ಸ್ಫೂರ್ತಿಯ ಮಾತುಗಳು : ಸಂಚಿಕೆ - 178
Monday, August 18, 2025
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 178
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಭೂತಾವಾಸಾಯ ಭೂತಾಯ ಪರಾಯ ಪರಮಾತ್ಮನೇ||
ಜ್ಞಾನವಿಜ್ಞಾನನಿಧಯೇ ಬ್ರಹ್ಮಣೇSನಂತಶಕ್ತಯೇ|
ಅಗುಣಾಯಾವಿಕಾರಾಯ ನಮಸ್ತೇ ಪ್ರಾಕೃತಾಯ ಚ||
ಭಗವಾನ್ ಶ್ರೀಕೃಷ್ಣನ ಪಾದ ತುಳಿತಗಳಿಂದ ಜರ್ಝರಿತನಾಗಿ ಕಾಳಿಂಗನಾಗನು ಕಂಗಾಲಾಗಿ ಮೂರ್ಛಿತನಾದ ಸಂದರ್ಭದಲ್ಲಿ ನಾಗ ಪತ್ನಿಯರು ಶರಣಾಗತರಾಗಿ ಪ್ರಾಣ ಭಿಕ್ಷೆಗಾಗಿ ಭಗವಂತನನ್ನು ಸ್ತುತಿಸಿದ ಪರಿಯಿದು.
ವಸುದೇವ ದೇವಕಿಯರ ಎಂಟನೇ ಪುತ್ರನಾಗಿ ಜನ್ಮವೆತ್ತಿದ ಶ್ರೀಮಹಾವಿಷ್ಣುವಿನ ಅವತಾರದ ಉದ್ದೇಶವೇ ಲೋಕೋದ್ಧಾರ. ಲೋಕ ಕಂಟಕಿಗಳ ನಿಗ್ರಹ, ಸಜ್ಜನರ ಉದ್ಧಾರವೇ ಶ್ರೀಕೃಷ್ಣಾವತಾರದ ಸಂಕಲ್ಪ. ದೌರ್ಜನ್ಯ ಮಾಡುತ್ತಿದ್ದ ದುಷ್ಟರನ್ನು ದಮನಿಸಿದನು ಎಂದು ಭಗವಂತನನ್ನು ಕೊಂಡಾಡುವುದಕ್ಕಿಂತ, ದುಷ್ಟರಲ್ಲಿದ್ದ ದಮನಕಾರಿ ಪ್ರವೃತ್ತಿಯ ಹುಟ್ಟಡಗಿಸಿ ಅವರನ್ನು ಭಗವಾನ್ ಶ್ರೀಕೃಷ್ಣನು ಉದ್ಧರಿಸಿದನು ಎಂದು ವರ್ಣಿಸುವುದೇ ಹೆಚ್ಚು ಅರ್ಥಪೂರ್ಣ.
ಕಾಳಿಂಗನಂತೆ ಭಗವಂತನಿಂದ ಉದ್ಧಾರ ಹೊಂದಿದವರು ಅಸಂಖ್ಯ. ಮಾಯಾವಿ ಪೂತನಿ, ಕಂಸ ಚಾಣೂರ, ಜರಾಸಂಧ, ಕಾಲಯವ, ನರಕಾಸುರ, ಪೌಂಡ್ರಕ, ಶಿಶುಪಾಲ, ದಂತವಕ್ತ್ರ, ಬಿಲ್ವಲ ಮುಂತಾದ ಅದೆಷ್ಟೋ ದುರುಳರ ಉದ್ಧಾರ ಕೃಷ್ಣನಿಂದಾಯಿತೆಂಬುದನ್ನು ಭಾಗವತ ಉಲ್ಲೇಖಿಸುತ್ತದೆ. ಭೂಭಾರ ಕಳೆಯುವ ಸಂದರ್ಭದಲ್ಲಿ ಭಗವಂತನು ಪಕ್ಷಪಾತಿಯಾಗಿರಲಿಲ್ಲ, ತನ್ನವರೆಂಬ ಮೃದುತ್ವ ತಾಳದೆ ನಿಷ್ಠುರತೆ ತೋರಿದ್ದಾನೆಂಬುದನ್ನು ನಾವು ಗಮನಿಸಬೇಕು.
ಕುರುಕ್ಷೇತ್ರದಲ್ಲಿ ಜರಗಿದ ಮಹಾ ಸಂಗ್ರಾಮವು ಧರ್ಮ ಮತ್ತು ಅಧರ್ಮಗಳ ನಡುಣ ಸಂಘರ್ಷ. ಶ್ರೀಕೃ಼ಷ್ಣನು ಧರ್ಮಪರರಾದ ಪಾಂಡವರ ಜೊತೆಗೂಡಿರುವುದೂ ಅವನ ದೈವಿಕ ನಿಷ್ಠೆಗೆ ಸಾಕ್ಷಿ. ಯುದ್ಧದಿಂದ ಹತರಾದ ದುಷ್ಟರ ರಾಜ್ಯಾಡಳಿತವನ್ನು ತಾನೇ ವಹಿಸದೆ, ಮೃತರ ಉತ್ತಾರಾಧಿಕಾರಿಗಳಿಗೇ ವಹಿಸಿರುವುದು ಶ್ರೀಕೃಷ್ಣನ ನಿಸ್ಪೃಹತೆ.
ಚಾಂದ್ರಮಾನ ಪಂಚಾಂಗ ರೀತ್ಯಾ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ರೋಹಿಣಿ ನಕ್ಷತ್ರದಲ್ಲಿ ಶ್ರೀ ಕೃಷ್ಣನ ಜನ್ಮವಾಯಿತು . ಸೌರಮಾನ ಪಂಚಾಂಗ ರೀತ್ಯಾ ಸಿಂಹ ಮಾಸದಲ್ಲಿ ಶ್ರೀ ಕೃಷ್ಣನ ಜನ್ಮವಾಯಿತು. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿಯೇ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವುದು ವಾಡಿಕೆ. ದೇಶದ ವಿವಿಧ ಪ್ರದೇಶಗಳಲ್ಲಿ ತಮ್ಮದೇ ಆದ ವೈಖರಿಯಲ್ಲಿ ಶ್ರೀಕೃಷ್ಣನನ್ನು ಪೂಜಿಸುವರು. ಇದೇ ದಿನವನ್ನು ಗೋಕುಲಾಷ್ಟಮಿಯೆಂದೂ , ಕರೆಯುವರು. ಸನಾತನ ಪರಂಪರೆಯಲ್ಲಿ ಶ್ರದ್ಧೆಯಿರುವವರೆಲ್ಲರೂ ನಿಷ್ಠಾಪೂರ್ವಕವಾಗಿ ವಿಶ್ವದಾದ್ಯಂತ ಅಷ್ಟಮಿಯ ಪೂಜೆಯನ್ನು ವೈವಿಧ್ಯಮಯವಾಗಿ, ವರ್ಣರಂಜಿತವಾಗಿ ಮಾಡುತ್ತಾರೆ. ಭಗವಂತನನನ್ನು ಅವನ ಸುರೂಪ ಸುಗುಣ ವಿಶೇಷಗಳನ್ನು ಪೊಗಳಿ ಕೊಂಡಾಡುತ್ತಾರೆ, ಆನಂದ ತುಂದಿಲರಾಗುತ್ತಾರೆ. ಭಗವಾನ್ ಶ್ರೀಕೃಷ್ಣನ ಜಯಂತಿಯನ್ನು ಗೋಕುಲಾಷ್ಟಮಿಗೆ ಮಾತ್ರ ಸೀಮಿತಗೊಳಿಸದೆ, ವಿಟ್ಲ ಪಿಂಡಿಯೆಂಬ ಅಭಿದಾನದಲ್ಲಿ ಮರುದಿನವೂ ಆಚರಿಸುತ್ತಿರುವುದು ಮಹತ್ವದ ಸಂಗತಿ. ಗುರುವಾಯೂರು, ಉಡುಪಿ ಮುಂತಾದ ದಕ್ಷಿಣದ ಕೃಷ್ಣನ ಬೃಹತ್ ದೇವಾಲಯಗಳಲ್ಲಿ ವಿಟ್ಲ ಪಿಂಡಿಯ ಆಚರಣೆಯಿರುವಂತೆ ಇಂದು ಪ್ರತೀ ಊರಿನಲ್ಲೂ ವಿಟ್ಲ ಪಿಂಡಿಯ ಆಚರಣೆ ನಡೆಯುತ್ತಿದೆ. ವಿಶ್ವದ ಎಲ್ಲೆಡೆಯೂ ವಿಟ್ಲ ಪಿಂಡಿಯ ಆಚರಣೆಯೊಂದಿಗೆ ಶ್ರೀಕೃಷ್ಣ ಸ್ಮರಣೆ ನಡೆಯುತ್ತದೆ.
ಶ್ರೀಕೃಷ್ಣನಿಗೆ ಬಾಲ್ಯದಲ್ಲಿ “ವಿಠಲ” ಎಂಬ ಹೆಸರು ಇತ್ತು. ವಿಠಲನೆಂಬ ಹೆಸರಿಂದ ವಿಟ್ಲದ ಉತ್ಪತ್ತಿಯಾಯಿತು, ವಿಠಲ ಬಂದ ಎಂಬ ವಿಶಾಲ ಭಾವವೇ ವಿಟ್ಲ ಪಿಂಡಿಯಲ್ಲಿ ಅಂತರ್ಗತವಾಗಿದೆ. ವಿಟ್ಲ ಪಿಂಡಿಗೆ ಶ್ರೀಕೃಷ್ಣ ಲೀಲೋತ್ಸವ ಎಂಬ ಹೆಸರೂ ಇದೆ. ಶ್ರೀಕೃಷ್ಣನ ಬಾಲಲೀಲೆಗಳನ್ನು ಜ್ಞಾಪಿಸುವ, ಜನರ ಮುಂದೆ ಅವುಳೆಲ್ಲವನ್ನೂ ಸಾದರ ಪಡಿಸುವ ಕೆಲಸ ವಿಟ್ಲ ಪಿಂಡಿ ಉತ್ಸವದಲ್ಲಿ ನಡೆಯುತ್ತದೆ. ಶ್ರೀಕಷ್ಣನಿಗೆ ಚಕ್ಕುಲಿ ಲಡ್ಡು ಕಡುಬುಗಳಂತೆ ಹಾಲು, ಮೊಸರು ಮತ್ತು ಬೆಣ್ಣೆಯೂ ಪ್ರಿಯ. ಅದಕ್ಕಾಗಿ ಮೊಸರು ಕುಡಿಕೆಯೆಂದೂ ವಿಟ್ಲ ಪಿಂಡಿ ಉತ್ಸವಕ್ಕೆ ಹೆಸರಿದೆ.
ವಿಟ್ಲ ಪಿಂಡಿಯ ಉತ್ಸವವನ್ನು ಬೇರೆ ಬೇರೆ ಕಡೆಗಳಲ್ಲಿ ವಿಭಿನ್ನವಾಗಿ ಆಚರಿಸುವರು. ಕರಾವಳಿಯಲ್ಲಿ ಸಾಮಾನ್ಯವಾಗಿ, ಬಾಲಮುರಳಿ ವೇಷಧಾರಣೆ, ರಾಧೆಯ ವೇಷಧಾರಣೆ, ಗೀತಾ ಪಠಣ, ಮೊಸರಿರುವ ಕುಡಿಕೆ ಒಡೆಯುವುದು, ಸುಲಿದ ತೆಂಗಿನಕಾಯಿಗಳ ತಾಡನ (ತುಳುನಾಡಿನಲ್ಲಿ ಕಾಯಿ ಕುಟ್ಟುವುದು ಎಂದು ಪ್ರತೀತಿಯಿದೆ) ಬಹಳ ಮಹತ್ವದ ಭಾಗಗಳು. ಹಗ್ಗ ಜಗ್ಗಾಟ, ಮಲ್ಲಯುದ್ದ. ಸಂಗೀತ ಕುರ್ಚಿ ಮುಂತಾದ ಮನರಂಜಕ ಆಟಗಳೂ ಇರುತ್ತವೆ. ವಿವಿಧ ಸ್ಪರ್ಧೆಗಳು ಗೆಲವು ಸೋಲುಗಳ ಮೇಲಾಟವಾಗಿ ಬಹುಮಾನ ವಿತರಣೆಯೂ ನಡೆಯುತ್ತದೆ.
ಮಕ್ಕಳ ಬಾಲಕೃಷ್ಣನ ವೇಷದ ಪ್ರದರ್ಶನವು ಬಹಳ ಸೊಗಸು. ಇದು ಇಂದು ಸ್ಪರ್ಧೆಯಾಗಿ ಮಾರ್ಪಟ್ಟಿರುವುದು ದುರಂತ. ಭಗವಂತನ ವೇ಼ಷ ಧಾರಣೆಯೊಂದಿಗೆ ಬದುಕೂ ಭಗವನ್ಮಯವಾಗಬೇಕೆಂಬ ಸಂದೇಶ ನೀಡುವ ಕಾರ್ಯಕ್ರಮವಾಗಿ ಬಾಲಮುರಳಿ ಲೀಲಾ ಪ್ರದರ್ಶನ ನಡೆದರೆ ಅದು ಹೆಚ್ಚು ಮಹತ್ವ ಪಡೆಯುತ್ತದೆ, ಕಾರ್ಯಕ್ರಮವೂ ಸಾರ್ಥಕವಾಗುತ್ತದೆ.
ಕೃಷ್ಣ ಪಿಂಡಿಯ ಪ್ರಮುಖ ಆಕರ್ಷಣೆ ಮಡಿಕೆ ಒಡೆಯುವ ಆಟ. ಇದರಲ್ಲಿ ಗುಂಪು ಮತ್ತು ವೈಕ್ತಿಯಕ ಆಟಗಳೂ ಇವೆ. ವೈಯಕ್ತಿಕ ಆಟದಲ್ಲಿ ಎತ್ತರದ ಕಂಬಗಳ ತುದಿಗೆ ಅಡ್ಡ ಶಲಾಕೆ ಅಳವಡಿಸಿ ಅದಕ್ಕೆ ಹಗ್ಗದ ಸಹಾಯದಿಂದ ಕುಡಿಕೆ ತೂಗುತ್ತಾರೆ. ಈ ಕುಡಿಕೆಯಲ್ಲಿ ಕೃಷ್ಣನಿಗೆ ಪ್ರಿಯವಾದ ಮೊಸರು, ಬೆಣ್ಣೆ, ಹಾಲು ಅಥವಾ ಮಜ್ಜಿಗೆಯಿರುತ್ತದೆ. ಸ್ಪರ್ಧಾಳುವಿನ ಕಣ್ಣಿಗೆ ಬಟ್ಟೆ ಕಟ್ಟಿ ಕೈಗೆ ಕೋಲೊಂದನ್ನು ನೀಡಿ ಆತ ಅಥವಾ ಆಕೆಯನ್ನು ಮೂರು ಪ್ರದಕ್ಷಿಣೆ ಸುತ್ತು ಹಾಕಿಸಿ, ದಿಕ್ಕು ತಪ್ಪಿಸಿ ಮಡಿಕೆ ಒಡೆಯಲು ಬಿಡಲಾಗುತ್ತದೆ. ಕೈಯಲ್ಲಿರುವ ಕೋಲನ್ನು ಒಂದು ಬಾರಿ ಮಾತ್ರ ಮಡಿಕೆಗೆ ನೇರ ಬೀಸಲು ಅವಕಾಶವಿರುತ್ತದೆ. ಅವನಿಂದ ಅವಳಿಂದ ಆಗದೇ ಹೋದರೆ ಅವಕಾಶಗಳು ಉಳಿದವರಿಗೆ ವರ್ಗಾವಣೆಯಾಗುತ್ತಾ ಇರುತ್ತದೆ. ಅಡ್ಡ ಶಲಾಕೆಗೆ ಹಲವು ಮಡಿಕೆಗಳನ್ನು ಬಹಳ ಅಂತರದಲ್ಲಿ ವ್ಯತ್ಯಸ್ತ ಎತ್ತರಗಳಲ್ಲಿ ತೂಗಿ ಹಾಕಿರುತ್ತಾರೆ. ಮಡಿಕೆ ಒಡೆದವರಿಗೆ ಬಹುಮಾನ. ಎತ್ತರದಲ್ಲಿರುವ ಬೆಣ್ಣೆ ಮೊಸರಿನ ಮಡಿಕೆಯಿಂದ ಕದ್ದು ತಿಂದು ಬೀಗುವ ಕೃಷ್ಣನ ಬಾಲಲೀಲೆಯನ್ನು ನೆನಪಿಸುವ ಆಟವಿದು.
ಗುಂಪು ಆಟಕ್ಕೆ ಸಂಬಂಧಿಸಿದ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯಲ್ಲಿ ಕಂಬದ ಎತ್ತರ ಬಹಳಷ್ಟು ಎತ್ತರದಲ್ಲಿರುತ್ತದೆ. ಆ ಎತ್ತರವನ್ನು ತಲುಪಲು ಜನರು ಒಬ್ಬರ ಭುಜ ಹತ್ತಬೇಕು. ಎರಡನೇಯವನ ಭುಜದಲ್ಲಿ ಮೂರನೇಯವನು, ಮೂರನೇಯವನ ಭುಜದಲ್ಲಿ ನಾಲ್ಕನೇಯವನು.. ಹೀಗೆ ಗೋಪುರದ ರಚನೆ ಮಾಡಿ ಯಾವ ಗುಂಪು ಮೊದಲು ಮಡಿಕೆ ಒಡೆಯುತ್ತದೋ ಅವರು ಮೊದಲಿಗರಾಗುತ್ತಾರೆ. ಗೋಪುರ ನಿರ್ಮಿಸುವಾಗ ಬೀಳುವ ಗಾಯವಾಗುವ ಅಪಾಯವಿರುವ ಈ ಆಟವು ಕೃಷ್ಣ ಮತ್ತು ಅವನ ಸಂಗಾತಿಗಳು ಎತ್ರದಲ್ಲಿರಿಸಿದ್ದ ಮಢಿಕೆಗಳನ್ನು ತೆಗೆಯುತ್ತಿದ್ದ ವಿನೋದದ ಆಟಗಳನ್ನು ನೆನಪಿಸುತ್ತದೆ. ಇಂತಹ ಆಟಗಳಲ್ಲಿ ಗೆಲ್ಲಲೇಬೇಕೆಂಬ ಭರದಲ್ಲಿ ಅವಸರ ಮಾಡಿ ಅಂಗವೂನವಾಗದಂತೆ ಎಚ್ಚರಿಕೆಬೇಕಾಗುತ್ತದೆ. ಹೊಂದಾಣಿಕೆ ಮತ್ತು ಒಗ್ಗಟ್ಠೇ ನೆಲೆಗಟ್ಟು ಎಂಬ ಸಂದೇಶ ಈ ಆಟದಲ್ಲಿದೆ.
ವೈಯಕ್ತಿಕವಾದ ಮೋಜಿನ ಇನ್ನೊಂದು ಆಟವಿದೆ. ಅದು ಜಾರುಕಂಬದ ತುದಿಯೇರಿ ಮಡಿಕೆಯೊಳಗಿರಿಸಿದ್ದ ಬೆಣ್ಣೆ ಅಥವಾ ಯಾವುದಾದರೂ ನಿಧಿಯನ್ನು ತೆಗೆಯುವ ಆಟ. ಕಂಬದ ತುದಿಯಿಂದ ಕಂಬದ ಮೂಲಕ ಕೆಳಗೆ ಎಣ್ಣೆಯಿಳಿಯುತ್ತಿರುತ್ತದೆ. ನಯವಾಗಿ ಕೆತ್ತಿರುವ ಉರುಟು ಕಂಬವಾಗಿರುವುದರಿಂದ ಹತ್ತುವವರು ಕೆಳಗಡೆ ಜಾರುತ್ತಲೇ ಇರುತ್ತಾರೆ. ಸರದಿಯಂತೆ ಒಬ್ಬರ ನಂತರ ಒಬ್ಬರು ಏರಬೇಕು. ಕೊನೆಗೆ ಯಾರೋ ಒಬ್ಬ ಅದೃಷ್ಟ ಶಾಲಿ ಗುರಿ ತಲುಪಿ ಸ್ಪರ್ಧೆಯ ಆಶಯ ಪೂರೈಸಿ ಬಹುಮಾನಿತನಾಗುತ್ತಾನೆ. ಬೆಳಗ್ಗಿನಿಂದ ಸಂಜೆಯ ತನಕ ಈ ಕಂಬ ಏರುವ ಪ್ರಕ್ರಿಯೆ ನಡೆಯುತ್ತಾ ಇರುತ್ತದೆ. ತುದಿಯನ್ನು ಒಬ್ಬ ತಲುಪದೆ ಆಟ ಮುಗಿಯದು. ಉನ್ನತವಾದ ಗುರಿ ತಲುಪಲು ಮಾಡಬೇಕೆಂದು ಶ್ರೀಕೃಷ್ಣ ಹೇಳಿರುವ ನಿರಂತರ ಪ್ರಯತ್ನದ ಸಂದೇಶ ಈ ಆಟದಲ್ಲಿದೆ. ಜಾರುವ ಜಾರಿಸಲ್ಪಡುವ ಹಲವಾರು ತಡೆಗಳನ್ನು ಮೀರಿ ನಿಲ್ಲುವ ಗುಣ ವ್ಯಕ್ತಿಯಲ್ಲಿ ಬೆಳೆಯುತ್ತದೆ. ಗುರಿ ಸಾಧನೆಯ ದಾರಿಯಲ್ಲಿ ಹಿಮ್ಮುಖವಾಗದ ಮನೋಗುಣ ಬೆಳೆಯುತ್ತದೆ, “ಕರ್ಮಣ್ಯೇ ವಾಧಿಕಾರಸ್ತೇ, ಮಾ ಫಲೇಷು ಕದಾಚನ” ಎಂಬ ಭಗವದ್ಗೀತೆಯ ಸಂದೇಶವೂ ಪಾಲನೆಯಾಗುತ್ತದೆ.
ಹೀಗೆ ವಿಟ್ಲ ಪಿಂಡಿಯು ಪ್ರತಿಯೊಬ್ಬ ಭಾಗೇದಾರಿಗೂ ಮನರಂಜನೆಯೊಂದಿಗೆ ಭಗವಂತನ ಬಾಲಲೀಲೆಗಳು, ಅವುಗಳ ಹಿಂದಿನ ಮಹಾನ್ ಆಶಯಗಳ ಸ್ಫುರಣವಾಗುತ್ತದೆ. ಭಗವದ್ಗೀತೆಯು ವಿಭೂತಿ ಪುರುಷ ಶ್ರೀಕೃಷ್ಣನು ಅರ್ಜುನನಿಗೆ ತೋರಿದ ವಿಶ್ವರೂಪವನ್ನು ವಿವರಿಸಿದೆ. ಬಾಲ ಲೀಲಾಲೋಲ ಶ್ರೀಕೃಷ್ಣ ಬೆಣ್ಣೆ ಕದ್ದು ತಿಂದು ಯಶೋಧೆ ನೀಡುವ ಘಾತಗಳನ್ನು ಅನುಭವಿಸುತ್ತಾ ಅಮ್ಮನನ್ನು ನಗಿಸುತ್ತಿದ್ದನಂತೆ. ಒಂದು ಬಾರಿ ಬಲರಾಮ ಮತ್ತು ಉಳಿದ ಗೋಪಾಲಕ ಮಿತ್ತರು, “ಕೃಷ್ಣ ಮಣ್ಣು ತಿಂದ” ಎಂದು ದೂರು ಹೇಳುತ್ತಾರೆ, ಮಣ್ಣು ಏಕೆ ತಿಂದೆ? ಎಂದು ಗದರಿದ ಅಮ್ಮನಿಗೆ ಕೃಷ್ಣನು
"ನಾಹಂ ಭಕ್ಷಿತವಾನಂಬ ಸರ್ವೇ ಮಿಥ್ಯಾಭಿಶಂಸಿನಃ
ಯದಿ ಸತ್ಯಗಿರಸ್ತರ್ಹಿ ಸಮಕ್ಷ್ಯಂ ಪಶ್ಯ ಮೇ ಮುಖಂ”
ಎಂದು ಮುದ್ದಾಗಿ ಹೇಳುತ್ತಾನೆ. ಆಗ ಯಶೋಧೆ ಕೃಷ್ಣ ಬಾಯೊಳಗೆ ಏನೇನು ಕಂಡಳೆಂದರೆ
ಸಾ ತತ್ರ ದದೃಶೇ ವಿಶ್ವಂ ಜಗತ್ ಸ್ಥಾಸ್ನು ಚ ಖಂ ದಿಶಃ
ಸಾದ್ರಿದ್ವೀಪಾಬ್ಧಿ ಭೂಗೋಲಂ ಸವಾಯ್ವಗ್ನೀಂದುತಾರಕಂ
ಜ್ಯೋತಿಶ್ಚಕ್ರಂ ಜಲಂ ತೇಜೋ ನಭಸ್ವಾನ್ ವಿಯದೇವ ಚ
ವೈಕಾರಿಕಾಣೀಂದ್ರಿಯಾಣಿ ಮನೋ ಮಾತ್ರಾ ಗುಣಾಸ್ತ್ರಯ:
ಬಾಯೊಳಗೆ ಬ್ರಹ್ಮಾಂಡ, ಅದರೊಳಗೊಂದು ಗೋಕುಲ, ಅಲ್ಲಿ ನಂದನ ಮನೆ. ಅದರೊಳಗೆ ಕೃಷ್ಣ, ಯಶೋಧೇ ಹೀಗೆಲ್ಲ. ಘನಮಹಿಮೆಯ ಭಗವಂತ ಶ್ರೀಕೃಷ್ಣ ಅಲ್ಲವೇ... ಅವನ ಬಾಲ ಲೀಲೆಗಳು ವರ್ಣನಾತೀತ. ಬಾಯೊಳಗೆ ಜಗವ ತೋರಿದ ಶ್ರೀಕೃಷ್ಣನ ಶಕ್ತಿಯೇ ನಮಗೆ ಸ್ಫೂರ್ತಿ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
******************************************