಮಾಡುತ್ತದೆ. ಈಗ ಯೂಕ್ಯಾರಿಯೋಟಿಕ್ ಕೋಶದ ಅಂಗಕಣದ ಪೈಕಿ ಕ್ಲೋರೋಪ್ಲಾಸ್ಟ್ ಅನ್ನು ತೆಗೆದುಕೊಂಡರೆ ಇದಕ್ಕೂ ಒಂದು ಪೊರೆ ಇದೆ. ಅದನ್ನು ಥೈಲಕೊಯ್ಡ್ ಪೊರೆ (thylakoid membrane) ಎನ್ನುತ್ತೇವೆ. ಇದಕ್ಕೆ ಕ್ಲೋರೊಫಿಲ್ ಗಳು ಅಂಟಿಕೊಂಡಿರುತ್ತವೆ. ಪ್ರತಿ ಕ್ಲೋರೋಪ್ಲಾಸ್ಟ್ ನ್ಯೂಕ್ಲಿಯಿಕ್ ಆಮ್ಲದ ಒಂದು ತುಣುಕನ್ನು ಹೊಂದಿರುತ್ತದೆ ಹಾಗೆಯೇ ಒಂದಷ್ಟು ಸಂಕೀರ್ಣ ದ್ರವ ಕೋಶದ್ರವದ ಹಾಗೆ. ಅಂದರೆ ನಿಮಗೆ ಕ್ಲೋರೋಪ್ಲಾಸ್ಟ್ ರಚನೆಯನ್ನು ನೋಡಿದಾಗ ಒಂದು ಸಯನೋ ಬ್ಯಾಕ್ಟೀರಿಯಾದ ನೆನಪಾಗುವುದಿಲ್ಲವೇ? ಹಾಗಾದರೆ ಇಂತಹ ಸರಳ ಪ್ರೋಕ್ಯಾರಿಯೋಟ್ ಗಳನ್ನು ನುಂಗಿ ಸಂಕೀರ್ಣವಾದ ಯೂಕ್ಯಾರಿಯೋಟ್ ಗಳಾದವೇ.

ಜೀವ ವಿಕಾಸದ ಹಾದಿಯಲ್ಲಿ ಹೀಗೆಯೇ ನಡೆದಿರಬೇಕು ಎಂದು ಊಹಿಸುತ್ತಾರೆ ಜೀವ ವಿಕಾಸ ವಿಜ್ಞಾನಿಗಳು. ಇದು ವಿವರಣೆ ಕೊಡಲು ಪ್ರಯತ್ನಿಸುವಾಗ ಕ್ಲೋರೋಪ್ಲಾಸ್ಟ್ ನೊಂದಿಗೆ ವಿಜ್ಞಾನಿಗಳಿಗೆ ರೈಬೋಸೋಮ್‌‌ಗಳು ಮತ್ತು ಮೈಟೊಕಾಂಡ್ರಿಯಾಗಳು ಕಾಣಿಸಿದವು. ಬ್ಯಾಕ್ಟೀರಿಯಾ ಜೀವಕೋಶಗಳಂತೆ ಇವುಗಳು ನ್ಯೂಕ್ಲಿಯಿಕ್ ಆಮ್ಲಗಳ ತುಣುಕುಗಳನ್ನು ಹೊಂದಿವೆ. ಮೈಟೊಕಾಂಡ್ರಿಯಾಗಳು ಕೋಶದಲ್ಲಿ ಶಕ್ತಿ ಉತ್ಪಾದಕ ಕೇಂದ್ರಗಳು (energy house of a cell). ಪ್ರಕೃತಿಯಲ್ಲಿ ಶಕ್ತಿ ಉತ್ಪಾದಿಸುವ ಬ್ಯಾಕ್ಟೀರಿಯಾಗಳಿವೆ. ಅವುಗಳನ್ನು ಸೂಕ್ಷ್ಮ ಶಕ್ತಿ ಕೋಶಗಳು (microbial fuel cells/ MFCs) ಎನ್ನುತ್ತೇವೆ. ನಿಮ್ಮ ಮನೆಯ ಗೋಬರ್ ಗ್ಯಾಸ್ ಹೊಂಡದಲ್ಲಿರುವ ಮಿಥೇನ್ ಬ್ಯಾಕ್ಟೀರಿಯಾಗಳು ಇಂತಹ ಜೀವಿಗಳು. ರೈಬೋಸೋಮ್‌‌ಗಳು ಜೀವಕೋಶದ ಪ್ರೋಟೀನ್ ಕಾರ್ಖಾನೆಗಳು. ಅವುಗಳೂ ನ್ಯೂಕ್ಲಿಯಿಕ್ ಆಮ್ಲದ ಒಂದು ತುಣುಕನ್ನು ಹೊಂದಿವೆ ಬ್ಯಾಕ್ಟೀರಿಯಾಗಳ ಹಾಗೆ. ನಮ್ಮ ಕರುಳಿನಲ್ಲಿರುವ E. Coli ಮತ್ತು psuedomonas fluorescences ಬ್ಯಾಕ್ಟೀರಿಯಾ ಗಳು ಅಪಾರ ಪ್ರಮಾಣದ ಪುನರ್ ಸಂಯೋಜಿತ ಪ್ರೋಟೀನ್ ಗಳನ್ನು (recombinant protien) ತಯಾರಿಸುತ್ತವೆ. ಆದ್ದರಿಂದ ಪ್ರತಿಯೊಂದು ಕಣದಂಗವೂ (organelles) ಒಂದು ಪ್ರೋಕ್ಯಾರಿಯೋಟಿಕ್ ಕೋಶ ಅಥವಾ ಒಂದೊಂದು ಬ್ಯಾಕ್ಟೀರಿಯಾ. ಅಂದರೆ ಕ್ಲೋರೋಪ್ಲಾಸ್ಟ್ ಒಂದು ಸಯನೋ ಬ್ಯಾಕ್ಟರ್, ರೈಬೋಸೋಮ್‌‌ ಒಂದು E. Coli ಮತ್ತು ಒಂದು ಮೈಟೊಕಾಂಡ್ರಿಯ ಒಂದು MFC's. ಈ ಆರ್ಗನೆಲ್ ಗಳಲ್ಲಿ ಸ್ವತಂತ್ರ ನ್ಯೂಕ್ಲಿಯಿಕ್ ಆಮ್ಲದ (DNA) ತುಣುಕು ಇರುವುದರಿಂದ ಇವುಗಳನ್ನು ಕೋಶ ಉತ್ಪಾದಿಸಬೇಕಾಗಿಲ್ಲ. ಬದಲಾಗಿ ಅವುಗಳೇ ಪುನರುತ್ಪಾದನೆ ನಡೆಸಬಲ್ಲವು. ಕೋಶದೊಳಗೆ ಒಂದು ಮೈಟೊಕಾಂಡ್ರಿಯಾ ಇದ್ದರೆ ಸಾಕು ಅನೇಕ ಮೈಟೊಕಾಂಡ್ರಿಯಗಳಾಗಿ ಮರಿ ಮಾಡುತ್ತದೆ.

ರೈಬೋಸೋಮ್‌‌ಗಳು ಮತ್ತು ಹರಿದ್ರೇಣುಗಳಲ್ಲಿ ಕಂಡು ಬರುವ DNA ಆ ಕೋಶದಿಂದ ಬರುತ್ತದೆ. ಆದರೆ ಮೈಟೊಕಾಂಡ್ರಿಯಾದ DNA ಹಾಗಲ್ಲ. ಅದು ತಾಯಿಯ ಬಳುವಳಿಯಾಗಿರುತ್ತದೆ. ಅಂದರೆ ಜೀವಿಗಳು ಲೈಂಗಿಕ ವಂಶಾಭಿವೃದ್ಧಿ ನಡೆಸುವಾಗ ಅವುಗಳ ಜೈವಿಕ ವಸ್ತುವಿನಲ್ಲಿ (genetic component) ಅರ್ಧಾಂಶ ತಂದೆಯಿಂದ (fraternal) ಬಂದರೆ ಉಳಿದರ್ಧ ತಾಯಿಯಿಂದ (maternal) ಬರುತ್ತದೆ. ಆದರೆ ಮೈಟೊಕಾಂಡ್ರಿಯಾದಲ್ಲಿರುವ DNA 100% ತಾಯಿಯಿಂದ ಬಂದದ್ದು. ಮೈಟೊಕಾಂಡ್ರಿಯ ಶಕ್ತಿ ಉತ್ಪಾದನಾ ಕೇಂದ್ರ. ಅದು ತಾಯಿಯ ಬಳುವಳಿ. ಆದ್ದರಿಂದ ಸ್ತ್ರೀ ಎಂದರೆ ಶಕ್ತಿ ಸ್ವರೂಪಿಣಿ. ಈಗಲಾದರೂ ತಿಳಿಯಿತೇ ಭಾರತಿಯರು ದುರ್ಗೆಯನ್ನು ಏಕೆ ಶಕ್ತಿ ಸ್ವರೂಪಿಣಿ ಎಂದು ಭಾವಿಸುತ್ತಾರೆ ಎಂದು. ನಮ್ಮ ಪೂರ್ವಜರ ಜೀವಶಾಸ್ತ್ರದ ಜ್ಞಾನ ಆ ಮಟ್ಟದ್ದಿರಬೇಕು.

ಮಾನವ ಒಂದು ಯೂಕ್ಯಾರಿಯೋಟ್. ಅಂದರೆ ಮಾನವ ಕೋಶಗಳು ಹಲವು ಕಣದಂಗಗಳನ್ನು ಹೊಂದಿವೆ. ಅಂದರೆ ಹಲವು ಬ್ಯಾಕ್ಟೀರಿಯಾಗಳಂತೆ. ಅಂದರೆ ಮಾನವ ಜೀವಕೋಶಗಳು ಬ್ಯಾಕ್ಟೀರಿಯಾಗಳಿಂದಾಗಿವೆ ಎನ್ನೋಣವೇ?

ಈ ಲೇಖನದ ವಸ್ತುವನ್ನು ಒದಗಿಸಿದ್ದು ನನ್ನ ವಿದ್ಯಾರ್ಥಿ ಮತ್ತು ಮಿತ್ರ ಶ್ರೀ ಗೌತಮ ಅವನಿಗೆ ಧನ್ಯವಾದಗಳು.

ಈ ಬ್ಯಾಕ್ಟೀರಿಯಾ ಕೋಶಗಳು ನಮ್ಮ ಜೀವಕೋಶದೊಳಗಡೆ ಸೇರುವುದು ಸಾಧ್ಯವೇ? ಸೇರಿದರೆ ಏನಾಗುತ್ತದೆ? ಮುಂದಿನವಾರ....
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************


Ads on article

Advertise in articles 1

advertising articles 2

Advertise under the article